English
A A A A A
×

ಕನ್ನಡ ಬೈಬಲ್ (KNCL) 2016

ಆದಿಕಾಂಡ ೩೦
ರಾಖೇಲಳು ತಾನು ಯಕೋಬನಿಗೆ ಮಕ್ಕಳನ್ನು ಹೆರಲಿಲ್ಲವೆಂದುಕೊಂಡು ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚು ಪಟ್ಟಳು. ಅಲ್ಲದೆ ಯಕೋಬನಿಗೆ, “ನನಗೆ ಮಕ್ಕಳನ್ನು ಕೊಡು; ಇಲ್ಲದಿದ್ದರೆ ಸಾಯುತ್ತೇನೆ,” ಎಂದು ಹೇಳಿದಳು.
ಯಕೋಬನು ಆಕೆಯ ಮೇಲೆ ಸಿಟ್ಟುಗೊಂಡು, \ನಾನೇನು ದೇವರೋ? ಅವರೇ ಅಲ್ಲವೆ ನಿನಗೆ ಮಕ್ಕಳನ್ನು ಕೊಡದೆ ಇರುವುದು?” ಎಂದು ಉತ್ತರಕೊಟ್ಟನು.
ಅದಕ್ಕೆ ರಾಖೇಲಳು, “ನನ್ನ ದಾಸಿ ಬಿಲ್ಹಾ ಇದ್ದಾಳಲ್ಲವೆ? ಅವಳನ್ನು ಕೂಡಿ, ಅವಳು ನನಗಾಗಿ ಒಂದು ಮಗುವನ್ನು ಹೆತ್ತು ನನ್ನ ಮಡಿಲಲ್ಲಿ ಇಡಲಿ; ಆಗ ಅವಳ ಮುಖಾಂತರ ನನಗೆ ಸಂತಾನ ಪ್ರಾಪ್ತಿಯಾಗುವುದು,” ಎಂದಳು.
ಅಂತೆಯೇ ದಾಸಿ ಬಿಲ್ಹಾಳನ್ನು ತನ್ನ ಗಂಡನಿಗೆ ಒಪ್ಪಿಸಿದಳು.
ಅವನು ಬಿಲ್ಹಾಳನ್ನು ಕೂಡಲು ಅವಳು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆತ್ತಳು.
ಆಗ ರಾಖೇಲಳು, “ದೇವರು ನನಗೆ ನ್ಯಾಯ ದೊರಕಿಸಿದ್ದಾರೆ, ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾರೆ,” ಎಂದು ಹೇಳಿ ಆ ಮಗುವಿಗೆ ‘ದಾನ್’ ಎಂದು ಹೆಸರಿಟ್ಟಳು.
ಆ ದಾಸಿ ಬಿಲ್ಹಾಳು ಮತ್ತೆ ಗರ್ಭವತಿಯಾಗಿ ಯಕೋಬನಿಗೆ ಎರಡನೆಯ ಗಂಡು ಮಗುವನ್ನು ಹೆತ್ತಳು.
ಆಗ ರಾಖೇಲಳು, “ನನ್ನ ಅಕ್ಕನ ಸಂಗಡ ಬಹಳವಾಗಿ ಹೋರಾಡಿ ಗೆದ್ದಿದ್ದೇನೆ,” ಎಂದು ಹೇಳಿ ಆ ಮಗುವನ್ನು ‘ನಫ್ತಾಲಿ’ ಎಂದು ಹೆಸರಿಸಿದಳು.
ಲೇಯಳು ತನಗೆ ಹೆರಿಗೆ ನಿಂತುಹೋಗಿ ಇರುವುದನ್ನು ತಿಳಿದು ತನ್ನ ದಾಸಿ ಜಿಲ್ಪಳನ್ನು ಯಕೋಬನಿಗೆ ಹೆಂಡತಿಯಾಗಿ ಒಪ್ಪಿಸಿದಳು.
೧೦
ದಾಸಿ ಜಿಲ್ಪಳೂ ಯಕೋಬನಿಗೆ ಒಂದು ಗಂಡು ಮಗುವನ್ನು ಹೆತ್ತಳು.
೧೧
ಲೇಯಳು, “ನನಗೆ ಶುಭವಾಯಿತು,” ಎಂದುಕೊಂಡು ಆ ಮಗುವಿಗೆ ‘ಗಾದ್’ ಎಂದು ಹೆಸರಿಟ್ಟಳು.
೧೨
ಲೇಯಳ ದಾಸಿ ಆ ಜಿಲ್ಪಳು ಯಕೋಬನಿಗೆ ಇನ್ನೂ ಒಂದು ಗಂಡು ಮಗುವನ್ನು ಹೆತ್ತಳು.
೧೩
ಆಗ ಲೇಯಳು, “ನಾನು ಧನ್ಯಳಾದೆ, ಮಹಿಳೆಯರು ನನ್ನನ್ನು ಧನ್ಯಳೆಂದು ಹೊಗಳುವರು,” ಎಂದುಕೊಂಡು ಆ ಮಗುವಿಗೆ ‘ಆಶೇರ್’ ಎಂದು ಹೆಸರಿಟ್ಟಳು.
೧೪
ಗೋದಿಯ ಸುಗ್ಗಿ ಕಾಲದಲ್ಲಿ ರೂಬೇನನು ಹೊಲದ ಕಡೆ ಹೊಗುತ್ತಿದ್ದಾಗ ಕಾಮೋದ್ದೀಪಕ ಹಣ್ಣುಗಳನ್ನು ಕಂಡನು. ಅವನ್ನು ತಂದು ತನ್ನ ತಾಯಿ ಲೇಯಳಿಗೆ ಕೊಟ್ಟನು. ರಾಖೇಲಳು ಆಕೆಗೆ, “ನಿನ್ನ ಮಗ ತಂದಿರುವ ಕಾಮೋದ್ದೀಪಕ ಫಲಗಳಲ್ಲಿ ಕೆಲವನ್ನು ನನಗೆ ಕೊಡಕ್ಕಾ,” ಎಂದು ಕೇಳಿಕೊಂಡಳು.
೧೫
ಅದಕ್ಕೆ ಲೇಯಳು, “ನೀನು ನನ್ನ ಗಂಡನನ್ನು ಅಪಹರಿಸಿದ್ದು ಸಾಲದೆಂದು ನನ್ನ ಮಗ ತಂದ ಕಾಮೋದ್ದೀಪಕ ಹಣ್ಣುಗಳನ್ನೂ ತೆಗೆದುಕೊಳ್ಳಬೇಕೆಂದಿರುವೆಯಾ?” ಎಂದು ಬದಲಿತ್ತಳು. ಆಗ ರಾಖೇಲಳು, “ಸರಿ, ನೀನು ನಿನ್ನ ಮಗನು ತಂದ ಕಾಮೋದ್ದೀಪಕ ಹಣ್ಣುಗಳನ್ನು ನನಗೆ ಕೊಟ್ಟೆಯಾದರೆ ಇಂದಿನ ರಾತ್ರಿ ಅವರು ನಿನ್ನೊಡನೆ ಮಲಗಬಹುದು,” ಎಂದಳು.
೧೬
ಸಂಜೆ ಯಕೋಬನು ಹೊರಗಡೆಯಿಂದ ಬಂದಾಗ ಲೇಯಳು ಅವನೆದುರಿಗೆ ಹೋಗಿ, “ನೀವು ನನ್ನೊಡನೆ ಕೂಡಬೇಕು. ನಾನು ನನ್ನ ಮಗ ತಂದ ಕಾಮೋದ್ದೀಪಕ ಹಣ್ಣುಗಳನ್ನು ಕೊಟ್ಟು ನಿಮ್ಮನ್ನು ಕೊಂಡುಕೊಂಡಿದ್ದೇನೆ,” ಎಂದಳು. ಅಂದಿನ ರಾತ್ರಿ ಯಕೋಬನು ಆಕೆಯೊಡನೆ ಕೂಡಿದನು.
೧೭
ದೇವರು ಲೆಯಳ ಪ್ರಾರ್ಥನೆಯನ್ನು ಕೇಳಿದರು. ಆಕೆ ಗರ್ಭಿಣಿಯಾಗಿ ಯಕೋಬನಿಗೆ ಐದನೆಯ ಗಂಡು ಮಗುವನ್ನು ಹೆತ್ತಳು.
೧೮
“ನಾನು ನನ್ನ ದಾಸಿಯನ್ನು ಗಂಡನಿಗೆ ಒಪ್ಪಿಸಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾರೆ,” ಎಂದು ಹೇಳಿ ಆಕೆ ಆ ಮಗುವಿಗೆ ‘ಇಸ್ಸಾಕಾರ್’ ಎಂದು ಹೆಸರಿಟ್ಟಳು.
೧೯
ಲೇಯಳು ಮತ್ತೊಮ್ಮೆ ಗರ್ಭಧರಿಸಿ ಯಕೋಬನಿಗೆ ಆರನೆಯ ಗಂಡು ಮಗುವನ್ನು ಹೆತ್ತಳು.
೨೦
“ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾರೆ. ನಾನು ನನ್ನ ಗಂಡನಿಗೆ ಆರು ಮಂದಿ ಗಂಡು ಮಕ್ಕಳನ್ನು ಹೆತ್ತಿದ್ದೇನೆ. ಆದುದರಿಂದ ಅವರು ನನ್ನೊಡನೆಯೇ ವಾಸಿಸುವರು,” ಎಂದು ಹೆಳಿಕೊಂಡು ಆ ಮಗುವಿಗೆ ‘ಜೆಬುಲೂನ್’ ಎಂದು ಹೆಸರಿಟ್ಟಳು.
೨೧
ತರುವಾಯ ಆಕೆ ಒಂದು ಹೆಣ್ಣು ಮಗುವನ್ನು ಹೆತ್ತು ಅದಕ್ಕೆ ‘ದೀನಾ’ ಎಂದು ನಾಮಕರಣ ಮಾಡಿದಳು.
೨೨
ಇದಾದ ಬಳಿಕ ದೇವರು ರಾಖೇಲಳನ್ನು ನೆನೆಸಿಕೊಂಡರು. ಆಕೆಯ ಮೊರೆಯನ್ನು ಕೇಳಿ ಆಕೆಗೂ ಮಕ್ಕಳಾಗುವಂತೆ ಅನುಗ್ರಹಿಸಿದರು.
೨೩
ಆಕೆ ಗರ್ಭಧರಿಸಿ ಒಂದು ಗಂಡು ಮಗುವನ್ನು ಹೆತ್ತಳು. ” ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾರೆ;
೨೪
ಸರ್ವೇಶ್ವರ ನನಗೆ ಇನ್ನೂ ಒಂದು ಗಂಡು ಮಗುವನ್ನು ಅನುಗ್ರಹಿಸಲಿ,” ಎಂದುಕೊಂಡು ಆ ಮಗುವಿಗೆ ‘ಜೋಸೆಫ್’ ಎಂದು ನಾಮಕರಣ ಮಾಡಿದಳು.
೨೫
ರಾಖೇಲಳು ಜೋಸೆಫನನ್ನು ಹೆತ್ತ ಬಳಿಕ ಯಕೋಬನು ಲಾಬಾನನಿಗೆ, “ನನಗೆ ಅಪ್ಪಣೆಯಾಗಬೇಕು, ನಾನು ಸ್ವಂತ ಊರಿಗೂ ನಾಡಿಗೂ ಹಿಂದಿರುಗಬೇಕಾಗಿದೆ.
೨೬
ನಾನು ದುಡಿದು ಪಡೆದ ಹೆಂಡತಿಯರನ್ನೂ ಮಕ್ಕಳನ್ನೂ ಕಳಿಸಿಕೊಡಿ, ನಾನು ಹೊರಡುತ್ತೇನೆ. ನಿಮಗೆ ನಾನು ಮಾಡಿದ ಸೇವೆ ಎಷ್ಟೆಂದು ನಿಮಗೇ ತಿಳಿದಿದೆ,” ಎಂದು ಹೇಳಿದನು.
೨೭
ಅದಕ್ಕೆ ಲಾಬಾನನು, “ನನ್ನ ಮೇಲೆ ದಯವಿಟ್ಟು ನನ್ನ ಬಳಿಯಲ್ಲೇ ತಂಗಿರು. ಸರ್ವೇಶ್ವರ ಸ್ವಾಮಿ ನಿನ್ನ ನಿಮಿತ್ತ ನನ್ನನ್ನು ಅಭಿವೃದ್ಧಿಗೊಳಿಸಿದ್ದಾರೆಂದು ಶಾಸ್ತ್ರೋಕ್ತವಾಗಿ ತಿಳಿದುಕೊಂಡಿದ್ದೇನೆ.
೨೮
ನಿನಗೆ ಏನು ಕೂಲಿ ಕೊಡಬೇಕು ಹೇಳು, ಕೊಡುತ್ತೇನೆ,” ಎಂದು ಉತ್ತರಕೊಟ್ಟನು.
೨೯
ಅದಕ್ಕೆ ಯಕೋಬನು, “ನಾನು ನಿಮಗೆ ಎಷ್ಟು ಸೇವೆ ಮಾಡಿದ್ದೇನೆಂಬುದೂ ನನ್ನ ವಶದಲ್ಲಿದ್ದ ನಿಮ್ಮ ಪಶುಪ್ರಾಣಿಗಳು ಹೇಗೆ ಅಭಿವೃದ್ಧಿ ಆಗಿವೆ ಎಂಬುದನ್ನೂ ನೀವೇ ಬಲ್ಲಿರಿ.
೩೦
ನಾನು ಬರುವುದಕ್ಕೆ ಮೊದಲು ನಿಮಗಿದ್ದ ಕೆಲವು ಈಗ ಬಹಳವಾಗಿ ಹೆಚ್ಚಿವೆ. ನಾನು ಹೋದ ಕಡೆಗಳಲ್ಲೆಲ್ಲ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿದ್ದಾರೆ. ಆದರೆ ನಾನು ನನ್ನ ಸ್ವಂತ ಮನೆತನಕ್ಕಾಗಿ ಸಂಪಾದಿಸುವುದು ಯಾವಾಗ?” ಎಂದನು.
೩೧
ಆಗ ಲಾಬಾನನು, “ನಿನಗೆ ನಾನೇನು ಕೊಡಬೇಕು ಹೇಳು?” ಎಂದನು. ಯಕೋಬನು, “ನನಗೇನೂ ಕೊಡಬೇಕಾಗಿಲ್ಲ; ಒಂದೇ ಒಂದು ಕಾರ್ಯಕ್ಕೆ ಒಪ್ಪಿಗೆ ನೀಡಿದರೆ, ನಾನು ಮತ್ತೆ ನಿಮ್ಮ ಮಂದೆಯನ್ನು ಮೇಯಿಸಿಕೊಂಡು ಬರುತ್ತೇನೆ;
೩೨
ಅದೇನೆಂದರೆ, ಈ ದಿನ ನಾನು ನಿಮ್ಮ ಮಂದೆಗಳಿಗೆ ಹೋಗಿ ವಿಕಾರ ಬಣ್ಣವುಳ್ಳವುಗಳನ್ನೆಲ್ಲ ಅಂದರೆ, ಕುರಿಮರಿಗಳಲ್ಲಿ ಕಪ್ಪಾಗಿರುವವುಗಳನ್ನೂ ಆಡುಮರಿಗಳಲ್ಲಿ ಚುಕ್ಕೆ ಅಥವಾ ಮಚ್ಚೆವುಳ್ಳವುಗಳನ್ನೂ ವಿಂಗಡಿಸುತ್ತೇನೆ. ಅವೇ ನನ್ನ ಸಂಬಳ ಎಂದು ನೀವು ಭಾವಿಸಬೇಕು.
೩೩
ಇನ್ನು ಮೇಲೆ ನೀವು ಬಂದು ನನ್ನವುಗಳನ್ನು ಪರೀಕ್ಷಿಸುವಾಗ ನಾನು ಪ್ರಮಾಣಿಕನೋ ಇಲ್ಲವೋ ಎಂಬುದು ಪ್ರತ್ಯಕ್ಷವಾಗುವುದು. ಆಡುಗಳಲ್ಲಿ ಚುಕ್ಕೆ ಮಚ್ಚೆ ಇಲ್ಲದ್ದೂ ಕುರಿಗಳಲ್ಲಿ ಕಪ್ಪಲ್ಲದ್ದೂ ನನ್ನವುಗಳಲ್ಲಿ ಸಿಕ್ಕಿದರೆ, ಅದನ್ನು ಕದ್ದು ತಂದದ್ದೆಂದು ಎಣಿಸಬಹುದು,” ಎಂದನು.
೩೪
ಅದಕ್ಕೆ ಲಾಬಾನನು, “ಒಳ್ಳೆಯದು, ನೀನು ಹೇಳಿದಂತೆಯೇ ಆಗಲಿ,” ಎಂದನು.
೩೫
ಆದರೆ ಅದೇ ದಿನ ಲಾಬಾನನು ಹೋತಗಳಲ್ಲಿ ರೇಖೆ, ಮಚ್ಚೆ ಇದ್ದವುಗಳನ್ನೂ, ಮೇಕೆಗಳಲ್ಲಿ ಚುಕ್ಕೆ, ಮಚ್ಚೆ ಇದ್ದವುಗಳನ್ನೂ ಅಂದರೆ, ಸ್ವಲ್ಪ ಬಿಳುಪಾದ ಬಣ್ಣ ತೋರಿದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಪ್ಪಾಗಿದ್ದವುಗಳನ್ನೂ ವಿಂಗಡಿಸಿ ತನ್ನ ಮಕ್ಕಳ ವಶಕ್ಕೆ ಒಪ್ಪಿಸಿಬಿಟ್ಟನು.
೩೬
ಅಲ್ಲದೆ, ತನಗೂ ತನ್ನ ಉಳಿದ ಮಂದೆಯನ್ನು ಮೇಯಿಸುತ್ತಿದ್ದ ಯಕೋಬನಿಗೂ ಮಧ್ಯೆ ಮೂರು ದಿನದ ಪ್ರಯಾಣದಷ್ಟು ದೂರದ ಅಂತರವಿರುವಂತೆ ಮಾಡಿಬಿಟ್ಟನು.
೩೭
ಹೀಗಿರುವಲ್ಲಿ ಯಕೋಬನು ಚಿನಾರು, ಬಾದಾಮಿ, ಆರ್ಮೋನ್ ಎಂಬ ಮರಗಳಿಂದ ಹಸಿಕೋಲುಗಳನ್ನು ತೆಗೆದುಕೊಂಡು ಪಟ್ಟಿಪಟ್ಟಿಯಾಗಿ ತೊಗಟೆಯನ್ನು ಸುಲಿದು ಅವುಗಳಲ್ಲಿ ಇರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿ
೩೮
ಅವುಗಳನ್ನು ಆಡುಕುರಿಗಳ ಹಿಂಡು, ನೀರು ಕುಡಿಯುವ ತೊಟ್ಟಿಗಳಲ್ಲಿ ಇಟ್ಟನು. ಆಡುಕುರಿಗಳಿಗೆ ನೀರು ಕುಡಿಯುವ ಸಮಯ, ಸಂಗಮ ಸಮಯ.
೩೯
ಅವು ಆ ಕೋಲುಗಳನ್ನು ನೋಡುತ್ತಾ ಸಂಗಮ ಮಾಡಿದ್ದರಿಂದ ರೇಖೆ, ಚುಕ್ಕೆ, ಮಚ್ಚೆಗಳುಳ್ಳ ಮರಿಗಳನ್ನು ಈದುವು.
೪೦
ಯಕೋಬನು ಆ ಮರಿಗಳನ್ನು ಲಾಬಾನನ ಹಿಂಡಿಗೆ ಸೇರಿಸದೆ ತನ್ನವೆಂದೇ ಬೇರ್ಪಡಿಸಿದನು; ಲಾಬಾನನ ಆಡುಕುರಿಗಳ ಮುಖವನ್ನು ರೇಖೆಯುಳ್ಳ ಆ ಆಡುಗಳ ಮತ್ತು ಕಪ್ಪಾದ ಆ ಕುರಿಗಳ ಕಡೆಗೆ ತಿರುಗಿಸಿದನು.
೪೧
ಇದಲ್ಲದೆ ಬಲಿಷ್ಠವಾದ ಆಡುಕುರಿಗಳು ಸಂಗಮ ಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮ ಮಾಡಲಿ ಎಂದು ಯಕೋಬನು ನೀರಿನ ತೊಟ್ಟಿಯಲ್ಲಿ ಆ ಕೋಲುಗಳನ್ನಿಟ್ಟನು. ಬಲಹೀನ ಆಡುಕುರಿಗಳ ಮುಂದೆ ಹಾಗೆ ಇಡಲಿಲ್ಲ.
೪೨
ಹೀಗೆ ಬಲವಿಲ್ಲದವುಗಳು ಲಾಬಾನನ ಪಾಲಿಗೆ, ಬಲಿಷ್ಠವಾದವುಗಳು ಯಕೋಬನ ಪಾಲಿಗೆ ಬಂದವು.
೪೩
ಈ ಪ್ರಕಾರ ಯಕೋಬನು ಬಹಳ ಸಂಪತ್ತುಳ್ಳವನಾದನು; ಅವನಿಗೆ ದೊಡ್ಡ ಹಿಂಡುಗಳು ಮಾತ್ರವಲ್ಲ ದಾಸದಾಸಿಯರೂ ಒಂಟೆ ಕತ್ತೆಗಳೂ ಹೇರಳವಾಗಿದ್ದವು.