ಅರಸುಗಳು ೧ ೩:೧-೨೮ |
೧. ಸೊಲೊಮೋನನು ಈಜಿಪ್ಟಿನ ಅರಸ ಫರೋಹನ ಮಗಳನ್ನು ಮದುವೆಮಾಡಿಕೊಂಡು ಅವನ ಅಳಿಯನಾದ. ತನ್ನ ಅರಮನೆಯನ್ನು, ಸರ್ವೇಶ್ವರನ ಮಹಾದೇವಾಲಯವನ್ನು ಹಾಗು ಜೆರುಸಲೇಮಿನ ಸುತ್ತಣ ಗೋಡೆಯನ್ನು ಕಟ್ಟಿಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲೇ ಇರಿಸಿಕೊಂಡನು. |
೨. ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು. |
೩. ಸೊಲೊಮೋನನು ಸರ್ವೇಶ್ವರನನ್ನು ಪ್ರೀತಿಸಿ, ತನ್ನ ತಂದೆ ದಾವೀದನ ವಿಧಿಗಳನ್ನು ಕೈಗೊಳ್ಳುತ್ತಿದ್ದರೂ ಆ ಪೂಜಾಸ್ಥಳಗಳಲ್ಲೇ ಬಲಿಯರ್ಪಿಸುತ್ತಿದ್ದನು; ಅಲ್ಲಿಯೇ ಧೂಪಾರತಿ ಎತ್ತುತ್ತಿದ್ದನು. |
೪. ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರಬಲಿಗಳನ್ನು ಸಮರ್ಪಿಸಿದಾಗ, |
೫. ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. |
೬. ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣಗೊಳಿಸಿದ್ದೀರಿ. |
೭. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. |
೮. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. |
೯. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. |
೧೦. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. |
೧೧. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. |
೧೨. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. |
೧೩. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. |
೧೪. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. |
೧೫. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು. |
೧೬. ಒಂದು ದಿನ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು. |
೧೭. ಅವರಲ್ಲಿ ಒಬ್ಬಳು ಅರಸನಿಗೆ, “ಒಡೆಯಾ, ಕೇಳಿ; ನಾನೂ ಇವಳೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಒಂದು ಮಗವನ್ನು ಹೆತ್ತೆ. |
೧೮. ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು; ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ. |
೧೯. ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು. |
೨೦. ಮಧ್ಯರಾತ್ರಿಯಲ್ಲಿ ಇವಳೆದ್ದು, ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ, ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಮಗ್ಗುಲಲ್ಲಿ ಇಟ್ಟುಕೊಂಡಳು. ಸತ್ತುಹೋದ ತನ್ನ ಮಗುವನ್ನು ನನ್ನ ಮಗ್ಗುಲಲ್ಲಿಟ್ಟಳು. |
೨೧. ನಾನು ಬೆಳಿಗ್ಗೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ,” ಎಂದು ಹೇಳಿದಳು. |
