A A A A A

ಆದಿಕಾಂಡ ೪೧:೧-೫೭
೧. ಎರಡು ವರ್ಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು.
೨. ಆಗ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಆ ನದಿಯೊಳಗಿಂದ ಬಂದು ಜೊಂಡು ಹುಲ್ಲಿನಲ್ಲಿ ಮೇಯುತ್ತಿದ್ದವು.
೩. ಅವುಗಳ ಹಿಂದೆಯೇ ಒಣಕಲಾದ ಏಳು ಬಡ ಹಸುಗಳು ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಹಸುಗಳ ಹತ್ತಿರ ನದಿಯ ತೀರದಲ್ಲೇ ನಿಂತವು.
೪. ಒಣಕಲಾದ ಈ ಬಡ ಹಸುಗಳು ಅಚ್ಚುಕಟ್ಟಾದ ಆ ಕೊಬ್ಬಿದ ಹಸುಗಳನ್ನು ತಿಂದುಬಿಟ್ಟವು. ಅಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು.
೫. ಫರೋಹನಿಗೆ ಮತ್ತೆ ನಿದ್ರೆ ಹತ್ತಿದಾಗ ಅವನಿಗೆ ಇನ್ನೊಂದು ಕನಸುಬಿತ್ತು. ಅದರಲ್ಲಿ ಕಾಳುತುಂಬಿದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು.
೬. ಅವುಗಳ ಹಿಂದೆಯೇ ಮೂಡಣಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
೭. ಬತ್ತಿಹೋಗಿದ್ದ ಈ ತೆನೆಗಳು, ಕಾಳುತುಂಬಿದ್ದ ಆ ಏಳು ಬಲಿತ ತೆನೆಗಳನ್ನು ನುಂಗಿಬಿಟ್ಟವು. ಅಷ್ಟರೊಳಗೆ ಫರೋಹನು ಎಚ್ಚೆತ್ತು, ತಾನು ಕಂಡದ್ದು ಕನಸೆಂದು ತಿಳಿದುಕೊಂಡ.
೮. ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡು ಇತ್ತು. ಈಜಿಪ್ಟ್ ದೇಶದ ಎಲ್ಲ ಜೋಯಿಸರನ್ನೂ ವಿದ್ವಾಂಸರನ್ನೂ ಬರಮಾಡಿದ. ಅವರಿಗೆ ತನ್ನ ಕನಸನ್ನು ವಿವರಿಸಿದ. ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ.
೯. ಆಗ ಪಾನಸೇವಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಒಡೆಯಾ, ಈ ದಿನತಾನೆ ನನ್ನ ನೆನಪಿಗೆ ಬರುತ್ತಿದೆ.
೧೦. ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು, ನನ್ನನ್ನೂ ಆ ಮುಖ್ಯ ಅಡಿಗೆಭಟ್ಟನನ್ನೂ ದಳಪತಿಯ ವಠಾರದಲ್ಲಿ ಇರುವ ಸೆರೆಯಲ್ಲಿ ಇಟ್ಟಿದ್ದಿರಿ. ಅಲ್ಲಿದ್ದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು
೧೧. ಒಬ್ಬೊಬ್ಬನ ಕನಸಿಗೂ ಬೇರೆಬೇರೆ ಅರ್ಥವಿತ್ತು.
೧೨. ಹಿಬ್ರಿಯನಾದ ಒಬ್ಬ ಯುವಕ ನಮ್ಮ ಸಂಗಡ ಅಲ್ಲಿದ್ದ. ಅವನು ದಳಪತಿಯವರ ಸೇವಕ. ನಾವು ನಮ್ಮ ಕನಸನ್ನು ಅವನಿಗೆ ತಿಳಿಸಿದೆವು. ಅವನು ಆ ಕನಸುಗಳಿಗೆ ಸರಿಯಾದ ಅರ್ಥವನ್ನು ಹೇಳಿದ.
೧೩. ಅದು ಮಾತ್ರವಲ್ಲ, ಅವನು ಹೇಳಿದ ಪ್ರಕಾರವೇ ಆಯಿತು. ನನಗೆ ನೌಕರಿ ಮತ್ತೆ ದೊರಕಿತು. ಆ ಮುಖ್ಯ ಅಡಿಗೆಭಟ್ಟನನ್ನೋ ನೇಣುಹಾಕಲಾಯಿತು,’ ಎಂದು ಸನ್ನಿಧಿಯಲ್ಲಿ ಅರಿಕೆಮಾಡಿದ.
