೧ |
ಹಿಂದೆ ಅಬ್ರಹಾಮನ ಕಾಲದಲ್ಲಿ ಬಂದಿದ್ದ ಬರಗಾಲವು ಮತ್ತೊಮ್ಮೆ ಕಾನಾನ್ ನಾಡಿಗೆ ಬಂದಿತು. ಇಸಾಕನು ಫಿಲಿಷ್ಟಿಯರ ಅರಸ ಅಬೀಮೆಲೆಕನನ್ನು ಕಾಣಲು ಗೆರಾರಿಗೆ ಹೋದನು. |
೨ |
ಅಲ್ಲಿ ಸರ್ವೇಶ್ವರ ಸ್ವಾಮಿ ಇಸಾಕನಿಗೆ ದರ್ಶನ ಕೊಟ್ಟು ಇಂತೆಂದರು: “ನೀನು ಈಜಿಪ್ಟಿಗೆ ಹೋಗಬೇಡ; |
೩ |
ನಾನು ಹೇಳುವ ನಾಡಿನಲ್ಲಿ ಇದ್ದು ಪ್ರವಾಸ ಮಾಡುತ್ತಿರು. ನಾನು ನಿನ್ನ ಸಂಗಡವಿದ್ದು ನೀನು ಏಳಿಗೆಯಾಗುವಂತೆ ಮಾಡುತ್ತೇನೆ; ಈ ನಾಡೆಲ್ಲವನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. |
೪ |
ನಿನ್ನ ತಂದೆ ಅಬ್ರಹಾಮನು ನನ್ನ ಮಾತನ್ನು ಕೇಳಿ ನಾನು ಹೇಳಿದಂತೆ ಮಾಡಿದನು; ನನ್ನ ಆಜ್ಞಾವಿಧಿಗಳನ್ನೂ ನೇಮನಿಯಮಗಳನ್ನೂ ಕೈಗೊಂಡು ನಡೆದನು. ಆದುದರಿಂದ ನಾನು ಅವನಿಗೆ ಮಾಡಿದ ಪ್ರಮಾಣವನ್ನು ನೆರವೇರಿಸುತ್ತೇನೆ. |
೫ |
ನಿನ್ನ ಸಂತತಿಯನ್ನು ಆಕಾಶದಲ್ಲಿರುವ ನಕ್ಷತ್ರಗಳಂತೆ ಅಸಂಖ್ಯಾತವಾಗಿಸುತ್ತೇನೆ; ಅವರಿಗೆ ಈ ನಾಡೆಲ್ಲವನ್ನು ಕೊಡುತ್ತೇನೆ. ಜಗದ ಜನಾಂಗಗಳಿಗೆಲ್ಲ ನಿನ್ನ ಸಂತತಿಯ ಮುಖಾಂತರ ಆಶೀರ್ವಾದ ದೊರಕುವುದು.” |
೬ |
ಅಂತೆಯೇ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು. |
೭ |
ಅಲ್ಲಿಯ ಜನರು ಅವನ ಹೆಂಡತಿಯ ವಿಷಯವಾಗಿ ವಿಚಾರಿಸಿದರು. “ಅವಳು ನನ್ನ ತಂಗಿ”, ಎಂದು ಇಸಾಕನು ಹೇಳಿದನು. ರೆಬೆಕ್ಕಳು ಬಲು ಚೆಲುವೆಯಾಗಿದ್ದರಿಂದ ಆಕೆಯ ನಿಮಿತ್ತ ತನ್ನನ್ನು ಕೊಂದಾರು ಎಂದು ಹೆದರಿ ಹಾಗೆ ಹೇಳಿದನು. |
೮ |
ಅವನು, ಆ ಸ್ಥಳದಲ್ಲಿ ಬಹಳ ದಿವಸ ತಂಗಿದ್ದನು. ಒಂದು ದಿನ ಫಿಲಿಷ್ಟಿಯ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿ ರೆಬೆಕ್ಕಳ ಸಂಗಡ ಸರಸವಾಡುವುದನ್ನು ಕಂಡನು. |
೯ |
ಕೂಡಲೆ ಅವನು ಇಸಾಕನನ್ನು ಕರೆಯಿಸಿ, “ಖಂಡಿತವಾಗಿ ಈಕೆ ನಿನ್ನ ಹೆಂಡತಿ; ಮತ್ತೆ ಆಕೆ ನಿನ್ನ ತಂಗಿ ಎಂದು ಏಕೆ ಹೇಳಿದೆ?” ಎಂದು ಕೇಳಿದನು. ಇಸಾಕನು, “ಈಕೆಯ ನಿಮಿತ್ತ ಜನರು ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆ,” ಎಂದನು. |
೧೦ |
ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಮಾಡಬಹುದೆ? ನಮ್ಮಲ್ಲಿ ಯಾರಾದರೊಬ್ಬನು ನಿನ್ನ ಹೆಂಡತಿಯನ್ನು ಕೂಡಿರಬಹುದಿತ್ತಲ್ಲವೆ? ಆಗ ನಿನ್ನಿಂದ ನನಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲವೆ?” ಎಂದು ಹೇಳಿದನು. |
೧೧ |
ಬಳಿಕ ತನ್ನ ಪ್ರಜೆಗಳಿಗೆ ಈ ಆಜ್ಞೆಯನ್ನು ಹೊರಡಿಸಿದನು. “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ಮರಣದಂಡನೆ ತಪ್ಪದು.” |
೧೨ |
ಇಸಾಕನು ಆ ನಾಡಿನಲ್ಲಿ ವ್ಯವಸಾಯ ಮಾಡಿ ಅದೇ ವರ್ಷದಲ್ಲಿ ನೂರ್ಮಡಿ ಬೆಳೆ ಎತ್ತಿದನು. ಸರ್ವೇಶ್ವರ ಸ್ವಾಮಿಯ ಆಶೀರ್ವಾದ ಅವನ ಮೇಲಿತ್ತು. |
೧೩ |
ಅವನು ದಿನದಿಂದ ದಿನಕ್ಕೆ ಹೆಚ್ಚು ಆಸ್ತಿವಂತನಾಗಿ ದೊಡ್ಡ ಧನವಂತನಾದನು. |
೧೪ |
ಅವನಿಗೆ ದನಕುರಿಗಳೂ ಆಳುಕಾಳುಗಳೂ ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು. |
೧೫ |
ಅವನ ತಂದೆ ಅಬ್ರಹಾಮನ ಕಾಲದಲ್ಲೇ ತೋಡಲಾಗಿದ್ದ ಬಾವಿಯನ್ನು ಮಣ್ಣುಹಾಕಿ ಮುಚ್ಚಿಬಿಟ್ಟರು. |
೧೬ |
ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ, “ನೀನು ನಮಗಿಂತ ಅಧಿಕ ಬಲಿಷ್ಠನಾಗಿಬಿಟ್ಟೆ; ಆದುದರಿಂದ ನಮ್ಮನ್ನು ಬಿಟ್ಟು ಹೊರಟುಹೋಗಬೇಕು” ಎಂದು ಹೇಳಿದನು. |
೧೭ |
ಅಂತೆಯೇ ಇಸಾಕನು ಅಲ್ಲಿಂದ ಹೊರಟು ಗೆರಾರ್ ತಗ್ಗಿನ ಬಯಲಿನಲ್ಲಿ ಗುಡಾರ ಹಾಕಿಕೊಂಡು ವಾಸಮಾಡಿದನು. |
೧೮ |
ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತಮೇಲೆ ಫಿಲಿಷ್ಟಿಯರು ಮುಚ್ಚಿಹಾಕಿದ್ದರಿಂದ ಇಸಾಕನು ಅವುಗಳನ್ನು ಮರಳಿ ತೆಗೆಸಿ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು. |
೧೯ |
ಇಸಾಕನ ಕೆಲಸಗಾರರು ಆ ತಗ್ಗಿನಲ್ಲಿ ಅಗೆಯುತ್ತಿದ್ಪಾಗ ಅವರಿಗೆ ಸೆಲೆ ನೀರಿನ ಬಾವಿಯೊಂದು ಸಿಕ್ಕಿತು. |
೨೦ |
ಗೆರಾರಿನ ದನಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನಕಾಯುವವರ ಸಂಗಡ ಜಗಳವಾಡಿದರು. ಆದುದರಿಂದ ಇಸಾಕನು ಆ ಬಾವಿಗೆ “ಏಸೆಕ್\ ಎಂದು ಹೆಸರಿಟ್ಟರು. |
೨೧ |
ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದರು. ಆ ನಾಡಿಗರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅದಕ್ಕೆ ‘ಸಿಟ್ನಾ’ ಎಂದು ಹೆಸರಿಟ್ಟನು. |
೨೨ |
ಅವನು ಅಲ್ಲಿಂದ ಮುಂದಕ್ಕೆ ತೆರಳಿ ಮತ್ತೊಂದು ಬಾವಿಯನ್ನು ಅಗೆಸಿದನು. ಅದರ ಬಗ್ಗೆ ಯಾರೂ ಜಗಳಕ್ಕೆ ಬರಲಿಲ್ಲ. ಈ ಕಾರಣ ಅವನು, “ಸರ್ವೇಶ್ವರ ನಮಗೀಗ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ; ನಾವು ಅಭಿವೃದ್ಧಿಯಾಗುತ್ತೇವೆ,” ಎಂದು ಹೇಳಿ ಆ ಬಾವಿಗೆ ‘ರೆಹೋಬೋತ್’ ಎಂದು ಹೆಸರಿಟ್ಟನು. |
೨೩ |
ಇಸಾಕನು ಅಲ್ಲಿಂದ ಹೊರಟು ಬೇರ್ಷೆಬಕ್ಕೆ ಬಂದನು. |
೨೪ |
ಆ ರಾತ್ರಿ ಸರ್ವೇಶ್ವರ ಅವನಿಗೆ ದರ್ಶನವಿತ್ತು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ ಅಂಜಬೇಡ, ನಿನ್ನ ಸಂಗಡ ನಾನಿರುವೆ. ಆ ನನ್ನ ದಾಸ ಅಬ್ರಹಾಮನ ನಿಮಿತ್ತ ನಿನ್ನ ಹರಸಿ ನಾ ಹೆಚ್ಚಿಸುವೆ ನಿನ್ನ ಸಂತಾನವ” ಎಂದರು. |
೨೫ |
ಇಸಾಕನು ಒಂದು ಬಲಿಪೀಠವನ್ನು ಕಟ್ಟಿಸಿ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ ಆರಾಧಿಸಿ, ಅಲ್ಲಿ ಗುಡಾರ ಹಾಕಿಸಿಕೊಂಡನು. ಅವನ ಕೆಲಸಗಾರರು ಅಲ್ಲಿಯೂ ಒಂದು ಬಾವಿಯನ್ನು ತೋಡಿದರು. |
೨೬ |
ಇದಾದ ಬಳಿಕ ಅಬೀಮೆಲೆಕನು ತನ್ನ ಮಂತ್ರಿ ಅಹುಜ್ಜತನನ್ನೂ ಸೇನಾಪತಿ ಫೀಕೋಲನನ್ನೂ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬಂದನು. |
೨೭ |
ಇಸಾಕನು, “ನೀವು ನನ್ನ ಮೇಲೆ ಹಗೆತನ ತಾಳಿ ನಿಮ್ಮ ಬಳಿಯಿಂದ ಕಳುಹಿಸಿಬಿಟ್ಟಿರಲ್ಲವೆ? ಈಗ ನನ್ನ ಬಳಿಗೆ ಏಕೆ ಬಂದಿರಿ?” ಎಂದು ಕೇಳಿದನು. |
೨೮ |
ಅದಕ್ಕೆ ಅವರು, “ಸರ್ವೇಶ್ವರ ನಿನ್ನ ಸಂಗಡ ಇದ್ದಾರೆಂಬುದು ನಮಗೆ ಚೆನ್ನಾಗಿ ಕಂಡುಬಂದಿದೆ. ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾದ ಒಪ್ಪಂದ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇವೆ. |
೨೯ |
ನಾವು ನಿನಗೆ ಯಾವ ಕೇಡನ್ನು ಮಾಡದೆ ಒಳ್ಳೆಯದನ್ನೇ ಮಾಡಿ ಸಮಾಧಾನದಿಂದ ಕಳುಹಿಸಿಕೊಟ್ಟಿಲ್ಲವೆ? ಅದರಂತೆಯೆ ಸರ್ವೇಶ್ವರ ಸ್ವಾಮಿಯಿಂದ ಆಶೀರ್ವಾದ ಪಡೆದ ನೀನು ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣ ಮಾಡಬೇಕು,” ಎಂದು ಹೇಳಿದರು. |
೩೦ |
ಆಗ ಇಸಾಕನು ಅವರಿಗೆ ಔತಣವನ್ನು ಏರ್ಪಡಿಸಿದನು; ಅವರೆಲ್ಲರು ತಿಂದು ಕುಡಿದರು. |
೩೧ |
ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಇಸಾಕನು ಅವರನ್ನು ಬೀಳ್ಕೊಡಲು ಅವರು ಸಮಾಧಾನದಿಂದ ಹೊರಟುಹೋದರು. |
೩೨ |
ಅದೇ ದಿನ ಇಸಾಕನ ಕೆಲಸಗಾರರು ತಾವು ತೋಡಿದ್ದ ಬಾವಿಯ ಸಮಾಚಾರದೊಂದಿಗೆ ಬಂದು, “ನಮಗೆ ನೀರು ಸಿಕ್ಕಿತು,” ಎಂದು ವರದಿಮಾಡಿದರು. |
೩೩ |
ಇಸಾಕನು ಆ ಬಾವಿಗೆ, ‘ಷೆಬಾ’ ಎಂದು ಹೆಸರಿಟ್ಟನು. ಈ ಕಾರಣ ಅಲ್ಲಿರುವ ಊರಿಗೆ ‘ಬೇರ್ಷೆಬ’ ಎಂದು ಹೆಸರಾಯಿತು. |
೩೪ |
ಏಸಾವನು ನಲವತ್ತು ವರ್ಷದವನಾದಾಗ ಹಿತ್ತಿಯನಾದ ಬೇರಿಯನ ಮಗಳು ಯೆಹುದೀತಳನ್ನು ಮತ್ತು ಹಿತ್ತಿಯನಾದ ಎಲೋನನ ಮಗಳು ಬಾಸೆಮತಳನ್ನು ಮದುವೆಮಾಡಿಕೊಂಡನು. |
೩೫ |
ಈ ಪತ್ನಿಗಳ ನಿಮಿತ್ತ ಇಸಾಕನು ಮತ್ತು ರೆಬೆಕ್ಕಳು ದುಃಖಪಡಬೇಕಾಯಿತು.
|
Kannada Bible (KNCL) 2016 |
No Data |