ಕ್ರಾನಿಕಲ್ಸ್ ೧ ೨೩:೧-೩೨ |
೧. ದಾವೀದನು ಹಣ್ಣುಹಣ್ಣು ಮುದುಕನಾದಾಗ ತನ್ನ ಮಗ ಸೊಲೊಮೋನನನ್ನು ಇಸ್ರಯೇಲರ ಅರಸನನ್ನಾಗಿ ಮಾಡಿದನು. |
೨. ಆಗ ಇಸ್ರಯೇಲರ ಎಲ್ಲಾ ಅಧಿಪತಿಗಳನ್ನು, ಯಾಜಕರನ್ನು ಹಾಗು ಲೇವಿಯರನ್ನು ತನ್ನ ಬಳಿಯಲ್ಲಿ ಸಭೆ ಸೇರಿಸಿದನು. |
೩. ಮೂವತ್ತು ವರ್ಷ ಮೊದಲ್ಗೊಂಡು ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆ ಮೂವತ್ತೆಂಟು ಸಾವಿರವಿತ್ತು. |
೪. ಇವರಲ್ಲಿ ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ, ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ, |
೫. ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು. |
೬. ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು. |
೭. ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಹಾಗೂ ಶಿಮ್ಮೀ ಎಂಬವರು. |
೮. ಲದ್ದಾನನ ಮಕ್ಕಳಾದ ಯೆಹೀಯೇಲ್, ಜೇತಾಮ್, ಯೋವೇಲ್ ಎಂಬ ಮೂರು ಮಂದಿ ಮುಖ್ಯಸ್ಥರಾಗಿದ್ದರು. |
೯. ಶಿಮ್ಮೀಯ ಮಕ್ಕಳು ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿ. ಇವರು ಲದ್ದಾನ್ಯರ ಗೋತ್ರ ಪ್ರಧಾನರು. |
೧೦. ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು. |
೧೧. ಇವರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನು. ಯೆಯೂಷ್, ಬೆರೀಯರಿಗೆ ಬಹಳ ಮಂದಿ ಮಕ್ಕಳು ಇರಲಿಲ್ಲವಾದ್ದರಿಂದ ಅವರಿಬ್ಬರೂ ಒಂದೇ ಕುಟುಂಬ ಹಾಗೂ ವರ್ಗವಾಗಿ ಎಣಿಕೆಯಾಗಿದ್ದರು. |
೧೨. ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು. |
೧೩. ಅಮ್ರಾಮನ ಮಕ್ಕಳು ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾಪರಿಶುದ್ಧ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟಿದ್ದರು. ಇವರು ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಧೂಪಾರತಿ ಎತ್ತುವವರೂ ಸೇವೆ ಮಾಡುವವರೂ ಸರ್ವೇಶ್ವರನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರಬೇಕಿತ್ತು. |
೧೪. ದೈವಪುರುಷನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಲೆಕ್ಕಿತರಾಗಿದ್ದರು. |
೧೫. ಮೋಶೆಯ ಮಕ್ಕಳು ಗೇರ್ಷೋಮ್ ಹಾಗೂ ಎಲೀಯೆಜೆರ್ ಎಂಬವರು. |
೧೬. ಮುಖ್ಯಸ್ಥನಾದ ಶೆಬೂವೇಲನು ಗೇರ್ಷೋಮನ ಮಗ. |
೧೭. ಮುಖ್ಯಸ್ಥನಾದ ರೆಹಬ್ಯ ಎಲೀಯೆಜೆರನ ಮಗ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಂದಿ ಮಕ್ಕಳಿದ್ದರು. |
೧೮. ಮುಖ್ಯಸ್ಥ ಶೆಲೋಮೋತನು ಇಚ್ಹಾರನ ಮಗ. |
೧೯. ಹೆಬ್ರೋನನ ಮಕ್ಕಳಲ್ಲಿ ಯೇರಿಯ ಮುಖ್ಯಸ್ಥ; ಅಮರ್ಯ ಎರಡನೆಯವನು, ಯಹಜೀಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು. |
೨೦. ಉಜ್ಜೀಯೇಲನ ಮಕ್ಕಳಲ್ಲಿ ಮೀಕನೂ ಮುಖ್ಯಸ್ಥ; ಇಷೀಯನು ಎರಡನೆಯವನು. |
೨೧. ಮೆರಾರೀಯ ಮಕ್ಕಳು ಮಹ್ಲೀ ಹಾಗೂ ಮೂಷೀ ಎಂಬವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಹಾಗೂ ಕೀಷ್ ಇವರು. |
೨೨. ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು. |
೨೩. ಮೂಷಿಗೆ ಮೆಹ್ಲೀ, ಏದೆರ್, ಯೆರೇಮೋತ್ ಎಂಬ ಮೂರು ಮಂದಿ ಮಕ್ಕಳಿದ್ದರು. |
೨೪. ಲೇವಿಯರ ಪಟ್ಟಿಯಲ್ಲಿ ಬರೆದಿರುವ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಮುಖ್ಯಸ್ಥರು. ಇವರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರು ಸರ್ವೇಶ್ವರನ ಆಲಯದಲ್ಲಿ ಸೇವೆಮಾಡಲು ಅರ್ಹರಾಗಿದ್ದರು. |
೨೫. ಇಸ್ರಯೇಲ್ ದೇವರಾದ ಸರ್ವೇಶ್ವರ, ತಮ್ಮ ಪ್ರಜೆಗೆ ನೆಮ್ಮದಿಯನ್ನು ಅನುಗ್ರಹಿಸಿ, ಸದಾ ಜೆರುಸಲೇಮಿನಲ್ಲಿ ವಾಸಿಸುವವರಾದ ಕಾರಣ, |
೨೬. ಲೇವಿಯರು ಇನ್ನು ಮುಂದೆ ಅವರ ಗುಡಾರವನ್ನೂ ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲವೆಂದುಕೊಂಡು, ದಾವೀದನು ಈ ಪ್ರಕಾರ ವಿಧಿಸಿದನು: |
೨೭. ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರೆಲ್ಲರೂ ಲೆಕ್ಕಿಸಲ್ಪಟ್ಟರು. |
೨೮. ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಸರ್ವೇಶ್ವರನ ಆಲಯದ ಪರಿಚರ್ಯೆಯನ್ನು ನಡೆಸಬೇಕಾಗಿತ್ತು. ಅವರ ಕೆಲಸ ಕಾರ್ಯ ಇವು: ಅಂಗಳವನ್ನೂ ಅಲ್ಲಿಯ ಕೋಣೆಗಳನ್ನು ನೋಡಿಕೊಳ್ಳುವುದು, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದು, ದೇವಾಲಯದಲ್ಲಿ ಸೇವೆಮಾಡುವುದು; |
೨೯. ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯ ಇವುಗಳನ್ನು ಒದಗಿಸುವುದು; ಸೇರು, ಅಳತೆಗೋಲು ಇವುಗಳನ್ನು ಪರೀಕ್ಷಿಸುವುದು; |
೩೦. ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ನಿಯಮಿತ ಸಂಖ್ಯೆಗೆ ಸರಿಯಾಗಿ ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ, ಸರ್ವೇಶ್ವರನ ಮುಂದೆ ತಪ್ಪದೆ ನಡೆಯುವ ದಹನಬಲಿ ಸಮರ್ಪಣೆಯ ಹೊತ್ತಿನಲ್ಲಿ, ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದು. |
೩೧. *** |
೩೨. ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು, ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವುದೇ ಸರ್ವೇಶ್ವರನ ಆಲಯದಲ್ಲಿ ಅವರು ಮಾಡಬೇಕಾಗಿದ್ದ ಪರಿಚರ್ಯೆ. |
ಕ್ರಾನಿಕಲ್ಸ್ ೧ ೨೪:೧-೩೧ |
೧. ಆರೋನನ ಸಂತಾನದವರನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ವರು ಮಕ್ಕಳಿದ್ದರು. |
೨. ನಾದಾಬ್, ಅಬೀಹೂ ಎಂಬವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತುಹೋದುದರಿಂದ ಎಲ್ಲಾಜಾರ್ ಈತಾಮಾರರು ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು. |
೩. ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರದಿಯ ಮೇಲೆ ಸೇವೆ ಸಲ್ಲಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದ್ದರು. |
೪. ಎಲ್ಲಾಜಾರನ ಸಂತಾನದಲ್ಲಿ ಕುಟುಂಬ ಮುಖ್ಯಸ್ಥರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡುಬಂದುದರಿಂದ, ಎಲ್ಲಾಜಾರ್ಯರ ಕುಟುಂಬಗಳನ್ನು ಮುಖ್ಯಸ್ಥರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ, |
೫. ಈ ವರ್ಗಗಳ ವಿಷಯವಾಗಿ ಚೀಟುಹಾಕಿ ಕೆಲಸವನ್ನು ವಹಿಸುತ್ತಿದ್ದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಯಲಯದ ಅಧಿಪತಿಗಳೂ ದೈವಿಕ ಕಾರ್ಯಗಳ ಅಧ್ಯಕ್ಷರೂ ಇದ್ದುದರಿಂದ ಉಭಯ ಸಂತಾನಗಳವರು ಸಮಾನ ಸ್ಥಾನದವರಾಗಿದ್ದರು. |
೬. ನೆತನೇಲನ ಮಗ ಶೆಮಾಯನೆಂಬ ಲೇವಿಯ ಲೇಖಕನು, ಅರಸನ ಮುಂದೆ, ಅಧಿಪತಿಗಳ ಮುಂದೆ ಹಾಗೂ ಯಾಜಕನಾದ ಚಾದೋಕ್, ಎಬ್ಯಾತಾರನ ಮಗ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬಗಳ ಮುಖ್ಯಸ್ಥರ ಮುಂದೆ, ಆ ವರ್ಗಗಳ ಪಟ್ಟಿಯನ್ನು ಬರೆಯುತ್ತಿದ್ದನು. ಎಲ್ಲಾಜಾರ್ಯರ ಒಂದು ವರ್ಗದವರ ಸರದಿ ಆದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವೆಸಲ್ಲಿಸಬೇಕೆಂದು ನೇಮಿಸಿ, ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡುತ್ತಿದ್ದರು. |
೭. ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು; |
೮. ಎರಡನೆಯದು ಯೆದಾಯನಿಗೆ; ಮೂರನೆಯದು ಹಾರೀಮನಿಗೆ; |
೯. ನಾಲ್ಕನೆಯದು ಸೆಯೋರೀಮನಿಗೆ; ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯ್ಯಾಮೀನನಿಗೆ; |
೧೦. ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ; |
೧೧. ಒಂಬತ್ತನೆಯದು ಯೆಷೂವನಿಗೆ; |
೧೨. ಹತ್ತನೆಯದು ಶೆಕನ್ಯನಿಗೆ; ಹನ್ನೊಂದನೆಯದು ಎಲ್ಯಾಷೀಬನಿಗೆ; |
೧೩. ಹನ್ನೆರಡನೆಯದು ಯಾಕೀಮನಿಗೆ; ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಎಫೆಬಾಬನಿಗೆ; |
೧೪. ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ; |
೧೫. ಹದಿನೇಳನೆಯದು ಹೇಜಿರನಿಗೆ; |
೧೬. ಹದಿನೆಂಟನೆಯದು ಹಪ್ಪಿಚ್ಚೇಚನಿಗೆ; ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ; |
೧೭. ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ; |
೧೮. ಇಪ್ಪತ್ತಮೂರನೆಯದು ದೆಲಾಯನಿಗೆ; ಇಪ್ಪತ್ತನಾಲ್ಕನೆಯದು ಮಾಜ್ಯನಿಗೆ. |
೧೯. ಆರೋನ್ಯರು ಈ ವರ್ಗಕ್ರಮದಲ್ಲಿ ಸರ್ವೇಶ್ವರನ ಆಲಯಕ್ಕೆ ಬಂದು, ಲೇವಿಯರ ಮೂಲ ಪುರುಷನಾದ ಆರೋನನ ಮುಖಾಂತರ ಇಸ್ರಯೇಲ್ ದೇವರಾದ ಸರ್ವೇಶ್ವರ ನಿಯಮಿಸಿದ ಸೇವೆಯನ್ನು ನಡೆಸಬೇಕಾಗಿತ್ತು. |
೨೦. ಉಳಿದ ಲೇವಿಯರ ಪಟ್ಟಿ: ಅಮ್ರಾಮನ ಸಂತಾನದವನಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು, |
೨೧. ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನು, |
೨೨. ಹಾಗೂ ಇಚ್ಚಾರನ ಸಂತಾನದವನಾದ ಶೆಲೋಮೋತನ ಕುಟುಂಬದವರಲ್ಲಿ ಯಹತನು ಮುಖ್ಯಸ್ಥರು. |
೨೩. ಹೆಬ್ರೋನನ ಸಂತಾನದವರಲ್ಲಿ, ಯೆರೀಯನು ಮುಖ್ಯಸ್ಥನು, ಅಮರ್ಯನು ಎರಡನೆಯವನು, ಯೆಹಜೀಯೇಲನು ಮೂರನೆಯವನು, ಯೆಕಮ್ಮಾಮನು ನಾಲ್ಕನೆಯವನು. |
೨೪. ಉಜ್ಜಿಯೇಲನ ಮಗ ಮೀಕನ ಸಂತಾನದವರಲ್ಲಿ ಶಾಮೀರನು |
೨೫. ಹಾಗೂ ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಮುಖ್ಯಸ್ಥರು. |
೨೬. ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬವರು ಹಾಗೂ ಅವನ ಮತ್ತೊಬ್ಬ ಮಗ ಯಾಜ್ಯನ ವಂಶದವರು. |
೨೭. ಮೆರಾರೀಯ ಸಂತಾನದವರಲ್ಲಿ ಯಾಜ್ಯನಿಂದ ಹುಟ್ಟಿದವರು ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಇವರು. |
೨೮. ಮಹ್ಲೀಯಿಂದ ಹುಟ್ಟಿದವರು: ಮಕ್ಕಳಿಲ್ಲದೆ ಸತ್ತ ಎಲ್ಲಾಜಾರನು ಹಾಗು ಕೀಷನು. |
೨೯. ಕೀಷನಿಂದ ಯೆರಹ್ಮೇಲನು ಹುಟ್ಟಿದನು. |
೩೦. ಮೂಷೀಯ ಮಕ್ಕಳು: ಮಹ್ಲೀ, ಏದೆರ್, ಯೆರೀಮೋತ್ ಎಂಬವರು. |
೩೧. ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ ಕಿರಿಯರೂ, ತಮ್ಮ ಕುಲಬಂಧುಗಳಾದ ಆರೋನ್ಯರಂತೆ, ಅರಸನಾದ ದಾವೀದ್, ಚಾದೋಕ್, ಅಹೀಮೆಲೆಕ್ ಇವರ ಮುಂದೆ ಹಾಗೂ ಯಾಜಕರ ಮತ್ತು ಲೇವಿಯರ ಕುಟುಂಬ ಮುಖ್ಯಸ್ಥರ ಮುಂದೆ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು. |
ಕ್ರಾನಿಕಲ್ಸ್ ೧ ೨೫:೧-೩೦ |
೧. ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ: |
೨. ಆಸಾಫ್ಯರಲ್ಲಿ ಜಕ್ಕೂರ್, ಜೋಸೆಫ್, ನೆತನ್ಯ, ಅಶರೇಲ ಎಂಬವರು. ಇವರು ಆಸ್ಥಾನದ ಗಾಯಕ ಆಸಾಫನ ಸಹಾಯಕರು. |
೩. ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಇವರು ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ, ಸರ್ವೇಶ್ವರನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿ ಸಹಾಯಕರು. |
೪. ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್, |
೫. ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು. |
೬. ದೇವರಾದ ಸರ್ವೇಶ್ವರನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು. |
೭. ಇವರೂ ಸರ್ವೇಶ್ವರನ ಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯನಪ್ರವೀಣರು ಇದ್ದರು. |
೮. ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು: |
೯. ಮೊದಲನೆಯವನು ಆಸಾಫ್ಯನಾದ ಜೋಸೆಫನು; ಎರಡನೆಯವನು ಗೆದಲ್ಯ |
೧೦. ಮೂರನೆಯವನು ಜಕ್ಕೂರ್ |
೧೧. ನಾಲ್ಕನೆಯವನು ಇಚ್ರೀ |
೧೨. ಐದನೆಯವನು ನೆತನ್ಯ |
೧೩. ಆರನೆಯವನು ಬುಕ್ಕೀಯ |
೧೪. ಏಳನೆಯವನು ಯೆಸರೇಲ |
೧೫. ಎಂಟನೆಯವನು ಯೆಶಾಯ |
೧೬. ಒಂಬತ್ತನೆಯವನು ಮತ್ತನ್ಯ |
೧೭. ಹತ್ತನೆಯವನು ಶಿಮ್ಮೀ |
೧೮. ಹನ್ನೊಂದನೆಯವನು ಅಜರೇಲ್ |
೧೯. ಹನ್ನೆರಡನೆಯವನು ಹಷಬ್ಯ |
೨೦. ಹದಿಮೂರನೆಯವನು ಶೂಬಾಯೇಲ್ |
೨೧. ಹದಿನಾಲ್ಕನೆಯವನು ಮತ್ತಿತ್ಯ |
೨೨. ಹದಿನೈದನೆಯವನು ಯೆರೆಮೋತ್ |
೨೩. ಹದಿನಾರನೆಯವನು ಹನನ್ಯ |
೨೪. ಹದಿನೇಳನೆಯವನು ಯೊಷ್ಬೆಕಾಷ |
೨೫. ಹದಿನೆಂಟನೆಯವನು ಹನಾನೀ |
೨೬. ಹತ್ತೊಂಬತ್ತನೆಯವನು ಮಲ್ಲೋತಿ |
೨೭. ಇಪ್ಪತ್ತನೆಯವನು ಎಲೀಯಾತ |
೨೮. ಇಪ್ಪತ್ತೊಂದನೆಯವನು ಹೋತೀರ್ |
೨೯. ಇಪ್ಪತ್ತೆರಡನೆಯವನು ಗಿದ್ದಲ್ತಿ |
೩೦. ಇಪ್ಪತ್ತಮೂರನೆಯವನು ಮಹಜೀಯೋತ್ |
ಕೀರ್ತನೆಗಳು ೭೮:೪೦-೫೫ |
೪೦. ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ I ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ II |
೪೧. ಪದೇಪದೇ ಪರೀಕ್ಷಿಸಿದರು ದೇವರನು I ಕೆಣಕಿದರು ಇಸ್ರಯೇಲರ ಸದಮಲನನು II |
೪೨. ಮರೆತೇಬಿಟ್ಟರು ಆತನ ಭುಜಬಲವನು I ವೈರಿಗಳಿಂದ ಬಿಡುಗಡೆಯಾದಾ ಸಮಯವನು II |
೪೩. ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು I ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು II |
೪೪. ಅಲ್ಲಿ ಆತ ರಕ್ತವಾಗಿಸಿದನು ನದಿನೀರನು I ಕುಡಿಯಲಾಗದಂತೆ ಮಾಡಿದನಾ ತೊರೆನೀರನು II |
೪೫. ಕಳುಹಿಸಿದನು ವಿನಾಶಕರ ಹುಳುಗಳನು I ಹಾಳುಮಾಡುವ ವಿಷಮಂಡೂಕಗಳನು II |
೪೬. ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ I ಕಷ್ಟದ ಫಲಗಳನು ಮಿಡತೆಗಳಿಗೆ II |
೪೭. ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ I ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ II |
೪೮. ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ I ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ II |
೪೯. ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II |
೫೦. ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ I ತುತ್ತಾಗಿಸಿದನು ದೇಹಗಳನು ಜಾಡ್ಯಕೆ I ಅಡ್ಡಿತರಲಿಲ್ಲ ಆತನು ಅವರ ಮರಣಕೆ II |
೫೧. ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು I ಹಾಮನ ಮನೆತನದ ಮೊತ್ತಮೊದಲ ಸಂತಾನವನು II |
೫೨. ತನ್ನ ಜನರನ್ನೋ ಹೊರತಂದನು ಕುರಿಮಂದೆಯಂತೆ I ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ II |
೫೩. ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II |
೫೪. ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II |
೫೫. ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II |
ಜ್ಞಾನೋಕ್ತಿಗಳು ೨೦:೩-೩ |
೩. ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು. |
ಪ್ರೇಷಿತರ ೯:೨೨-೪೩ |
೨೨. ಸೌಲನಾದರೋ ಮತ್ತಷ್ಟು ಸಾಮರ್ಥ್ಯದಿಂದ ಪ್ರಭು ಯೇಸುವೇ ಲೋಕೋದ್ಧಾರಕನೆಂದು ರುಜುವಾತುಪಡಿಸಿ ದಮಸ್ಕಸಿನ ಯೆಹೂದ್ಯರ ಬಾಯಿಮುಚ್ಚಿಸಿದನು. |
೨೩. ಕೆಲವು ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಒಳಸಂಚು ಮಾಡಿದರು. |
೨೪. ಅದು ಸೌಲನಿಗೆ ತಿಳಿದುಬಂದಿತು. ಅವರು ಅವನನ್ನು ಕೊಲ್ಲಲು ಹಗಲಿರುಳು ಪಟ್ಟಣದ ದ್ವಾರಗಳನ್ನು ಕಾಯುತ್ತಿದ್ದರು. |
೨೫. ಒಂದು ರಾತ್ರಿ ಸೌಲನ ಶಿಷ್ಯರು ಅವನನ್ನು ಕರೆದುಕೊಂಡು ಹೋಗಿ ಗೂಡೆಯೊಂದರಲ್ಲಿ ಕೂರಿಸಿ ಗೋಡೆಯ ಮೇಲಿಂದ ಕೆಳಕ್ಕೆ ಇಳಿಸಿದರು. |
೨೬. ಸೌಲನು ಜೆರುಸಲೇಮಿಗೆ ಬಂದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆಂದು ನಂಬದೆ ಅವನಿಗೆ ಭಯಪಟ್ಟರು. |
೨೭. ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊಂಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದ್ದನ್ನೂ ಅವರು ಅವನೊಂದಿಗೆ ಮಾತನಾಡಿದ್ದನ್ನೂ ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿಂದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು. |
೨೮. ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು. |
೨೯. ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸಂಭಾಷಿಸುತ್ತಾ ಅವರ ವಿರುದ್ಧ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವಣಿಸಿದರು. |
೩೦. ಇದನ್ನು ಅರಿತುಕೊಂಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತಂದು ಅಲ್ಲಿಂದ ತಾರ್ಸಕ್ಕೆ ಕಳುಹಿಸಿಬಿಟ್ಟರು. |
೩೧. ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು. |
೩೨. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. |
೩೩. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು. |
೩೪. ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು. ಆ ಕ್ಷಣವೇ ಅವನು ಎದ್ದನು. |
೩೫. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. |
೩೬. ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’ ) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. |
೩೭. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು. |
೩೮. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. |
೩೯. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. |
೪೦. ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. |
೪೧. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು. |
೪೨. ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು. |
೪೩. ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ಕಳೆದನು. |