೨೨. ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗ; ಸತ್ತಿರುವವನು ನಿನ್ನ ಮಗ,” ಎಂದು ನುಡಿದಳು. ಮೊದಲನೆಯವಳು ಮತ್ತೆ, “ಇಲ್ಲ ಸತ್ತಿರುವವನು ನಿನ್ನ ಮಗ ಬದುಕಿರುವವನು ನನ್ನ ಮಗ,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು. |
೨೩. ಆಗ ಅರಸನು, “ಜೀವದಿಂದಿರುವ ಕೂಸು ನನ್ನದು, ಸತ್ತಿರುವುದು ನಿನ್ನದು,’ ಎಂದು ಒಬ್ಬಳು ಹೇಳುತ್ತಾಳೆ; ಇನ್ನೊಬ್ಬಳು, ‘ಇಲ್ಲ, ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು,’ ಎನ್ನುತ್ತಾಳೆ. |
೨೪. ನನಗೊಂದು ಕತ್ತಿಯನ್ನು ತಂದುಕೊಡಿ,” ಎಂದು ಸೇವಕರಿಗೆ ಹೇಳಿದನು. |
೨೫. ಅವರು ತಂದರು. ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು, ಎರಡು ಭಾಗಮಾಡಿ, ಅರ್ಧವನ್ನು ಅವಳಿಗೂ ಅರ್ಧವನ್ನು ಇವಳಿಗೂ ಕೊಡಿ,” ಎಂದು ಅಪ್ಪಣೆಮಾಡಿದನು. |
೨೬. ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳುಕರಗಿತು; “ನನ್ನೊಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟುಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು. |
೨೭. ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು. |
೨೮. ಇಸ್ರಯೇಲರೆಲ್ಲರೂ ಅರಸನ ಈ ತೀರ್ಪನ್ನು ಕೇಳಿದರು. ನ್ಯಾಯನಿರ್ಣಯಿಸುವುದಕ್ಕೆ ಈತನಲ್ಲಿ ದೇವದತ್ತ ಜ್ಞಾನವಿದೆ ಎಂದು ತಿಳಿದು ಅವನ ಬಗ್ಗೆ ಅಪಾರ ಗೌರವ ಉಳ್ಳವರಾದರು. |
ಅರಸುಗಳು ೧ ೪:೧-೩೪ |
೧. ಸೊಲೊಮೋನರಾಜನು ಸರ್ವ ಇಸ್ರಯೇಲರ ಮೇಲೆ ಅರಸನಾಗಿದ್ದನು. |
೨. ಅವನ ಮುಖ್ಯ ಪದಾಧಿಕಾರಿಗಳು ಇವರು: ಚಾದೋಕನ ಮಗ ಅಜರ್ಯನು - ಯಾಜಕನು; |
೩. ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬುವರು ಕಾರ್ಯದರ್ಶಿಗಳು; ಅಹೀಲೂದನ ಮಗ ಯೆಹೋಷಾಫಾಟನು ಅವನ ಮಂತ್ರಿ; |
೪. ಯೆಹೋಯಾದಾವನ ಮಗ ಬೆನಾಯನು - ಸೇನಾಪತಿ; ಎಬ್ಯಾತಾರ ಹಾಗು ಚಾದೋಕ - ಯಾಜಕರು; |
೫. ನಾತಾನನ ಮಗ ಅಜರ್ಯನು - ಪ್ರದೇಶಾಧಿಪತಿಗಳ ಮುಖ್ಯಸ್ಥ; ನಾತಾನನ ಮಗ ಜಾಬೂದನು ಯಾಜಕ ಹಾಗು ಅರಸನ ಮಿತ್ರ; |
೬. ಅಹೀಷಾರನು - ರಾಜ್ಯಗೃಹಾಧಿಪತಿ; ಅಬ್ದನ ಮಗನಾದ ಅದೋನೀರಾಮನು - ಬಿಟ್ಟೀ ಕೆಲಸಮಾಡಿಸುವವರ ಮುಖ್ಯಸ್ಥ. |
೭. ಸರ್ವ ಇಸ್ರಯೇಲರ ಮೇಲೆ ಸೊಲೊಮೋನನು ಹನ್ನೆರಡು ಜನ ಜಿಲ್ಲಾಧಿಕಾರಿಗಳನ್ನು ನೇಮಿಸಿದ್ದನು. ಅವರು ತಮ್ಮ ಜಿಲ್ಲೆಗಳಿಂದ ಅರಸನಿಗೂ ಅರಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದರು. ಪ್ರತಿಯೊಬ್ಬನೂ ವರ್ಷದಲ್ಲಿ ಒಂದೊಂದು ತಿಂಗಳು ಪೂರೈಸಬೇಕಾಗಿತ್ತು. |
೮. ಅವರ ಹೆಸರುಗಳು ಹಾಗು ಜಿಲ್ಲೆಗಳ ಹೆಸರುಗಳು ಇವು: |
೯. ಬಿನ್ಹೂರ - ಎಫ್ರಯಿಮಿನ ಮಲೆನಾಡಿನ ಪ್ರದೇಶ; |
೧೦. ಬಿನ್ ದೆಕೆರ್ - ಮಾಕಚ್, ಶಾಲ್ಬೀಮ್, ಬೀತ್ ಷೆಮೆಷ್, ಏಲೋನ್, ಬೇತ್ ಹಾನಾನ್; |
೧೧. ಬಿನ್ ಹೆಸೆದ್ - ಅರುಬ್ಬೋತ್ (ಸೋಕೋಹೇಫೆರ್ ಎಂಬ ಪ್ರದೇಶಗಳು ಅವನ ವಶದಲ್ಲಿದ್ದವು). |
೧೨. ಬಿನ್ ಅಬೀನಾದಾಬ್ - ನಾಪೋತ್ ದೋರ್ (ಇವನು ಸೊಲೊಮೋನನ ಮಗಳು ಟಾಫತಳನ್ನು ವಿವಾಹವಾಗಿದ್ದನು); |
೧೩. ಅಹೀಲೂದನ ಮಗ ಬಾಣಾ - ತಾಣಕ್, ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿರುವ ಜೆಸ್ರೀಲಿನ ಅಡಿಯಲ್ಲಿದ್ದ ಬೇತ್ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇದ್ದ, ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿದ್ದ ಬೇತ್ಷೆಯಾನಿನ ಎಲ್ಲಾ ಪ್ರದೇಶ; |
೧೪. ಬಿನ್ ಗೆಬೆರ್ - ರಾಮೋತ್ ಗಿಲ್ಯಾದ್ (ಗಿಲ್ಯಾದಿನಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಿದ್ದ ಅರ್ಗೋಬ ಪ್ರದೇಶ); ಇದ್ದೋವಿನ ಮಗ ಅಹೀನಾದಾಬನು - ಮಹನಯಿಮ್; |
೧೫. ಅಹೀಮಾಚ - ನಫ್ತಾಲಿ ಪ್ರದೇಶ (ಇವನು ಸೊಲೊಮೋನನ ಮಗಳು ಬಾಸೆಮತಳನ್ನು ವಿವಾಹವಾಗಿದ್ದನು); |
೧೬. ಹೂಷೈಯ ಮಗ ಬಾಣ - ಅಶೇರ ಹಾಗು ಅಲೋತ್; |
೧೭. ಫಾರೂಹನ ಮಗ ಯೆಹೋಷಾಫಾಟನು - ಇಸ್ಸಾಕಾರ ಪ್ರದೇಶ; |
೧೮. ಏಲನ ಮಗ ಶಿಮ್ಮಿ - ಬೆನ್ಯಾಮೀನರ ಪ್ರದೇಶ; |
೧೯. ಉರಿಯನ ಮಗ ಗೆಬೆರ್ - ಗಿಲ್ಯಾದ (ಅಮೋರಿಯರ ಅರಸ ಸೀಹೋನ್, ಬಾಷಾನಿನ ಅರಸ ಓಗ್ ಇವರ ಪ್ರದೇಶ) ಪ್ರದೇಶಕ್ಕೆಲ್ಲಾ ಅವನೊಬ್ಬನೇ ಜಿಲ್ಲಾಧಿಕಾರಿಯಾಗಿದ್ದನು. |
೨೦. ಇಸ್ರಯೇಲ್ ಹಾಗು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾದರು; ಅನ್ನ ಪಾನಗಳಲ್ಲಿ ಸಂತೃಪ್ತರಾಗಿ ಸಂತೋಷದಿಂದ ಬಾಳುತ್ತಿದ್ದರು. |
೨೧. ಯೂಫ್ರೆಟಿಸ್ ನದಿ ಮೊದಲ್ಗೊಂಡು ಫಿಲಿಷ್ಟಿಯರ ಮತ್ತು ಈಜಿಪ್ಟಿಯರ ದೇಶಗಳವರೆಗೂ ಇರುವ ಎಲ್ಲ ರಾಜ್ಯಗಳ ಪ್ರಜೆಗಳನ್ನು ಸೊಲೊಮೋನನು ಆಳುತ್ತಿದ್ದನು. ಆ ದೇಶದವರು, ತಮ್ಮ ಜೀವಮಾನದಲ್ಲೆಲ್ಲಾ ಅಧೀನರಾಗಿದ್ದು, ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. |
೨೨. ಸೊಲೊಮೋನನ ಅರಮನೆಗೆ ದಿನಂಪ್ರತಿ ಬೇಕಾಗಿದ್ದ ಆಹಾರಪದಾರ್ಥಗಳ ಪಟ್ಟಿ: ಐದು ಸಾವಿರ ಲೀಟರ್ ಗೋದಿಯ ಹಿಟ್ಟು, ಹತ್ತು ಸಾವಿರ ಲೀಟರ್ ಜವೆಗೋದಿಯ ಹಿಟ್ಟು; |
೨೩. ಹತ್ತು ಕಟ್ಟಿ ಮೇಯಿಸಿದ ಎತ್ತುಗಳು, ಇಪ್ಪತ್ತು ಬಿಟ್ಟು ಮೇಯಿಸಿದ ಎತ್ತುಗಳು, ನೂರು ಕುರಿಗಳು; ಇವುಗಳ ಜೊತೆಗೆ, ದುಪ್ಪಿ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು. |
೨೪. ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲ್ಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ರಾಜರಿಗೂ ಅಧಿಪತಿಯಾಗಿದ್ದನು. ಸುತ್ತಮುತ್ತಲಿನ ರಾಜರೊಡನೆ ಶಾಂತಿಸಮಾಧಾನದಿಂದಿದ್ದನು. |
೨೫. ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಸಮಸ್ತ ಇಸ್ರಯೇಲರು ಹಾಗು ಯೆಹೂದ್ಯರು ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದಗಿಡ, ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು. |
೨೬. ಸೊಲೊಮೋನನ ಲಾಯಗಳಲ್ಲಿ ನಾಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು; ಅವನಿಗೆ ಹನ್ನೆರಡು ಸಾವಿರ ಮಂದಿ ರಾಹುತರಿದ್ದರು. |
೨೭. ಮೇಲೆ ಹೇಳಿದ ಜಿಲ್ಲಾಧಿಕಾರಿಗಳು ತಮತಮಗೆ ನೇಮಕವಾದ ತಿಂಗಳಲ್ಲಿ ಅರಸ ಸೊಲೊಮೋನನಿಗೂ ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಎಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸುತ್ತಿದ್ದರು. |
೨೮. ಇದಲ್ಲದೆ, ಅವರು ರಥಾಶ್ವಗಳಿಗಾಗಿ ಹಾಗು ಸವಾರಿಕುದುರೆಗಳಿಗಾಗಿ ನೇಮಕವಾದಷ್ಟು ಜವೆಗೋದಿಯನ್ನೂ ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೆ ತಂದು ಒಪ್ಪಿಸುತ್ತಿದ್ದರು. |
೨೯. ದೇವರು ಸೊಲೊಮೋನನಿಗೆ ಸಮುದ್ರತೀರದ ಮರಳಿನಷ್ಟು ಅಪರಿಮಿತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದ್ದರು. |
೩೦. ಅವನ ಜ್ಞಾನ ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲು, ಈಜಿಪ್ಟರ ಸರ್ವಜ್ಞಾನಕ್ಕಿಂತಲು ಮಿಗಿಲಾಗಿತ್ತು. |
೩೧. ಅವನು ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಮುತ್ತಲಿನ ಜನಾಂಗಗಳಲ್ಲೆಲ್ಲಾ ಅವನ ಹೆಸರು ಪ್ರಸಿದ್ಧವಾಯಿತು. |
೩೨. ಅವನು ನುಡಿದ ಜ್ಞಾನೋಕ್ತಿಗಳು ಮೂರು ಸಾವಿರ, ರಚಿಸಿದ ಗೀತೆಗಳು ಸಾವಿರದ ಐದು. |
೩೩. ಅವನು, ಲೆಬನೋನಿನ ದೇವದಾರುವೃಕ್ಷ ಮೊದಲ್ಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನು ಕುರಿತು, ಎಲ್ಲಾ ಪಶುಪಕ್ಷಿ, ಜಲಜಂತು, ಕ್ರಿಮಿಕೀಟಗಳನ್ನು ಕುರಿತು ಪ್ರಸ್ತಾಪಿಸಬಲ್ಲವನಾಗಿದ್ದನು. |
೩೪. ಸೊಲೊಮೋನನ ಜ್ಞಾನವಿಶೇಷವನ್ನು ಕುರಿತು ಕೇಳಿದ ಸರ್ವಜನಾಂಗಗಳ ಭೂಪಾಲರಲ್ಲಿ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಬರುತ್ತಿದ್ದರು. |
ಕೀರ್ತನೆಗಳು ೬೮:೧೫-೨೦ |
೧೫. ಬಾಷಾನಿನ ಪರ್ವತವೇ, ನೀ ಮಹೋನ್ನತ I ಹಲವು ಶಿಖರಗಳಿಗಿಂತ ನೀ ಅಲಂಕೃತ II |
೧೬. ಆದರೂ ದೇವನಾರಿಸಿದ ಗಿರಿಯನು I ಆತ ಬಯಸಿದ ಆ ಚಿರ ನಿವಾಸವನು I ನೀ ಓರೆಗಣ್ಣಿಂದ ಕಾಣುವೆಯೇನು? I ಎಲೈ ಶಿಖರೋನ್ನತ ಪರ್ವತವೇ, ಪೇಳು II |
೧೭. ತನ್ನ ಸಹಸ್ರಾರು, ಲಕ್ಷಾಂತರ ರಥಗಳ ಸಮೇತ I ಸೀನಾಯಿಂದ ದೇಗುಲಕೆ ಪ್ರಭುವಿನ ಸಮಾಗಮನ II |
೧೮. ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ I ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ I ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ I ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ II |
೧೯. ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ I ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ II |
೨೦. ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು II |
ಜ್ಞಾನೋಕ್ತಿಗಳು ೧೭:೧೦-೧೨ |
೧೦. ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು. |
೧೧. ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ. |
೧೨. ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು. |
ಯೊವಾನ್ನನು ೧೦:೧-೨೩ |
೧. “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿಬರುವವನು ಕಳ್ಳ ಹಾಗೂ ಕೊಳ್ಳೆಗಾರ. |
೨. ಬಾಗಿಲ ಮೂಲಕ ಬರುವವನು ಕುರಿಗಾಹಿ. |
೩. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. |
೪. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. |
೫. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ. |
೬. ಯೇಸು ಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ. |
೭. ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. |
೮. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. |
೯. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. |
೧೦. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ. ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು. |
೧೧. “ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ. |
೧೨. ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ. |
೧೩. ಅವನು ಕೇವಲ ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ. |
೧೪. ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ. ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ. |
೧೫. *** |
೧೬. ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು. |
೧೭. “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ. |
೧೮. ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು. |
೧೯. ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲಿ ಮತ್ತೆ ವಾದವೆದ್ದಿತು. |
೨೦. ಅವರಲ್ಲಿ ಹಲವರು, “ಅವನಿಗೆ ದೆವ್ವಹಿಡಿದಿದೆ: ಅವನೊಬ್ಬ ಹುಚ್ಚ, ಅವನಿಗೇಕೆ ಕಿವಿಗೊಡುತ್ತೀರಿ?” ಎಂದರು. |
೨೧. ಉಳಿದವರಾದರೋ, “ಇವು ದೆವ್ವಹಿಡಿದವನ ಮಾತುಗಳೆಂದಿಗೂ ಅಲ್ಲ. ದೆವ್ವವು ಕುರುಡನಿಗೆ ಕಣ್ಣು ಕೊಡುವುದುಂಟೆ?” ಎಂದರು. |
೨೨. ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು. |
೨೩. ಯೇಸು ಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು. |