೧ |
ಸರ್ವೇಶ್ವರ ಸ್ವಾಮಿ ತಾವು ಹೇಳಿದ್ದಂತೆಯೇ ಸಾರಳಿಗೆ ನೆರವಾದರು. ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದರು. |
೨ |
ಆಕೆ ಗರ್ಭಿಣಿಯಾಗಿ ಅಬ್ರಹಾಮನಿಂದ ಒಬ್ಬ ಮಗನನ್ನು ಹೆತ್ತಳು, ಅದೂ ಅಬ್ರಹಾಮನು ಮುದುಕನಾಗಿದ್ದಾಗ, ದೇವರು ಮೊದಲೇ ನಿರ್ಧರಿಸಿದ್ದ ಕಾಲಕ್ಕೆ ಹೆತ್ತಳು. |
೩ |
ತನ್ನಿಂದ ಸಾರಳಲ್ಲಿ ಹುಟ್ಟಿದ ಆ ಮಗನಿಗೆ ಅಬ್ರಹಾಮನು ‘ಇಸಾಕ್’ ಎಂದು ಹೆಸರಿಟ್ಟನು. |
೪ |
ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅವನಿಗೆ ಸುನ್ನತಿ ಮಾಡಿದನು. |
೫ |
ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು. |
೬ |
ಸಾರಳು ಇಂತೆಂದುಕೊಂಡಳು: “ತಂದಿಹನಿದೋ ಎನಗೊಂದು ‘ನಗು’ವನು ಆ ದೇವನು, ನಕ್ಕು ನಲಿವರೆನ್ನೊಡನೆ ಇದನು ಕೇಳುವವರೆಲ್ಲರು.” |
೭ |
ಅದೂ ಅಲ್ಲದೆ: “ಈಪರಿ ಪೇಳುತ್ತಿದ್ದರಾರು ಅಬ್ರಹಾಮನಿಗೆ? 'ಕುಡಿಸುವಳು ಸಾರಳೂ ಮೊಲೆ ಹಾಲನ್ನು ಮಕ್ಕಳಿಗೆ’? ಹೆತ್ತಿರುವೆ ನೋಡಿ ಮಗನನು ಮುಪ್ಪಿನಲು ಆತನಿಗೆ!” |
೮ |
ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು. |
೯ |
ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು. |
೧೦ |
ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕುಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು. |
೧೧ |
ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು. |
೧೨ |
ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. |
೧೩ |
ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು. |
೧೪ |
ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. |
೧೫ |
ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು, |
೧೬ |
ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು. |
೧೭ |
ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; |
೧೮ |
ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು. |
೧೯ |
ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು. |
೨೦ |
ಹುಡುಗನ ಸಂಗಡ ದೇವರಿದ್ದರು. |
೨೧ |
ಪಾರಾನಿನ ಅರಣ್ಯ ಅವನ ವಾಸಸ್ಥಳವಾಯಿತು. ಅವನ ತಾಯಿ ಈಜಿಪ್ಟಿನಿಂದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು. |
೨೨ |
ಆ ದಿನಗಳಲ್ಲಿ ಅಬೀಮೆಲೆಕನು ತನ್ನ ಸೇನಾಪತಿಯಾದ ಫೀಕೋಲನ ಸಮೇತ ಅಬ್ರಹಾಮನ ಬಳಿಗೆ ಬಂದು, “ನೀನು ಮಾಡುವ ಕೆಲಸಕಾರ್ಯಗಳಲ್ಲೆಲ್ಲಾ ದೇವರು ನಿನ್ನ ಸಂಗಡ ಇದ್ದಾರೆ. |
೨೩ |
ಆದುದರಿಂದ ನೀನು ಈ ಸ್ಥಳದಲ್ಲಿ ನನ್ನೊಂದಿಗೆ ಒಂದು ಒಪ್ಪಂದಕ್ಕೆ ಬರಬೇಕು: ಅದೇನೆಂದರೆ - ನನಗಾಗಲಿ ನನ್ನ ಪುತ್ರಪೌತ್ರರಿಗಾಗಲಿ ಏನೂ ಅನ್ಯಾಯ ಮಾಡಬಾರದು; ನಾನು ನಿನಗೆ ಒಳ್ಳೆಯದನ್ನೇ ಮಾಡಿದಂತೆ ನನಗೂ, ನೀನು ವಾಸಮಾಡುತ್ತಿರುವ ಈ ನಾಡಿಗೂ ಒಳ್ಳೆಯದನ್ನೇ ಮಾಡಬೇಕು. ಹೀಗೆ ಮಾಡುವುದಾಗಿ ದೇವರ ಮೇಲೆ ಪ್ರಮಾಣಮಾಡಬೇಕು,” ಎಂದು ಕೇಳಿಕೊಂಡನು. |
೨೪ |
ಅದಕ್ಕೆ ಅಬ್ರಹಾಮನು, “ಹಾಗೆಯೇ ಪ್ರಮಾಣಮಾಡುತ್ತೇನೆ,” ಎಂದನು. |
೨೫ |
ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲಾತ್ಕಾರದಿಂದ ಸ್ವಾಧೀನಪಡಿಸಿಕೊಂಡಿದ್ದರು. |
೨೬ |
ಅಬೀಮೆಲೆಕನು, “ಈ ಕೃತ್ಯವನ್ನು ಮಾಡಿದವರು ಯಾರೆಂದು ನಾನರಿಯೆ; ನೀನೂ ನನಗೆ ತಿಳಿಸಲಿಲ್ಲ; ಇಲ್ಲಿಯವರೆಗೆ ನಾನು ಈ ಸಂಗತಿಯನ್ನು ಕೇಳಿಯೂ ಇಲ್ಲ,” ಎಂದನು. |
೨೭ |
ಆಗ ಅಬ್ರಹಾಮನು ಅಬೀಮೆಲೆಕನಿಗೆ ದನಕುರಿಗಳನ್ನು ದಾನಮಾಡಿದನು. ಹೀಗೆ ಅವರಿಬ್ಬರು ಒಂದು ಒಪ್ಪಂದ ಮಾಡಿಕೊಂಡರು. |
೨೮ |
ಆದರೆ ಅಬ್ರಹಾಮನು ಹಿಂಡಿನ ಏಳು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಿದನು. |
೨೯ |
ಅಬೀಮೆಲೆಕನು, “ನೀನು ಪ್ರತ್ಯೇಕವಾಗಿರಿಸಿರುವ ಈ ಏಳು ಕುರಿಮರಿಗಳು ಏತಕ್ಕೆ?” ಎಂದು ವಿಚಾರಿಸಿದನು. |
೩೦ |
ಅದಕ್ಕೆ ಅಬ್ರಹಾಮನು, “ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ಈ ಏಳು ಕುರಿಮರಿಗಳನ್ನು ನನ್ನ ಕೈಯಿಂದ ನೀನು ಸ್ವೀಕರಿಸಬೇಕು,” ಎಂದನು. |
೩೧ |
ಹೀಗೆ ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದ ಕಾರಣ, ಆ ಸ್ಥಳಕ್ಕೆ ‘ಬೇರ್ಷೆಬ’ ಎಂದು ಹೆಸರಾಯಿತು. |
೩೨ |
ಬೇರ್ಷೆಬದಲ್ಲಿ ಅವರು ಒಪ್ಪಂದಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಪತಿ ಫೀಕೋಲನು ಫಿಲಿಷ್ಟಿಯಕ್ಕೆ ಹಿಂದಿರುಗಿದರು. |
೩೩ |
ಅಬ್ರಹಾಮನು ಆ ಬೇರ್ಷೆಬದಲ್ಲೇ ಒಂದು ಪಿಚುಲ ವೃಕ್ಷವನ್ನು ನೆಟ್ಟು ನಿತ್ಯದೇವರಾದ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ, ಅಲ್ಲಿ ಆರಾಧನೆ ಮಾಡಿದನು. |
೩೪ |
ಅಬ್ರಹಾಮನು ಫಿಲಿಷ್ಟಿಯರ ಆ ಪ್ರಾಂತ್ಯದಲ್ಲಿ ಬಹುಕಾಲ ಪ್ರವಾಸಿಯಾಗಿದ್ದನು.
|
Kannada Bible (KNCL) 2016 |
No Data |