A A A A A

ಅರಸುಗಳು ೧ ೫:೧-೧೮
೧. ದಾವೀದನಿಗೆ ಜೀವಮಾನದಲ್ಲೆಲ್ಲಾ ಆಪ್ತಮಿತ್ರನಾಗಿದ್ದ ಟೈರಿನ ಅರಸನಾದ ಹೀರಾಮನು, ಸೊಲೊಮೋನನು ತಂದೆಗೆ ಬದಲಾಗಿ ಪಟ್ಟಾಭಿಷೇಕ ಪಡೆದಿದ್ದಾನೆಂದು ಕೇಳಿ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.
೨. ಸೊಲೊಮೋನನು ದೂತರ ಮುಖಾಂತರ ಹೀರಾಮನಿಗೆ,
೩. “ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ನಮ್ಮ ತಂದೆ ದಾವೀದನಿಗೆ ಎಲ್ಲಾ ಶತ್ರುಗಳು ವಶವಾದರು. ಅಲ್ಲಿಯವರೆಗೆ ಅವರು ಸುತ್ತಲೂ ಯುದ್ಧಗಳನ್ನು ನಡೆಸಬೇಕಾಗಿತ್ತು. ಆದ್ದರಿಂದ ತಮ್ಮ ದೇವರಾದ ಸರ್ವೇಶ್ವರನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದರು. ಇದು ನಿಮಗೆ ತಿಳಿದ ವಿಷಯ.
೪. ನನಗಾದರೋ ನನ್ನ ದೇವರಾದ ಸರ್ವೇಶ್ವರ ಎಲ್ಲ ಕಡೆಗಳಲ್ಲೂ ಸಮಾಧಾನವನ್ನು ಅನುಗ್ರಹಿಸಿದ್ದಾರೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ವಿಪತ್ತು ದೂರವಾಗಿವೆ.
೫. ಸರ್ವೇಶ್ವರ ನನ್ನ ತಂದೆ ದಾವೀದನಿಗೆ, ‘ನಾನು ನಿನ್ನ ಸ್ಥಾನದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗ, ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ,’ ಎಂದು ಹೇಳಿದ್ದರು. ಆದುದರಿಂದ ನಾನು ನನ್ನ ದೇವರಾದ ಸರ್ವೇಶ್ವರನಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ.
೬. ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು; ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಸಿದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವುದಿಲ್ಲವೆಂದು ನಿನಗೆ ಗೊತ್ತಿದೆಯಲ್ಲವೆ?” ಎಂದು ಹೇಳಿಸಿದನು.
೭. ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟನು. “ಈ ಮಹಾಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತ ಮಗನನ್ನು ಅನುಗ್ರಹಿಸಿದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದು ನುಡಿದನು.
೮. ಇದೂ ಅಲ್ಲದೆ, ಅವನು ಸೊಲೊಮೋನನಿಗೆ, “ನೀನು ಹೇಳಿ ಕಳುಹಿಸಿದ್ದನ್ನು, ಕೇಳಿದೆನು; ದೇವದಾರು ವೃಕ್ಷಗಳನ್ನೂ ತುರಾಯಿಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು.
೯. ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ ಸಮುದ್ರಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ ಅಲ್ಲೆ ಬಿಚ್ಚಿಸುವೆನು; ನೀನು ಅವುಗಳನ್ನು ತೆಗೆದುಕೊಂಡು, ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆ,” ಎಂದು ಹೇಳಿಕಳುಹಿಸಿದನು.
೧೦. ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರಿನ ಮರಗಳನ್ನೂ ತುರಾಯಿಮರಗಳನ್ನೂ ಕೊಡುತ್ತಿದ್ದನು.
೧೧. ಸೊಲೊಮೋನನಾದರೋ ಪ್ರತಿವರ್ಷ ಅವನ ಮನೆಯವರ ಆಹಾರಕ್ಕಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿಯನ್ನೂ ನಾಲ್ಕು ಸಾವಿರ ಲೀಟರ್ ಅಪ್ಪಟ ಎಣ್ಣೆಯನ್ನೂ ಕೊಡುತ್ತಿದ್ದನು.
೧೨. ಸರ್ವೇಶ್ವರ ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದ್ದರು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಂದು ಒಪ್ಪಂದ ಮಾಡಿಕೊಂಡಿದ್ದರು.
೧೩. ಅರಸ ಸೊಲೊಮೋನನು, ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿಕೆಲಸಕ್ಕೆಂದು ಹಿಡಿದು,
೧೪. ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ, ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು.
೧೫. ಇದಲ್ಲದೆ, ಸೊಲೊಮೋನನಿಗೆ ಎಪ್ಪತ್ತು ಸಾವಿರಮಂದಿ ಹೊರೆಹೊರುವವರೂ ಎಂಬತ್ತು ಸಾವಿರಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರೂ ಇದ್ದರು.
೧೬. ಈ ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರುಮಂದಿ ಮೇಸ್ತ್ರಿಗಳನ್ನು ನೇಮಿಸಿದ್ದನು.
೧೭. ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು, ಸೊಲೊಮೋನನ ಅಪ್ಪಣೆಯಂತೆ, ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೊರೆಯುತ್ತಿದ್ದರು.
೧೮. ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕೆ ಬೇಕಾದ ಕಲ್ಲು, ಮರಗಳನ್ನು ಸಿದ್ಧಪಡಿಸಿದವರು ಇವರೇ.

ಅರಸುಗಳು ೧ ೬:೧-೩೮
೧. ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಾನೂರ ಎಂಬತ್ತನೆಯ ವರ್ಷದಲ್ಲಿ ಅಂದರೆ, ಇಸ್ರಯೇಲರ ಅರಸನಾದ ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಾದ ವೈಶಾಖ ಮಾಸದಲ್ಲಿ ಅರಸ ಸೊಲೊಮೋನನು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು.
೨. ಅವನು ಸರ್ವೇಶ್ವರನಿಗೆ ಕಟ್ಟಿಸಿದ ದೇವಾಲಯದ ಉದ್ದ ೨೭ ಮೀಟರ್, ಅಗಲ ೯ ಮೀಟರ್, ಎತ್ತರ ೧೩:೫ ಮೀಟರ್.
೩. ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು; ಅದರ ಉದ್ದಳತೆ ದೇವಾಲಯದ ಅಗಲಕ್ಕೆ ಸರಿಯಾಗಿ ೪:೫ ಮೀಟರ್, ಅಗಲಳತೆ ೯ ಮೀಟರ್.
೪. ಇದಲ್ಲದೆ, ಅವನು ಆಲಯಕ್ಕೆ ತೆರೆಯಲಾಗದ ಜಾಲಂಧರ ಕಿಟಕಿಗಳನ್ನಿಡಿಸಿದನು.
೫. ದೇವಾಲಯದ ಗೋಡೆಯ ಸುತ್ತಲೂ ಅಂದರೆ, ಪರಿಶುದ್ಧಸ್ಥಳ ಹಾಗು ಮಹಾಪರಿಶುದ್ಧಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು.
೬. ಕೆಳಗಿನ ಕೊಠಡಿಗಳ ಅಗಲ ೨:೨ ಮೀಟರ್; ಮೊದಲನೆಯ ಅಂತಸ್ತಿನ ಕೊಠಡಿಗಳ ಅಗಲ ೨:೭ ಮೀಟರ್; ಎರಡನೆಯ ಅಂತಸ್ತಿನ ಕೊಠಡಿಗಳ ಅಗಲ ೩:೧ ಮೀಟರ್. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಯಲ್ಲಿ ತೂತಾಗಬಾರದು ಎಂದು ಗೋಡೆಯ ಹೊರ ಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು.
೭. ದೇವಾಲಯವನ್ನು ಕಟ್ಟುವಾಗ, ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ, ಕಟ್ಟುವ ದಿವಸಗಳಲ್ಲೆಲ್ಲಾ ಸುತ್ತಿಗೆ, ಉಳಿ, ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವೂ ಕೇಳಿಸಲಿಲ್ಲ.
೮. ಕೆಳಗಿನ ಕೊಠಡಿಗಳಿಗೆ ಹೋಗುವ ಬಾಗಿಲು ಆಲಯದ ಬಲಪಾರ್ಶ್ವದಲ್ಲಿತ್ತು. ಅಲ್ಲಿಂದ ಮೊದಲನೆಯ ಅಂತಸ್ತಿಗೂ ಎರಡನೆಯ ಅಂತಸ್ತಿಗೂ ಹೋಗಬೇಕಾದರೆ ವಕ್ರಸೋಪಾನಗಳಿದ್ದವು.
೯. ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ, ಕೆಲಸ ಮುಗಿಸಿದನು.
೧೦. ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ೨:೨ ಮೀಟರುಗಳಂತೆ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಹೊಂದಿಕೊಂಡಿದ್ದವು.
೧೧. ಸರ್ವೇಶ್ವರಸ್ವಾಮಿ ಸೊಲೊಮೋನನಿಗೆ, “ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವೆ. ನನ್ನ ನಿಯಮವಿಧಿಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ಕೈಗೊಂಡು, ನೀನು ನಡೆಯುವುದಾದರೆ, ನಿನ್ನನ್ನು ಕುರಿತು ನಿನ್ನ ತಂದೆ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
೧೨. ***
೧೩. ನನ್ನ ಪ್ರಜೆಗಳಾದ ಇಸ್ರಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು,” ಎಂದು ಹೇಳಿದರು.
೧೪. ಹೀಗೆ ಸೊಲೊಮೋನನು ದೇವಾಲಯವನ್ನು ಕಟ್ಟಿಮುಗಿಸಿದನು.
೧೫. ದೇವಾಲಯದ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿಮರದ ಹಲಗೆಗಳನ್ನು ಹಾಕಿಸಿದನು.
೧೬. ಇದಲ್ಲದೆ, ದೇವಾಲಯದೊಳಗೆ ಹಿಂದಿನ ೯ ಮೀಟರ್ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಗರ್ಭಗುಡಿ, ಅಥವಾ ಮಹಾಪರಿಶುದ್ಧ ಸ್ಥಳವೆಂದು ಪ್ರತ್ಯೇಕಿಸಿದನು.
೧೭. ದೇವಾಲಯದ ಪರಿಶುದ್ಧ ಸ್ಥಳವೆನಿಸಿಕೊಳ್ಳುವ ಮುಂದಿನ ಭಾಗ ೧೮ ಮೀಟರ್ ಉದ್ದವಿತ್ತು.
೧೮. ದೇವಾಲಯದೊಳಗೆ ಕಲ್ಲು ಕಾಣಿಸದಂತೆ, ಗೋಡೆಯನ್ನೆಲ್ಲಾ ಬಳ್ಳಿಗಳೂ ಹೂವುಗಳೂ ಕೆತ್ತಿರುವ ದೇವದಾರಿನ ಹಲಗೆಗಳಿಂದ ಹೊದಿಸಿದನು.
೧೯. ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ‘ಗರ್ಭಗುಡಿ’ ಎಂದು ಪ್ರತ್ಯೇಕಿಸಿದನು.
೨೦. ಆ ಗರ್ಭಗುಡಿ ೯ ಮೀಟರ್ ಉದ್ದ, ೯ ಮೀಟರ್ ಅಗಲ, ೯ ಮೀಟರ್ ಎತ್ತರ ಇತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ ವೇದಿಯನ್ನು ದೇವದಾರುಮರದಿಂದಲೂ ಹೊದಿಸಿದನು.
೨೧. ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು. ಬಂಗಾರದ ತಗಡಿನಿಂದ ಹೊದಿಸಲಾಗಿದ್ದ ಮಹಾಪರಿಶುದ್ಧ ಸ್ಥಳದ ಎದುರಿನಲ್ಲಿ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು.
೨೨. ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧ ಸ್ಥಳಕ್ಕೆ ಸೇರಿದ ಪೀಠವನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು.
೨೩. ಇದಲ್ಲದೆ ಅವನು ಎಣ್ಣೇಮರದಿಂದ ೪:೪ ಮೀಟರ್ ಎತ್ತರವಾದ ಎರಡು ‘ಕೆರೂಬಿ’ಗಳನ್ನು ಮಾಡಿಸಿ ಅವುಗಳನ್ನು ಗರ್ಭಗುಡಿಯಲ್ಲಿರಿಸಿದನು.
೨೪. ಪ್ರತಿಯೊಂದು ಕೆರೂಬಿಯ ರೆಕ್ಕೆಗಳು ೨:೨ ಮೀಟರ್ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ತುದಿಯಿಂದ ತುದಿಗೆ ೪:೪ ಮೀಟರ್
೨೫. ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ೪:೪: ಮೀಟರ್. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇ ಆಗಿತ್ತು.
೨೬. ಅವೆರಡೂ ಒಂದೊಂದು ೪:೪ ಮೀಟರ್ ಎತ್ತರವಾಗಿದ್ದವು.
೨೭. ಅವನು ಅವುಗಳನ್ನು ದೇವಾಲಯದ ಗರ್ಭಗುಡಿಯಲ್ಲಿರಿಸಿದನು. ಅವುಗಳ ರೆಕ್ಕೆಗಳು ಚಾಚಿದವುಗಳಾಗಿದ್ದುದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆ ಈಚೆಯ ಗೋಡೆಗೂ ಎರಡನೆಯ ಕೆರೂಬಿಯ ಒಂದು ರೆಕ್ಕೆ ಆಚೆಯ ಗೋಡೆಗೂ ತಗುಲಿದ್ದವು; ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿ ಇದ್ದವು.
೨೮. ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು.
೨೯. ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಒಳಗೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿದನು.
೩೦. ದೇವಾಲಯದ ಒಳಗೆ ಮತ್ತು ಹೊರಗಿನ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು.
೩೧. ಗರ್ಭಗುಡಿಯ ಬಾಗಿಲಿಗೆ ಎಣ್ಣೇಮರದ ಕದಗಳನ್ನು ಹಚ್ಚಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು.
೩೨. ಎಣ್ಣೇಮರದ ಆ ಎರಡು ಕದಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ, ಕದಗಳಿಗೆ ಬಂಗಾರದ ತಗಡನ್ನು ಹೊದಿಸಿ, ಚಿತ್ರಗಳಿದ್ದಲ್ಲಿ ಆ ತಗಡನ್ನು ಬಡಿಸಿದನು.
೩೩. ಇದಲ್ಲದೆ, ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿ,
೩೪. ಅದಕ್ಕೆ ತುರಾಯಿಮರದ ಎರಡು ಕದಗಳನ್ನು ಹಚ್ಚಿಸಿದನು. ಪ್ರತಿಯೊಂದು ಕದವು ಎರಡು ಭಾಗವುಳ್ಳದ್ದಾಗಿ ಮಡಚುವುದಕ್ಕೆ ಬರುತ್ತಿತ್ತು.
೩೫. ಈ ಕದಗಳಲ್ಲಿ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆ ಇದ್ದಲ್ಲಿ ಆ ತಗಡನ್ನು ಬಡಿಸಿದನು.
೩೬. ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವದಾರುವಿನ ಕಂಬಗಳನ್ನೂ ಇರಿಸಿದನು.
೩೭. ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ವೈಶಾಖ ಮಾಸದಲ್ಲಿ ಸರ್ವೇಶ್ವರನ ಆಲಯಕ್ಕೆ ಅಸ್ತಿವಾರ ಹಾಕಲಾಯಿತು.
೩೮. ಹನ್ನೊಂದನೆಯ ವರ್ಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಅದರ ಎಲ್ಲಾ ಕಟ್ಟಡಗಳೂ ಯೋಜನೆಯ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವುದಕ್ಕೆ ಏಳು ವರ್ಷ ಹಿಡಿಯಿತು.

ಕೀರ್ತನೆಗಳು ೬೮:೨೧-೨೭
೨೧. ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II
೨೨. ಪ್ರಭುವಿನ ನುಡಿ: “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ I ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ I ಬಾಷಾನಿನಿಂದವರನು ನಾ ಮರಳಿ ಬರಮಾಡುವೆ I ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” II
೨೩. ***
೨೪. ಕಂಗೊಳಿಸುತಿದೆ ದೇವ, ನಿನ್ನ ಭವ್ಯ ಮೆರವಣಿಗೆ I ನನ್ನರಸ ದೇವನು ನಡೆವ ತನ್ನಾ ಗರ್ಭಗುಡಿಗೆ II
೨೫. ಮುಂಗಡೆಯಲಿದೋ ಹಾಡುಗಾರರು I ಹಿಂಗಡೆಯಲಿದೋ ವಾದ್ಯಗಾರರು I ನಡುವೆ ದಮ್ಮಡಿ ಬಡಿವ ಮಹಿಳೆಯರು II
೨೬. “ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು I “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು I
೨೭. ಮುನ್ನಡೆಯುತ್ತಿಹರಿದೋ ಕಿರಿಯ ಕುಲದ ಬೆನ್ಯಮೀನರು I ಗುಂಪಾಗಿ ಬರುತಿಹರು ಯೆಹೂದ್ಯ ಕುಲದ ಗುರುಹಿರಿಯರು I ಹಿಂಬಾಲಿಸುತಿಹರು ಜೆಬುಲೋನ್, ನಫ್ತಾಲಿ ಗೋತ್ರದವರು II

ಜ್ಞಾನೋಕ್ತಿಗಳು ೧೭:೧೩-೧೫
೧೩. ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು.
೧೪. ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದುಬಿಡು.
೧೫. ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.

ಯೊವಾನ್ನನು ೧೦:೨೪-೪೨
೨೪. ಯೆಹೂದ್ಯರು ಅವರನ್ನು ಸುತ್ತುವರಿದು, “ಇನ್ನೆಷ್ಟುಕಾಲ ನಮ್ಮನ್ನು ಸಂಶಯದಲ್ಲಿರಿಸುವೆ?ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು.
೨೫. ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ.
೨೬. ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ.
೨೭. ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
೨೮. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು,
೨೯. ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು.
೩೦. ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.
೩೧. ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು.
೩೨. ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು.
೩೩. ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ,” ಎಂದು ಉತ್ತರಕೊಟ್ಟರು.
೩೪. ಆಗ ಯೇಸು, “ ‘ನೀವು ದೇವರುಗಳು’ ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ?
೩೫. ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ.
೩೬. ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ?
೩೭. ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ.
೩೮. ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
೩೯. ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು.
೪೦. ಬಳಿಕ ಯೇಸು ಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು.
೪೧. ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು.
೪೨. ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.