A A A A A

ಆದಿಕಾಂಡ ೪೩:೧-೩೪
೧. ಬರವು ಕಾನಾನಿನಲ್ಲಿ ಘೋರವಾಗಿತ್ತು.
೨. ಈಜಿಪ್ಟಿನಿಂದ ತಂದ ದವಸಧಾನ್ಯ ಮುಗಿದು ಹೋಗಿತ್ತು. ಯಕೋಬನು ತನ್ನ ಪುತ್ರರಿಗೆ, ” ನೀವು ಪುನಃ ಹೋಗಿ ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿ,” ಎಂದನು.
೩. ಅದಕ್ಕೆ ಯೆಹೂದನು ಹೀಗೆಂದನು: “ಆ ಮನುಷ್ಯ ನಮಗೆ, ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ದರ್ಶನಕ್ಕೆ ಬರಕೂಡದು’ ಎಂದು ಕಡುಖಂಡಿತವಾಗಿ ಹೇಳಿಬಿಟ್ಟಿದ್ದಾನೆ.
೪. ನೀವು ನಮ್ಮ ತಮ್ಮನನ್ನು ಜೊತೆಯಲ್ಲಿ ಕಳಿಸಿದರೆ, ಹೋಗಿ ಧಾನ್ಯವನ್ನು ಕೊಂಡುಕೊಂಡು ಬರುತ್ತೇವೆ.
೫. ಕಳಿಸಿಕೊಡದಿದ್ದರೆ, ನಾವು ಹೋಗುವುದಿಲ್ಲ. ಆ ಮನುಷ್ಯ, ‘ನಿಮ್ಮ ತಮ್ಮ ನಿಮ್ಮ ಸಂಗಡ ಇಲ್ಲದಿದ್ದರೆ ಸಮ್ಮುಖಕ್ಕೆ ಬರಲೇ ಕೂಡದು’ ಎಂದಿದ್ದಾನೆ\.
೬. ಅದಕ್ಕೆ ಯಕೋಬನು, “ನಿಮಗೆ ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ ನನ್ನನ್ನೇಕೆ ಈ ಸಂಕಟಕ್ಕೆ ಗುರಿಮಾಡಿದಿರಿ?” ಎಂದನು.
೭. ಆಗ ಅವರು, ”ಆ ಮನುಷ್ಯ ನಿಮ್ಮ ವಿಷಯದಲ್ಲೂ ನಮ್ಮ ಮನೆಯವರ ವಿಷಯದಲ್ಲೂ ಸೂಕ್ಷ್ಮವಾಗಿ ವಿಚಾರಿಸಿದ; ನಿಮ್ಮ ತಂದೆ ಇನ್ನು ಜೀವದಿಂದ ಇದ್ದಾನೋ? ನಿಮಗೆ ತಮ್ಮನಿದ್ದಾನೋ? ಎಂದೆಲ್ಲ ಅವನೇ ಕೇಳಿದ. ಆ ಪ್ರಶ್ನೆಗಳಿಗೆ ನಾವು ತಕ್ಕ ಉತ್ತರ ಕೊಡಬೇಕಾಯಿತು. ಅಲ್ಲದೆ, ಅವನು ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿ', ಎಂದು ಕೇಳುತ್ತಾನೆಂದು ತಿಳಿಯಲು ನಮಗೆ ಹೇಗೆ ಸಾಧ್ಯವಿತ್ತು?” ಎಂದರು.
೮. ಆಗ ಯೆಹೂದನು ತನ್ನ ತಂದೆ ಯಕೋಬನಿಗೆ, “ನೀವು, ನಾವು ಮತ್ತು ನಮ್ಮ ಮಕ್ಕಳು, ಎಲ್ಲರೂ ಸಾಯದೆ ಉಳಿಯಬೇಕಾದರೆ ಆ ಹುಡುಗನನ್ನು ನನ್ನ ಜೊತೆ ಕಳಿಸಿಕೊಡಿ, ನಾವು ಇದೀಗಲೆ ಹೊರಡುತ್ತೇವೆ.
೯. ಅವನಿಗೆ ನಾನೇ ಹೊಣೆ; ಅವನ ವಿಷಯ ನನಗೆ ಬಿಡಿ. ನಾನು ಅವನನ್ನು ಮತ್ತೆ ಕರೆದುಕೊಂಡು ಬಂದು ನಿಮ್ಮ ಎದುರಿನಲ್ಲಿ ನಿಲ್ಲಿಸದೆಹೋದರೆ ಆ ದೋಷ ಸದಾಕಾಲ ನನ್ನ ಮೇಲೆ ಇರಲಿ.
೧೦. ನಾವು ತಡಮಾಡದೆ ಇದ್ದಿದ್ದರೆ, ಇಷ್ಟರೊಳಗೆ ಎರಡು ಸಾರಿ ಹೋಗಿ ಬರುತ್ತಿದ್ದೆವು,” ಎಂದು ಹೇಳಿದನು.
೧೧. ಇಷ್ಟಾದ ಮೇಲೆ ಅವರ ತಂದೆ ಯಕೋಬನು, “ನೀವು ಹೋಗಲೇಬೇಕಾದರೆ, ಒಂದು ಕೆಲಸಮಾಡಿ; ಈ ನಾಡಿನಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಹಾಕಿಕೊಂಡು ಹೋಗಿ, ಆ ಮನುಷ್ಯನಿಗೆ ಕಾಣಿಕೆಯಾಗಿ ಕೊಡಿ.
೧೨. ಅದೂ ಅಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿ; ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳಿಸಿದ ಹಣವನ್ನು ತೆಗೆದುಕೊಂಡು ಹೋಗಿ; ಬಹುಶಃ ಅವರಿಗೆ ತಿಳಿಯದೆ ಅದು ನಿಮ್ಮ ಕೈಗೆ ಬಂದಿರಬಹುದು.
೧೩. ನಿಮ್ಮ ತಮ್ಮನನ್ನೂ ಕರೆದುಕೊಂಡು ಮರಳಿ ಆ ಮನುಷ್ಯನ ಬಳಿಗೆ ಹೋಗಿ.
೧೪. ಅವನು ನಿಮ್ಮ ಮೇಲೆ ಕನಿಕರವಿಟ್ಟು ನಿಮ್ಮ ಅಣ್ಣನನ್ನೂ ಬೆನ್ಯಾಮೀನನನ್ನೂ ನಿಮ್ಮೊಂದಿಗೆ ಕಳುಹಿಸಿಬಿಡುವಂತೆ ಸರ್ವವಲ್ಲಭರಾದ ದೇವರು ಅನುಗ್ರಹಿಸಲಿ; ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಬೇಕಾದರೆ ಹಾಗೆಯೇ ಆಗಲಿ!” ಎಂದನು.
೧೫. ಅವರು ಆ ಕಾಣಿಕೆ ವಸ್ತುಗಳನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನು ತೆಗೆದುಕೊಂಡು ಹಾಗೂ ಬೆನ್ಯಾಮೀನನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು. ಈಜಿಪ್ಟನ್ನು ಸೇರಿ, ಜೋಸೆಫನ ಸಮ್ಮುಖದಲ್ಲಿ ನಿಂತುಕೊಂಡರು.
೧೬. ಬೆನ್ಯಾಮೀನನು ಅವರ ಸಂಗಡ ಇರುವುದನ್ನು ಜೋಸೆಫನು ನೋಡಿದನು. ಕೂಡಲೆ ಗೃಹನಿರ್ವಾಹಕನನ್ನು ಕರೆದು, “ಈ ಜನರು ನನ್ನ ಸಂಗಡ ಈ ಮಧ್ಯಾಹ್ನ ಊಟಮಾಡಬೇಕಾಗಿ ಇದೆ; ಇವರನ್ನು ಮನೆಯೊಳಗೆ ಕರೆದುಕೊಂಡು ಹೋಗು. ಮಾಂಸದ ಅಡುಗೆ ಮಾಡಿ, ಎಲ್ಲವನ್ನು ಸಿದ್ಧಪಡಿಸು,” ಎಂದು ಅಪ್ಪಣೆಮಾಡಿದನು.
೧೭. ಅದೇ ಮೇರೆಗೆ ಗೃಹನಿರ್ವಾಹಕನು ಅವರನ್ನು ಜೋಸೆಫನ ಮನೆಗೆ ಕರೆದುಕೊಂಡು ಹೋದನು.
೧೮. ಅಲ್ಲಿಗೆ ಹೋಗುತ್ತಿದ್ದ ಅವರಿಗೆ ಭಯವಾಯಿತು. “ಹಿಂದೆ ನಾವು ಚೀಲಗಳಲ್ಲಿ ವಾಪಸ್ಸು ತೆಗೆದುಕೊಂಡು ಹೋದ ಹಣದ ಪ್ರಯುಕ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ; ದಿಢೀರನೆ ನಮ್ಮ ಮೇಲೆ ಬಿದ್ದು ನಮ್ಮನ್ನು ಗುಲಾಮರನ್ನಾಗಿಸಿಕೊಳ್ಳಬಹುದು. ನಮ್ಮ ಕತ್ತೆಗಳನ್ನು ಹಿಡಿದುಕೊಳ್ಳಬಹುದು,” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
೧೯. ಮನೆಯ ಬಾಗಿಲ ಬಳಿ ಗೃಹನಿರ್ವಾಹಕನಿಗೆ,
೨೦. “ಅಯ್ಯಾ, ಮೊದಲೊಂದು ಸಾರಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೆವು.
೨೧. ನಾವು ಹೊರಟುಹೋದ ನಂತರ ಚಾವಡಿಯೊಂದರಲ್ಲಿ ಇಳಿದುಕೊಂಡೆವು. ಅಲ್ಲಿ ನಮ್ಮ ಚೀಲಗಳನ್ನು ಬಿಚ್ಚಿನೋಡಿದಾಗ ಪ್ರತಿ ಒಬ್ಬನ ಹಣ, ತೂಕ ಕಿಂಚಿತ್ತೂ ಕಡಿಮೆಯಿಲ್ಲದೆ, ಅವನವನ ಚೀಲದಲ್ಲೇ ಇತ್ತು. ಅದನ್ನು ವಾಪಸ್ಸು ತಂದಿದ್ದೇವೆ.
೨೨. ದವಸವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣ ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ತಿಳಿಯದು,” ಎಂದು ಹೇಳಿದರು.
೨೩. ಅದಕ್ಕೆ ಆ ಗೃಹನಿರ್ವಾಹಕ, “ಸಮಾಧಾನದಿಂದಿರಿ, ಹೆದರಬೇಡಿ. ನಿಮ್ಮ ತಂದೆಗೂ ನಿಮಗೂ ದೇವರಾದವರು ನಿಮ್ಮ ಚೀಲಗಳಲ್ಲಿಯೇ ನಿಧಿ ನಿಕ್ಷೇಪ ದೊರಕುವಂತೆ ಅನುಗ್ರಹಿಸಿದ್ದಾರೆ; ನೀವು ಕೊಟ್ಟ ಹಣ ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.
೨೪. ಆಮೇಲೆ ಗೃಹನಿರ್ವಾಹಕನು ಅವರೆಲ್ಲರನ್ನು ಜೋಸೆಫನ ಮನೆಯೊಳಗೆ ಕರೆತಂದು ಕಾಲು ತೊಳೆದುಕೊಳ್ಳುವುದಕ್ಕೆ ನೀರನ್ನು ಕೊಡಿಸಿದನು. ಅವರ ಕತ್ತೆಗಳಿಗೆ ಮೇವು ಹಾಕಿಸಿದನು.
೨೫. ತಾವು ಅಲ್ಲೇ ಊಟಮಾಡಬೇಕೆಂಬ ಸಂಗತಿ ಅವರಿಗೆ ತಿಳಿಯಿತು. ಆದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಸಿದ್ಧವಾಗಿ ಇಟ್ಟುಕೊಂಡರು. ಜೋಸೆಫನು ಬರುವ ತನಕ, ಮಧ್ಯಾಹ್ನದವರೆಗೆ ಕಾದುಕೊಂಡಿದ್ದರು.
೨೬. ಜೋಸೆಫನು ಮನೆಗೆ ಬಂದಾಗ ಅವರು ಅವನಿಗೆ ಕಾಣಿಕೆಯನ್ನು ತಂದುಕೊಟ್ಟು, ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
೨೭. ಅವನು ಅವರ ಯೋಗಕ್ಷೇಮವನ್ನು ವಿಚಾರಿಸಿದನು. ಬಳಿಕ, “ನೀವು ಹೇಳಿದ ಮುಪ್ಪುವಯಸ್ಸಿನ ನಿಮ್ಮ ತಂದೆ ಕ್ಷೇಮವೋ? ಇನ್ನು ಬದುಕಿದ್ದಾನೋ?\ ಎಂದು ಕೇಳಲು
೨೮. ಅವರು ಮತ್ತೆ ನೆಲದವರೆಗೆ ಬಾಗಿ ನಮಸ್ಕಾರ ಮಾಡಿ, “ನಿಮ್ಮ ಸೇವಕರಾದ ನಮ್ಮ ತಂದೆ ಇಂದಿಗೂ ಕ್ಷೇಮದಿಂದ ಇದ್ದಾರೆ,” ಎಂದರು.
೨೯. ಅನಂತರ ಕಣ್ಣೆತ್ತಿ, ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿದನು. “ನೀವು ಹೇಳಿದ ನಿಮ್ಮ ಕಿರಿಯ ತಮ್ಮ ಇವನೇನೋ?” ಎಂದು ಕೇಳಿ ಅವನಿಗೆ, “ಮಗು, ದೇವರ ಪ್ರೀತಿ ನಿನ್ನ ಮೇಲಿರಲಿ!” ಎಂದು ಹೇಳಿದನು.
೩೦. ಜೋಸೆಫನಿಗೆ ತಮ್ಮನನ್ನು ನೋಡಿದ ಮೇಲೆ ಕರುಳು ಕರಗಿತು. ಕಣ್ಣೀರನ್ನು ತಡೆಯಲಾಗದೆ ಒಳ ಅರಮನೆಗೆ ತ್ವರೆಯಾಗಿ ಹೋಗಿ ಅಲ್ಲಿ ಅತ್ತನು.
೩೧. ಆಮೇಲೆ ಮುಖವನ್ನು ತೊಳೆದುಕೊಂಡು, ಹೊರಗೆ ಬಂದು, ಮನಸ್ಸನ್ನು ಬಿಗಿಹಿಡಿದು, “ಊಟಕ್ಕೆ ಬಡಿಸಿರಿ”, ಎಂದು ಅಪ್ಪಣೆ ಕೊಟ್ಟನು.
೩೨. ಪರಿಚಾರಕರು ಅವನಿಗೆ ಬೇರೆ, ಅವನ ಅಣ್ಣತಮ್ಮಂದಿರಿಗೇ ಬೇರೆ, ಅವನ ಸಂಗಡವಿದ್ದ ಈಜಿಪ್ಟಿನವರಿಗೇ ಬೇರೆ, ಹೀಗೆ ಬೇರೆಬೇರೆಯಾಗಿ ಊಟಕ್ಕೆ ಬಡಿಸಿದರು. ಈಜಿಪ್ಟಿನವರು ಹಿಬ್ರಿಯರ ಸಹಪಂಕ್ತಿಯಲ್ಲಿ ಊಟಮಾಡುವುದಿಲ್ಲ; ಅದು ಅವರಿಗೆ ಅಸಹ್ಯ.
೩೩. ಜೋಸೆಫನು ತನ್ನ ಅಣ್ಣತಮ್ಮಂದಿರನ್ನು, ಹಿರಿಯವನು ಮೊದಲ್ಗೊಂಡು ಕಿರಿಯವನವರೆಗೂ, ಅವರವರ ಮಯಸ್ಸಿನ ಪ್ರಕಾರ ಕುಳ್ಳಿರಿಸಿದ್ದನು. ಇದನ್ನು ಗಮನಿಸಿದ ಅವರು ಒಬ್ಬರನ್ನೊಬ್ಬರು ನೋಡುತ್ತಾ ಆಶ್ಚರ್ಯಪಟ್ಟರು.
೩೪. ಜೋಸೆಫನು ತನ್ನ ಮುಂದೆ ಬಡಿಸಿದ್ದ ಪದಾರ್ಥಗಳಲ್ಲಿ ಅವರಿಗೆ ಭಾಗಗಳನ್ನು ಕಳಿಸಿದನು. ಬೆನ್ಯಾಮೀನನಿಗೆ ಬಂದ ಭಾಗವಾದರೋ ಮಿಕ್ಕವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಯಥೇಚ್ಛವಾಗಿ ಪಾನಮಾಡಿ ಜೋಸೆಫನ ಸಂಗಡ ಸಂಭ್ರಮದಿಂದಿದ್ದರು.

ಆದಿಕಾಂಡ ೪೪:೧-೩೪
೧. ತರುವಾಯ ಜೋಸೆಫನು ತನ್ನ ಗೃಹನಿರ್ವಾಹಕನನ್ನು ಕರೆದು, “ಆ ಜನರ ಗೋಣಿಚೀಲಗಳಲ್ಲಿ ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಿಯಲ್ಲಿ ಅವನವನ ಹಣದ ಗಂಟನ್ನಿಡು.
೨. ಕಿರಿಯವನ ಚೀಲದ ಬಾಯೊಳಗೆ ಅವನು ದವಸಕ್ಕೆ ತಂದ ಹಣವನ್ನಲ್ಲದೆ ನನ್ನ ಬೆಳ್ಳಿಯ ಪಾನಪಾತ್ರೆಯನ್ನೂ ಇಡು,” ಎಂದು ಅಪ್ಪಣೆಕೊಟ್ಟನು. ಗೃಹನಿರ್ವಾಹಕನು ಅದರಂತೆಯೇ ಮಾಡಿದನು.
೩. ಬೆಳಿಗ್ಗೆ, ಹೊತ್ತು ಮೂಡುವಾಗಲೆ, ಆ ಜನರು ಅಪ್ಪಣೆಪಡೆದು, ಕತ್ತೆಗಳನ್ನು ಹೊಡೆದುಕೊಂಡು ಹೊರಟು ಹೋದರು.
೪. ಅವರು ಪಟ್ಟಣಗಳನ್ನು ಬಿಟ್ಟು ಸ್ವಲ್ಪದೂರ ಹೋಗುವಷ್ಟರಲ್ಲಿ, ಜೋಸೆಫನು ತನ್ನ ಗೃಹನಿರ್ವಾಹಕನಿಗೆ, ‘ನೀನೆದ್ದು ಆ ಜನರನ್ನು ಹಿಂದಟ್ಟಿ ಹೋಗಿ ಹಿಡಿ. ಅವರಿಗೆ, ‘ನೀವು ಉಪಕಾರಕ್ಕೆ ಪ್ರತಿಯಾಗಿ ಏಕೆ ಅಪಕಾರ ಮಾಡಿದಿರಿ?
೫. ಆ ಪಾತ್ರೆಯಿಂದಲೆ ಅಲ್ಲವೆ ನನ್ನ ದಣಿ ಪಾನಮಾಡುವುದು? ಅದರಲ್ಲಿ ನೋಡೇ ಅಲ್ಲವೆ ಶಕುನ ಹೇಳುವುದು? ನೀವು ಮಾಡಿರುವುದು ಮಹಾ ನೀಚತನ, ಎನ್ನಬೇಕು,” ಎಂದು ತಿಳಿಸಿದನು.
೬. ಗೃಹನಿರ್ವಾಹಕನು ಅವರನ್ನು ಹಿಂದಟ್ಟಿ ಹೋಗಿ ಹಿಡಿದು ಆ ಮಾತುಗಳನ್ನೇ ಹೇಳಿದನು.
೭. ಅದಕ್ಕೆ ಅವರು, “ಅಯ್ಯಾ, ನೀವು ಇಂಥಾ ಮಾತುಗಳನ್ನು ಆಡಬಹುದೆ! ನಿಮ್ಮ ಸೇವಕರಾದ ನಾವು ಇಂಥ ಕೃತ್ಯವನ್ನು ಎಂದಿಗೂ ಮಾಡುವವರಲ್ಲ.
೮. ಮೊದಲು ನಮ್ಮ ಚೀಲಗಳ ಬಾಯಲ್ಲಿ ಸಿಕ್ಕಿದ ಹಣವನ್ನು ನಾವು ಕಾನಾನ್ ನಾಡಿನಿಂದ ವಾಪಸ್ಸು ತಂದು ನಿಮಗೆ ಕೊಟ್ಟೆವಲ್ಲವೆ? ಹೀಗಿರುವಾಗ ನಾವು ನಿಮ್ಮ ದಣಿಯ ಮನೆಯೊಳಗಿಂದ ಬೆಳ್ಳಿಬಂಗಾರ ಕದಿಯುವುದುಂಟೆ?
೯. ಆ ಪಾತ್ರೆ ನಿಮ್ಮ ಸೇವಕರಾದ ನಮ್ಮಲ್ಲಿ ಯಾರಾದರ ಬಳಿ ಸಿಕ್ಕಿದ್ದಾದರೆ ಅವನಿಗೆ ಮರಣದಂಡನೆ ಆಗಲಿ! ಅದುಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಊಳಿಗದವರಾಗುತ್ತೇವೆ,” ಎಂದರು.
೧೦. ಅದಕ್ಕೆ ಆ ಗೃಹನಿರ್ವಾಹಕ, “ಸರಿ, ನೀವು ಹೇಳಿದಂತೆಯೇ ಆಗಲಿ; ಆ ಪಾತ್ರೆ ಯಾವನ ಬಳಿ ಸಿಕ್ಕುತ್ತದೋ ಅವನು ನನಗೆ ಊಳಿಗದವನಾಗಬೇಕು; ಉಳಿದವರು ತಪ್ಪಿಲ್ಲದವರು,’ ಎಂದು ಹೇಳಿದ್ದೇ
೧೧. ಅವರಲ್ಲಿ ಪ್ರತಿಯೊಬ್ಬನೂ ತನ್ನತನ್ನ ಚೀಲವನ್ನು ನೆಲಕ್ಕಿಳಿಸಿ ಬಿಚ್ಚಿದರು.
೧೨. ಅವನು ಹಿರಿಯವನಿಂದ ಮೊದಲ್ಗೊಂಡು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆ ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
೧೩. ಆಗ ಅವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಿದರು; ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂದಿರುಗಿ ಬಂದರು.
೧೪. ಯೆಹೂದನು ಮತ್ತು ಅವನ ಅಣ್ಣತಮ್ಮಂದಿರು ಜೋಸೆಫನ ಮನೆಗೆ ಹಿಂದಿರುಗಿದಾಗ ಜೋಸೆಫನು ಇನ್ನೂ ಮನೆಯಲ್ಲೇ ಇದ್ದನು. ಅವರು ಅವನಿಗೆ ಅಡ್ಡಬಿದ್ದರು.
೧೫. ಅವನು ಅವರನ್ನು, “ನೀವು ಮಾಡಿರುವ ಕೃತ್ಯ ಎಂಥದ್ದು! ನನ್ನಂಥವನು ಕಣಿ ನೋಡಿ ಗುಟ್ಟನ್ನು ರಟ್ಟು ಮಾಡಬಲ್ಲವನೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದು ಕೇಳಿದನು.
೧೬. ಅದಕ್ಕೆ ಯೆಹೂದನು, “ನಮ್ಮೊಡೆಯರಿಗೆ ನಾವು ಏನು ಹೇಳೋಣ? ಯಾವ ಉತ್ತರ ಕೊಡೋಣ? ನಾವು ನಿರ್ದೋಷಿಗಳೆಂದು ತೋರಿಸಲು, ಏನುತಾನೆ ಮಾಡುವುದು? ನಿಮ್ಮ ಸೇವಕರಾದ ನಮ್ಮ ಪಾಪಕೃತ್ಯವನ್ನು ದೇವರೇ ಹೊರಪಡಿಸಿದ್ದಾರೆ. ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಗುಲಾಮರಾದೆವಲ್ಲವೆ?\ ಎಂದನು.
೧೭. ಜೋಸೆಫನು, “ಹಾಗೆ ಎಂದಿಗೂ ಆಗಬಾರದು; ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರ ನನಗೆ ಗುಲಾಮನಾಗಬೇಕು; ನೀವಾದರೋ ಅಡ್ಡಿಯಿಲ್ಲದೆ ನಿಮ್ಮ ತಂದೆಯ ಬಳಿಗೆ ಹೋಗಬಹುದು,” ಎಂದನು.
೧೮. ಆಗ ಯೆಹೂದನು ಹತ್ತಿರಕ್ಕೆ ಬಂದು, “ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ; ನನ್ನ ಮೇಲೆ ಸಿಟ್ಟುಮಾಡಬೇಡಿ; ತಾವು ಫರೋಹನಿಗೆ ಸಮಾನರು.
೧೯. ಒಡೆಯರಾದ ತಾವು ಸೇವಕರಾದ ನಮ್ಮನ್ನು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ’ ಎಂದು ಕೇಳಿದಿರಿ.
೨೦. ನಾವು ‘ತಂದೆ ಇದ್ದಾರೆ, ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,’ ಎಂದು ಹೇಳಿದೆವು.
೨೧. ಅದಕ್ಕೆ ತಾವು ಸೇವಕರಾದ ನಮಗೆ, “ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ,’ ಎಂದು ಅಪ್ಪಣೆಕೊಟ್ಟಿರಿ.
೨೨. ನಾವು, ‘ಆ ಹುಡುಗನು ತಂದೆಯನ್ನು ಬಿಟ್ಟು ಅಗಲುವುದಕ್ಕಾಗುವುದಿಲ್ಲ; ಅಗಲಿದರೆ ತಂದೆ ಸತ್ತುಹೋದಾರು,’ ಎಂದು ಒಡೆಯರಾದ ತಮಗೆ ತಿಳಿಸಿದೆವು.
೨೩. ಅದಕ್ಕೆ ತಾವು, 'ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡಕೂಡದು,’ ಎಂದು ಆಜ್ಞೆಕೊಟ್ಟಿರಿ.
೨೪. “ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು.
೨೫. ನಮ್ಮ ತಂದೆ, ‘ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡುಕೊಂಡು ಬನ್ನಿ’ ಎಂದಾಗ,
೨೬. ನಾವು, ‘ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ’ ಎಂದು ಹೇಳಿದೆವು.
೨೭. ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡು ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿದ ವಿಷಯ.
೨೮. ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟುಹೋದ; ಅವನು ನಿಸ್ಸಂದೇಹವಾಗಿ ಕಾಡುಮೃಗದಿಂದ ಸೀಳಿಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ.
೨೯. ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನರೆಕೂದಲಿನ ಮುದುಕ ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ’ ಎಂದರು.
೩೦. \ತಮ್ಮ ಸೇವಕರಾದ ನನ್ನ ತಂದೆಯ ಬಳಿಗೆ ನಾನು ಸೇರಿದಾಗ, ಅವರ ಪ್ರಾಣದ ಪ್ರಾಣವಾಗಿರುವ ಈ ಹುಡುಗ ನನ್ನ ಸಂಗಡ ಇಲ್ಲದೆ ಹೋದರೆ, ಹುಡುಗ ಬರಲಿಲ್ಲವೆಂದು ಅವರು ಕೂಡಲೆ ಸಾಯುವರು.
೩೧. ಆಗ ತಮ್ಮ ಸೇವಕರಾದ ನಾವು, ತಮ್ಮ ಸೇವಕ ಹಾಗು ನರೆಕೂದಲಿನ ಮುದುಕ ಆದ ನಮ್ಮ ತಂದೆ ಸಂಕಟದಿಂದಲೆ ಸಮಾಧಿ ಸೇರಲು ಕಾರಣರಾಗುತ್ತೇವೆ.
೩೨. ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿದ್ದೇನೆ. ‘ನಾನು ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬಾರದಿದ್ದರೆ, ತಂದೆಗೆ ತಪ್ಪಿದವನ ದೋಷ ಸದಾಕಾಲ ನನ್ನದಾಗಲಿ’ ಎಂದು ಮಾತುಕೊಟ್ಟೆ.
೩೩. ಆದುದರಿಂದ ತಮ್ಮಲ್ಲಿ ನಾನು ಮಾಡುವ ಪ್ರಾರ್ಥನೆ ಇದು; ಈ ಹುಡುಗನಿಗೆ ಬದಲಾಗಿ, ತಮ್ಮ ಸೇವಕನಾದ ನನ್ನನ್ನು ತಮ್ಮ ಗುಲಾಮನನ್ನಾಗಿ ಇರಿಸಿಕೊಳ್ಳಿ; ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆ ಅನುಗ್ರಹಿಸಿ.
೩೪. ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ತಾನೆ ಹೋಗಲಾದೀತು? ತಂದೆಗೆ ಉಂಟಾಗುವ ಮನೋಯಾತನೆಯನ್ನು ನನ್ನಿಂದ ನೋಡಲಾಗದು.”

ಕೀರ್ತನೆಗಳು ೧೧:೧-೭
೧. ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II
೨. “ನೇರ ಮನಸ್ಕರನು ಕೊಲ್ಲಲು ಇರುಳೊಳು I ಬಿಲ್ಲು ಬಗ್ಗಿಸಿಹರಿದೋ ಆ ದುರುಳರು I ಎದೆಗೆ ಬಾಣವನು ಹೂಡಿ ನಿಂತಿರುವರು” II “ಓಡಿರಿ, ಪಕ್ಷಿಪಾರಿವಾಳಗಳಂತೆ ಗಿರಿಶಿಖರಗಳಿಗೆ I ಅಸ್ತಿವಾರವೆ ಕಿತ್ತಿರಲು, ಗತಿಯೆನಿತು ಸತ್ಯವಂತರಿಗೆ?” II
೩. ***
೪. ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ I ಸ್ಥಾಪಿಸಿಹನು ಸಿಂಹಾಸನವನು ಪರದಲಿ I ನರಮಾನವರನು ನೋಡುತಿಹನು ನೇತ್ರಗಳಲಿ I ಪರೀಕ್ಷಿಸುತಿಹನು ಅವರನು ಸೂಕ್ಷ್ಮರೀತಿಯಲಿ II
೫. ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು I ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು II
೬. ಅಗ್ನಿಗಂಧಕಗಳನು ದುರುಳರ ಮೇಲೆ ಮಳೆಗರೆಯಲಿ I ಉರಿಗಾಳಿಯೆ ಅವರ ಪಾಲಿನ ಧೂಮಪಾನವಾಗಲಿ II
೭. ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು I ಸತ್ಪುರುಷನು ಸೇರುವನು ಆತನ ಸನ್ನಿಧಿಯನು II

ಜ್ಞಾನೋಕ್ತಿಗಳು ೪:೧೦-೧೩
೧೦. ಮಗನೇ, ನನ್ನ ಮಾತುಗಳನ್ನು ಆಲಿಸಿ ಕೇಳು; ಕೇಳಿದೆಯಾದರೆ ಹೆಚ್ಚುವುವು ನಿನ್ನ ಜೀವನದ ವರ್ಷಗಳು.
೧೧. ಜ್ಞಾನಮಾರ್ಗವನ್ನು ನಿನಗೆ ಉಪದೇಶಿಸುವೆನು. ಸತ್ಯಮಾರ್ಗದಲ್ಲಿ ನಿನ್ನನ್ನು ನಡೆಸುವೆನು.
೧೨. ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು, ನೀ ಓಡುವಾಗ ಮುಗ್ಗರಿಸಿ ಬೀಳಲಾಗದು.
೧೩. ಸದುಪದೇಶವನ್ನು ಬಿಗಿಹಿಡಿದುಕೊ; ಅದೇ ನಿನ್ನ ಜೀವ, ಅದನ್ನು ಕಾಪಾಡಿಕೊ.

ಮತ್ತಾಯನು ೧೪:೨೨-೩೬
೨೨. ಇದಾದ ಮೇಲೆ ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಹೋಗಬೇಕೆಂದು ಆಜ್ಞಾಪಿಸಿದರು.
೨೩. ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು.
೨೪. ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು.
೨೫. ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.
೨೬. ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, “ಭೂತ, ಭೂತ!” ಎಂದು ಚೀರಿದರು.
೨೭. ತಕ್ಷಣವೇ ಯೇಸು, “ಭಯಪಡಬೇಡಿ, ನಾನೇ ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ,” ಎಂದು ಅವರೊಡನೆ ಮಾತನಾಡಿದರು.
೨೮. ಆಗ ಪೇತ್ರನು, “ಸ್ವಾಮೀ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ,” ಎಂದನು. ಯೇಸು, “ಬಾ” ಎಂದು ಕರೆಯಲು
೨೯. ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು.
೩೦. ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿಹೋಗಲಾರಂಭಿಸಿದನು. ಆಗ, “ಸ್ವಾಮೀ, ಕಾಪಾಡಿ, ಕಾಪಾಡಿ,” ಎಂದು ಕೂಗಿಕೊಂಡನು.
೩೧. ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದರು.
೩೨. ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು.
೩೩. ದೋಣಿಯಲ್ಲಿದ್ದವರು, “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು.
೩೪. ಅವರೆಲ್ಲರೂ ಸರೋವರವನ್ನು ದಾಟಿ ಗೆನೆಸರೇತ್ ಊರಿನ ದಡ ಸೇರಿದರು.
೩೫. ಈ ಊರಿನವರು ಯೇಸುಸ್ವಾಮಿಯನ್ನು ಗುರುತು ಹಚ್ಚಿದ್ದೇ ತಡ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೇಳಿಕಳುಹಿಸಿದರು. ರೋಗರುಜಿನಗಳಿಂದ ನರಳುತ್ತಿದ್ದವರನ್ನು ಕರೆದುಕೊಂಡು ಬಂದರು.
೩೬. ಇವರು, “ನಿಮ್ಮ ಉಡುಪಿನ ಅಂಚನ್ನಾದರೂ ಮುಟ್ಟಲು ಅಪ್ಪಣೆಯಾದರೆ ಸಾಕು,” ಎಂದು ಯೇಸುವನ್ನು ಬೇಡಿಕೊಂಡರು. ಹಾಗೆ ಮುಟ್ಟಿದವರೆಲ್ಲಾ ಗುಣಹೊಂದಿದರು.