೧೪. ಇದನ್ನು ಕೇಳಿದ ಫರೋಹನು ಜೋಸೆಫನನ್ನು ಕರೆತರುವಂತೆ ಆಳುಗಳನ್ನು ಕಳಿಸಿದ. ಅವರು ಬಂದು ಅವನನ್ನು ಸೆರೆಯಿಂದ ತ್ವರೆಯಾಗಿ ಬಿಡುಗಡೆ ಮಾಡಿದರು. ಜೋಸೆಫನು ಕ್ಷೌರಮಾಡಿಕೊಂಡು, ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಯಲ್ಲಿ ಹಾಜರಾದ.
೧೫. ಫರೋಹನು ಅವನಿಗೆ, “ನಾನು ಒಂದು ಕನಸುಕಂಡೆ, ಅದರ ಅರ್ಥ ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳಬಲ್ಲೆ ಎಂಬ ಸಮಾಚಾರ ಕೇಳಿದ್ದೇನೆ,” ಎಂದ.
೧೬. ಜೋಸೆಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರಕೊಡಬಲ್ಲರು,” ಎಂದು ಹೇಳಿದ.
೧೭. ಆಗ ಫರೋಹನು ಜೋಸೆಫನಿಗೆ, “ಕನಸಿನಲ್ಲಿ ನಾನು ನೈಲ್ ನದಿಯ ತೀರದಲ್ಲಿ ನಿಂತಿದ್ದೆ.
೧೮. ನದಿಯೊಳಗಿಂದ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಬಂದು ಜೊಂಡುಹುಲ್ಲಿನಲ್ಲಿ ಮೇಯುತ್ತಿದ್ದವು.
೧೯. ಅವುಗಳ ಹಿಂದೆಯೆ ಬಹಳ ಒಣಕಲಾದ ಹಾಗೂ ಸಣಕಲಾದ, ಬೇರೆ ಏಳು ಬಡಹಸುಗಳು ಬಂದವು. ಅಂಥ ಬಡಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಲ್ಲೂ ನೋಡಿದ್ದಿಲ್ಲ.
೨೦. ಅದಲ್ಲದೆ, ಸಣಕಲಾಗಿದ್ದ ಆ ಬಡಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು.
೨೧. ತಿಂದರೂ ತಿಂದಂತೆಯೇ ತೋರಲಿಲ್ಲ. ಮೊದಲಿದ್ದಂತೆಯೇ ಬಡಕಲಾಗಿದ್ದವು. ಅಷ್ಟರ ಒಳಗೆ ನನಗೆ ಎಚ್ಚರವಾಯಿತು.
೨೨. ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಕಾಳುತುಂಬಿದ್ದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿಬಂದವು.
೨೩. ಅವುಗಳ ಹಿಂದೆಯೆ, ಮೂಡಣ ಗಾಳಿಯಿಂದ ಒಣಗಿ, ಬತ್ತಿ, ಕೆಟ್ಟುಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
೨೪. ಬತ್ತಿಹೋಗಿದ್ದ ತೆನೆಗಳು ಕಾಳು ತುಂಬಿದ್ದ ಆ ಏಳು ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆ; ಅವುಗಳ ಅರ್ಥವನ್ನು ವಿವರಿಸಿ ಹೇಳಲು ಅವರಲ್ಲಿ ಯಾರಿಂದಲೂ ಆಗಲಿಲ್ಲ.”
೨೫. ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ.
೨೬. ಆ ಏಳು ಒಳ್ಳೆಯ ಹಸುಗಳೇ ಏಳು ವರ್ಷಗಳು; ಆ ಏಳು ಒಳ್ಳೆಯತೆನೆಗಳೂ ಏಳು ವರ್ಷಗಳು; ಎರಡು ಕನಸುಗಳ ಅರ್ಥ ಒಂದೇ.
೨೭. ಒಳ್ಳೆಯ ಹಸುಗಳ ಹಿಂದೆ ಬಂದ ಒಣಕಲಾಗಿದ್ದ ಆ ಏಳು ಬಡಹಸುಗಳು ಮತ್ತು ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳು ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ.
೨೮. ನಾನು ತಮಗೆ ಅರಿಕೆಮಾಡಿದಂತೆ ದೇವರು ಮಾಡಬೇಕೆಂದು ಇರುವುದನ್ನು ತಮಗೆ ತಿಳಿಸಿದ್ದಾರೆ.
೨೯. ಈಜಿಪ್ಟ್ ದೇಶದಲ್ಲೆಲ್ಲ ಬಹುವಿಶೇಷವಾದ ಏಳು ಸುಭಿಕ್ಷ ವರ್ಷಗಳೂ
೩೦. ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿಹೋಗುವುದು.
೩೧. ಮುಂದೆ ಬರಲಿರುವ ಕ್ಷಾಮವು ಅತ್ಯಂತ ಘೋರಾವಾಗಿರುವುದು; ಮೊದಲಿದ್ದ ಸಮೃದ್ಧಿಯ ಗುರುತೇ ಇಲ್ಲದೆ ಹೋಗುವುದು.
೩೨. ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.
೩೩. “ಆದುದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಧಿಕಾರಿಯನ್ನಾಗಿ ನೇಮಿಸಬೇಕು.
೩೪. ಅದೂ ಅಲ್ಲದೆ, ದೇಶದ ಎಲ್ಲ ಭಾಗಗಳಲ್ಲೂ ಗುಮಾಸ್ತರನ್ನು ನೇಮಿಸಿ ಅವರ ಮೂಲಕ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯಲ್ಲಿ ಐದನೆಯ ಒಂದು ಪಾಲನ್ನು ಕಂದಾಯವಾಗಿ ಎತ್ತಬೇಕು.
೩೫. ಮುಂದಣ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ಪಟ್ಟಣಗಳಲ್ಲಿ ಜೋಪಾನವಾಗಿಡುವಂತೆ ತಾವು ಆಜ್ಞಾಪಿಸಬೇಕು.
೩೬. ಹೀಗೆ ಆಹಾರ ಪದಾರ್ಥಗಳನ್ನು ಶೇಖರಿಸುವುದರಿಂದ ಈಜಿಪ್ಟ್ ದೇಶದಲ್ಲಿ ದುರ್ಭಿಕ್ಷವುಂಟಾಗುವ ಏಳು ವರ್ಷಗಳಲ್ಲಿ ಜನರು ಕ್ಷಾಮದಿಂದ ಸಾಯುವುದಿಲ್ಲ,” ಎಂದು ಹೇಳಿದನು.
೩೭. ಜೋಸೆಫನು ಸೂಚಿಸಿದ ಯೋಜನೆ ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೆಯದೆಂದು ತೋರಿತು.
೩೮. ಫರೋಹನು ತನ್ನ ಪರಿವಾರದವರಿಗೆ, “ಈತ ದೇವರಾತ್ಮ ಪಡೆದವನು,
೩೯. ಈತನಿಗಿಂತ ಯೋಗ್ಯವಾದ ವ್ಯಕ್ತಿ ನಮಗೆ ಸಿಕ್ಕುವುದು ಸಾಧ್ಯವೆ?” ಎಂದು ಹೇಳಿ ಜೋಸೆಫನಿಗೆ, “ದೇವರೇ ನಿನಗೆ ಇದನ್ನೆಲ್ಲ ತಿಳಿಸಿರುವುದರಿಂದ ನಿನಗೆ ಸಮಾನವಾದ ಬುದ್ಧಿವಿವೇಕಗಳುಳ್ಳ ವ್ಯಕ್ತಿ ಯಾವನೂ ಇಲ್ಲ.
೪೦. ನೀನೇ ಅರಮನೆಯಲ್ಲಿ ಮುಖ್ಯಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರು ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದು ಹೇಳಿದನು.
೪೧. ಬಳಿಕ ಫರೋಹನು ಜೋಸೆಫನಿಗೆ, “ಇದೀಗಲೆ ಈಜಿಪ್ಟ್ ದೇಶದ ಮೇಲೆಲ್ಲ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆ,” ಎಂದು ಹೇಳಿ
೪೨. ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು.
೪೩. ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟನೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು.
೪೪. ಅಷ್ಟು ಮಾತ್ರವಲ್ಲ, ಫರೋಹನು ಅವನಿಗೆ, “ಫರೋಹನಾದ ನಾನು ಹೇಳುತ್ತಿದ್ದೇನೆ: ನಿನ್ನ ಅಪ್ಪಣೆಯಿಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾರೂ ಏನನ್ನೂ ಮಾಡಕೂಡದು,” ಎಂದು ಹೇಳಿದನು.
೪೫. ಬಳಿಕ ಫರೋಹನು ಜೋಸೆಫನಿಗೆ ‘ಸಾಪ್ನತ್ಪನ್ನೇಹ’ ಎಂಬ ಹೊಸ ಹೆಸರಿಟ್ಟನು; ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೋಟೀಫೆರನ ಮಗಳು ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ತರುವಾಯ ಜೋಸೆಫನು ಈಜಿಪ್ಟ್ ದೇಶಸಂಚಾರ ಹೊರಟನು.
