ಕ್ರಾನಿಕಲ್ಸ್ ೧ ೧೩:೧-೧೪ |
೧. ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು. |
೨. “ನೀವು ಎಲ್ಲರು ಸಮ್ಮತಿಸಿದರೆ, ಇದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಚಿತ್ತವಾಗಿದ್ದರೆ, ಇಲ್ಲಿ ನಮ್ಮೊಂದಿಗೆ ಶೀಘ್ರವಾಗಿ ಬಂದು ಸೇರಬೇಕೆಂದು ಉಳಿದ ಎಲ್ಲಾ ನಮ್ಮ ದೇಶಬಾಂಧವರಿಗೆ, ಯಾಜಕ-ಲೇವಿಯರಿಗೆ ಹಾಗು ಅವರ ಪಟ್ಟಣಗಳಿಗೆ ಸಂದೇಶವನ್ನು ಕಳುಹಿಸೋಣ. |
೩. ಅನಂತರ ನಾವು ಹೋಗಿ ಅರಸ ಸೌಲ ನಿರ್ಲಕ್ಷಿಸಿದ್ದ ದೇವಮಂಜೂಷವನ್ನು ತೆಗೆದುಕೊಂಡು ಬರೋಣ,” ಎಂದು ಜನರೆಲ್ಲರಿಗೆ ಸಲಹೆ ಮಾಡಿದನು. |
೪. ಈ ಸಲಹೆಯನ್ನು ಸರ್ವರೂ ಮೆಚ್ಚಿ ಅನುಮೋದಿಸಿದರು. |
೫. ಹೀಗೆ ಅರಸ ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ದೇವಮಂಜೂಷವನ್ನು ತರಲು ದೇಶದ ಎಲ್ಲಾ ಕಡೆಗಳಿಂದಲೂ, ದಕ್ಷಿಣದ ಈಜಿಪ್ಟ್ ಗಡಿಯಿಂದ ಉತ್ತರದ ಹಾಮಾತ್ ಕಣಿವೆಯವರೆಗಿನ ಜನರನ್ನು ಒಂದುಗೂಡಿಸಿದನು. |
೬. ದಾವೀದನೂ ಜನರೂ ಜುದೇಯದಲ್ಲಿ ‘ಬಾಳಾ’ ಎಂದು ಹೆಸರುಗೊಂಡಿದ್ದ ಕಿರ್ಯತ್ಯಾರೀಮ ಪಟ್ಟಣಕ್ಕೆ ಮಂಜೂಷವನ್ನು ತರಲು ಹೋದರು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನರಾಗಿರುವ ಸರ್ವೇಶ ದೇವರ ನಾಮದಿಂದ ಸುಪ್ರಸಿದ್ಧವಾಗಿತ್ತು. |
೭. ಅಬೀನಾದಾಬಿನ ಮನೆಯಿಂದ ಆ ದೇವಮಂಜೂಷವನ್ನು ಹೊರಗೆ ತಂದು, ಒಂದು ಹೊಸ ಎತ್ತಿನ ಬಂಡಿಯ ಮೇಲಿಟ್ಟರು. ಉಜ್ಜನೂ ಅಹಿಯೋವನೂ ಬಂಡಿಯನ್ನು ನಡೆಸುತ್ತಿದ್ದರು. |
೮. ದಾವೀದನೂ ಎಲ್ಲಾ ಜನರೂ ಕಿನ್ನರಿ, ಸ್ವರಮಂಡಲ, ತಮಟೆ, ತಾಳ, ತುತೂರಿ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಪೂರ್ಣಶಕ್ತಿಯಿಂದ ಹಾಡುತ್ತಾ ದೇವರ ಮುಂದೆ ನರ್ತಿಸುತ್ತಾ ನಡೆದರು. |
೯. ಕೀದೋನ್ ಎಂಬಲ್ಲಿ ಕಾಳುತೂರುವ ಕಣಕ್ಕೆ ಬಂದಾಗ ಎತ್ತುಗಳು ಎಡವಿದವು. ಆಗ ಉಜ್ಜನು ತನ್ನ ಕೈಗಳನ್ನು ಚಾಚಿ ದೇವಮಂಜೂಷವನ್ನು ಹಿಡಿದುಕೊಂಡನು. |
೧೦. ಮಂಜೂಷವನ್ನು ಮುಟ್ಟಿದ್ದಕ್ಕಾಗಿ ಕೂಡಲೇ ಸರ್ವೇಶ್ವರ ಉಜ್ಜನ ಮೇಲೆ ಉಗ್ರಕೋಪ ತಾಳಿ ಅವನನ್ನು ಕೊಂದುಹಾಕಿದರು. ದೇವರ ಸನ್ನಿಧಿಯಲ್ಲಿಯೇ ಅವನು ಮರಣ ಹೊಂದಿದನು. |
೧೧. ಆ ಸ್ಥಳಕ್ಕೆ ಅಂದಿನಿಂದ ‘ಪೆರೆಚ್ ಉಜ್ಜ’ ಎಂಬ ಹೆಸರು ಬಂತು. ಸರ್ವೇಶ್ವರ ಕೋಪದಿಂದ ಉಜ್ಜನನ್ನು ಶಿಕ್ಷಿಸಿದ್ದಕ್ಕಾಗಿ ದಾವೀದನು ಭಯದಿಂದ ಕಂಗೆಟ್ಟನು. |
