ಸಮುವೇಲನು ೨ ೨೧:೧-೨೨ |
೧. ದಾವೀದನ ಕಾಲದಲ್ಲಿ ಮೂರು ವರ್ಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದಾಗ, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೂ ಅವನ ಮನೆಯವರ ಮೇಲೂ ರಕ್ತಾಪರಾಧ ಇರುತ್ತದೆ,” ಎಂಬ ಉತ್ತರ ದೊರಕಿತು. |
೨. (ಗಿಬ್ಯೋನ್ಯರು ಇಸ್ರಯೇಲ್ ಕುಲಗಳಿಗೆ ಸೇರಿದವರಲ್ಲ; ಅವರು ಅಳಿಯದೆ ಉಳಿದ ಅಮೋರಿಯರಷ್ಟೇ). ಇಸ್ರಯೇಲರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿ ಇದ್ದರು. ಆದರೂ ಸೌಲನು ಇಸ್ರಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನೂ ನಿರ್ನಾಮಗೊಳಿಸಬೇಕೆಂದಿದ್ದನು. |
೩. ಆಗ ಅರಸ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮ್ಮ ಪರವಾಗಿ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಕೊಟ್ಟರೆ ನೀವು ಸರ್ವೇಶ್ವರನ ಪ್ರಜೆಯನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು. |
೪. ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯ ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಯೇಲರನ್ನು ಕೊಲ್ಲುವ ಅಧಿಕಾರ ನಮಗಿಲ್ಲ,” ಎಂದು ಉತ್ತರಕೊಟ್ಟರು. ಅರಸನು ಅವರಿಗೆ, “ಏನು ಮಾಡಬೇಕು ಹೇಳಿ; ಮಾಡುತ್ತೇನೆ,” ಎಂದನು. |
೫. ಅವರು, “ನಮ್ಮನ್ನು ಇಸ್ರಯೇಲ್ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸಿ. |
೬. ಸರ್ವೇಶ್ವರನಿಂದ ಆಯ್ಕೆಯಾದ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕುತ್ತೇವೆ,” ಎಂದರು. ಅರಸನು, “ಆಗಲಿ, ಒಪ್ಪಿಸುತ್ತೇನೆ,” ಎಂದನು. |
೭. ದಾವೀದನು ತಾನು ಸೌಲನ ಮಗ ಯೋನಾತಾನನಿಗೆ ಸರ್ವೇಶ್ವರನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನೆದು, ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು. |
೮. ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ, ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರೀಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ತೆಗೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದನು. |
೯. ಅವರು ಇವರನ್ನು ಕೊಂದು ಗುಡ್ಡದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕಿದರು. ಈ ಏಳುಮಂದಿ ಏಕಕಾಲದಲ್ಲಿ ಹತರಾದರು. ಇವರನ್ನು ಕೊಂದಾಗ ಜವೆಗೋದಿ ಸುಗ್ಗಿಯು ಆರಂಭ ಆಗಿತ್ತು. |
೧೦. ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು ಅದನ್ನು ಬಂಡೆಯ ಮೇಲೆ ಹಾಸಿ ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಆ ಗೋಣಿತಟ್ಟಿನ ಮೇಲೆ ಕುಳಿತುಕೊಂಡು ಹಗಲಿನಲ್ಲಿ ಆಕಾಶದ ಪಕ್ಷಿಗಳಾಗಲಿ ಇರುಳಿನಲ್ಲಿ ಕಾಡುಮೃಗಗಳಾಗಲಿ ಆ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು. |
೧೧. ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವನ್ನು ದಾವೀದನಿಗೆ ತಿಳಿಸಲಾಯಿತು. |
೧೨. ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕಾಗಿ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. |
೧೩. ದಾವೀದನು ಯಾಬೇಷಿನಲ್ಲಿದ್ದ ಸೌಲ ಹಾಗು ಯೋನಾತಾನರ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಈ ಮನುಷ್ಯರ ಎಲುಬುಗಳನ್ನೂ ತೆಗೆದುಕೊಂಡು |
೧೪. ಅವುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದನಂತರ ನಾಡಿನ ಮೇಲೆ ದೇವರಿಗಿದ್ದ ಕೋಪ ಶಮನವಾಯಿತು. |
೧೫. ಒಂದು ಕಾಲದಲ್ಲಿ ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಮತ್ತೆ ಯುದ್ಧ ನಡೆಯಿತು. ದಾವೀದನು ತನ್ನ ಸೈನಿಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು. |
೧೬. ಅವನನ್ನು ರೆಫಾಯರಲ್ಲೊಬ್ಬನಾದ ಇಷ್ಬೀಬೆನೋಬ್ ಎಂಬವನು ಕೊಲ್ಲುವುದಕ್ಕಿದ್ದನು. ಅವನ ಭರ್ಜಿಯ ತಾಮ್ರ ಮುನ್ನೂರು ಬೆಳ್ಳಿ ನಾಣ್ಯದ ತೂಕದ್ದು; ಅವನು ಸೊಂಟಕ್ಕೆ ಒಂದು ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು. |
೧೭. ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಯೇಲರ ಆಶಾಜ್ಯೋತಿ ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು,” ಎಂದು ಖಂಡಿತವಾಗಿ ಹೇಳಿದರು. |
೧೮. ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕ್ಕೆ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು. |
೧೯. ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೆತ್ಲೆಹೇಮಿನವನಾದ ಯಾರೇಯೋ ರೆಗೀಮ್ ಎಂಬವನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಆ ಗೊಲ್ಯಾತನ ಭರ್ಜಿಯ ಹಿಡಿಕೆ ನೇಯಿಗಾರರ ಕುಂಟೆಯಷ್ಟು ಗಾತ್ರ ಇತ್ತು. |
೨೦. ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ - ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನು. |
೨೧. ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮೆಯಾನನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು. |
೨೨. ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು. |
ಸಮುವೇಲನು ೨ ೨೨:೧-೫೧ |
೧. ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು: |
೨. ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲು ಕೋಟೆ, ಆತನೇ ವಿಮೋಚಕ ನನಗೆ |
೩. ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ. |
೪. ಸರ್ವೇಶ್ವರನು ಸ್ತುತ್ಯಾರ್ಹನು ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು |
೫. ಕುತ್ತಿಗೆಗೆ ಬಂದಿದ್ದವು ಸಾವಿನ ಅಲೆಗಳು ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು. |
೬. ಸುತ್ತಿಕೊಂಡಿದ್ದವು ಪಾತಾಳಪಾಶಗಳು ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು. |
೭. ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ. |
೮. ಆಗ ಕಂಪಿಸಿತು ಭೂಮಿ ಗಡಗಡನೆ ಕದಲಿದವು ಆಗಸದಸ್ತಿವಾರಗಳು ಮಿಲಮಿಲನೆ ಏಕೆನೆ ಸಿಟ್ಟೇರಿತ್ತು ಆತನಿಗೆ. |
೯. ಹೊರಬಂದಿತು ಹೊಗೆ ಆತನ ಮೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ. |
೧೦. ಆಕಾಶವನೆ ಬಾಗಿಸಿ ಆತನಿಳಿದು ಬರಲು ಸೇರಿತು ಆತನ ಕಾಲಡಿ ಕಾರ್ಮುಗಿಲು. |
೧೧. ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ ಕಾಣಿಸಿಕೊಂಡನು ವಾಯುರೆಕ್ಕೆಗಳ ವೇಗದಲಿ. |
೧೨. ಕತ್ತಲನು, ಜಲಮಯ ಮೇಘಗಳನು ಸುತ್ತಲು ಕವಿಸಿಕೊಂಡನು ಛತ್ರಾಂಬರದೊಳು. |
೧೩. ಉರಿಗೆಂಡಗಳು ಹೊರಟುಬರುತ್ತಿದ್ದವು ಅಷ್ಟು ಪ್ರಜ್ವಲವಾಗಿತ್ತು ಆತನ ಸಾನ್ನಿಧ್ಯವು. |
೧೪. ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ ಮೊಳಗಿತು ವಾಣಿ ಆ ಪರಮೋನ್ನತನಿಂದ. |
೧೫. ಚದರಿಸಿದನು ಶತ್ರುಗಳನು ಬಾಣಗಳನೆಸೆದು ತಳಮಳಗೊಳಿಸಿದನವರನು ಸಿಡಿಲನು ಹೊಡೆದು. |
೧೬. ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ. |
೧೭. ಮೇಲಣಾಲೋಕದಿಂದ ಹಿಡಿದುಕೊಂಡ ಎನ್ನನು ಕೈಚಾಚಿ ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ. |
೧೮. ನನ್ನ ಬಿಡಿಸಿ ರಕ್ಷಿಸಿದನು ಶತ್ರುಗಳಿಂದ ನನಗಿಂತ ಪುಷ್ಟ, ಬಲಿಷ್ಠ ಹಗೆಗಳಿಂದ. |
೧೯. ನನ್ನ ಮೇಲೆರಗಿದ್ದರಾ ಹಗೆಗಳು ದುರಂತ ಕಾಲದಲಿ ನನಗುದ್ಧಾರಕನಾದ ಸರ್ವೇಶ್ವರನು, ಆ ವಿಪತ್ಕಾಲದಲಿ. |
೨೦. ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ ಅಕ್ಕರೆಯಿಂದ ಮೆಚ್ಚಿ ನನಗಾದನು ರಕ್ಷೆ. |
೨೧. ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕ ಹಾಗೆ. |
೨೨. ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ. |
೨೩. ಆತನ ವಿಧಿನಿಯಮಗಳನ್ನು ಕೈಬಿಡದೆ ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣ ಮುಂದೆ. |
೨೪. ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ. |
೨೫. ನಾ ನೀತಿವಂತ, ನಿರಪರಾಧಿಯೆಂದರಿತು ನನಗಿತ್ತನಾ ಸರ್ವೇಶ್ವರ ತಕ್ಕ ಪ್ರತಿಫಲವನು. |
೨೬. ಕರುಣೆಯುಳ್ಳವನಿಗಾತ ಕರುಣಾಮಯಿ ದೋಷರಹಿತನಿಗಾತ ನಿರ್ದೋಷಿ. |
೨೭. ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು. |
೨೮. ದೀನದಲಿತರನು ಉದ್ಧರಿಸುವನು ಗರ್ವಿಗಳನು ಗುರುತಿಸಿ ತಗ್ಗಿಸುವನು. |
೨೯. ಹೇ ಸರ್ವೇಶ್ವರಾ, ನೀನೆನಗೆ ಜ್ಯೋತಿ ಕತ್ತಲನು ನೀಗಿಸಿ, ಬೆಳಕನು ನೀಡುತಿ. |
೩೦. ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ. |
೩೧. ದೇವರ ಮಾರ್ಗ ದೋಷರಹಿತ ಸರ್ವೇಶ್ವರನ ವಚನ ಪರಮಪುನೀತ ಆಶ್ರಿತರೆಲ್ಲರಿಗಾತ ರಕ್ಷಣಾಕವಚ. |
೩೨. ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು? |
೩೩. ದೇವನೇ ನನಗೆ ಭದ್ರವಾದ ದುರ್ಗ ಆತನಿಂದಲೇ ಸರಾಗ ನನ್ನ ಮಾರ್ಗ. |
೩೪. ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ. |
೩೫. ಯುದ್ಧವಿದ್ಯೆಯ ಕಲಿತೆ ಆತನಿಂದಲೆ ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ. |
೩೬. ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ. |
೩೭. ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ. |
೩೮. ಸದೆಬಡಿವೆನು ಶತ್ರುಗಳನು ಬೆನ್ನಟ್ಟಿ ಅವರನು ನಿರ್ಮೂಲ ಮಾಡದೆ ಬರೆ ಹಿಂದಿರುಗಿ. |
೩೯. ಅವರನು ಹೊಡೆದೆ ಮತ್ತೆ ಏಳದಂತೆ ಅವರನು ಮಾಡಿದೆ ಕಾಲಿಗೆ ಬೀಳುವಂತೆ. |
೪೦. ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು ತಗ್ಗಿಸಿದೆ ಎದುರಾಳಿಗಳ ನನಗಧೀನ ಮಾಡಿಬಿಟ್ಟು. |
೪೧. ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು ಆ ಹಗೆಗಳನು ನಿರ್ಮೂಲಮಾಡಿದೆ ನಾ ಗುರಿಯಿಟ್ಟು. |
೪೨. ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ ಸರ್ವೇಶ್ವರನಿಗೆ ಮೊರೆಯಿಟ್ಟರೂ ಅವರಿಗೆ ದೊರಕಲಿಲ್ಲ ಉತ್ತರ. |
೪೩. ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ. |
೪೪. ನನ್ನ ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ ನಾನರಿಯದ ಜನರನ್ನೂ ನನಗಧೀನರನ್ನಾಗಿಸಿದೆ. |
೪೫. ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ. |
೪೬. ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು. |
೪೭. ಸರ್ವೇಶ್ವರನು ಚೈತನ್ಯಸ್ವರೂಪನು ನನ್ನುದ್ಧಾರಕನವಗೆ ಸ್ತುತಿಸ್ತೋತ್ರವು ನನ್ನಾಶ್ರಯಸಿರಿ ದೇವಗೆ ಜಯಕಾರವು. |
೪೮. ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ. |
೪೯. ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ ಎದುರಾಳಿಗೆ ತಪ್ಪಿಸಿ ನನ್ನನುನ್ನತಿಗೇರಿಸಿದೆ ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ. |
೫೦. ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ. |
೫೧. ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ. |
ಕೀರ್ತನೆಗಳು ೬೮:೧-೬ |
೧. ಎಚ್ಚರಗೊಳ್ಳಲಿ, ದೇವನೆಚ್ಚರಗೊಳ್ಳಲಿ I ಆತನ ಶತ್ರುಗಳೆಲ್ಲರು ಚದರಿಹೋಗಲಿ I ಆತನ ವಿರೋಧಿಗಳು ಪಲಾಯನ ಗೈಯಲಿ II |
೨. ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ I ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ II |
೩. ಸಜ್ಜನರಾದರೊ ಸಂತೋಷಿಸಲಿ I ದೇವರ ಮುಂದೆ ಆನಂದಿಸಲಿ I ಅತುಳ ಹರ್ಷಾನಂದಗೊಳ್ಳಲಿ II |
೪. ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು I ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು I “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು II |
೫. ದಿವ್ಯಧಾಮದಲ್ಲಿಹ ಆ ದೇವ I ತಬ್ಬಲಿಗೆ ತಂದೆ, ವಿಧವೆಗಾಶ್ರಯ II |
೬. ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ I ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ I ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ II |
ಜ್ಞಾನೋಕ್ತಿಗಳು ೧೭:೨-೪ |
೨. ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು. |
೩. ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ. |
೪. ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ. |
ಯೊವಾನ್ನನು ೮:೨೮-೫೯ |
೨೮. ಎಂದೇ ಯೇಸು ಮತ್ತೆ ಇಂತೆಂದರು: “ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನು’ ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು. |
೨೯. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ.” |
೩೦. ಯೇಸು ಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು. |
೩೧. ಯೇಸು ಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. |
೩೨. ನೀವು ಸತ್ಯವನ್ನು ಅರಿತುಕೊಳ್ಳುವಿರಿ, ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು. |
೩೩. ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. |
೩೪. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. |
೩೫. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. |
೩೬. ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. |
೩೭. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. |
೩೮. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು. |
೩೯. ಆಗ ಆ ಯೆಹೂದ್ಯರು, ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ. |
೪೦. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ. |
೪೧. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು. |
೪೨. ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ. |
೪೩. ನಾನು ಹೇಳುವುದು ನಿಮಗೆ ಅರ್ಥವಾಗುವುದಿಲ್ಲ, ಏಕೆ? ನನ್ನ ಸಂದೇಶಕ್ಕೆ ಕಿವಿಗೊಡಲು ನಿಮ್ಮಿಂದಾಗದಿರುವುದೇ ಇದಕ್ಕೆ ಕಾರಣ. |
೪೪. ಸೈತಾನನೇ ನಿಮಗೆ ತಂದೆ; ಆ ನಿಮ್ಮ ತಂದೆ ಮಾಡಬಯಸುವುದನ್ನು ನೀವು ಮಾಡಬಯಸುತ್ತೀರಿ; ಮೊತ್ತ ಮೊದಲಿನಿಂದಲೂ ಅವನು ಕೊಲೆಪಾತಕ. ಸತ್ಯವೆಂಬುದೇ ಅವನಲ್ಲಿ ಇಲ್ಲದ ಕಾರಣ ಅವನು ಸತ್ಯಪರನಲ್ಲ. ಸುಳ್ಳಾಡುವಾಗ ಅವನು ತನಗೆ ಸಹಜವಾದುದನ್ನೇ ಆಡುತ್ತಾನೆ. ಅವನು ಸುಳ್ಳುಗಾರ. ಸುಳ್ಳಿನ ಮೂಲಪುರುಷನೇ ಅವನು. |
೪೫. ನಾನು ನುಡಿಯುವುದಾದರೋ ಸತ್ಯವನ್ನೇ. ಆದುದರಿಂದಲೇ ನಿಮಗೆ ನನ್ನಲ್ಲಿ ನಂಬಿಕೆ ಇಲ್ಲ. |
೪೬. ನನ್ನಲ್ಲಿ ತಪ್ಪಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಆಡುವುದಾದರೆ ನನ್ನನ್ನು ನೀವು ನಂಬುವುದಿಲ್ಲವೇಕೆ? |
೪೭. ದೇವರ ಮಕ್ಕಳು ದೇವರ ಮಾತಿಗೆ ಕಿವಿಗೊಡುತ್ತಾರೆ. ನೀವೋ ದೇವರ ಮಕ್ಕಳಲ್ಲ, ಆದುದರಿಂದಲೇ ಕಿವಿಗೊಡುವುದಿಲ್ಲ,” ಎಂದು ನುಡಿದರು. |
೪೮. ಆಗ ಯೆಹೂದ್ಯರಲ್ಲಿ ಕೆಲವರು ಯೇಸು ಸ್ವಾಮಿಗೆ, “ನೀನು ಸಮಾರಿಯದವನು. ದೆವ್ವಹಿಡಿದವನು, ಎಂದು ನಾವು ಹೇಳಿದ್ದು ಸರಿಯಾಗಿದೆ ಅಲ್ಲವೆ?” ಎಂದರು. |
೪೯. ಅದಕ್ಕೆ ಯೇಸು, “ನಾನು ದೆವ್ವಹಿಡಿದವನಲ್ಲ, ನನ್ನ ಪಿತನನ್ನು ನಾನು ಗೌರವಿಸುತ್ತೇನೆ. ನೀವಾದರೋ ನನ್ನನ್ನು ಅವಮಾನಪಡಿಸುತ್ತೀರಿ. |
೫೦. ನನ್ನ ಘನತೆಗೌರವವನ್ನು ನಾನು ಅಪೇಕ್ಷಿಸುವುದಿಲ್ಲ. ಅದನ್ನು ಅಪೇಕ್ಷಿಸುವವರು ಬೇರೊಬ್ಬರಿದ್ದಾರೆ. ನನ್ನ ಪರವಾಗಿ ತೀರ್ಮಾನ ಮಾಡುವುದೂ ಅವರೇ. |
೫೧. ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ,” ಎಂದರು. |
೫೨. “ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ; |
೫೩. ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಠನೋ? ಆತನೂ ಸಾವಿಗೀಡಾದನು. ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?” ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. |
೫೪. ಯೇಸು ಪ್ರತ್ಯುತ್ತರವಾಗಿ, “ನನ್ನ ಘನತೆಗೌರವವನ್ನು ನಾನೇ ಸಾರ ಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ‘ಅವರು ನಮ್ಮ ದೇವರು’ ಎಂದು ನೀವು ಹೇಳಿಕೊಳ್ಳುತ್ತೀರಿ. |
೫೫. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. |
೫೬. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು,” ಎಂದು ಉತ್ತರಕೊಟ್ಟರು. |
೫೭. ಯೆಹೂದ್ಯರು, “ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಎಂದರು. |
೫೮. ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರುನುಡಿದರು. |
೫೯. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟುಹೋದರು. |