೧ |
ಅಬ್ರಾಮನು ತನ್ನದುದನ್ನೆಲ್ಲಾ ತೆಗೆದುಕೊಂಡು ಹೆಂಡತಿ ಮತ್ತು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು. |
೨ |
ಈಗ ಅವನಿಗೆ ಪಶುಪ್ರಾಣಿಗಳಿದ್ದವು. ಬೆಳ್ಳಿಬಂಗಾರವಿತ್ತು. ಅವನೀಗ ಘನಧನವಂತನಾಗಿದ್ದನು. |
೩ |
ಅಲ್ಲಿಂದ ಮುಂದೆ ಪ್ರಯಾಣ ಮಾಡುತ್ತಾ |
೪ |
ಬೇತೇಲಿಗೂ ಆಯಿ ಎಂಬ ಊರಿಗೂ ನಡುವೆ ತಾನು ಹಿಂದೆ ಗುಡಾರ ಹಾಕಿ ಬಲಿಪೀಠವನ್ನು ಕಟ್ಟಿದ ಕ್ಷೇತ್ರವನ್ನು ತಲುಪಿದನು. ಅಲ್ಲಿ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ ಆರಾಧಿಸಿದನು. |
೫ |
ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು. |
೬ |
ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದುದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ. |
೭ |
ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಬೇರೆ. ಇದೂ ಅಲ್ಲದೆ, ಆ ಕಾಲದಲ್ಲಿ ಕಾನಾನ್ಯರೂ ಪೆರಿಜೀಯರೂ ಅದೇ ನಾಡಿನಲ್ಲಿ ವಾಸವಾಗಿದ್ದರು. |
೮ |
ಆದುದರಿಂದ ಅಬ್ರಾಮನು ಲೋಟನಿಗೆ ಹೀಗೆಂದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು. ನಾವು ಬಳಗದವರು. |
೯ |
ನಾಡೆಲ್ಲಾ ನಿನ್ನ ಕಣ್ಮುಂದಿದೆ. ದಯವಿಟ್ಟು ನನ್ನನ್ನು ಬಿಟ್ಟು ಬೇರೆ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ\. |
೧೦ |
ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೋದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನ ವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯಪಡೆದಿತ್ತು. |
೧೧ |
ಆದುದರಿಂದ ಲೋಟನು ಜೋರ್ಡನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಬೇರೆ ಬೇರೆ ಆದರು. |
೧೨ |
ಅಬ್ರಾಮನು ಕಾನಾನ್ ನಾಡಿನಲ್ಲೇ ವಾಸಮಾಡಿದನು. ಲೋಟನು ಜೋರ್ಡನ್ ನದಿಯ ಸುತ್ತಣ ಊರುಗಳಲ್ಲಿ ವಾಸಮಾಡುತ್ತಾ ಸೋದೋಮ್ಗೆ ಸಮೀಪದಲ್ಲಿ ಗುಡಾರಹಾಕಿದನು. |
೧೩ |
ಸೋದೋಮಿನ ಪಟ್ಟಣದವರು ಬಹಳ ದುಷ್ಟರು; ಪ್ರಭುವಿನ ದೃಷ್ಟಿಯಲ್ಲಿ ಕಡುಪಾಪಿಗಳು. |
೧೪ |
ಲೋಟನು ಅಬ್ರಾಮನನ್ನು ಬಿಟ್ಟುಹೋದ ಬಳಿಕ ಸರ್ವೇಶ್ವರ ಸ್ವಾಮಿ ಅಬ್ರಾಮನಿಗೆ, “ನೀನು ಇರುವ ಸ್ಥಳದಿಂದಲೇ ದಕ್ಷಿಣೋತ್ತರ ಪೂರ್ವಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡು. |
೧೫ |
ನಿನ್ನ ಕಣ್ಣಿಗೆ ಕಾಣಿಸುವ ಈ ಪ್ರಾಂತ್ಯವನ್ನೆಲ್ಲಾ ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾಗಿ ಕೊಡುತ್ತೇನೆ. |
೧೬ |
ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯಾತರನ್ನಾಗಿ ಮಾಡುತ್ತೇನೆ. ಭೂಮಿಯ ಧೂಳನ್ನು ಲೆಕ್ಕಿಸಲು ಸಾಧ್ಯವಾದಲ್ಲಿ ನಿನ್ನ ಸಂತಾನದವರನ್ನು ಲೆಕ್ಕಿಸಲು ಸಾಧ್ಯವಾದೀತು. |
೧೭ |
ನೀನೆದ್ದು ಈ ನಾಡಿನ ಉದ್ದಗಲಕ್ಕೂ ತಿರುಗಾಡು; ಇದನ್ನು ನಾನು ನಿನಗೆ ಕೊಡುತ್ತೇನೆ, ಎಂದು ಹೇಳಿದರು. |
೧೮ |
ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರ ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆವೃಕ್ಷಗಳ ತೋಪಿಗೆ ಬಂದು ವಾಸಮಾಡಿದನು. ಸರ್ವೇಶ್ವರ ಸ್ವಾಮಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.
|
Kannada Bible (KNCL) 2016 |
No Data |