A A A A A

ಅರಸುಗಳು ೧ ೩:೧-೨೮
೧. ಸೊಲೊಮೋನನು ಈಜಿಪ್ಟಿನ ಅರಸ ಫರೋಹನ ಮಗಳನ್ನು ಮದುವೆಮಾಡಿಕೊಂಡು ಅವನ ಅಳಿಯನಾದ. ತನ್ನ ಅರಮನೆಯನ್ನು, ಸರ್ವೇಶ್ವರನ ಮಹಾದೇವಾಲಯವನ್ನು ಹಾಗು ಜೆರುಸಲೇಮಿನ ಸುತ್ತಣ ಗೋಡೆಯನ್ನು ಕಟ್ಟಿಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲೇ ಇರಿಸಿಕೊಂಡನು.
೨. ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು.
೩. ಸೊಲೊಮೋನನು ಸರ್ವೇಶ್ವರನನ್ನು ಪ್ರೀತಿಸಿ, ತನ್ನ ತಂದೆ ದಾವೀದನ ವಿಧಿಗಳನ್ನು ಕೈಗೊಳ್ಳುತ್ತಿದ್ದರೂ ಆ ಪೂಜಾಸ್ಥಳಗಳಲ್ಲೇ ಬಲಿಯರ್ಪಿಸುತ್ತಿದ್ದನು; ಅಲ್ಲಿಯೇ ಧೂಪಾರತಿ ಎತ್ತುತ್ತಿದ್ದನು.
೪. ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರಬಲಿಗಳನ್ನು ಸಮರ್ಪಿಸಿದಾಗ,
೫. ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
೬. ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣಗೊಳಿಸಿದ್ದೀರಿ.
೭. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
೮. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
೯. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
೧೦. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
೧೧. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
೧೨. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
೧೩. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ.
೧೪. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು.
೧೫. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.
೧೬. ಒಂದು ದಿನ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
೧೭. ಅವರಲ್ಲಿ ಒಬ್ಬಳು ಅರಸನಿಗೆ, “ಒಡೆಯಾ, ಕೇಳಿ; ನಾನೂ ಇವಳೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಒಂದು ಮಗವನ್ನು ಹೆತ್ತೆ.
೧೮. ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು; ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ.
೧೯. ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
೨೦. ಮಧ್ಯರಾತ್ರಿಯಲ್ಲಿ ಇವಳೆದ್ದು, ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ, ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಮಗ್ಗುಲಲ್ಲಿ ಇಟ್ಟುಕೊಂಡಳು. ಸತ್ತುಹೋದ ತನ್ನ ಮಗುವನ್ನು ನನ್ನ ಮಗ್ಗುಲಲ್ಲಿಟ್ಟಳು.
೨೧. ನಾನು ಬೆಳಿಗ್ಗೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ,” ಎಂದು ಹೇಳಿದಳು.
೨೨. ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗ; ಸತ್ತಿರುವವನು ನಿನ್ನ ಮಗ,” ಎಂದು ನುಡಿದಳು. ಮೊದಲನೆಯವಳು ಮತ್ತೆ, “ಇಲ್ಲ ಸತ್ತಿರುವವನು ನಿನ್ನ ಮಗ ಬದುಕಿರುವವನು ನನ್ನ ಮಗ,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
೨೩. ಆಗ ಅರಸನು, “ಜೀವದಿಂದಿರುವ ಕೂಸು ನನ್ನದು, ಸತ್ತಿರುವುದು ನಿನ್ನದು,’ ಎಂದು ಒಬ್ಬಳು ಹೇಳುತ್ತಾಳೆ; ಇನ್ನೊಬ್ಬಳು, ‘ಇಲ್ಲ, ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು,’ ಎನ್ನುತ್ತಾಳೆ.
೨೪. ನನಗೊಂದು ಕತ್ತಿಯನ್ನು ತಂದುಕೊಡಿ,” ಎಂದು ಸೇವಕರಿಗೆ ಹೇಳಿದನು.
೨೫. ಅವರು ತಂದರು. ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು, ಎರಡು ಭಾಗಮಾಡಿ, ಅರ್ಧವನ್ನು ಅವಳಿಗೂ ಅರ್ಧವನ್ನು ಇವಳಿಗೂ ಕೊಡಿ,” ಎಂದು ಅಪ್ಪಣೆಮಾಡಿದನು.
೨೬. ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳುಕರಗಿತು; “ನನ್ನೊಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟುಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು.
೨೭. ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು.
೨೮. ಇಸ್ರಯೇಲರೆಲ್ಲರೂ ಅರಸನ ಈ ತೀರ್ಪನ್ನು ಕೇಳಿದರು. ನ್ಯಾಯನಿರ್ಣಯಿಸುವುದಕ್ಕೆ ಈತನಲ್ಲಿ ದೇವದತ್ತ ಜ್ಞಾನವಿದೆ ಎಂದು ತಿಳಿದು ಅವನ ಬಗ್ಗೆ ಅಪಾರ ಗೌರವ ಉಳ್ಳವರಾದರು.

ಅರಸುಗಳು ೧ ೪:೧-೩೪
೧. ಸೊಲೊಮೋನರಾಜನು ಸರ್ವ ಇಸ್ರಯೇಲರ ಮೇಲೆ ಅರಸನಾಗಿದ್ದನು.
೨. ಅವನ ಮುಖ್ಯ ಪದಾಧಿಕಾರಿಗಳು ಇವರು: ಚಾದೋಕನ ಮಗ ಅಜರ್ಯನು - ಯಾಜಕನು;
೩. ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬುವರು ಕಾರ್ಯದರ್ಶಿಗಳು; ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿ;
೪. ಯೆಹೋಯಾದಾವನ ಮಗ ಬೆನಾಯನು - ಸೇನಾಪತಿ; ಎಬ್ಯಾತಾರ ಹಾಗು ಚಾದೋಕ - ಯಾಜಕರು;
೫. ನಾತಾನನ ಮಗ ಅಜರ್ಯನು - ಪ್ರದೇಶಾಧಿಪತಿಗಳ ಮುಖ್ಯಸ್ಥ; ನಾತಾನನ ಮಗ ಜಾಬೂದನು ಯಾಜಕ ಹಾಗು ಅರಸನ ಮಿತ್ರ;
೬. ಅಹೀಷಾರನು - ರಾಜ್ಯಗೃಹಾಧಿಪತಿ; ಅಬ್ದನ ಮಗನಾದ ಅದೋನೀರಾಮನು - ಬಿಟ್ಟೀ ಕೆಲಸಮಾಡಿಸುವವರ ಮುಖ್ಯಸ್ಥ.
೭. ಸರ್ವ ಇಸ್ರಯೇಲರ ಮೇಲೆ ಸೊಲೊಮೋನನು ಹನ್ನೆರಡು ಜನ ಜಿಲ್ಲಾಧಿಕಾರಿಗಳನ್ನು ನೇಮಿಸಿದ್ದನು. ಅವರು ತಮ್ಮ ಜಿಲ್ಲೆಗಳಿಂದ ಅರಸನಿಗೂ ಅರಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದರು. ಪ್ರತಿಯೊಬ್ಬನೂ ವರ್ಷದಲ್ಲಿ ಒಂದೊಂದು ತಿಂಗಳು ಪೂರೈಸಬೇಕಾಗಿತ್ತು.
೮. ಅವರ ಹೆಸರುಗಳು ಹಾಗು ಜಿಲ್ಲೆಗಳ ಹೆಸರುಗಳು ಇವು:
೯. ಬಿನ್ಹೂರ - ಎಫ್ರಯಿಮಿನ ಮಲೆನಾಡಿನ ಪ್ರದೇಶ;
೧೦. ಬಿನ್ ದೆಕೆರ್ - ಮಾಕಚ್, ಶಾಲ್ಬೀಮ್, ಬೀತ್ ಷೆಮೆಷ್, ಏಲೋನ್, ಬೇತ್ ಹಾನಾನ್;
೧೧. ಬಿನ್ ಹೆಸೆದ್ - ಅರುಬ್ಬೋತ್ (ಸೋಕೋಹೇಫೆರ್ ಎಂಬ ಪ್ರದೇಶಗಳು ಅವನ ವಶದಲ್ಲಿದ್ದವು).
೧೨. ಬಿನ್ ಅಬೀನಾದಾಬ್ - ನಾಪೋತ್ ದೋರ್ (ಇವನು ಸೊಲೊಮೋನನ ಮಗಳು ಟಾಫತಳನ್ನು ವಿವಾಹವಾಗಿದ್ದನು);
೧೩. ಅಹೀಲೂದನ ಮಗ ಬಾಣಾ - ತಾಣಕ್, ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿರುವ ಜೆಸ್ರೀಲಿನ ಅಡಿಯಲ್ಲಿದ್ದ ಬೇತ್‍ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇದ್ದ, ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿದ್ದ ಬೇತ್‍ಷೆಯಾನಿನ ಎಲ್ಲಾ ಪ್ರದೇಶ;
೧೪. ಬಿನ್ ಗೆಬೆರ್ - ರಾಮೋತ್ ಗಿಲ್ಯಾದ್ (ಗಿಲ್ಯಾದಿನಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಿದ್ದ ಅರ್ಗೋಬ ಪ್ರದೇಶ); ಇದ್ದೋವಿನ ಮಗ ಅಹೀನಾದಾಬನು - ಮಹನಯಿಮ್;
೧೫. ಅಹೀಮಾಚ - ನಫ್ತಾಲಿ ಪ್ರದೇಶ (ಇವನು ಸೊಲೊಮೋನನ ಮಗಳು ಬಾಸೆಮತಳನ್ನು ವಿವಾಹವಾಗಿದ್ದನು);
೧೬. ಹೂಷೈಯ ಮಗ ಬಾಣ - ಅಶೇರ ಹಾಗು ಅಲೋತ್;
೧೭. ಫಾರೂಹನ ಮಗ ಯೆಹೋಷಾಫಾಟನು - ಇಸ್ಸಾಕಾರ ಪ್ರದೇಶ;
೧೮. ಏಲನ ಮಗ ಶಿಮ್ಮಿ - ಬೆನ್ಯಾಮೀನರ ಪ್ರದೇಶ;
೧೯. ಉರಿಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು.
೨೦. ಇಸ್ರಯೇಲ್ ಹಾಗು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾದರು; ಅನ್ನ ಪಾನಗಳಲ್ಲಿ ಸಂತೃಪ್ತರಾಗಿ ಸಂತೋಷದಿಂದ ಬಾಳುತ್ತಿದ್ದರು.
೨೧. ಯೂಫ್ರೆಟಿಸ್ ನದಿ ಮೊದಲ್ಗೊಂಡು ಫಿಲಿಷ್ಟಿಯರ ಮತ್ತು ಈಜಿಪ್ಟಿಯರ ದೇಶಗಳವರೆಗೂ ಇರುವ ಎಲ್ಲ ರಾಜ್ಯಗಳ ಪ್ರಜೆಗಳನ್ನು ಸೊಲೊಮೋನನು ಆಳುತ್ತಿದ್ದನು. ಆ ದೇಶದವರು, ತಮ್ಮ ಜೀವಮಾನದಲ್ಲೆಲ್ಲಾ ಅಧೀನರಾಗಿದ್ದು, ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
೨೨. ಸೊಲೊಮೋನನ ಅರಮನೆಗೆ ದಿನಂಪ್ರತಿ ಬೇಕಾಗಿದ್ದ ಆಹಾರಪದಾರ್ಥಗಳ ಪಟ್ಟಿ: ಐದು ಸಾವಿರ ಲೀಟರ್ ಗೋದಿಯ ಹಿಟ್ಟು, ಹತ್ತು ಸಾವಿರ ಲೀಟರ್ ಜವೆಗೋದಿಯ ಹಿಟ್ಟು;
೨೩. ಹತ್ತು ಕಟ್ಟಿ ಮೇಯಿಸಿದ ಎತ್ತುಗಳು, ಇಪ್ಪತ್ತು ಬಿಟ್ಟು ಮೇಯಿಸಿದ ಎತ್ತುಗಳು, ನೂರು ಕುರಿಗಳು; ಇವುಗಳ ಜೊತೆಗೆ, ದುಪ್ಪಿ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು.
೨೪. ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲ್ಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ರಾಜರಿಗೂ ಅಧಿಪತಿಯಾಗಿದ್ದನು. ಸುತ್ತಮುತ್ತಲಿನ ರಾಜರೊಡನೆ ಶಾಂತಿಸಮಾಧಾನದಿಂದಿದ್ದನು.
೨೫. ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಸಮಸ್ತ ಇಸ್ರಯೇಲರು ಹಾಗು ಯೆಹೂದ್ಯರು ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದಗಿಡ, ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.
೨೬. ಸೊಲೊಮೋನನ ಲಾಯಗಳಲ್ಲಿ ನಾಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು; ಅವನಿಗೆ ಹನ್ನೆರಡು ಸಾವಿರ ಮಂದಿ ರಾಹುತರಿದ್ದರು.
೨೭. ಮೇಲೆ ಹೇಳಿದ ಜಿಲ್ಲಾಧಿಕಾರಿಗಳು ತಮತಮಗೆ ನೇಮಕವಾದ ತಿಂಗಳಲ್ಲಿ ಅರಸ ಸೊಲೊಮೋನನಿಗೂ ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಎಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸುತ್ತಿದ್ದರು.
೨೮. ಇದಲ್ಲದೆ, ಅವರು ರಥಾಶ್ವಗಳಿಗಾಗಿ ಹಾಗು ಸವಾರಿಕುದುರೆಗಳಿಗಾಗಿ ನೇಮಕವಾದಷ್ಟು ಜವೆಗೋದಿಯನ್ನೂ ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೆ ತಂದು ಒಪ್ಪಿಸುತ್ತಿದ್ದರು.
೨೯. ದೇವರು ಸೊಲೊಮೋನನಿಗೆ ಸಮುದ್ರತೀರದ ಮರಳಿನಷ್ಟು ಅಪರಿಮಿತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದ್ದರು.
೩೦. ಅವನ ಜ್ಞಾನ ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲು, ಈಜಿಪ್ಟರ ಸರ್ವಜ್ಞಾನಕ್ಕಿಂತಲು ಮಿಗಿಲಾಗಿತ್ತು.
೩೧. ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಮುತ್ತಲಿನ ಜನಾಂಗಗಳಲ್ಲೆಲ್ಲಾ ಅವನ ಹೆಸರು ಪ್ರಸಿದ್ಧವಾಯಿತು.
೩೨. ಅವನು ನುಡಿದ ಜ್ಞಾನೋಕ್ತಿಗಳು ಮೂರು ಸಾವಿರ, ರಚಿಸಿದ ಗೀತೆಗಳು ಸಾವಿರದ ಐದು.
೩೩. ಅವನು, ಲೆಬನೋನಿನ ದೇವದಾರುವೃಕ್ಷ ಮೊದಲ್ಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನು ಕುರಿತು, ಎಲ್ಲಾ ಪಶುಪಕ್ಷಿ, ಜಲಜಂತು, ಕ್ರಿಮಿಕೀಟಗಳನ್ನು ಕುರಿತು ಪ್ರಸ್ತಾಪಿಸಬಲ್ಲವನಾಗಿದ್ದನು.
೩೪. ಸೊಲೊಮೋನನ ಜ್ಞಾನವಿಶೇಷವನ್ನು ಕುರಿತು ಕೇಳಿದ ಸರ್ವಜನಾಂಗಗಳ ಭೂಪಾಲರಲ್ಲಿ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಬರುತ್ತಿದ್ದರು.

ಕೀರ್ತನೆಗಳು ೬೮:೧೫-೨೦
೧೫. ಬಾಷಾನಿನ ಪರ್ವತವೇ, ನೀ ಮಹೋನ್ನತ I ಹಲವು ಶಿಖರಗಳಿಗಿಂತ ನೀ ಅಲಂಕೃತ II
೧೬. ಆದರೂ ದೇವನಾರಿಸಿದ ಗಿರಿಯನು I ಆತ ಬಯಸಿದ ಆ ಚಿರ ನಿವಾಸವನು I ನೀ ಓರೆಗಣ್ಣಿಂದ ಕಾಣುವೆಯೇನು? I ಎಲೈ ಶಿಖರೋನ್ನತ ಪರ್ವತವೇ, ಪೇಳು II
೧೭. ತನ್ನ ಸಹಸ್ರಾರು, ಲಕ್ಷಾಂತರ ರಥಗಳ ಸಮೇತ I ಸೀನಾಯಿಂದ ದೇಗುಲಕೆ ಪ್ರಭುವಿನ ಸಮಾಗಮನ II
೧೮. ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ I ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ I ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ I ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ II
೧೯. ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ I ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ II
೨೦. ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು II

ಜ್ಞಾನೋಕ್ತಿಗಳು ೧೭:೧೦-೧೨
೧೦. ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.
೧೧. ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ.
೧೨. ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು.

ಯೊವಾನ್ನನು ೧೦:೧-೨೩
೧. “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿಬರುವವನು ಕಳ್ಳ ಹಾಗೂ ಕೊಳ್ಳೆಗಾರ.
೨. ಬಾಗಿಲ ಮೂಲಕ ಬರುವವನು ಕುರಿಗಾಹಿ.
೩. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ.
೪. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು.
೫. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.
೬. ಯೇಸು ಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ.
೭. ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು.
೮. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
೯. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.
೧೦. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ. ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.
೧೧. “ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ.
೧೨. ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ.
೧೩. ಅವನು ಕೇವಲ ಕೂಲಿಯಾಳು; ಕುರಿಗಳ‍ ಚಿಂತೆ ಅವನಿಗಿಲ್ಲ.
೧೪. ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ. ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ.
೧೫. ***
೧೬. ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು.
೧೭. “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ.
೧೮. ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು.
೧೯. ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲಿ ಮತ್ತೆ ವಾದವೆದ್ದಿತು.
೨೦. ಅವರಲ್ಲಿ ಹಲವರು, “ಅವನಿಗೆ ದೆವ್ವಹಿಡಿದಿದೆ: ಅವನೊಬ್ಬ ಹುಚ್ಚ, ಅವನಿಗೇಕೆ ಕಿವಿಗೊಡುತ್ತೀರಿ?” ಎಂದರು.
೨೧. ಉಳಿದವರಾದರೋ, “ಇವು ದೆವ್ವಹಿಡಿದವನ ಮಾತುಗಳೆಂದಿಗೂ ಅಲ್ಲ. ದೆವ್ವವು ಕುರುಡನಿಗೆ ಕಣ್ಣು ಕೊಡುವುದುಂಟೆ?” ಎಂದರು.
೨೨. ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು.
೨೩. ಯೇಸು ಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು.