A A A A A

ಕ್ರಾನಿಕಲ್ಸ್ ೨ ೧:೧-೧೭
೧. ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿದನು. ಅವನ ದೇವರಾದ ಸರ್ವೇಶ್ವರಸ್ವಾಮಿ ಅವನನ್ನು ಹರಸಿ ಮಹಾ ಬಲಾಢ್ಯನಾಗುವಂತೆ ಮಾಡಿದರು.
೨. ಅವನು ತನ್ನ ಸಹಸ್ರಾಧಿಪತಿಗಳನ್ನು, ಶತಾಧಿಪತಿಗಳನ್ನು, ಸರಕಾರದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಇಸ್ರಯೇಲ್ ಕುಲಗೋತ್ರಗಳ ನಾಯಕರನ್ನು ಬರಮಾಡಿ, ಅವರ ಸಮೇತ ಗಿಬ್ಯೋನಿನಲ್ಲಿದ್ದ ಪೂಜಾಸ್ಥಳಕ್ಕೆ ಹೋದನು.
೩. ಸರ್ವೇಶ್ವರನ ದಾಸನಾದ ಮೋಶೆ ಮರುಭೂಮಿಯಲ್ಲಿ ಮಾಡಿಸಿದ್ದ ದೇವದರ್ಶನದ ಗುಡಾರ ಅಲ್ಲಿಯೇ ಇತ್ತು.
೪. ದಾವೀದನು ದೇವರ ಮಂಜೂಷವನ್ನು, ಈಗಾಗಲೇ ಕಿರ್ಯತ್ಯಾರೀಮಿನಿಂದ ತಾನು ಜೆರುಸಲೇಮಿನಲ್ಲಿ ಅದಕ್ಕೋಸ್ಕರ ಸಿದ್ಧಮಾಡಿದ್ದ ಗುಡಾರಕ್ಕೆ, ತೆಗೆದುಕೊಂಡು ಬಂದಿದ್ದನು.
೫. ಆದರೂ ಊರೀಯನ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿಸಿದ್ದ ತಾಮ್ರದ ಬಲಿಪೀಠ, ಅಲ್ಲೇ ಗಿಬ್ಯೋನಿನಲ್ಲಿ ಸರ್ವೇಶ್ವರನ ಗುಡಾರದ ಮುಂದೆ ಇತ್ತು. ಈ ಕಾರಣ ಸೊಲೊಮೋನನೂ ಅವನ ಸಮಾಜದವರೂ ಅಲ್ಲಿಗೆ ದರ್ಶನಕ್ಕಾಗಿ ಹೋಗುತ್ತಿದ್ದರು.
೬. ಸೊಲೊಮೋನನು, ದೇವದರ್ಶನದ ಗುಡಾರದ ಬಳಿ ಸರ್ವೇಶ್ವರನ ಮುಂದಿದ್ದ ಆ ತಾಮ್ರದ ಪೀಠದ ಮೇಲೆ, ಸಾವಿರ ದಹನಬಲಿಗಳನ್ನು ಅರ್ಪಿಸಿದನು.
೭. ಅದೇ ರಾತ್ರಿ ದೇವರು ಸೊಲೊಮೋನನಿಗೆ ದರ್ಶನಕೊಟ್ಟು, “ನಿನಗೆ ಯಾವ ವರಬೇಕು, ಕೇಳಿಕೋ,” ಎಂದು ಹೇಳಿದರು.
೮. ಸೊಲೊಮೋನನು, “ನೀವು ನನ್ನ ತಂದೆ ದಾವೀದನಿಗೆ ಮಹಾಕೃಪೆಯನ್ನು ತೋರಿಸಿದಿರಿ. ಅವರ ಸ್ಥಾನದಲ್ಲಿ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.
೯. ಹೀಗೆ ಇರಲಾಗಿ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ ನುಡಿದದ್ದು ಸಾರ್ಥಕವಾಗಲಿ; ಧರೆಯ ಧೂಳಿನಷ್ಟು ಅಸಂಖ್ಯವಾದ ಜನಾಂಗದ ಮೇಲೆ ನನ್ನನ್ನು ಅರಸನನ್ನಾಗಿ ನೇಮಿಸಿದ್ದೀರಿ.
೧೦. ನಿಮ್ಮ ಪ್ರಜೆಯಾದ ಈ ಮಹಾಜನಾಂಗವನ್ನು ಆಳುವುದಕ್ಕೆ ಸಮರ್ಥರಾರು! ನಾನು ಈ ಜನರ ನಾಯಕನಾಗಿ ಇವರನ್ನು ಪರಿಪಾಲಿಸುವುದಕ್ಕೆ ಬೇಕಾದ ಜ್ಞಾನ ವಿವೇಕಗಳನ್ನು ನನಗೆ ಅನುಗ್ರಹಿಸಿರಿ,” ಎಂದು ದೇವರನ್ನು ಬೇಡಿಕೊಂಡನು.
೧೧. ಆಗ ದೇವರು ಸೊಲೊಮೋನನಿಗೆ, “ನೀನು ಘನಧನೈಶ್ವರ್ಯಗಳನ್ನಾಗಲಿ, ಶತ್ರುಗಳ ವಿನಾಶವನ್ನಾಗಲಿ, ದೀರ್ಘಾಯುಷ್ಯವನ್ನಾಗಲಿ ಕೇಳಿಕೊಳ್ಳಲಿಲ್ಲ. ಬದಲಿಗೆ ನಾನು ಯಾರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನೋ ಆ ನನ್ನ ಪ್ರಜೆಗಳನ್ನು ಪಾಲಿಸುವುದಕ್ಕೆ ಬೇಕಾದ ಜ್ಞಾನ ವಿವೇಕಗಳ ಮೇಲೆ ಮನಸ್ಸಿಟ್ಟು ಅವುಗಳನ್ನು ನಿನಗಾಗಿ ಬೇಡಿಕೊಂಡೆ. ಆದುದರಿಂದ ಅವು ನಿನಗೆ ದೊರಕುವುವು.
೧೨. ಇದಲ್ಲದೆ, ನಾನು ನಿನಗೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸುತ್ತೇನೆ. ಇಂಥ ಘನಧನೈಶ್ವರ್ಯಗಳು ನಿನಗಿಂತ ಮೊದಲಿದ್ದ ಅರಸರಲ್ಲಿ ಯಾರಿಗೂ ಇರಲಿಲ್ಲ, ನಿನ್ನ ಅನಂತರದವರಿಗೂ ಇರುವುದಿಲ್ಲ,” ಎಂದರು.
೧೩. ಆಮೇಲೆ ಅರಸ ಸೊಲೊಮೋನನು ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದ ದೇವದರ್ಶನದ ಗುಡಾರದಿಂದ ಜೆರುಸಲೇಮಿಗೆ ಬಂದು ಇಸ್ರಯೇಲ್ ರಾಜ್ಯವನ್ನು ಆಳಿದನು.
೧೪. ರಥಗಳನ್ನೂ ರಾಹುತರನ್ನೂ ಸಂಗ್ರಹಿಸಿದನು. ಅವನಿಗಿದ್ದ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲೇ ಇಟ್ಟುಕೊಂಡನು. ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದನು.
೧೫. ಅವನ ಕಾಲದಲ್ಲಿ ಬೆಳ್ಳಿಬಂಗಾರ ಕಲ್ಲಿನಂತೆಯೂ, ದೇವದಾರು ಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆಯೂ ಜೆರುಸಲೇಮಿನಲ್ಲಿ ವಿಫುಲವಾಗಿದ್ದವು.
೧೬. ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.
೧೭. ರಥಕ್ಕೆ ಆರುನೂರು ಬೆಳ್ಳಿನಾಣ್ಯಗಳಂತೆ, ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳಂತೆ ಕೊಟ್ಟು, ರಥಗಳನ್ನೂ ಕುದುರೆಗಳನ್ನೂ ಈಜಿಪ್ಟ್ ದೇಶದಿಂದ ತರಿಸುತ್ತಿದ್ದರು; ಹಿತ್ತಿಯರ ಮತ್ತು ಸಿರಿಯಾದವರ ಎಲ್ಲಾ ಅರಸರು ಇವರ ಮುಖಾಂತರವೇ ತರಿಸುತ್ತಿದ್ದರು.

ಕ್ರಾನಿಕಲ್ಸ್ ೨ ೨:೧-೧೮
೧. ಸೊಲೊಮೋನನು ಸರ್ವೇಶ್ವರನ ಹೆಸರಿಗಾಗಿ ಒಂದು ಅರಮನೆಯನ್ನು ಕಟ್ಟಿಸಬೇಕೆಂದು ಮನಸ್ಸುಮಾಡಿದನು.
೨. ಇಪ್ಪತ್ತು ಸಾವಿರ ಮಂದಿ ಹೊರೆಹೊರುವವರೂ ಎಂಬತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ಎಣಿಸಿ ನೇಮಿಸಿದನು.
೩. ಇದಲ್ಲದೆ, ಟೈರಿನ ಅರಸ ಹೂರಾಮನಿಗೆ ದೂತರ ಮುಖಾಂತರ, “ನನ್ನ ತಂದೆ ದಾವೀದ ತಮ್ಮ ವಾಸಕ್ಕೆ ಅರಮನೆಯನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ನೀನು ದೇವದಾರು ಮರಗಳನ್ನು ಕಳುಹಿಸಿದೆ.
೪. ಈಗ ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಇಸ್ರಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ ಅವರ ಸನ್ನಿಧಿಯಲ್ಲಿ ಸುಗಂಧ ದ್ರವ್ಯಗಳಿಂದ ಧೂಪಾರತಿ ಎತ್ತಬೇಕಾಗಿದೆ. ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡಬೇಕಾಗಿದೆ; ಬೆಳಿಗ್ಗೆ, ಸಂಜೆ, ಸಬ್ಬತ್‍ದಿನ, ಅಮಾವಾಸ್ಯೆ ಹಾಗೂ ನಮ್ಮ ದೇವರಾದ ಸರ್ವೇಶ್ವರನ ಜಾತ್ರೆಯ ವೇಳೆಗಳಲ್ಲಿ ದಹನಬಲಿಗಳನ್ನು ಅರ್ಪಿಸಬೇಕಾಗಿದೆ. ಇದಕ್ಕಾಗಿ ಒಂದು ಆಲಯವನ್ನು ಅವರಿಗೆ ಪ್ರತಿಷ್ಠಿಸಬೇಕೆಂದಿದ್ದೇನೆ.
೫. ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರು! ನಾನು ಕಟ್ಟಿಸುವ ಆಲಯವೂ ದೊಡ್ಡದಾಗಿರಬೇಕು.
೬. ಅವರಿಗೆ ಆಲಯವನ್ನು ಕಟ್ಟುವುದಕ್ಕೆ ಯಾರೂ ಶಕ್ತರಲ್ಲ; ಆಕಾಶವೂ ಉನ್ನತೋನ್ನತವಾದ ಆಕಾಶವೂ ಅವರ ವಾಸಕ್ಕೆ ಸಾಲದಿರುವಲ್ಲಿ ಅವರಿಗಾಗಿ ಆಲಯವನ್ನು ಕಟ್ಟುವುದಕ್ಕೆ ಯಾರು ತಾನೆ ಶಕ್ತರು? ನಾನು ಅವರ ಸನ್ನಿಧಿಯಲ್ಲಿ ಧೂಪಾರತಿ ಎತ್ತುವ ಒಂದು ಸ್ಥಳವನ್ನು ಕಟ್ಟಿಸಬಲ್ಲೆನೇ ಹೊರತು, ಅವರ ವಾಸಕ್ಕಾಗಿ ಆಲಯವನ್ನು ಕಟ್ಟಿಸುವುದಕ್ಕೆ ನಾನು ಎಷ್ಟು ಮಾತ್ರಕ್ಕೂ ಶಕ್ತನಲ್ಲ.
೭. ಹೀಗಿರಲು, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಮಾಡುವುದರಲ್ಲಿ, ಊದಾ, ಕೆಂಪು, ನೀಲವರ್ಣಗಳ ಬಟ್ಟೆಯನ್ನು ನೇಯುವುದರಲ್ಲಿ ಹಾಗೂ ಚಿತ್ರ ಕೆತ್ತುವುದರಲ್ಲಿ ನಿಪುಣನಾದ ಒಬ್ಬ ವ್ಯಕ್ತಿಯನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆ ಗೊತ್ತುಮಾಡಿದಂಥ ಮತ್ತು ನನ್ನೊಡನೆ ಜುದೇಯದಲ್ಲೂ, ಜೆರುಸಲೇಮಿನಲ್ಲೂ ಇರುವಂಥ ಕಲಾಕುಶಲರೊಂದಿಗೆ ಅವನು ಕೆಲಸಮಾಡಲಿ.
೮. ಅಂತೆಯೇ ಲೆಬನೋನಿನಿಂದ ದೇವದಾರು ಮರವನ್ನೂ ತುರಾಯಿಮರವನ್ನೂ ಸುಗಂಧದ ಮರವನ್ನೂ ನನಗೆ ಕಳುಹಿಸಬೇಕು. ನಿನ್ನ ಆಳುಗಳು ಲೆಬನೋನಿನ ಮರಗಳನ್ನು ಕಡಿಯುವುದರಲ್ಲಿ ಜಾಣರೆಂದು ನನಗೆ ಗೊತ್ತಿದೆ. ನಿನ್ನ ಆಳುಗಳ ಜೊತೆಯಲ್ಲಿ ನನ್ನ ಆಳುಗಳೂ ಕೆಲಸಮಾಡುವರು.
೯. ಬೃಹದಾಕಾರವಾದ ಹಾಗೂ ಭವ್ಯವಾದ ದೇವಾಲಯವನ್ನು ನಾನು ಕಟ್ಟಿಸಬೇಕಾಗಿದೆ. ಆದುದರಿಂದ ಹೆಚ್ಚು ಮರವನ್ನು ಸಿದ್ಧಪಡಿಸಬೇಕು.
೧೦. ಮರ ಕಡಿಯುವ ನಿನ್ನ ಆಳುಗಳಿಗಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿ, ಎರಡು ಸಾವಿರ ಮೆಟ್ರಿಕ್ ಟನ್ ಜವೆಗೋದಿ, ನಾಲ್ಕು ಲಕ್ಷ ಲೀಟರ್ ದ್ರಾಕ್ಷಾರಸ ಹಾಗೂ ನಾಲ್ಕು ಲಕ್ಷ ಲೀಟರ್ ಎಣ್ಣೆ ಇವುಗಳನ್ನು ಕೊಡುವೆನು,” ಎಂದು ಹೇಳಿಸಿದನು.
೧೧. ಟೈರಿನ ಅರಸ ಹೂರಾಮನು ಪತ್ರದ ಮೂಲಕ ಸೊಲೊಮೋನನಿಗೆ, “ಸರ್ವೇಶ್ವರ ತಮ್ಮ ಪ್ರಜೆಗಳನ್ನು ಪ್ರೀತಿಸುವವರು. ಆದುದರಿಂದ ನಿನ್ನನ್ನು ಆ ಜನರ ಅರಸನನ್ನಾಗಿ ನೇಮಿಸಿದ್ದಾರೆ.
೧೨. ಭೂಮ್ಯಾಕಾಶಗಳನ್ನು ಉಂಟುಮಾಡಿದ ಇಸ್ರಯೇಲ್ ದೇವರಾದ ಸರ್ವೇಶ್ವರ ತಮಗಾಗಿ ಒಂದು ದೇವಾಲಯವನ್ನೂ ರಾಜನಿಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸತಕ್ಕ ಬುದ್ಧಿ, ಜ್ಞಾನ ಹಾಗೂ ವಿವೇಕಗಳುಳ್ಳ ಒಬ್ಬ ಮಗನನ್ನು ಅರಸನಾದ ದಾವೀದನಿಗೆ ಕೊಟ್ಟಿದ್ದಾರೆ; ಅವರಿಗೆ ಸ್ತೋತ್ರವಾಗಲಿ!
೧೩. ನಾನು ಈಗ ಜ್ಞಾನಿಯೂ ಕಲಾಪ್ರವೀಣನೂ ಆದ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ; ಇವನ ಹೆಸರು ಹೂರಾಮಾಬೀ.
೧೪. ಇವನು ದಾನ್ ಕುಲದ ಒಬ್ಬ ಸ್ತ್ರೀಯ ಮಗ; ಅವನ ತಂದೆ ಟೈರಿನವನು. ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ ಇವುಗಳ ಕೆಲಸವನ್ನು ಮಾಡುವುದಕ್ಕೂ ಊದಾ, ನೀಲಿ, ಕೆಂಪುವರ್ಣಗಳುಳ್ಳ ನಾರುಬಟ್ಟೆಗಳನ್ನು ನೇಯುವುದಕ್ಕೂ ಎಲ್ಲಾ ತರದ ಕೆತ್ತನೆಯ ಕೆಲಸ ಮಾಡುವುದಕ್ಕೂ ತನಗೆ ಒಪ್ಪಿಸಲಾಗುವ ಎಲ್ಲಾ ಕಲಾತ್ಮಕ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನೀನೂ ನಿನ್ನ ತಂದೆ ದಾವೀದನೂ ಗೊತ್ತುಮಾಡಿದ ಕಲಾಕುಶಲರೊಡನೆ ಇವನು ಕೆಲಸಮಾಡಲಿ.
೧೫. ಈಗ ನನ್ನ ಒಡೆಯರಾದ ತಾವು ಮಾತುಕೊಟ್ಟ ಮೇರೆಗೆ ಗೋದಿ, ಜವೆಗೋದಿ, ಎಣ್ಣೆ, ದ್ರಾಕ್ಷಾರಸ ಇವುಗಳನ್ನು ತನ್ನ ಸೇವಕರಿಗೆ ಕಳುಹಿಸಬೇಕು.
೧೬. ನಾವಾದರೋ ತಮಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು, ತೆಪ್ಪಗಳಾಗಿ ಕಟ್ಟಿ, ಸಮುದ್ರಮಾರ್ಗವಾಗಿ ಜೊಪ್ಪಕ್ಕೆ ಕಳುಹಿಸುವೆವು; ಅಲ್ಲಿಂದ ನೀವು ಅವುಗಳನ್ನು ಜೆರುಸಲೇಮಿಗೆ ತರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟನು.
೧೭. ಸೊಲೊಮೋನನು, ತನ್ನ ತಂದೆ ದಾವೀದನು ಮಾಡಿಸಿದ ಜನಗಣತಿಯ ಆಧಾರದಿಂದ, ಇಸ್ರಯೇಲ್ ನಾಡಿನಲ್ಲಿ ಪ್ರವಾಸಿಗಳಾಗಿದ್ದ ಎಲ್ಲಾ ಅನ್ಯಜನರನ್ನು ಲೆಕ್ಕಿಸಿದನು. ಅವರು ಒಂದು ಲಕ್ಷ ಐವತ್ತಮೂರು ಸಾವಿರದ ಆರುನೂರು ಮಂದಿ ಇದ್ದರು.
೧೮. ಅವರಲ್ಲಿ ಹೊರೆಹೊರುವುದಕ್ಕಾಗಿ ಎಪ್ಪತ್ತು ಸಾವಿರ ಮಂದಿಯನ್ನೂ ಕಲ್ಲುಗಣಿಗಳಲ್ಲಿ ಕೆಲಸಮಾಡುವುದಕ್ಕಾಗಿ ಎಂಬತ್ತು ಸಾವಿರ ಮಂದಿಯನ್ನೂ ಕೆಲಸದವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿಯನ್ನೂ ನೇಮಿಸಿದನು.

ಕೀರ್ತನೆಗಳು ೭೯:೧-೪
೧. ಹೊಕ್ಕಿದರು ದೇವಾ, ಮ್ಲೇಚ್ಛರು ನಿನ್ನ ಸ್ವಂತನಾಡನು I ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನುI ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು II
೨. ಅರ್ಪಿಸಿದರು ನಿನ್ನ ದಾಸರಾ ಶವಗಳನು ಗಗನ ಪಕ್ಷಿಗಳಿಗೆ I ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ II
೩. ನೀರಂತೆ ಚೆಲ್ಲಿ ಹರಾ ನೆತ್ತರನು ಜೆರುಸಲೇಮ್ ಸುತ್ತಲು I ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು II
೪. ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ I ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ II

ಜ್ಞಾನೋಕ್ತಿಗಳು ೨೦:೮-೯
೮. ರಾಜನು ನ್ಯಾಯಾಸನದ ಮೇಲೆ ವಿರಾಜಿಸುವಾಗ ಕೆಟ್ಟತನವನ್ನು ತೂರಿಬಿಡುವನು ದೃಷ್ಟಿಯಿಂದ.
೯. “ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದೇನೆ; ಪಾಪವಿಮುಕ್ತನಾಗಿ ಪವಿತ್ರನಾಗಿದ್ದೇನೆ” ಎಂದು ಹೇಳಬಲ್ಲವನಾರು?

ಪ್ರೇಷಿತರ ೧೧:೧-೩೦
೧. ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು.
೨. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು,
೩. “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು.
೪. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು:
೫. “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು.
೬. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು.
೭. ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು.
೮. ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ಧ ಹಾಗು ಅಸ್ಪೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ.
೯. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧಿಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು.
೧೦. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು.
೧೧. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂರುಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು.
೧೨. ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು.
೧೩. ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.
೧೪. ಅವನು ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನು” ಎಂದು ನಮಗೆ ಹೇಳಿದನು.
೧೫. ನಾನು ಉಪದೇಶಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದುಬಂದರು.
೧೬. ಆಗ ನನಗೆ, ‘ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು.
೧೭. ನಾನುಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು.
೧೮. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು, ಮಾತ್ರವಲ್ಲ, ‘ಅನ್ಯಧರ್ಮದವರೂ ಪಶ್ಚಾತ್ತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವಸ್ತುತಿ ಮಾಡಿದರು.
೧೯. ಸ್ತೇಫನನು ಕೊಲೆಯಾದ ಮೊದಲ್ಗೊಂಡು ಉಂಟಾದ ಹಿಂಸಾಚಾರದ ನಿಮಿತ್ತ ಭಕ್ತಾದಿಗಳು ಚದರಿಹೋದರು. ಅವರಲ್ಲಿ ಕೆಲವರು ಫೆನಿಷ್ಯ, ಸೈಪ್ರಸ್, ಅಂತಿಯೋಕ್ಯದವರೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಆದರೆ ಇದನ್ನು ಸಾರಿದ್ದು ಯೆಹೂದ್ಯರಿಗೆ ಮಾತ್ರ.
೨೦. ಸೈಪ್ರಸ್ ಮತ್ತು ಸಿರೇನಿನ ಕೆಲವು ಭಕ್ತರಾದರೋ ಅಂತಿಯೋಕ್ಯಕ್ಕೆ ಹೋಗಿ ಪ್ರಭು ಯೇಸುವಿನ ಶುಭಸಂದೇಶವನ್ನು ಗ್ರೀಕರಿಗೂ ಸಾರಿದರು.
೨೧. ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು.
೨೨. ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು.
೨೩. ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು.
೨೪. ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು.
೨೫. ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು.
೨೬. ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು - ಅಂತಿಯೋಕ್ಯದಲ್ಲೇ.
೨೭. ಆ ದಿನಗಳಲ್ಲಿ ಕೆಲವು ಪ್ರವಾದಿಗಳು ಜೆರುಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.
೨೮. ಅವರಲ್ಲಿ ಅಗಬ ಎಂಬವನು ಒಬ್ಬನು. ಇವನು ಪವಿತ್ರಾತ್ಮ ಪ್ರೇರಿತನಾಗಿ ಜಗತ್ತಿನಲ್ಲೆಲ್ಲಾ ಭೀಕರ ಕ್ಷಾಮ ಬರಲಿದೆಯೆಂದು ಮುಂತಿಳಿಸಿದನು. (ಇದು ಬಂದೊದಗಿದುದು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ)
೨೯. ಆಗ ಭಕ್ತರಲ್ಲಿ ಪ್ರತಿಯೊಬ್ಬರು ತಮ್ಮ ಶಕ್ತಿಗನುಸಾರ ಜುದೇಯದಲ್ಲಿ ವಾಸಿಸುತ್ತಿದ್ದ ಭಕ್ತಾದಿಗಳಿಗೆ ನೆರವು ನೀಡಲು ನಿರ್ಧರಿಸಿದರು.
೩೦. ಅಂತೆಯೇ ತಮ್ಮ ಸಹಾಯವನ್ನು ಬಾರ್ನಬ ಮತ್ತು ಸೌಲ ಇವರ ಮುಖಾಂತರ ಅಲ್ಲಿನ ಸಭಾಪ್ರಮುಖರಿಗೆ ಕಳುಹಿಸಿಕೊಟ್ಟರು.