೧ |
ಯಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಮಂದಿ ಜನರ ಸಮೇತ ಬರುತ್ತಿದ್ದನು. ಕೂಡಲೆ ಅವನು ಲೇಯಳಿಗೂ ರಾಖೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿದನು. |
೨ |
ಅವರನ್ನು ಬೇರೆ ಬೇರೆ ಮಾಡಿ ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ, ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ, ಕಡೆಯಲ್ಲಿ ರಾಖೇಲಳನ್ನೂ ಜೋಸೆಫನನ್ನೂ ನಿಲ್ಲಿಸಿದನು. |
೩ |
ತಾನೇ ಅವರ ಮುಂದಾಗಿ ನಡೆದನು. ತನ್ನ ಅಣ್ಣನನ್ನು ಸಮೀಪಿಸುತ್ತಿರುವಾಗ ಏಳು ಸಾರಿ ನೆಲದ ತನಕ ಬಗ್ಗಿ ನಮಸ್ಕರಿಸಿದನು. |
೪ |
ಆದರೆ ಏಸಾವನು ಅವನನ್ನು ಎದುರುಗೊಳ್ಳಲು ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. |
೫ |
ಅವರಿಬ್ಬರ ಕಣ್ಣಲ್ಲೂ ನೀರು ಹರಿಯಿತು. ಬಳಿಕ ಏಸಾವನು ಕಣ್ಣೆತ್ತಿ ಆ ಮಹಿಳೆಯರನ್ನೂ ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ವಿಚಾರಿಸಿದನು. ಯಕೋಬನು, “ದೇವರು ನಿಮ್ಮ ದಾಸನಾದ ನನಗೆ ಅನುಗ್ರಹಿಸಿದ ಮಕ್ಕಳು ಇವರೇ” ಎಂದು ಹೇಳಿದನು. |
೬ |
ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ನಮಸ್ಕಾರ ಮಾಡಿದರು. |
೭ |
ಆಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು; ಕಡೆಯಲ್ಲಿ ಜೋಸೆಫನೂ ರಾಖೇಲಳೂ ಬಂದು ಎರಗಿದರು. |
೮ |
ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪರಿವಾರ ಏತಕ್ಕೆ?” ಎಂದು ಕೇಳಿದನು. ಯಕೋಬನು, “ಒಡೆಯನ ದಯೆ ನನಗೆ ದೊರಕಲೆಂದು ನಾನು ತಮಗೆ ಅದನ್ನು ಕಳಿಸಿಕೊಟ್ಟೆ,” ಎಂದನು. |
೯ |
ಏಸಾವನು, “ತಮ್ಮಾ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ,” ಎಂದನು. |
೧೦ |
ಅದಕ್ಕೆ ಯಕೋಬನು, “ಇಲ್ಲ, ಹಾಗೆನ್ನಬಾರದು. ನಿಮಗೆ ನನ್ನ ಮೇಲೆ ದಯೆಯಿರುವುದು ನಿಜವಾಗಿದ್ದಲ್ಲಿ ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಲೇಬೇಕು. ನಿಮ್ಮನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು. ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೇ ಸಾಕು. |
೧೧ |
ದೇವರ ಕೃಪೆಯಿಂದ ನನಗೆ ಬೇಕಾದುದೆಲ್ಲ ಇದೆ; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ತಾವು ದಯವಿಟ್ಟು ಅಂಗೀಕರಿಸಬೇಕು,” ಎಂದು ಹೇಳಿ ಒತ್ತಾಯಪಡಿಸಿದ್ದರಿಂದ ಏಸಾವನು ಆ ಕಾಣಿಕೆಯನ್ನು ತೆಗೆದುಕೊಂಡನು. |
೧೨ |
ತರುವಾಯ ಏಸಾವನು, “ಗುಡಾರಗಳನ್ನು ಬಿಟ್ಟು ಮುಂದಕ್ಕೆ ಪ್ರಯಾಣ ಬೆಳೆಸೋಣ; ನಾನೂ ನಿನ್ನ ಸಂಗಡ ಬರುತ್ತೇನೆ,” ಎಂದನು. |
೧೩ |
ಅದಕ್ಕೆ ಯಕೋಬನು, “ನನ್ನೊಡೆಯರಾದ ನಿಮಗೆ ತಿಳಿದಿರುವಂತೆ ನನ್ನ ಮಕ್ಕಳು ಎಳೆಯ ಪ್ರಾಯದವರು; ಈದಿರುವ ದನಕುರಿಗಳೂ ನನಗಿವೆ; ಒಂದೇ ದಿನ ಹೆಚ್ಚಾಗಿ ದಾರಿ ನಡೆಸಿದೆನಾದರೆ ಆಡುಕುರಿಗಳೆಲ್ಲವೂ ಸತ್ತುಹೋದಾವು. |
೧೪ |
ತಾವು ದಯವಿಟ್ಟು ದಾಸನಿಗಿಂತಲು ಮುಂಚೆ ಹೊರಡಬಹುದು, ನಾನು ನನ್ನ ಮುಂದಿರುವ ಆಡುಕುರಿಗಳ ಹಾಗೂ ಮಕ್ಕಳ ನಡಿಗೆಗೆ ತಕ್ಕ ಹಾಗೆ ಮೆಲ್ಲಮೆಲ್ಲನೆ ನಡೆದು ನನ್ನೊಡೆಯರ ನಾಡಾದ ಎದೋಮಿಗೆ ಬರುತ್ತೇನೆ,” ಎಂದನು |
೧೫ |
ಏಸಾವನು, “ಹಾಗಾದರೆ, ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟುಹೋಗುತ್ತೇನೆ,” ಎಂದನು. ಯಕೋಬನು, “ಏತಕ್ಕೆ, ಬೇಡಿ, ನನ್ನೊಡೆಯರ ದಯೆ ನನ್ನ ಮೇಲಿದ್ದರೆ ಸಾಕು,” ಎಂದು ಹೇಳಿದನು. |
೧೬ |
ಏಸಾವನು ಆ ದಿನವೇ ಎದೋಮ್ ನಾಡಿಗೆ ಹೊರಟುಹೋದನು. |
೧೭ |
ಇತ್ತ ಯಕೋಬನು ಪ್ರಯಾಣ ಬೆಳೆಸುತ್ತಾ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ಮಂದೆಗಳಿಗೋಸ್ಕರ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಈ ಕಾರಣ ಆ ಸ್ಥಳಕ್ಕೆ ‘ಸುಕ್ಕೋತ್’ ಎಂದು ಹೆಸರಾಯಿತು. |
೧೮ |
ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದು ಕಾನಾನ್ ನಾಡಿನ ಶೆಕೆಮ್ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಿದನು. ಆ ಪಟ್ಟಣದ ಮುಂದೆಯೇ ತನ್ನ ಗುಡಾರಗಳನ್ನು ಹಾಕಿಸಿಕೊಂಡನು. |
೧೯ |
ಗುಡಾರ ಹಾಕಿಸಿದ ಭೂಮಿಯನ್ನು, ಶೆಕೆಮಿನ ತಂದೆಯಾದ ಹಮೋರನ ಮಕ್ಕಳಿಗೆ ನೂರು ವರಹಗಳನ್ನು ಕೊಟ್ಟು ಅವರಿಂದ ಕೊಂಡುಕೊಂಡನು. |
೨೦ |
ಅಲ್ಲೇ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ 'ಏಲ್ - ಏಲೋಹೆ - ಇಸ್ರಯೇಲ್’ ಎಂದು ಹೆಸರಿಟ್ಟನು.
|
Kannada Bible (KNCL) 2016 |
No Data |