A A A A A

ಕ್ರಾನಿಕಲ್ಸ್ ೧ ೧೩:೧-೧೪
೧. ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು.
೨. “ನೀವು ಎಲ್ಲರು ಸಮ್ಮತಿಸಿದರೆ, ಇದು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಚಿತ್ತವಾಗಿದ್ದರೆ, ಇಲ್ಲಿ ನಮ್ಮೊಂದಿಗೆ ಶೀಘ್ರವಾಗಿ ಬಂದು ಸೇರಬೇಕೆಂದು ಉಳಿದ ಎಲ್ಲಾ ನಮ್ಮ ದೇಶಬಾಂಧವರಿಗೆ, ಯಾಜಕ-ಲೇವಿಯರಿಗೆ ಹಾಗು ಅವರ ಪಟ್ಟಣಗಳಿಗೆ ಸಂದೇಶವನ್ನು ಕಳುಹಿಸೋಣ.
೩. ಅನಂತರ ನಾವು ಹೋಗಿ ಅರಸ ಸೌಲ ನಿರ್ಲಕ್ಷಿಸಿದ್ದ ದೇವಮಂಜೂಷವನ್ನು ತೆಗೆದುಕೊಂಡು ಬರೋಣ,” ಎಂದು ಜನರೆಲ್ಲರಿಗೆ ಸಲಹೆ ಮಾಡಿದನು.
೪. ಈ ಸಲಹೆಯನ್ನು ಸರ್ವರೂ ಮೆಚ್ಚಿ ಅನುಮೋದಿಸಿದರು.
೫. ಹೀಗೆ ಅರಸ ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ದೇವಮಂಜೂಷವನ್ನು ತರಲು ದೇಶದ ಎಲ್ಲಾ ಕಡೆಗಳಿಂದಲೂ, ದಕ್ಷಿಣದ ಈಜಿಪ್ಟ್ ಗಡಿಯಿಂದ ಉತ್ತರದ ಹಾಮಾತ್ ಕಣಿವೆಯವರೆಗಿನ ಜನರನ್ನು ಒಂದುಗೂಡಿಸಿದನು.
೬. ದಾವೀದನೂ ಜನರೂ ಜುದೇಯದಲ್ಲಿ ‘ಬಾಳಾ’ ಎಂದು ಹೆಸರುಗೊಂಡಿದ್ದ ಕಿರ್ಯತ್ಯಾರೀಮ ಪಟ್ಟಣಕ್ಕೆ ಮಂಜೂಷವನ್ನು ತರಲು ಹೋದರು. ಆ ಮಂಜೂಷವು ಕೆರೂಬಿಯರ ನಡುವೆ ಆಸೀನರಾಗಿರುವ ಸರ್ವೇಶ ದೇವರ ನಾಮದಿಂದ ಸುಪ್ರಸಿದ್ಧವಾಗಿತ್ತು.
೭. ಅಬೀನಾದಾಬಿನ ಮನೆಯಿಂದ ಆ ದೇವಮಂಜೂಷವನ್ನು ಹೊರಗೆ ತಂದು, ಒಂದು ಹೊಸ ಎತ್ತಿನ ಬಂಡಿಯ ಮೇಲಿಟ್ಟರು. ಉಜ್ಜನೂ ಅಹಿಯೋವನೂ ಬಂಡಿಯನ್ನು ನಡೆಸುತ್ತಿದ್ದರು.
೮. ದಾವೀದನೂ ಎಲ್ಲಾ ಜನರೂ ಕಿನ್ನರಿ, ಸ್ವರಮಂಡಲ, ತಮಟೆ, ತಾಳ, ತುತೂರಿ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಪೂರ್ಣಶಕ್ತಿಯಿಂದ ಹಾಡುತ್ತಾ ದೇವರ ಮುಂದೆ ನರ್ತಿಸುತ್ತಾ ನಡೆದರು.
೯. ಕೀದೋನ್ ಎಂಬಲ್ಲಿ ಕಾಳುತೂರುವ ಕಣಕ್ಕೆ ಬಂದಾಗ ಎತ್ತುಗಳು ಎಡವಿದವು. ಆಗ ಉಜ್ಜನು ತನ್ನ ಕೈಗಳನ್ನು ಚಾಚಿ ದೇವಮಂಜೂಷವನ್ನು ಹಿಡಿದುಕೊಂಡನು.
೧೦. ಮಂಜೂಷವನ್ನು ಮುಟ್ಟಿದ್ದಕ್ಕಾಗಿ ಕೂಡಲೇ ಸರ್ವೇಶ್ವರ ಉಜ್ಜನ ಮೇಲೆ ಉಗ್ರಕೋಪ ತಾಳಿ ಅವನನ್ನು ಕೊಂದುಹಾಕಿದರು. ದೇವರ ಸನ್ನಿಧಿಯಲ್ಲಿಯೇ ಅವನು ಮರಣ ಹೊಂದಿದನು.
೧೧. ಆ ಸ್ಥಳಕ್ಕೆ ಅಂದಿನಿಂದ ‘ಪೆರೆಚ್ ಉಜ್ಜ’ ಎಂಬ ಹೆಸರು ಬಂತು. ಸರ್ವೇಶ್ವರ ಕೋಪದಿಂದ ಉಜ್ಜನನ್ನು ಶಿಕ್ಷಿಸಿದ್ದಕ್ಕಾಗಿ ದಾವೀದನು ಭಯದಿಂದ ಕಂಗೆಟ್ಟನು.
೧೨. ಸರ್ವೇಶ್ವರನ ಭಯದಿಂದ ದಾವೀದನು, “ದೇವರ ಮಂಜೂಷವನ್ನು ನಾನಿರುವಲ್ಲಿಗೆ ಈಗ ಹೇಗೆ ತಾನೆ ತೆಗೆದುಕೊಂಡು ಹೋಗಲಿ?” ಎಂದು ಕಳವಳಪಟ್ಟನು.
೧೩. ಅದನ್ನು ಜೆರುಸಲೇಮಿಗೆ ತನ್ನೊಂದಿಗೆ ತೆಗೆದುಕೊಂಡು ಹೋಗಲಿಲ್ಲ. ಗತ್ ಊರಿನ ನಿವಾಸಿ ಓಬೇದೆದೋಮನ ಮನೆಯಲ್ಲಿ ಅದನ್ನು ಇರಿಸಿದನು.
೧೪. ಅದು ಅಲ್ಲಿ ಮೂರು ತಿಂಗಳು ಇತ್ತು. ಸರ್ವೇಶ್ವರ ಆ ಅವಧಿಯಲ್ಲಿ ಓಬೇದೆದೋಮನ ಕುಟುಂಬವನ್ನೂ ಅವನಿಗೆ ಇದ್ದುದೆಲ್ಲವನ್ನೂ ಆಶೀರ್ವದಿಸಿದರು.

ಕ್ರಾನಿಕಲ್ಸ್ ೧ ೧೪:೧-೧೭
೧. ಟೈರಿನ ಅರಸ ಹೀರಾಮನು ದಾವೀದನ ಬಳಿಗೆ ತನ್ನ ವಾಣಿಜ್ಯ ನಿಯೋಗವನ್ನು ಕಳುಹಿಸಿದನು. ಅರಮನೆಯನ್ನು ಕಟ್ಟಲು ಅವನಿಗೆ ದೇವದಾರು ಮರದ ದಿಮ್ಮಿಗಳನ್ನು, ಶಿಲ್ಪಿಗಳನ್ನು ಹಾಗು ಬಡಗಿಯವರನ್ನು ಕಳುಹಿಸಿಕೊಟ್ಟನು.
೨. ಹೀಗೆ ದಾವೀದನು ದೇವಪ್ರಜೆಗಳಾದ ಇಸ್ರಯೇಲರ ನಿಮಿತ್ತ ತನ್ನ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿ ತನ್ನನ್ನು ಇಸ್ರಯೇಲ್ ರಾಜನನ್ನಾಗಿ ಸ್ಥಿರಪಡಿಸುವರೆಂದು ತಿಳಿದುಕೊಂಡನು.
೩. ಜೆರುಸಲೇಮಿನಲ್ಲೂ ದಾವೀದನು ಹಲವು ಮಹಿಳೆಯರನ್ನು ವಿವಾಹವಾಗಿ ಇನ್ನೂ ಕೆಲವು ಮಂದಿ ಗಂಡು ಮಕ್ಕಳನ್ನೂ ಹೆಣ್ಣು ಮಕ್ಕಳನ್ನೂ ಪಡೆದನು.
೪. ಜೆರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
೫. ಇಬ್ಹಾರ್, ಎಲೀಷೂವ, ಎಲ್ಪೆಲೆಟ್,
೬. ನೋಗಹ, ನೆಫೆಗ್, ಯಾಫೀಯ,
೭. ಎಲೀಷಾಮ, ಬೇಲ್ಯಾದ ಹಾಗು ಎಲೀಫೆಲೆಟ್ ಎಂಬವರು.
೮. ದಾವೀದನು ಇಸ್ರಯೇಲರೆಲ್ಲರ ಇಡೀ ನಾಡಿಗೆ ಅರಸನಾಗಿ ಅಭಿಷಿಕ್ತನಾಗಿದ್ದಾನೆಂಬ ವರ್ತಮಾನವನ್ನು ಫಿಲಿಷ್ಟಿಯರು ಕೇಳಿದರು. ಅವನನ್ನು ಸೆರೆಹಿಡಿಯಲು ತಮ್ಮ ಸೈನ್ಯವನ್ನು ಕಳುಹಿಸಿದರು. ದಾವೀದನು ಅವರನ್ನು ಎದುರಿಸಲು ಸಿದ್ಧನಾದನು.
೯. ಫಿಲಿಷ್ಟಿಯರು ರೆಫಾಯಿಮ್ ಕಣಿವೆಯನ್ನು ತಲುಪಿ ಸುಲಿಗೆಮಾಡಲು ಪ್ರಾರಂಭಿಸಿದರು.
೧೦. “ಫಿಲಿಷ್ಟಿಯರ ಮೇಲೆ ನಾನು ದಾಳಿಮಾಡಬಹುದೊ? ನೀವು ನನಗೆ ಜಯವನ್ನು ಕೊಡುವಿರೋ\, ಎಂದು ದಾವೀದನು ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸಿದನು. “ಹೌದು, ಅವರನ್ನು ಎದುರಿಸು, ನಾನು ನಿನಗೆ ಜಯವನ್ನು ಕೊಡುವೆನು,” ಎಂದು ಸರ್ವೇಶ್ವರ ಉತ್ತರಕೊಟ್ಟರು.
೧೧. ಹೀಗೆ ದಾವೀದ ಬಾಳ್ ಪೆರಾಚೀಮ್ ಎಂಬಲ್ಲಿ ಅವರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನುಗ್ಗಿ, ವೈರಿಸೈನ್ಯವನ್ನು ನಾಶಮಾಡಲು ಸರ್ವೇಶ್ವರ ನನ್ನನ್ನು ಉಪಯೋಗಿಸಿದ್ದಾರೆ,” ಎಂದು ಹೇಳಿದನು. ಈ ಕಾರಣ ಆ ಸ್ಥಳಕ್ಕೆ ‘ಬಾಳ್ ಪೆರಾಚೀಮ್’ ಎಂಬ ಹೆಸರು ಬಂದಿತು.
೧೨. ಫಿಲಿಷ್ಟಿಯರು ತಲೆ ತಪ್ಪಿಸಿಕೊಂಡು ಓಡಿಹೋಗುವಾಗ ತಮ್ಮ ವಿಗ್ರಹಗಳನ್ನು ಅಲ್ಲೇ ಬಿಟ್ಟುಹೋದರು. ಅವೆಲ್ಲವನ್ನು ಸುಟ್ಟುಹಾಕಬೇಕೆಂದು ದಾವೀದನು ಅಪ್ಪಣೆಮಾಡಿದನು.
೧೩. ಸ್ವಲ್ಪವೇ ಸಮಯದ ನಂತರ ಫಿಲಿಷ್ಟಿಯರು ಪುನಃ ಬಂದು ಕಣಿವೆಯಲ್ಲಿ ಕೊಳ್ಳೆ ಹೊಡೆಯಲು ಪ್ರಾರಂಭಿಸಿದರು.
೧೪. ದಾವೀದನು ಮತ್ತೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದನು. “ನೀನು ಅವರನ್ನು ಬೆನ್ನಟ್ಟಬೇಡ, ಸುತ್ತಿಕೊಂಡು ಹೋಗಿ ಬಾಕಾಮರಗಳಿರುವ ಆಚೆಕಡೆಯಿಂದ ಅವರ ಮೇಲೆ ದಾಳಿಮಾಡು.
೧೫. ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳುವಾಗ, ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನನಗೆ ಮುಂದಾಗಿ ಹೊರಟಿದ್ದಾರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದು ಸರ್ವೇಶ್ವರ ಉತ್ತರಕೊಟ್ಟರು.
೧೬. ಸರ್ವೇಶ್ವರ ಹೇಳಿದಂತೆಯೇ ದಾವೀದನು ಮಾಡಿದನು. ಫಿಲಿಷ್ಟಿಯರನ್ನು ಗಿಬ್ಯೋನಿನಿಂದ ಗೆಜೆರಿನವರೆಗೂ ಹಿಮ್ಮೆಟ್ಟಿದನು.
೧೭. ದಾವೀದನ ಹೆಸರು ಎಲ್ಲಾ ಕಡೆಗಳಲ್ಲಿ ಪ್ರಖ್ಯಾತಿಗೆ ಬಂದಿತು; ಎಲ್ಲಾ ದೇಶಗಳವರೂ ದಾವೀದನಿಗೆ ಭಯಪಡುವಂತೆ ಸರ್ವೇಶ್ವರ ಮಾಡಿದರು.

ಕೀರ್ತನೆಗಳು ೭೮:೧-೧೧
೧. ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ I ಗಮನಕೊಡಿ ನಾ ಹೇಳುವ ಮಾತುಗಳಿಗೆ II
೨. ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು I ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು II
೩. ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
೪. ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
೫. ನೇಮವಿತ್ತನು ಯಕೋಬವಂಶಕೆ I ಶಾಸನಕೊಟ್ಟನು ಇಸ್ರಯೇಲರಿಗೆ II ವಿಧಿಸಿದ ನಿಂತು ನಮ್ಮ ಪೂರ್ವಜನರಿಗೆ I “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” II
೬. “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
೭. ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
೮. ಮರೆಯರು ನನ್ನ ಮಹತ್ಕಾರ್ಯಗಳನು I ಇಡುವರು ನನ್ನಲ್ಲೇ ಭರವಸೆಯನು I ಕೈಗೊಳ್ಳುವರು ನನ್ನ ಆಜ್ಞೆಗಳನು II
೯. ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ I ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ II
೧೦. ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II
೧೧. ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು I ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು: II

ಜ್ಞಾನೋಕ್ತಿಗಳು ೧೯:೨೦-೨೧
೨೦. ಬುದ್ಧಿವಾದವನ್ನು ಕೇಳು, ತಿದ್ದುಪಾಟನ್ನು ಅಂಗೀಕರಿಸು; ಹಾಗೆ ಮಾಡಿದರೆ ಮುಂದಕ್ಕೆ ಜ್ಞಾನಿಯಾಗಿ ಬಾಳುವೆ.
೨೧. ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು.

ಪ್ರೇಷಿತರ ೭:೨೨-೪೩
೨೨. ಅವನು ಈಜಿಪ್ಟರ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ನಡೆಯಲ್ಲೂ ನುಡಿಯಲ್ಲೂ ಸಮರ್ಥನಾದನು.
೨೩. “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು.
೨೪. ಆಗ ಅವರಲ್ಲಿ ಒಬ್ಬನು ಈಜಿಪ್ಟಿನವನಿಂದ ಅನ್ಯಾಯವಾಗಿ ಹಿಂಸೆಪಡುತ್ತಿರುವುದನ್ನು ಕಂಡನು. ಅವನ ಸಹಾಯಕ್ಕೆ ಹೋಗಿ ಈಜಿಪ್ಟಿನವನನ್ನು ಕೊಂದು ಸೇಡುತೀರಿಸಿದನು.
೨೫. ಸ್ವಜನರ ಬಿಡುಗಡೆಗೆ ದೇವರು ತನ್ನನ್ನು ನೇಮಿಸಿರುವರು; ತನ್ನ ಸ್ವಂತಜನರು ಇದನ್ನು ಅರ್ಥಮಾಡಿಕೊಳ್ಳುವರು ಎಂದು ಮೋಶೆ ಭಾವಿಸಿದ್ದನು. ಆದರೆ, ಅವರು ಅರ್ಥಮಾಡಿಕೊಳ್ಳಲಿಲ್ಲ.
೨೬. ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನ ಪಡಿಸಲು ಯತ್ನಿಸಿದನು.
೨೭. ಆಗ ಆಕ್ರಮಣ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ನ್ಯಾಯತೀರಿಸಲು ನಿನಗೆ ಅಧಿಕಾರವನ್ನು ಕೊಟ್ಟವರು ಯಾರು?
೨೮. ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಪ್ರಶ್ನಿಸಿದನು.
೨೯. ಇದನ್ನು ಕೇಳಿದ್ದೇ ಮೋಶೆ ಅಲ್ಲಿಂದ ಪಲಾಯನಮಾಡಿ ಮಿದ್ಯಾನರ ನಾಡಿನಲ್ಲಿ ಆಶ್ರಯ ಪಡೆದನು. ಅಲ್ಲಿರುವಾಗ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
೩೦. “ನಾಲ್ವತ್ತು ವರ್ಷಗಳಾದ ಮೇಲೆ ಒಂದು ದಿನ ಸೀನಾಯಿ ಬೆಟ್ಟದ ಮರಳುಗಾಡಿನಲ್ಲಿ ಉರಿಯುತ್ತಿದ್ದ ಪೊದೆಯೊಂದನ್ನು ಮೋಶೆ ಕಂಡನು. ಅದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು.
೩೧. ಇದನ್ನು ಕಂಡ ಮೋಶೆ ವಿಸ್ಮಿತನಾದನು. ಅದನ್ನು ಚೆನ್ನಾಗಿ ನೋಡಲೆಂದು ಹತ್ತಿರಕ್ಕೆ ಬಂದಾಗ,
೩೨. ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು.
೩೩. ಸರ್ವೇಶ್ವರ ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ದೂರವಿಡು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು.
೩೪. ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.
೩೫. “ ‘ನಮ್ಮ ನ್ಯಾಯತೀರಿಸುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?’ ಎಂದು ಇಸ್ರಯೇಲರಿಂದ ತಿರಸ್ಕೃತನಾದವನೇ ಆ ಮೋಶೆ. ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡ ತಮ್ಮ ದೂತನ ಮೂಲಕ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ನೇಮಿಸಿದ್ದು ಇವನನ್ನೇ.
೩೬. ಈಜಿಪ್ಟಿನಲ್ಲೂ ಕೆಂಪುಸಮುದ್ರದಲ್ಲೂ ನಲವತ್ತು ವರ್ಷಕಾಲ ಮರಳು ಬೆಂಗಾಡಿನಲ್ಲೂ ಅದ್ಭುತಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಿ ಇಸ್ರಯೇಲರನ್ನು ಬಿಡುಗಡೆಮಾಡಿದವನು ಇವನೇ.
೩೭. ‘ದೇವರು ನನ್ನನ್ನು ಕಳುಹಿಸಿದಂತೆ, ನಿಮ್ಮ ಜನಾಂಗದಿಂದಲೇ ಒಬ್ಬ ಪ್ರವಾದಿಯನ್ನು ಕಳುಹಿಸುವರು’ ಎಂದು ಇಸ್ರಯೇಲರಿಗೆ ತಿಳಿಸಿದವನು ಈ ಮೋಶೆಯೇ.
೩೮. ಇಸ್ರಯೇಲರು ಮರಳುಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ.
೩೯. “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು.
೪೦. ಅವರು ಆರೋನನಿಗೆ, ‘ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು. ನಮಗೆ ಮುಂದಾಳಾಗಿ ಹೋಗಲು ಕೆಲವು ದೇವರುಗಳ ವಿಗ್ರಹಗಳನ್ನು ಮಾಡಿಕೊಡು,’ ಎಂದರು.
೪೧. ಮಾತ್ರವಲ್ಲ, ಹೋರಿಕರುವಿನ ಆಕಾರದ ವಿಗ್ರಹವೊಂದನ್ನು ಮಾಡಿ ಅದಕ್ಕೆ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಿಗಾಗಿ ಮೆರೆದಾಡಿದರು.
೪೨. ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ.
೪೩. ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ.