ವಿಮೋಚನಾಕಾಂಡ ೭:೧-೨೫ |
೧. ಆಗ ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು. “ನೋಡು, ನಾನು ನಿನ್ನನ್ನು ಫರೋಹನ ಮುಂದೆ ದೇವರ ಪ್ರತಿನಿಧಿಯನ್ನಾಗಿ ನೇಮಿಸಿದ್ದೇನೆ. ನಿನ್ನ ಅಣ್ಣ ಆರೋನನು ನಿನ್ನ ಪರವಾಗಿ ವಾದಿಸುವನು. |
೨. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಹೇಳಬೇಕು. ಇಸ್ರಯೇಲರು ಈ ದೇಶದಿಂದ ಹೊರಟುಹೋಗುವುದಕ್ಕೆ ಅಪ್ಪಣೆಕೊಡಬೇಕೆಂದು ನಿನ್ನ ಅಣ್ಣ ಆರೋನನೇ ಫರೋಹನ ಮುಂದೆ ಮಾತಾಡಬೇಕು. |
೩. ಆದರೂ ನಾನು ಫರೋಹನ ಹೃದಯವನ್ನು ಕಲ್ಲಾಗಿಸಿ ಈಜಿಪ್ಟ್ ದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಪವಾಡಗಳನ್ನೂ ನಡೆಸಿ ನನ್ನ ಶಕ್ತಿಯನ್ನು ತೋರಿಸುವೆನು. |
೪. ಫರೋಹನು ನಿನ್ನ ಮಾತನ್ನು ಕೇಳುವುದಿಲ್ಲ. ಆಗ ನಾನು ಈಜಿಪ್ಟ್ ದೇಶದವರನ್ನು ಬಾಧಿಸಿ ಅವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವೆನು. ನನ್ನ ಜನರಾದ ಇಸ್ರಯೇಲರ ಗೋತ್ರಗಳನ್ನೆಲ್ಲ ಈಜಿಪ್ಟ್ ದೇಶದಿಂದ ಹೊರತರುವೆನು. |
೫. ನಾನು ಈಜಿಪ್ಟಿನವರಿಗೆ ವಿರುದ್ಧ ಕೈಯೆತ್ತಿ ಅವರ ಮಧ್ಯೆಯಿಂದ ಇಸ್ರಯೇಲರನ್ನು ಹೊರತಂದಾಗ ನಾನು ಸರ್ವೇಶ್ವರನೆಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು. |
೬. ಸರ್ವೇಶ್ವರ ಸ್ವಾಮಿಯ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು. |
೭. ಫರೋಹನೊಡನೆ ಮಾತುಕತೆ ನಡೆಸಿದಾಗ ಮೋಶೆಗೆ ಎಂಬತ್ತು, ಆರೋನನಿಗೆ ಎಂಬತ್ತಮೂರು ವರ್ಷ ವಯಸ್ಸಾಗಿತ್ತು. |
೮. ಮೋಶೆ ಮತ್ತು ಆರೋನರ ಸಂಗಡ ಸರ್ವೇಶ್ವರ ಮಾತಾಡಿ, |
೯. \ಫರೋಹನು ನಿಮಗೆ, ‘ನಾನು ನಿಮ್ಮ ಮಾತನ್ನು ನಂಬಬೇಕಾದರೆ ಮಹತ್ಕಾರ್ಯವೊಂದನ್ನು ನನ್ನ ಮುಂದೆ ಮಾಡಿ,’ ಎಂದು ಹೇಳಿದರೆ ಮೋಶೆ ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದ ಮೇಲೆ ಬಿಸಾಡು’ ಎಂದು ಹೇಳಲಿ. ಅದು ಸರ್ಪವಾಗುವುದು,” ಎಂದು ಹೇಳಿದರು. |
೧೦. ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋದರು. ಸರ್ವೇಶ್ವರ ತಮಗೆ ಹೇಳಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಬಿಸಾಡಿದಾಗ ಅದು ಸರ್ಪ ಆಯಿತು. |
೧೧. ಫರೋಹನು ಈಜಿಪ್ಟ್ ದೇಶದ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಸಿದನು. ಆ ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿಯಾಗಿ ಮಾಡಿದರು. |
೧೨. ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಬಿಸಾಡಿದರು. ಅವೂ ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. |
೧೩. ಸರ್ವೇಶ್ವರ ಈ ಮೊದಲೇ ಹೇಳಿದ್ದಂತೆ ಫರೋಹನ ಹೃದಯ ಕಲ್ಲಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು. |
೧೪. ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು: “ಫರೋಹನ ಹೃದಯ ಮೊಂಡಾಗಿದೆ. ಜನರು ಹೋಗಲು ಅಪ್ಪಣೆ ಕೊಡುವುದಿಲ್ಲವೆನ್ನುತ್ತಾನೆ. |
೧೫. ಬೆಳಿಗ್ಗೆ ನೀನು ಫರೋಹನ ಬಳಿಗೆ ಹೋಗು. ಆಗ ಅವನು ನದಿಗೆ ಹೋಗುತ್ತಿರುತ್ತಾನೆ. ಅವನನ್ನು ಭೇಟಿಯಾಗಲು ನೈಲ್ ನದಿ ತೀರದಲ್ಲೆ ನಿಂತುಕೊಂಡಿರು. ಸರ್ಪವಾಗಿ ಮಾರ್ಪಟ್ಟ ಆ ಕೋಲು ನಿನ್ನ ಕೈಯಲ್ಲಿರಲಿ. |
೧೬. ಅವನಿಗೆ “ಹಿಬ್ರಿಯರ ದೇವರಾದ ಸರ್ವೇಶ್ವರ ನನ್ನನ್ನು ನಿನ್ನ ಬಳಿಗೆ ಕಳಿಸಿದ್ದಾರೆ. ಅವರು ನಿನಗೆ ಹೇಳುವ ಮಾತಿದು: ಮರುಭೂಮಿಯಲ್ಲಿ ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆ ಕೊಡಬೇಕೆಂದು ನಿನಗೆ ಆಜ್ಞಾಪಿಸಿದೆ. ಆದರೆ ನೀನು ಈವರೆಗೂ ಅದನ್ನು ಲಕ್ಷ್ಯಕ್ಕೆ ತಂದುಕೊಂಡಿಲ್ಲ. |
೧೭. ಆದುದರಿಂದ ಸರ್ವೇಶ್ವರನಾದ ನಾನು ಮತ್ತೆ ಹೇಳುತ್ತೇನೆ - ನೀನು ನನ್ನನ್ನು ಸರ್ವೇಶ್ವರನೆಂದು ತಿಳಿದುಕೊಳ್ಳುವಂತೆ ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡಿಸುವೆನು; ಆಗ ಅದು ರಕ್ತವಾಗುವುದು. |
೧೮. ನದಿಯಲ್ಲಿರುವ ಮೀನುಗಳು ಸಾಯುವುವು. ನದಿಯು ಹೊಲಸಾಗಿ ನಾರುವುದು. ಅದರಲ್ಲಿ ನೀರನ್ನು ಕುಡಿಯಲು ಈಜಿಪ್ಟಿನವರಿಗೆ ಹೇಸಿಗೆಯಾಗುವುದು'.” |
೧೯. ಸರ್ವೇಶ್ವರ ಮತ್ತೆ ಮೋಶೆಗೆ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟ್ ದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲ ಸ್ಥಳಗಳ ಮೇಲೆ ಅದನ್ನು ಚಾಚು’ ಎಂದು ಹೇಳು. ಅವನು ಚಾಚುವಾಗ ಆ ನೀರೆಲ್ಲ ರಕ್ತವಾಗುವುದು. ಈಜಿಪ್ಟ್ ದೇಶದಲ್ಲೆಲ್ಲೂ ಮರದ ತೊಟ್ಟಿಗಳಲ್ಲೂ ಕಲ್ಲಿನ ಬಾನೆಗಳಲ್ಲೂ ಕೂಡ ರಕ್ತ ತುಂಬಿರುವುದು.” |
೨೦. ಮೋಶೆ ಮತ್ತು ಆರೋನರು ಸರ್ವೇಶ್ವರ ಸ್ವಾಮಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಫರೋಹನ ಹಾಗು ಅವನ ಪರಿವಾರದ ಮುಂದೆ ಆರೋನನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಹೊಡೆದನು. ಅದೆಲ್ಲ ರಕ್ತಮಯ ಆಯಿತು. |
೨೧. ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿ ಹೊಲಸಾಗಿ ನಾರುತ್ತಿತ್ತು. ಈಜಿಪ್ಟಿನವರು ಅದರ ನೀರನ್ನು ಕುಡಿಯಲಾರದೆ ಹೋದರು. ಈಜಿಪ್ಟ್ ದೇಶವೆಲ್ಲಾ ರಕ್ತಮಯ ಆಯಿತು. |
೨೨. ಆದರೆ ಈಜಿಪ್ಟ್ ದೇಶದ ಮಾಟಗಾರರು ಕೂಡ ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನ ಹೃದಯ ಕಠಿಣವಾಯಿತು. ಸರ್ವೇಶ್ವರ ಈ ಮೊದಲೇ ತಿಳಿಸಿದ್ದಂತೆ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆಹೋದನು. |
೨೩. ಈ ಸೂಚಕಕಾರ್ಯವನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಫರೋಹನು ತನ್ನ ಅರಮನೆಗೆ ಹಿಂದಿರುಗಿದನು. |
೨೪. ಈಜಿಪ್ಟಿನವರೆಲ್ಲರು ಆ ನದಿಯ ನೀರನ್ನು ಕುಡಿಯಲಾಗದೆ, ಕುಡಿಯುವ ನೀರಿಗಾಗಿ ಅದರ ಸುತ್ತಲು ಅಗೆದರು. |
೨೫. ಸರ್ವೇಶ್ವರ ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ಕಳೆದವು. |
ವಿಮೋಚನಾಕಾಂಡ ೮:೧-೩೨ |
೧. ತರುವಾಯ ಸರ್ವೇಶ್ವರ ಸ್ವಾಮಿ ಮೋಶೆಗೆ ಇಂತೆಂದರು: “ನೀನು ಫರೋಹನ ಬಳಿಗೆ ಹೋಗಿ ಹೀಗೆಂದು ಹೇಳು - ‘ಸರ್ವೇಶ್ವರ ನಿನಗೆ ಮಾಡುವ ಆಜ್ಞೆ ಇದು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಹೋಗಲು ಅಪ್ಪಣೆ ಕೊಡು. |
೨. ಕೊಡದೆ ಹೋದರೆ ನಿನ್ನ ದೇಶಕ್ಕೆಲ್ಲಾ ಕಪ್ಪೆಗಳ ಕಾಟ ತಗಲುವಂತೆ ಮಾಡುವೆನು. |
೩. ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ಹೊರಟುಬಂದು ನಿನ್ನ ಅರಮನೆಯಲ್ಲೂ ಮಲಗುವ ಕೋಣೆಯಲ್ಲೂ ನಿನ್ನ ಹಾಸಿಗೆಯಲ್ಲೂ ನಿನ್ನ ಪರಿವಾರದವರ ಹಾಗು ಪ್ರಜೆಗಳ ಮನೆಗಳಲ್ಲೂ ಒಲೆಗಳಲ್ಲೂ ಹಿಟ್ಟುನಾದುವ ಹರಿವಾಣಗಳಲ್ಲೂ ಕಾಣಿಸಿಕೊಳ್ಳುವುವು. |
೪. ನಿನ್ನ ಮೇಲೆ, ನಿನ್ನ ಪ್ರಜೆಗಳ ಮೇಲೆ ಹಾಗೂ ಪರಿವಾರದವರ ಮೇಲೆ ಆ ಕಪ್ಪೆಗಳು ಏರಿ ಬರುವುವು'.” |
೫. ಸರ್ವೇಶ್ವರ, ಮೋಶೆಯ ಸಂಗಡ ಮಾತಾಡಿ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ಕಾಲುವೆ, ಹೊಳೆ, ಕೆರೆ ಇವುಗಳ ಮೇಲೆ ಚಾಚು. ಆಗ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಏರಿಬರುವುವು, ಎಂದು ಹೇಳು.” |
೬. ಆರೋನನು ಈಜಿಪ್ಟ್ ದೇಶದಲ್ಲಿ ನೀರಿರುವ ಎಲ್ಲ ಸ್ಥಳಗಳ ಮೇಲೆ ಕೈಚಾಚಲು ಕಪ್ಪೆಗಳು ಹೊರಟುಬಂದು ದೇಶವನ್ನೆಲ್ಲಾ ತುಂಬಿಕೊಂಡವು. |
೭. ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಹಾಗೆಯೇ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು. |
೮. ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಸರ್ವೇಶ್ವರನನ್ನು ಪ್ರಾರ್ಥನೆಮಾಡಿ ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಿರಿ. ಹಾಗೆ ಮಾಡಿದರೆ ಸರ್ವೇಶ್ವರನಿಗೆ ಬಲಿ ಒಪ್ಪಿಸುವಂತೆ ನಿಮ್ಮ ಜನರಿಗೆ ನಾನು ಹೋಗಲು ಅಪ್ಪಣೆ ಕೊಡುತ್ತೇನೆ,” ಎಂದನು. |
೯. ಅದಕ್ಕೆ ಮೋಶೆ, \ಈ ಕಪ್ಪೆಗಳು ತಮ್ಮ ಬಳಿಯಿಂದಲೂ ತಮ್ಮ ಮನೆ ಮಾರುಗಳಿಂದಲೂ ತೊಲಗಿಹೋಗಿ ನದಿಯಲ್ಲಿ ಮಾತ್ರ ಉಳಿಯುವಂತೆ ನಾನು ಯಾವಾಗ ತಮ್ಮ ಪರವಾಗಿ, ತಮ್ಮ ಪ್ರಜಾಪರಿವಾರದ ಪರವಾಗಿ ಪ್ರಾರ್ಥನೆ ಸಲ್ಲಿಸಬೇಕು? ತಮ್ಮ ಘನಚಿತ್ತಕ್ಕೆ ಸರಿತೋರಿದಂತೆ ತಾವೇ ಅದಕ್ಕೊಂದು ಕಾಲವನ್ನು ನಿಗದಿಮಾಡಬೇಕು,” ಎಂದು ಫರೋಹನನ್ನು ವಿನಂತಿಸಿದನು. |
೧೦. ಅವನು, “ನಾಳೆಯೇ ಆಗಲಿ” ಎಂದನು. ಅದಕ್ಕೆ ಮೋಶೆ, “ತಮ್ಮ ಮಾತಿನ ಪ್ರಕಾರವೇ ಆಗುವುದು. |
೧೧. ಕಪ್ಪೆಗಳು ತಮ್ಮನ್ನೂ ತಮ್ಮ ಮನೆಮಾರುಗಳನ್ನೂ ತಮ್ಮ ಪ್ರಜಾಪರಿವಾರಗಳನ್ನೂ ಬಿಟ್ಟು ನದಿಯಲ್ಲಿ ಮಾತ್ರ ಇರುವುವು. ಇದರಿಂದ ನಮ್ಮ ದೇವರಾದ ಸರ್ವೇಶ್ವರನಿಗೆ ಸಮಾನರು ಯಾರೂ ಇಲ್ಲವೆಂದು ತಾವೇ ತಿಳಿದುಕೊಳ್ಳುವಿರಿ,” ಎಂದನು. |
೧೨. ಮೋಶೆ ಮತ್ತು ಆರೋನರು ಫರೋಹನ ಬಳಿಯಿಂದ ಹೊರಟುಹೋದರು. ಫರೋಹನ ಮೇಲೆ ಬರಮಾಡಿದ್ದ ಕಪ್ಪೆಗಳ ಕಾಟವನ್ನು ತೊಲಗಿಸಬೇಕೆಂದು ಮೋಶೆ ಪ್ರಾರ್ಥನೆ ಮಾಡಿದನು. |
೧೩. ಸರ್ವೇಶ್ವರ ಅವನ ಪ್ರಾರ್ಥನೆಯ ಪ್ರಕಾರವೇ ಮಾಡಿದರು. ಮನೆಗಳಲ್ಲೂ ಅಂಗಳಗಳಲ್ಲೂ ಹೊಲಗದ್ದೆಗಳಲ್ಲೂ ಇದ್ದ ಕಪ್ಪೆಗಳು ಸತ್ತುಹೋದವು. |
೧೪. ಜನರು ಅವುಗಳನ್ನು ರಾಶಿರಾಶಿಯಾಗಿ ಕೂಡಿಸಿದರು. ದೇಶವೆಲ್ಲ ದುರ್ವಾಸನೆಯಿಂದ ತುಂಬಿಹೋಯಿತು. |
೧೫. ಕಾಟ ತೀರಿತೆಂದು ತಿಳಿದುಕೊಂಡಾಗ ಫರೋಹನು ತನ್ನ ಹೃದಯವನ್ನು ಮೊಂಡಾಗಿಸಿಕೊಂಡನು. ಸರ್ವೇಶ್ವರ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆಹೋದನು. |
೧೬. ಬಳಿಕ ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ಚಾಚಿ ನೆಲದ ಧೂಳನ್ನು ಹೊಡೆ. ಆಗ ಈಜಿಪ್ಟಿನ ದೇಶದಲ್ಲೆಲ್ಲ ನೆಲದ ಧೂಳು ಹೇನುಗಳಾಗುವುದು' ಎಂದು ಹೇಳು.” |
೧೭. ಅವರು ಹಾಗೆಯೆ ಮಾಡಿದರು. ಆರೋನನು ಕೋಲನ್ನು ಹಿಡಿದು ಕೈಚಾಚಿ ಧೂಳನ್ನು ಹೊಡೆದನು. ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿಕೊಂಡವು. ಈಜಿಪ್ಟ್ ದೇಶದಲ್ಲೆಲ್ಲಾ ನೆಲದ ಧೂಳು ಹೇನುಗಳಾದವು. |
೧೮. ಮಾಟಗಾರರು ತಮ್ಮ ತಂತ್ರ ಮಂತ್ರಗಳಿಂದ ಹಾಗೆಯೇ ಹೇನುಗಳನ್ನು ಉಂಟುಮಾಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಆ ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿದ್ದವು. |
೧೯. ಆಗ ಆ ಮಾಟಗಾರರು, “ಇದು ದೇವರ ಕೆಲಸವೇ ಸರಿ,” ಎಂದು ಫರೋಹನಿಗೆ ತಿಳಿಸಿದರು. ಆದರೂ ಫರೋಹನ ಹೃದಯ ಕಲ್ಲಾಗಿತ್ತು. ಸರ್ವೇಶ್ವರ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆಹೋದನು. |
೨೦. ತರುವಾಯ ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಬೆಳಿಗ್ಗೆ ಎದ್ದು ಫರೋಹನಿಗಾಗಿ ಕಾದು ನಿಂತುಕೊ. ಅವನು ನದಿಗೆ ಹೋಗಲು ಬರುತ್ತಾನೆ. ಅವನಿಗೆ ಹೀಗೆಂದು ಹೇಳು: ‘ಸರ್ವೇಶ್ವರ ನಿಮಗೆ ಆಜ್ಞಾಪಿಸುವ ಮಾತುಗಳಿವು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆಕೊಡು. |
೨೧. ಕೊಡದೆ ಹೋದರೆ ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಮಾರುಗಳಿಗೂ ನೊಣಗಳ ಕಾಟವನ್ನು ಉಂಟುಮಾಡುವೆನು. ಈಜಿಪ್ಟಿನವರು ವಾಸಿಸುವ ಮನೆಗಳಲ್ಲೂ ಅವರು ಕಾಲೂರುವ ನೆಲಗಳಲ್ಲೂ ಆ ನೊಣಗಳು ತುಂಬಿಕೊಳ್ಳುವುವು. |
೨೨. ಆ ದಿನದಲ್ಲಿ ನನ್ನ ಜನರು ವಾಸವಾಗಿರುವ ಗೋಷೆನ್ ಪ್ರಾಂತ್ಯಕ್ಕೆ ಈ ಪಿಡುಗು ತಗಲದಂತೆ ಮಾಡುವೆನು. ಅಲ್ಲಿ ಈ ಕಾಟ ಇರುವುದಿಲ್ಲ. ಇದರಿಂದ ಭೂಲೋಕವನ್ನಾಳುವ ಸರ್ವೇಶ್ವರನು ನಾನೇ ಎಂದು ನೀನು ಅರಿತುಕೊಳ್ಳಬೇಕು. |
೨೩. ಹೀಗೆ ನನ್ನ ಜನರಿಗೂ ನಿನ್ನ ಜನರಿಗೂ ವ್ಯತ್ಯಾಸ ಉಂಟುಮಾಡುವೆನು. ನಾಳೆಯೇ ಈ ಸೂಚಕಕಾರ್ಯ ನಡೆಯುವುದು, ಎಂದು ಹೇಳು.\ |
೨೪. ಸರ್ವೇಶ್ವರ ಹಾಗೆಯೇ ಮಾಡಿದರು. ನೊಣಗಳು ಫರೋಹನ ಅರಮನೆಯಲ್ಲೂ ಅವನ ಪರಿವಾರದವರ ಮನೆಗಳಲ್ಲೂ ಸಮಸ್ತ ಈಜಿಪ್ಟ್ ದೇಶದಲ್ಲೂ ಬಹಳವಾಗಿ ತುಂಬಿಕೊಂಡವು. ಅವುಗಳಿಂದ ದೇಶ ಹಾಳಾಯಿತು. |
೨೫. ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಸಿ, “ನೀವು ಹೋಗಿ ಈ ದೇಶದಲ್ಲೇ ನಿಮ್ಮ ದೇವರಿಗೆ ಬಲಿಯನ್ನೊಪ್ಪಿಸಬಹುದು,” ಎಂದನು. |
೨೬. ಆದರೆ ಮೋಶೆ, “ಹಾಗೆ ಮಾಡುವುದು ಸರಿಯಲ್ಲ. ನಮ್ಮ ದೇವರಾದ ಸರ್ವೇಶ್ವರನಿಗೆ ನಾವು ಬಲಿಯಾಗಿ ಕೊಡುವ ಆಹುತಿ ಈಜಿಪ್ಟಿನವರಿಗೆ ನಿಷಿದ್ಧವಾದದ್ದು. ನಿಷಿದ್ಧವೆಂದು ಈಜಿಪ್ಟಿನವರು ತಿಳಿದುಕೊಂಡು ಇರುವ ಆಹುತಿಯನ್ನು ನಾವು ಅವರ ಕಣ್ಮುಂದೆಯೇ ಮಾಡಿದರೆ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರಲ್ಲವೆ? |
೨೭. ನಾವು ಮರುಭೂಮಿಯಲ್ಲಿ ಮೂರು ದಿವಸದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸುವ ಪ್ರಕಾರ ಬಲಿಯೊಪ್ಪಿಸಬೇಕಾಗಿದೆ’.\ ಎಂದನು. |
೨೮. ಅದಕ್ಕೆ ಫರೋಹನು, “ಒಳ್ಳೆಯದು, ಮರುಭೂಮಿಯಲ್ಲಿ ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನಿಮಗೆ ಅಪ್ಪಣೆಕೊಡುತ್ತೇನೆ. ಆದರೆ ದೂರ ಹೋಗಕೂಡದು. ನನಗಾಗಿ ಪ್ರಾರ್ಥನೆ ಮಾಡಬೇಕು,” ಎಂದನು. |
೨೯. ಆಗ ಮೋಶೆ, “ನಿಮ್ಮ ಬಳಿಯಿಂದ ಹೊರಟಾಗಲೆ ಫರೋಹನಾದ ನಿಮಗೂ ನಿಮ್ಮ ಪ್ರಜಾಪರಿವಾರದವರಿಗೂ ನೊಣಗಳ ಕಾಟ ನಾಳೆಯಿಂದ ಇರಬಾರದೆಂದು ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತೇನೆ. ಆದರೆ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನೀವು ಜನರಿಗೆ ಅಪ್ಪಣೆಕೊಡದೆ ವಂಚನೆ ಮಾಡಬಾರದು,” ಎಂದನು. |
೩೦. ಮೋಶೆ ಫರೋಹನ ಬಳಿಯಿಂದ ಹೊರಟು ಸರ್ವೇಶ್ವರ ಸ್ವಾಮಿಗೆ ಪ್ರಾರ್ಥನೆ ಮಾಡಿದನು. |
೩೧. ಅವನ ಪ್ರಾರ್ಥನೆಯ ಮೇರೆಗೆ ಸರ್ವೇಶ್ವರ ಮಾಡಿದರು. ಆ ನೊಣಗಳೆಲ್ಲ ಫರೋಹನ ಹಾಗು ಅವನ ಪ್ರಜಾಪರಿವಾರದವರ ಬಳಿಯಿಂದ ತೊಲಗಿಹೋದವು. ಒಂದೂ ಉಳಿಯಲಿಲ್ಲ. |
೩೨. ಆದರೂ ಫರೋಹನು ಮತ್ತೆ ತನ್ನ ಹೃದಯವನ್ನು ಮೊಂಡುಮಾಡಿಕೊಂಡು ಜನರಿಗೆ ಹೋಗಲು ಅಪ್ಪಣೆಕೊಡದೆ ಹೋದನು. |
ಕೀರ್ತನೆಗಳು ೧೭:೧-೭ |
೧. ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ I ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ II |
೨. ನ್ಯಾಯತೀರ್ಪು ಬರಲಿ ಎನಗೆ, ನಿನ್ನಿಂದಲೆ I ನೀತಿಗನುಸಾರ ನೋಡುವಾತ, ನೀನಲ್ಲವೆ? II |
೩. ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು I ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು II |
೪. ಲೋಕವಿಚಾರಗಳಲಿ ಹಿಂಸಾತ್ಮಕ ಮಾರ್ಗ ಹಿಡಿದಿಲ್ಲ I ನಿನ್ನಧರ ವಚನವನು ನಾನೆಂದಿಗು ಮೀರಿ ನಡೆದಿಲ್ಲ II |
೫. ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ I ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ II |
೬. ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ I ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ II |
೭. ಶರಣರನು ಶತ್ರುವಿಂದ ಸಂರಕ್ಷಿಸುವಾತ ನೀನಯ್ಯಾ I ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ I ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ II |
ಜ್ಞಾನೋಕ್ತಿಗಳು ೫:೧೫-೨೦ |
೧೫. ನಿನ್ನ ಸ್ವಂತ ಕೊಳದ ನೀರನ್ನೇ ಸೇವಿಸು, ನಿನ್ನ ಬಾವಿಯಿಂದ ಉಕ್ಕಿಬರುವ ಜಲವನ್ನೇ ಕುಡಿ. |
೧೬. ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ? |
೧೭. ಅವು ನಿನಗೊಬ್ಬನಿಗೇ ಮೀಸಲಾಗಿರಲಿ; ನಿನ್ನೊಡನೆ ಬೇರೊಬ್ಬನ ಪಾಲಾಗದಿರಲಿ. |
೧೮. ನಿನ್ನ ಬುಗ್ಗೆ ದೇವರಿಂದ ಆಶೀರ್ವಾದಹೊಂದಲಿ, ನಿನ್ನ ಆನಂದ ನಿನ್ನ ಯೌವನಕಾಲದ ಹೆಂಡತಿಯಲ್ಲಿರಲಿ. |
೧೯. ಆಕೆ ಮನೋಹರವಾದ ಹರಿಣಿ, ಸುಂದರವಾದ ಜಿಂಕೆಮರಿ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಒಲವಿನಲ್ಲೇ ಸದಾ ತಲ್ಲೀನನಾಗಿರು. |
೨೦. ಮಗನೇ, ಪರಸ್ತ್ರೀಯಲ್ಲಿ ಭ್ರಮೆ ಏಕೆ? ಅನ್ಯಳ ಎದೆ ತಬ್ಬಿಕೊಳ್ಳುವುದೇಕೆ? |
ಮತ್ತಾಯನು ೧೯:೧-೩೦ |
೧. ಈ ವಿಷಯಗಳನ್ನು ಹೇಳಿಯಾದ ಮೇಲೆ, ಯೇಸುಸ್ವಾಮಿ ಗಲಿಲೇಯವನ್ನು ಬಿಟ್ಟು ಜೋರ್ಡನ್ ನದಿಯ ಆಚೆಕಡೆ ಇದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. |
೨. ದೊಡ್ಡ ಜನಸ್ತೋಮ ಅವರನ್ನು ಹಿಂಬಾಲಿಸಿತು. ಅಲ್ಲಿ ಯೇಸು ಅವರಿಗೆ ಆರೋಗ್ಯದಾನ ಮಾಡಿದರು. |
೩. ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು. |
೪. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ಉಂಟುಮಾಡಿದರು ಎಂದೂ, |
೫. ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೇ? |
೬. ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,” ಎಂದರು. |
೭. \ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?” ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. |
೮. “ನಿಮ್ಮ ಹೆಂಡತಿಯನ್ನು ನೀವು ಬಿಟ್ಟುಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. |
೯. ನಾನು ನಿಮಗೆ ಹೇಳುವುದನ್ನು ಕೇಳಿ; ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ.” |
೧೦. ಶಿಷ್ಯರು ಆಗ, “ಸತಿಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆಮಾಡಿಕೊಳ್ಳದಿರುವುದೇ ಲೇಸು,” ಎಂದರು. |
೧೧. ಅದಕ್ಕೆ ಯೇಸು, “ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. |
೧೨. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,” ಎಂದರು. |
೧೩. ಅನಂತರ ಕೆಲವರು ಚಿಕ್ಕಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಂಡರು. ಶಿಷ್ಯರು ಅವರನ್ನು ಗದರಿಸಿದರು. |
೧೪. ಆಗ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ, ಸ್ವರ್ಗಸಾಮ್ರಾಜ್ಯ ಇಂಥವರದೇ,” ಎಂದರು. |
೧೫. ತರುವಾಯ ಆ ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟುಹೋದರು. |
೧೬. ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, “ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?” ಎಂದು ಕೇಳಿದನು. |
೧೭. ಅದಕ್ಕೆ ಅವರು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಚರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು,” ಎಂದರು. |
೧೮. “ಅವು ಯಾವುವು?” ಎಂದು ಮರುಪ್ರಶ್ನೆ ಹಾಕಿದ. ಅವನಿಗೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು |
೧೯. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸಬೇಕು,” ಎಂದರು. |
೨೦. ಅದಕ್ಕೆ ಆ ಯುವಕ, “ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆ ಇದೆ?” ಎಂದು ಮತ್ತೆ ಕೇಳಿದ. |
೨೧. ಆಗ ಯೇಸು, “ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. |
೨೨. ಇದನ್ನು ಕೇಳಿದ್ದೇ ಆ ಯುವಕ ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟೇಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು. |
೨೩. ಆಗ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. |
೨೪. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ,” ಎಂದರು. |
೨೫. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. “ಹಾಗಾದರೆ, ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದುಕೊಂಡರು. |
೨೬. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, “ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದರು. |
೨೭. ಪೇತ್ರನು ಆಗ ಮುಂದೆ ಬಂದು, “ನೋಡಿ, ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?” ಎಂದು ಕೇಳಿದನು. |
೨೮. ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. |
೨೯. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳುಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರಜೀವಕ್ಕೆ ಬಾಧ್ಯಸ್ಥನಾಗುವನು. |
೩೦. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು. |