A A A A A

ಕ್ರಾನಿಕಲ್ಸ್ ೧ ೨೬:೧-೩೨
೧. ದೇವಾಲಯದ ಕಾವಲುಗಾರರಾಗಿ ಸೇವೆಮಾಡಲು ನೇಮಕಗೊಂಡ ಲೇವಿಯರ ಹೆಸರುಗಳು: ಕೋರಹೀಯನಾದ ಮೆಷೆಲೆಮ್ಯ; ಇವನು ಕೊರೇಯನ ಮಗ ಹಾಗೂ ಆಸಾಫನ ಮೊಮ್ಮಗ;
೨. ಮೆಷಲೆಮ್ಯನ ಮಕ್ಕಳಲ್ಲಿ ಜೆಕರ್ಯನು ಚೊಚ್ಚಲನು; ಎದೀಯಯೇಲನು ಮರಚಲನು; ಜೆಬದ್ಯನು ಮೂರನೆಯವನು; ಯೆತ್ನಿಯೇಲನು ನಾಲ್ಕನೆಯವನು.
೩. ಏಲಾಮನು ಐದನೆಯವನು. ಯೆಹೋಹಾನಾನನು ಆರನೆಯವನು; ಎಲ್ಯೆಹೋಯೇನೈ ಏಳನೆಯವನು.
೪. ಓಬೇದೆದೋಮನ ಮಕ್ಕಳಲ್ಲಿ ಶೆಮಾಯನು ಚೊಚ್ಚಲನು; ಯೆಹೋಜಾಬಾದನು ಮರಚಲನು; ಯೋವಾಹನು ಮೂರನೆಯವನು; ಸಾಕಾರನು ನಾಲ್ಕನೆಯವನು; ನೆತನೇಲನು ಐದನೆಯವನು;
೫. ಅಮ್ಮೀಯೇಲನು ಆರನೆಯವನು; ಇಸ್ಸಾಕಾರನು ಏಳನೆಯವನು; ಪೆಯುಲ್ಲಿತೈಯು ಎಂಟನೆಯವನು. ಓಬೇದೆದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.
೬. ಅವನ ಮಗ ಶೆಮಾಯನ ಮಕ್ಕಳು ಗೋತ್ರಪ್ರಧಾನರೂ ಮಹಾಸಮರ್ಥರೂ ಆಗಿದ್ದರು.
೭. ಇವರು ಯಾರೆಂದರೆ, ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್ ಇವರು ಹಾಗೂ ಬಹು ಸಮರ್ಥರಾದ, ಎಲೀಹು, ಸೆಮಕ್ಯ ಎಂಬ ಇವರ ಸಹೋದರರು.
೮. ಇವರೆಲ್ಲರೂ ಓಬೇದೆದೋಮನ ಸಂತಾನದವರು. ಸಮರ್ಥರೂ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಮಕ್ಕಳೂ ಸಹೋದರರೂ ಕೂಡಿ ಅರವತ್ತೆರಡು ಮಂದಿ ಇದ್ದರು.
೯. ಮೆಷೆಲಿಮ್ಯನ ಮಕ್ಕಳೂ ಸಹೋದರರೂ ಹದಿನೆಂಟು ಮಂದಿ; ಇವರೂ ಸಮರ್ಥರಾಗಿದ್ದರು.
೧೦. ಮೆರಾರೀಯನಾದ ಹೋಸನಿಗೂ ಮಕ್ಕಳಿದ್ದರು; ಅವರಲ್ಲಿ ಶಿಮ್ರಿ ಎಂಬವನು ಮುಖ್ಯಸ್ಥನಾಗಿದ್ದನು. ಇವನು ಚೊಚ್ಚಲನಲ್ಲದಿದ್ದರೂ ತಂದೆ ಅವನನ್ನೇ ಮುಖ್ಯಸ್ಥನನ್ನಾಗಿ ನೇಮಿಸಿದನು.
೧೧. ಹಿಲ್ಕೀಯನು ಎರಡನೆಯವನು; ಟೋಬಲ್ಯನು ಮೂರನೆಯವನು; ಜೆಕರ್ಯನು ನಾಲ್ಕನೆಯವನು. ಹೋಸನ ಮಕ್ಕಳೂ ಸಹೋದರರೂ ಒಟ್ಟಿಗೆ ಹದಿಮೂರು ಮಂದಿ.
೧೨. ಈ ದ್ವಾರಪಾಲಕ ವರ್ಗಗಳ ಪ್ರಧಾನ ಪುರುಷರು ತಮ್ಮ ಕುಲಬಂಧುಗಳಂತೆ ಸರ್ವೇಶ್ವರನ ಆಲಯದಲ್ಲಿ ಸೇವೆಮಾಡುತ್ತಿದ್ದರು.
೧೩. ಅವರು, ಕನಿಷ್ಠ ಕುಟುಂಬವೆಂದಾಗಲಿ ಶ್ರೇಷ್ಠ ಕುಟುಂಬವೆಂದಾಗಲಿ ವ್ಯತ್ಯಾಸಮಾಡದೆ, ತಮ್ಮಲ್ಲಿ ಪ್ರತಿಯೊಬ್ಬನು ಕಾಯತಕ್ಕ ಹೆಬ್ಬಾಗಿಲುಗಳನ್ನು ಚೀಟಿನಿಂದಲೇ ಗೊತ್ತುಮಾಡಿಕೊಳ್ಳುತ್ತಿದ್ದರು.
೧೪. ಪೂರ್ವದಿಕ್ಕಿನ ಚೀಟು ಶೆಲೆಮ್ಯನ ಹೆಸರಿಗೆ ಬಿದ್ದಿತ್ತು. ಬಹು ವಿವೇಕವುಳ್ಳ ಪಂಚಾಯತಗಾರನಾಗಿರುವ ಅವನ ಮಗ ಜೆಕರ್ಯನ ಹೆಸರಿಗೆ ಉತ್ತರ ದಿಕ್ಕಿನ ಚೀಟು ಬಿದ್ದಿತ್ತು.
೧೫. ಓಬೇದೆದೋಮನಿಗೆ ದಕ್ಷಿಣ ಬಾಗಿಲೂ ಅವನ ಮಕ್ಕಳಿಗೆ ಉಗ್ರಾಣ ಮಂದಿರವೂ
೧೬. ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮ ಬಾಗಿಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಿಲೂ ಚೀಟಿನಿಂದ ನೇಮಕವಾಗಿದ್ದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.
೧೭. ಲೇವಿಯರಲ್ಲಿ ಪ್ರತಿದಿನವೂ ಪೂರ್ವ ಬಾಗಿಲನ್ನು ಆರು ಮಂದಿ, ಪಶ್ಚಿಮ ಬಾಗಿಲನ್ನು ನಾಲ್ಕು ಮಂದಿ, ದಕ್ಷಿಣ ಬಾಗಿಲನ್ನು ನಾಲ್ಕು ಮಂದಿ, ಉಗ್ರಾಣ ಮಂದಿರದ ಎರಡು ಬಾಗಿಲುಗಳನ್ನು ಇಬ್ಬಿಬ್ಬರು,
೧೮. ಪರ್ಬರೆಂಬ ಕಟ್ಟಡವಿರುವ ಪಶ್ಚಿಮ ದಿಕ್ಕಿನ ದಾರಿಯ ಬಾಗಿಲನ್ನು ನಾಲ್ಕು ಮಂದಿ, ಪರ್ಬರನ್ನು ಇಬ್ಬರು ಕಾಯುತ್ತಿದ್ದರು.
೧೯. ಕೋರಹೀಯರ ಮತ್ತು ಮೆರಾರೀಯರ ದ್ವಾರಪಾಲಕ ವರ್ಗಗಳು ಇವೇ.
೨೦. ಮೇಲೆ ಕಂಡವರ ಕುಲಬಂಧುಗಳೂ ಹಾಗೂ ದೇವಾಲಯದ ಭಂಡಾರ, ಪರಿಶುದ್ಧ ವಸ್ತುಗಳ ಭಂಡಾರ ಇವುಗಳನ್ನು ಕಾಯುವ ಲೇವಿಯರ ಪಟ್ಟಿ:
೨೧. ಗೇರ್ಷೋಮನಿಗೆ ಹುಟ್ಟಿದ ಲದ್ದಾನ ಸಂತಾನದವರಾದ ಲದ್ದಾನ್ಯ ಕುಟುಂಬಗಳ ಮುಖ್ಯಸ್ಥರಲ್ಲಿ ಯೆಹೀಯೇಲೀ;
೨೨. ಮತ್ತು ಯೆಹೀಯೇಲ್ಯರಾದ ಜೇತಾಮನು ಹಾಗೂ ಯೋವೇಲನೆಂಬ ಅವನ ತಮ್ಮನು ಸರ್ವೇಶ್ವರನ ಆಲಯದ ಭಂಡಾರಗಳನ್ನು ಕಾಯುತ್ತಿದ್ದರು.
೨೩. ಅಮ್ರಾಮ್, ಇಚ್ಚಾರ್, ಹೆಬ್ರೋನ್, ಉಜ್ಜೀಯೇಲ್
೨೪. ಇವರ ಸಂತಾನದವರಲ್ಲಿ ಗೇರ್ಷೋಮನ ಮಗನೂ ಮೋಶೆಯ ಮೊಮ್ಮಗನೂ ಆಗಿರುವ ಶೆಬೂವೇಲನು ಭಂಡಾರಗಳನ್ನು ಕಾಯುವವರ ಮುಖ್ಯಸ್ಥನು.
೨೫. ಎಲೀಯೆಜೆರನ ಮಗ ರೆಹಬ್ಯನಿಗೆ ಹುಟ್ಟಿದ ಯೆಶಾಯನ ಮರಿಮಗನೂ ಯೋರಾಮನ ಮೊಮ್ಮಗನೂ
೨೬. ಜಿಕ್ರೀಯ ಮಗನೂ ಆಗಿರುವ ಶೆಕೋಮೋತನೂ ಅವನ ಸಹೋದರರೂ ಪ್ರತಿಷ್ಠಿತ ವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರ ಬಂಧುಗಳು.
೨೭. ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.
೨೮. ಇವರಲ್ಲದೆ ದರ್ಶಿಯಾದ ಸಮುವೇಲನೂ ಕೀಷನ ಮಗ ಸೌಲನೂ ನೇರನ ಮಗ ಅಬ್ನೇರನೂ ಜೆರೂಯಳ ಮಗ ಯೋವಾಬನೂ ಹಾಗೆಯೇ ಮಾಡಿದ್ದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.
೨೯. ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಮಕ್ಕಳೂ ಲೌಕಿಕೋದ್ಯೋಗದಲ್ಲಿದ್ದರು. ಅವರು ಇಸ್ರಯೇಲರ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಆಗಿದ್ದರು.
೩೦. ಹೆಬ್ರೋನ್ಯರಲ್ಲಿ ಹಷಬ್ಯನೂ ಅವನ ಸಹೋದರರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿದ್ದ ಇಸ್ರಯೇಲರೊಳಗೆ ಸರ್ವೇಶ್ವರನ ಸೇವಾಕಾರ್ಯಗಳನ್ನೂ ರಾಜಕೀಯ ಕಾರ್ಯಗಳನ್ನೂ ನಡೆಸುತ್ತಿದ್ದರು. ಸಮರ್ಥರಾದ ಅವರು ಸಾವಿರದ ಏಳುನೂರು ಮಂದಿ ಇದ್ದರು.
೩೧. ದಾವೀದನ ಆಳ್ವಿಕೆಯ ನಲವತ್ತನೆಯ ವರ್ಷದಲ್ಲಿ ಹೆಬ್ರೋನ್ಯರಿಗೆ ಸೇರಿದವರು ಯಾರಾರೆಂದು ವಿಚಾರಣೆ ನಡೆದಾಗ ಗಿಲ್ಯಾದಿನ ಯಾಜೇರಿನ ಶ್ರೀಮಂತರಲ್ಲಿ ಅನೇಕರು ಅವರ ಗೋತ್ರದವರು ಯಾರೆಂದು ಗೊತ್ತಾಯಿತು. ಈ ಹೆಬ್ರೋನ್ಯರಲ್ಲಿ ಯೇರೀಯನು ಮುಖ್ಯಸ್ಥನು;
೩೨. ಶ್ರೀಮಂತರೂ ಕುಟುಂಬಪ್ರಧಾನರೂ ಆದ ಅವನ ಗೋತ್ರಬಂಧುಗಳು ಎರಡು ಸಾವಿರದ ಏಳುನೂರು ಮಂದಿ ಇದ್ದರು. ಅರಸ ದಾವೀದನು ರೂಬೇನ್, ಗಾದ್, ಅರ್ಧಮನಸ್ಸೆ ಕುಲಗಳವರ ಮೇಲೆ ಇವರನ್ನೇ ದೈವಿಕ ಕಾರ್ಯಗಳಲ್ಲೂ ರಾಜಕೀಯ ಕಾರ್ಯಗಳಲ್ಲೂ ಅಧಿಕಾರಿಗಳನ್ನಾಗಿ ನೇಮಿಸಿದನು.

ಕ್ರಾನಿಕಲ್ಸ್ ೧ ೨೭:೧-೩೪
೧. ಇಸ್ರಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ವಿವಿಧ ಸೇವೆಯನ್ನು ಮಾಡಬೇಕಾಗಿದ್ದ ವರ್ಗಗಳ ಅಧಿಪತಿಗಳು ಹಾಗು ಇವರ ಕಾರ್ಯಕ್ರಮಗಳ ಪಟ್ಟಿ: ವರ್ಷದ ಎಲ್ಲಾ ತಿಂಗಳುಗಳಲ್ಲಿ, ತಿಂಗಳಿಗೆ ಒಂದು ವರ್ಗದಂತೆ, ಸರದಿಯ ಮೇಲೆ ಕೆಲಸಕ್ಕಾಗಿ ಬರುತ್ತಿದ್ದ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
೨. ಪೆರೆಚನ ಸಂತಾನದವನೂ ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕ.
೩. ಇವನು ಮೊದಲನೆಯ ತಿಂಗಳಿನ ಸೇನಾಪತಿಗಳ ಮುಖ್ಯಸ್ಥ. ಮೊದಲನೆಯ ತಿಂಗಳಿನಲ್ಲಿ ಸೇವೆ ಸಲ್ಲಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೪. ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕ; ಆ ವರ್ಗದಲ್ಲಿ ಮಿಕ್ಲೋತನೆಂಬವನೂ ನಾಯಕನು. ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೫. ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕ. ಮೂರನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೬. ಈ ಬೆನಾಯನು ಮೂವತ್ತು ಮಂದಿಯಲ್ಲಿ ಪ್ರಸಿದ್ಧ ರಣವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನೂ ಇದ್ದನು.
೭. ಯೋವಾಬನ ತಮ್ಮನಾದ ಅಸಾಹೇಲನೂ ಅವನು ಸತ್ತನಂತರ ಅವನ ಮಗ ಜೆಬದ್ಯನೂ ನಾಲ್ಕನೆಯ ವರ್ಗದ ನಾಯಕರು; ನಾಲ್ಕನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವರ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೮. ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕ. ಐದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೯. ತೆಕೋವಿನ ಇಕ್ಕೇಷನ ಮಗ ಈರ ಎಂಬವನು ಆರನೆಯ ವರ್ಗದ ನಾಯಕ. ಆರನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೦. ಎಫ್ರಯಿಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕ; ಏಳನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ಮಾರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೧. ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕ. ಎಂಟನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೨. ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬ್ಬೀಯೆಜೆರನು ಒಂಬತ್ತನೆಯ ವರ್ಗದ ನಾಯಕ. ಒಂಬತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೩. ನೆಟೋಫ ಊರಿನ ಜಿರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕ; ಹತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೪. ಎಫ್ರಯಿಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕ. ಹನ್ನೊಂದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೫. ನೆಟೋಫ ಊರಿನವನೂ ಒತ್ನೀಯೇಲನ ಸಂತಾನದವನೂ ಆದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕ; ಹನ್ನೆರಡನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
೧೬. ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: [ಕುಲ] — [ಅಧ್ಯಕ್ಷರು] ರೂಬೇನ್ — ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ — ಮಾಕನ ಮಗ ಶೆಫಟ್ಯ ೧೭ ಲೇವಿ — ಕೆಮುವೇಲನ ಮಗ ಹಷಬ್ಯ ೧೮ ಆರೋನ — ಚಾದೋಕ್ ಯೂದ — ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ — ಮೀಕಾಯೇಲನ ಮಗ ಒಮ್ರಿ ೧೯ ಜೆಬುಲೂನ — ಓಬದ್ಯನ ಮಗ ಇಷ್ಮಾಯ ನಫ್ತಾಲಿ — ಅಜ್ರೀಯೇಲನ ಮಗ ಯೆರೀಮೋತ್ ೨೦ ಎಫ್ರಯಿಮ — ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ — ಪೆದಾಯನ ಮಗ ಯೋವೇಲ್ ೨೧ ಪೂರ್ವ. ಮನಸ್ಸೆ — ಜೆಕರ್ಯನ ಮಗ ಇದ್ದೋ ಬೆನ್ಯಾಮೀನ — ಅಬ್ನೇರನ ಮಗ ಯಗಸೀಯೇಲ್ ೨೨ ದಾನ — ಯೆರೋಹಾಮನ ಮಗ ಅಜರೇಲ್
೧೭. ***
೧೮. ***
೧೯. ***
೨೦. ***
೨೧. ***
೨೨. ***
೨೩. ಇಸ್ರಯೇಲರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂದು ಸರ್ವೇಶ್ವರ ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರ್ಷಕ್ಕಿಂತ ಕಡಿಮೆಯಾದ ವಯಸ್ಸುಳ್ಳವರನ್ನು ಲೆಕ್ಕಿಸಲಿಲ್ಲ.
೨೪. ಚೆರೂಯಳ ಮಗ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ, ಇದರ ನಿಮಿತ್ತ ಇಸ್ರಯೇಲರ ಮೇಲೆ ದೇವರ ಕೋಪವುಂಟಾಗಿ, ಅದನ್ನು ಪೂರ್ತಿಗೊಳಿಸಲಿಲ್ಲ. ಈ ಜನಗಣತಿ ದಾವೀದನ ರಾಜ್ಯದ ಇತಿಹಾಸದಲ್ಲಿ ಲಿಖಿತವಾಗಲಿಲ್ಲ.
೨೫. ಅರಸ ದಾವೀದನ ಸೊತ್ತಿನ ಮೇಲ್ವಿಚಾರಕರಾಗಿ ನೇಮಕಗೊಂಡವರು ಯಾರೆಂದರೆ: ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗ ಅಜ್ಮಾವೆತ್; ಹೊಲದಲ್ಲು, ಪಟ್ಟಣಗಳಲ್ಲು, ಹಳ್ಳಿಗಳಲ್ಲು ಹಾಗೂ ಬರುಜುಗಳ ಮೇಲೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನ್;
೨೬. ಹೊಲಗಳನ್ನು ವ್ಯವಸಾಯ ಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ;
೨೭. ದ್ರಾಕ್ಷೀತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ; ದ್ರಾಕ್ಷೀತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಷ್ಮೀಯನಾದ ಜಬ್ದೀ;
೨೮. ಎಣ್ಣೇಮರದ ತೋಪುಗಳ ಮೇಲೆ ಹಾಗೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆ ಗೆದೆರೂರಿನವನಾದ ಬಾಳ್ಷಾನಾನ್; ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್;
೨೯. ಶಾರೋನಿನಲ್ಲಿ ಮೇಯುವ ದನಗಳ ಮೇಲೆ‍ ಶಾರೋನ್ಯನಾದ ಶಿಟ್ರೈ; ಕಣಿವೆಗಳಲ್ಲಿ ಮೇಯುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟ್;
೩೦. ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್; ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ;
೩೧. ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್.
೩೨. ವಿವೇಕಿಯೂ ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು ಮಂತ್ರಿಯಾಗಿದ್ದನು; ಹಕ್ಮೋನಿಯ ಮಗ ಯೆಹೀಯೇಲನು ರಾಜಪುತ್ರ ಪಾಲಕನಾಗಿದ್ದನು.
೩೩. ಅಹೀತೋಫೆಲನು ಅರಸನ ಮಂತ್ರಿ; ಅಕೀರ್ಯನಾದ ಹೂಷೈಯು ಅವನ ಮಿತ್ರ;
೩೪. ಬೆನಾಯನ ಮಗ ಯೆಹೋಯಾದಾವನೂ ಎಬ್ಯಾತಾರನೂ ಅಹೀತೋಫೆಲನ ಉತ್ತರಾಧಿಕಾರಿಗಳು; ಯೋವಾಬನು ಅರಸನ ಸೈನ್ಯಾಧಿಪತಿ.

ಕೀರ್ತನೆಗಳು ೭೮:೫೬-೬೬
೫೬. ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು I ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು II
೫೭. ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ I ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ II
೫೮. ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ I ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ II
೫೯. ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II
೬೦. ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II
೬೧. ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ I ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ II
೬೨. ಗುರಿಮಾಡಿದನು ತನ್ನ ಪ್ರಜೆಯನು ಖಡ್ಗಕೆ I ಉಗ್ರವಾದನು ತನ್ನ ವಾರಸುದಾರರಿಗೆ II
೬೩. ಆಹುತಿಯಾದರವರ ಯುವಜನ ಅಗ್ನಿಗೆ I ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ II
೬೪. ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II
೬೫. ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ I ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠನಂತೆ II
೬೬. ಸದೆಬಡಿದನಾತ ತನ್ನ ಶತ್ರುಗಳನು I ನಿತ್ಯನಿಂದೆಗೆ ಈಡುಮಾಡಿದನವರನು II

ಜ್ಞಾನೋಕ್ತಿಗಳು ೨೦:೪-೫
೪. ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು.
೫. ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ.

ಪ್ರೇಷಿತರ ೧೦:೧-೨೩
೧. ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ಅವನು ‘ಇಟಲಿಯ ದಳ’ದಲ್ಲಿ ಒಬ್ಬ ಶತಾಧಿಪತಿ.
೨. ಅವನೂ ಅವನ ಕುಟುಂಬವೂ ದೇವರಲ್ಲಿ ಭಯಭಕ್ತಿಯಿಂದ ಜೀವಿಸುತ್ತಿದ್ದರು. ಯೆಹೂದ್ಯರಿಗೆ ಅವನು - ಧಾರಾಳವಾಗಿ ದಾನಧರ್ಮಮಾಡುತ್ತಿದ್ದನು. ದೇವರಿಗೆ ತಪ್ಪದೆ ಪ್ರಾರ್ಥನೆ ಸಲ್ಲಿಸುತ್ತಿದ್ದನು.
೩. ಅದೊಂದು ಮಧ್ಯಾಹ್ನ, ಸುಮಾರು ಮೂರು ಗಂಟೆಯ ಸಮಯ, ಅವನಿಗೊಂದು ದಿವ್ಯದರ್ಶನವಾಯಿತು: ದೇವದೂತನೊಬ್ಬನು ತನ್ನ ಮನೆಯೊಳಗೆ ಬಂದು, “ಕೊರ್ನೇಲಿಯಾ,” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು.
೪. ಕೊರ್ನೇಲಿಯನು ಭಯದಿಂದ ದೇವದೂತನನ್ನು ದಿಟ್ಟಿಸಿನೋಡುತ್ತಾ, “ಏನು ಸ್ವಾಮಿ?” ಎಂದನು. ಅದಕ್ಕೆ ದೇವದೂತನು, “ನಿನ್ನ ಪ್ರಾರ್ಥನೆ ಮತ್ತು ದಾನಧರ್ಮ ದೇವರನ್ನು ಮುಟ್ಟಿವೆ. ಅವರು ನಿನ್ನನ್ನು ಮೆಚ್ಚಿದ್ದಾರೆ; ನಿನ್ನ ಕೋರಿಕೆಗಳನ್ನು ಈಡೇರಿಸಲಿದ್ದಾರೆ.
೫. ನೀನು ಈಗಲೇ ಜೊಪ್ಪಕ್ಕೆ ಆಳುಗಳನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.
೬. ಅವನು, ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದು ಹೇಳಿ ದೂತನು ಅದೃಶ್ಯನಾದನು.
೭. ಕೂಡಲೇ ಕೊರ್ನೇಲಿಯನು ತನ್ನ ಇಬ್ಬರು ಪರಿಚಾರಕರನ್ನೂ ತನ್ನ ಪಹರೆಯವರಲ್ಲಿ ಧರ್ಮನಿಷ್ಠನಾಗಿದ್ದ ಒಬ್ಬ ಸೈನಿಕನನ್ನೂ ಕರೆದು,
೮. ನಡೆದುದೆಲ್ಲವನ್ನೂ ತಿಳಿಸಿ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
೯. ಮಾರನೆಯ ದಿನ ಅವರು ಪ್ರಯಾಣ ಮಾಡಿ ಜೊಪ್ಪವನ್ನು ಸಮೀಪಿಸಿದಾಗ ಮಧ್ಯಾಹ್ನ ಸಮಯ. ಆಗತಾನೇ ಪೇತ್ರನು ಪ್ರಾರ್ಥನೆ ಮಾಡಲು ಮಾಳಿಗೆಯ ಮೇಲಕ್ಕೆ ಹೋದನು.
೧೦. ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕು ಎನಿಸಿತು. ಊಟ ಸಿದ್ಧವಾಗುತ್ತಿದ್ದಂತೆ, ಪೇತ್ರನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡನು.
೧೧. ಸ್ವರ್ಗದ ಬಾಗಿಲು ತೆರೆಯಿತು. ದೊಡ್ಡ ದುಪ್ಪಟಿಯಂತಹ ವಸ್ತುವೊಂದು ಇಳಿದು ಬರುತ್ತಿತ್ತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಭೂಮಿಯ ಮೇಲೆ ಅದನ್ನು ಇಳಿಯಬಿಡಲಾಗಿತ್ತು.
೧೨. ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.
೧೩. ಅಲ್ಲದೆ, “ಪೇತ್ರಾ, ಏಳು, ಕೊಯ್ದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.
೧೪. ಪೇತ್ರನು, “ಇದು ಬೇಡವೆ ಬೇಡ ಸ್ವಾಮಿ, ಅಶುದ್ಧ ಹಾಗೂ ನಿಷಿದ್ಧ ಆದುದನ್ನು ನಾನೆಂದೂ ತಿಂದವನಲ್ಲ,” ಎಂದನು.
೧೫. ಅದಕ್ಕೆ ಮತ್ತೊಮ್ಮೆ ಆ ವಾಣಿ ಅವನಿಗೆ, “ದೇವರೇ ಶುದ್ಧೀಕರಿಸಿರುವ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.
೧೬. ಹೀಗೆ ಮೂರು ಸಾರಿ ನಡೆದ ಮೇಲೆ ಆ ವಸ್ತುವನ್ನು ಸ್ವರ್ಗಕ್ಕೆ ಎತ್ತಿಕೊಳ್ಳಲಾಯಿತು.
೧೭. ಇತ್ತ ಪೇತ್ರನು ತಾನು ಕಂಡ ದರ್ಶನದ ಅರ್ಥವೇನಿರಬಹುದೆಂದು ತಬ್ಬಿಬ್ಬಾದನು. ಅಷ್ಟರಲ್ಲಿ ಕೊರ್ನೇಲಿಯನು ಕಳುಹಿಸಿದ್ದ ಆಳುಗಳು ಸಿಮೋನನ ಮನೆಯನ್ನು ವಿಚಾರಿಸಿ ಕಂಡುಹಿಡಿದರು. ಹೊರಬಾಗಿಲ ಬಳಿ ನಿಂತುಕೊಂಡು,
೧೮. “ಪೇತ್ರನೆಂದು ಕರೆಯಲಾಗುವ ಸಿಮೋನ ಎಂಬವರು ಇಲ್ಲಿ ತಂಗಿರುವರೇ?” ಎಂದು ಕೂಗಿ ಕೇಳಿದರು.
೧೯. ಪೇತ್ರನು ತನ್ನ ದರ್ಶನವನ್ನು ಕುರಿತು ಇನ್ನೂ ಆಲೋಚಿಸುತ್ತಿರುವಾಗ ಪವಿತ್ರಾತ್ಮ ಅವರು, “ಇಗೋ, ಮೂರು ಜನರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ,
೨೦. ಸಿದ್ಧವಾಗಿ ಕೆಳಕ್ಕೆಹೋಗು. ನಾನೇ ಅವರನ್ನು ಕಳುಹಿಸಿರುವುದರಿಂದ ಸಂಕೋಚಪಡದೆ ಅವರೊಡನೆ ಹೋಗು,” ಎಂದರು.
೨೧. ಪೇತ್ರನು ಕೆಳಕ್ಕೆ ಹೋಗಿ ಆ ಜನರನ್ನು ನೋಡಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ. ನೀವು ಬಂದ ಕಾರಣವೇನು?” ಎಂದು ವಿಚಾರಿಸಿದನು.
೨೨. “ಶತಾಧಿಪತಿ ಕೊರ್ನೇಲಿಯ ನಮ್ಮನ್ನು ಕಳುಹಿಸಿದರು. ಅವರೊಬ್ಬ ಸತ್ಪುರುಷರು, ದೈವಭಕ್ತರು, ಯೆಹೂದ್ಯ ಜನತೆಯಿಂದ ಗೌರವಾನ್ವಿತರು. ನಿಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ, ನೀವು ಹೇಳುವುದನ್ನು ಕೇಳಬೇಕೆಂದು ದೇವದೂತನಿಂದ ಆದೇಶಪಡೆದಿದ್ದಾರೆ,” ಎಂದರು.
೨೩. ಪೇತ್ರನು ಅವರನ್ನು ಒಳಕ್ಕೆ ಬರಮಾಡಿಕೊಂಡು ಉಪಚರಿಸಿ, ರಾತ್ರಿ ಅಲ್ಲೇ ತಂಗುವಂತೆ ಮಾಡಿದನು. ಮಾರನೆಯ ದಿನ ಪೇತ್ರನು ಅವರೊಡನೆ ಹೋದನು. ಜೊತೆಯಲ್ಲಿ ಜೊಪ್ಪದ ಕೆಲವು ಸಹೋದರರೂ ಹೋದರು.