೧ |
ಆ ದೂತರಿಬ್ಬರು ಸೊದೋಮಿಗೆ ಬಂದಾಗ ಸಾಯಂಕಾಲವಾಗಿತ್ತು. ಲೋಟನು ಆ ಊರಬಾಗಿಲಲ್ಲೇ ಕುಳಿತುಕೊಂಡಿದ್ದನು. ದೂತರನ್ನು ಕಂಡದ್ದೇ ಅವನು ಎದ್ದುಬಂದು, ಬಾಗಿ ನಮಸ್ಕರಿಸಿ, |
೨ |
ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ರಾತ್ರಿ ತಂಗಿರಿ. ಕಾಲುಗಳನ್ನು ತೊಳೆದುಕೊಳ್ಳಿ. ಬೆಳಿಗ್ಗೆ ಎದ್ದು ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು,” ಎಂದನು. |
೩ |
ಅವರು, “ಇಲ್ಲ, ನಾವು ಬೀದಿಯಲ್ಲೇ ರಾತ್ರಿಯನ್ನು ಕಳೆಯುತ್ತೇವೆ,” ಎಂದು ಉತ್ತರಿಸಿದರು. ಅವನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅವನ ಮನೆಯಲ್ಲೇ ತಂಗಲು ಒಪ್ಪಿಕೊಂಡರು. ಅವರು ಮನೆಗೆ ಬಂದಾಗ ಲೋಟನು ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಔತಣವನ್ನು ಸಿದ್ಧಗೊಳಿಸಿದನು; ಅವರು ಊಟಮಾಡಿದರು. |
೪ |
ಆದರೆ ಅವರು ಮಲಗುವುದಕ್ಕೆ ಮುಂಚೆ ಆ ಸೊದೋಮ್ ಪಟ್ಟಣದ ಗಂಡಸರು, ಹುಡುಗರು-ಮುದುಕರು ಎನ್ನದೆ, ಎಲ್ಲರೂ ಬಂದು ಆ ಮನೆಯನ್ನು ಮುತ್ತಿದರು. |
೫ |
ಅಲ್ಲದೆ ಲೋಟನಿಗೆ, \ಈ ರಾತ್ರಿ ತಂಗಲು ನಿನ್ನ ಬಳಿಗೆ ಬಂದ ಆ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ಸಂಭೋಗಿಸಬೇಕು,” ಎಂದು ಕೂಗಿ ಹೇಳಿದರು. |
೬ |
ಲೋಟನು, ತನ್ನ ಹಿಂದೆ ಬಾಗಿಲು ಹಾಕಿಕೊಂಡು, ಹೊರಕ್ಕೆ ಬಂದು, |
೭ |
\ಅಣ್ಣ ತಮ್ಮಂದಿರಾ, ನಿಮ್ಮನ್ನು ವಿನಂತಿಸಿ ಕೇಳಿಕೊಳ್ಳುತ್ತೇನೆ: ಈ ಪಾತಕ ಮಾತ್ರ ಮಾಡಬೇಡಿ; |
೮ |
ಕೇಳಿ, ಕನ್ಯೆಯರಾದ ಇಬ್ಬರು ಹೆಣ್ಣುಮಕ್ಕಳು ನನಗಿದ್ದಾರೆ; ಅವರನ್ನು ಬೇಕಾದರೆ ಹೊರಗೆ ಕರೆಯಿಸುತ್ತೇನೆ; ನಿಮಗೆ ಇಷ್ಟಬಂದಂತೆ ಮಾಡಬಹುದು. ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕಾಗಿ ಬಂದವರು; ಅವರಿಗೆ ಏನೂ ಮಾಡಬೇಡಿ,” ಎಂದನು. |
೯ |
ಅವರಾದರೋ, “ಬಿಡು ದಾರಿ, ಪ್ರವಾಸಿಯಾಗಿ ಬಂದ ಇವನು ನಮಗೆ ನ್ಯಾಯಹೇಳುವವನಾಗಿಬಿಟ್ಟ! ದಾರಿ ಬಿಡದಿದ್ದರೆ ಆ ಮನುಷ್ಯರಿಗಿಂತ ನಿನಗೇ ಹೆಚ್ಚು ಕೇಡಾದೀತು,” ಎಂದು ಹೇಳಿ ಲೋಟನ ಮೇಲೆ ಬಿದ್ದು ತುಳಿದು ಬಾಗಿಲನ್ನು ಒಡೆದುಹಾಕುವುದರಲ್ಲಿದ್ದರು. |
೧೦ |
ಅಷ್ಟರಲ್ಲಿ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮತ್ತ ಎಳೆದು ಮನೆಯೊಳಗೆ ಹಾಕಿಕೊಂಡು, ಬಾಗಿಲನ್ನು ಮುಚ್ಚಿದರು; |
೧೧ |
ದೊಡ್ಡವರು ಚಿಕ್ಕವರು ಎನ್ನದೆ, ಹೊರಗಿದ್ದ ಆ ಜನರೆಲ್ಲರ ಕಣ್ಣು ಕುರುಡಾಗುವಂತೆ ಮಾಡಿದರು; ಬಾಗಿಲು ಯಾವುದೆಂದು ತಿಳಿಯದೆ ಅವರು ತಡಕಾಡುವಂತೆ ಮಾಡಿಬಿಟ್ಟರು. |
೧೨ |
ಬಳಿಕ ಆ ಮನುಷ್ಯರಿಬ್ಬರು ಲೋಟನಿಗೆ, “ನಿನಗೆ ಇಲ್ಲಿ ಯಾರು ಯಾರು ಇದ್ದಾರೆಯೋ, ಗಂಡುಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ. |
೧೩ |
ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಂದ ಆಪಾದನೆ ದೊಡ್ಡದಾದುದರಿಂದ ಇವರನ್ನು ನಾಶಮಾಡುವುದಕ್ಕಾಗಿ ಸರ್ವೇಶ್ವರ ನಮ್ಮನ್ನು ಕಳಿಸಿದ್ದಾರೆ,” ಎಂದು ತಿಳಿಸಿದರು. |
೧೪ |
ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳಿಗೆ ಗೊತ್ತುಮಾಡಿದ್ದ ಅಳಿಯಂದಿರಿಗೆ ಸಂಗತಿಯನ್ನು ಹೇಳಿ, “ನೀವೆದ್ದು ಈ ಸ್ಥಳವನ್ನು ಬಿಟ್ಟ ಹೊರಡಿರಿ; ಈ ಊರನ್ನು ಸರ್ವೇಶ್ವರ ಸ್ವಾಮಿ ನಾಶ ಮಾಡಲಿದ್ದಾರೆ” ಎಂದು ಹೇಳಿದನು. ಆ ಅಳಿಯಂದಿರಿಗೆ ಇದೊಂದು ಪರಿಹಾಸ್ಯವಾಗಿ ಕಾಣಿಸಿತು. |
೧೫ |
ಹೊತ್ತು ಮೂಡುವುದಕ್ಕೆ ಮುಂಚೆ ದೂತರು ಲೋಟನಿಗೆ, “ಏಳು, ನಿನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳಿಬ್ಬರನ್ನು ಕರೆದುಕೊಂಡು ಬೇಗನೆ ಹೊರಡು; ಇಲ್ಲದಿದ್ದರೆ ಊರಿಗೆ ಬರಲಿರುವ ದಂಡನೆಯಲ್ಲಿ ನೀನೂ ಸಿಕ್ಕಿಕೊಂಡು ನಾಶವಾಗಬೇಕಾದೀತು,” ಎಂದು ಹೇಳಿ ತ್ವರೆಪಡಿಸಿದರು. |
೧೬ |
ಅವನು ಇನ್ನೂ ತಡಮಾಡುತ್ತಿರುವುದನ್ನು ಕಂಡು, ಆ ಮನುಷ್ಯರು ಅವನನ್ನು ಹಾಗು ಅವನ ಹೆಂಡತಿ ಮಕ್ಕಳನ್ನು ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಸರ್ವೇಶ್ವರ ಸ್ವಾಮಿಗೆ ಅವನ ಮೇಲೆ ಅಷ್ಟು ಕನಿಕರವಿತ್ತು. |
೧೭ |
ಊರ ಹೊರಗೆ ಬಿಟ್ಟಾದ ಮೇಲೆ ಆ ಇಬ್ಬರಲ್ಲಿ ಒಬ್ಬನು, “ಪ್ರಾಣ ಉಳಿಸಿಕೊಳ್ಳಬೇಕಾದರೆ ಓಡಬೇಕು, ಹಿಂದಕ್ಕೆ ನೋಡಬಾರದು; ಬಯಲುಸೀಮೆಯಲ್ಲೂ ನಿಲ್ಲದೆ ಗುಡ್ಡಗಾಡಿಗೆ ಓಡಬೇಕು, ಇಲ್ಲವಾದರೆ ನಾಶವಾದೀತು!” ಎಂದು ಎಚ್ಚರಿಸಿದನು. |
