A A A A A

ಕ್ರಾನಿಕಲ್ಸ್ ೧ ೧೭:೧-೨೭
೧. ಆಗ ಅರಸ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದನು.
೨. ಒಂದು ದಿನ ಅವನು ಪ್ರವಾದಿ ನಾತಾನನನ್ನು ಬರಮಾಡಿ, “ನೋಡು, ನಾನು ವಾಸಮಾಡುತ್ತಾ ಇರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ಸರ್ವೇಶ್ವರನ ನಿಬಂಧನ ಮಂಜೂಷವಿರುವುದು ಬಟ್ಟೆಯಿಂದ ಮಾಡಿದ ಗುಡಾರದಲ್ಲಿ!” ಎಂದನು.
೩. ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
೪. ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
೫. “ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬಾರದು.
೬. ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಿದ್ದೆನು. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗಲೆಲ್ಲಾ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ’.”
೭. “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೇಳಿದೆನೆಂದು ಹೀಗೆ ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
೮. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.
೯. ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು, ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ಅಲ್ಲೇ ವಾಸಿಸುವರು.
೧೦. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚೆಗೆ ಇಸ್ರಯೇಲರು ಶೋಷಣೆಗೆ ಗುರಿಯಾಗದಂತೆ ಇನ್ನು ಗುರಿಯಾಗರು. ನಿನ್ನ ಶತ್ರುಗಳನ್ನೆಲ್ಲ ನಿನಗೆ ಅಧೀನಮಾಡುವೆನು. ಅದು ಮಾತ್ರವಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತುಕೊಡುತ್ತೇನೆ.
೧೧. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
೧೨. ನನಗಾಗಿ ಒಂದು ದೇವಾಲಯವನ್ನು ಕಟ್ಟುವವನು ಅವನೇ. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
೧೩. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನನ್ನು ನನ್ನ ಕೃಪೆ ಬಿಟ್ಟು ಹೋಗದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ.
೧೪. ಅವನನ್ನು ನನ್ನ ಮನೆಯಲ್ಲೂ ನನ್ನ ರಾಜ್ಯದಲ್ಲೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನ ಶಾಶ್ವತವಾಗಿರುವುದು’.”
೧೫. ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
೧೬. ಬಳಿಕ ಅರಸ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ದೇವರೇ, ಸರ್ವೇಶ್ವರಾ, ನನ್ನಂಥವನಿಗೆ ತಾವು ಈ ಪದವಿಯನ್ನು ಅನುಗ್ರಹಿಸಿದ್ದೀರಿ; ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು!
೧೭. ದೇವರೇ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹುದೂರ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ದೇವರೇ, ಸರ್ವೇಶ್ವರಾ, ನೀವು ನನ್ನನ್ನು ಒಬ್ಬ ಮಹಾನ್ ವ್ಯಕ್ತಿಯನ್ನೋ ಎಂಬಂತೆ ಭಾವಿಸಿದಿರಿ; ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ!
೧೮. ನೀವು ನಿಮ್ಮ ದಾಸ ದಾವೀದನನ್ನು ಚೆನ್ನಾಗಿ ಬಲ್ಲಿರಿ; ನಾನು ನನ್ನ ಘನತೆಯನ್ನು ಕುರಿತು ಇನ್ನೇನು ಹೇಳಲಿ?
೧೯. ಸರ್ವೇಶ್ವರಾ, ನಿಮ್ಮ ದಾಸನಾದ ನನ್ನ ಹಿತಕ್ಕಾಗಿಯೂ ತಮ್ಮ ಚಿತ್ತಾನುಸಾರವಾಗಿಯೂ ಈ ಮಹತ್ಕಾರ್ಯಗಳನ್ನೆಲ್ಲಾ ನಡೆಸಿ ನಿಮ್ಮ ಸರ್ವಮಹತ್ವವನ್ನು ತೋರ್ಪಡಿಸಿದ್ದೀರಿ.
೨೦. ಸರ್ವೇಶ್ವರಾ, ತಮಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದಂಥವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ತಮ್ಮ ಹೊರತು, ಬೇರಾವ ದೇವರೂ ಇಲ್ಲ ಎಂಬುದು ನಿಶ್ಚಯ.
೨೧. ತಮ್ಮ ಇಸ್ರಯೇಲ್ ಪ್ರಜೆಗೆ ಸಮನಾದ ಜನಾಂಗ ಲೋಕದಲ್ಲಿ ಬೇರೆ ಯಾವುದಿದೆ? ದೇವರಾದ ತಾವೇ ಬಂದು ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿಸಿಕೊಂಡಿರಿ; ಆಶ್ಚರ್ಯಕರವಾದ ಅದ್ಭುತಕಾರ್ಯಗಳಿಂದ ನಿಮ್ಮ ನಾಮವನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟರ ಕೈಯಿಂದ ತಮ್ಮ ಪ್ರಜೆಯನ್ನು ತಪ್ಪಿಸಿ, ರಕ್ಷಿಸಿದಿರಿ. ಅನ್ಯಜನಾಂಗಗಳನ್ನು ಅವರ ನಾಡಿನಿಂದ ಹೊರಡಿಸಿಬಿಟ್ಟಿರಿ.
೨೨. ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ;
೨೩. ಸರ್ವೇಶ್ವರಾ, ನೀವು ಅವರಿಗೆ ದೇವರಾದಿರಿ. ಸರ್ವೇಶ್ವರಾ, ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ನೀವು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ, ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ.
೨೪. ‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು; ತಮ್ಮ ದಾಸ ದಾವೀದನ ಮನೆತನವನ್ನು ತಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿಟ್ಟಿದ್ದಾರೆ’ ಎಂದು ಜನರು ನಿಮ್ಮ ನಾಮವನ್ನು ಕೊಂಡಾಡಲಿ.
೨೫. ನನ್ನ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ.
೨೬. ಸರ್ವೇಶ್ವರಾ, ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ ನೀವು ದೇವರಾಗಿದ್ದೀರಿ.
೨೭. ಈಗ ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಅದನ್ನು ಸದಾಕಾಲ ನಿಮ್ಮ ಆಶ್ರಯದಲ್ಲಿ ಇಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀರಿ; ಸರ್ವೇಶ್ವರಾ, ನೀವು ಅದನ್ನು ಆಶೀರ್ವದಿಸಿದ್ದೀರಿ; ಅದು ನಿತ್ಯವು ಸೌಭಾಗ್ಯದಿಂದ ಇರುವುದು,” ಎಂದು ಪ್ರಾರ್ಥಿಸಿದನು.

ಕ್ರಾನಿಕಲ್ಸ್ ೧ ೧೮:೧-೧೭
೧. ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಅವರಿಂದ ಗತ್‍ ಪಟ್ಟಣವನ್ನೂ ಅದರ ಗ್ರಾಮಗಳನ್ನೂ ವಶಪಡಿಸಿಕೊಂಡನು.
೨. ಆಮೇಲೆ ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ಅಧೀನರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
೩. ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜೆರನನ್ನು ದಾವೀದನು ಹಮಾತಿನ ಬಳಿಯಲ್ಲಿ ಪರಾಭವಗೊಳಿಸಿದನು.
೪. ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದನು; ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.
೫. ದಮಸ್ಕದ ಸಿರಿಯಾದವರು ಚೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆಬಡಿದನು;
೬. ಇದಲ್ಲದೆ ಅವನು ದಮಸ್ಕದ ಸಿರಿಯಾ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯ ದೊರಕುತ್ತಿತ್ತು.
೭. ದಾವೀದನು ಹದರೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರುಸಲೇಮಿಗೆ ಒಯ್ದನು.
೮. ಇದಲ್ಲದೆ, ಹದರೆಜೆರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಹೇರಳ ತಾಮ್ರವನ್ನು ತೆಗೆದುಕೊಂಡು ಬಂದನು. ಸೊಲೊಮೋನನು ‘ಕಂಚಿನ ಕಡಲೆಂಬ ಪಾತ್ರೆ’ಯನ್ನೂ ಕಂಬಗಳನ್ನೂ ಇನ್ನಿತರ ಸಾಮಾನುಗಳನ್ನೂ ಮಾಡಿಸಿದ್ದು ಆ ತಾಮ್ರದಿಂದಲೇ.
೯. ದಾವೀದನು ಚೋಬನ ಅರಸನಾದ ಹದರೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನ ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
೧೦. (ತೋವಿಗೂ ಹದರೆಜೆರನಿಗೂ ವಿರೋಧವಿತ್ತು). ದಾವೀದನು ಹದರೆಜೆರನ ಮೇಲೆ ದಾಳಿಮಾಡಿ ಅವನನ್ನು ಸೋಲಿಸಿದ್ದರಿಂದ ತೋವು ದಾವೀದನನ್ನು ಅಭಿನಂದಿಸುವುದಕ್ಕಾಗಿ ಹಾಗು ಹರಸುವುದಕ್ಕಾಗಿ ತನ್ನ ಮಗ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೆ ವಿಧವಿಧವಾದ ತಾಮ್ರ, ಬೆಳ್ಳಿ ಹಾಗು ಬಂಗಾರದ ಪಾತ್ರೆಗಳನ್ನು ತಂದನು.
೧೧. ಅರಸ ದಾವೀದನು ಕಾಣಿಕೆಗಳನ್ನು ಮಾತ್ರವಲ್ಲದೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಹಾಗು ಅಮಾಲೇಕ್ಯರು ಎಂಬ ಸುತ್ತಮುತ್ತಿನ ಜನಾಂಗಗಳಿಂದ ಕಿತ್ತುಕೊಂಡ ಬೆಳ್ಳಿಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.
೧೨. ಇದಲ್ಲದೆ ಚೆರೂಯಳ ಮಗ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿದನು.
೧೩. ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದ್ದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು.
೧೪. ದಾವೀದನು ಇಸ್ರಯೇಲರ ಅರಸನಾಗಿ ಪ್ರಜೆಗಳೆಲ್ಲರನ್ನು ಧರ್ಮಾನುಸಾರ, ನ್ಯಾಯಯುತವಾಗಿ ನಡೆಸುತ್ತಿದ್ದನು.
೧೫. ಚೆರೂಯಳ ಮಗ ಯೋವಾಬನು ಅವನ ಸೇನಾಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿಯಾಗಿದ್ದನು.
೧೬. ಅಹೀಟೂಬನ ಮಗ ಚಾದೋಕನು ಹಾಗು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು; ಶವ್ಷನು ಅವನಿಗೆ ಲೇಖಕನಾಗಿದ್ದನು.
೧೭. ಯೆಹೋಯಾದಾವನ ಮಗ ಬಿನಾಯನು ‘ಕೆರೇತ್ಯ’, ‘ಪೆಲೇತ್ಯ’ ಎಂಬ ಕಾವಲುದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು.

ಕೀರ್ತನೆಗಳು ೭೮:೧೭-೨೫
೧೭. ಆದರೂ ಪಾಪಮಾಡುತ್ತಲೆ ಬಂದರು ದೇವರಿಗೆದುರಾಗಿ I ಪ್ರತಿಭಟಿಸಿದರು ಅಡವಿಯಲಿ ಪರಾತ್ಪರನಿಗೆ ವಿರುದ್ಧವಾಗಿ II
೧೮. ಕೋರಿದರು ತಮಗಿಷ್ಟವಾದ ಆಹಾರವನೇ I ಪರೀಕ್ಷಿಸಿದರು ಮನದಲಿ ಆ ದೇವರನೇ II
೧೯. ಜರೆವ ಮಾತಿನಲಿ ಆಡಿಕೊಂಡರಿಂತು: I “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” II
೨೦. “ಹೊಡೆದನು ಆಸರೆಯನು, ಚಿಮ್ಮಿತು ನೀರು, ಹರಿಯಿತು ನೆರೆಯು I ಆದರೆ ಕೊಡಬಲ್ಲನೆ ರೊಟ್ಟಿ, ಒದಗಿಸುವನೆ ಮಾಂಸವನು?” II
೨೧. ಇದನ್ನು ಕೇಳಿ ಸಿಡಿದೆದ್ದನು ಪ್ರಭು ರೋಷದಿಂದಲೆ I ಉಕ್ಕೇರಿತಾತನ ಕೋಪ ಇಸ್ರಯೇಲರ ಮೇಲೆ I ಕಾರಿದನು ಕೋಪಾಗ್ನಿಯನು ಯಕೋಬಕುಲದ ಮೇಲೆ II
೨೨. ಏಕೆನೆ, ಅವರಿಗಿರಲಿಲ್ಲ ವಿಶ್ವಾಸ ದೇವರಲಿ I ಇರಲಿಲ್ಲ ನಂಬಿಕೆ ಆತನಾ ಸಲಹುವ ಶಕ್ತಿಯಲಿ II
೨೩. ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ I ಅಂತರಿಕ್ಷದಾ ದ್ವಾರಗಳನು ತೆರೆದನಾತ II
೨೪. ಸುರಿಸಿದನು ಅವರ ಮೇಲೆ ಉಣಲು ಅನ್ನವನು I ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು II
೨೫. ನರರಿಗುಣಲುಕೊಟ್ಟನು ದೇವದೂತರ ಆಹಾರವನು I ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು II

ಜ್ಞಾನೋಕ್ತಿಗಳು ೧೯:೨೫-೨೬
೨೫. ಕುಚೋದ್ಯನಿಗೆ ಹೊಡೆ, ಮುಗ್ಧರು ಅದನ್ನು ಕಂಡು ಜಾಣರಾಗುವರು; ಜ್ಞಾನಿಯನ್ನು ಗದರಿಸಿದರೆ ಸಾಕು, ಅವನು ಮತ್ತಷ್ಟು ಜ್ಞಾನಿಯಾಗುವನು.
೨೬. ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು ನಿಂದೆ ಅವಮಾನಗಳಿಗೆ ತುತ್ತಾಗುವನು.

ಪ್ರೇಷಿತರ ೮:೧-೨೫
೧. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭ ಆಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿಹೋದರು.
೨. ಕೆಲವು ಭಕ್ತಾಧಿಗಳು ಸ್ತೇಫನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡಿದರು.
೩. ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು.
೪. ಚದರಿಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು.
೫. ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು.
೬. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು.
೭. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾರ್ಶ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು.
೮. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
೯. ಆ ಪಟ್ಟಣದಲ್ಲಿ ಆಗ ಸಿಮೋನನೆಂಬ ಒಬ್ಬ ಮಂತ್ರವಾದಿ ಇದ್ದನು. ಅವನು ಸಮಾರಿಯದ ಜನತೆಯನ್ನು ತನ್ನ ಮಾಯಮಂತ್ರಗಳಿಂದ ಮಂಕುಗೊಳಿಸಿದ್ದನು. ತಾನೊಬ್ಬ ಮಹಾಪುರುಷನೆಂದು ಕೊಚ್ಚಿಕೊಳ್ಳುತ್ತಿದ್ದನು.
೧೦. ಆ ಪಟ್ಟಣದವರೆಲ್ಲರೂ ಹಿರಿಯರು ಕಿರಿಯರು ಎನ್ನದೆ, ಅವನ ಮಾತಿಗೆ ಕಾತರದಿಂದ ಕಿವಿಗೊಡುತ್ತಿದ್ದರು. ‘ದೇವರ ಮಹಾಶಕ್ತಿ’ ಇವನೇ ಎಂದುಕೊಳ್ಳುತ್ತಿದ್ದರು.
೧೧. ಬಹುಕಾಲದಿಂದ ಇವನ ಮಂತ್ರತಂತ್ರಗಳಿಗೆ ಮಾರುಹೋಗಿದ್ದ ಜನರು ಇವನ ಮಾತಿಗೆ ಬೆಲೆಕೊಡುತ್ತಿದ್ದರು.
೧೨. ಆದರೆ ಫಿಲಿಪ್ಪನು ದೇವರ ಸಾಮ್ರಾಜ್ಯ ಹಾಗೂ ಯೇಸುಕ್ರಿಸ್ತರ ಶುಭಸಂದೇಶವನ್ನು ಬೋಧಿಸಿದಾಗ ಅದರಲ್ಲಿ ವಿಶ್ವಾಸತಳೆದರು. ಸ್ತ್ರೀಪುರುಷರೆನ್ನದೆ ದೀಕ್ಷಾಸ್ನಾನವನ್ನು ಪಡೆದರು.
೧೩. ಸಿಮೋನನು ಕೂಡ ವಿಶ್ವಾಸವಿಟ್ಟನು. ದೀಕ್ಷಾಸ್ನಾನವನ್ನು ಪಡೆದು ಫಿಲಿಪ್ಪನ ಸಂಗಡಿಗನಾದನು. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಕಂಡು ಬೆಕ್ಕಸಬೆರಗಾದನು.
೧೪. ಸಮಾರಿಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿದ ಸಮಾಚಾರ ಪ್ರೇಷಿತರಿಗೆ ಮುಟ್ಟಿತು. ಅವರು ಪೇತ್ರ ಮತ್ತು ಯೊವಾನ್ನರನ್ನು ಅಲ್ಲಿಗೆ ಕಳುಹಿಸಿದರು.
೧೫. ಇವರು ಬಂದು ಆ ಜನರು ಪವಿತ್ರಾತ್ಮ ಅವರ ವರವನ್ನು ಪಡೆಯಲೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು.
೧೬. ಏಕೆಂದರೆ, ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದಿದ್ದರೇ ಹೊರತು ಅವರಲ್ಲಿ ಯಾರ ಮೇಲೂ ಆ ವರವು ಬಂದಿರಲಿಲ್ಲ.
೧೭. ಪ್ರೇಷಿತರು ಅವರ ಮೇಲೆ ಹಸ್ತನಿಕ್ಷೇಪ ಮಾಡಲು ಅವರು ಪವಿತ್ರಾತ್ಮ ವರವನ್ನು ಪಡೆದರು.
೧೮. ಪ್ರೇಷಿತರು ಹಸ್ತನಿಕ್ಷೇಪ ಮಾಡಿದಾಗ ಭಕ್ತರಿಗೆ ಪವಿತ್ರಾತ್ಮ ಪ್ರಧಾನವಾಗುವುದನ್ನು ಸಿಮೋನನು ಕಂಡನು. ಪೇತ್ರ ಮತ್ತು ಯೊವಾನ್ನರಿಗೆ ಹಣವನ್ನು ನೀಡುತ್ತಾ,
೧೯. “ನಾನೂ ಸಹ ಯಾರ ಮೇಲೆ ಕೈಯಿಟ್ಟರೂ ಅವರು ಪವಿತ್ರಾತ್ಮ ಅವರ ವರವನ್ನು ಹೊಂದುವಂತಹ ಶಕ್ತಿಯನ್ನು ನನಗೂ ಕೊಡಿ,” ಎಂದು ಕೇಳಿಕೊಂಡನು.
೨೦. ಅದಕ್ಕೆ ಪೇತ್ರನು, “ನಿನ್ನ ಹಣಕಾಸು ನಿನ್ನೊಂದಿಗೆ ಹಾಳಾಗಿಹೋಗಲಿ; ದೇವರ ವರವನ್ನು ಹಣಕ್ಕೆ ಕೊಳ್ಳಬೇಕೆಂದಿರುವೆಯಾ?
೨೧. ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ. ದೇವರ ದೃಷ್ಟಿಯಲ್ಲಿ ನಿನ್ನ ಹೃದಯವು ಸರಿಯಿಲ್ಲ.
೨೨. ನಿನ್ನ ದುರಾಲೋಚನೆಗಾಗಿ ಪಶ್ಚಾತ್ತಾಪಪಡು; ನಿನ್ನ ದುರುದ್ದೇಶವನ್ನು ಕ್ಷಮಿಸಲೆಂದು ಪ್ರಭುವನ್ನು ಪ್ರಾರ್ಥಿಸು; ಅವರು ಕ್ಷಮಿಸಬಹುದು.
೨೩. ನೀನು ದ್ವೇಷಾಸೂಯೆಯಿಂದ ತುಂಬಿರುವೆ; ಪಾಪಕ್ಕೆ ದಾಸನಾಗಿರುವೆ,” ಎಂದನು.
೨೪. ಆಗ ಸಿಮೋನನು, “ನೀವು ಹೇಳಿದ ಯಾವ ಕೇಡೂ ನನಗೆ ತಗಲದಂತೆ ನನಗಾಗಿ ನೀವೇ ಪ್ರಭುವಿನಲ್ಲಿ ಪ್ರಾರ್ಥನೆಮಾಡಿ,” ಎಂದು ಬೇಡಿಕೊಂಡನು.
೨೫. ಪ್ರೇಷಿತರು ದೇವರ ವಾಕ್ಯವನ್ನು ಸಾಕ್ಷ್ಯಪೂರಿತವಾಗಿ ಬೋಧಿಸಿದ ಮೇಲೆ ಜೆರುಸಲೇಮಿಗೆ ಮರಳಿದರು. ದಾರಿಯಲ್ಲಿ ಅವರು ಸಮಾರಿಯದ ಅನೇಕ ಹಳ್ಳಿಗಳಲ್ಲೂ ಶುಭಸಂದೇಶವನ್ನು ಸಾರಿದರು.