A A A A A

ಕ್ರಾನಿಕಲ್ಸ್ ೧ ೨೧:೧-೩೦
೧. ಸೈತಾನನು ಇಸ್ರಯೇಲರಿಗೆ ವಿರೋಧವಾಗಿ ಎದ್ದು ಇಸ್ರಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರಿಸಿದನು.
೨. ದಾವೀದನು ಯೋವಾಬನನ್ನೂ ಜನಾಧಿಪತಿಗಳನ್ನೂ ಕರೆದು, “ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ ಇಸ್ರಯೇಲರನ್ನು ಲೆಕ್ಕಮಾಡಿಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು.
೩. ಆಗ ಯೋವಾಬನು, “ನನ್ನ ಒಡೆಯರಾದ ಅರಸರೇ, ಸರ್ವೇಶ್ವರ ತಮ್ಮ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ; ಅವರೆಲ್ಲರೂ ನನ್ನ ಒಡೆಯರ ಸೇವಕರಷ್ಟೇ. ಆದರೆ ಒಡೆಯರು ಇಂಥದನ್ನು ಅಪೇಕ್ಷಿಸಿದ್ದೇಕೆ? ಇಸ್ರಯೇಲರನ್ನು ಅಪರಾಧಕ್ಕೆ ಗುರಿಮಾಡುವುದೇಕೆ?” ಎಂದನು.
೪. ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದ್ದರಿಂದ, ಅವನು ಹೊರಟುಹೋಗಿ ಇಸ್ರಯೇಲರ ಪ್ರಾಂತ್ಯಗಳಲ್ಲೆಲ್ಲಾ ಸಂಚರಿಸಿ ಜೆರುಸಲೇಮಿಗೆ ಹಿಂದಿರುಗಿದನು.
೫. ಯೋವಾಬನು ದಾವೀದನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳು ಇವು: ಇಸ್ರಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ; ಯೆಹೂದ್ಯರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ.
೬. ಅರಸನ ಆಜ್ಞೆ ಯೋವಾಬನಿಗೆ ಹಿಡಿಸಲಿಲ್ಲವಾದ್ದರಿಂದ, ಅವನು ಲೇವಿ, ಬೆನ್ಯಾಮೀನ್ ಕುಲಗಳವರ ಜನಗಣತಿಯನ್ನು ಮಾಡಲಿಲ್ಲ.
೭. ಜನಗಣತಿ ಮಾಡಿದ್ದು ದೇವರಿಗೆ ಕೆಟ್ಟದ್ದು ಎಂದು ಕಂಡಿತು. ಆದ್ದರಿಂದ ಅವರು ಇಸ್ರಯೇಲರನ್ನು ಶಿಕ್ಷಿಸಿದರು.
೮. ಆಗ ದಾವೀದನು, “ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ದೇವರನ್ನು ಪ್ರಾರ್ಥಿಸಿದನು.
೯. ದೇವರು ದಾವೀದನ ದರ್ಶಿಯಾದ ಗಾದನಿಗೆ,
೧೦. “ನೀನು ದಾವೀದನ ಹತ್ತಿರಕ್ಕೆ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದಿಡುತ್ತೇನೆ. ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಸರ್ವೇಶ್ವರ ಹೇಳುತ್ತಾರೆ’ ಎಂಬುದಾಗಿ ತಿಳಿಸು,” ಎಂದರು.
೧೧. ಆಗ ಗಾದನು ದಾವೀದನ ಬಳಿಗೆ ಬಂದು, “ಸರ್ವೇಶ್ವರ ಹೇಳುವುದನ್ನು ಕೇಳು:
೧೨. ‘ಮೂರು ವರ್ಷಗಳ ಕಾಲ ಕ್ಷಾಮ ಉಂಟಾಗಬೇಕೋ? ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಚಿತ್ರಹಿಂಸೆಗೆ ಬಲಿಯಾಗುವುದು ಬೇಕೋ? ಇಲ್ಲವೆ ಇಸ್ರಯೇಲರ ಸಮಸ್ತ ಪ್ರಾಂತ್ಯಗಳಿಗೆ ಸರ್ವೇಶ್ವರ ಕಳುಹಿಸುವ ಸಂಹಾರಕ ದೂತನಿಂದ ಉಂಟಾಗುವ ಮೂರು ದಿನಗಳ ಘೋರ ವ್ಯಾಧಿರೂಪವಾದ ಸರ್ವೇಶ್ವರನ ಶಿಕ್ಷೆ ಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ’ ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದು ಹೇಳಿದನು.
೧೩. ಅದಕ್ಕೆ ದಾವೀದನು, “ನಾನು ಬಹಳ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೇ ಬೀಳುತ್ತೇನೆ; ಅವರು ಕೃಪಾಪೂರ್ಣರು, ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿದನು.
೧೪. ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು; ಅವರಲ್ಲಿ ಇಪ್ಪತ್ತು ಸಾವಿರ ಜನರು ಸತ್ತರು.
೧೫. ದೇವರು ಜೆರುಸಲೇಮನ್ನು ಸಹ ಸಂಹರಿಸಬೇಕೆಂದು ದೂತನನ್ನು ಕಳುಹಿಸಿದರು. ಆದರೆ ಆ ದೂತನು ಸಂಹರಿಸುವುದಕ್ಕಿದ್ದಾಗ ಸರ್ವೇಶ್ವರ ಅದನ್ನು ಕಂಡು, ಆ ಕೇಡಿನ ವಿಷಯದಲ್ಲಿ ದುಃಖಪಟ್ಟರು. ಸಂಹಾರಕ ದೂತನಿಗೆ, “ಸಾಕು, ನಿನ್ನ ಕೈಯನ್ನು ಹಿಂದೆಗೆ,” ಎಂದು ಆಜ್ಞಾಪಿಸಿದರು. ಆಗ ಸರ್ವೇಶ್ವರನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು.
೧೬. ದಾವೀದನು ಕಣ್ಣೆತ್ತಿ ನೋಡಿ ಸರ್ವೇಶ್ವರನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನೂ ಚಾಚಿದ ಕೈಯಲ್ಲಿ ಜೆರುಸಲೇಮಿಗೆ ವಿರೋಧವಾಗಿ ಹಿರಿದ ಕತ್ತಿ ಇರುವುದನ್ನೂ ಕಂಡನು. ಆಗ ಅವನೂ ಹಿರಿಯರೂ ಗೋಣಿತಟ್ಟನ್ನು ಉಟ್ಟುಕೊಂಡು ಬೋರಲಾಗಿ ಬಿದ್ದರು.
೧೭. ದಾವೀದನು ದೇವರಿಗೆ, “ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೇ; ಮಹಾಪಾಪ ಮಾಡಿದವನು ನಾನೇ; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಸರ್ವೇಶ್ವರಾ, ನನ್ನ ದೇವರೇ, ನಿಮ್ಮ ಕತ್ತಿ ನಿಮ್ಮ ಜನರನ್ನು ಬಾಧಿಸದೆ, ಅವರಿಗೆ ವಿರೋಧವಾಗಿ ಇರದೆ, ನನಗೂ ನನ್ನ ಮನೆಯವರಿಗೂ ವಿರೋಧ ಆಗಿರಲಿ,” ಎಂದು ಬೇಡಿಕೊಂಡನು.
೧೮. ಆಗ ಸರ್ವೇಶ್ವರನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ ಹೋಗಬೇಕೆಂದು ದಾವೀದನಿಗೆ ಹೇಳು,” ಎಂದು ಆಜ್ಞಾಪಿಸಿದನು.
೧೯. ದಾವೀದನು ಗಾದನ ಮುಖಾಂತರ ತನಗಾದ ಸರ್ವೇಶ್ವರನ ಅಪ್ಪಣೆಯಂತೆ ಹೊರಟನು.
೨೦. ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ದೂತನನ್ನು ನೋಡಿದ್ದನು. ಅವನೊಡನಿದ್ದ ಅವನ ನಾಲ್ಕು ಮಂದಿ ಮಕ್ಕಳು ಅಡಗಿಕೊಂಡಿದ್ದರು.
೨೧. ದಾವೀದನು ತನ್ನ ಬಳಿಗೆ ಬರುವುದನ್ನು ಒರ್ನಾನನು ಕಂಡು, ಕಣವನ್ನು ಬಿಟ್ಟುಹೋಗಿ, ಅವನಿಗೆ ಅಡ್ಡಬಿದ್ದನು.
೨೨. ದಾವೀದನು ಅವನಿಗೆ, “ನಿನ್ನ ಕಣವನ್ನೂ ಭೂಮಿಯನ್ನೂ ನನಗೆ ಕೊಡು; ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ಅದರಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸುತ್ತೇನೆ; ಪೂರ್ಣ ಕ್ರಯ ತೆಗೆದುಕೊಂಡು ಅದನ್ನು ಕೊಡು,” ಎಂದು ಹೇಳಿದನು.
೨೩. ಆಗ ಒರ್ನಾನನು ದಾವೀದನಿಗೆ, “ನನ್ನ ಒಡೆಯರಾದ ಅರಸರು ತಮಗೆ ಇಷ್ಟವಾದದ್ದನ್ನು ತೆಗೆದುಕೊಂಡು ಬಲಿ ಅರ್ಪಿಸಬಹುದು. ಬಲಿದಾನಕ್ಕೆ ಇಲ್ಲಿ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೆ ಗೋದಿಯೂ ಇರುತ್ತವೆ, ಇವೆಲ್ಲವನ್ನೂ ಕೊಡುತ್ತೇನೆ,” ಎಂದು ಹೇಳಿದನು.
೨೪. ಅರಸ ದಾವೀದನು ಒರ್ನಾನನಿಗೆ, “ಹಾಗಲ್ಲ, ನಾನು ನಿನ್ನಿಂದ ಪೂರ್ಣಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು ಸರ್ವೇಶ್ವರನಿಗೆ ಬಲಿಯಾಗಿ ಅರ್ಪಿಸಲು ನನಗೆ ಇಷ್ಟವಿಲ್ಲ,” ಎಂದು ಹೇಳಿದನು.
೨೫. ಅಂತೆಯೇ ಆ ಭೂಮಿಗಾಗಿ ಅವನಿಗೆ ಆರುನೂರು ಬಂಗಾರದ ನಾಣ್ಯಗಳನ್ನು ಕೊಟ್ಟು,
೨೬. ಅಲ್ಲಿ ಸರ್ವೇಶ್ವರಸ್ವಾಮಿಗಾಗಿ ಬಲಿಪೀಠವನ್ನು ಕಟ್ಟಿಸಿದನು. ಅದರ ಮೇಲೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಅರ್ಪಿಸಿ ಸರ್ವೇಶ್ವರನನ್ನು ಪ್ರಾರ್ಥಿಸಿದನು. ಸರ್ವೇಶ್ವರ ಅವನ ಮೊರೆಯನ್ನು ಆಲಿಸಿ, ಆಕಾಶದಿಂದ ಬಲಿಪೀಠದ ಮೇಲೆ ಬೆಂಕಿಯನ್ನು ಬರಮಾಡಿ,
೨೭. ಆ ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದರು. ಅವನು ಹಾಗೆಯೇ ಮಾಡಿದನು.
೨೮. ಮೋಶೆ ಮರುಭೂಮಿಯಲ್ಲಿ ಮಾಡಿಸಿದ್ದ ಸರ್ವೇಶ್ವರನ ಗುಡಾರವೂ ಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲೇ ಇದ್ದವು.
೨೯. ಆದರೂ ದಾವೀದನು ಸರ್ವೇಶ್ವರನ ದೂತ ಹಿಡಿದಿದ್ದ ಕತ್ತಿಗೆ ಹೆದರಿ, ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಬಲಿಯರ್ಪಿಸಿದನು.
೩೦. ಆ ಕಾಲದಲ್ಲಿ ದಾವೀದನಿಗೆ ಸರ್ವೇಶ್ವರನಿಂದ ಸದುತ್ತರ ದೊರಕಿದ್ದರಿಂದ ಅವನು,

ಕ್ರಾನಿಕಲ್ಸ್ ೧ ೨೨:೧-೧೯
೧. “ಇದೇ ದೇವರಾದ ಸರ್ವೇಶ್ವರನ ಆಲಯ; ಇದೇ ಇಸ್ರಯೇಲರು ಬಲಿ ಅರ್ಪಿಸತಕ್ಕ ಪೀಠ,” ಎಂದು ಹೇಳಿದನು.
೨. ಅನಂತರ ದಾವೀದನು ಇಸ್ರಯೇಲ್ ನಾಡಿನಲ್ಲಿದ್ದ ಅನ್ಯಜನಗಳನ್ನು ಕೂಡಿಸುವುದಕ್ಕೆ ಆಜ್ಞಾಪಿಸಿದನು. ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು.
೩. ಇದಲ್ಲದೆ, ಬಾಗಿಲುಗಳ ಕದಗಳಿಗೆ ಬೇಕಾದ ಮೊಳೆಗಳನ್ನು ಹಾಗು ಪಟ್ಟಿಗಳನ್ನು ಮಾಡುವುದಕ್ಕೆ ಬಹಳ ಕಬ್ಬಿಣವನ್ನೂ ತೂಕ ಮಾಡಲಾಗದಷ್ಟು ತಾಮ್ರವನ್ನೂ
೪. ಎಣಿಸಲಾಗದಷ್ಟು ದೇವದಾರು ಮರಗಳನ್ನೂ ಸಿದ್ಧಪಡಿಸಿದನು; ಸಿದೋನ್ ಹಾಗು ಟೈರಿನ ಜನರು ಅವನಿಗೆ ದೇವದಾರು ಮರಗಳನ್ನು ಒದಗಿಸಿದರು.
೫. ದಾವೀದನು ತನ್ನಲ್ಲೇ, “ನನ್ನ ಮಗ ಸೊಲೊಮೋನನು ಎಳೇ ಪ್ರಾಯದವನು. ಸರ್ವೇಶ್ವರನಿಗೆ ಕಟ್ಟಿಸತಕ್ಕ ದೇವಾಲಯವು, ಜಗತ್ತಿನಲ್ಲೆಲ್ಲಾ ಸುಪ್ರಸಿದ್ಧವಾಗಿರಬೇಕು; ಅದು ಅತಿ ಅದ್ಭುತಕರವಾಗಿರಬೇಕು; ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು,” ಎಂದುಕೊಂಡನು. ಸಾಯುವುದಕ್ಕೆ ಮೊದಲೇ ಹಲವಾರು ಸಲಕರಣೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಜ್ಜು ಮಾಡಿದನು.
೬. ಆಮೇಲೆ ದಾವೀದನು ತನ್ನ ಮಗ ಸೊಲೊಮೋನನನ್ನು ಕರೆಯಿಸಿದನು. ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು:
೭. ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಬೇಕೆಂದು ಮನಸ್ಸುಮಾಡಿದೆ.
೮. ಆದರೆ ಸರ್ವೇಶ್ವರ ನನಗೆ, “ನೀನು ಬಹಳ ರಕ್ತವನ್ನು ಸುರಿಸಿದವನು; ಮಹಾಯುದ್ಧಗಳನ್ನು ನಡೆಸಿದವನು. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ, ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು.
೯. ನಿನಗೆ ಒಬ್ಬ ಮಗ ಹುಟ್ಟುವನು; ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲ ವಿರೋಧಿಗಳನ್ನು ಅಡಗಿಸಿ ಅವನಿಗೆ ಶಾಂತಿ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನ ಎಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಯೇಲರಿಗೆ ಶಾಂತಿಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು.
೧೦. ಅವನೇ ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟುವನು. ಅವನು ನನಗೆ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು; ಇಸ್ರಯೇಲರಲ್ಲಿ ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು,” ಎಂಬುದಾಗಿ ಹೇಳಿದರು.
೧೧. “ನನ್ನ ಮಗನೇ, ನೀನು ಕೃತಾರ್ಥನಾಗಬೇಕು; ನಿನ್ನ ದೇವರಾದ ಸರ್ವೇಶ್ವರ ನನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟಬೇಕು. ಆ ಸರ್ವೇಶ್ವರ ನಿನ್ನೊಂದಿಗಿರಲಿ!
೧೨. ನೀನು ನಿನ್ನ ದೇವರಾದ ಸರ್ವೇಶ್ವರನ ಧರ್ಮಶಾಸ್ತ್ರವನ್ನು ಕೈಗೊಳ್ಳುವಂತೆ ಅವರು ನಿನಗೆ ಜ್ಞಾನವಿವೇಕಗಳನ್ನು ದಯಪಾಲಿಸಲಿ! ಇಸ್ರಯೇಲರನ್ನು ಆಳುವುದಕ್ಕೆ ನಿನ್ನನ್ನು ನೇಮಿಸಲಿ!
೧೩. ಮೋಶೆಯ ಮುಖಾಂತರ ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ನ್ಯಾಯವಿಧಿಗಳನ್ನು ನೀನು ಕೈಗೊಳ್ಳುವುದಾದರೆ ಸಫಲನಾಗುವೆ. ಸ್ಥಿರಚಿತ್ತನಾಗಿರು, ಧೈರ್ಯದಿಂದ ಇರು; ಅಂಜಬೇಡ, ಕಳವಳಗೊಳ್ಳಬೇಡ.
೧೪. ಇಗೋ, ನಾನು ಬಹಳ ಪ್ರಯಾಸಪಟ್ಟು ಸರ್ವೇಶ್ವರನ ಆಲಯಕ್ಕಾಗಿ ೩,೪೦೦ ಮೆಟ್ರಿಕ್ ಟನ್ ಬಂಗಾರವನ್ನು ೩೪,೦೦೦ ಮೆಟ್ರಿಕ್ ಟನ್ ಬೆಳ್ಳಿಯನ್ನು ಹಾಗು ಲೆಕ್ಕವಿಲ್ಲದಷ್ಟು ತಾಮ್ರ, ಕಬ್ಬಿಣ, ಕಲ್ಲುಮರಗಳನ್ನೂ ಕೂಡಿಸಿದ್ದೇನೆ.
೧೫. ನೀನು ಇನ್ನೂ ಹೆಚ್ಚು ಕೂಡಿಸುವೆ. ಇದಲ್ಲದೆ, ಕಟ್ಟುವ ಕೆಲಸಕ್ಕಾಗಿ ಬೇಕಾದಷ್ಟು ಮಂದಿ ಕಲ್ಲುಕುಟಿಗರು, ಶಿಲ್ಪಿಗಳು, ಬಡಗಿಯವರು ಹಾಗು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ ಈ ಮುಂತಾದ ಕೆಲಸವನ್ನು ಮಾಡುವ ನಿಪುಣರು ನಿನಗಿರುತ್ತಾರೆ; ಅವರನ್ನು ಲೆಕ್ಕಿಸುವುದಕ್ಕಾಗುವುದಿಲ್ಲ.
೧೬. ಏಳು, ಕೆಲಸಕ್ಕೆ ಕೈಹಾಕು; ಸರ್ವೇಶ್ವರ ನಿನ್ನೊಂದಿಗಿರಲಿ!” ಎಂದು ಹೇಳಿದನು.
೧೭. ತನ್ನ ಮಗ ಸೊಲೊಮೋನನಿಗೆ ನೆರವಾಗಬೇಕೆಂದು ಇಸ್ರಯೇಲರ ಎಲ್ಲ ಅಧಿಪತಿಗಳಿಗೆ ದಾವೀದನು ಅಜ್ಞಾಪಿಸಿದನು.
೧೮. “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲೂ ನಿಮಗೆ ನೆಮ್ಮದಿಯನ್ನು ಅನುಗ್ರಹಿಸಿದ್ದಾರೆ. ನಾಡಿನ ಮೂಲ ನಿವಾಸಿಗಳನ್ನು ನನ್ನ ಕೈಗೊಪ್ಪಿಸಿದ್ದಾರೆ. ನೀವೆ ನೋಡುವ ಹಾಗೆ ನಾಡು ಸರ್ವೇಶ್ವರನಿಗೂ ಅವರ ಪ್ರಜೆಗಳಿಗೂ ಸ್ವಾಧೀನವಾಗಿದೆ.
೧೯. ಆದುದರಿಂದ ನೀವು ಪೂರ್ಣಮನಸ್ಸಿನಿಂದ, ಪೂರ್ಣಪ್ರಾಣದಿಂದ ನಿಮ್ಮ ದೇವರಾದ ಸರ್ವೇಶ್ವರನ ದರ್ಶನವನ್ನು ಬಯಸಿರಿ. ಏಳಿ, ನಿಮ್ಮ ದೇವರಾದ ಸರ್ವೇಶ್ವರನ ನಿಬಂಧನ ಮಂಜೂಷವನ್ನೂ ದೇವಾರಾಧನೆಗೆ ಬೇಕಾದ ಸಾಮಗ್ರಿಗಳನ್ನೂ ಸರ್ವೇಶ್ವರನ ಹೆಸರಿಗಾಗಿ ಕಟ್ಟಲಾಗುವ ಮಂದಿರದಲ್ಲಿ ಇಡಿ,” ಎಂದು ಹೇಳಿದನು.

ಕೀರ್ತನೆಗಳು ೭೮:೩೪-೩೯
೩೪. ಆತನನು ನೆನಸಿಕೊಂಡರವರು ವಧೆಯಾಗುವಾಗ I ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ II
೩೫. ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು I ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು II
೩೬. ಆದರೆ ಅವರ ನಾಲಿಗೆಯಾಡಿತು ಅಸತ್ಯ I ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ II
೩೭. ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II
೩೮. ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ I ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ II
೩೯. ನೆನೆದುಕೊಂಡನಾತ ಅವರು ಕೇವಲ ನರರೆಂದು I ತಿಳಿದುಕೊಂಡನು ಮರಳಿಬಾರದ ಉಸಿರವರೆಂದು II

ಜ್ಞಾನೋಕ್ತಿಗಳು ೨೦:೧-೨
೧. ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.
೨. ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು; ಅವನನ್ನು ಕೆಣಕುವವನು ಪ್ರಾಣಕ್ಕೆ ಅಪಾಯ ತಂದುಕೊಳ್ವನು.

ಪ್ರೇಷಿತರ ೯:೧-೨೧
೧. ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು.
೨. ಈ ಹೊಸ ಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು.
೩. ಅವನು ಅಲ್ಲಿಂದ ಪ್ರಯಾಣಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸಿತು.
೪. ಅವನು ನೆಲಕ್ಕುರುಳಿದನು. “ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿ ಅವನಿಗೆ ಕೇಳಿಸಿತು.
೫. ಆಗ ಅವನು, “ಪ್ರಭೂ, ನೀವಾರು?” ಎಂದನು. “ನೀನು ಹಿಂಸೆಪಡಿಸುತ್ತ ಇರುವ ಯೇಸುವೇ ನಾನು.
೬. ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ನಿನಗೆ ಅಲ್ಲಿ ತಿಳಿಸಲಾಗುವುದು,” ಎಂದು ಆ ವಾಣಿ ಹೇಳಿತು.
೭. ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ ವಾಣಿ ಕೇಳಿಸಿತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ಧರಾದರು.
೮. ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನೂ ಕಾಣಿಸಲಿಲ್ಲ. ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು.
೯. ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ.
೧೦. ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು, “ಅನನೀಯಾ” ಎಂದು ಕರೆಯಲು ಅವನು, “ಸ್ವಾಮೀ, ಅಪ್ಪಣೆಯಾಗಲಿ,” ಎಂದನು.
೧೧. ಪ್ರಭು ಅವನಿಗೆ, “ನೀನೆದ್ದು ‘ನೇರಬೀದಿ’ ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ.
೧೨. ಅಲ್ಲದೆ ಅನನೀಯ ಎಂಬವನು ತನ್ನ ಬಳಿಗೆ ಬಂದು ತಾನು ಮರಳಿ ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ,” ಎಂದರು.
೧೩. ಅನನೀಯ ಪ್ರತ್ಯುತ್ತರವಾಗಿ, “ಪ್ರಭೂ, ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡುಮಾಡಿದ್ದಾನೆಂಬುದನ್ನು ಅನೇಕರ ಬಾಯಿಂದ ಕೇಳಿದ್ದೇನೆ.
೧೪. ಅಷ್ಟುಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ,” ಎಂದನು.
೧೫. ಪ್ರಭು ಅವನಿಗೆ, “ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ ಅವನು.
೧೬. ಅವನು ನನ್ನ ನಾಮದ ನಿಮಿತ್ತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ,” ಎಂದರು.
೧೭. ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪಮಾಡಿ, “ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊಂಡ ಯೇಸುಸ್ವಾಮಿಯೇ, ನೀನು ದೃಷ್ಟಿಯನ್ನು ಮರಳಿ ಪಡೆಯುವಂತೆಯೂ ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದನು.
೧೮. ಆ ಕ್ಷಣವೇ ಸೌಲನ ಕಣ್ಣುಗಳಿಂದ ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣು ಕಾಣತೊಡಗಿತು. ಎದ್ದು ದೀಕ್ಷಾಸ್ನಾನವನ್ನು ಪಡೆದನು.
೧೯. ತರುವಾಯ ಊಟಮಾಡಿದ ಮೇಲೆ ಅವನಿಗೆ ತ್ರಾಣ ಬಂದಿತು. ಸೌಲನು ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು.
೨೦. ಅನಂತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ‘ದೇವರ ಪುತ್ರ’ ಎಂದು ಬೋಧಿಸಲು ಆರಂಭಿಸಿದನು.
೨೧. ಅವನ ಬೋಧನೆಯನ್ನು ಕೇಳಿದವರೆಲ್ಲರೂ ಚಕಿತರಾದರು. “ಜೆರುಸಲೇಮಿನಲ್ಲಿ ಯೇಸುವಿನ ನಾಮಸ್ಮರಣೆ ಮಾಡುತ್ತಿದ್ದವರನ್ನು ಬಲಿಹಾಕುತ್ತಿದ್ದವನು ಇವನೇ ಅಲ್ಲವೇ? ಅಂಥವರನ್ನು ಬಂಧಿಸಿ ಮುಖ್ಯಯಾಜಕರ ಬಳಿಗೆ ಎಳೆದೊಯ್ಯುವ ಉದ್ದೇಶದಿಂದಲೇ ಅಲ್ಲವೆ ಇವನು ಇಲ್ಲಿಗೆ ಬಂದಿರುವುದು?” ಎಂದು ಪ್ರಶ್ನಿಸತೊಡಗಿದರು.