A A A A A

ಸಮುವೇಲನು ೨ ೧೧:೧-೨೭
೧. ರಾಜರು ಸಾಮಾನ್ಯವಾಗಿ ಯುದ್ಧಕ್ಕೆ ಹೊರಡುವ ವಸಂತಕಾಲ ಅದು. ದಾವೀದನು ಯೋವಾಬನನ್ನು, ತನ್ನ ಸೇವಕರನ್ನು ಹಾಗು ಎಲ್ಲ ಇಸ್ರಯೇಲರನ್ನು ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ದಾವೀದನು ಜೆರುಸಲೇಮಿನಲ್ಲೇ ಇದ್ದನು.
೨. ಒಂದು ದಿನ ಸಂಜೆ ಹೊತ್ತಿನಲ್ಲಿ ದಾವೀದನು ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಆಗ ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು.
೩. ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು, “ಆಕೆ ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು.
೪. ಆಕೆ ಆಗ ತಾನೆ ಋತುಸ್ನಾನ ಮಾಡಿಕೊಂಡಿದ್ದಳು. ಆಕೆಯನ್ನು ಕರೆದುತರುವಂತೆ ದಾವೀದನು ದೂತರನ್ನು ಕಳುಹಿಸಿದನು. ಆಕೆ ಬಂದಳು. ದಾವೀದನು ಆಕೆಯನ್ನು ಕೂಡಿದನು. ಅನಂತರ ಆಕೆ ತನ್ನ ಮನೆಗೆ ಹೋದಳು.
೫. ಮುಂದೆ, ತಾನು ಗರ್ಭಧರಿಸಿದ್ದು ಗೊತ್ತಾದಾಗ ಆಕೆ ದಾವೀದನಿಗೆ ಸಮಾಚಾರ ಕಳುಹಿಸಿದಳು.
೬. ಒಡನೆ ದಾವೀದನು ದೂತರ ಮುಖಾಂತರ ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು,” ಎಂದು ಆಜ್ಞಾಪಿಸಿದನು. ಅವನು ಅಂತೆಯೇ ಮಾಡಿದನು.
೭. ಊರೀಯನು ಬಂದಾಗ ದಾವೀದನು, “ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆಯುತ್ತಿದೆ?” ಎಂದು ವಿಚಾರಿಸಿದನು.
೮. ಅನಂತರ ಅವನಿಗೆ, “ನೀನು ಮನೆಗೆ ಹೋಗಿ ಕೈಕಾಲು ತೊಳೆದುಕೋ,” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು.
೯. ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.
೧೦. ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘಪ್ರಯಾಣಮಾಡಿ ಬಂದಿರುವೆಯಲ್ಲವೆ? ಏಕೆ ಮನೆಗೆ ಹೋಗಲಿಲ್ಲ?” ಎಂದನು.
೧೧. ಅದಕ್ಕೆ ಊರೀಯನು, “ಒಡಂಬಡಿಕೆಯ ಮಂಜೂಷ, ಇಸ್ರಯೇಲರು ಹಾಗು ಯೆಹೂದ್ಯರು ಗುಡಾರಗಳಲ್ಲೇ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ ಅವನ ಸೇವಕರೂ ಬಯಲಿನಲ್ಲೇ ಪಾಳೆಯಮಾಡಿಕೊಂಡಿದ್ದಾರೆ. ಹೀಗಿರುವಲ್ಲಿ, ನಾನು ನನ್ನ ಮನೆಗೆ ಹೋಗಿ ಉಂಡು, ಕುಡಿದು, ಹೆಂಡತಿಯೊಡನೆ ಮಲಗಿಕೊಳ್ಳುವುದು ಹೇಗೆ? ನಿಮ್ಮಾಣೆ, ನಿಮ್ಮ ಜೀವದ ಆಣೆ, ನಾನು ಇಂಥದನ್ನು ಎಂದಿಗೂ ಮಾಡಲಾರೆ,” ಎಂದು ಉತ್ತರಕೊಟ್ಟನು.
೧೨. ಆಗ ದಾವೀದನು, “ಹಾಗಾದರೆ ನೀನು ಈ ಹೊತ್ತು ಇಲ್ಲೇ ಇರು; ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದು ಆಜ್ಞಾಪಿಸಿದನು. ಅಂತೆಯೇ ಊರೀಯನು ಆ ದಿನ ಜೆರುಸಲೇಮಿನಲ್ಲೇ ಇದ್ದನು.
೧೩. ಮರುದಿನ ದಾವೀದನು ಅವನನ್ನು ಅನ್ನಪಾನ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಸಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
೧೪. ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟುಕಳುಹಿಸಿದನು.
೧೫. ಅದರಲ್ಲಿ ಹೀಗೆ ಬರೆಯಲಾಗಿತ್ತು: “ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆ, ಮುಂಭಾಗದಲ್ಲೇ ನಿಲ್ಲಿಸಿ, ನೀವು ಹಿಂದಕ್ಕೆ ಸರಿದುಕೊಳ್ಳಿ.”
೧೬. ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರುಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು.
೧೭. ಆ ಊರಿನ ಜನರು ಹೊರಗೆ ಬಂದು ಯೋವಾಬನ ಸೈನ್ಯದೊಡನೆ ಹೋರಾಡಿದರು. ದಾವೀದನ ಸೇವಕರಲ್ಲಿ ಕೆಲವರು ಸತ್ತರು; ಹಿತ್ತಿಯನಾದ ಊರೀಯನೂ ಮಡಿದನು.
೧೮. ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು, “ನೀನು ಹೋಗಿ ದಾವೀದನಿಗೆ ಯುದ್ಧದ ವರದಿಯನ್ನು ಸಲ್ಲಿಸು.
೧೯. ಯುದ್ಧ ವಿವರವನ್ನು ಹೇಳಿ ಮುಗಿಸಿದನಂತರ
೨೦. ಅರಸರು ಸಿಟ್ಟುಗೊಂಡು ನಿನ್ನನ್ನು, ‘ನೀವು ಯುದ್ಧಮಾಡುವುದಕ್ಕಾಗಿ ಪಟ್ಟಣದ ತೀರ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಿನಿಂದ ಏನನ್ನಾದರೂ ಬಿಸಾಡಬಹುದಿತ್ತಲ್ಲವೇ?
೨೧. ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೇ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ? ಹೀಗಿರುವುದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇಕೆ?’ ಎಂದು ಕೇಳಿದರೆ ನೀನು, ‘ಹಿತ್ತಿಯನಾದ ನಿಮ್ಮ ಸೇವಕ ಊರೀಯನೂ ಮೃತನಾದನೆಂದು ಹೇಳು,’ ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು.
೨೨. ಆ ದೂತನು ಹೋಗಿ ಯೋವಾಬನ ಆಜ್ಞೆಯಂತೆಯೇ ದಾವೀದನಿಗೆ ಹೀಗೆ ತಿಳಿಸಿದನು: “ಆ ಊರಿನವರು ಮಹಾಬಲದೊಡನೆ ಯುದ್ಧಮಾಡುವುದಕ್ಕೆ ಬೈಲಿಗೆ ಬಂದರು. ನಾವು ಅವರನ್ನು ಊರುಬಾಗಿಲಿನವರೆಗೂ ಹಿಂದಟ್ಟಿದೆವು.
೨೩. ***
೨೪. ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿಮ್ಮ ಸೇವಕರ ಮೇಲೆ ಬಾಣಗಳನ್ನು ಎಸೆದುದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿಮ್ಮ ಸೇವಕ ಊರೀಯನೂ ಮಡಿದನು.”
೨೫. ಆಗ ದಾವೀದನು ಆ ದೂತನಿಗೆ, “ನೀನು ಹೋಗಿ ಯೋವಾಬನಿಗೆ, ‘ವ್ಯಸನಪಡಬೇಕಾಗಿಲ್ಲ; ಕತ್ತಿ ಈ ದಿನ ಒಬ್ಬನನ್ನು ನುಂಗಿದರೆ ನಾಳೆ ಇನ್ನೊಬ್ಬನನ್ನು ನುಂಗುತ್ತದೆ. ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿ, ಎಂಬುದಾಗಿ ಅರಸರು ಆಜ್ಞಾಪಿಸುತ್ತಾರೆ’ ಎಂದು ಹೇಳಿ ಅವನನ್ನು ಧೈರ್ಯಪಡಿಸು,” ಎಂದನು.
೨೬. ಊರೀಯನ ಮರಣವಾರ್ತೆಯನ್ನು ಅವನ ಹೆಂಡತಿ ಕೇಳಿ ಗಂಡನಿಗಾಗಿ ಅತ್ತು ಗೋಳಾಡಿದಳು.
೨೭. ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರೆಯಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಆಕೆ ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.

ಸಮುವೇಲನು ೨ ೧೨:೧-೩೧
೧. ಸರ್ವೇಶ್ವರಸ್ವಾಮಿ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಹೀಗೆಂದು ಹೇಳಿದನು: “ಒಂದು ಊರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬನು ಐಶ್ವರ್ಯವಂತ, ಇನ್ನೊಬ್ಬನು ಬಡವ.
೨. ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು.
೩. ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದೂ ಕೊಂಡು ತಂದದ್ದು. ಅದನ್ನು ಅಕ್ಕರೆಯಿಂದ ಸಾಕುತ್ತಿದ್ದ. ಅದು ದೊಡ್ಡದಾಗುವವರೆಗೆ ಮಗುವಿನಂತೆ ಅವನ ಸಂಗಡ ಹಾಗೂ ಅವನ ಮಕ್ಕಳ ಸಂಗಡವೆ ಬೆಳೆಯುತ್ತಿತ್ತು. ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು. ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆಮಾಡುತ್ತಿತ್ತು.
೪. ಒಂದು ದಿನ ಆ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ ಕುರಿದನಗಳಿಂದ ಏನನ್ನೂ ಕೊಲ್ಲಲು ಆ ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನೇ ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ.”
೫. ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡುಕೋಪಗೊಂಡು ನಾತಾನನಿಗೆ, “ಸರ್ವೇಶ್ವರನಾಣೆ, ಆ ವ್ಯಕ್ತಿ ಸಾಯಲೇ ಬೇಕು.
೬. ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು,” ಎಂದನು.
೭. ಆಗ ನಾತಾನನು ದಾವೀದನನ್ನು ದಿಟ್ಟಿಸಿ, “ಆ ಮನುಷ್ಯ ನೀನೇ. ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಹೇಳುವುದು ಇದು: ‘ನಿನ್ನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದವನು ನಾನು; ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನೂ ನಾನೇ.
೮. ಇದಲ್ಲದೆ, ನಾನು ನಿನಗೆ ನಿನ್ನ ಯಜಮಾನನ ಮನೆಯನ್ನೂ ಅವನ ಮಡದಿಯರನ್ನೂ ನಿನ್ನ ಮಡಿಲಿಗೆ ಹಾಕಿದೆ. ಇಸ್ರಯೇಲ್ ಮತ್ತು ಯೆಹೂದ ಕುಲಗಳನ್ನು ನಿನ್ನ ವಶಕ್ಕೆ ಕೊಟ್ಟೆ. ಇದೂ ಸಾಲದಿದ್ದರೆ, ನಾನು ನಿನಗೆ ಇನ್ನೂ ಬೇಕಾದದ್ದನ್ನು ಕೊಡುತ್ತಿದ್ದೆ.
೯. ಹೀಗಿರಲು, ನೀನು ಸರ್ವೇಶ್ವರನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದೇಕೆ? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ.
೧೦. ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗು ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ.
೧೧. ಸರ್ವೇಶ್ವರನಾದ ನನ್ನ ಮಾತನ್ನು ಕೇಳು: ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ನಿನ್ನೆದುರಿನಲ್ಲೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲೇ ಅವರ ಕೂಡ ಮಲಗುವನು.
೧೨. ನೀನು ಅದನ್ನು ಗುಪ್ತವಾಗಿ ಮಾಡಿದೆ. ನಾನು ಹೇಳುವ ಮಾತಾದರೋ ಇಸ್ರಯೇಲರೆಲ್ಲರ ಮುಂದೆ ಬಹಿರಂಗವಾಗಿ ನೆರವೇರುವುದು,’” ಎಂದನು.
೧೩. ಆಗ ದಾವೀದನು ನಾತಾನನಿಗೆ, “ನಾನು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದ್ದೇನೆ,” ಎಂದು ಹೇಳಿದನು. ನಾತಾನನು ಅವನಿಗೆ, “ಸರ್ವೇಶ್ವರ ನಿನ್ನ ಪಾಪವನ್ನು ಕ್ಷಮಿಸಿದ್ದಾರೆ; ನೀನು ಸಾಯುವುದಿಲ್ಲ.
೧೪. ಆದರೂ ನೀನು ಈ ಕೃತ್ಯದಿಂದ, ಸರ್ವೇಶ್ವರನ ವೈರಿಗಳು ಅವರನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದಕೊಟ್ಟೆ. ಆದುದರಿಂದ ನಿನ್ನಿಂದ ಹುಟ್ಟಲಿರುವ ಮಗು ಸತ್ತುಹೋಗುವುದು,”
೧೫. ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗು ಸರ್ವೇಶ್ವರನ ಶಿಕ್ಷೆಯಿಂದಾಗಿ ಬಹು ಅಸ್ವಸ್ಥವಾಯಿತು.
೧೬. ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ.
೧೭. ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
೧೮. ಏಳನೆಯ ದಿನದಲ್ಲಿ ಮಗು ಸತ್ತಿತು. ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು, “ಹುಡುಗನು ಜೀವದಿಂದಿದ್ದಾಗಲೇ ಅವರು ನಮ್ಮ ಸಂತಾಪವನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವರಿಗೆ ತಿಳಿಸಿದರೆ ಅವರು ತನಗೆ ಏನಾದರೂ ಕೇಡುಮಾಡಿಕೊಂಡಾರಲ್ಲವೇ?”, ಎಂದು ಮಾತಾಡಿಕೊಳ್ಳುತ್ತಿದ್ದರು.
೧೯. ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವುದನ್ನು ದಾವೀದನು ಕಂಡು ಮಗು ಸತ್ತು ಹೋಯಿತೆಂದು ತಿಳಿದು, ಸೇವಕರನ್ನು, “ಮಗು ತೀರಿಕೊಂಡಿತೋ?,” ಎಂದು ಕೇಳಿದನು. ಅವರು “ಹೌದು, ತೀರಿಕೊಂಡಿತು,” ಎಂದು ಉತ್ತರಕೊಟ್ಟರು.
೨೦. ಆಗ ದಾವೀದನು ನೆಲದಿಂದೆದ್ದು, ಸ್ನಾನ ಮಾಡಿ ತೈಲ ಹಚ್ಚಿಕೊಂಡು, ತನ್ನ ಬಟ್ಟೆಗಳನ್ನು ಬದಲಿಸಿ, ಸರ್ವೇಶ್ವರನ ಮಂದಿರಕ್ಕೆ ಹೋಗಿ ಆರಾಧನೆ ಮಾಡಿದನು. ಅನಂತರ ಮನೆಗೆ ಬಂದು ಆಹಾರ ತರಿಸಿ ಊಟಮಾಡಿದನು.
೨೧. ಇದನ್ನು ನೋಡಿದ ಸೇವಕರು ಅವನಿಗೆ, “ಇದೇನು ನೀವು ಮಾಡಿದ್ದು? ಹುಡುಗ ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿರಿ. ಹುಡುಗ ಸತ್ತ ನಂತರ ಎದ್ದು ಊಟಮಾಡಿದಿರಿ!” ಎಂದರು.
೨೨. ದಾವೀದನು ಅವರಿಗೆ, “ಹುಡುಗ ಜೀವದಿಂದಿದ್ದಾಗ ಒಂದು ವೇಳೆ ಸರ್ವೇಶ್ವರ ಕೃಪೆಮಾಡಿ ಅವನನ್ನು ಉಳಿಸಾರು ಎಂದುಕೊಂಡು ಉಪವಾಸ ಮಾಡಿದೆ, ಕಣ್ಣೀರಿಟ್ಟೆ.
೨೩. ಈಗ ಸತ್ತಿದ್ದಾನೆ ಅಲ್ಲವೆ? ನಾನೇಕೆ ಉಪವಾಸ ಮಾಡಬೇಕು? ಅವನನ್ನು ಹಿಂದಕ್ಕೆ ತರಲು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವುದಿಲ್ಲ,” ಎಂದು ಉತ್ತರಕೊಟ್ಟನು.
೨೪. ದಾವೀದನು ತನ್ನ ಹೆಂಡತಿ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲೊಮೋನೆಂದು ಹೆಸರಿಟ್ಟನು. ಸರ್ವೇಶ್ವರಸ್ವಾಮಿ ಆ ಹುಡುಗನನ್ನು ಪ್ರೀತಿಸಿದರು;
೨೫. ಪ್ರವಾದಿ ನಾತಾನನು, ಸರ್ವೇಶ್ವರನಿಂದ ಪಡೆದ ಆಜ್ಞೆಯಂತೆ ಅವರಿಗೋಸ್ಕರ, ಆ ಹುಡುಗನಿಗೆ ‘ಯೆದೀದ್ಯ’ ಎಂದು ಹೆಸರಿಟ್ಟನು.
೨೬. ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅರಮನೆ ಇದ್ದ ಭಾಗವನ್ನು ಸ್ವಾಧೀನಮಾಡಿಕೊಂಡನು.
೨೭. ದಾವೀದನಿಗೆ ದೂತರ ಮುಖಾಂತರ, “ನಾನು ರಬ್ಬಕ್ಕೆ ಮುತ್ತಿಗೆಹಾಕಿ ನೀರು ಪೂರೈಕೆಯ ಭಾಗವನ್ನು ಸ್ವಾಧೀನಮಾಡಿಕೊಂಡಿದ್ದೇನೆ.
೨೮. ನೀವು ಉಳಿದ ಸೈನ್ಯವನ್ನು ಬೇಗನೆ ಕೂಡಿಸಿಕೊಂಡು ಬಂದು ಪಟ್ಟಣಕ್ಕೆ ಮುತ್ತಿಗೆಹಾಕಿ ಉಳಿದ ಭಾಗವನ್ನು ಸ್ವಾಧೀನಪಡಿಸಿಕೊಳ್ಳಿ; ಅದನ್ನು ನಾನೇ ಹಿಡಿದುಕೊಂಡೆನೆಂಬ ಕೀರ್ತಿ ನನಗೆ ಬೇಡ,” ಎಂದು ಹೇಳಿಕಳುಹಿಸಿದನು.
೨೯. ಆಗ ದಾವೀದನು ಜನರೆಲ್ಲರನ್ನೂ ಕೂಡಿಸಿಕೊಂಡು ಹೋಗಿ ರಬ್ಬಕ್ಕೆ ಮುತ್ತಿಗೆಹಾಕಿ ಅದನ್ನು ವಶಮಾಡಿಕೊಂಡನು.
೩೦. ಇದಲ್ಲದೆ ಅವನು ಅವರ ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಮೂವತ್ತೈದು ಕಿಲೊಗ್ರಾಂ ತೂಕದ್ದು. ಅದರಲ್ಲಿದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು.
೩೧. ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೂ ಇಟ್ಟಿಗೆಗಳನ್ನು ಸುಡುವುದಕ್ಕೂ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರಿಗೂ ಇದೇ ಗತಿ ಆಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.

ಕೀರ್ತನೆಗಳು ೬೫:೯-೧೩
೯. ಇಳೆಯನು ಸಂಧಿಸಿ, ಮಳೆಯನು ಸುರಿಸಿ, ನೆಲವನು ನೀ ಸಿರಿಗೊಳಿಸುವಾತ I ನಾಲೆ ತುಂಬ ನೀರಹರಿಸಿ, ಹೊಲ ತುಂಬ ನೀ ಧಾನ್ಯನೀಡುವಾತ II
೧೦. ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ I ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ II
೧೧. ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ I ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ II
೧೨. ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿನಿಂದ I ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ II
೧೩. ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ I ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ I ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ II

ಜ್ಞಾನೋಕ್ತಿಗಳು ೧೬:೨೨-೨೪
೨೨. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ತಕ್ಕ ದಂಡನೆ.
೨೩. ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ.
೨೪. ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು.

ಯೊವಾನ್ನನು ೬:೨೨-೫೧
೨೨. ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸು ಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟುಹೋಗಿದ್ದಾರೆಂದು ಅವರಿಗೆ ತಿಳಿದಿತ್ತು.
೨೩. ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು.
೨೪. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು.
೨೫. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು.
೨೬. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ.
೨೭. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು.
೨೮. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನುಮಾಡಬೇಕು?” ಎಂದು ಕೇಳಿದರು.
೨೯. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.
೩೦. ಅದಕ್ಕೆ ಆ ಜನರು, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ?
೩೧. ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು. ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?’ ಎಂದರು.
೩೨. ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ.
೩೩. ಏಕೆಂದರೆ, ಸ್ವರ್ಗದಿಂದ ಇಳಿದುಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು.
೩೪. ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು.
೩೫. ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.
೩೬. ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ.
೩೭. ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ.
೩೮. ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ.
೩೯. ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು.
೪೦. ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.
೪೧. “ಸ್ವರ್ಗದಿಂದ ಇಳಿದುಬಂದ ರೊಟ್ಟಿ ನಾನೇ” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಗೊಣಗತೊಡಗಿದರು.
೪೨. ಅವರು, “ಈತನು ಜೋಸೆಫನ ಮಗನಾದ ಯೇಸು ಅಲ್ಲವೆ? ಈತನ ತಂದೆ ತಾಯಿ ನಮಗೆ ಗೊತ್ತಿಲ್ಲವೆ? ಅಂದಮೇಲೆ, ‘ನಾನು ಸ್ವರ್ಗದಿಂದ ಬಂದಿದ್ದೇನೆ,’ ಎಂದು ಈತನು ಹೇಳುವುದಾದರೂ ಹೇಗೆ?” ಎಂದರು.
೪೩. ಅದಕ್ಕೆ ಯೇಸು, “ನಿಮ್ಮನಿಮ್ಮೊಳಗೆ ಗೊಣಗುಟ್ಟದಿರಿ.
೪೪. ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ.
೪೫. ‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಕೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿ ಒಬ್ಬನೂ ನನ್ನ ಬಳಿಗೆ ಬರುತ್ತಾನೆ.
೪೬. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ.
೪೭. ವಿಶ್ವಾಸವುಳ್ಳವನಲ್ಲಿ ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
೪೮. ಜೀವದಾಯಕ ರೊಟ್ಟಿ ನಾನೇ.
೪೯. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ, ‘ಮನ್ನಾ’ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು.
೫೦. ಸ್ವರ್ಗದಿಂದ ಇಳಿದುಬಂದ ರೊಟ್ಟಿಯಾದರೋ ಹಾಗಲ್ಲ, ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ.
೫೧. ನಾನೇ ಸ್ವರ್ಗದಿಂದ ಇಳಿದುಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.