೧೮ |
ಅದಕ್ಕೆ ಲೋಟನು, “ಸ್ವಾಮೀ ಅದು ನನ್ನಿಂದಾಗದು; |
೧೯ |
ನಿಮ್ಮ ದಾಸನ ಮೇಲೆ ಮರುಕವಿಟ್ಟು, ಪ್ರಾಣ ಉಳಿಸಿದ್ದೇನೋ ಮಹಾ ಉಪಕಾರ ಆಯಿತು; ಆದರೆ ಗುಡ್ಡಗಾಡಿಗೆ ಓಡಿಹೋಗಲು ನನ್ನಿಂದಾಗದು, ಅಲ್ಲಿಗೆ ಸೇರುವುದಕ್ಕೆ ಮುಂಚೆಯೇ ಈ ವಿಪತ್ತಿಗೆ ಸಿಕ್ಕಿ ಸತ್ತೇನು. |
೨೦ |
ಆದುದರಿಂದ ಅಗೋ, ಅಲ್ಲಿ ಊರೊಂದು ಕಾಣಿಸುತ್ತಿದೆ; ಅದು ಅಷ್ಟೇನು ದೂರವಲ್ಲ, ಚಿಕ್ಕ ಊರು, ಹೌದಲ್ಲವೆ? ಅಲ್ಲಿಗಾದರೂ ಹೋಗಲು ಅಪ್ಪಣೆಯಾದರೆ ಪ್ರಾಣ ಉಳಿಯುತ್ತದೆ,” ಎಂದನು. |
೨೧ |
ಅದಕ್ಕಾತನು, “ಸರಿ, ಹಾಗೆಯೇ ಆಗಲಿ, ಈ ನಿನ್ನ ಕೋರಿಕೆಯನ್ನೂ ನೆರವೇರಿಸುತ್ತೇನೆ, ನೀನು ಹೇಳಿದ ಆ ಊರನ್ನು ಹಾಳುಮಾಡುವುದಿಲ್ಲ. |
೨೨ |
ಬೇಗನೆ ಅಲ್ಲಿಗೆ ಹೋಗಿ ಸುರಕ್ಷಿತವಾಗಿರು, ನೀನು ಅಲ್ಲಿಗೆ ಮುಟ್ಟುವ ತನಕ ನಾನು ಏನನ್ನೂ ಮಾಡಲಿಕ್ಕಾಗುವುದಿಲ್ಲ,” ಎಂದನು. ಲೋಟನು ಆ ಊರನ್ನು ಚಿಕ್ಕದು ಎಂದು ಕರೆದುದಕ್ಕಾಗಿ ಅದಕ್ಕೆ “ಚೋಗರ್” ಎಂದು ಹೆಸರಾಯಿತು. |
೨೩ |
ಲೋಟನು ಚೋಗರನ್ನು ಮುಟ್ಟುವಷ್ಟರಲ್ಲಿ ಸೂರ್ಯೋದಯವಾಗಿತ್ತು. |
೨೪ |
ಆಗ ಸರ್ವೇಶ್ವರ ಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ ಉರಿಯುತ್ತಿರುವ ಗಂಧಕಮಳೆ ಸುರಿಸಿದರು. |
೨೫ |
ಆ ಪಟ್ಟಣಗಳನ್ನು, ಇಡೀ ಆ ಬಯಲುಸೀಮೆಯನ್ನೂ ಅವುಗಳ ನಿವಾಸಿಗಳನ್ನೂ ಹೊಲಗಳ ಬೆಳೆಯೆಲ್ಲವನ್ನೂ ಹಾಳುಮಾಡಿದರು. |
೨೬ |
ಲೋಟನ ಹೆಂಡತಿಯೋ, ಅವನ ಹಿಂದೆ ಬರುತ್ತಿದ್ದಾಗ ಹಿಂದಿರುಗಿ ನೋಡಿದಳು; ಕೂಡಲೇ ಉಪ್ಪಿನ ಕಂಬವಾಗಿ ಮಾರ್ಪಟ್ಟಳು. |
೨೭ |
ಇತ್ತ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಸರ್ವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಮರಳಿ ಬಂದನು. |
೨೮ |
ಸೊದೋಮ್ - ಗೊಮೋರ ಹಾಗೂ ಆ ಬಯಲುಸೀಮೆಯತ್ತ ಅವನು ಕಣ್ಣುಹಾಯಿಸಿದಾಗ, ಇಗೋ, ಆ ಪ್ರದೇಶದಿಂದ ಹೊಗೆ, ದೊಡ್ಡ ಆವಿಗೆಯ ಹೊಗೆಯಂತೆ ಭುಗಿಲೇರುತ್ತಿತ್ತು. |
೨೯ |
ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ ಲೋಟನು ವಾಸವಾಗಿದ್ದ ಊರುಗಳನ್ನೇನೋ ಹಾಳುಮಾಡಿದರು, ಆದರೆ ಅಬ್ರಹಾಮನನ್ನು ನೆನಪಿಗೆ ತಂದುಕೊಂಡು ಲೋಟನನ್ನು ತಪ್ಪಿಸಿ ಕಾಪಾಡಿದರು. |
