A A A A A

ಸಮುವೇಲನು ೨ ೧೫:೧-೩೭
೧. ಸ್ವಲ್ಪಕಾಲವಾದನಂತರ ಅಬ್ಷಾಲೋಮನು ತನ್ನ ಮುಂದೆ ಮೈಗಾವಲಾಗಿ ಓಡುವುದಕ್ಕೆ ಐವತ್ತು ಮಂದಿ ಆಳುಗಳನ್ನು ನೇಮಿಸಿದನು. ಅದಕ್ಕಾಗಿ ಒಂದು ರಥವನ್ನೂ ಕುದುರೆಗಳನ್ನೂ ಪಡೆದುಕೊಂಡನು.
೨. ಅವನು ಮುಂಜಾನೆಯೇ ಎದ್ದು ಊರುಬಾಗಿಲ ಬಳಿಯಲ್ಲಿ ನಿಂತುಕೊಳ್ಳುತ್ತಿದ್ದನು. ಯಾರಾದರೂ ತಮ್ಮ ವ್ಯಾಜ್ಯ ತೀರಿಸಿಕೊಳ್ಳುವುದಕ್ಕಾಗಿ ಅರಸನ ಬಳಿಗೆ ಹೋಗುವುದನ್ನು ಅಬ್ಷಾಲೋ‍ಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು, “ನೀನು ಯಾವ ಊರಿನವನು?” ಎಂದು ವಿಚಾರಿಸುತ್ತಿದ್ದನು. ಅವರು, “ನಿನ್ನ ಸೇವಕರಾದ ನಾವು ಇಸ್ರಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರಕೊಡುತ್ತಿದ್ದರು.
೩. ಆಗ ಅಬ್ಷಾಲೋಮನು‍, “ನೋಡಿ, ನಿಮ್ಮ ವ್ಯಾಜ್ಯ ಒಳ್ಳೆಯದು ಹಾಗು ನ್ಯಾಯವಾದದ್ದು. ಆದರೆ ವ್ಯಾಜ್ಯಗಳನ್ನು ವಿಚಾರಿಸುವುದಕ್ಕೆ ರಾಜಪ್ರತಿನಿಧಿ ಒಬ್ಬನೂ ನೇಮಕವಾಗಿಲ್ಲ.
೪. ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡೆದುಕೊಳ್ಳುವ ಹಾಗೆ ನನ್ನನ್ನೇ ನಾಡಿನ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದು ಸೂಚಿಸುತ್ತಿದ್ದನು.
೫. ಯಾವನಾದರು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದಕ್ಕೆ ಬಂದರೆ ಅಂಥವನನ್ನು ಕೂಡಲೆ ಕೈಚಾಚಿ ಅವನನ್ನು ಎತ್ತಿ ಮುದ್ದಿಡುತ್ತಿದ್ದನು.
೬. ಅರಸನ ಬಳಿಗೆ ನ್ಯಾಯನಿರ್ಣಯಕ್ಕಾಗಿ ಬರುತ್ತಿದ್ದ ಎಲ್ಲಾ ಇಸ್ರಯೇಲರಿಗೆ ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ಒಲಿಸಿಕೊಳ್ಳುತ್ತಿದ್ದನು.
೭. ನಾಲ್ಕು ವರ್ಷಗಳಾದನಂತರ ಅಬ್ಷಾಲೋಮನು ಅರಸನಿಗೆ, “ನಾನು ಸರ್ವೇಶ್ವರನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವುದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ, ಅಪ್ಪಣೆಯಾಗಲಿ.
೮. ನಿಮ್ಮ ಸೇವಕನಾದ ನಾನು ಸಿರಿಯಾದೇಶದ ಗೆಷೂರಿನಲ್ಲಿದ್ದಾಗ ಸರ್ವೇಶ್ವರ ನನ್ನನ್ನು ಮರಳಿ ಜೆರುಸಲೇಮಿಗೆ ಬರಮಾಡುವುದಾದರೆ ಅವರಿಗೆ ಒಂದು ವಿಶೇಷ ಆರಾಧನೆ ಮಾಡಿಸುವೆನೆಂದು ಹರಕೆ ಮಾಡಿದ್ದೆನು,” ಎಂದು ವಿಜ್ಞಾಪಿಸಿದನು.
೯. ಅರಸನು, “ಹೋಗು, ನಿನಗೆ ಶುಭವಾಗಲಿ!” ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟುಹೋದನು.
೧೦. ಅವನು ಗೂಢಚಾರನನ್ನು ಕಳುಹಿಸಿ ಇಸ್ರಯೇಲರ ಎಲ್ಲಾ ಕುಲದವರಿಗೆ, “ನೀವು ತುತೂರಿಯ ಧ್ವನಿಯನ್ನು ಕೇಳುತ್ತಲೇ ‘ಅಬ್ಷಾ‍ಲೋಮನು ಹೆಬ್ರೋನಿನಲ್ಲಿ ಅರಸ’ ಎಂದು ಘೋಷಿಸಿರಿ,” ಎಂದು ಹೇಳಿಸಿದ್ದನು.
೧೧. ಅಬ್ಷಾಲೋಮನು ಜೆರುಸಲೇಮಿನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರೆದುಕೊಂಡು ಹೋಗಿದ್ದನು. ಅವರು ಯಥಾರ್ಥಮನಸ್ಸಿನಿಂದ ಹೋದವರು; ಒಳಸಂಚಿನ ಸುಳಿವೇನೂ ಅವರಿಗೆ ಗೊತ್ತಿರಲಿಲ್ಲ.
೧೨. ಇದಲ್ಲದೆ ಅವನು ಶಾಂತಿಸಮಾಧಾನದ ಬಲಿದಾನ ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಬರಮಾಡಿಸಿದ್ದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದುದರಿಂದ ಒಳಸಂಚು ಪ್ರಬಲವಾಗುತ್ತಾ ಹೋಯಿತು.
೧೩. ಇಸ್ರಯೇಲರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನ ದಾವೀದನಿಗೆ ಮುಟ್ಟಿತು.
೧೪. ಆಗ ಅವನು ಜೆರುಸಲೇಮಿನಲ್ಲಿದ್ದ ತನ್ನ ಸೇವಕರಿಗೆ, “ಏಳಿ, ಓಡಿಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು,” ಎಂದು ಹೇಳಿದನು.
೧೫. ಸೇವಕರು ಅರಸನಿಗೆ, “ನಮ್ಮ ಒಡೆಯರಾದ ಅರಸರಿಗೆ ಸರಿತೋಚಿದ್ದನ್ನೇ ಮಾಡಲು ಸಿದ್ಧರಾಗಿದ್ದೇವೆ,” ಎಂದು ಉತ್ತರಕೊಟ್ಟರು.
೧೬. ಆಗ ಅರಸನು ಮನೆಕಾಯುವುದಕ್ಕಾಗಿ ಹತ್ತುಮಂದಿ ಉಪಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರೆದುಕೊಂಡು ಹೊರಟನು.
೧೭. ಅರಸನೂ ಅವನ ಜೊತೆಯಲ್ಲಿ ಹೋದ ಜನರೆಲ್ಲರೂ ಪಟ್ಟಣದ ಕಡೇ ಮನೆಯ ಬಳಿಯಲ್ಲಿ ತುಸು ಹೊತ್ತು ನಿಂತರು.
೧೮. ದಾವೀದನ ಎಲ್ಲಾ ಸೇವಕರೂ, ‘ಕೆರೇತ್ಯ’ ಹಾಗು ‘ಪೆಲೇತ್ಯ’ ಎಂಬ ಕಾವಲುದಂಡುಗಳು ಮತ್ತು ಗತ್ ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರು ಅರಸನ ಮುಂದೆ ಹೋದರು.
೧೯. ಆಗ ಅರಸನು ಗಿತ್ತೀಯನಾದ ಇತ್ತೈ ಎಂಬವನಿಗೆ, “ನೀನು ನಮ್ಮ ಸಂಗಡ ಏಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ? ಹಿಂದಿರುಗಿ ಹೋಗಿ ಅರಸನ ಬಳಿಯಲ್ಲೇ ವಾಸಮಾಡು.
೨೦. ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವುದು; ಹೀಗಿರುವುದರಿಂದ ನಿನ್ನೆ ಬಂದಂಥ ನಿನ್ನನ್ನು ಕರೆದುಕೊಂಡುಹೋಗಿ ಸುಮ್ಮನೆ ಏಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರನನ್ನು ಕರೆದುಕೊಂಡು ಹಿಂದಿರುಗಿ ಹೋಗು; ದೇವರ ಅನಂತ ಕೃಪೆ ನಿನ್ನ ಮೇಲಿರಲಿ,” ಎಂದು ಹೇಳಿದನು.
೨೧. ಅದಕ್ಕೆ ಇತ್ತೈ, “ಸರ್ವೇಶ್ವರನಾಣೆ, ನನ್ನ ಒಡೆಯರಾದ ಅರಸರ ಜೀವದಾಣೆ, ಪ್ರಾಣಹೋದರೂ ಉಳಿದರೂ ನನ್ನ ಒಡೆಯರಾದ ಅರಸರಿರುವಲ್ಲಿಗೇ ಹೋಗುವೆನು,” ಎಂದು ಉತ್ತರಕೊಟ್ಟನು.
೨೨. ಆಗ ದಾವೀದನು, “ಒಳ್ಳೆಯದು, ಮುಂದೆ ನಡೆ,” ಎಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನರನ್ನೂ, ಕರೆದುಕೊಂಡು ಮುಂದೆ ನಡೆದನು.
೨೩. ಇವರೆಲ್ಲರೂ ಬಹಳವಾಗಿ ನಡೆಯುವಾಗ ಸುತ್ತ-ಮುತ್ತಿನವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.
೨೪. ಚಾದೋಕನೂ ಅವನ ವಶದಲ್ಲಿದ್ದ ಲೇವಿಯರೆಲ್ಲರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು, ಅದನ್ನು ಜನರೆಲ್ಲರು ದಾಟಿ ಹೋಗುವವರೆಗೆ ಕೆಳಗಿಳಿಸಿದ್ದರು. ಎಬ್ಯಾತಾರನೂ ಬಂದಿದ್ದನು.
೨೫. ಅರಸನು ಚಾದೋಕನಿಗೆ, “ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಕ್ಕೆ ತೆಗೆದುಕೊಂಡುಹೋಗು; ಸರ್ವೇಶ್ವರನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಅವರನ್ನೂ ಅವರ ಆಲಯವನ್ನೂ ನೋಡುವ ಹಾಗೆ ತಾವೇ ನನ್ನನ್ನು ಹಿಂದಕ್ಕೆ ಬರಮಾಡುವರು.
೨೬. ‘ನಿನ್ನಲ್ಲಿ ನನಗೆ ಇಷ್ಟವಿಲ್ಲ,’ ಎಂದು ತೋರಿದರೆ ತಮಗೆ ಸರಿಕಂಡಂತೆ ಮಾಡಲಿ. ಅವರ ಚಿತ್ತದಂತೆ ಆಗಲಿ,” ಎಂದನು.
೨೭. ಇದಲ್ಲದೆ ಅರಸನು ಯಾಜಕನಾದ ಚಾದೋಕನಿಗೆ, “ನೀನು ದೇವದರ್ಶಿ; ನೀನು ನಿನ್ನ ಮಗನಾದ ಅಹೀಮಾಚನು ಮತ್ತು ಎಬ್ಯಾತಾರನ ಮಗನಾದ ಯೋನಾತಾನನು ಎಂಬ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಸುರಕ್ಷಿತವಾಗಿ ಪಟ್ಟಣಕ್ಕೆ ಹೋಗಬೇಕು.
೨೮. ನಿಮ್ಮಿಂದ ವರ್ತಮಾನ ಬರುವ ತನಕ ನಾನು ಅಡವಿಯಲ್ಲಿ ನದಿದಾಟುವ ಸ್ಥಳದ ಹತ್ತಿರ ಇರುವೆನು,” ಎಂದು ಹೇಳಿದನು.
೨೯. ಆಗ ಚಾದೋಕನು ಹಾಗು ಎಬ್ಯಾತಾರನು ದೇವರ ಮಂಜೂಷವನ್ನು ಜೆರುಸಲೇಮಿಗೆ ಕೊಂಡೊಯ್ದು ಅಲ್ಲೇ ವಾಸಿಸಿದರು.
೩೦. ದಾವೀದನು, ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು.
೩೧. ಅಬ್ಷಾಲೋಮನ ಸಂಗಡ ಒಳಸಂಚು ಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು, “ಸರ್ವೇಶ್ವರಾ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು,” ಎಂದು ಪ್ರಾರ್ಥಿಸಿದನು.
೩೨. ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ, ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು ಅರಸನ ಬಳಿಗೆ ಬಂದನು.
೩೩. ಅರಸನು ಅವನಿಗೆ, “ನೀನು ನನ್ನ ಸಂಗಡ ಬರುವುದಾದರೆ ನನಗೆ ಭಾರ ಆಗುವಿಯಷ್ಟೆ.
೩೪. ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ, ‘ಅರಸರೇ, ನಾನು ನಿಮ್ಮ ಸೇವಕನು; ಹಿಂದೆ ನಿಮ್ಮ ತಂದೆಗೆ ಸೇವೆಸಲ್ಲಿಸಿದಂತೆ ಈಗ ನಿಮ್ಮ ಸೇವೆಮಾಡುತ್ತೇನೆ,’ ಎಂದು ಹೇಳುವುದಾದರೆ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ನೀನು ನನಗೆ ಅನುಕೂಲ ಮಾಡಿಕೊಟ್ಟಂತಾಗುವುದು.
೩೫. ಅಲ್ಲಿ ನಿನ್ನ ಸಂಗಡ ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರು ಇರುತ್ತಾರೆ ಅಲ್ಲವೆ; ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲಾ ಆ ಇಬ್ಬರು ಯಾಜಕರಿಗೆ ತಿಳಿಸು. ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ;
೩೬. ಒಬ್ಬನು ಚಾದೋಕನ ಮಗನಾದ ಅಹೀಮಾಚನು, ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು,” ಎಂದು ಹೇಳಿ ಅವನನ್ನು ಕಳುಹಿಸಿದನು.
೩೭. ಅಬ್ಷಾಲೋಮನು ಜೆರುಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.

ಸಮುವೇಲನು ೨ ೧೬:೧-೨೩
೧. ದಾವೀದನು ಗುಡ್ಡದ ತುದಿಯ ಆಚೆಗೆ ಹೋಗುವಷ್ಟರಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ಇನ್ನೂರು ರೊಟ್ಟಿಗಳನ್ನು, ನೂರು ಒಣಗಿದ ದ್ರಾಕ್ಷಿಗೊಂಚಲುಗಳನ್ನು, ನೂರು ಹಣ್ಣುಗಳನ್ನು ಹಾಗು ಒಂದು ಬುದ್ದಲಿ ದ್ರಾಕ್ಷಾರಸವನ್ನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.
೨. ಅರಸನು ಚೀಬನನ್ನು ನೋಡಿ, “ಇವುಗಳನ್ನು ಏಕೆ ತಂದೆ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಅರಸರ ಮನೆಯವರು ಸವಾರಿಮಾಡಲೆಂದು, ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನಲೆಂದೂ ಹಾಗು ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯಲೆಂದು ತಂದಿದ್ದೇನೆ,” ಎಂದು ಉತ್ತರಕೊಟ್ಟನು.
೩. ಅರಸನು ಮತ್ತೆ, “ನಿನ್ನ ಯಜಮಾನನ ಮಗ ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಯೇಲರು ಈ ದಿನ ತನಗೆ ಮರಳಿಕೊಡುವರೆಂದು ಹೇಳಿ ಅವನು ಜೆರುಸಲೇಮಿನಲ್ಲೇ ಉಳಿದುಕೊಂಡನು,” ಎಂದನು.
೪. ಆಗ ಅರಸನು, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ,” ಎಂದು ಹೇಳಿದನು. ಅವನು, “ಅರಸರೇ, ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ; ನನ್ನ ಒಡೆಯರೇ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ!” ಎಂದನು.
೫. ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮೀ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು.
೬. ಅವನು ದಾವೀದನ, ಅವನ ಎಲ್ಲ ಸೇವಕರ, ಎಡಬಲದಲ್ಲಿದ್ದ ಸೈನಿಕರ ಹಾಗು ಶೂರರ ಕಡೆಗೆ ಕಲ್ಲೆಸೆಯ ತೊಡಗಿದನು.
೭. ಅಲ್ಲದೆ, ಅವನು ದಾವೀದನನ್ನು ಶಪಿಸುತ್ತಾ, “ನಡೆ, ಕೊಲೆಗಾರನೇ, ನೀಚನೇ, ನಡೆ; ಸೌಲನ ರಾಜ್ಯವನ್ನು ಕಬಳಿಸಿಕೊಂಡು, ಅವನ ಮನೆಯವರನ್ನು ಕೊಂದದ್ದಕ್ಕಾಗಿ ಸರ್ವೇಶ್ವರ ನಿನಗೆ ಮುಯ್ಯಿ ತೀರಿಸಿದ್ದಾರೆ.
೮. ಅವರು ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನಿಗೆ ಕೊಟ್ಟುಬಿಟ್ಟರು. ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ,” ಎಂದನು.
೯. ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು.
೧೦. ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು.
೧೧. ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾಮೀನ್ಯನು ಹೀಗೆ ಮಾಡುವುದು ಯಾವ ಲೆಕ್ಕ? ಬಿಡಿ, ಅವನು ಶಪಿಸಲಿ; ಹೀಗೆ ಮಾಡಬೇಕೆಂದು ಸರ್ವೇಶ್ವರನೇ ಅವನಿಗೆ ಆಜ್ಞಾಪಿಸಿದ್ದಾರೆ.
೧೨. ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು.
೧೩. ದಾವೀದನೂ ಅವನ ಜನರೂ ದಾರಿಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ ಕಲ್ಲುಮಣ್ಣು ತೂರುತ್ತಾ, ಗುಡ್ಡದ ಓರೆಯಲ್ಲಿ ಸಮಾನಾಂತರದಲ್ಲೇ ನಡೆಯುತ್ತಿದ್ದನು.
೧೪. ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ ಜೋರ್ಡನ್ ಸ್ಥಳವನ್ನು ಸೇರಿ ಅಲ್ಲಿ ವಿಶ್ರಮಿಸಿಕೊಂಡರು.
೧೫. ಅಷ್ಟರಲ್ಲಿ ಅಬ್ಷಾಲೋಮನು ಎಲ್ಲ ಇಸ್ರಯೇಲರೊಡನೆ ಜೆರುಸಲೇಮಿಗೆ ಬಂದನು. ಅಹೀತೋಫೆಲನೂ ಅವನ ಸಂಗಡ ಇದ್ದನು.
೧೬. ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸರು ಚಿರಂಜೀವಿಯಾಗಿ ಬಾಳಲಿ! ಅರಸರು ಚಿರಂಜೀವಿಯಾಗಿ ಬಾಳಲಿ!” ಎಂದು ಘೋಷಿಸಿದನು.
೧೭. ಅಬ್ಷಾಲೋಮನು, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಏಕೆ ಹೋಗಲಿಲ್ಲ?” ಎಂದನು.
೧೮. ಅದಕ್ಕೆ ಹೂಷೈಯು, “ಹಾಗಲ್ಲ, ಸರ್ವೇಶ್ವರ, ಈ ಜನ ಹಾಗು ಇಸ್ರಯೇಲರೆಲ್ಲರು ಯಾರನ್ನು ಆರಿಸಿದ್ದಾರೋ ಅವನ ಪಕ್ಷದವನಾಗಿರುತ್ತೇನೆ ನಾನು; ಅವನ ಬಳಿಯಲ್ಲೇ ವಾಸಿಸುತ್ತೇನೆ.
೧೯. ಇದಲ್ಲದೆ, ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿಮ್ಮ ತಂದೆಯ ಸನ್ನಿಧಿಯಲ್ಲಿ ಸೇವೆಮಾಡಿದಂತೆ ನಿಮ್ಮ ಸನ್ನಿಧಿಯಲ್ಲಿ ಸೇವೆಮಾಡುವೆನು,” ಎಂದು ಉತ್ತರಕೊಟ್ಟನು.
೨೦. ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆಮಾಡಿ ಹೇಳು,” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು.
೨೧. ಅವನು, “ತಾವು ಹೋಗಿ ತಮ್ಮ ತಂದೆ ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಗಳೊಡನೆ ಸಂಗಮಿಸಿ. ಹೀಗೆ ಮಾಡುವುದಾದರೆ, ತಾವು ತಮ್ಮ ತಂದೆಗೆ ಅಸಹ್ಯವೈರಿಯಾದಿರೆಂದು ಎಲ್ಲ ಇಸ್ರಯೇಲರಿಗೆ ತಿಳಿಯುವುದು. ಆಗ ತಮ್ಮ ಪಕ್ಷದವರು ಹುಮ್ಮಸ್ಸುಗೊಳ್ಳುವರು,” ಎಂದು ಉತ್ತರಕೊಟ್ಟನು.
೨೨. ಆಗ ಅಬ್ಷಾಲೋಮನಿಗಾಗಿ ಮಾಳಿಗೆಯ ಮೇಲೆ ಗುಡಾರಹಾಕಿದರು. ಅವನು ಎಲ್ಲ ಇಸ್ರಯೇಲರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.
೨೩. ಆ ದಿನಗಳಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟೇ ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಸಲಹೆಗಳನ್ನು ಮಾನ್ಯಮಾಡುತ್ತಿದ್ದರು.

ಕೀರ್ತನೆಗಳು ೬೬:೮-೧೫
೮. ಜನಾಂಗಗಳೇ, ನಮಿಸಿರಿ ನಮ್ಮ ದೇವನನು I ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು II
೯. ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ I ಕಾಲೆಡವದಂತೆ ಕಾಪಾಡಿದನಯ್ಯಾ II
೧೦. ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ I ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ II
೧೧. ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ I ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ II
೧೨. ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ I ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ I ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ II
೧೩. ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ I ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ II
೧೪. ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು I ಸಂಕಟಕಾಲದಲಿ ನಾ ಮಾಡಿದ ವ್ರತವನು II
೧೫. ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ I ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ I ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ II

ಜ್ಞಾನೋಕ್ತಿಗಳು ೧೬:೨೭-೩೦
೨೭. ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ಞಾಲೆ ಅವನ ನಾಲಿಗೆ.
೨೮. ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.
೨೯. ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.
೩೦. ಕಣ್ಣುಮಿಟುಕಿಸುವವನು ಕುಯುಕ್ತಿಯನ್ನು ಕಲ್ಪಿಸುತ್ತಾನೆ; ತುಟಿಕಚ್ಚುವವನು ಕೇಡನ್ನು ಸಾಧಿಸುತ್ತಾನೆ.

ಯೊವಾನ್ನನು ೭:೧-೨೭
೧. ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ.
೨. ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು,
೩. “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ.
೪. ಪ್ರಖ್ಯಾತನಾಗಬೇಕೆಂದಿರುವ ಯಾರೂ ತನ್ನ ಕಾರ್ಯಗಳನ್ನು ಮರೆಯಲ್ಲಿ ಮಾಡುವುದಿಲ್ಲ, ಇವನ್ನೆಲ್ಲಾ ನೀನು ಮಾಡುವುದಾದರೆ ಲೋಕಕ್ಕೆ ಪ್ರಕಟವಾಗುವಂತೆ ಮಾಡಬೇಕು,” ಎಂದು ಯೇಸುವಿಗೆ ಹೇಳಿದರು.
೫. ಅವರ ಸೋದರರಿಗೆ ಕೂಡ ಅವರಲ್ಲಿ ವಿಶ್ವಾಸವಿರಲಿಲ್ಲ.
೬. ಅದಕ್ಕೆ ಯೇಸು, “ನನಗೆ ಸೂಕ್ತ ಸಮಯ ಇನ್ನೂ ಬಂದಿಲ್ಲ, ನಿಮಗಾದರೋ ಎಲ್ಲಾ ಸಮಯವೂ ಒಂದೇ.
೭. ಲೋಕಕ್ಕೆ ನಿಮ್ಮ ಮೇಲೆ ಹಗೆಯಿಲ್ಲ. ಅದಕ್ಕೆ ಹಗೆಯಿರುವುದು ನನ್ನ ಮೇಲೆ. ಏಕೆಂದರೆ, ಅದರ ವರ್ತನೆ ಕೆಟ್ಟದೆಂದು ನಾನು ಯಥಾರ್ಥವಾಗಿ ಹೇಳುತ್ತಾ ಇದ್ದೇನೆ.
೮. ಹಬ್ಬಕ್ಕೆ ನೀವೇ ಹೋಗಿರಿ, ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ,” ಎಂದು ಹೇಳಿ
೯. ಯೇಸು ಗಲಿಲೇಯದಲ್ಲೇ ಉಳಿದುಕೊಂಡರು.
೧೦. ಯೇಸುಸ್ವಾಮಿಯ ಸೋದರರು ಹಬ್ಬಕ್ಕೆಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ.
೧೧. ಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸು ಎಲ್ಲಿದ್ದಾನೆಂದು ಹುಡುಕುತ್ತಿದ್ದರು. ಯೇಸುವನ್ನು ಕುರಿತು ಜನರ ಗುಂಪು ಗುಜುಗುಜು ಮಾತನಾಡುತ್ತಿತ್ತು.
೧೨. ‘ಆತ ಒಳ್ಳೆಯ ವ್ಯಕ್ತಿ’ ಎಂದು ಕೆಲವರು ಹೇಳಿದರೆ, ‘ಇಲ್ಲ, ಆತನು ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾನೆ,’ ಎನ್ನುತ್ತಿದ್ದರು ಇತರರು.
೧೩. ಯೆಹೂದ್ಯರಿಗೆ ಅಂಜಿ ಅವರಾರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ.
೧೪. ಹಬ್ಬವು ಅರ್ಧಕ್ಕೆ ಅರ್ಧ ಮುಗಿಯತು. ಆಗ ಯೇಸು ಮಹಾದೇವಾಲಯಕ್ಕೆ ಹೋಗಿ ಬೋಧನೆ ಮಾಡತೊಡಗಿದರು.
೧೫. ಅದನ್ನು ಕೇಳಿ ಯೆಹೂದ್ಯ ಅಧಿಕಾರಿಗಳು ಬೆರಗಾದರು. “ಕಲಿಯದಿದ್ದರೂ ಈ ಮನುಷ್ಯನಿಗೆ ಇಷ್ಟೆಲ್ಲಾ ಪಾಂಡಿತ್ಯ ಎಲ್ಲಿಂದ ಬಂದಿತು?” ಎಂದು ವಿಚಾರಿಸತೊಡಗಿದರು.
೧೬. ಆಗ ಯೇಸು ಸ್ವಾಮಿ, “ನಾನು ಮಾಡುವ ಬೋಧನೆ ನನ್ನದಲ್ಲ; ನನ್ನನ್ನು ಕಳುಹಿಸಿದಾತನದು.
೧೭. ದೇವರ ಚಿತ್ತದಂತೆ ನಡೆಯಲು ಮನಸ್ಸು ಉಳ್ಳವನಿಗೆ, ನಾನು ಬೋಧಿಸುವುದು ದೇವರಿಂದ ಬಂದುದೋ ಅಥವಾ ನನ್ನ ಸ್ವಂತ ಕಲ್ಪನೆಯೋ ಎಂಬುದು ತಿಳಿಯುತ್ತದೆ.
೧೮. ಸ್ವಂತ ಕಲ್ಪನೆಯಿಂದ ಮಾತನಾಡುವವನು ತನ್ನ ಸ್ವಪ್ರತಿಷ್ಠೆಯನ್ನು ಬಯಸುತ್ತಾನೆ. ತನ್ನನ್ನು ಕಳುಹಿಸಿದಾತನ ಪ್ರತಿಷ್ಠೆಯನ್ನು ಬಯಸುವವನು ಪ್ರಾಮಾಣಿಕನು. ಕಪಟವೆಂಬುದು ಅವನಲ್ಲಿ ಇರದು.
೧೯. ಮೋಶೆ ಕೊಟ್ಟ ಧರ್ಮಶಾಸ್ತ್ರ ನಿಮಗಿದೆಯಲ್ಲವೇ, ಆದರೂ ಅದಕ್ಕೆ ಸರಿಯಾಗಿ ನಡೆಯುವವರಾರೂ ನಿಮ್ಮಲ್ಲಿ ಇಲ್ಲ. ನನ್ನನ್ನು ಕೊಲ್ಲಬೇಕೆಂದು ನೀವು ಹವಣಿಸುವುದೇಕೆ?” ಎಂದರು.
೨೦. ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿರಬೇಕು; ನಿನ್ನನ್ನು ಕೊಲ್ಲಲು ಹವಣಿಸುತ್ತಿರುವವರಾದರು ಯಾರು?” ಎಂದರು.
೨೧. ಯೇಸು ಅವರಿಗೆ, “ಸಬ್ಬತ್ ದಿನ ನಾನು ಮಾಡಿದ್ದು ಒಂದು ಸೂಚಕಕಾರ್ಯ ಮಾತ್ರ. ಅಷ್ಟಕ್ಕೇ ನೀವೆಲ್ಲರೂ ಕಂಗಾಲಾಗಿದ್ದೀರಿ.
೨೨. ಸುನ್ನತಿಯನ್ನು ಆಚರಿಸಬೇಕೆಂದು ನಿಯಮಿಸಿದವನು ಮೋಶೆ. (ವಾಸ್ತವವಾಗಿ ಅದು ಮೋಶೆಯ ಕಾಲದಿಂದಲ್ಲ, ಪೂರ್ವಜರ ಕಾಲದಿಂದಲೂ ರೂಢಿಯಲ್ಲಿತ್ತು). ಸಬ್ಬತ್ ದಿನದಲ್ಲಿಯೂ ನೀವು ಸುನ್ನತಿಯನ್ನು ಮಾಡುವುದುಂಟು.
೨೩. ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿ ಮಾಡಬಹುದಾದರೆ ಅದೇ ಸಬ್ಬತ್ ದಿನದಲ್ಲಿ ನಾನು ಒಬ್ಬ ಮನುಷ್ಯನನ್ನು ಸಂಪೂರ್ಣ ಸ್ವಸ್ಥಪಡಿಸಿದ್ದಕ್ಕೆ ನೀವು ಸಿಟ್ಟಾಗಬೇಕೆ?
೨೪. ಬರೀ ತೋರಿಕೆಯಿಂದ ತೀರ್ಪುಕೊಡುವುದು ಸಲ್ಲದು; ನಿಮ್ಮ ತೀರ್ಪು ನ್ಯಾಯಬದ್ಧವಾಗಿರಬೇಕು,” ಎಂದು ಹೇಳಿದರು.
೨೫. ಜೆರುಸಲೇಮಿನ ಕೆಲವುಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ?
೨೬. ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ?
೨೭. ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವರೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.