A A A A A

ಆದಿಕಾಂಡ ೪೭:೧-೩೧
೧. ಜೋಸೆಫನು ಫರೋಹನ ಬಳಿಗೆ ಬಂದು, “ನನ್ನ ತಂದೆಯೂ ಸಹೋದರರೂ ದನಕುರಿಗಳನ್ನು ಹಾಗೂ ಎಲ್ಲ ಆಸ್ತಿಪಾಸ್ತಿಯನ್ನು ತೆಗೆದುಕೊಂಡು ಕಾನಾನ್ ನಾಡಿನಿಂದ ಗೋಷೆನ್ ಪ್ರಾಂತ್ಯಕ್ಕೆ ಬಂದಿದ್ದಾರೆ,” ಎಂದು ತಿಳಿಸಿದನು.
೨. ಅದು ಮಾತ್ರವಲ್ಲ, ತನ್ನ ಅಣ್ಣತಮ್ಮಂದಿರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು.
೩. ಫರೋಹನು, “ನಿಮ್ಮ ಕಸುಬು ಏನು”, ಎಂದು ಕೇಳಲು ಅವರು, “ನಿಮ್ಮ ಸೇವಕರಾದ ನಾವು ನಮ್ಮ ಪೂರ್ವಜರ ಪದ್ಧತಿಯ ಮೇರೆಗೆ ಕುರಿ ಕಾಯುವವರು;
೪. ಕಾನಾನ್ ನಾಡಿನಲ್ಲಿ ಬರವು ಘೋರವಾದ್ದರಿಂದ ನಿಮ್ಮ ಸೇವಕರ ದನಕುರಿಗಳಿಗೆ ಮೇವು ಸಿಕ್ಕಲಿಲ್ಲ. ಆದ್ದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ಸೇವಕರು ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.
೫. ಫರೋಹನು ಜೋಸೆಫನಿಗೆ, “ನಿನ್ನ ತಂದೆಯೂ ಅಣ್ಣತಮ್ಮಂದಿರು ನಿನ್ನ ಬಳಿಗೆ ಬಂದಿದ್ದಾರಲ್ಲವೆ?
೬. ಈಜಿಪ್ಟ್ ದೇಶವು ನಿನ್ನ ಮುಂದಿದೆ; ಅದರಲ್ಲಿನ ಉತ್ತಮ ಭಾಗವನ್ನು ನಿನ್ನ ತಂದೆಗೂ ಸಹೋದರರಿಗೂ ವಾಸಸ್ಥಾನವಾಗಿ ನೇಮಿಸು; ಗೋಷೆನ್ ಪ್ರಾಂತ್ಯದಲ್ಲಿ ಬೇಕಾದರೆ ವಾಸಮಾಡಲಿ; ಅವರಲ್ಲಿ ನುರಿತವರು ಯಾರಾದರು ಇದ್ದರೆ ಅವರನ್ನು ನನ್ನ ದನಕರುಗಳ ಮೇಲ್ವಿಚಾರಣೆಗೆ ನೇಮಿಸು,” ಎಂದನು.
೭. ಬಳಿಕ ಜೋಸೆಫನು ತನ್ನ ತಂದೆ ಯಕೋಬನನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು. ಯಕೋಬನು ಫರೋಹನನ್ನು ಆಶೀರ್ವದಿಸಿದನು.
೮. ಫರೋಹನು, “ನಿನಗೆಷ್ಟು ವರ್ಷ?” ಎಂದು ಕೇಳಿದನು.
೯. ಯಕೋಬನು, “ನನ್ನ ಬಾಳಿನ ಪಯಣದ ದಿನಗಳು ನೂರ ಮೂವತ್ತು ವರ್ಷಗಳಷ್ಟೇ. ಎಣಿಕೆಯಲ್ಲಿ ಅವು ಕಮ್ಮಿ; ಕಷ್ಟದುಃಖದಲ್ಲಿ ಜಾಸ್ತಿ; ನನ್ನ ಪೂರ್ವಜರು ಬಾಳಿದಷ್ಟು ವರ್ಷಗಳು ನನಗಾಗಿಲ್ಲ,” ಎಂದು ಹೇಳಿ
೧೦. ಫರೋಹನನ್ನು ಆಶೀರ್ವದಿಸಿ, ಅವನ ಸನ್ನಿಧಿಯಿಂದ ಹೊರಟುಹೋದನು.
೧೧. ಫರೋಹನ ಅಪ್ಪಣೆಯ ಮೇರೆಗೆ ಜೋಸೆಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಈಜಿಪ್ಟಿನಲ್ಲಿ ವಾಸಸ್ಥಾನವನ್ನು ನೇಮಿಸಿ, ಅದರಲ್ಲಿ ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸೊತ್ತನ್ನು ಕೊಟ್ಟನು.
೧೨. ತಂದೆಗೂ ಸಹೋದರರಿಗೂ ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರಕೊಟ್ಟು ಅವರನ್ನು ಸಂರಕ್ಷಿಸಿದನು.
೧೩. ಬರವು ಬಹು ಘೋರವಾಗಿತ್ತು. ದೇಶದ ಯಾವ ಭಾಗದಲ್ಲೂ ಆಹಾರ ಸಿಕ್ಕುತ್ತಿರಲಿಲ್ಲ. ಈ ನಿಮಿತ್ತ ಈಜಿಪ್ಟ್ ದೇಶವೂ ಕಾನಾನ್ ನಾಡೂ ಹಾಗೆ ಸೊರಗಿಹೋಗುತ್ತಿದ್ದುವು.
೧೪. ಜೋಸೆಫನು ಈಜಿಪ್ಟ್ ದೇಶದವರಿಗೂ ಕಾನಾನ್ ನಾಡಿಗರಿಗೂ ದವಸಧಾನ್ಯ ಮಾರಿ ಬಂದ ಹಣದಿಂದ ಫರೋಹನ ಬೊಕ್ಕಸವನ್ನು ತುಂಬಿದನು.
೧೫. ಈಜಿಪ್ಟಿನ ಹಾಗೂ ಕಾನಾನಿನ ಹಣವೆಲ್ಲ ಮುಗಿದುಹೋದಾಗ ಈಜಿಪ್ಟಿನವರು ಜೋಸೆಫನ ಬಳಿಗೆ ಬಂದು, “ನಾವೇಕೆ ನಿಮ್ಮ ಕಣ್ಮುಂದೆ ಸಾಯಬೇಕು? ನಮಗೆ ಆಹಾರ ಕೊಡಿ, ನಮ್ಮ ಹಣ ಮುಗಿದುಹೋಯಿತು,” ಎಂದರು.
೧೬. ಜೋಸೆಫನು, “ನಿಮ್ಮ ದನಕರುಗಳನ್ನು ತನ್ನಿ, ಹಣವಿಲ್ಲದಿದ್ದರೆ ದನಕರುಗಳನ್ನು ತೆಗೆದುಕೊಂಡು ಧಾನ್ಯ ಕೊಡಿಸುತ್ತೇನೆ,” ಎಂದನು.
೧೭. ಅವರು ತಮ್ಮ ಪಶುಪ್ರಾಣಿಗಳನ್ನು ಜೋಸೆಫನ ಬಳಿಗೆ ತಂದರು. ಅವನು ಅವರ ಕುದುರೆಗಳನ್ನೂ ದನಕುರಿಕತ್ತೆಗಳನ್ನೂ ತೆಗೆದುಕೊಂಡು ಅವರಿಗೆ ಧಾನ್ಯ ಕೊಡಿಸಿದನು. ಹೀಗೆ ಆ ವರ್ಷ ಅವರ ಪಶುಪ್ರಾಣಿಗಳನ್ನು ಪಡೆದು, ಧಾನ್ಯಕೊಟ್ಟು ಅವರನ್ನು ಕಾಪಾಡಿದನು.
೧೮. ಆ ವರ್ಷ ಕಳೆದು ಮಾರನೆಯ ವರ್ಷದಲ್ಲಿ ಅವರು ಅವನ ಬಳಿಗೆ ಬಂದು, “ನಮ್ಮ ಹಣವೆಲ್ಲ ವೆಚ್ಚವಾಯಿತು. ನಮ್ಮ ಪಶುಪ್ರಾಣಿಗಳು ದಣಿಯ ವಶವಾದುವು; ಇನ್ನು ಉಳಿದಿರುವುದು ನಮ್ಮ ಭೂಮಿ ಮತ್ತು ದೇಹಗಳೇ ಹೊರತು ಬೇರೇನೂ ಇಲ್ಲ; ದಣಿಗೆ ಮುಚ್ಚುಮರೆಯಿಲ್ಲದೆ ತಿಳಿಸುತ್ತಿದ್ದೇವೆ.
೧೯. ನಾವೇಕೆ ನಿಮ್ಮ ಕಣ್ಣೆದುರಿಗೆ ಸಾಯಬೇಕು? ನಮ್ಮ ಭೂಮಿಯೇಕೆ ಹಾಳಾಗಬೇಕು? ನಮ್ಮನ್ನೂ ನಮ್ಮ ಭೂಮಿಯನ್ನೂ ತೆಗೆದುಕೊಂಡು ಧಾನ್ಯ ಕೊಡಿ, ನಾವು ನಮ್ಮ ಭೂಮಿಯನ್ನು ಫರೋಹನಿಗೆ ಕೊಟ್ಟುಬಿಟ್ಟು ಅವರಿಗೆ ಗುಲಾಮರಾಗುತ್ತೇವೆ. ನಾವು ಸಾಯದೆ ಬದುಕಬೇಕಾದರೆ ಮತ್ತು ಭೂಮಿ ಪಾಳುಬೀಳಬಾರದಿದ್ದರೆ ಧಾನ್ಯಕೊಡಿ,” ಎಂದು ಕೇಳಿದರು.
೨೦. ಜೋಸೆಫ್ ಈಜಿಪ್ಟ್ ದೇಶದ ಎಲ್ಲ ಸಾಗುವಳಿ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಬರದ ಘೋರತೆಯಿಂದಾಗಿ ಈಜಿಪ್ಟಿನವರು ತಮ್ಮ ತಮ್ಮ ಹೊಲಗದ್ದೆಗಳನ್ನು ಮಾರಿಬಿಟ್ಟರು. ಹೀಗೆ ಸಾಗುವಳಿ ಭೂಮಿಯೆಲ್ಲ ಫರೋಹನದಾಯಿತು.
೨೧. ಈಜಿಪ್ಟಿನ ಎಲ್ಲೆಯಿಂದ ಎಲ್ಲೆಯವರೆಗೆ ಜನರನ್ನು ಊಳಿಗಕ್ಕೆ ಈಡುಮಾಡಿದನು.
೨೨. ಅರ್ಚಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಅವರಿಗೆ ಫರೋಹನಿಂದ ಭತ್ಯ ದೊರಕುತ್ತಿತ್ತು. ಆ ಭತ್ಯದಿಂದ ಜೀವನ ನಡೆಸುತ್ತಿದ್ದ ಆ ಅರ್ಚಕರು ತಮ್ಮ ಭೂಮಿಯನ್ನು ಮಾರಲಿಲ್ಲ.
೨೩. ಜೋಸೆಫನು ಪ್ರಜೆಗಳಿಗೆ, “ನಾನು ಈ ದಿನ ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆಂದು ತಿಳಿದುಕೊಳ್ಳಿ. ಇಗೋ, ಬಿತ್ತನೆಗಾಗಿ ನಿಮಗೆ ಬೀಜವನ್ನು ಕೊಟ್ಟಿದ್ದೇನೆ. ಭೂಮಿಯಲ್ಲಿ ಬಿತ್ತಿರಿ.
೨೪. ಕೊಯ್ದು ಕಾಲದಲ್ಲಿ ಐದರಲ್ಲೊಂದು ಪಾಲು ಫರೋಹನಿಗೆ ಸಲ್ಲಬೇಕು. ಮಿಕ್ಕ ನಾಲ್ಕು ಪಾಲು ನಿಮ್ಮದು. ಅದನ್ನು ಬಿತ್ತನೆಗಾಗಿ ಮತ್ತು ನಿಮ್ಮ ಮನೆಯವರ ಹಾಗು ಕುಟುಂಬದವರ ಜೀವನಕ್ಕಾಗಿ ಇಟ್ಟುಕೊಳ್ಳಿ,” ಎಂದು ಹೇಳಿದನು.
೨೫. ಅದಕ್ಕೆ ಅವರು, ನಮ್ಮ ಪ್ರಾಣಗಳನ್ನು ಉಳಿಸಿದ್ದೀರಿ. ನಮ್ಮ ದಣಿಗಳಾದ ನಿಮ್ಮ ದಯೆ ನಮ್ಮ ಮೇಲಿರಲಿ; ನಾವು ಫರೋಹನಿಗೆ ಊಳಿಗದವರಾಗಿರುತ್ತೇವೆ,” ಎಂದರು.
೨೬. ಬೆಳೆಯಲ್ಲಿ ಐದನೆಯ ಒಂದು ಪಾಲು ಫರೋಹನಿಗೆ ಸಲ್ಲತಕ್ಕದ್ದು ಎಂಬ ಯೋಜನೆಯನ್ನು ಜೋಸೆಫನು ಈಜಿಪ್ಟ್ ದೇಶದ ಒಂದು ಶಾಸನವನ್ನಾಗಿ ಮಾಡಿದನು. ಈ ದಿನದವರೆಗೂ ಆ ಶಾಸನ ರೂಢಿಯಲ್ಲಿದೆ. ಅರ್ಚಕರ ಭೂಮಿ ಮಾತ್ರ ಫರೋಹನಿಗೆ ಸ್ವಾಧೀನವಾಗಲಿಲ್ಲ.
೨೭. ಇಸ್ರಯೇಲರು ಈಜಿಪ್ಟ್ ದೇಶಕ್ಕೆ ಸೇರಿದ ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡಿದರು. ಅಲ್ಲಿ ಅವರು ಆಸ್ತಿಪಾಸ್ತಿಯನ್ನು ಸಂಪಾದಿಸಿಕೊಂಡು ಬಹು ಸಂತಾನವುಳ್ಳವರಾಗಿ ಅಭಿವೃದ್ಧಿಯಾದರು.
೨೮. ಯಕೋಬನು ಈಜಿಪ್ಟಿನಲ್ಲಿ ಹದಿನೇಳು ವರ್ಷ ಇದ್ದನು. ಅವನ ಜೀವಮಾನ ಕಾಲ ಒಟ್ಟಿಗೆ ನೂರನಲವತ್ತೇಳು ವರ್ಷಗಳು.
೨೯. ಯಕೋಬನಿಗೆ ಅಂತಿಮಕಾಲ ಹತ್ತಿರ ಆದಾಗ ಅವನು ತನ್ನ ಮಗ ಜೋಸೆಫನನ್ನು ಕರೆಸಿ, “ನನ್ನ ಮೇಲೆ ನಿನಗೆ ಪ್ರೀತಿಯಿದ್ದರೆ ನೀನು ನನ್ನ ಮಾತನ್ನು ಪ್ರೀತಿಯಿಂದಲೂ ಪ್ರಾಮಾಣಿಕತೆಯಿಂದಲೂ ನಡೆಸಿಕೊಡಬೇಕು. ಅದೇನೆಂದರೆ; ನನ್ನನ್ನು ಈಜಿಪ್ಟ್ ದೇಶದಲ್ಲಿ ಸಮಾಧಿ ಮಾಡಬಾರದು.
೩೦. ನಾನು ಮೃತರಾದ ಪಿತೃಗಳೊಂದಿಗೆ ಸೇರಿಕೊಂಡಾಗ, ನನ್ನ ಶವವನ್ನು ಈಜಿಪ್ಟ್ ದೇಶದಿಂದ ತೆಗೆದುಕೊಂಡು ಹೋಗಿ, ಆ ಪಿತೃಗಳ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಬೇಕು. ಹಾಗೆ ಮಾಡುತ್ತೇನೆಂದು ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಬೇಕು\ ಎಂದು ಕೇಳಿಕೊಂಡನು. ಅವನು, “ನೀನು ಹೇಳಿದಂತೆಯೇ ಮಾಡುತ್ತೇನೆ,” ಎಂದು ಪ್ರಮಾಣ ಮಾಡಿದನು.
೩೧. ಆಗ ಯಕೋಬನು ಆ ಹಾಸಿಗೆಯ ತಲೆಭಾಗದ ಕಡೆ ಬಾಗಿ ಸ್ತೋತ್ರ ಮಾಡಿದನು.

ಆದಿಕಾಂಡ ೪೮:೧-೨೨
೧. ಕೆಲವು ಕಾಲವಾದ ಮೇಲೆ, “ತಂದೆ ಬಹಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ,” ಎಂಬ ಸುದ್ದಿ ಜೋಸೆಫನಿಗೆ ಬಂದಿತು. ಅವನು ಮನಸ್ಸೆ ಮತ್ತು ಎಫ್ರಯಿಮ್‍ ಎಂಬ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.
೨. “ನಿಮ್ಮ ಮಗ ಜೋಸೆಫನು ಬಂದಿದ್ದಾನೆ,” ಎಂದು ಯಕೋಬನಿಗೆ ತಿಳಿಸಿದಾಗ ಅವನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.
೩. ಅವನು ಜೋಸೆಫನಿಗೆ, “ಸರ್ವವಲ್ಲಭರಾದ ದೇವರು ಕಾನಾನ್ ನಾಡಿನ ಲೂಜಿನಲ್ಲಿ ನನಗೆ ದರ್ಶನಕೊಟ್ಟು, ಆಶೀರ್ವದಿಸಿ -
೪. ‘ನಾನು ನಿನ್ನನ್ನು ಫಲಪ್ರದನನ್ನಾಗಿ ಮಾಡಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು; ಅನೇಕ ಜನರಿಗೆ ನಿನ್ನನ್ನು ಮೂಲಪುರುಷನನ್ನಾಗಿ ಮಾಡುವೆನು; ನಿನ್ನ ತರುವಾಯ ನಿನ್ನ ಸಂತತಿಗೆ ಈ ನಾಡನ್ನು ಶಾಶ್ವತ ಸೊತ್ತನ್ನಾಗಿ ಕೊಡುವೆನು,’ ಎಂದು ಹೇಳಿದರು.
೫. “ನಾನು ನಿನ್ನ ಬಳಿಗೆ ಈಜಿಪ್ಟ್ ದೇಶಕ್ಕೆ ಬರುವುದಕ್ಕೆ ಮುಂಚೆ ಇಲ್ಲಿ ಹುಟ್ಟಿದ್ದ ನಿನ್ನಿಬ್ಬರು ಮಕ್ಕಳು ನನ್ನ ಮಕ್ಕಳಾಗಬೇಕು. ರೂಬೇನ್ ಮತ್ತು ಸಿಮೆಯೋನ್ ನನ್ನ ಮಕ್ಕಳಾಗಿರುವಂತೆಯೇ ಎಫ್ರಯಿಮ್ ಮತ್ತು ಮನಸ್ಸೆ ನನ್ನ ಮಕ್ಕಳಾಗಿರಲಿ.
೬. ಅವರ ತರುವಾಯ ನೀನು ಪಡೆದ ಮಕ್ಕಳು ನಿನ್ನವರಾಗಿರಲಿ. ಅವರು ತಮ್ಮ ಅಣ್ಣಂದಿರ ಸೊತ್ತಿಗೆ ಬಾಧ್ಯತೆ ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
೭. ಏಕೆಂದರೆ ನಿಮ್ಮ ತಾಯಿ ರಾಖೇಲಳು, ನಾನು ಮೆಸಪೊಟೇಮಿಯಾದಿಂದ ಬರುವಾಗ, ಕಾನಾನ್ ನಾಡಿನಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನು ಸ್ವಲ್ಪ ದೂರ ಇದ್ದಾಗಲೆ ದಾರಿಯಲ್ಲಿ ಸತ್ತು ನನ್ನನ್ನು ಅಗಲಿಹೋದಳು. ಈಗ ಬೇತ್ಲೆಹೇಮ್ ಎನಿಸಿಕೊಳ್ಳುವ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಆಕೆಯನ್ನು ಸಮಾಧಿಮಾಡಿದೆ,” ಎಂದು ಹೇಳಿದನು.
೮. ಯಕೋಬನು ಜೋಸೆಫನ ಮಕ್ಕಳನ್ನು ನೋಡಿ, “ಇವರು ಯಾರು?” ಎಂದು ಕೇಳಿದನು.
೯. ಅದಕ್ಕೆ ಜೋಸೆಫನು, “ಈ ದೇಶದಲ್ಲಿ ದೇವರು ನನಗೆ ಅನುಗ್ರಹಿಸಿದ ಮಕ್ಕಳು,” ಎಂದನು. ಆಗ ತಂದೆ ಯಕೋಬನು, “ಇವರನ್ನು ನಾನು ಆಶೀರ್ವದಿಸುತ್ತೇನೆ; ನನ್ನ ಹತ್ತಿರಕ್ಕೆ ಕರೆದುಕೊಂಡು ಬಾ,” ಎಂದನು.
೧೦. ವೃದ್ಧಾಪ್ಯದ ನಿಮಿತ್ತ ಯಕೋಬನ ಕಣ್ಣು ಮೊಬ್ಬಾಗಿತ್ತು. ಜೋಸೆಫನು ಆ ಮಕ್ಕಳನ್ನು ಹತ್ತಿರಕ್ಕೆ ತಂದಾಗ ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
೧೧. ಅನಂತರ ಜೋಸೆಫನಿಗೆ, “ನಿನ್ನ ಮುಖವನ್ನು ಮತ್ತೆ ನೋಡುವೆನೆಂದು ನಾನು ನೆನಸಿರಲಿಲ್ಲ. ಈಗ ನಿನ್ನನ್ನು ಮಾತ್ರವಲ್ಲ, ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾರೆ!” ಎಂದನು.
೧೨. ಆಗ ಜೋಸೆಫನು ತಂದೆಯ ಮಡಲಿನಿಂದ ತನ್ನ ಮಕ್ಕಳನ್ನು ಎತ್ತಿಕೊಂಡು ತಂದೆಗೆ ನೆಲದ ತನಕ ಬಾಗಿ ನಮಸ್ಕರಿಸಿದನು.
೧೩. ತರುವಾಯ ಜೋಸೆಫನು ಎಫ್ರಯಿಮನನ್ನು ತನ್ನ ಬಲಕ್ಕೆ ಯಕೋಬನ ಎಡಗೈಗೆದುರಾಗಿ ಮತ್ತು ಮನಸ್ಸೆಯನ್ನು ತನ್ನ ಎಡಕ್ಕೆ, ಯಕೋಬನ ಬಲಗೈಗೆದುರಾಗಿ, ತಂದೆಯ ಮುಂದೆ ನಿಲ್ಲಿಸಿದನು.
೧೪. ಮನಸ್ಸೆಯು ಜೇಷ್ಠಮಗನಾಗಿದ್ದರೂ ಯಕೋಬನು ತನ್ನ ಕೈಗಳನ್ನು ಅಡ್ಡಡ್ಡವಾಗಿ ಚಾಚಿ ಕಿರಿಯವನಾದ ಎಫ್ರಯಿಮನ ತಲೆಯ ಮೇಲೆ ಬಲಗೈಯನ್ನು, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನು ಇಟ್ಟು,
೧೫. ಜೋಸೆಫನನ್ನು ಹೀಗೆಂದು ಆಶೀರ್ವದಿಸಿದನು: “ನನ್ನ ಪಿತೃಗಳಾದ ಅಬ್ರಹಾಮ್, ಇಸಾಕರು ಯಾವ ದೇವರ ಸಮ್ಮುಖದಲ್ಲಿ ನಡೆದುಕೊಂಡರೋ ಆ ದೇವರು, ಚಿಕ್ಕಂದಿನಿಂದ ಇಂದಿನವರೆಗೆ ನನ್ನನ್ನು ಪರಿಪಾಲಿಸಿಕೊಂಡು ಬಂದ ಆ ದೇವರು,
೧೬. ಸಕಲ ಆಪತ್ತು ಕೇಡುಗಳಿಂದ ನನ್ನನ್ನು ಕಾಪಾಡಿಕೊಂಡು ಬಂದ ಆ ದೂತನು, ಈ ಹುಡುಗರನ್ನು ಆಶೀರ್ವದಿಸಲಿ! ಅವರ ಮುಖಾಂತರ ನನ್ನ ಹೆಸರೂ ನನ್ನ ಪಿತೃಗಳಾದ ಅಬ್ರಹಾಮ್ - ಇಸಾಕರ ಹೆಸರೂ ಊರ್ಜಿತಗೊಳ್ಳಲಿ; ಧರೆಯಲ್ಲಿ ಇವರು ದೊಡ್ಡ ಜನಸ್ತೋಮವಾಗಿ ಬೆಳೆಯಲಿ!”
೧೭. ತನ್ನ ತಂದೆ ಬಲಗೈಯನ್ನು ಎಫ್ರಯಿಮನ ತಲೆಯ ಮೇಲೆ ಇಟ್ಟದ್ದು ಜೋಸೆಫನಿಗೆ ಹಿಡಿಸಲಿಲ್ಲ. ಅವನು ಆ ಕೈಯನ್ನು ಹಿಡಿದು ಎಫ್ರಯಿಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಡುವಂತೆ ತಂದೆಗೆ,
೧೮. “ಹಾಗಲ್ಲ ಅಪ್ಪಾ, ಇವನೇ ಜೇಷ್ಠ ಪುತ್ರ; ಬಲಗೈಯನ್ನು ಇವನ ತಲೆಯ ಮೇಲೆ ಇಡು”, ಎಂದು ಹೇಳಿದ.
೧೯. ಆದರೆ ತಂದೆ ಅದಕ್ಕೆ ಒಪ್ಪದೆ, “ಗೊತ್ತು ಮಗನೇ, ನನಗೆ ಗೊತ್ತು; ಇವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವುದು; ಇವನೂ ಬಲಿಷ್ಠನಾಗುವನು. ಅವನಿಂದ ರಾಷ್ಟ್ರಗಳ ಸಮೂಹವೆ ಉತ್ಪತ್ತಿಯಾಗುವುದು,” ಎಂದು ಹೇಳಿದನು.
೨೦. ಆ ದಿನ ಅವರನ್ನು ಆಶೀರ್ವದಿಸುತ್ತಾ ಹೀಗೆಂದನು: \ಎಫ್ರಯಿಮ್ - ಮನಸ್ಸೆಯಂತೆ ನಿಮ್ಮನ್ನೂ ಅಭಿವೃದ್ಧಿಗೊಳಿಸಲಿ ದೇವರು! ಹೀಗೆ ನಿಮ್ಮ ಹೆಸರನ್ನು ಉಚ್ಚರಿಸುತ್ತಾ ಇತರರನ್ನು ಆಶೀರ್ವದಿಸುವರು ಇಸ್ರಯೇಲರು\. ಈ ರೀತಿಯಾಗಿ ಅವನು ಎಫ್ರಯಿಮನನ್ನು ಮನಸ್ಸೆಗಿಂತ ಮುಂದಿಟ್ಟನು.
೨೧. ಬಳಿಕ ಯಕೋಬನು ಜೋಸೆಫನಿಗೆ, “ನನಗೆ ಮರಣ ಸಮೀಪಿಸಿದೆ; ಆದರೆ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ಪಿತೃಗಳ ನಾಡಿಗೆ ಮರಳಿ ಬರಮಾಡುವರು.
೨೨. ಇದಲ್ಲದೆ, ಕತ್ತಿ - ಬಿಲ್ಲುಗಳಿಂದ ನಾನು ಅಮೋರಿಯರ ವಶದಿಂದ ಪಡೆದ ಬೆಟ್ಟದ ತಪ್ಪಲನ್ನು, ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ, ನಿನಗೆ ಕೊಟ್ಟಿದ್ದೇನೆ,” ಎಂದು ಹೇಳಿದನು.

ಕೀರ್ತನೆಗಳು ೧೩:೧-೬
೧. ಎಷ್ಟುಕಾಲ ಪ್ರಭು, ನೀ ಎನ್ನ ಪೂರ್ತಿ ಮರೆತಿರುವೆ? I ಇನ್ನೆಷ್ಟರ ತನಕ ನೀನೆನಗೆ ವಿಮುಖನಾಗಿರುವೆ? II
೨. ಎನಿತುಕಾಲ ನಾ ಚಿಂತೆಯಿಂದಿರಬೇಕು? I ದಿನವೆಲ್ಲಾ ಮನದಲ್ಲಿ ನೊಂದಿರಬೇಕು? I ನನ್ನ ಮೇಲೆ ವೈರಿ ದೊರೆತನ ಮಾಡಬೇಕು? II
೩. ಹೇ ಪ್ರಭು, ಹೇ ದೇವ, ಎನ್ನ ವೀಕ್ಷಿಸಿ ಸದುತ್ತರ ಪಾಲಿಸು I ಮರಣ ನಿದ್ರೆ ಬಾರದಂತೆ ನನ್ನ ನೇತ್ರಗಳನು ಬೆಳಗಿಸು II
೪. ತಾನು ಜಯಗಳಿಸಿದೆನೆಂದು ಶತ್ರು ಹೇಳಿಕೊಳ್ಳದಿರಲಿ I ನಾನು ಜಾರಿ ಬಿದ್ದೆನೆಂದು ವೈರಿ ಹಿರಿಹಿಗ್ಗದಿರಲಿ II
೫. ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II
೬. ಪ್ರಭು ಮಾಡಿದ ಮಹೋಪಕಾರಗಳಿಗಾಗಿ I ಹಾಡುವೆ ಗೀತವನು ಮನಃಪೂರ್ವಕವಾಗಿ II

ಜ್ಞಾನೋಕ್ತಿಗಳು ೪:೧೮-೧೯
೧೮. ಸಜ್ಜನರ ಮಾರ್ಗ ಪ್ರಾತಃಕಾಲದ ಬೆಳಕಿನಂತೆ; ಅದರ ಬೆಳಕು ಹೆಚ್ಚುತ್ತಿರುತ್ತದೆ ಬಟ್ಟ ಹಗಲವರೆಗೆ.
೧೯. ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.

ಮತ್ತಾಯನು ೧೫:೨೧-೩೯
೨೧. ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು.
೨೨. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.
೨೩. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು.
೨೪. ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು.
೨೫. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು.
೨೬. ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು.
೨೭. ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು.
೨೮. ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.
೨೯. ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು.
೩೦. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು.
೩೧. ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ಥರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು.
೩೨. ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, “ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು,” ಎಂದರು.
೩೩. ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಕೇಳಿದರು.
೩೪. “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಯೇಸು ಕೇಳಿದರು. “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದು ಶಿಷ್ಯರು ಉತ್ತರಕೊಟ್ಟರು.
೩೫. ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು.
೩೬. ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು.
೩೭. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.
೩೮. ಊಟಮಾಡಿದವರಲ್ಲಿ ಹೆಂಗಸರು, ಮಕ್ಕಳಲ್ಲದೆ ಗಂಡಸರೇ ನಾಲ್ಕು ಸಾವಿರಮಂದಿ ಇದ್ದರು.
೩೯. ತರುವಾಯ ಯೇಸು ಜನರ ಗುಂಪನ್ನು ಕಳುಹಿಸಿಬಿಟ್ಟು, ದೋಣಿಯನ್ನು ಹತ್ತಿ, ಮಗದಾನ್ ಎಂಬ ಪ್ರಾಂತ್ಯಕ್ಕೆ ಹೊರಟುಹೋದರು.