೧೨. ಸರ್ವೇಶ್ವರನ ಭಯದಿಂದ ದಾವೀದನು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ಈಗ ಹೇಗೆ ತಾನೆ ತೆಗೆದುಕೊಂಡು ಹೋಗಲಿ?” ಎಂದು ಕಳವಳಪಟ್ಟನು. |
೧೩. ಅದನ್ನು ಜೆರುಸಲೇಮಿಗೆ ತನ್ನೊಂದಿಗೆ ತೆಗೆದುಕೊಂಡು ಹೋಗಲಿಲ್ಲ. ಗತ್ ಊರಿನ ನಿವಾಸಿ ಓಬೇದೆದೋಮನ ಮನೆಯಲ್ಲಿ ಅದನ್ನು ಇರಿಸಿದನು. |
೧೪. ಅದು ಅಲ್ಲಿ ಮೂರು ತಿಂಗಳು ಇತ್ತು. ಸರ್ವೇಶ್ವರ ಆ ಅವಧಿಯಲ್ಲಿ ಓಬೇದೆದೋಮನ ಕುಟುಂಬವನ್ನೂ ಅವನಿಗೆ ಇದ್ದುದೆಲ್ಲವನ್ನೂ ಆಶೀರ್ವದಿಸಿದರು. |
ಕ್ರಾನಿಕಲ್ಸ್ ೧ ೧೪:೧-೧೭ |
೧. ಟೈರಿನ ಅರಸ ಹೀರಾಮನು ದಾವೀದನ ಬಳಿಗೆ ತನ್ನ ವಾಣಿಜ್ಯ ನಿಯೋಗವನ್ನು ಕಳುಹಿಸಿದನು. ಅರಮನೆಯನ್ನು ಕಟ್ಟಲು ಅವನಿಗೆ ದೇವದಾರು ಮರದ ದಿಮ್ಮಿಗಳನ್ನು, ಶಿಲ್ಪಿಗಳನ್ನು ಹಾಗು ಬಡಗಿಯವರನ್ನು ಕಳುಹಿಸಿಕೊಟ್ಟನು. |
೨. ಹೀಗೆ ದಾವೀದನು ದೇವಪ್ರಜೆಗಳಾದ ಇಸ್ರಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿ ತನ್ನನ್ನು ಇಸ್ರಯೇಲ್ ರಾಜನನ್ನಾಗಿ ಸ್ಥಿರಪಡಿಸುವರೆಂದು ತಿಳಿದುಕೊಂಡನು. |
೩. ಜೆರುಸಲೇಮಿನಲ್ಲೂ ದಾವೀದನು ಹಲವು ಮಹಿಳೆಯರನ್ನು ವಿವಾಹವಾಗಿ ಇನ್ನೂ ಕೆಲವು ಮಂದಿ ಗಂಡು ಮಕ್ಕಳನ್ನೂ ಹೆಣ್ಣು ಮಕ್ಕಳನ್ನೂ ಪಡೆದನು. |
೪. ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, |
೫. ಇಬ್ಹಾರ್, ಎಲೀಷೂವ, ಎಲ್ಪೆಲೆಟ್, |
೬. ನೋಗಹ, ನೆಫೆಗ್, ಯಾಫೀಯ, |
೭. ಎಲೀಷಾಮ, ಬೇಲ್ಯಾದ ಹಾಗು ಎಲೀಫೆಲೆಟ್ ಎಂಬವರು. |
೮. ದಾವೀದನು ಇಸ್ರಯೇಲರೆಲ್ಲರ ಇಡೀ ನಾಡಿಗೆ ಅರಸನಾಗಿ ಅಭಿಷಿಕ್ತನಾಗಿದ್ದಾನೆಂಬ ವರ್ತಮಾನವನ್ನು ಫಿಲಿಷ್ಟಿಯರು ಕೇಳಿದರು. ಅವನನ್ನು ಸೆರೆಹಿಡಿಯಲು ತಮ್ಮ ಸೈನ್ಯವನ್ನು ಕಳುಹಿಸಿದರು. ದಾವೀದನು ಅವರನ್ನು ಎದುರಿಸಲು ಸಿದ್ಧನಾದನು. |
೯. ಫಿಲಿಷ್ಟಿಯರು ರೆಫಾಯಿಮ್ ಕಣಿವೆಯನ್ನು ತಲುಪಿ ಸುಲಿಗೆಮಾಡಲು ಪ್ರಾರಂಭಿಸಿದರು. |
೧೦. “ಫಿಲಿಷ್ಟಿಯರ ಮೇಲೆ ನಾನು ದಾಳಿಮಾಡಬಹುದೊ? ನೀವು ನನಗೆ ಜಯವನ್ನು ಕೊಡುವಿರೋ\, ಎಂದು ದಾವೀದನು ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸಿದನು. “ಹೌದು, ಅವರನ್ನು ಎದುರಿಸು, ನಾನು ನಿನಗೆ ಜಯವನ್ನು ಕೊಡುವೆನು,” ಎಂದು ಸರ್ವೇಶ್ವರ ಉತ್ತರಕೊಟ್ಟರು. |
೧೧. ಹೀಗೆ ದಾವೀದ ಬಾಳ್ ಪೆರಾಚೀಮ್ ಎಂಬಲ್ಲಿ ಅವರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನುಗ್ಗಿ, ವೈರಿಸೈನ್ಯವನ್ನು ನಾಶಮಾಡಲು ಸರ್ವೇಶ್ವರ ನನ್ನನ್ನು ಉಪಯೋಗಿಸಿದ್ದಾರೆ,” ಎಂದು ಹೇಳಿದನು. ಈ ಕಾರಣ ಆ ಸ್ಥಳಕ್ಕೆ ‘ಬಾಳ್ ಪೆರಾಚೀಮ್’ ಎಂಬ ಹೆಸರು ಬಂದಿತು. |
೧೨. ಫಿಲಿಷ್ಟಿಯರು ತಲೆ ತಪ್ಪಿಸಿಕೊಂಡು ಓಡಿಹೋಗುವಾಗ ತಮ್ಮ ವಿಗ್ರಹಗಳನ್ನು ಅಲ್ಲೇ ಬಿಟ್ಟುಹೋದರು. ಅವೆಲ್ಲವನ್ನು ಸುಟ್ಟುಹಾಕಬೇಕೆಂದು ದಾವೀದನು ಅಪ್ಪಣೆಮಾಡಿದನು. |
೧೩. ಸ್ವಲ್ಪವೇ ಸಮಯದ ನಂತರ ಫಿಲಿಷ್ಟಿಯರು ಪುನಃ ಬಂದು ಕಣಿವೆಯಲ್ಲಿ ಕೊಳ್ಳೆ ಹೊಡೆಯಲು ಪ್ರಾರಂಭಿಸಿದರು. |
೧೪. ದಾವೀದನು ಮತ್ತೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದನು. “ನೀನು ಅವರನ್ನು ಬೆನ್ನಟ್ಟಬೇಡ, ಸುತ್ತಿಕೊಂಡು ಹೋಗಿ ಬಾಕಾಮರಗಳಿರುವ ಆಚೆಕಡೆಯಿಂದ ಅವರ ಮೇಲೆ ದಾಳಿಮಾಡು. |
೧೫. ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳುವಾಗ, ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನನಗೆ ಮುಂದಾಗಿ ಹೊರಟಿದ್ದಾರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದು ಸರ್ವೇಶ್ವರ ಉತ್ತರಕೊಟ್ಟರು. |
೧೬. ಸರ್ವೇಶ್ವರ ಹೇಳಿದಂತೆಯೇ ದಾವೀದನು ಮಾಡಿದನು. ಫಿಲಿಷ್ಟಿಯರನ್ನು ಗಿಬ್ಯೋನಿನಿಂದ ಗೆಜೆರಿನವರೆಗೂ ಹಿಮ್ಮೆಟ್ಟಿದನು. |
೧೭. ದಾವೀದನ ಹೆಸರು ಎಲ್ಲಾ ಕಡೆಗಳಲ್ಲಿ ಪ್ರಖ್ಯಾತಿಗೆ ಬಂದಿತು; ಎಲ್ಲಾ ದೇಶಗಳವರೂ ದಾವೀದನಿಗೆ ಭಯಪಡುವಂತೆ ಸರ್ವೇಶ್ವರ ಮಾಡಿದರು. |
ಕೀರ್ತನೆಗಳು ೭೮:೧-೧೧ |
೧. ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ I ಗಮನಕೊಡಿ ನಾ ಹೇಳುವ ಮಾತುಗಳಿಗೆ II |
೨. ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು I ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು II |
೩. ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II |
೪. ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II |
೫. ನೇಮವಿತ್ತನು ಯಕೋಬವಂಶಕೆ I ಶಾಸನಕೊಟ್ಟನು ಇಸ್ರಯೇಲರಿಗೆ II ವಿಧಿಸಿದ ನಿಂತು ನಮ್ಮ ಪೂರ್ವಜನರಿಗೆ I “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” II |
೬. “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II |
೭. ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II |
೮. ಮರೆಯರು ನನ್ನ ಮಹತ್ಕಾರ್ಯಗಳನು I ಇಡುವರು ನನ್ನಲ್ಲೇ ಭರವಸೆಯನು I ಕೈಗೊಳ್ಳುವರು ನನ್ನ ಆಜ್ಞೆಗಳನು II |
೯. ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ I ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ II |
೧೦. ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II |
೧೧. ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು I ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು: II |
ಜ್ಞಾನೋಕ್ತಿಗಳು ೧೯:೨೦-೨೧ |
೨೦. ಬುದ್ಧಿವಾದವನ್ನು ಕೇಳು, ತಿದ್ದುಪಾಟನ್ನು ಅಂಗೀಕರಿಸು; ಹಾಗೆ ಮಾಡಿದರೆ ಮುಂದಕ್ಕೆ ಜ್ಞಾನಿಯಾಗಿ ಬಾಳುವೆ. |
೨೧. ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು. |
ಪ್ರೇಷಿತರ ೭:೨೨-೪೩ |
೨೨. ಅವನು ಈಜಿಪ್ಟರ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ನಡೆಯಲ್ಲೂ ನುಡಿಯಲ್ಲೂ ಸಮರ್ಥನಾದನು. |
೨೩. “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು. |
೨೪. ಆಗ ಅವರಲ್ಲಿ ಒಬ್ಬನು ಈಜಿಪ್ಟಿನವನಿಂದ ಅನ್ಯಾಯವಾಗಿ ಹಿಂಸೆಪಡುತ್ತಿರುವುದನ್ನು ಕಂಡನು. ಅವನ ಸಹಾಯಕ್ಕೆ ಹೋಗಿ ಈಜಿಪ್ಟಿನವನನ್ನು ಕೊಂದು ಸೇಡುತೀರಿಸಿದನು. |
೨೫. ಸ್ವಜನರ ಬಿಡುಗಡೆಗೆ ದೇವರು ತನ್ನನ್ನು ನೇಮಿಸಿರುವರು; ತನ್ನ ಸ್ವಂತಜನರು ಇದನ್ನು ಅರ್ಥಮಾಡಿಕೊಳ್ಳುವರು ಎಂದು ಮೋಶೆ ಭಾವಿಸಿದ್ದನು. ಆದರೆ, ಅವರು ಅರ್ಥಮಾಡಿಕೊಳ್ಳಲಿಲ್ಲ. |
೨೬. ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನ ಪಡಿಸಲು ಯತ್ನಿಸಿದನು. |
೨೭. ಆಗ ಆಕ್ರಮಣ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ನ್ಯಾಯತೀರಿಸಲು ನಿನಗೆ ಅಧಿಕಾರವನ್ನು ಕೊಟ್ಟವರು ಯಾರು? |
೨೮. ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಪ್ರಶ್ನಿಸಿದನು. |
೨೯. ಇದನ್ನು ಕೇಳಿದ್ದೇ ಮೋಶೆ ಅಲ್ಲಿಂದ ಪಲಾಯನಮಾಡಿ ಮಿದ್ಯಾನರ ನಾಡಿನಲ್ಲಿ ಆಶ್ರಯ ಪಡೆದನು. ಅಲ್ಲಿರುವಾಗ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. |
೩೦. “ನಾಲ್ವತ್ತು ವರ್ಷಗಳಾದ ಮೇಲೆ ಒಂದು ದಿನ ಸೀನಾಯಿ ಬೆಟ್ಟದ ಮರಳುಗಾಡಿನಲ್ಲಿ ಉರಿಯುತ್ತಿದ್ದ ಪೊದೆಯೊಂದನ್ನು ಮೋಶೆ ಕಂಡನು. ಅದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು. |
೩೧. ಇದನ್ನು ಕಂಡ ಮೋಶೆ ವಿಸ್ಮಿತನಾದನು. ಅದನ್ನು ಚೆನ್ನಾಗಿ ನೋಡಲೆಂದು ಹತ್ತಿರಕ್ಕೆ ಬಂದಾಗ, |
೩೨. ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು. |
೩೩. ಸರ್ವೇಶ್ವರ ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ದೂರವಿಡು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು. |
೩೪. ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು. |
೩೫. “ ‘ನಮ್ಮ ನ್ಯಾಯತೀರಿಸುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?’ ಎಂದು ಇಸ್ರಯೇಲರಿಂದ ತಿರಸ್ಕೃತನಾದವನೇ ಆ ಮೋಶೆ. ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡ ತಮ್ಮ ದೂತನ ಮೂಲಕ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ನೇಮಿಸಿದ್ದು ಇವನನ್ನೇ. |
೩೬. ಈಜಿಪ್ಟಿನಲ್ಲೂ ಕೆಂಪುಸಮುದ್ರದಲ್ಲೂ ನಲವತ್ತು ವರ್ಷಕಾಲ ಮರಳು ಬೆಂಗಾಡಿನಲ್ಲೂ ಅದ್ಭುತಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಿ ಇಸ್ರಯೇಲರನ್ನು ಬಿಡುಗಡೆಮಾಡಿದವನು ಇವನೇ. |
೩೭. ‘ದೇವರು ನನ್ನನ್ನು ಕಳುಹಿಸಿದಂತೆ, ನಿಮ್ಮ ಜನಾಂಗದಿಂದಲೇ ಒಬ್ಬ ಪ್ರವಾದಿಯನ್ನು ಕಳುಹಿಸುವರು’ ಎಂದು ಇಸ್ರಯೇಲರಿಗೆ ತಿಳಿಸಿದವನು ಈ ಮೋಶೆಯೇ. |
೩೮. ಇಸ್ರಯೇಲರು ಮರಳುಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ. |
೩೯. “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು. |
೪೦. ಅವರು ಆರೋನನಿಗೆ, ‘ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು. ನಮಗೆ ಮುಂದಾಳಾಗಿ ಹೋಗಲು ಕೆಲವು ದೇವರುಗಳ ವಿಗ್ರಹಗಳನ್ನು ಮಾಡಿಕೊಡು,’ ಎಂದರು. |
೪೧. ಮಾತ್ರವಲ್ಲ, ಹೋರಿಕರುವಿನ ಆಕಾರದ ವಿಗ್ರಹವೊಂದನ್ನು ಮಾಡಿ ಅದಕ್ಕೆ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಿಗಾಗಿ ಮೆರೆದಾಡಿದರು. |
೪೨. ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ. |
೪೩. ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ. |