A A A A A

ಸಮುವೇಲನು ೨ ೨೧:೧-೨೨
೧. ದಾವೀದನ ಕಾಲದಲ್ಲಿ ಮೂರು ವರ್ಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದಾಗ, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೂ ಅವನ ಮನೆಯವರ ಮೇಲೂ ರಕ್ತಾಪರಾಧ ಇರುತ್ತದೆ,” ಎಂಬ ಉತ್ತರ ದೊರಕಿತು.
೨. (ಗಿಬ್ಯೋನ್ಯರು ಇಸ್ರಯೇಲ್ ಕುಲಗಳಿಗೆ ಸೇರಿದವರಲ್ಲ; ಅವರು ಅಳಿಯದೆ ಉಳಿದ ಅಮೋರಿಯರಷ್ಟೇ). ಇಸ್ರಯೇಲರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿ ಇದ್ದರು. ಆದರೂ ಸೌಲನು ಇಸ್ರಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನೂ ನಿರ್ನಾಮಗೊಳಿಸಬೇಕೆಂದಿದ್ದನು.
೩. ಆಗ ಅರಸ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮ್ಮ ಪರವಾಗಿ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಕೊಟ್ಟರೆ ನೀವು ಸರ್ವೇಶ್ವರನ ಪ್ರಜೆಯನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
೪. ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯ ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಯೇಲರನ್ನು ಕೊಲ್ಲುವ ಅಧಿಕಾರ ನಮಗಿಲ್ಲ,” ಎಂದು ಉತ್ತರಕೊಟ್ಟರು. ಅರಸನು ಅವರಿಗೆ, “ಏನು ಮಾಡಬೇಕು ಹೇಳಿ; ಮಾಡುತ್ತೇನೆ,” ಎಂದನು.
೫. ಅವರು, “ನಮ್ಮನ್ನು ಇಸ್ರಯೇಲ್ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸಿ.
೬. ಸರ್ವೇಶ್ವರನಿಂದ ಆಯ್ಕೆಯಾದ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕುತ್ತೇವೆ,” ಎಂದರು. ಅರಸನು, “ಆಗಲಿ, ಒಪ್ಪಿಸುತ್ತೇನೆ,” ಎಂದನು.
೭. ದಾವೀದನು ತಾನು ಸೌಲನ ಮಗ ಯೋನಾತಾನನಿಗೆ ಸರ್ವೇಶ್ವರನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನೆದು, ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
೮. ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ, ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರೀಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ತೆಗೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದನು.
೯. ಅವರು ಇವರನ್ನು ಕೊಂದು ಗುಡ್ಡದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕಿದರು. ಈ ಏಳುಮಂದಿ ಏಕಕಾಲದಲ್ಲಿ ಹತರಾದರು. ಇವರನ್ನು ಕೊಂದಾಗ ಜವೆಗೋದಿ ಸುಗ್ಗಿಯು ಆರಂಭ ಆಗಿತ್ತು.
೧೦. ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು ಅದನ್ನು ಬಂಡೆಯ ಮೇಲೆ ಹಾಸಿ ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಆ ಗೋಣಿತಟ್ಟಿನ ಮೇಲೆ ಕುಳಿತುಕೊಂಡು ಹಗಲಿನಲ್ಲಿ ಆಕಾಶದ ಪಕ್ಷಿಗಳಾಗಲಿ ಇರುಳಿನಲ್ಲಿ ಕಾಡುಮೃಗಗಳಾಗಲಿ ಆ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.
೧೧. ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವನ್ನು ದಾವೀದನಿಗೆ ತಿಳಿಸಲಾಯಿತು.
೧೨. ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕಾಗಿ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
೧೩. ದಾವೀದನು ಯಾಬೇಷಿನಲ್ಲಿದ್ದ ಸೌಲ ಹಾಗು ಯೋನಾತಾನರ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಈ ಮನುಷ್ಯರ ಎಲುಬುಗಳನ್ನೂ ತೆಗೆದುಕೊಂಡು
೧೪. ಅವುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದನಂತರ ನಾಡಿನ ಮೇಲೆ ದೇವರಿಗಿದ್ದ ಕೋಪ ಶಮನವಾಯಿತು.
೧೫. ಒಂದು ಕಾಲದಲ್ಲಿ ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಮತ್ತೆ ಯುದ್ಧ ನಡೆಯಿತು. ದಾವೀದನು ತನ್ನ ಸೈನಿಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
೧೬. ಅವನನ್ನು ರೆಫಾಯರಲ್ಲೊಬ್ಬನಾದ ಇಷ್ಬೀಬೆನೋಬ್ ಎಂಬವನು ಕೊಲ್ಲುವುದಕ್ಕಿದ್ದನು. ಅವನ ಭರ್ಜಿಯ ತಾಮ್ರ ಮುನ್ನೂರು ಬೆಳ್ಳಿ ನಾಣ್ಯದ ತೂಕದ್ದು; ಅವನು ಸೊಂಟಕ್ಕೆ ಒಂದು ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
೧೭. ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಯೇಲರ ಆಶಾಜ್ಯೋತಿ ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು,” ಎಂದು ಖಂಡಿತವಾಗಿ ಹೇಳಿದರು.
೧೮. ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕ್ಕೆ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
೧೯. ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೆತ್ಲೆಹೇಮಿನವನಾದ ಯಾರೇಯೋ ರೆಗೀಮ್ ಎಂಬವನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಆ ಗೊಲ್ಯಾತನ ಭರ್ಜಿಯ ಹಿಡಿಕೆ ನೇಯಿಗಾರರ ಕುಂಟೆಯಷ್ಟು ಗಾತ್ರ ಇತ್ತು.
೨೦. ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ - ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನು.
೨೧. ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮೆಯಾನನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
೨೨. ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.

ಸಮುವೇಲನು ೨ ೨೨:೧-೫೧
೧. ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು:
೨. ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲು ಕೋಟೆ, ಆತನೇ ವಿಮೋಚಕ ನನಗೆ
೩. ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ.
೪. ಸರ್ವೇಶ್ವರನು ಸ್ತುತ್ಯಾರ್ಹನು ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು
೫. ಕುತ್ತಿಗೆಗೆ ಬಂದಿದ್ದವು ಸಾವಿನ ಅಲೆಗಳು ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು.
೬. ಸುತ್ತಿಕೊಂಡಿದ್ದವು ಪಾತಾಳಪಾಶಗಳು ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು.
೭. ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.
೮. ಆಗ ಕಂಪಿಸಿತು ಭೂಮಿ ಗಡಗಡನೆ ಕದಲಿದವು ಆಗಸದಸ್ತಿವಾರಗಳು ಮಿಲಮಿಲನೆ ಏಕೆನೆ ಸಿಟ್ಟೇರಿತ್ತು ಆತನಿಗೆ.
೯. ಹೊರಬಂದಿತು ಹೊಗೆ ಆತನ ಮೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ.
೧೦. ಆಕಾಶವನೆ ಬಾಗಿಸಿ ಆತನಿಳಿದು ಬರಲು ಸೇರಿತು ಆತನ ಕಾಲಡಿ ಕಾರ್ಮುಗಿಲು.
೧೧. ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ ಕಾಣಿಸಿಕೊಂಡನು ವಾಯುರೆಕ್ಕೆಗಳ ವೇಗದಲಿ.
೧೨. ಕತ್ತಲನು, ಜಲಮಯ ಮೇಘಗಳನು ಸುತ್ತಲು ಕವಿಸಿಕೊಂಡನು ಛತ್ರಾಂಬರದೊಳು.
೧೩. ಉರಿಗೆಂಡಗಳು ಹೊರಟುಬರುತ್ತಿದ್ದವು ಅಷ್ಟು ಪ್ರಜ್ವಲವಾಗಿತ್ತು ಆತನ ಸಾನ್ನಿಧ್ಯವು.
೧೪. ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ ಮೊಳಗಿತು ವಾಣಿ ಆ ಪರಮೋನ್ನತನಿಂದ.
೧೫. ಚದರಿಸಿದನು ಶತ್ರುಗಳನು ಬಾಣಗಳನೆಸೆದು ತಳಮಳಗೊಳಿಸಿದನವರನು ಸಿಡಿಲನು ಹೊಡೆದು.
೧೬. ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.
೧೭. ಮೇಲಣಾಲೋಕದಿಂದ ಹಿಡಿದುಕೊಂಡ ಎನ್ನನು ಕೈಚಾಚಿ ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ.
೧೮. ನನ್ನ ಬಿಡಿಸಿ ರಕ್ಷಿಸಿದನು ಶತ್ರುಗಳಿಂದ ನನಗಿಂತ ಪುಷ್ಟ, ಬಲಿಷ್ಠ ಹಗೆಗಳಿಂದ.
೧೯. ನನ್ನ ಮೇಲೆರಗಿದ್ದರಾ ಹಗೆಗಳು ದುರಂತ ಕಾಲದಲಿ ನನಗುದ್ಧಾರಕನಾದ ಸರ್ವೇಶ್ವರನು, ಆ ವಿಪತ್ಕಾಲದಲಿ.
೨೦. ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ ಅಕ್ಕರೆಯಿಂದ ಮೆಚ್ಚಿ ನನಗಾದನು ರಕ್ಷೆ.
೨೧. ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕ ಹಾಗೆ.
೨೨. ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ.
೨೩. ಆತನ ವಿಧಿನಿಯಮಗಳನ್ನು ಕೈಬಿಡದೆ ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣ ಮುಂದೆ.
೨೪. ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ.
೨೫. ನಾ ನೀತಿವಂತ, ನಿರಪರಾಧಿಯೆಂದರಿತು ನನಗಿತ್ತನಾ ಸರ್ವೇಶ್ವರ ತಕ್ಕ ಪ್ರತಿಫಲವನು.
೨೬. ಕರುಣೆಯುಳ್ಳವನಿಗಾತ ಕರುಣಾಮಯಿ ದೋಷರಹಿತನಿಗಾತ ನಿರ್ದೋಷಿ.
೨೭. ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು.
೨೮. ದೀನದಲಿತರನು ಉದ್ಧರಿಸುವನು ಗರ್ವಿಗಳನು ಗುರುತಿಸಿ ತಗ್ಗಿಸುವನು.
೨೯. ಹೇ ಸರ್ವೇಶ್ವರಾ, ನೀನೆನಗೆ ಜ್ಯೋತಿ ಕತ್ತಲನು ನೀಗಿಸಿ, ಬೆಳಕನು ನೀಡುತಿ.
೩೦. ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ.
೩೧. ದೇವರ ಮಾರ್ಗ ದೋಷರಹಿತ ಸರ್ವೇಶ್ವರನ ವಚನ ಪರಮಪುನೀತ ಆಶ್ರಿತರೆಲ್ಲರಿಗಾತ ರಕ್ಷಣಾಕವಚ.
೩೨. ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು?
೩೩. ದೇವನೇ ನನಗೆ ಭದ್ರವಾದ ದುರ್ಗ ಆತನಿಂದಲೇ ಸರಾಗ ನನ್ನ ಮಾರ್ಗ.
೩೪. ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ.
೩೫. ಯುದ್ಧವಿದ್ಯೆಯ ಕಲಿತೆ ಆತನಿಂದಲೆ ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ.
೩೬. ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ.
೩೭. ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ.
೩೮. ಸದೆಬಡಿವೆನು ಶತ್ರುಗಳನು ಬೆನ್ನಟ್ಟಿ ಅವರನು ನಿರ್ಮೂಲ ಮಾಡದೆ ಬರೆ ಹಿಂದಿರುಗಿ.
೩೯. ಅವರನು ಹೊಡೆದೆ ಮತ್ತೆ ಏಳದಂತೆ ಅವರನು ಮಾಡಿದೆ ಕಾಲಿಗೆ ಬೀಳುವಂತೆ.
೪೦. ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು ತಗ್ಗಿಸಿದೆ ಎದುರಾಳಿಗಳ ನನಗಧೀನ ಮಾಡಿಬಿಟ್ಟು.
೪೧. ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು ಆ ಹಗೆಗಳನು ನಿರ್ಮೂಲಮಾಡಿದೆ ನಾ ಗುರಿಯಿಟ್ಟು.
೪೨. ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ ಸರ್ವೇಶ್ವರನಿಗೆ ಮೊರೆಯಿಟ್ಟರೂ ಅವರಿಗೆ ದೊರಕಲಿಲ್ಲ ಉತ್ತರ.
೪೩. ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.
೪೪. ನನ್ನ ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ ನಾನರಿಯದ ಜನರನ್ನೂ ನನಗಧೀನರನ್ನಾಗಿಸಿದೆ.
೪೫. ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ.
೪೬. ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.
೪೭. ಸರ್ವೇಶ್ವರನು ಚೈತನ್ಯಸ್ವರೂಪನು ನನ್ನುದ್ಧಾರಕನವಗೆ ಸ್ತುತಿಸ್ತೋತ್ರವು ನನ್ನಾಶ್ರಯಸಿರಿ ದೇವಗೆ ಜಯಕಾರವು.
೪೮. ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ.
೪೯. ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ ಎದುರಾಳಿಗೆ ತಪ್ಪಿಸಿ ನನ್ನನುನ್ನತಿಗೇರಿಸಿದೆ ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ.
೫೦. ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ.
೫೧. ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.

ಕೀರ್ತನೆಗಳು ೬೮:೧-೬
೧. ಎಚ್ಚರಗೊಳ್ಳಲಿ, ದೇವನೆಚ್ಚರಗೊಳ್ಳಲಿ I ಆತನ ಶತ್ರುಗಳೆಲ್ಲರು ಚದರಿಹೋಗಲಿ I ಆತನ ವಿರೋಧಿಗಳು ಪಲಾಯನ ಗೈಯಲಿ II
೨. ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ I ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ II
೩. ಸಜ್ಜನರಾದರೊ ಸಂತೋಷಿಸಲಿ I ದೇವರ ಮುಂದೆ ಆನಂದಿಸಲಿ I ಅತುಳ ಹರ್ಷಾನಂದಗೊಳ್ಳಲಿ II
೪. ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು I ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು I “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು II
೫. ದಿವ್ಯಧಾಮದಲ್ಲಿಹ ಆ ದೇವ I ತಬ್ಬಲಿಗೆ ತಂದೆ, ವಿಧವೆಗಾಶ್ರಯ II
೬. ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ I ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ I ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ II

ಜ್ಞಾನೋಕ್ತಿಗಳು ೧೭:೨-೪
೨. ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು.
೩. ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ.
೪. ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ.

ಯೊವಾನ್ನನು ೮:೨೮-೫೯
೨೮. ಎಂದೇ ಯೇಸು ಮತ್ತೆ ಇಂತೆಂದರು: “ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನು’ ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು.
೨೯. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ.”
೩೦. ಯೇಸು ಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು.
೩೧. ಯೇಸು ಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು.
೩೨. ನೀವು ಸತ್ಯವನ್ನು ಅರಿತುಕೊಳ್ಳುವಿರಿ, ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು.
೩೩. ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.
೩೪. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ.
೩೫. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ.
೩೬. ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು.
೩೭. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ.
೩೮. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು.
೩೯. ಆಗ ಆ ಯೆಹೂದ್ಯರು, ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ.
೪೦. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ.
೪೧. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು.
೪೨. ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.
೪೩. ನಾನು ಹೇಳುವುದು ನಿಮಗೆ ಅರ್ಥವಾಗುವುದಿಲ್ಲ, ಏಕೆ? ನನ್ನ ಸಂದೇಶಕ್ಕೆ ಕಿವಿಗೊಡಲು ನಿಮ್ಮಿಂದಾಗದಿರುವುದೇ ಇದಕ್ಕೆ ಕಾರಣ.
೪೪. ಸೈತಾನನೇ ನಿಮಗೆ ತಂದೆ; ಆ ನಿಮ್ಮ ತಂದೆ ಮಾಡಬಯಸುವುದನ್ನು ನೀವು ಮಾಡಬಯಸುತ್ತೀರಿ; ಮೊತ್ತ ಮೊದಲಿನಿಂದಲೂ ಅವನು ಕೊಲೆಪಾತಕ. ಸತ್ಯವೆಂಬುದೇ ಅವನಲ್ಲಿ ಇಲ್ಲದ ಕಾರಣ ಅವನು ಸತ್ಯಪರನಲ್ಲ. ಸುಳ್ಳಾಡುವಾಗ ಅವನು ತನಗೆ ಸಹಜವಾದುದನ್ನೇ ಆಡುತ್ತಾನೆ. ಅವನು ಸುಳ್ಳುಗಾರ. ಸುಳ್ಳಿನ ಮೂಲಪುರುಷನೇ ಅವನು.
೪೫. ನಾನು ನುಡಿಯುವುದಾದರೋ ಸತ್ಯವನ್ನೇ. ಆದುದರಿಂದಲೇ ನಿಮಗೆ ನನ್ನಲ್ಲಿ ನಂಬಿಕೆ ಇಲ್ಲ.
೪೬. ನನ್ನಲ್ಲಿ ತಪ್ಪಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಆಡುವುದಾದರೆ ನನ್ನನ್ನು ನೀವು ನಂಬುವುದಿಲ್ಲವೇಕೆ?
೪೭. ದೇವರ ಮಕ್ಕಳು ದೇವರ ಮಾತಿಗೆ ಕಿವಿಗೊಡುತ್ತಾರೆ. ನೀವೋ ದೇವರ ಮಕ್ಕಳಲ್ಲ, ಆದುದರಿಂದಲೇ ಕಿವಿಗೊಡುವುದಿಲ್ಲ,” ಎಂದು ನುಡಿದರು.
೪೮. ಆಗ ಯೆಹೂದ್ಯರಲ್ಲಿ ಕೆಲವರು ಯೇಸು ಸ್ವಾಮಿಗೆ, “ನೀನು ಸಮಾರಿಯದವನು. ದೆವ್ವಹಿಡಿದವನು, ಎಂದು ನಾವು ಹೇಳಿದ್ದು ಸರಿಯಾಗಿದೆ ಅಲ್ಲವೆ?” ಎಂದರು.
೪೯. ಅದಕ್ಕೆ ಯೇಸು, “ನಾನು ದೆವ್ವಹಿಡಿದವನಲ್ಲ, ನನ್ನ ಪಿತನನ್ನು ನಾನು ಗೌರವಿಸುತ್ತೇನೆ. ನೀವಾದರೋ ನನ್ನನ್ನು ಅವಮಾನಪಡಿಸುತ್ತೀರಿ.
೫೦. ನನ್ನ ಘನತೆಗೌರವವನ್ನು ನಾನು ಅಪೇಕ್ಷಿಸುವುದಿಲ್ಲ. ಅದನ್ನು ಅಪೇಕ್ಷಿಸುವವರು ಬೇರೊಬ್ಬರಿದ್ದಾರೆ. ನನ್ನ ಪರವಾಗಿ ತೀರ್ಮಾನ ಮಾಡುವುದೂ ಅವರೇ.
೫೧. ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ,” ಎಂದರು.
೫೨. “ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ;
೫೩. ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಠನೋ? ಆತನೂ ಸಾವಿಗೀಡಾದನು. ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?” ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು.
೫೪. ಯೇಸು ಪ್ರತ್ಯುತ್ತರವಾಗಿ, “ನನ್ನ ಘನತೆಗೌರವವನ್ನು ನಾನೇ ಸಾರ ಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ‘ಅವರು ನಮ್ಮ ದೇವರು’ ಎಂದು ನೀವು ಹೇಳಿಕೊಳ್ಳುತ್ತೀರಿ.
೫೫. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ.
೫೬. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು,” ಎಂದು ಉತ್ತರಕೊಟ್ಟರು.
೫೭. ಯೆಹೂದ್ಯರು, “ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಎಂದರು.
೫೮. ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರುನುಡಿದರು.
೫೯. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟುಹೋದರು.