A A A A A

ಸಮುವೇಲನು ೨ ೩:೧-೩೯
೧. ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಬಹುದಿನಗಳವರೆಗೆ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶ ದುರ್ಬಲವಾಗುತ್ತಾ ಬಂದಿತು.
೨. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಆರು: ಚೊಚ್ಚಲ ಮಗ ಅಮ್ನೋನನು; ಇವನು ಜೆಸ್ರೀಲಿನವಳಾದ ಅಹೀನೋವಮಳ ಮಗ.
೩. ಎರಡನೆಯವನು ಕಿಲಾಬನು; ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳ ಮಗ. ಮೂರನೆಯವನು ಅಬ್ಷಾಲೋಮನು; ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಪುತ್ರ.
೪. ನಾಲ್ಕನೆಯವನು ಅದೋನೀಯನು; ಇವನು ಹಗ್ಗೀತಳ ಮಗ.
೫. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು; ಆರನೆಯವನು ಇತ್ರಾಮನು. ಇವನು ದಾವೀದನ ಹೆಂಡತಿ ಆದ ಎಗ್ಲಳ ಮಗ. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರು.
೬. ಸೌಲನ ಸೇನೆಗೂ ದಾವೀದನ ಸೇನೆಗೂ ಯುದ್ಧ ನಡೆಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಪ್ರಬಲನಾಗಿದ್ದನು.
೭. ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯನ್ನು ಕೂಡಿದ್ದೇಕೆ?” ಎಂದು ಕೇಳಿದನು.
೮. ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈವರೆಗೆ ನಾನು ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಬಂಧುಮಿತ್ರರಿಗೂ ಪ್ರಾಮಾಣಿಕನಾಗಿ ನಡೆದುಕೊಂಡೆನಲ್ಲವೇ? ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲ. ಆದರೂ ಈಗ ಈ ಹೆಂಗಸಿನ ಕಾರಣ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
೯. ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದವರೆಗಿರುವ ಎಲ್ಲ ಇಸ್ರಯೇಲರಲ್ಲೂ ಯೆಹೂದ್ಯರಲ್ಲೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸುವುದಾಗಿ ಸರ್ವೇಶ್ವರನಾದ ದೇವರು ದಾವೀದನಿಗೆ ವಾಗ್ದಾನ ಮಾಡಿದ್ದಾರೆ.
೧೦. ಆ ವಾಗ್ದಾನವನ್ನು ನಾನು ನೆರವೇರಿಸದೆ ಹೋದರೆ ಅವರು ನನಗೆ ಏನುಬೇಕಾದರೂ ಮಾಡಲಿ,” ಎಂದನು.
೧೧. ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
೧೨. ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ, “ಈ ನಾಡು ಯಾರದು? ನೀನು ನನ್ನೊಡನೆ ಒಪ್ಪಂದ ಮಾಡಿಕೊಂಡರೆ ಇಸ್ರಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವೆನು. ಹಾಗು ನನ್ನ ಬೆಂಬಲ ನಿನಗಿರುವುದು,” ಎಂದು ಹೇಳಿಸಿದನು.
೧೩. ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಪ್ಪಂದಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಕಾರ್ಯವನ್ನು ಮಾಡಬೇಕು; ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ ನೀನು ನನ್ನ ಮುಖವನ್ನು ನೋಡಕೂಡದು,” ಎಂದು ಉತ್ತರಕೊಟ್ಟನು.
೧೪. ಇದಲ್ಲದೆ, ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ನಾನು ನೂರುಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದುಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು,” ಎಂಬುದಾಗಿ ಆಜ್ಞಾಪಿಸಿದನು.
೧೫. ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆದು ತರಿಸಿದನು.
೧೬. ಆಗ ಪಲ್ಟೀಯೇಲನು ಅಳುತ್ತಾ ಬಹುರೀಮಿನವರೆಗೆ ಆಕೆಯ ಹಿಂದೆ ಬಂದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗು, ನಡೆ,” ಎಂದು ಹೇಳಲು ಅವನು ಹಿಂದಿರುಗಿಹೋದನು.
೧೭. ಅಬ್ನೇರನು ಇಸ್ರಯೆಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಬಹುದಿನದಿಂದ ಅಪೇಕ್ಷಿಸಿದಿರಿ. ಈಗ ಅವಕಾಶ ಒದಗಿದೆ.
೧೮. ಸರ್ವೇಶ್ವರ ದಾವೀದನ ವಿಷಯವಾಗಿ, “ನನ್ನ ದಾಸ ದಾವೀದನ ಮುಖಾಂತರ ನನ್ನ ಪ್ರಜೆಗಳಾದ ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸುವೆನು,” ಎಂದು ನುಡಿದಿದ್ದಾರಲ್ಲವೇ? ಎಂದು ಹೇಳಿಸಿದನು.
೧೯. ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು, ಇಸ್ರಯೇಲರು ಹಾಗು ಬೆನ್ಯಾಮೀನ್ಯರು ಎಲ್ಲರು ಒಪ್ಪಿ ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕಾಗಿ ಹೆಬ್ರೋನಿಗೆ ಹೊರಟನು.
೨೦. ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣಮಾಡಿಸಿದನು.
೨೧. ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಯೇಲರನ್ನೆಲ್ಲಾ ಕೂಡಿಸಿ ನನ್ನ ಒಡೆಯರಾದ ಅರಸರ ಬಳಿಗೆ ಕರೆದುಕೊಂಡು ಬರುವೆನು; ಅವರು ನಿಮ್ಮ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನ ಮಾಡಬಹುದು,” ಎಂದು ಹೇಳಿದನು. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟನು.
೨೨. ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಯೋಧರು ಮತ್ತು ಯೋವಾಬನು ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂದಿರುಗಿ ಬಂದರು. ಅವರು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
೨೩. ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು, ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ ತಿಳಿದುಕೊಂಡನು.
೨೪. ಅರಸನ ಬಳಿಗೆ ಹೋಗಿ, “ನೀವು ಮಾಡಿದ್ದೇನು? ಅಬ್ನೇರನು ನಿಮ್ಮ ಬಳಿಗೆ ಬಂದಿದ್ದನಂತೆ; ನೀವು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟದ್ದೇಕೆ?
೨೫. ನೇರನ ಮಗನಾದ ಅಬ್ನೇರನ ಸಂಗತಿ ನಿಮಗೆ ಗೊತ್ತಿಲ್ಲವೇ? ಅವನು ನಿಮ್ಮನ್ನು ವಂಚಿಸುವುದಕ್ಕೂ ನಿಮ್ಮ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀವು ಏನು ಮಾಡುತ್ತೀರೆಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೆ,” ಎಂದು ಹೇಳಿದನು.
೨೬. ಅನಂತರ ದಾವೀದನನ್ನು ಬಿಟ್ಟು ಹೊರಗೆ ಹೋಗಿ ಅಬ್ನೇರನನ್ನು ಕರೆದುತರುವಂತೆ ದೂತರನ್ನು ಅಟ್ಟಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡುಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
೨೭. ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ಗುಪ್ತಸಂಭಾಷಣೆಗಾಗಿಯೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ, ತನ್ನ ತಮ್ಮನಾದ ಅಸಾಹೇಲನನ್ನು ವಧಿಸಿದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದುಕೊಂದನು.
೨೮. ತುಸುಹೊತ್ತಾದ ಮೇಲೆ ಈ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ವಧೆಯಲ್ಲಿ ನಾನೂ ನನ್ನ ರಾಜ್ಯವೂ ಸರ್ವೇಶ್ವರನ ಮುಂದೆ ಸದಾ ನಿರ್ದೋಷಿಗಳು.
೨೯. ಈ ಅಪರಾಧ ಯೋವಾಬನ ಮೇಲೂ ಅವನ ಸಂತಾನದವರೆಲ್ಲರ ಮೇಲೂ ಇರಲಿ ಅವನ ಮನೆಯಲ್ಲಿ ಮೇಹಸ್ರಾವವುಳ್ಳವರು, ಕುಷ್ಠರೋಗಿಗಳು, ಕುಂಟರು, ಕತ್ತಿಯಿಂದ ಹತರಾಗುವವರು ಹಾಗು ಭಿಕ್ಷೆಬೇಡುವವರು ಇದ್ದೇ ಇರಲಿ,” ಎಂದನು
೩೦. ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ವಧಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
೩೧. ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣೀತಟ್ಟುಗಳನ್ನು ಉಟ್ಟುಕೊಂಡು, ಸಂತಾಪಸೂಚಿಸುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ,” ಎಂದು ಆಜ್ಞಾಪಿಸಿದನು. ತಾನೂ ಚಟ್ಟದ ಹಿಂದೆ ಹೋದನು.
೩೨. ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು; ಜನರೆಲ್ಲರೂ ಅತ್ತರು.
೩೩. ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ, ಮೂರ್ಖರಿಗಾಗುವಂತೆ ನಿನಗೆ ದುರ್ಮರಣವಾಯಿತೇ!
೩೪. ನಿನ್ನ ಕೈ ಕಂಕಣಬದ್ಧವಾಗಿರಲಿಲ್ಲ, ನಿನ್ನ ಕಾಲಿಗೆ ಬೇಡಿ ಬಿದ್ದಿರಲಿಲ್ಲ, ದುಷ್ಟರಿಂದಲೋ ಎಂಬಂತೆ ನೀನು ಹತನಾದೆಯಲ್ಲಾ!” ಎಂದು ಶೋಕಗೀತೆಯನ್ನು ಹಾಡಿದನು. ಜನರು ಮತ್ತೆ ಕಣ್ಣೀರು ಸುರಿಸಿದರು.
೩೫. ಸೂರ್ಯಾಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಳುಗುವ ಮೊದಲು ನಾನು ರೊಟ್ಟಿಯನ್ನಾಗಲಿ ಬೇರೆ ಯಾವ ಆಹಾರವನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದು ಮಾಡಲಿ,” ಎಂದು ಆಣೆಯಿಟ್ಟು ಹೇಳಿದನು.
೩೬. ಜನರು ಇದನ್ನು ಕಂಡು ಮೆಚ್ಚಿದರು; ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.
೩೭. ನೇರನ ಮಗನಾದ ಅಬ್ನೇರನ ವಧೆಯಲ್ಲಿ ಅರಸನ ಕೈವಾಡವಿಲ್ಲ ಎಂಬುದು ಅವನ ಎಲ್ಲಾ ಜನರಿಗೂ ಇಸ್ರಯೇಲರಿಗೂ ಅದೇ ದಿವಸ ಗೊತ್ತಾಯಿತು.
೩೮. ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಯೇಲರಲ್ಲಿ ಹತನಾದವನು ಒಬ್ಬ ಶ್ರೇಷ್ಠನಾಯಕ ಹಾಗು ಮಹಾಪುರುಷ ಆಗಿದ್ದನೆಂಬುದು ನಿಮಗೆ ಗೊತ್ತಿದೆ.
೩೯. ನಾನು ರಾಜಾಭಿಷೇಕ ಹೊಂದಿದ್ದರೂ ಈಗ ಏನೂ ಮಾಡಲು ಅಶಕ್ತನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು. ಸರ್ವೇಶ್ವರನೇ ಕೆಡುಕರಿಗೆ ಮುಯ್ಯಿತೀರಿಸಲಿ,” ಎಂದು ಹೇಳಿದನು.

ಸಮುವೇಲನು ೨ ೪:೧-೧೨
೧. ಅಬ್ನೇರನು ಹೆಬ್ರೋನಿನಲ್ಲಿ ಸತ್ತನೆಂಬ ವರ್ತಮಾನ ಸೌಲನ ಮಗನಾದ ಈಷ್ಬೋಶೆತನಿಗೆ ಮುಟ್ಟಿತು; ಅವನ ಕೈಗಳು ಜೋಲುಬಿದ್ದಂತಾದವು; ಇಸ್ರಯೇಲರೆಲ್ಲರು ಕಳವಳಕ್ಕೆ ಈಡಾದರು.
೨. ಸೌಲನ ಮಗನಿಗೆ ಬಾಣ ಹಾಗು ರೇಕಾಬ್ ಎಂಬ ಇಬ್ಬರು ಸೇನಾಪತಿಗಳಿದ್ದರು. ಇವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಈ ಬೇರೋತ್ ಎಂಬುದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ;
೩. ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ ಅಂದಿನವರೆಗೂ ಅಲ್ಲೇ ಪ್ರವಾಸಿಗಳಾಗಿ ಇದ್ದರು.)
೪. ಸೌಲನ ಮಗ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾದದ್ದು ಹೀಗೆ: ಸೌಲ ಹಾಗು ಯೋನಾತಾನರು ಸತ್ತರೆಂಬ ವರ್ತಮಾನ ಜೆಸ್ರೀಲಿನಿಂದ ಬಂದಾಗ ಐದು ವರ್ಷದವನಾಗಿದ್ದ ಅವನನ್ನು ಅವನ ದಾದಿ ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕಾಲು ಮುರಿದುಕೊಂಡನು.
೫. ಈಷ್ಬೋಶೆತನು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಮನೆಯೊಳಗೆ ಮಲಗಿರುವಾಗ ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬ್ ಹಾಗು ಬಾಣ ಎಂಬವರು ಅವನ ಮನೆಯ ಬಳಿಗೆಹೋದರು.
೬. ಆಗ ಬಾಗಿಲು ಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಗಡಿಸಿ ನಿದ್ರೆಮಾಡುತ್ತಿರುವುದನ್ನು ಕಂಡು ಅವರು ಗುಟ್ಟಾಗಿ ಒಳಗೆ ಜಾರಿಕೊಂಡರು.
೭. ಒಳಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ ಅರಸನನ್ನು ಹೊಡೆದುಕೊಂದರು. ತಲೆಯನ್ನು ತೆಗೆದುಕೊಂಡರು. ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ಪ್ರಯಾಣಮಾಡಿ
೮. ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು ಆ ತಲೆಯನ್ನು ಅವನಿಗೆ ತೋರಿಸಿದರು; “ಇಗೋ, ನಿಮ್ಮ ಜೀವತೆಗೆಯಬೇಕೆಂದಿದ್ದ ನಿಮ್ಮ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ; ಅರಸರಾದ ನಮ್ಮ ಒಡೆಯರಿಗಾಗಿ ಸರ್ವೇಶ್ವರಸ್ವಾಮಿ ಸೌಲನಿಗೂ ಅವನ ಸಂತಾನಕ್ಕೂ ಈ ಹೊತ್ತು ಸೇಡುತೀರಿಸಿದ್ದಾರೆ,” ಎಂದರು.
೯. ದಾವೀದನು ಬೇರೋತಿನ ರಿಮ್ಮೋನನ ಮಕ್ಕಳು ಆದ ಆ ರೇಕಾಬ್ ಹಾಗು ಬಾಣ ಎಂಬವರಿಗೆ,
೧೦. “ಸೌಲನ ಮರಣವಾರ್ತೆಯನ್ನು ತಿಳಿಸುವುದು ಶುಭಕರವೆಂದು ಭಾವಿಸಿ ಬಂದು ನನಗೆ ಹೇಳಿದ ಅವನನ್ನು ಹಿಡಿದು ನಾನು ದಂಡಿಸಿದೆ. ಅವನಿಗೆ ಚಿಕ್ಲಗಿನಲ್ಲಿ ಮರಣ ದಂಡನೆಯೆಂಬ ಬಹುಮಾನವನ್ನು ಸಲ್ಲಿಸಿದೆ, ಎಂಬುದು ನಿಮಗೆ ಗೊತ್ತಿಲ್ಲವೆ?
೧೧. ಮಹಾದುಷ್ಟರಾದ ನೀವು ನೀತಿವಂತನ ಮನೆಹೊಕ್ಕು ಅವನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದ ಮೇಲೆ ಆ ರಕ್ತಾಪರಾಧಕ್ಕಾಗಿ ನಿಮಗೆ ಮುಯ್ಯಿ ತೀರಿಸುವುದು ಎಷ್ಟೋ ಅಗತ್ಯವಾಗಿದೆ. ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದ ಸರ್ವೇಶ್ವರನಾಣೆ, ನಿಮ್ಮನ್ನು ಭೂಲೋಕದಿಂದ ತೆಗೆದೇಬಿಡುವೆನು,” ಎಂದು ಹೇಳಿದನು.
೧೨. ಅಂತೆಯೇ ತನ್ನ ಆಳುಗಳಿಗೆ ಆಜ್ಞಾಪಿಸಿದನು. ಅವರು ಇವರನ್ನು ಕೊಂದು ಕೈಕಾಲುಗಳನ್ನು ಕತ್ತರಿಸಿ ಶವಗಳನ್ನು ಹೆಬ್ರೋನಿನ ಕೆರೆಯ ಬಳಿಯಲ್ಲಿ ನೇತುಹಾಕಿದರು. ಈಷ್ಬೋಶೆತನ ತಲೆಯನ್ನು ಹೆಬ್ರೋನಿನಲ್ಲಿದ್ದ ಇಬ್ನೇರನ ಸಮಾಧಿಯಲ್ಲಿ ಹೂಳಿದರು.

ಕೀರ್ತನೆಗಳು ೬೨:೫-೧೨
೫. ಎನ್ನ ಮನಕೆ ಶಾಂತಿ ದೇವನಿಂದಲೆ I ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ II
೬. ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II
೭. ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I ಭದ್ರವಾದ ಬಂಡೆ, ನನಗಾಶ್ರಯ ಆತನೆ II
೮. ಜನರೇ, ಸದಾ ಭರವಸೆ ಇಡಿ ದೇವನಲಿ I ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ II
೯. ನರಮಾನವರೆಲ್ಲರು ಬರೇ ಉಸಿರು I ನರಾಧಿಪತಿಗಳು ತೀರಾ ಹುಸಿಯು I ತ್ರಾಸಿನಲಿ ತೂಗಲು ಅವರೆಲ್ಲರು I ಉಸಿರಿಗಿಂತಲೂ ಅತ್ಯಂತ ಹಗುರು II
೧೦. ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II
೧೧. ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ ಕೇಳಿಸಿತು I ಸರ್ವಾಧಿಕಾರವು ದೇವನಿಗೇ ಸೇರಿದ ಸೊತ್ತು II
೧೨. ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ I ಸರ್ವರಿಗು ನೀಡುವೆ ಕೃತ್ಯಕೆ ತಕ್ಕ ಫಲ II

ಜ್ಞಾನೋಕ್ತಿಗಳು ೧೬:೧೩-೧೫
೧೩. ನೀತಿಯುತ ಮಾತನ್ನು ಅರಸನು ಮೆಚ್ಚುವನು; ಸತ್ಯವಾದಿಯನ್ನು ಆತನು ಪ್ರೀತಿಸುವನು.
೧೪. ಭೂಪನ ಕೋಪ ಮೃತ್ಯುವಿನ ದೂತ; ಅದನ್ನು ಶಮನಪಡಿಸಲು ಜಾಣನು ಶಕ್ತ.
೧೫. ಪ್ರಭುವಿನ ಮುಖಪ್ರಸನ್ನತೆ ಜೀವದ ಒರತೆ; ಆತನ ಕರುಣೆ ಮುಂಗಾರು ಮಳೆ.

ಯೊವಾನ್ನನು ೪:೩೧-೫೪
೩೧. ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯಮಾಡಿದರು.
೩೨. ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು.
೩೩. ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದುಕೊಟ್ಟಿರಬಹುದೆ?” ಎಂದು ಮಾತನಾಡಿಕೊಂಡರು.
೩೪. ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೇ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ.
೩೫. ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ.
೩೬. ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ.
೩೭. ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು.
೩೮. ನೀವು ದುಡಿಯದ ಎಡೆಯಲ್ಲಿ ಕೊಯ್ಲುಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ, ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು.
೩೯. ‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು.
೪೦. ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು.
೪೧. ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು.
೪೨. ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು.
೪೩. ಎರಡು ದಿನಗಳಾದ ಬಳಿಕ ಯೇಸು ಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು.
೪೪. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು.
೪೫. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು.
೪೬. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು.
೪೭. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು.
೪೮. ಯೇಸು ಅವನಿಗೆ, “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು.
೪೯. ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ,” ಎಂದು ಅಂಗಲಾಚಿದನು.
೫೦. ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು.
೫೧. ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು.
೫೨. ಎಷ್ಟುಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು.
೫೩. ‘ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು.
೫೪. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.