೩೦ |
ಲೋಟನು ಚೋಗರಿನಲ್ಲಿ ಮನೆ ಮಾಡುವುದಕ್ಕೆ ಅಂಜಿದನು. ಈ ಕಾರಣ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗುಡ್ಡಗಾಡನ್ನು ಹತ್ತಿ ಅಲ್ಲಿದ್ದ ಒಂದು ಗವಿಯಲ್ಲಿ ವಾಸಮಾಡಿದನು. |
೩೧ |
ಇಂತಿರಲು, ಅವನ ಹಿರಿಯ ಮಗಳು ತನ್ನ ತಂಗಿಗೆ ಹೀಗೆಂದಳು. “ನಮ್ಮ ತಂದೆ ಮುದುಕ; ಲೋಕ ಪದ್ಧತಿಯ ಪ್ರಕಾರ ನಮ್ಮನ್ನು ಮದುವೆ ಮಾಡಿಕೊಳ್ಳುವ ಗಂಡುಗಳು ಇಲ್ಲೆಲ್ಲಿಯೂ ಇಲ್ಲ. |
೩೨ |
ಎಂದೇ ಬಾ ತಂದೆಗೆ ದ್ರಾಕ್ಷಾರಸವನ್ನು ಕುಡಿಸೋಣ; ಅವನ ಸಂಗಡ ಮಲಗಿಕೊಂಡು ತಂದೆಯಿಂದಲಾದರೂ ಸಂತಾನ ಪಡೆದುಕೊಳ್ಳೋಣ,“ ಎಂದಳು. |
೩೩ |
ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಹಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು. ಅವಳು ಯಾವಾಗ ತನ್ನ ಸಂಗಡ ಮಲಗಿಕೊಂಡಳೋ, ಯಾವಾಗ ಎದ್ದು ಹೋದಳೋ ಏನೊಂದೂ ಅವನಿಗೆ ತಿಳಿಯಲಿಲ್ಲ. |
೩೪ |
ಮಾರನೆಯ ದಿನ ಹಿರಿಯಳು ಕಿರಿಯಳಿಗೆ, “ನಿನ್ನೆ ರಾತ್ರಿ ನಾನು ಅಪ್ಪನ ಸಂಗಡ ಮಲಗಿದ್ದೆ. ಈ ರಾತ್ರಿ ಕೂಡ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆಮೇಲೆ ನೀನು ಅವನ ಸಂಗಡ ಮಲಗಿಕೊ; ಹೀಗಾದರೂ ನಮ್ಮ ತಂದೆಯ ಸಂತಾನ ಉಳಿಸೋಣ”, ಎಂದು ಹೇಳಿದಳು. |
೩೫ |
ಆ ರಾತ್ರಿಯೂ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು. ಅವಳು ಯಾವಾಗ ತನ್ನ ಸಂಗಡ ಮಲಗಿದಳೋ, ಯಾವಾಗ ಎದ್ದು ಹೋದಳೋ ಏನೊಂದೂ ಅವನಿಗೆ ತಿಳಿಯಲಿಲ್ಲ. |
೩೬ |
ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ಗರ್ಭಿಣಿಯರಾದರು. |
೩೭ |
ಹಿರಿಯಳು ಗಂಡುಮಗುವನ್ನು ಹೆತ್ತು ಅದಕ್ಕೆ “ಮೋವಾಬ್” ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲಪುರುಷ. |
೩೮ |
ಕಿರಿಯಳೂ ಗಂಡುಮಗುವನ್ನು ಹೆತ್ತು ಅದಕ್ಕೆ ‘ಬಿನಮ್ಮಿ’ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲಪುರುಷ.
|
Kannada Bible (KNCL) 2016 |
No Data |