A A A A A

ಕ್ರಾನಿಕಲ್ಸ್ ೨ ೩:೧-೧೭
೧. ಸೊಲೊಮೋನನು ಜೆರುಸಲೇಮ್ ಪಟ್ಟಣದಲ್ಲಿ ತನ್ನ ತಂದೆ ದಾವೀದನಿಗೆ ದೇವದರ್ಶನ ಉಂಟಾದ ಮೋರೀಯಾ ಗುಡ್ಡದಲ್ಲಿ, ಸರ್ವೇಶ್ವರನ ಆಲಯವನ್ನು ಕಟ್ಟಿಸ ತೊಡಗಿದನು. ಈ ಮೊದಲು, ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು, ದಾವೀದನು ಇದಕ್ಕಾಗಿ ಸಿದ್ಧಮಾಡಿದ್ದನು.
೨. ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು.
೩. ಅವನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದ ಇಪ್ಪತ್ತೇಳು ಮೀಟರ್ ಹಾಗೂ ಅಗಲ ಒಂಬತ್ತು ಮೀಟರ್.
೪. ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್, ಎತ್ತರ ಇಪ್ಪತ್ತನಾಲ್ಕು ಮೀಟರ್, ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.
೫. ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದಲೂ ಆ ಹಲಗೆಗಳನ್ನು ತೋರಣ, ಖರ್ಜೂರಗಳ ಚಿತ್ರಗಳುಳ್ಳ ಚೊಕ್ಕ ಬಂಗಾರದ ತಗಡಿನಿಂದಲೂ ಹೊದಿಸಿ, ಅದನ್ನು ರತ್ನಗಳಿಂದ ಅಲಂಕರಿಸಿದನು.
೬. ಆ ಬಂಗಾರ ಪರ್ವಯಿಮ್ ದೇಶದ್ದು.
೭. ಹೀಗೆ ಆಲಯದಲ್ಲಿನ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನು ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
೮. ಇದಲ್ಲದೆ, ಅವನು ‘ಮಹಾಪರಿಶುದ್ಧ ಸ್ಥಳವನ್ನು’ ಮಾಡಿಸಿದನು.ಅದರ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್; ಅದರ ಅಗಲ ಒಂಬತ್ತು ಮೀಟರ್. ಅದನ್ನು ಸುಮಾರು ೨೦ ಮೆಟ್ರಿಕ್ ಟನ್ ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು.
೯. ಬಂಗಾರದ ಮೊಳೆಗಳ ತೂಕ ೫೭೦ ಕಿಲೋಗ್ರಾಂ. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು.
೧೦. ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿಟ್ಟು ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು.
೧೧. ಕೆರೂಬಿಗಳ ರೆಕ್ಕೆಗಳು ಒಟ್ಟಾಗಿ ಒಂಬತ್ತು ಮೀಟರ್ ಉದ್ದವಿದ್ದವು. (ಮೊದಲನೆಯ ಕೆರೂಬಿಯ) ಒಂದು ರೆಕ್ಕೆ ೨:೨ ಮೀಟರ್ ಉದ್ದವಾಗಿದ್ದು ಮನೆಯ ಗೋಡೆಗೆ ತಗಲುತ್ತಿತ್ತು. ೨:೨ ಮೀಟರ್ ಉದ್ದವಾದ ಇನ್ನೊಂದು ರೆಕ್ಕೆಯು ಎರಡನೆಯ ಕೆರೂಬಿಯ ರೆಕ್ಕೆಗೆ ತಗಲುತ್ತಿತ್ತು.
೧೨. ಅದರಂತೆಯೇ ಎರಡನೆಯ ಕೆರೂಬಿಯ ೨:೨ ಮೀಟರ್ ಉದ್ದವಾದ ಒಂದು ರೆಕ್ಕೆ ಮನೆಯ ಗೋಡೆಗೂ ಇನ್ನೊಂದು ರೆಕ್ಕೆ ಮೊದಲನೆಯ ಕೆರೂಬಿಯ ರೆಕ್ಕೆಗೂ ತಗಲುತ್ತಿದ್ದವು.
೧೩. ಈ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಒಂಬತ್ತು ಮೀಟರ್ ಉದ್ದಕ್ಕೆ ಚಾಚಿ ಕಾಲೂರಿ ನಿಂತುಕೊಂಡು ಪರಿಶುದ್ಧ ಸ್ಥಳದ ಕಡೆಗೆ ಮುಖ ಮಾಡಿದ್ದವು.
೧೪. ಸೊಲೊಮೋನನು ಪರದೆಯನ್ನು ನೀಲಿ, ಊದಾ, ಕೆಂಪು ವರ್ಣಗಳುಳ್ಳ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳನ್ನು ಕಸೂತಿ ಹಾಕಿಸಿದನು.
೧೫. ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು ೫:೫ ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ೨:೨ ಮೀಟರ್ ಎತ್ತರವಿದ್ದವು.
೧೬. ಗರ್ಭಗುಡಿಯ ಸರಪಣಿಯಂಥ ಸರಪಣಿಗಳನ್ನು ಮಾಡಿಸಿ, ಆ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ, ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕಟ್ಟಿಸಿದನು.
೧೭. ಆ ಕಂಬಗಳನ್ನು, ದೇವಾಲಯದ ಮುಂಭಾಗದಲ್ಲಿ ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿ, ಬಲಗಡೆಯದಕ್ಕೆ ‘ಯಾಕೀನ್’ ಎಂದೂ ಎಡಗಡೆಯದಕ್ಕೆ ‘ಬೋವಜ್’ ಎಂದೂ ಹೆಸರಿಟ್ಟನು.

ಕ್ರಾನಿಕಲ್ಸ್ ೨ ೪:೧-೨೨
೧. ಇದಲ್ಲದೆ, ಸೊಲೊಮೋನನು ತಾಮ್ರದ ಬಲಿಪೀಠವನ್ನು ಮಾಡಿಸಿದನು. ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ ೪:೫ ಮೀಟರ್,
೨. ಅನಂತರ ಅವನು ‘ಕಂಚಿನ ಕಡಲು’ ಎನಿಸಿಕೊಳ್ಳುವ ಎರಕದ ಒಂದು ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ ೪:೪ ಮೀಟರ್ ಇತ್ತು. ಅದರ ಎತ್ತರ ೨:೨ ಮೀಟರ್, ಸುತ್ತಳತೆ ೧೩:೨ ಮೀಟರ್,
೩. ಅದನ್ನು ಎರಕಹೊಯ್ಯುವಾಗ ಅದರ (ಅಂಚಿನ) ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು.
೪. ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವ ದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಂಚಿನ ಕಡಲು ಅವುಗಳ ಬೆನ್ನಿನ ಮೇಲಿತ್ತು. ಅವುಗಳ ಹಿಂಭಾಗವು ಒಳಗಡೆಗಿತ್ತು.
೫. ಆ ಪಾತ್ರೆಯ ತಗಡು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಅರವತ್ತು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
೬. ಇದಲ್ಲದೆ ಅವನು ಹತ್ತು ನೀರಿನ ಬಾನೆಗಳನ್ನು ಮಾಡಿಸಿ ದಹನಬಲಿ ಸಮರ್ಪಣೆಯ ಸಾಮಾನುಗಳನ್ನು ತೊಳೆದು ಶುದ್ಧಮಾಡುವುದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು; ಕಡಲು ಎನಿಸಿಕೊಳ್ಳುವ ಪಾತ್ರೆ ಯಾಜಕರ ಸ್ನಾನಕ್ಕಾಗಿ ಇತ್ತು.
೭. ಅದೂ ಅಲ್ಲದೆ ನೇಮಕವಾದ ಮಾದರಿಯಂತೆ ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ, ಐದನ್ನು ದೇವಾಲಯದೊಳಗೆ ಬಲಗಡೆಯಲ್ಲೂ ಐದನ್ನು ಎಡಗಡೆಯಲ್ಲೂ ಇಡಿಸಿದನು.
೮. ಹತ್ತು ಮೇಜುಗಳನ್ನು ಮಾಡಿಸಿ ದೇವಾಲಯದೊಳಗೆ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇಡಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
೯. ಮತ್ತೆ, ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಾಡಿಸಿ ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಇಟ್ಟನು. ಅವುಗಳ ಕದಗಳನ್ನು ಕಂಚಿನ ತಗಡಿನಿಂದ ಹೊದಿಸಿದನು.
೧೦. ಕಡಲು ಎನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ, ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.
೧೧. ಇದಲ್ಲದೆ, ಹೂರಾಮನು ಹಂಡೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಈ ಹೂರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕಾಗಿ ಮಾಡಿದ ಸಾಮಾನುಗಳು ಇವು:
೧೨. ಎರಡು ಕಂಬಗಳು, ಅವುಗಳ ಮೇಲಣ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವುದಕ್ಕಾಗಿ ಎರಡು ಜಾಲರಿಗಳು,
೧೩. ಕಂಬಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕಾಗಿ ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು, ಪೀಠಗಳು,
೧೪. ಅವುಗಳ ಮೇಲಣ ಬಾನೆಗಳು, ಕಡಲಕೊಳ ಎನಿಸಿಕೊಳ್ಳುವ ಎರಕದ ಪಾತ್ರೆ,
೧೫. ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
೧೬. ಹಂಡೆ, ಸಲಿಕೆ ಹಾಗೂ ಮುಳ್ಳು, ಹೀಗೆ ಹೂರಾಮಾಬೀಮನು ಅರಸ ಸೊಲೊಮೋನನ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ಕಂಚಿನಿಂದ ಮಾಡಿ ಮುಗಿಸಿದನು.
೧೭. ಅರಸನು ಜೋರ್ಡನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯಲ್ಲಿ ಎರಕ ಹೊಯ್ಸಿದನು.
೧೮. ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬುದು ಗೊತ್ತಾಗದೆ ಹೋಯಿತು.
೧೯. ಅವನು ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಗ್ರಿ ಇವು: ಬಂಗಾರದ ಧೂಪವೇದಿ, ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜುಗಳು,
೨೦. ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂದೆ ಉರಿಯುತ್ತಿರುವುದಕ್ಕಾಗಿ ಪುಷ್ಪಾಲಂಕಾರವುಳ್ಳ ಬಂಗಾರದ ದೀಪಸ್ತಂಭಗಳು,
೨೧. ಉತ್ಕೃಷ್ಟವಾದ ಬಂಗಾರದಿಂದ ಮಾಡಿದ ಅವುಗಳ ಹಣತೆ, ತಂಡಸ,
೨೨. ಚೊಕ್ಕ ಬಂಗಾರದ ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾಪರಿಶುದ್ಧ ಸ್ಥಳದೊಳಗಿನ ಬಾಗಿಲಿನ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು.

ಕೀರ್ತನೆಗಳು ೭೯:೫-೧೦
೫. ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? I ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ? II
೬. ಸುರಿ ರೌದ್ರವನು ನಿನ್ನನರಿಯದಾ ಮ್ಲೇಚ್ಛರ ಮೇಲೆ I ನಿನ್ನ ಶ್ರೀನಾಮವನು ಉಚ್ಚರಿಸದಾ ರಾಜ್ಯಗಳ ಮೇಲೆ II
೭. ನುಂಗಿಬಿಟ್ಟರಾ ಜನರು ಯಕೋಬ ವಂಶದವರನು I ಹಾಳುಮಾಡಿ ಬಿಟ್ಟರವರ ನಿವಾಸ ಸ್ಥಳಗಳನು II
೮. ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ I ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ II
೯. ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ I ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ II
೧೦. “ಅವರ ದೇವರೆಲ್ಲಿ?” ಎಂದು ಮ್ಲೇಚ್ಛರು ಆಡಿಕೊಳ್ಳುವುದೇಕೆ? I ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ ಸುರಿಸಿದವರಿಗೆ I ಆಗರ್ಥವಾಗುವುದವರಿಗೆ; ಕಾಣಲಿ ಅದು ನಮ್ಮ ಕಣ್ಗಳಿಗೆ II

ಜ್ಞಾನೋಕ್ತಿಗಳು ೨೦:೧೦-೧೨
೧೦. ಕಳ್ಳ ಕಲ್ಲುತೂಕಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ.
೧೧. ಹುಡುಗನಾದರೂ ನಡತೆಯಲ್ಲೇ ತೋರ್ಪಡಿಸಿಕೊಳ್ಳುವನು ತನ್ನ ಗುಣ ಶುದ್ಧವೋ, ಸತ್ಯವೋ ಎಂಬುದನ್ನು.
೧೨. ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಉಂಟುಮಾಡಿದವ ಸರ್ವೇಶ್ವರ.

ಪ್ರೇಷಿತರ ೧೨:೧-೨೫
೧. ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು.
೨. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
೩. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು).
೪. ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು.
೫. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.
೬. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು.
೭. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು.
೮. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು.
೯. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು.
೧೦. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು.
೧೧. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.
೧೨. ಹೀಗೆ ತನ್ನ ಪರಿಸ್ಥಿತಿಯನ್ನು ಅರಿತ ಬಳಿಕ ಪೇತ್ರನು ಮರಿಯ ಎಂಬುವಳ ಮನೆಗೆ ಹೋದನು. ಈಕೆ ‘ಮಾರ್ಕ’ ಎಂದು ಹೆರಸರುಗೊಂಡಿದ್ದ ಯೊವಾನ್ನನ ತಾಯಿ. ಆ ಮನೆಯಲ್ಲಿ ಹಲವಾರು ಜನರು ಸೇರಿ ಪ್ರಾರ್ಥನೆ ಮಾಡುತ್ತಿದ್ದರು.
೧೩. ಪೇತ್ರನು ಹೊರಬಾಗಿಲನ್ನು ತಟ್ಟಿದನು. ರೋದ ಎಂಬ ಸೇವಕಿ ವಿಚಾರಿಸಲು ಬಂದಳು.
೧೪. ಆಕೆ ಪೇತ್ರನ ಸ್ವರವನ್ನು ಗುರುತು ಹಚ್ಚಿದ್ದೇ ಆನಂದಪರವಶಳಾಗಿ ಬಾಗಿಲನ್ನು ಸಹ ತೆರೆಯದೆ ಒಳಕ್ಕೆ ಓಡಿದಳು. ಪೇತ್ರನು ಬಾಗಿಲ ಹೊರಗೆ ನಿಂತಿದ್ದಾನೆಂದು ಒಳಗಿದ್ದವರಿಗೆ ತಿಳಿಸಿದಳು.
೧೫. ಅವರು, “ನಿನಗೇನು ಹುಚ್ಚೇ?’ ಎಂದು ಉದ್ಗರಿಸಿದರು. ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿ ಹೇಳಿದಳು. “ಹಾಗಾದರೆ ಅದು ಅವನ ದೂತನಿರಬೇಕು,” ಎಂದುಕೊಂಡರು.
೧೬. ಇತ್ತ ಪೇತ್ರನು ಬಾಗಿಲು ತಟ್ಟುತ್ತಲೇ ಇದ್ದನು. ಕೊನೆಗೆ ಅವರು ಬಂದು ಬಾಗಿಲನ್ನು ತೆರೆದರು. ಪೇತ್ರನನ್ನು ಕಂಡು ಸ್ತಬ್ಧರಾದರು.
೧೭. ಪೇತ್ರನು ನಿಶ್ಯಬ್ದರಾಗಿರುವಂತೆ ಅವರಿಗೆ ಕೈಸನ್ನೆ ಮಾಡಿದನು. ಪ್ರಭು ತನ್ನನ್ನು ಹೇಗೆ ಸೆರೆಮನೆಯಿಂದ ಹೊರಗೆ ಕರೆತಂದರೆಂದು ವಿವರಿಸಿದನು. ಈ ವಿಷಯವನ್ನು ಯಕೋಬನಿಗೂ ಇತರ ಸಹೋದರರಿಗೂ ತಿಳಿಸಲು ಹೇಳಿ ಅಲ್ಲಿಂದ ಹೊರಟು ಬೇರೆ ಸ್ಥಳಕ್ಕೆ ಹೋದನು.
೧೮. ಬೆಳಗಾದಾಗ ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು.
೧೯. ಅವನನ್ನು ಹುಡುಕಿತರುವಂತೆ ಹೆರೋದನು ಆಜ್ಞಾಪಿಸಿದನು. ಆದರೆ ಅವನನ್ನು ಕಂಡುಹಿಡಿಯಲು ಅವರಿಂದಾಗಲಿಲ್ಲ. ಆದುದರಿಂದ ಪಹರೆಯವರನ್ನೇ ವಿಚಾರಣೆಗೆ ಗುರಿಮಾಡಿ ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಇದಾದ ಬಳಿಕ ಹೆರೋದನು ಜುದೇಯದಿಂದ ಹೊರಟು ಕೊಂಚಕಾಲ ಸೆಜರೇಯದಲ್ಲಿ ಇದ್ದನು.
೨೦. ಹೆರೋದನು ಟೈರ್ ಮತ್ತು ಸಿದೋನಿನ ಜನರ ಮೇಲೆ ಕಡುಕೋಪಗೊಂಡಿದ್ದನು. ಅವರೆಲ್ಲರೂ ಒಟ್ಟಾಗಿ ಅವನನ್ನು ಸಂದರ್ಶಿಸಲು ಹೋದರು. ಮೊದಲು ಅರಮನೆಯ ಮೇಲ್ವಿಚಾರಕನಾದ ಬ್ಲಾಸ್ತನ ಮನಸ್ಸನ್ನು ತಮ್ಮ ಕಡೆ ಒಲಿಸಿಕೊಂಡರು. ಅನಂತರ ಅವರು ಹೆರೋದನೊಡನೆ ಸಂಧಾನಮಾಡಿಕೊಳ್ಳಲು ಯತ್ನಿಸಿದರು. ಏಕೆಂದರೆ, ಅವರು ದವಸಧಾನ್ಯಗಳಿಗಾಗಿ ಹೆರೋದನ ನಾಡನ್ನು ಅವಲಂಬಿಸಬೇಕಾಗಿತ್ತು.
೨೧. ನಿಯಮಿತ ದಿನದಂದು ಹೆರೋದನು ರಾಜಪೋಷಾಕನ್ನು ಧರಿಸಿಕೊಂಡು ಜನರನ್ನುದ್ದೇಶಿಸಿ ಭಾಷಣಮಾಡಿದನು.
೨೨. “ಮಾತನಾಡುತ್ತಿರುವವನು ಮಾನವನಲ್ಲ, ದೇವರೇ!” ಎಂದು ಜನರು ಘೋಷಣೆ ಮಾಡಿದರು.
೨೩. ಆದರೆ ಹೆರೋದನು ದೇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಆದುದರಿಂದ ದೇವದೂತನು ಆ ಕ್ಷಣವೇ ಅವನನ್ನು ಸಂಹರಿಸಿದನು. ಅವನು ಹುಳಹುಪ್ಪಟೆಗಳಿಗೆ ಆಹಾರವಾದನು.
೨೪. ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು.
೨೫. ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ. ಎಂಬ ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು.