A A A A A

ಸಮುವೇಲನು ೨ ೯:೧-೧೩
೧. ಒಂದು ದಿನ ದಾವೀದನು, “ಸೌಲನ ಮನೆಯವರಲ್ಲಿ ಯಾರಾದರು ಇನ್ನೂ ಉಳಿದಿದ್ದಾರೋ? ಯೋನಾತಾನನ ಸಲುವಾಗಿ ನಾನು ಅವರಿಗೆ ದಯೆತೋರಿಸಬೇಕೆಂದಿರುತ್ತೇನೆ,” ಎಂದು ವಿಚಾರಿಸಿದನು.
೨. ಸೌಲನ ಮನೆಯಲ್ಲಿ ಊಳಿಗನಾಗಿದ್ದ ಚೀಬ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?’ ಎಂದು ಕೇಳಲು ಅವನು, “ನಿಮ್ಮ ಊಳಿಗನಾದ ನಾನು ಚೀಬನೇ,” ಎಂದು ಉತ್ತರಕೊಟ್ಟನು.
೩. ಆಗ ಅರಸನು, “ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆ ತೋರಿಸುತ್ತೇನೆ,” ಎಂದನು. ಆಗ ಚೀಬನು, “ಯೋನಾತಾನನಿಗೆ, ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ,” ಎಂದು ಹೇಳಿದನು.
೪. ಅರಸನು, “ಎಲ್ಲಿದ್ದಾನೆ?” ಎಂದು ಕೇಳಲು ಅವನು, “ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿರುತ್ತಾನೆ,” ಎಂದು ಉತ್ತರಕೊಟ್ಟನು.
೫. ಕೂಡಲೆ ಅರಸನು ದೂತರನ್ನು ಕಳುಹಿಸಿ ಅವನನ್ನು ಲೋದೆಬಾರಿನಲ್ಲಿದ್ದ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಕರೆಯಿಸಿದನು.
೬. ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಆ ಮೆಫೀಬೋಶೆತನು ಬಂದು ದಾವೀದನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದಾವೀದನು, “ಮೆಫೀಬೋಶೆತನೇ,” ಎಂದೊಡನೆ ಅವನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ,” ಎಂದನು.
೭. ಆಗ ದಾವೀದನು, “ಹೆದರಬೇಡ; ನಿನ್ನ ತಂದೆ ಯೋನಾತಾನನ ನೆನಪಿನಲ್ಲಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜ ಸೌಲನ ಭೂಮಿಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ; ಇದಲ್ಲದೆ ನೀನು ಪ್ರತಿದಿನ ನನ್ನ ಪಂಕ್ತಿಯಲ್ಲೇ ಊಟಮಾಡಬೇಕು,” ಎಂದು ಹೇಳಿದನು.
೮. ಮೆಫೀಬೋಶೆತನು ಇದನ್ನು ಕೇಳಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ಸತ್ತ ನಾಯಿಯಂತಿರುವ ನನ್ನನ್ನು ತಾವು ಗಮನಿಸಲು ನಿಮ್ಮ ಗುಲಾಮನಾದ ನಾನು ಅಪಾತ್ರನೇ!” ಎಂದನು.
೯. ಅನಂತರ ದಾವೀದನು ಸೌಲನ ಸೇವಕ ಚೀಬನನ್ನು ಕರೆದು ಅವನಿಗೆ, “ನಿನ್ನ ಯಜಮಾನ ಸೌಲನಿಗೂ ಅವನ ಕುಟುಂಬದವರಿಗೂ ಇದ್ದುದ್ದನ್ನೆಲ್ಲಾ ಅವನ ಮೊಮ್ಮಗನಿಗೆ ಕೊಟ್ಟಿರುತ್ತೇನೆ.
೧೦. ನೀನೂ ನಿನ್ನ ಮಕ್ಕಳೂ ಆಳುಗಳೂ ನಿನ್ನ ಯಜಮಾನನ ಮೊಮ್ಮಗನಿಗಾಗಿ ಆ ಭೂಮಿಯನ್ನು ವ್ಯವಸಾಯಮಾಡಿ ಅದರ ಬೆಳೆಯನ್ನು ಇವನ ಮನೆಯವರ ಅಶನಾರ್ಥವಾಗಿ ತಂದುಕೊಡಬೇಕು. ಇವನಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲೇ ಭೋಜನವಾಗುವುದು,” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ ಇಪ್ಪತ್ತು ಮಂದಿ ಆಳುಗಳೂ ಇದ್ದರು.
೧೧. ಚೀಬನು ಅರಸನಿಗೆ, “ಒಡೆಯರಾದ ಅರಸರ ಅಪ್ಪಣೆ ಮೇರೆಗೆ ಸೇವಕನು ನಡೆಯುವನು,” ಎಂದು ಉತ್ತರಕೊಟ್ಟನು. ಈ ಪ್ರಕಾರ ಮೆಫೀಬೋಶೆತನು ರಾಜಪುತ್ರರಂತೆ ಅರಸನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.
೧೨. ಅವನಿಗೆ ಮೀಕನೆಂಬೊಬ್ಬ ಚಿಕ್ಕ ಮಗನಿದ್ದನು; ಚೀಬನ ಮನೆಯವರೆಲ್ಲರೂ ಅವನ ಸೇವಕರು.
೧೩. ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದುದರಿಂದ ಅವನು ಜೆರುಸಲೇಮಿನಲ್ಲೇ ವಾಸಿಸಿದನು. ಅವನ ಎರಡು ಕಾಲುಗಳೂ ಕುಂಟಾಗಿದ್ದವು.

ಸಮುವೇಲನು ೨ ೧೦:೧-೧೯
೧. ಇದಾದನಂತರ ಅಮ್ಮೋನಿಯರ ಅರಸನು ಸತ್ತನು. ಅವನಿಗೆ ಬದಲಾಗಿ ಅವನ ಮಗ ಹಾನೂನನು ಅರಸನಾದನು.
೨. ದಾವೀದನು, “ನಾಹಾಷನು ನನಗೆ ಸ್ನೇಹತೋರಿಸಿದ್ದರಿಂದ ನಾನೂ ಅವನ ಮಗ ಹಾನೂನನಿಗೆ ಸ್ನೇಹ ತೋರಿಸುವೆನು,” ಎಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕಾಗಿ ತನ್ನ ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದರು.
೩. ಅಲ್ಲಿನ ನಾಯಕರು ತಮ್ಮ ಒಡೆಯ ಹಾನೂನನಿಗೆ, “ದಾವೀದನು ನಿಮ್ಮ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದಾನೆ. ಇದರಿಂದ ಅವನು ನಿಮ್ಮ ತಂದೆಯನ್ನು ಸನ್ಮಾನಿಸುತ್ತಾನೆಂದು ತಿಳಿಯುತ್ತೀರೋ? ಇಲ್ಲವೇ ಇಲ್ಲ. ಪಟ್ಟಣವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ತನ್ನ ಆಳುಗಳನ್ನು ಕಳುಹಿಸಿದ್ದಾನೆ,” ಎಂದು ಹೇಳಿದರು.
೪. ಆದುದರಿಂದ ಹಾನೂನನು ದಾವೀದನ ಸೇವಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ನಿಲುವಂಗಿಗಳನ್ನು ಕುಂಡಿಯಿಂದ ಕೆಳಗಿನ ಭಾಗವನ್ನೆಲ್ಲಾ ಕತ್ತರಿಸಿ ಕಳುಹಿಸಿಬಿಟ್ಟನು.
೫. ಆವರು ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದರು. ಬಹಳವಾಗಿ ಅಪಮಾನ ಹೊಂದಿದ ಅವರಿಗೆ ದಾವೀದನು ಆಳುಗಳ ಮುಖಾಂತರ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಜೆರಿಕೋವಿನಲ್ಲಿದ್ದು ಅನಂತರ ಬನ್ನಿ,” ಎಂದು ಹೇಳಿಸಿದನು.
೬. ತಾವು ದಾವೀದನಿಗೆ ವೈರಿಗಳಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಹಣಕೊಟ್ಟು ಬೇತ್ ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಸಿರಿಯಾದವರ ಇಪ್ಪತ್ತು ಸಾವಿರಮಂದಿ ಕಾಲಾಳುಗಳನ್ನು, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನು ಹಾಗು ಟೋಬ್ ದೇಶದಿಂದ ಹನ್ನೆರಡು ಸಾವಿರ ಮಂದಿ ದಂಡಾಳುಗಳನ್ನೂ ಬರಮಾಡಿದರು.
೭. ಈ ಸುದ್ದಿ ದಾವೀದನಿಗೆ ಮುಟ್ಟಿತು.ಅವನು ಯೋವಾಬನನ್ನೂ ಎಲ್ಲಾ ಶೂರ ಸೈನಿಕರನ್ನೂ ಕಳುಹಿಸಿದನು.
೮. ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರಬಾಗಿಲಿನ ಬಳಿಯಲ್ಲೆ ವ್ಯೂಹಕಟ್ಟಿದರು. ಚೋಬಾ ಮತ್ತು ರೆಹೋಬ್ ಎಂಬ ಸ್ಥಳಗಳ ಸಿರಿಯಾದವರೂ ಟೋಬ್, ಮಾಕಾ ದೇಶಗಳವರೂ ಪ್ರತ್ಯೇಕವಾಗಿ ಮೈದಾನದಲ್ಲಿ ಇಳಿದುಕೊಂಡಿದ್ದರು.
೯. ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಯೇಲರಲ್ಲಿ ಶ್ರೇಷ್ಠರಾದ ಸೈನಿಕರನ್ನು ಆರಿಸಿಕೊಂಡು ಅವರನ್ನು ಸಿರಿಯಾದವರಿಗೆ ವಿರುದ್ಧ ನಿಲ್ಲಿಸಿದನು.
೧೦. ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು,
೧೧. “ಸಿರಿಯಾದವರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ.
೧೨. ಧೈರ್ಯದಿಂದಿರು, ನಮ್ಮ ಜನರಿಗಾಗಿ ಹಾಗು ನಮ್ಮ ದೇವರ ಪಟ್ಟಣಗಳಿಗಾಗಿ ನಮ್ಮ ಪೌರುಷವನ್ನು ತೋರಿಸೋಣ; ಸರ್ವೇಶ್ವರ ತಮಗೆ ಸರಿಕಾಣುವಂಥದ್ದನ್ನು ಮಾಡಲಿ,” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.
೧೩. ಯೋವಾಬನೂ ಅವನ ಜನರೂ ಸಿರಿಯಾದವರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಸಿರಿಯಾದವರು ಓಡಿಹೋದರು.
೧೪. ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅಬೀಷೈಯನ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಅಮ್ಮೋನಿಯರೊಡನೆ ಯುದ್ಧಮಾಡುವುದನ್ನು ಬಿಟ್ಟು ಜೆರುಸಲೇಮಿಗೆ ಹೋದನು.
೧೫. ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾದಾಗ ಅವರೆಲ್ಲರೂ ಕೂಡಿಬಂದರು.
೧೬. ಹದದೆಜೆರನು ಯೂಫ್ರಟಿಸ್ ನದಿಯ ಆಚೆಯಲ್ಲಿದ್ದ ಸಿರಿಯಾದವರನ್ನು ಬರಮಾಡಿದನು; ಅವರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.
೧೭. ಈ ಸುದ್ದಿ ದಾವೀದನಿಗೆ ಮುಟ್ಟಿದಾಗ ಅವನು ಇಸ್ರಯೇಲರೆಲ್ಲರನ್ನೂ ಕೂಡಿಸಿಕೊಂಡು ಜೋರ್ಡನ್ ನದಿ ದಾಟಿ ಹೇಲಾಮಿಗೆ ಬಂದನು. ಸಿರಿಯಾದವರು ವ್ಯೂಹಕಟ್ಟಿ ದಾವೀದನೊಡನೆ ಯುದ್ಧಕ್ಕೆ ನಿಂತರು.
೧೮. ಆದರೆ ಇಸ್ರಯೇಲರ ಮುಂದೆ ಸೋತು ಓಡಿಹೋದರು; ದಾವೀದನು ಸಿರಿಯಾದವರ ಏಳುನೂರು ರಥಗಳನ್ನು ಹಾಳುಮಾಡಿದನು. ನಾಲ್ವತ್ತು ಸಾವಿರ ಮಂದಿ ರಾಹುತರನ್ನು ಕೊಂದನು. ಸೇನಾಪತಿಯಾದ ಶೋಬಕನು ಗಾಯಗೊಂಡು ಅಲ್ಲೇ ಸತ್ತನು.
೧೯. ಹದದೆಜೆರನಿಗೆ ದಾಸರಾಗಿದ್ದ ರಾಜರೆಲ್ಲರೂ ಇಸ್ರಯೇಲರ ಮುಂದೆ ತಮ್ಮ ಕೈಸಾಗದೆಂದು ತಿಳಿದು ಅವರೊಡನೆ ಸಂಧಾನ ಮಾಡಿಕೊಂಡು ಅವರ ಅಧೀನರಾದರು. ಅಂದಿನಿಂದ ಸಿರಿಯಾದವರು ಅಮ್ಮೋನಿಯರಿಗೆ ಸಹಾಯ ಮಾಡುವುದಕ್ಕೆ ಧೈರ್ಯಗೊಳ್ಳಲಿಲ್ಲ.

ಕೀರ್ತನೆಗಳು ೬೫:೧-೮
೧. ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ ಸ್ತುತಿಸ್ತೋತ್ರಗಳು I ಪೂರೈಸತಕ್ಕವು ದೇವಾ, ಜನರು ನಿನಗೆ ಹೊತ್ತ ಹರಕೆಗಳು II
೨. ದೇವಾ, ನೀ ನಮ್ಮೆಲ್ಲರ ಪ್ರಾರ್ಥನೆಗೆ ಕಿವಿಗೊಡುವಾತ I ನರರೆಲ್ಲರು ಬರುವರು ನಿನ್ನ ಬಳಿಗೆ ಪಾಪದ ಪ್ರಯುಕ್ತ II
೩. ಪಾಪದ ಹೊರೆ ಹೊತ್ತವರು ನಾವಯ್ಯಾ I ಅವುಗಳ ಪರಿಹಾರಕನು ನೀನಯ್ಯಾ II
೪. ನಿನ್ನ ಆಸ್ಥಾನದಲಿ ನೆಲೆಸಲು ನೀನಾಯ್ದು ತಂದ ದೈವಭಕ್ತ ಧನ್ಯ I ನಮಗೆ ತರಲಿ ತೃಪ್ತಿ ನೀ ವಾಸಿಸುವ ಪವಿತ್ರಾಲಯದ ಸೌಭಾಗ್ಯ II
೫. ದೇವಾ, ನೀನೆ ನಮ್ಮೆಲ್ಲರ ಜೀವೋದ್ಧಾರ I ದೂರದ ಸಾಗರ ಸೀಮೆಗಳಿಗೂ ಆಶಾಧಾರ I ಗಂಭೀರ ಕಾರ್ಯವೆಸಗಿ ನೀಡುವೆ ವಿಜಯದುತ್ತರ II
೬. ಬಿಗಿದುಕೊಂಡಿರುವೆ ಶಕ್ತಿಶೌರ್ಯದ ನಡುಗಟ್ಟನು I ಬಿಗಿಯಾಗಿ ನಿಲ್ಲಿಸಿರುವೆ ನೀ ಗುಡ್ಡಬೆಟ್ಟಗಳನು II
೭. ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು I ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು II
೮. ಅಚ್ಚರಿಗೊಳ್ಳುವುವು ನಿನ್ನ ಮಹತ್ಕಾರ್ಯಗಳ ಕಂಡು ಎಲ್ಲೆ ಎಲ್ಲೆಗಳು I ಹರ್ಷಾನಂದಗೊಳ್ಳುವರು ಅದಕಂಡಾ ಪೂರ್ವಪಶ್ಚಿಮ ಪ್ರವಾಸಿಗಳು II

ಜ್ಞಾನೋಕ್ತಿಗಳು ೧೬:೨೦-೨೧
೨೦. ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು.
೨೧. ಜ್ಞಾನ ಹೃದಯರಿಗೆ ಜಾಣರೆಂಬ ಬಿರುದು; ಮಧುರ ಮಾತಿನಿಂದ ಬೋಧನಾಶಕ್ತಿ ಹಿರಿದು.

ಯೊವಾನ್ನನು ೬:೧-೨೧
೧. ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು.
೨. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದನ್ನು ಆ ಜನರು ನೋಡಿದ್ದರು.
೩. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು.
೪. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು.
೫. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು.
೬. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು.
೭. ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು,” ಎಂದನು.
೮. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೆಯನು,
೯. “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತದೆ?” ಎಂದನು.
೧೦. ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು.
೧೧. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ಮೀನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
೧೨. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು.
೧೩. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು.
೧೪. ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು.
೧೫. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.
೧೬. ಸಾಯಂಕಾಲವಾದ ಮೇಲೆ ಯೇಸು ಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ
೧೭. ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ.
೧೮. ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು.
೧೯. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು.
೨೦. ಆಗ ಯೇಸು, “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,” ಎಂದು ಹೇಳಿದರು.
೨೧. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.