ವಿಮೋಚನಾಕಾಂಡ ೫:೧-೨೩ |
೧. ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಬಂದರು. “ಇಸ್ರಯೇಲರ ದೇವರಾದ ಸರ್ವೇಶ್ವರನ ಮಾತುಗಳಿವು: ‘ನನ್ನ ಜನರು ಮರುಭೂಮಿಯಲ್ಲಿ ನನ್ನ ಗೌರವಾರ್ಥ ಒಂದು ಹಬ್ಬವನ್ನು ಆಚರಿಸಬೇಕಾಗಿದೆ. ಅದಕ್ಕೆ ಅವರಿಗೆ ಅಪ್ಪಣೆಕೊಡಬೇಕು’,\ ಎಂದರು. |
೨. ಅದಕ್ಕೆ ಫರೋಹನು, “ 'ಸರ್ವೇಶ್ವರ' ಎಂಬುವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಯೇಲರನ್ನು ಹೋಗಬಿಡಬೇಕೊ? ಆ ಸರ್ವೇಶ್ವರನು ಯಾರೋ ನನಗೆ ಗೊತ್ತಿಲ್ಲ. ಇಸ್ರಯೇಲರನ್ನು ನಾನು ಹೋಗಬಿಡುವುದಿಲ್ಲ,” ಎಂದು ಬಿಟ್ಟನು. |
೩. ಮೋಶೆ ಮತ್ತು ಆರೋನರು, “ಹಿಬ್ರಿಯರ ದೇವರು ನಮಗೆ ದರ್ಶನವಿತ್ತರು. ಅಪ್ಪಣೆ ಆದರೆ ನಾವು ಮರುಭೂಮಿಯಲ್ಲಿ ಮೂರು ದಿವಸದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸಿ ಬರುತ್ತೇವೆ. ಹಾಗೆ ಮಾಡದೆಹೋದರೆ ಅವರು ನಮ್ಮನ್ನು ವ್ಯಾಧಿಯಿಂದಲೋ ಕತ್ತಿಯಿಂದಲೋ ಸಂಹಾರ ಮಾಡುವರು,” ಎಂದರು. |
೪. ಅವರಿಗೆ ಆ ಈಜಿಪ್ಟರ ಅರಸನು, “ಎಲೈ ಮೋಶೆ - ಆರೋನರೇ, ನೀವು ಮಾಡುತ್ತಾ ಇರುವುದೇನು? ಈ ಜನರು ತಮ್ಮ ಕೆಲಸವನ್ನು ಬಿಡುವಂತೆ ಮಾಡುತ್ತಿದ್ದೀರಿ. ನಡೆಯಿರಿ ಗುಲಾಮಗಿರಿಗೆ” ಎಂದುಬಿಟ್ಟನು. |
೫. ಇದೂ ಅಲ್ಲದೆ ಆ ಫರೋಹನು, “ನೋಡಿ, ನಾಡಿನಲ್ಲಿ ಈ ಜನರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ! ಇವರು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇ ಕಾರಣ ಆಗುತ್ತಿದ್ದೀರಿ,” ಎಂದನು. |
೬. ಅದೇ ದಿನ, ಕೆಲಸಮಾಡಿಸುವವರನ್ನೂ ಮೇಸ್ತ್ರಿಗಳನ್ನೂ ಕರೆಯಿಸಿ, |
೭. \ಇನ್ನು ಮೇಲೆ ನೀವು ಈ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಕೂಡದು; ಅವರೇ ಹೋಗಿ ಹುಲ್ಲನ್ನು ಹುಡುಕಿಕೊಳ್ಳಲಿ. |
೮. ಆದರೆ ಇಟ್ಟಿಗೆಗಳ ಲೆಕ್ಕವನ್ನು ಎಂದಿನಂತೆ ಒಪ್ಪಿಸಲಿ.ಅದನ್ನು ಕಡಿಮೆ ಮಾಡಕೂಡದು. ಇವರು ಮೈಗಳ್ಳರು. ಆದ್ದರಿಂದಲೇ, ‘ನಾವು ಹೋಗಿ ನಮ್ಮ ದೇವರಿಗೆ ಬಲಿಯರ್ಪಿಸಿ ಬರುವುದಕ್ಕೆ ಅಪ್ಪಣೆಯಾಗಬೇಕು,’ ಎಂದು ಬೊಬ್ಬೆಹಾಕುತ್ತಾ ಇದ್ದಾರೆ. |
೯. ನೀವು ಅವರಿಂದ ಇನ್ನೂ ಕಷ್ಟಕರವಾದ ಕೆಲಸ ಮಾಡಿಸಬೇಕು. ಕೆಲಸ ಹೆಚ್ಚಾದರೆ ಸುಳ್ಳುಪೊಳ್ಳು ಮಾತುಗಳಿಗೆ ಕಿವಿಗೊಡಲು ಆಸ್ಪದಯಿರುವುದಿಲ್ಲ,” ಎಂದು ಆಜ್ಞಾಪಿಸಿದನು. |
೧೦. ಆದುದರಿಂದ ಕೆಲಸದ ಮೇಲ್ವಿಚಾರಕರೂ ಮೇಸ್ತ್ರಿಗಳೂ ಆ ಜನರಿಗೆ, “ನಿಮಗೆ ಹುಲ್ಲು ಕೊಡಕೂಡದೆಂದು ಫರೋಹನ ಅಪ್ಪಣೆಯಾಗಿದೆ. |
೧೧. ನೀವೇ ಹೋಗಿ ಎಲ್ಲಿಂದಾದರು ತಂದುಕೊಳ್ಳಿ. ಆದರೂ ನೀವು ಮಾಡಬೇಕಾದ ಕೆಲಸ ಮಾತ್ರ ಕಿಂಚಿತ್ತೂ ಕಡಿಮೆಯಾಗಕೂಡದು,” ಎಂದು ವಿಧಿಸಿದರು. |
೧೨. ಆ ಜನರು ಈಜಿಪ್ಟ್ ದೇಶದಲ್ಲೆಲ್ಲಾ ಸುತ್ತಿ, ಹುಲ್ಲು ಸಿಕ್ಕದೆ ಕೂಳೆಕಿತ್ತು ಕೂಡಿಸಿದರು. |
೧೩. ಮೇಲ್ವಿಚಾರಕರು, “ನಿಮಗೆ ಹುಲ್ಲಿದ್ದ ಕಾಲದಲ್ಲಿ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಆಯಾ ದಿನದಲ್ಲಿ ಮುಗಿಸಬೇಕು\ ಎಂದು ಹೇಳಿ ಅವಸರಪಡಿಸುತ್ತಿದ್ದರು. |
೧೪. “ನೀವು ಇಟ್ಟಿಗೆಗಳ ಲೆಕ್ಕವನ್ನು ಹಿಂದೆ ಒಪ್ಪಿಸುತ್ತಿದ್ದಂತೆ ನಿನ್ನೆ ಮತ್ತು ಇಂದು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ್ದ ಇಸ್ರಯೇಲ್ ಮೇಸ್ತ್ರಿಗಳನ್ನು ಹೊಡೆಸುತ್ತಿದ್ದರು. |
೧೫. ಈ ಇಸ್ರಯೇಲ್ ಮೇಸ್ತ್ರಿಗಳು ಫರೋಹನ ಬಳಿಗೆ ಬಂದು, “ಒಡೆಯಾ, ತಮ್ಮ ದಾಸರಾದ ನಮಗೆ ಹೀಗೆ ಮಾಡುವುದು ಸರಿಯೇ? |
೧೬. ಅಧಿಕಾರಿಗಳು ಹುಲ್ಲು ಒದಗಿಸದೆ ಇಟ್ಟಿಗೆಗಳನ್ನು ಮಾಡಬೇಕೆನ್ನುತ್ತಾರೆ. ಇದರಿಂದ ದಾಸರಾದ ನಾವು ಏಟು ತಿನ್ನಬೇಕಾಯಿತು. ತಪ್ಪು ತಮ್ಮ ಜನರದೇ,” ಎಂದು ದೂರಿತ್ತರು. |
೧೭. ಅದಕ್ಕೆ ಅವನು, “ನೀವು ಒಳ್ಳೆಯ ಮೈಗಳ್ಳರು! ನಾವು ಹೋಗಿ ಸರ್ವೇಶ್ವರನಿಗೆ ಬಲಿಯರ್ಪಿಸಿಬರಬೇಕು, ಎನ್ನುವುದಕ್ಕೆ ಇದೇ ಕಾರಣ. |
೧೮. ನಡೆಯಿರಿ ಕೆಲಸಕ್ಕೆ; ನಿಮಗೆ ಹುಲ್ಲು ಕೊಡುವುದಿಲ್ಲ; ಆದರೂ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಲೇಬೇಕು,” ಎಂದನು. |
೧೯. ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಕಟ್ಟಪ್ಪಣೆ ಆದುದರಿಂದ ಇಸ್ರಯೇಲ್ ಮೇಸ್ತ್ರಿಗಳು ತಾವು ಎಂಥ ಬಿಕ್ಕಟ್ಟಿಗೆ ಸಿಕ್ಕಿಕೊಂಡೆವೆಂದು ಗ್ರಹಿಸಿಕೊಂಡರು. |
೨೦. ಫರೋಹನ ಬಳಿಯಿಂದ ಹಿಂದಿರುಗಿದಾಗ ಅವರನ್ನು ಎದುರುಗೊಳ್ಳಲು ಮೋಶೆ ಮತ್ತು ಆರೋನರು ಕಾದಿದ್ದರು. |
೨೧. ಅವರಿಗೆ ಆ ಮೇಸ್ತ್ರಿಗಳು, “ನೀವು ಮಾಡಿದ ದುಷ್ಕೃತ್ಯವನ್ನು ವಿಚಾರಿಸಿ ಸರ್ವೇಶ್ವರ ನಿಮಗೆ ತಕ್ಕ ಶಿಕ್ಷೆಯನ್ನು ವಿಧಿಸಲಿ. ಏಕೆಂದರೆ ಫರೋಹನಿಗೂ ಅವನ ಸೇವಕರಿಗೂ ನಾವು ಅಸಹ್ಯರಾಗುವಂತೆ ಮಾಡಿಬಿಟ್ಟಿರಿ. ನಮ್ಮನ್ನು ಕೊಲ್ಲಲು ಅವರ ಕೈಗೆ ಕತ್ತಿಯನ್ನೇ ಕೊಟ್ಟಂತಾಗಿದೆ,” ಎಂದು ನಿಂದಿಸಿದರು. |
೨೨. ಆಗ ಮೋಶೆ ಸರ್ವೇಶ್ವರನ ಸನ್ನಿಧಿಗೆ ಮತ್ತೆ ಬಂದು, “ಸ್ವಾಮೀ, ಈ ಜನರಿಗೆ ಹೀಗೇಕೆ ಮಾಡಿದಿರಿ? ನನ್ನನ್ನೇಕೆ ಇಲ್ಲಿಗೆ ಕಳಿಸಿದಿರಿ? |
೨೩. ನಾನು ಫರೋಹನ ಬಳಿಗೆ ಹೋಗಿ ನಿಮ್ಮ ಹೆಸರಿನಲ್ಲಿ ಮಾತಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀವಾದರೋ ಅವರನ್ನು ಬಿಡುಗಡೆ ಮಾಡಲು ಏನನ್ನೂ ಮಾಡಿಲ್ಲ,” ಎಂದು ಮೊರೆಯಿಟ್ಟನು. |
ವಿಮೋಚನಾಕಾಂಡ ೬:೧-೩೦ |
೧. ಅದಕ್ಕೆ ಸರ್ವೇಶ್ವರ ಸ್ವಾಮಿ ಮೋಶೆಗೆ, “ನಾನು ಫರೋಹನಿಗೆ ಮಾಡಲು ಹೋಗುವುದನ್ನು ನೀನು ಇಷ್ಟರಲ್ಲೇ ನೋಡುವೆ. ಅವನು ನನ್ನ ಭುಜಬಲವನ್ನು ಕಂಡು ಅವರನ್ನು ಹೋಗಲು ಬಿಡುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ನಾಡಿನಿಂದ ಹೊರಡಿಸುವನು,” ಎಂದರು. |
೨. ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದರು: |
೩. “ನಾನು ಸರ್ವೇಶ್ವರ, ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ. |
೪. ಅಲ್ಲದೆ ಅವರು ಪ್ರವಾಸಿಗಳಾಗಿ ತಂಗಿದ್ದ ಕಾನಾನ್ ನಾಡನ್ನು ಅವರಿಗೆ ಸ್ವಂತ ನಾಡಾಗಿ ಕೊಡುವೆನೆಂದು ದೃಢವಾಗ್ದಾನ ಮಾಡಿದವನು ನಾನೇ. |
೫. ಈಜಿಪ್ಟಿನವರು ಗುಲಾಮರನ್ನಾಗಿಸಿಕೊಂಡಿರುವ ಇಸ್ರಯೇಲರ ಗೋಳು ನನಗೆ ಕೇಳಿಸಿದೆ. ನಾನು ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡಿದ್ದೇನೆ. |
೬. ಆದುದರಿಂದ ನೀನು ಇಸ್ರಯೇಲರಿಗೆ ನನ್ನ ಪರವಾಗಿ ಹೀಗೆಂದು ಹೇಳು: ‘ನಾನೇ ಸರ್ವೇಶ್ವರ. ಈಜಿಪ್ಟಿನವರು ನಿಮ್ಮ ಮೇಲೆ ಹೊರಿಸಿರುವ ದುಡಿಮೆಯನ್ನು ನೀಗಿಸುವೆನು, ದಾಸತ್ವವನ್ನು ತೊಲಗಿಸುವೆನು. ಅವರಿಗೆ ಕಠಿಣಶಿಕ್ಷೆಗಳನ್ನು ವಿಧಿಸುವೆನು, ನಿಮ್ಮನ್ನು ಸಂರಕ್ಷಿಸುವೆನು. |
೭. ನಾನು ನಿಮ್ಮನ್ನು ನನ್ನ ಪ್ರಜೆಯಾಗಿ ಮಾಡುವೆನು; ನಾನು ನಿಮ್ಮ ದೇವರಾಗಿರುವೆನು. ಈಜಿಪ್ಟಿನವರು ಹೊರಿಸುವ ದುಡಿಮೆಯನ್ನು ನಾನು ನಿಮ್ಮಿಂದ ಬಿಡಿಸಿದಾಗ ಸರ್ವೇಶ್ವರ ಎಂಬ ನಾನೇ ನಿಮ್ಮ ದೇವರೆಂದು ನಿಮಗೆ ತಿಳಿದುಬರುವುದು. |
೮. ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣ ಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು. |
೯. ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಆದರೂ ಅವನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಅವರ ಮನಸ್ಸು ಅಷ್ಟು ಕುಗ್ಗಿಹೋಗಿತ್ತು, ಅವರ ದಾಸತ್ವ ಅಷ್ಟು ಕ್ರೂರವಾಗಿತ್ತು. |
೧೦. ಆಗ ಸರ್ವೇಶ್ವರ ಮೋಶೆಯ ಸಂಗಡ ಮಾತನಾಡಿ, |
೧೧. “ನೀನು ಈಜಿಪ್ಟಿನವರ ಅರಸ ಫರೋಹನ ಬಳಿಗೆ ಹೋಗು. ಅವನಿಗೆ, ‘ಇಸ್ರಯೇಲರು ನಿನ್ನ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕು’ ಎಂದು ಹೇಳು,” ಎಂದರು. |
೧೨. ಅದಕ್ಕೆ ಮೋಶೆ ಸರ್ವೇಶ್ವರನ ಸನ್ನಿಧಿಯಲ್ಲಿ, “ಆಲಿಸಬೇಕು, ಇಸ್ರಯೇಲರೇ ನನ್ನ ಮಾತನ್ನು ಕೇಳಲಿಲ್ಲ; ಇನ್ನು ಫರೋಹನು ಕಿವಿಗೊಟ್ಟಾನೆ? ನನಗಾದರೂ ಚುರುಕಾದ ನಾಲಿಗೆಯಿಲ್ಲ,” ಎಂದನು. |
೧೩. ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಯೇಲರ ಬಳಿಗೂ ಅರಸ ಫರೋಹನ ಬಳಿಗೂ ಕಳಿಸಿದರು. |
೧೪. ಅವರ ಗೋತ್ರಗಳ ಮೂಲಪುರುಷರು ಇವರು: ಇಸ್ರಯೇಲನ ಜ್ಯೇಷ್ಠ ಪುತ್ರನಾದ ರೂಬೇನನಿಗೆ ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ ಎಂಬವರು ಮಕ್ಕಳು. ಇವರೇ ರೂಬೇನನಿಂದ ಉಂಟಾದ ಗೋತ್ರಗಳಿಗೆ ಮೂಲ ಪುರುಷರು. |
೧೫. ಸಿಮೆಯೋನನಿಗೆ ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಿಂದ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದ ಉಂಟಾದ ಗೋತ್ರಗಳಿಗೆ ಮೂಲಪುರುಷರು. |
೧೬. ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು. |
೧೭. ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ ಎಂಬವರು. |
೧೮. ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. ಕೆಹಾತನು ನೂರ ಮೂವತ್ತ ಮೂರು ವರ್ಷ ಬದುಕಿದ್ದನು. |
೧೯. ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ. |
೨೦. ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದ್ದನು. |
೨೧. ಇಚ್ಹಾರನ ಮಕ್ಕಳು - ಕೋರಹ, ನೆಫೆಗೆ ಮತ್ತು ಜಿಕ್ರೀ. |
೨೨. ಉಜ್ಜೀಯೇಲನ ಮಕ್ಕಳು - ಮೀಷಾಯೇಲ್, ಎಲ್ಚಾಫಾನ್ ಸಿತ್ರೀ. |
೨೩. ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆದ ಎಲೀಶೇಬಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರು ಹುಟ್ಟಿದರು. |
೨೪. ಕೋರಹನ ಮಕ್ಕಳು - ಅಸ್ಸೀರ್, ಎಲ್ಕಾನಾ ಮತ್ತು ಅಬಿಯಾಸಾಫ್. ಇವರೇ ಕೋರಹೀಯರ ಗೋತ್ರಸ್ಥಾಪಕರು. |
೨೫. ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಫಿನೇಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು. |
೨೬. “ತಮ್ಮ ತಮ್ಮ ಗೋತ್ರದ ಪ್ರಕಾರ ಇಸ್ರಯೇಲ್ ಜನರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬರುವುದಕ್ಕೆ ಸರ್ವೇಶ್ವರನಿಂದ ಆಜ್ಞೆಹೊಂದಿದ ಆರೋನ್ ಮತ್ತು ಮೋಶೆ ಇವರೇ. |
೨೭. ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಈಜಿಪ್ಟಿನ ಅರಸ ಫರೋಹನ ಸಂಗಡ ಮಾತಾಡಿದಂಥ ಮೋಶೆ ಮತ್ತು ಆರೋನರು ಇವರೇ. |
೨೮. ಸರ್ವೇಶ್ವರ ಸ್ವಾಮಿ ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿ, |
೨೯. “ನಾನು ಸರ್ವೇಶ್ವರ; ನಾನು ನಿನಗೆ ಹೇಳುವುದನ್ನೆಲ್ಲ ನೀನು ಈಜಿಪ್ಟಿನ ಅರಸ ಫರೋಹನ ಸನ್ನಿಧಿಯಲ್ಲಿ ಹೇಳಬೇಕು,” ಎಂದರು. |
೩೦. ಅದಕ್ಕೆ ಮೋಶೆ, “ಸ್ವಾಮೀ, ನಾನು ಮಾತಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು. |
ಕೀರ್ತನೆಗಳು ೧೬:೭-೧೧ |
೭. ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II |
೮. ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II |
೯. ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II |
೧೦. ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II |
೧೧. ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II |
ಜ್ಞಾನೋಕ್ತಿಗಳು ೫:೭-೧೪ |
೭. ಇಂತಿರಲು ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಬಿಟ್ಟು ಅಗಲದಿರು. |
೮. ಅವಳಿಂದ ದೂರವಿರಲಿ ನಿನ್ನ ಮಾರ್ಗ, ಸುಳಿಯದಿರು ಅವಳ ಮನೆಬಾಗಿಲ ಹತ್ತಿರ. |
೯. ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳ ವಶವಾದೀತು, ಜೋಕೆ! |
೧೦. ನಿನ್ನ ಸಿರಿಸಂಪತ್ತು ಪರರ ಮನೆ ತುಂಬೀತು, ನಿನ್ನ ದುಡಿಮೆಯ ಫಲ ಅನ್ಯನ ಮನೆ ಸೇರೀತು! |
೧೧. ಕಟ್ಟಕಡೆಗೆ ನಿನ್ನ ದೇಹವೆಲ್ಲ ಕರಗಿಹೋದೀತು; ಅಂಗಲಾಚಿ ನೀ ಕೊರಗಬೇಕಾದೀತು ಇಂತೆಂದು: |
೧೨. “ಅಕಟಕಟಾ ಶಿಸ್ತನ್ನೇ ನಾನು ದ್ವೇಷಿಸಿದೆನಲ್ಲಾ! ನನಗೆ ಕೊಡಲಾದ ತಿದ್ದುಪಾಟನ್ನು ತಾತ್ಸಾರಮಾಡಿದೆನಲ್ಲಾ! |
೧೩. ಗುರುಗಳ ಮಾತನ್ನು ಗಮನಿಸದೆ ಹೋದೆನಲ್ಲಾ! ಬೋಧಕರಿಗೆ ಕಿವಿಗೊಡದೆ ಹೋದೆನಲ್ಲಾ! |
೧೪. ದೇವಜನರ ಸಭೆಕೂಟಗಳಲ್ಲಿ ಎಲ್ಲಾ ತರದ ನಿಂದೆ ಆಪಾದನೆಗಳಿಗೆ ಗುರಿಯಾದೆನಲ್ಲಾ!” |
ಮತ್ತಾಯನು ೧೮:೨೧-೩೫ |
೨೧. ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾಮೀ, ನನಗೆ ವಿರುದ್ಧ ದ್ರೋಹಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. |
೨೨. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,” ಎಂದು ಯೇಸು ಉತ್ತರವಿತ್ತರು. |
೨೩. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. |
೨೪. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. |
೨೫. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. |
೨೬. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. |
೨೭. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ. |
೨೮. “ಆದರೆ ಅದೇ ಸೇವಕ ಹೊರಗೆಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. |
೨೯. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. |
೩೦. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. |
೩೧. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. |
೩೨. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. |
೩೩. ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. |
೩೪. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. |
೩೫. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು. |