A A A A A

ಕ್ರಾನಿಕಲ್ಸ್ ೧ ೧೫:೧-೨೯
೧. ದಾವೀದ ನಗರದಲ್ಲಿ ದಾವೀದನು ತನ್ನ ವೈಯಕ್ತಿಕ ಉಪಯೋಗಕ್ಕಾಗಿ ಮನೆಗಳನ್ನು ಕಟ್ಟಿಸಿಕೊಂಡನು. ದೇವಮಂಜೂಷಕ್ಕೂ ಒಂದು ಸ್ಥಳವನ್ನು ಸಿದ್ಧಪಡಿಸಿ ಅದಕ್ಕೆ ಒಂದು ಗುಡಾರವನ್ನು ಹಾಕಿಸಿದನು.
೨. ‘ಲೇವಿಯರು ಮಾತ್ರವೇ ದೇವಮಂಜೂಷವನ್ನು ಹೊರಬೇಕು. ಏಕೆಂದರೆ ಸದಾಕಾಲ ತಮ್ಮ ಸೇವೆಮಾಡುವುದಕ್ಕೂ ಮಂಜೂಷವನ್ನು ಹೊರುವುದಕ್ಕೂ ಸರ್ವೇಶ್ವರನಿಂದ ಆಯ್ಕೆಯಾದವರು ಅವರೇ’ ಎಂದು ನಿಶ್ಚಯಿಸಿಕೊಂಡನು.
೩. ತಾನು ಸಿದ್ಧಪಡಿಸಿದ ಸ್ಥಳಕ್ಕೆ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ಎಲ್ಲಾ ಇಸ್ರಯೇಲರನ್ನು ಜೆರುಸಲೇಮಿಗೆ ಬರಮಾಡಿಕೊಂಡನು.
೪. ಅನಂತರ ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆಯಿಸಿದನು.
೫. ಅಂತೆಯೇ, ಲೇವಿಯರಲ್ಲಿ ಕೇಹತನ ಊರಿಯೇಲನೆಂಬ ಮೇಲ್ವಿಚಾರಕನು ತನ್ನ ಕುಲದ ನೂರಿಪ್ಪತ್ತು ಸದಸ್ಯರೊಂದಿಗೆ ಬಂದನು.
೬. ಮೆರಾರೀ ಗೋತ್ರದಿಂದ ಮೇಲ್ವಿಚಾರಕ ಅಸಾಯನು ಇನ್ನೂರ ಇಪ್ಪತ್ತು ಜನರೊಂದಿಗೆ ಬಂದನು;
೭. ಗೇರ್ಷೋನ್ ಗೋತ್ರದಿಂದ ಮೇಲ್ವಿಚಾರಕ ಯೋವೇಲ ನೂರ ಮೂವತ್ತು ಜನರೊಂದಿಗೆ ಬಂದನು;
೮. ಎಲೀಚಾಫನ್ಯ ಗೋತ್ರದಿಂದ ಮೇಲ್ವಿಚಾರಕ ಶೆಮಾಯ ಇನ್ನೂರು ಜನರೊಂದಿಗೆ ಬಂದನು;
೯. ಹೆಬ್ರೋನ್ ಗೋತ್ರದಿಂದ ಮೇಲ್ವಿಚಾರಕ ಎಲೀಯೋಲನು ಎಂಬತ್ತು ಜನರೊಂದಿಗೆ ಬಂದನು.
೧೦. ಉಜ್ಜೀಯೇಲನ ಗೋತ್ರದಿಂದ ಮೇಲ್ವಿಚಾರಕ ಅಮ್ಮೀನಾದಾಬ ನೂರಹನ್ನೆರಡು ಜನರೊಂದಿಗೆ ಬಂದನು.
೧೧. ದಾವೀದನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರೆಂಬುವರನ್ನು ಕರೆಯಿಸಿದನು; ಅಂತೆಯೇ ಲೇವಿಯರಾದ ಊರಿಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೋಲ್ ಮತ್ತು ಅಮ್ಮೀನಾದಾಬ್ ಎಂಬವರನ್ನೂ ಕರೆಯಿಸಿದನು.
೧೨. “ನೀವು ಲೇವಿಯರ ಗೋತ್ರಗಳ ನಾಯಕರು; ನಾನು ಸಿದ್ಧಪಡಿಸಿದ ಸ್ಥಳಕ್ಕೆ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ನೀವು ಹಾಗು ನಿಮ್ಮ ಜೊತೆಯಲ್ಲಿ ಲೇವಿಯರೂ ನಿಮ್ಮನ್ನೇ ಶುದ್ಧಪಡಿಸಿಕೊಳ್ಳಿರಿ.
೧೩. ಮೊದಲೊಂದು ಸಾರಿ, ಅದನ್ನು ತರಲು ನೀವು ಇಲ್ಲದೇ ಹೋದುದರಿಂದ ಹಾಗು ನಾವು ತಕ್ಕ ರೀತಿಯಲ್ಲಿ ಅವರನ್ನು ಆರಾಧಿಸದೇ ಹೋದುದಕ್ಕಾಗಿ ನಮ್ಮ ದೇವರಾದ ಸರ್ವೇಶ್ವರ ನಮ್ಮನ್ನು ಶಿಕ್ಷಿಸಿದರು,” ಎಂದು ಅವರನ್ನು ಎಚ್ಚರಿಸಿದನು.
೧೪. ಆಗ ಯಾಜಕರೂ ಲೇವಿಯರೂ ಇಸ್ರಯೇಲರ ದೇವರಾದ ಸರ್ವೇಶ್ವರನ ಮಂಜೂಷವನ್ನು ತರುವುದಕ್ಕಾಗಿ ತಮ್ಮನ್ನೇ ಶುದ್ಧೀಕರಿಸಿಕೊಂಡರು.
೧೫. ಲೇವಿಯರು ಅದನ್ನು ಗುದಿಗೆಗಳ ಮೇಲಿಟ್ಟು, ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ, ತಮ್ಮ ಹೆಗಲಮೇಲೆ ಹೊತ್ತುಕೊಂಡು ನಡೆದರು.
೧೬. ಸ್ವರಮಂಡಲ, ಕಿನ್ನರಿ, ತಾಳಗಳೊಂದಿಗೆ ಸಂಭ್ರಮದಿಂದ ವಾದ್ಯಗಳನ್ನು ಬಾರಿಸುವುದಕ್ಕೂ ಹಾಡುವುದಕ್ಕೂ ವಿವಿಧ ಲೇವಿಯರನ್ನು ನೇಮಿಸಬೇಕೆಂದು ದಾವೀದನು ಲೇವಿಯರ ನಾಯಕನಿಗೆ ಆಜ್ಞಾಪಿಸಿದನು.
೧೭. ಗಾಯಕರ ಮಂಡಳಿಯಿಂದ ಕಂಚಿನ ತಾಳಗಳನ್ನು ಬಾರಿಸಲು ಆಯ್ಕೆಹೊಂದಿದವರು: ಯೋವೇಲನ ಮಗ ಹೇಮಾನ್, ಅವನ ಬಂಧು ಬೆರೆಕ್ಯನ ಮಗ ಆಸಾಫ್, ಮೆರಾರೀ ಕುಟುಂಬಕ್ಕೆ ಸೇರಿದ ಕೂಷಾಯನ ಮಗ ಏತಾನ್ ಎಂಬವರು. ತಮಗೆ ಸಹಾಯ ಮಾಡಲು ತಾರಸ್ಥಾಯಿಯ ತಂತಿವಾದ್ಯಗಳನ್ನು ಬಾರಿಸಲು ಜೆಕರ್ಯ, ಬೇನ್, ಯಾಜೀಯೇಲ್, ಶಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ ಹಾಗು ಮಸೇಯ ಎಂಬವರನ್ನು ಆರಿಸಿಕೊಂಡರು. ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸಲು ಮತಿತ್ಯ, ಎಲೀಫೆಲೇಹು, ಮಿಕ್ನೇಯ, ದೇವಾಲಯದ ದ್ವಾರಪಾಲಕರಾದ ಓಬೇದೆದೋಮ್ ಮತ್ತು ಯೆಗೀಯೇಲರನ್ನೂ ನೇಮಿಸಿಕೊಂಡರು.
೧೮. ***
೧೯. ***
೨೦. ***
೨೧. ***
೨೨. ಸಂಗೀತದಲ್ಲಿ ಪರಿಣತನಾದ ಕೆನನ್ಯ, ಲೇವಿಯರ ವಾದ್ಯವೃಂದಕ್ಕೆ ಮುಖ್ಯಸ್ಥನಾಗಿ ನೇಮಕಗೊಂಡನು.
೨೩. ಬೆರಕ್ಕ ಹಾಗು ಎಲ್ಕಾನ ಎಂಬವರು ಓಬೇದೆದೋಮ್ ಮತ್ತು ಯೆಹೀಯರೊಂದಿಗೆ ಮಂಜೂಷದ ಕಾವಲುಗಾರರಾಗಿ ನೇಮಕವಾದರು. ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಹಾಗು ಎಲೀಯೆಜೆರ್ ಎಂಬವರು ಮಂಜೂಷದ ಮುಂದೆ ತುತ್ತೂರಿಗಳನ್ನು ಊದಲು ಆಯ್ಕೆಯಾದರು.
೨೪. ***
೨೫. ಹೀಗೆ ಅರಸ ದಾವೀದನು, ಇಸ್ರಯೇಲಿನ ನಾಯಕರು ಹಾಗು ಸೈನ್ಯದ ಅಧಿಕಾರಿಗಳು ನಿಬಂಧನ ಮಂಜೂಷವನ್ನು ತರಲು ಓಬೇದೆದೋಮನ ಮನೆಗೆ ಹೋದರು. ಇದನ್ನು ಒಂದು ದೊಡ್ಡ ಜಾತ್ರೆಯಂತೆಯೇ ಆಚರಿಸಲಾಯಿತು.
೨೬. ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರ ಸಹಾಯ ದೊರೆತುದರಿಂದ ಅವರು ಏಳು ಹೋರಿಗಳನ್ನೂ ಏಳು ಕುರಿಗಳನ್ನೂ ಬಲಿದಾನ ಮಾಡಿದರು.
೨೭. ದಾವೀದನು, ಮಂಜೂಷ ಹೊತ್ತವರು, ವಾದ್ಯ ಬಾರಿಸುವವರು ಹಾಗು ಅವರ ನಾಯಕ ಕೆನನ್ಯನು ಅತ್ಯುತ್ತಮ ನೂಲಿನಿಂದ ತಯಾರಿಸಿದ ನಿಲುವಂಗಿಗಳನ್ನು ಧರಿಸಿದ್ದರು. ದಾವೀದನು ಏಫೋದನ್ನು ಕೂಡ ಧರಿಸಿಕೊಂಡಿದ್ದನು.
೨೮. ಹೀಗೆ ಎಲ್ಲಾ ಇಸ್ರಯೇಲರು ಜೆರುಸಲೇಮಿನವರೆಗೆ ಆನಂದಘೋಷಣೆಗಳಿಂದಲೂ ತುತೂರಿ, ಕೊಂಬು, ತಾಳ, ತಂತಿ, ವಾದ್ಯಗಳ ಸಂಗೀತದಿಂದಲೂ ಸರ್ವೇಶ್ವರನ ನಿಬಂಧನಾ ಮಂಜೂಷವನ್ನು ಹೊತ್ತುತಂದರು.
೨೯. ಆ ಮಂಜೂಷ ಪಟ್ಟಣದೊಳಗೆ ಬರುತ್ತಿದ್ದಂತೆ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿ ನೋಡಿದಳು. ದಾವೀದನು ಸಂತೋಷದಿಂದ ಕುಣಿಯುತ್ತಾ ನರ್ತಿಸುತ್ತಾ ಇದ್ದುದನ್ನು ಕಂಡಳು. ಅದನ್ನು ನೋಡಿ ಅವನ ಬಗ್ಗೆ ಅವಳಲ್ಲಿ ತಿರಸ್ಕಾರ ಭಾವ ಮೂಡಿತು.

ಕ್ರಾನಿಕಲ್ಸ್ ೧ ೧೬:೧-೪೩
೧. ಅವರು ದೇವಮಂಜೂಷವನ್ನು ತಂದು ದಾವೀದನು ಅದಕ್ಕಾಗಿ ಸಿದ್ಧಪಡಿಸಿದ್ದ ಗುಡಾರದೊಳಗೆ ಒಯ್ದು, ಅಲ್ಲಿ ಅದನ್ನು ಸ್ಥಾಪಿಸಿದರು. ದೇವರಿಗೆ ದಹನಬಲಿಗಳನ್ನೂ, ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದರು.
೨. ಬಲಿಹೋಮಗಳ ಅರ್ಪಣೆ ಮುಗಿದ ತರುವಾಯ ದಾವೀದನು ಸರ್ವೇಶ್ವರನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. ಅವರೆಲ್ಲರಿಗೂ ಪ್ರಸಾದವನ್ನು ಹಂಚಿದನು:
೩. ಇಸ್ರಯೇಲಿನ ಪ್ರತಿ ಒಬ್ಬ ಪುರುಷನಿಗೂ ಸ್ತ್ರೀಗೂ ಒಂದೊಂದು ರೊಟ್ಟಿಯನ್ನೂ ಬೇಯಿಸಿದ ಒಂದು ತುಂಡುಮಾಂಸವನ್ನೂ ಒಣಗಿದ ದ್ರಾಕ್ಷೆಗಳನ್ನೂ ಹಂಚಿದನು
೪. ಸರ್ವೇಶ್ವರನ ಮಂಜೂಷದ ಮುಂದೆ ದೇವರ ಆರಾಧನೆ ಮಾಡುವುದಕ್ಕಾಗಿ ದಾವೀದನು ಕೆಲವು ಮಂದಿ ಲೇವಿಯರನ್ನು ನೇಮಿಸಿದನು.
೫. ಅವರಲ್ಲಿ ಆಸಾಫನು ಮುಖ್ಯಸ್ಥನಾಗಿಯೂ ಜೆಕರ್ಯ ಅವನ ಸಹಾಯಕನಾಗಿಯೂ ನೇಮಕಗೊಂಡರು. ಯೇಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಹಾಗು ಯೆಗೀಯೇಲ್ ಸ್ವರಮಂಡಲಗಳನ್ನು ಬಾರಿಸಲು ನೇಮಕವಾದರು. ಆಸಾಫನು ತಾಳಗಳನ್ನು ಬಾರಿಸಬೇಕಾಗಿತ್ತು.
೬. ಬೆನಾಯ ಹಾಗೂ ಯಹಜೀಯೇಲ್ ಎಂಬ ಯಾಜಕರು ನಿಬಂಧನಾ ಮಂಜೂಷದ ಮುಂದೆ ಕ್ರಮವಾಗಿ ತುತೂರಿಗಳನ್ನು ಊದಬೇಕಾಗಿತ್ತು.
೭. ಆಸಾಫನಿಗೂ ಅವನ ಜೊತೆ ಲೇವಿಯರಿಗೂ ಸರ್ವೇಶ್ವರನ ಸ್ತೋತ್ರ ಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
೮. ಸಲ್ಲಿಸಿ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
೯. ಹಾಡಿ ಪಾಡಿ ಹೊಗಳಿರಿ ಆತನನು I ಧ್ಯಾನಿಸಿ ಆತನ ಪವಾಡಗಳನು II
೧೦. ಹೆಮ್ಮೆಪಡಿ, ನೆನೆದು ಆತನ ಶ್ರೀನಾಮವನು I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನವನು II
೧೧. ಆಶ್ರಯಿಸಿರಿ ಸರ್ವೇಶನನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
೧೨. ಆತನ ದಾಸ ಇಸ್ರಯೇಲನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II
೧೩. ನೆನೆಯಿರಿ ಆತನ ಅದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದ ನ್ಯಾಯನಿರ್ಣಯಗಳನು II
೧೪. ಸರ್ವೇಶ ನಮ್ಮ ದೇವನೆಂಬುದು ಪ್ರಕಟಿತ I ಆತನಿತ್ತ ತೀರ್ಪು ವಿಶ್ವವ್ಯಾಪ್ತ II
೧೫. ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
೧೬. ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತನು ಹೇಳಿದುದನು II
೧೭. ಯಕೋಬನಿಗೆ ರಾಜಶಾಸನವಾಗಿ ಕೊಟ್ಟದ್ದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು: II
೧೮. “ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದಿದು ನಿಮ್ಮ ಸಂತತಿಗೆ” II
೧೯. ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರಲು II
೨೦. ***
೨೧. ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನ್ನಾತ ಗದರಿಸದೆ ಬಿಡಲಿಲ್ಲ II
೨೨. “ನಾನು ಅಭಿಷೇಕಿಸಿದವರನು ಇಗೋ, ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II
೨೩. ಸರ್ವ ಭೂನಿವಾಸಿಗಳೇ, ಸರ್ವೇಶ್ವರನಿಗೆ ಹಾಡಿರಿ I ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ II
೨೪. ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ I ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ II
೨೫. ಏಕೆನೆ, ಮಹಾತ್ಮನು ಸರ್ವೇಶ್ವರ ಅತಿ ಸ್ತುತ್ಯರ್ಹನು I ಸಕಲ ದೇವರುಗಳಿಗಿಂತಲೂ ಘನಗಂಭೀರನು II
೨೬. ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ I ಸರ್ವೇಶ್ವರನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ II
೨೭. ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ I ಶಕ್ತಿ, ಸಂತೋಷ ಆತನ ಗರ್ಭಗುಡಿಯಲಿ II
೨೮. ಶಕ್ತಿಸಾಮರ್ಥ್ಯ ಸರ್ವೇಶ್ವರನವೇ ಎಂದು I ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದೂ II
೨೯. ಆತನ ನಾಮಕೆ ಘನತೆ ಗೌರವವನು ತನ್ನಿ I ಕಾಣಿಕೆಯೊಂದಿಗೆ ಆತನ ಮಂದಿರಕೆ ಬನ್ನಿ II
೩೦. ಸರ್ವೇಶನಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I ಕದಲದ ಸ್ಥಿರತೆಯನು ಇತ್ತಿಹನೀ ಧರೆಗೆ II
೩೧. “ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ I ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ I ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು I ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು II
೩೨. ***
೩೩. ಉಲ್ಲಾಸಿಸಲಿ ಹೊಲಗದ್ದೆಗಳು ಪೈರುಪಚ್ಚೆಗಳು I ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು II
೩೪. ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II
೩೫. ಹೇ ದೇವಾ, ನಮ್ಮ ಸಹಾಯಕ, ನಮ್ಮನ್ನು ಉದ್ಧರಿಸು I ನಾಡು ನಾಡುಗಳಿಂದ ನಮ್ಮನ್ನು ಒಂದುಗೂಡಿಸು I ನಿನ್ನ ಪವಿತ್ರ ನಾಮವನು ಭಜಿಸುವೆವು ನಾವು I ನಿನ್ನ ಸ್ತುತಿಸ್ತೋತ್ರಗಳಲಿ ಹೆಚ್ಚಳಪಡುವೆವು II
೩೬. ಇಸ್ರಯೇಲಿನ ದೇವನಾದ ಸರ್ವೇಶಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್,’ ಸರ್ವೇಶ್ವರನಿಗೆ ಸ್ತೋತ್ರ II
೩೭. ನಿಬಂಧನಾ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡೆಸುವ ಜವಾಬ್ದಾರಿಯನ್ನು ಆಸಾಫ ಮತ್ತು ಅವನ ಜೊತೆ ಲೇವಿಯರಿಗೆ ಅರಸ ದಾವೀದ ಶಾಶ್ವತವಾಗಿ ವಹಿಸಿಕೊಟ್ಟನು. ಅಲ್ಲಿ ಅವರು ತಮ್ಮ ಕರ್ತವ್ಯವನ್ನು ದಿನನಿತ್ಯವೂ ನೆರವೇರಿಸಬೇಕಾಗಿತ್ತು.
೩೮. ಯೆದುತೂನನ ಮಗ ಓಬೇದೆದೋಮನೂ ಅವನ ಗೋತ್ರದ ಅರವತ್ತ ಎಂಟು ಜನರೂ ಅವರಿಗೆ ಸಹಾಯಕರು ಆಗಿದ್ದರು. ಹೋಸ ಮತ್ತು ಓಬೇದೆದೋಮರು ದ್ವಾರಪಾಲಕರ ಮೇಲ್ವಿಚಾರಕರಾಗಿದ್ದರು.
೩೯. ಯಾಜಕ ಚಾದೋಕ ಮತ್ತು ಅವನ ಜೊತೆ ಯಾಜಕರು ಗಿಬ್ಯೋನಿನಲ್ಲಿದ್ದ ಸರ್ವೇಶ್ವರನ ಗುಡಾರದಲ್ಲಿ ಆರಾಧನೆಯನ್ನು ನಡೆಸಲು ನೇಮಕರಾಗಿದ್ದರು.
೪೦. ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಬಲಿಪೀಠದ ಮೇಲೆ ಪ್ರತೀದಿನ ಮುಂಜಾನೆ ಹಾಗು ಸಂಜೆ ದಹನಬಲಿಯರ್ಪಿಸಬೇಕಾಗಿ ಇತ್ತು.
೪೧. ಅಲ್ಲಿ ಅವರೊಂದಿಗೆ ಸರ್ವೇಶ್ವರನ ನಿತ್ಯಪ್ರೀತಿಗಾಗಿ ಅವರನ್ನು ಸ್ತುತಿಸಿ, ಸಂಗೀತ ಹಾಡಲು ಹೇಮಾನ್, ಯೆದುತೂನ ಹಾಗು ಇನ್ನಿತರರು ನಿರ್ದಿಷ್ಟವಾಗಿ ನೇಮಕರಾಗಿದ್ದರು.
೪೨. ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.
೪೩. ಅನಂತರ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ತನ್ನ ಕುಟುಂಬದವರನ್ನು ಆಶೀರ್ವದಿಸಲು ದಾವೀದನೂ ತನ್ನ ಮನೆಗೆ ಹೋದನು.

ಕೀರ್ತನೆಗಳು ೭೮:೧೨-೧೬
೧೨. ಆ ಈಜಿಪ್ಟ್ ದೇಶದೊಳು, ಸೋನ್ ಬಯಲು ಸೀಮೆಯೊಳು I ಆತನೆಸಗಿದ ಪವಾಡಗಳು ಪೂರ್ವಜರ ಇದಿರೊಳು II
೧೩. ದಾಟಿಸಿದನವರನು ಸಮುದ್ರವನೆ ಭೇದಿಸಿ I ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ II
೧೪. ಹಗಲಲಿ ಕರೆದೊಯ್ದನು ಮೇಘದ ನೆರಳಲಿ I ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ II
೧೫. ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು ನೀರನು I ಆಳದ ಸರಸಿಯಿಂದೊ ಎಂಬಂತೆ ಅದನು ಕುಡಿಯಲಿತ್ತನು II
೧೬. ಬಂಡೆಗಳಿಂದಲೆ ಹೊರಡಿಸಿದನು ನೀರನು I ನದಿಗಳಂತೆಯೆ ಹರಿಯಮಾಡಿದನು ಅದನು II

ಜ್ಞಾನೋಕ್ತಿಗಳು ೧೯:೨೨-೨೪
೨೨. ಅತಿಯಾಸೆ ಗತಿಕೇಡು; ಇದ್ದೂ ಇಲ್ಲವೆನ್ನುವವನಿಗಿಂತ ಏನೂ ಇಲ್ಲದವನೆ ಲೇಸು.
೨೩. ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಜೀವಪ್ರಾಪ್ತಿ; ಅಂಥವನು ಸಂತುಷ್ಟನಾಗಿ ಬಾಳುವನು, ಅವನಿಗೆ ಕೇಡು ಸಂಭವಿಸದು.
೨೪. ಮೈಗಳ್ಳ ಕೈ ಹಾಕುತ್ತಾನೆ ತುತ್ತಿಗೆ; ಆದರೆ ಎತ್ತಲಾರ ಬಾಯ ಹತ್ತಿರಕ್ಕೆ.

ಪ್ರೇಷಿತರ ೭:೪೪-೬೦
೪೪. “ದೇವಪ್ರಸನ್ನತೆಯ ಗುಡಾರವು ನಮ್ಮ ಪೂರ್ವಜರ ಬಳಿ ಮರಳುಗಾಡಿನಲ್ಲಿತ್ತು. ಮೋಶೆಯೊಡನೆ ಮಾತನಾಡಿದ ದೇವರು ಅವನಿಗಿತ್ತ ಆಜ್ಞೆಯಂತೆ ಹಾಗೂ ತೋರಿಸಿದ ಆಕಾರದಂತೆ ಅದನ್ನು ನಿರ್ಮಿಸಲಾಗಿತ್ತು.
೪೫. ಅನಂತರ ಬಂದ ನಮ್ಮ ಪಿತೃಗಳು ಅದನ್ನು ಸ್ವಾಸ್ತ್ಯವಾಗಿ ಪಡೆದರು. ದೇವರು ಅನ್ಯಜನಾಂಗಗಳನ್ನು ಓಡಿಸಿ ಸ್ವಾಧೀನಮಾಡಿಕೊಟ್ಟ ನಾಡಿಗೆ, ಅವರು ಯೆಹೋಶುವನ ಮುಖಂಡತ್ವದಲ್ಲಿ ಹೋದಾಗ, ಆ ಗುಡಾರವನ್ನೂ ತೆಗೆದುಕೊಂಡು ಹೋದರು. ದಾವೀದನ ಕಾಲದವರೆಗೂ ಅದು ಅಲ್ಲೇ ಇತ್ತು.
೪೬. ದೈವಾನುಗ್ರಹಕ್ಕೆ ಪಾತ್ರನಾದ ದಾವೀದನು ಯಕೋಬನ ದೇವರಿಗೆ ಆಲಯವೊಂದನ್ನು ಕಟ್ಟಲು ಅಪ್ಪಣೆಯಾಗಬೇಕೆಂದು ಬೇಡಿಕೊಂಡನು.
೪೭. ಸಾಕ್ಷಾತ್ ಆ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
೪೮. ಆದರೆ ಪರಾತ್ಪರ ದೇವರು ಮಾನವ ನಿರ್ಮಿತ ಆಲಯಗಳಲ್ಲಿ ಮನೆಮಾಡುವುದಿಲ್ಲ.
೪೯. ಸ್ವರ್ಗವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದಪೀಠ. ಇಂತಿರಲು, ನನ್ನಂಥವನಿಗೆ ಎಂಥ ಆಲಯವನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವಾದರೂ ಯಾವುದು?
೫೦. ಇವೆಲ್ಲವನ್ನೂ ನಿರ್ಮಿಸಿದವನು ನಾನೇ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಸರ್ವೇಶ್ವರ, ಪ್ರವಾದಿಯ ಪ್ರವಚನವೊಂದರಲ್ಲಿ.”
೫೧. ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು’ ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ.
೫೨. ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ.
೫೩. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು.
೫೪. ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು.
೫೫. ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು,
೫೬. “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು.
೫೭. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು.
೫೮. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
೫೯. ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
೬೦. ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು.