A A A A A

ಸಮುವೇಲನು ೨ ೭:೧-೨೯
೧. ಸರ್ವೇಶ್ವರನ ಅನುಗ್ರಹದಿಂದ ಸುತ್ತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು.
೨. ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು.
೩. ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
೪. ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
೫. “ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?
೬. ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆ.
೭. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ಕುಲನಾಯಕನನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ!”
೮. “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
೯. ನೀನು ಹೋದಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು.
೧೦. ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು.
೧೧. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚೆಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ. ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.
೧೨. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
೧೩. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
೧೪. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು.
೧೫. ಆದರೆ ನನ್ನ ಕೃಪೆ, ನಿನ್ನ ಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದಹಾಗೆ, ಅವನನ್ನು ಬಿಟ್ಟುಹೋಗುವುದಿಲ್ಲ.
೧೬. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
೧೭. ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
೧೮. ಬಳಿಕ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ಹೇ ಸರ್ವೇಶ್ವರಾ, ಸರ್ವೇಶ್ವರಾ, ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು!
೧೯. ಸರ್ವೇಶ್ವರಾ, ಸರ್ವೆಶ್ವರಾ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹು ಮುಂದಿನ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ಸರ್ವೇಶ್ವರಾ, ಸರ್ವೇಶ್ವರಾ, ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ!
೨೦. ಸರ್ವೇಶ್ವರಾ, ಸರ್ವೇಶ್ವರಾ, ನಿಮ್ಮ ದಾಸ ದಾವೀದನನ್ನು ಚೆನ್ನಾಗಿ ಬಲ್ಲಿರಿ; ನಾನು ಇನ್ನೇನು ಹೇಳಲಿ?
೨೧. ತಮ್ಮ ಸಂಕಲ್ಪ ಹಾಗೂ ದಯಾನುಸಾರ ಎಂತೆಂಥಾ ಮಹತ್ಕಾರ್ಯವನ್ನು ನಡೆಸಿದಿರಿ! ಅವುಗಳ ಅನುಭವವನ್ನೂ ನಿಮ್ಮ ದಾಸನಿಗಿತ್ತಿರಿ!
೨೨. ಹೇ ದೇವಾ, ಸರ್ವೇಶ್ವರಾ, ತಾವು ಮಹೋನ್ನತರು, ತಮಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದ ಅವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ತಮ್ಮ ಹೊರತು ದೇವರೇ ಇಲ್ಲ ಎಂಬುದು ನಿಶ್ಚಯ.
೨೩. ತಮ್ಮ ಇಸ್ರಯೇಲ್ ಪ್ರಜೆಗೆ ಸಮಾನಾದ ಜನಾಂಗ ಲೋಕದಲ್ಲಿ ಯಾವುದಿದೆ? ತಾವೇ ಬಂದು ಅದನ್ನು ವಿಮೋಚಿಸಿ, ಸ್ವಪ್ರಜೆಯನ್ನಾಗಿಸಿಕೊಂಡು, ನಿಮ್ಮ ನಾಮವನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟರು ಹಾಗು ಇತರ ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ, ರಕ್ಷಿಸಿ, ಅವುಗಳ ಕಣ್ಮುಂದೆಯೇ ನಿಮ್ಮ ನಾಡಿನವರ ಪರವಾಗಿ ವಿಸ್ಮಯಕರವಾದ ಮಹತ್ಕಾರ್ಯಗಳನ್ನು ನಡೆಸಿದಿರಿ.
೨೪. ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ; ಸರ್ವೇಶ್ವರಾ, ತಾವಾದಿರಿ ಅವರಿಗೆ ದೇವರು!
೨೫. “ದೇವರೇ, ಸರ್ವೆಶ್ವರಾ, ತಾವು ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ.
೨೬. ‘ಸರ್ವಶಕ್ತರಾದ ಸರ್ವೆಶ್ವರ, ಇಸ್ರಯೇಲರ ದೇವರು,’ ಎಂಬ ತಮ್ಮ ನಾಮಧೇಯಗಳಿಗೆ ಸದಾಕಾಲವೂ ಮಹಿಮೆ ಉಂಟಾಗಲಿ! ತಮ್ಮ ದಾಸ ದಾವೀದನ ಮನೆತನವು ನಿಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.
೨೭. ಸರ್ವಶಕ್ತರಾದ ಸರ್ವೇಶ್ವರಾ, ಇಸ್ರಯೇಲ್ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ.
೨೮. ಸರ್ವೇಶ್ವರಾ, ಸರ್ವೇಶ್ವರಾ, ನೀವು ನಮ್ಮ ದೇವರು; ನಿಮ್ಮ ವಾಕ್ಯ ಸತ್ಯವಾದದ್ದು; ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ್ದೀರಿ.
೨೯. ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಸದಾಕಾಲ ನಿಮ್ಮ ಅನುಗ್ರಹ ಅದರ ಮೇಲಿರಲಿ. ಸರ್ವೇಶ್ವರಾ, ಸರ್ವೇಶ್ವರಾ, ವಾಗ್ದಾನ ಮಾಡಿದವರು ತಾವೇ. ತಮ್ಮ ಆಶೀರ್ವಾದದಿಂದ ತಮ್ಮ ದಾಸನಾದ ನನ್ನ ಮನೆತನದಲ್ಲಿ ನಿತ್ಯ ಸೌಭಾಗ್ಯ ನೆಲಸಿರಲಿ!” ಎಂದನು.

ಸಮುವೇಲನು ೨ ೮:೧-೧೮
೧. ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ, ಅವರನ್ನು ಸೋಲಿಸಿದನು. ಅವರ ರಾಜಧಾನಿಯನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
೨. ಆಮೇಲೆ ಮೋವಾಬ್ಯರನ್ನು ಸೋಲಿಸಿದನು. ಸೆರೆಯಾಳುಗಳನ್ನು ನೆಲದಮೇಲೆ ಮಲಗಿಸಿ ಹಗ್ಗದಿಂದ ಅಳತೆಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ ಒಂದು ಪಾಲನ್ನು ಉಳಿಸಿದನು. ಮೋವಾಬ್ಯರು ದಾವೀದನಿಗೆ ಅಧೀನರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
೩. ಬಳಿಕ ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ದಾವೀದನು ಪರಾಭವಗೊಳಿಸಿದನು.
೪. ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.
೫. ದಮಸ್ಕದ ಸಿರಿಯಾದವರು ಚೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆಬಡಿದನು.
೬. ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೆಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯ ದೊರಕಿತು.
೭. ಅವನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಜೆರುಸಲೇಮಿಗೆ ಒಯ್ದನು.
೮. ಇದಲ್ಲದೆ ಹದದೆಜೆರನ ಪಟ್ಟಣಗಳಿಂದ ಬೆಟಹದಿಂದಲೂ ಬೇರೋತೈಯಿಂದಲೂ ಅಪಾರ ತಾಮ್ರವನ್ನು ತೆಗೆದುಕೊಂಡು ಬಂದನು.
೯. ದಾವೀದನು ಹದದೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನ ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
೧೦. ತೋವಿಗೂ ಹದದೆಜೆರನಿಗೂ ಹಗೆತನವಿತ್ತು. ದಾವೀದನು ಹದದೆಜೆರನ ಮೇಲೆ ದಾಳಿಮಾಡಿ ಅವನನ್ನು ಸೋಲಿಸಿದುದರಿಂದ ತೋವು ದಾವೀದನನ್ನು ಅಭಿನಂದಿಸುವುದಕ್ಕಾಗಿ ಹಾಗು ಹರಸುವುದಕ್ಕಾಗಿ ತನ್ನ ಮಗ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೆ ತಾಮ್ರ, ಬೆಳ್ಳಿ ಹಾಗು ಬಂಗಾರದ ಪಾತ್ರೆಗಳನ್ನು ತಂದನು.
೧೧. ಅರಸನಾದ ದಾವೀದನು ಈ ಕಾಣಿಕೆಗಳನ್ನು ಮಾತ್ರವಲ್ಲದೆ, ತನ್ನಿಂದ ಅಪಜಯಹೊಂದಿದ್ದ ಅರಾಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಹಾಗು ಅಮಾಲೇಕ್ಯರು ಎಂಬ ಸುತ್ತಮುತ್ತಿನ ಜನಾಂಗಗಳಿಂದಲೂ ಮತ್ತು ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ
೧೨. ಪಡೆದುಕೊಂಡ ಬೆಳ್ಳಿ ಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.
೧೩. ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರಮಂದಿ ಸೈನಿಕರನ್ನು ಸೋಲಿಸಿಬಂದು ಅಂದಿನಿಂದ ಬಹಳ ಪ್ರಖ್ಯಾತಿ ಹೊಂದಿದನು.
೧೪. ಎದೋಮಿನಲ್ಲೆಲ್ಲಾ ಅವನು ಕಾವಲು ದಂಡುಗಳನ್ನಿರಿಸಿದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿಹೋದರೂ ಜಯ ಉಂಟಾಯಿತು.
೧೫. ದಾವೀದನು ಸಮಸ್ತ ಇಸ್ರಯೇಲಿಗೂ ಅರಸನಾಗಿ ಪ್ರಜೆಗಳೆಲ್ಲರನ್ನೂ ಧರ್ಮಾನುಸಾರ ನ್ಯಾಯಯುತವಾಗಿ ನಡೆಸುತ್ತಿದ್ದನು.
೧೬. ಚೆರೂಯಳ ಮಗ ಯೋವಾಬನು ಅವನ ಸೇನಾಪತಿ ಆಗಿದ್ದನು. ಅಹೀಲೂದನ ಮಗ ಯೆಹೋಷಾಫಟನು ಅವನ ಮಂತ್ರಿ ಆಗಿದ್ದನು.
೧೭. ಅಹೀಟೂಬನ ಮಗ ಚಾದೋಕನೂ ಹಾಗು ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು; ಸರಾಯನು ಅವನಿಗೆ ಲೇಖಕ ಆಗಿದ್ದನು.
೧೮. ಯೆಹೋಯಾದಾವನ ಮಗ ಬೆನಾಯನು ‘ಕೆರೇತ್ಯ’, ‘ಪೆಲೇತ್ಯ,’ ಎಂಬ ಕಾವಲುದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳೂ ಯಾಜಕರಾಗಿದ್ದರು.

ಕೀರ್ತನೆಗಳು ೬೪:೧-೧೦
೧. ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ I ಕಾಪಾಡು, ಶತ್ರುಗಳ ಭಯವಿದೆ ನನಗೆ II
೨. ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ I ಕಾದಿರಿಸೆನ್ನ ದುರುಳರ ದೊಂಬಿಯಿಂದ II
೩. ನಾಲಗೆಯೆಂಬ ಅಲಗನವರು ಮಸೆದಿಹರು I ನಂಜುಮಾತೆಂಬ ಅಂಬನು ಹೂಡಿಹರು II
೪. ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ I ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ II
೫. ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು I “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು? II
೬. ಅವರು ಹೂಡಿರುವುದು ಕುತಂತ್ರವನು I ಕೊಚ್ಚಿಕೊಳ್ವುದು ಚತುರೋಪಾಯವನು I ಅಶೋಧ್ಯ ಮಾನವನ ಹೃನ್ಮನಗಳು! II
೭. ಆದರೆ ಎಸೆವನು ಬಾಣವನು ದೇವನೆ I ಪಡೆವರು ಅಪಘಾತವನು ಫಕ್ಕನೆ II
೮. ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು I ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು II
೯. ಜನರೆಲ್ಲರಾಗ ತಲ್ಲಣಗೊಳ್ಳುವರು I ದೇವಕಾರ್ಯವಿದು ಎಂದು ಧ್ಯಾನಿಪರು I ಆತನ ಸತ್ಕಾರ್ಯಗಳನು ಸಾರುವರು II
೧೦. ಹರ್ಷಿಸಲಿ ಸಜ್ಜನರು ಪ್ರಭುವಿನಲಿ I ಆಶ್ರಯ ಪಡೆಯಲೀಗಲೆ ಆತನಲಿ I ನೇರ ಹೃದಯಿಗಳೆಲ್ಲರು ಹಿಗ್ಗಲಿ II

ಜ್ಞಾನೋಕ್ತಿಗಳು ೧೬:೧೮-೧೯
೧೮. ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.
೧೯. ಸೊಕ್ಕಿನವರ ಸಂಗಡ ಸೂರೆಹಂಚಿಕೊಳ್ಳುವುದಕ್ಕಿಂತಲು ದೀನದಲಿತರ ಸಂಗಡ ದೈನ್ಯದಿಂದಿರುವುದು ಮೇಲು.

ಯೊವಾನ್ನನು ೫:೨೪-೪೭
೨೪. “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾರೆ. ಅವನು ಖಂಡನೆಗೆ ಗುರಿ ಆಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ.
೨೫. ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು.
೨೬. ಪಿತನು ತಾವೇ ಸ್ವಯಂ ಜೀವಮೂಲವಾಗಿರುವಂತೆ ಪುತ್ರನು ಸಹ ಸ್ವಯಂ ಜೀವಮೂಲವಾಗಿರುವಂತೆ ಕರುಣಿಸಿದ್ದಾರೆ.
೨೭. ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ.
೨೮. ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತು ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳುವ ಕಾಲ ಬರುವುದು.
೨೯. ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದುಬರುವರು; ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು, ದುರ್ಜನರು ದಂಡನಾ ತೀರ್ಪಿಗಾಗಿ ಪುನರುತ್ಥಾನ ಆಗುವರು.
೩೦. “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪು ಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.
೩೧. “ನನ್ನ ಪರವಾಗಿ ನಾನೇ ಸಾಕ್ಷಿನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು.
೩೨. ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ.
೩೩. ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ.
೩೪. ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ.
೩೫. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ.
೩೬. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು; ನಾನು ಸಾಧಿಸುತ್ತಿರುವ ಸುಕೃತ್ಯಗಳೇ, ಅಂದರೆ, ಪಿತನು ನನಗೆ ಮಾಡಿಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ.
೩೭. ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ.
೩೮. ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ.
೩೯. ಪವಿತ್ರಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ.
೪೦. ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ.
೪೧. “ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ.
೪೨. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ.
೪೩. ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ.
೪೪. ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಆಪಾದಿಸುತ್ತಿರುವೆನೆಂದು ಎಣಿಸಬೇಡಿ.
೪೫. ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ.
೪೬. ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ.
೪೭. ಆತನೇ ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?”