A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೨೧

ನ್ಯಾಯಸ್ಥಾಪಕರು ೭:೧-೨೫
೧. ‘ಯೆರುಬ್ಬಾಳ’ ಎನಿಸಿಕೊಂಡ ಗಿದ್ಯೋನನೂ ಅವನ ಸಂಗಡ ಇದ್ದ ಜನರೂ ಬೆಳಿಗ್ಗೆ ಎದ್ದು ಹೊರಟುಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಇಳಿದುಕೊಂಡರು. ಇವರಿಗೆ ಉತ್ತರದಿಕ್ಕಿನಲ್ಲಿ ಮೋರೆ ಗುಡ್ಡದ ಹಿಂದಿನ ತಗ್ಗಿನಲ್ಲಿ ಮಿದ್ಯಾನ್ಯರ ದಂಡಿಳಿದಿತ್ತು.
೨. ಸರ್ವೇಶ್ವರ ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರ ಕೈಗೆ ಮಿದ್ಯಾನ್ಯರನ್ನು ಒಪ್ಪಿಸುವುದು ನನಗೆ ಸರಿಯಾಗಿ ಕಾಣುವುದಿಲ್ಲ; ಏಕೆಂದರೆ ಹಾಗೆ ಒಪ್ಪಿಸಿಕೊಟ್ಟರೆ ಸ್ವಂತ ಶಕ್ತಿಯಿಂದಲೇ ನಮಗೆ ರಕ್ಷಣೆ ಲಭಿಸಿತು ಎಂದು ಹೆಚ್ಚಳಪಟ್ಟು ನನ್ನನ್ನು ಅಲಕ್ಷ್ಯಮಾಡಬಹುದು.
೩. ಆದ್ದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ, “ಭಯಬೀತರೂ ಅಂಜುಬುರುಕರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ,’ ಎಂದು ಪ್ರಕಟಿಸು,” ಎಂದರು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.
೪. ಸರ್ವೇಶ್ವರ ಪುನಃ ಗಿದ್ಯೋನನಿಗೆ, “ನಿನ್ನ ಬಳಿ ಇರುವ ಜನರು ಇನ್ನೂ ಹೆಚ್ಚಾಗಿದ್ದಾರೆ; ನೀನು ಅವರನ್ನು ಒಂದು ಹಳ್ಳಕ್ಕೆ ಕರೆದುಕೊಂಡು ಹೋಗು; ಅಲ್ಲಿ ಅವರನ್ನು ನಿನಗಾಗಿ ಆರಿಸುವೆನು. ಯಾರು ನಿನ್ನ ಸಂಗಡ ಹೋಗಬಹುದೆಂದು ಹೇಳುವೆನೋ ಅವರು ಮಾತ್ರ ಹೋಗಲಿ. ಯಾರಿಗೆ ಹೋಗಬಾರದೆಂದು ಹೇಳುವೆನೋ ಅವರು ಹೋಗದಿರಲಿ,” ಎಂದರು.
೫. ಗಿದ್ಯೋನನು ಜನರನ್ನು ಹಳ್ಳಕ್ಕೆ ಕರೆದುಕೊಂಡು ಬಂದಾಗ ಸರ್ವೇಶ್ವರ ಅವನಿಗೆ, “ನಾಯಿಯಂತೆ ನೀರನ್ನು ನಾಲಿಗೆಯಿಂದ ನೆಕ್ಕುವವರನ್ನೂ ಮೊಣಕಾಲೂರಿ ಕುಡಿಯುವವರನ್ನೂ ಬೇರೆ ಬೇರೆಯಾಗಿ ನಿಲ್ಲಿಸು,” ಎಂದು ಹೇಳಿದರು.
೬. ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕಿದವರ ಸಂಖ್ಯೆ ಮುನ್ನೂರು. ಇತರ ಜನರು ಮೊಣಕಾಲೂರಿ ಕುಡಿದವರು.
೭. ಆಗ ಸರ್ವೇಶ್ವರ ಗಿದ್ಯೋನನಿಗೆ, “ನೀರನ್ನು ನೆಕ್ಕಿದ ಆ ಮೂನ್ನೂರು ಮಂದಿಯಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದು ಆಜ್ಞಾಪಿಸಿದರು.
೮. ಗಿದ್ಯೋನನು ಆ ಮುನ್ನೂರು ಜನರನ್ನು ಇಟ್ಟುಕೊಂಡು ಉಳಿದ ಇಸ್ರಯೇಲರನ್ನು ಅವರವರ ಗುಡಾರಗಳಿಗೆ ಕಳುಹಿಸಿದನು. ಕಳುಹಿಸುವಾಗ ಅವರ ಹತ್ತಿರ ಇದ್ದ ಆಹಾರವನ್ನೂ ಕೊಂಬುಗಳನ್ನೂ ತನ್ನ ಜನರಿಗಾಗಿ ತೆಗೆದುಕೊಂಡನು. ಮಿದ್ಯಾನ್ಯರ ದಂಡು ಕೆಳಗೆ ತಗ್ಗಿನಲ್ಲಿ ಇಳಿದುಕೊಂಡಿತ್ತು.
೯. ಅದೇ ರಾತ್ರಿ ಸರ್ವೇಶ್ವರ ಗಿದ್ಯೋನ್ಯನಿಗೆ, “ನೀನು ಎದ್ದು ಹೋಗಿ ಶತ್ರುಗಳ ಪಾಳೆಯದ ಮೇಲೆ ಬೀಳು; ಅದನ್ನು ನಿನಗೆ ಒಪ್ಪಿಸಿಕೊಟ್ಟಿದ್ದೇನೆ.
೧೦. ಅವರ ಮೇಲೆ ಬೀಳುವುದಕ್ಕೆ ಹೆದರಿಕೆಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತಾಡಿಕೊಳ್ಳುವುದನ್ನು ಆಲಿಸು;
೧೧. ಆಗ ಅವರ ಮೇಲೆ ಬೀಳುವುದಕ್ಕೆ ನಿನಗೆ ಧೈರ್ಯ ಬರುವುದು,” ಎಂದರು. ಗಿದ್ಯೋನನು ಅದರಂತೆಯೇ ತನ್ನ ಸೇವಕನಾದ ಪುರನ ಸಂಗಡ ಶತ್ರು ಸೈನಿಕರ ಪಾಳೆಯದ ಕಡೇ ಭಾಗಕ್ಕೆ ಹೋದನು.
೧೨. ಮಿದ್ಯಾನ್ಯರೂ ಅಮಾಲೇಕ್ಯರೂ ಪೂರ್ವದೇಶದವರೂ ಮಿಡಿತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು.
೧೩. ಗಿದ್ಯೋನನು ಬಂದಾಗ ಅವರಲ್ಲೊಬ್ಬನು ತನ್ನ ಜೊತೆಗಾರನಿಗೆ ಒಂದು ಕನಸನ್ನು ತಿಳಿಸುತ್ತಿದ್ದನು. ಅವನು, “ಇಗೋ, ನಾನು ಒಂದು ಕನಸು ಕಂಡೆ; ಅದರಲ್ಲಿ ಒಂದು ಜವೆಗೋದಿಯ ರೊಟ್ಟಿ ಉರುಳುತ್ತಾ ಮಿದ್ಯಾನ್ಯರ ಪಾಳೆಯದೊಳಗೆ ಬಂದು ಒಂದು ಡೇರೆಗೆ ತಗಲಿ ಅದನ್ನು ಅಡಿಮೇಲು ಮಾಡಿ ಬೀಳಿಸಿಬಿಟ್ಟಿತು,” ಎಂದು ಹೇಳಿದನು. ಅವನ ಜೊತೆಗಾರನು,
೧೪. “ಇದು ಇಸ್ರಯೇಲನಾದ ಯೋವಾಷನ ಮಗ ಗಿದ್ಯೋನನ ಕತ್ತಿಯೇ ಹೊರತು ಮತ್ತೊಂದಲ್ಲ; ದೇವರು ಮಿದ್ಯಾನ್ಯರನ್ನೂ ಅವರ ಪಾಳೆಯಗಳನ್ನೂ ಅವನ ಕೈಗೆ ಒಪ್ಪಿಸಿರುವರು,” ಎಂದನು.
೧೫. ಗಿದ್ಯೋನನು ಆ ಕನಸನ್ನೂ ಅದರ ಅರ್ಥವನ್ನೂ ಕೇಳಿದಾಗ ಸರ್ವೇಶ್ವರನಿಗೆ ಅಡ್ಡಬಿದ್ದು ಇಸ್ರಯೇಲರ ಪಾಳೆಯಕ್ಕೆ ಹಿಂದಿರುಗಿ ಬಂದು, ಅವರಿಗೆ, “ಏಳಿ, ಸರ್ವೇಶ್ವರ ಮಿದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರೆ,” ಎಂದನು.
೧೬. ಅಲ್ಲದೆ, ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪುಮಾಡಿ ಪ್ರತಿ ಒಬ್ಬನ ಕೈಯಲ್ಲಿ ಕೊಂಬನ್ನೂ ಉರಿಯುವ ಪಂಜಡಗಿರುವ ಬರಿಕೊಡವನ್ನೂ ಕೊಟ್ಟು ಅವರಿಗೆ,
೧೭. “ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿ. ನಾನು ಪಾಳೆಯದ ಅಂಚಿಗೆ ಬಂದಾಗ ಹೇಗೆ ಮಾಡುತ್ತೇನೋ ಹಾಗೆ ನೀವು ಮಾಡಬೇಕು.
೧೮. ನಾನೂ ನನ್ನ ಸಂಗಡಿಗರೂ ಕೊಂಬುಗಳನ್ನು ಊದುವಾಗ ನೀವೂ ಪಾಳೆಯದ ಸುತ್ತಲೂ ಕೊಂಬನ್ನು ಊದಿ, ‘ಸರ್ವೇಶ್ವರಗೆ ಜಯ, ಗಿದ್ಯೋನನಿಗೆ ಜಯ’ ಎಂದು ಕೂಗಿರಿ,” ಎಂದು ಹೇಳಿದನು.
೧೯. ಮಧ್ಯರಾತ್ರಿ ಪ್ರಾರಂಭವಾಗುತ್ತಿದ್ದಂತೆ ಮೊದಲ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನು ಮತ್ತು ಅವನ ಸಂಗಡ ಇದ್ದ ನೂರುಮಂದಿ (ಶತ್ರುಗಳ) ಪಾಳೆಯದ ಅಂಚಿಗೆ ಬಂದು ಕೊಂಬುಗಳನ್ನು ಊದಿ, ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು.
೨೦. ಕೂಡಲೆ ಮೂರು ಗುಂಪಿನವರೂ ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದುಬಿಟ್ಟು ಎಡಗೈಯಲ್ಲಿ ಪಂಜುಗಳನ್ನೂ ಬಲಗೈಯಲ್ಲಿ ಊದುವ ಕೊಂಬುಗಳನ್ನೂ ಹಿಡಿದು, “ಸರ್ವೇಶ್ವರನಿಗೆ ಪರಾಕು” ಎಂದು ಕೂಗಿ
೨೧. ಪಾಳೆಯದ ಸುತ್ತಲೂ ತಮ್ಮ ತಮ್ಮ ಸ್ಥಳದಲ್ಲಿ ನಿಂತರು. ಪಾಳೆಯದವರಾದರೋ ಗಲಿಬಿಲಿಗೊಂಡು ಚೀರುತ್ತಾ ಓಡಿಹೋಗಲು ಆರಂಭಿಸಿದರು.
೨೨. ಆ ಮುನ್ನೂರು ಮಂದಿ ಕೊಂಬುಗಳನ್ನು ಊದುತ್ತಿರುವಲ್ಲಿ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಸರ್ವೇಶ್ವರ ಮಾಡಿದರು. ಪಾಳೆಯದವರು ಚೇರೆರದ ದಾರಿಯಲ್ಲಿರುವ ಬೇತ್‍ಷೀಟ್ಟದವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾ ಪ್ರಾಂತ್ಯದವರೆಗೂ ಓಡಿಹೋದರು.
೨೩. ಇಸ್ರಯೇಲರಾದ ನಫ್ತಾಲಿ, ಆಶೇರ್ ಕುಲಗಳವರೂ ಮನಸ್ಸೆಕುಲದ ಜನರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.
೨೪. ಇದಲ್ಲದೆ, ಗಿದ್ಯೋನನು ಎಫ್ರಯಿಮ್ ಪರ್ವತ ಪ್ರದೇಶಗಳಿಗೆ ದೂತರನ್ನು ಅಟ್ಟಿ ಆ ಜನರಿಗೆ, “ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು, ಅವರು ಬೇತ್ ಬಾರದವರೆಗಿರುವ ಪ್ರವಾಹಗಳನ್ನೂ ಜೋರ್ಡನ್ ನದಿಯನ್ನೂ ದಾಟಿಹೋಗದಂತೆ ಅಡ್ಡಗಟ್ಟಿರಿ,” ಎಂದು ಹೇಳಿಕಳಿಸಿದನು. ಆಗ ಎಫ್ರಯಿಮ್ಯರೆಲ್ಲರೂ ಬೇತ್‍ಬಾರದವರೆಗಿರುವ ಪ್ರವಾಹಗಳಿಗೂ ಜೋರ್ಡನ್ ನದಿಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಹಿಡಿದರು.
೨೫. ಇದಲ್ಲದೆ ಅವರು ಮಿದ್ಯಾನ್ಯರ ನಾಯಕರಾದ ಓರೇಬ್, ಜೇಬ್ ಎಂಬವರನ್ನು ಹಿಡಿದು ಓರೇಬನನ್ನು ಓರೇಬನ ಬಂಡೆಯ ಮೇಲೂ ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯಲ್ಲೂ ಕೊಂದು ಅವರ ತಲೆಗಳನ್ನು ತೆಗೆದುಕೊಂಡು ಮಿದ್ಯಾನ್ಯರನ್ನು ಹಿಂದಟ್ಟುತ್ತಾ ಜೋರ್ಡನಿನ ಆಚೆಗೆ ಹೋಗಿ ಅಲ್ಲಿದ್ದ ಗಿದ್ಯೋನನಿಗೆ ಅವುಗಳನ್ನು ಒಪ್ಪಿಸಿದರು.

ನ್ಯಾಯಸ್ಥಾಪಕರು ೮:೧-೩೫
೧. ಅನಂತರ ಎಫ್ರಯಿಮ್ಯರು ಗಿದ್ಯೋನನಿಗೆ, “ನೀನು ಹೀಗೇಕೆ ಮಾಡಿದೆ? ಮಿದ್ಯಾನ್ಯರೊಡನೆ ಯುದ್ಧ ಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರ ವಾಗ್ವಾದ ಮಾಡಿದರು.
೨. ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸರಿಸಮಾನ ಆದದ್ದನ್ನು ನಾನೇನು ಮಾಡಿದೆ? ಅಭೀಯಿಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ ಎಫ್ರಯಿಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ?
೩. ದೇವರು ಮಿದ್ಯಾನ್ಯರ ನಾಯಕರಾದ ಓರೇಬ್ ಮತ್ತು ಜೇಬರನ್ನೇ ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರಲ್ಲವೆ; ಇದಕ್ಕೆ ಸರಿಸಮಾನವಾದದ್ದನ್ನು ನಾನೇನು ಮಾಡಿದ್ದೇನೆ? ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರ ಸಿಟ್ಟಿಳಿಯಿತು.
೪. ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದಿದ್ದರು. ಆದರೂ ಹಿಂದಟ್ಟುತ್ತಾ ಜೋರ್ಡನನ್ನು ದಾಟಿ ಸುಖೋತಿಗೆ ಬಂದರು.
೫. ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಸ್ವಲ್ಪ ರೊಟ್ಟಿ ಕೊಡಿ. ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಹಿಂದಟ್ಟುತ್ತಾ ಇದ್ದೇನೆ,” ಎಂದನು.
೬. ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬರವರನ್ನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?”, ಎಂದು ತಿರಸ್ಕರಿಸಿದರು.
೭. ಆಗ ಗಿದ್ಯೋನನು ಅವರಿಗೆ, “ಒಳ್ಳೆಯದು, ಸರ್ವೇಶ್ವರ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿ ಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು,” ಎಂದು ಹೇಳಿದನು.
೮. ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನ ಜನರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ತಾತ್ಸಾತ ಮಾಡಿದರು.
೯. ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
೧೦. ಜೆಬಹ ಮತ್ತು ಚಲ್ಮುನ್ನ ಎಂಬವರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಯೋಧರು ಹತರಾಗಿ ಉಳಿದವರು ಇಷ್ಟೇ ಮಂದಿ.
೧೧. ಗಿದ್ಯೋನನು ಕಾಡುಗೊಲ್ಲರ ಪ್ರದೇಶ ಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳಿದುಕೊಂಡಿದ್ದ ಆ ಪಾಳೆಯದ ಮೇಲೆ ದಾಳಿಮಾಡಿದನು.
೧೨. ಜೆಬಹನೂ ಚಲ್ಮುನ್ನನೂ ಓಡಿಹೋಗುವಾಗ ಅವರನ್ನು ಹಿಂದಟ್ಟಿ ಹಿಡಿದು ಅವರ ಸೈನ್ಯವನ್ನು ಚದರಿಸಿಬಿಟ್ಟನು.
೧೩. ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದನು.
೧೪. ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು ಆ ಊರಿನ ಮುಖಂಡರೂ ಹಿರಿಯರೂ ಯಾರಾರೆಂದು ವಿಚಾರಿಸಿ ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆಸಿಕೊಂಡನು.
೧೫. ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “’ದಣಿದಿರುವ ನಿನ್ನ ಸೈನಿಕರಿಗಾಗಿ ನಾವು ರೊಟ್ಟಿ ಕೊಡುವುದಕ್ಕೆ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೈಕಟ್ಟಿ ಸ್ವಾಧೀನ ಮಾಡಿಕೊಂಡಿದ್ದೀಯೋ?,’ ಎಂದು ನನ್ನನ್ನು ನಿಂದಿಸಿದಿರಲ್ಲವೆ;
೧೬. ನೋಡಿ, ಅವರು ಇಲ್ಲಿರುತ್ತಾರೆ” ಎಂದು ಊರಿನ ಹಿರಿಯರನ್ನೂ ಮುಖಂಡರನ್ನೂ ಜಾಲಿಮುಳ್ಳು ಹಾಗು ಕಾರೆ ಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿ ಕಲಿಸಿದನು.
೧೭. ಮತ್ತು ಪೆನೂವೇಲಿನ ಗೋಪುರವನ್ನು ಕೆಡವಿ ಬಿಟ್ಟು ಆ ಊರಿನ ಜನರನ್ನು ಕೊಂದುಹಾಕಿದನು.
೧೮. ಬಳಿಕ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು, “ನೀವು ತಾಬೋರದಲ್ಲಿ ಕೊಂದು ಹಾಕಿದ ವ್ಯಕ್ತಿಗಳು ಹೇಗಿದ್ದರು?” ಎಂದು ಕೇಳಿದಾಗ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು,” ಎಂದು ಉತ್ತರಕೊಟ್ಟರು.
೧೯. ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಸರ್ವೇಶ್ವರನ ಆಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದು ಹೇಳಿ
೨೦. ತನ್ನ ಹಿರಿಯ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು,” ಎಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
೨೧. ಆಗ ಜೆಬಹನು ಹಾಗು ಚಲ್ಮುನ್ನನು ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮ ಮೇಲೆ ಬೀಳು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದೆ ಅಲ್ಲವೆ?” ಎನ್ನಲು ಅವನೆದ್ದು ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ಕೊಂದುಹಾಕಿ ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
೨೨. ತರುವಾಯ ಇಸ್ರಯೇಲರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲವೇ? ನೀನೂ ನಿನ್ನ ಮಗನೂ ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು,” ಎಂದರು.
೨೩. ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಸರ್ವೇಶ್ವರನೇ ನಿಮ್ಮ ಅರಸ.
೨೪. ಆದರೆ ನಿಮ್ಮಲ್ಲಿ ನನ್ನದೊಂದು ಬಿನ್ನಹಃ ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಮುರುವುಗಳನ್ನು ನನಗೆ ಕೊಡಲಿ,” ಎಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದುದರಿಂದ ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
೨೫. ಗಿದ್ಯೋನಿನ ಬಿನ್ನಹಕ್ಕೆ ಇಸ್ರಯೇಲರು, “ನಾವು ಸಂತೋಷದಿಂದ ಕೊಡುತ್ತೇವೆ,” ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟರು.
೨೬. ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ ಇವುಗಳ ಹೊರತಾಗಿ ಅವನು ಇಸ್ರಯೇಲರಿಂದ ಕೇಳಿ ತೆಗೆದುಕೊಂಡ ಮುರುವುಗಳ ಬಂಗಾರವೇ ೨೦ ಕಿಲೋಗ್ರಾಂ ತೂಕವಾಗಿತ್ತು.
೨೭. ಈ ಬಂಗಾರದಿಂದ ಗಿದ್ಯೋನನು ಒಂದು ‘ಏಫೋದ’ನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಅದನ್ನು ಪೂಜಿಸುತ್ತಿದ್ದುದರಿಂದ ಇಸ್ರಯೇಲರೆಲ್ಲರೂ ದೇವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಒಂದು ಉರುಲು ಆಯಿತು.
೨೮. ಮಿದ್ಯಾನ್ಯರು ಇಸ್ರಯೇಲರ ಮುಂದೆ ಬಹಳವಾಗಿ ತಗ್ಗಿಹೋದರು. ಅವರು ಮರಳಿ ತಲೆಯೆತ್ತಲಾಗಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಾಲ್ವತ್ತು ವರ್ಷಗಳ ಕಾಲಪರ್ಯಂತ ದೇಶದಲ್ಲಿ ಶಾಂತಿಸಮಾಧಾನವಿತ್ತು.
೨೯. ಯೋವಾಷನ ಮಗ ‘ಯೆರುಬ್ಬಾಳ’ನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು.
೩೦. ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರು ಇದ್ದರು. ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು.
೩೧. ಅವನಿಗೆ ಶೆಕೆಮಿನಲ್ಲಿ ಇದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗ ಹುಟ್ಟಿದನು. ಅವನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
೩೨. ಯೋವಾಷನ ಮಗನಾದ ಗಿದ್ಯೋನನು ಹಣ್ಣು ಹಣ್ಣು ಮುದುಕನಾಗಿ ಮರಣಹೊಂದಲು ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿ ಅವನ ತಂದೆ ಆದ ಯೋವಾಷನದಾಗಿತ್ತು.
೩೩. ಗಿದ್ಯೋನನು ಸತ್ತನಂತರ ಇಸ್ರಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್ ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.
೩೪. ಸುತ್ತಮುತ್ತಲಿನ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು.
೩೫. ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಸ್ಮರಿಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.

ಕೀರ್ತನೆಗಳು ೪೯:೧೦-೨೦
೧೦. ಬುದ್ಧಿಜೀವಿಗಳೂ ಸಾಯುವುದು ಖಂಡಿತ I ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I ಅವರ ಸೊತ್ತು ಪರರ ಪಾಲು, ಇದೂ ಖಚಿತ II
೧೧. ತಮ್ಮ ಹೆಸರಲೆಸ್ಟೋ ಸೊತ್ತಿದ್ದರೂ I ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು I ಅದುವದುವೇ ಅವರಿಗೆ ನಿತ್ಯ ನಿವಾಸವು II
೧೨. ನೆಲೆಯಾಗಿರನು ನರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II
೧೩. ಮೂಢನಂಬಿಕೆಯುಳ್ಳವರ ಗತಿ ಇದುವೇ I ಆ ಮೂಢರ ನಂಬಿ ನಡೆದವರಿಗು ಹಾಗೆಯೇ II
೧೪. ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II
೧೫. ನನ್ನನ್ನಾದರೊ ಸ್ವಾಗತಿಸುವನು ದೇವನು I ಪಾತಾಳದ ಹಿಡಿತದಿಂದ ಬಿಡಿಸುವನು II
೧೬. ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ I ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ II
೧೭. ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II
೧೮. ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II
೧೯. ಸೇರದಿರನಾತ ಪಿತೃಗಳಧೋಗತಿಯನು I ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II
೨೦. ನೆಲೆಯಾಗಿರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II

ಜ್ಞಾನೋಕ್ತಿಗಳು ೧೪:೨೨-೨೪
೨೨. ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.
೨೩. ದುಡಿಮೆಯಿಂದ ಸದಾ ಲಾಭವುಂಟು; ಬರಿ ಮಾತಿನಿಂದ ಬಡತನ ಬರುವುದುಂಟು.
೨೪. ಬುದ್ಧಿವಂತರ ಕಿರೀಟ ಅವರ ಜ್ಞಾನವೇ; ದಡ್ಡರ ಶಿರಮುಕುಟ ಅವರ ದಡ್ಡತನವೆ.

ಲೂಕನು ೧೫:೧೧-೩೨
೧೧. ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು.
೧೨. ಅವರಲ್ಲಿ ಕಿರಿಯವನು, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ.
೧೩. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲುಮಾಡಿಬಿಟ್ಟ.
೧೪. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು.
೧೫. ನಿರ್ಗತಿಕನಾದ ಅವನು ಹೋಗಿ, ಆದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ.
೧೬. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
೧೭. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ.
೧೮. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ;
೧೯. ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ.
೨೦. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ.
೨೧. ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ.
೨೨. ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ;
೨೩. ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ.
೨೪. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
೨೫. “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು.
೨೬. ‘ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ.
೨೭. ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ.
೨೮. “ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ
೨೯. ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ.
೩೦. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ.
೩೧. ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ.
೩೨. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ; ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?’ ಎಂದನು.”