೪೬. ಈಜಿಪ್ಟ್ ದೇಶದ ಅರಸನಾದ ಫರೋಹನ ಆಸ್ಥಾನವನ್ನು ಸೇರಿದಾಗ ಜೋಸೆಫನಿಗೆ ಮೂವತ್ತು ವರ್ಷ ವಯಸ್ಸು. ಜೋಸೆಫನು ಫರೋಹನ ಸನ್ನಿಧಿಯಿಂದ ಹೊರಟು ಈಜಿಪ್ಟ್ ದೇಶದಲ್ಲೆಲ್ಲ ಸಂಚಾರ ಮಾಡಿದನು.
೪೭. ಆ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳಲ್ಲಿ ಭೂಮಿ ಹೇರಳವಾದ ಬೆಳೆಕೊಟ್ಟಿತು.
೪೮. ಆ ಏಳು ವರ್ಷದ ಬೆಳೆಯನ್ನು ಜೋಸೆಫನು ಶೇಖರಿಸಿ ಪಟ್ಟಣಗಳಲ್ಲಿ ಇಟ್ಟನು. ಆಯಾ ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲೇ ಶೇಖರಿಸಿದನು.
೪೯. ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು.
೫೦. ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್.
೫೧. ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು.
೫೨. ಎರಡನೆಯ ಮಗನು ಹುಟ್ಟಿದಾಗ, ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಾಯೀಮ್’ ಎಂದು ನಾಮಕರಣ ಮಾಡಿದನು.
೫೩. ಈಜಿಪ್ಟ್ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದವು.
೫೪. ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು.
೫೫. ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು.
೫೬. ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
೫೭. ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.

ಆದಿಕಾಂಡ ೪೨:೧-೩೮
೧. ಈಜಿಪ್ಟಿನಲ್ಲಿ ದವಸಧಾನ್ಯ ದೊರಕುತ್ತದೆ ಎಂಬ ಸಮಾಚಾರ ಯಕೋಬನಿಗೆ ಮುಟ್ಟಿತು. ಅವನು ತನ್ನ ಮಕ್ಕಳಿಗೆ, “ನೀವು ಮುಖಮುಖ ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ.
೨. ಈಜಿಪ್ಟಿನಲ್ಲಿ ದವಸಧಾನ್ಯ ಉಂಟೆಂದು ನಾನು ಕೇಳಿದ್ದೇನೆ, ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ, ಬೇಕಾದ ದವಸವನ್ನು ಕೊಂಡುಕೊಂಡು ಬನ್ನಿ,” ಎಂದು ಹೇಳಿದನು.
೩. ಜೋಸೆಫನ ಹತ್ತುಮಂದಿ ಅಣ್ಣಂದಿರು ಧಾನ್ಯವನ್ನು ತರುವುದಕ್ಕಾಗಿ ಈಜಿಪ್ಟ್ ದೇಶಕ್ಕೆ ಹೊರಟರು.
೪. ಆದರೆ ಜೋಸೆಫನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ಯಕೋಬನು ಅವರ ಸಂಗಡ ಕಳಿಸಲಿಲ್ಲ. ಏಕೆಂದರೆ, ಅವನಿಗೆ ಏನಾದರೂ ಆಪತ್ತು ಒದಗೀತೆಂಬ ಹೆದರಿಕೆ ಅವನದು.
೫. ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು.
೬. ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
೭. ಜೋಸೆಫನು ಅವರನ್ನು ನೋಡಿದಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುಬುಡಿಯಿಂದ, “ನೀವು ಎಲ್ಲಿಯವರು?” ಎಂದು ಕೇಳಿದನು. ಅವರು, “ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು,” ಎಂದು ಹೇಳಿದರು.
೮. ಅಣ್ಣಂದಿರ ಗುರುತು ಜೋಸೆಫನಿಗೆ ತಿಳಿಯಿತಾದರೂ ಅವನ ಗುರುತು ಅವರಿಗೆ ತಿಳಿಯದೆ ಹೋಯಿತು.
೯. ಅವರ ವಿಷಯವಾಗಿ ತಾನು ಕಂಡಿದ್ದ ಕನಸುಗಳನ್ನು ಜೋಸೆಫನು ನೆನಪಿಗೆ ತಂದುಕೊಂಡನು. ಅವರನ್ನು ನೋಡಿ, “ನೀವು ಗೂಢಚಾರರು; ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚುವುದಕ್ಕಾಗಿ ಬಂದವರು,” ಎಂದನು.
೧೦. ಅದಕ್ಕೆ ಅವರು, \ಇಲ್ಲ, ಒಡೆಯಾ, ತಮ್ಮ ಸೇವಕರಾದ ನಾವು ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವೆ.
೧೧. ನಾವೆಲ್ಲರು ಒಬ್ಬ ತಂದೆಯ ಮಕ್ಕಳು; ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ,” ಎಂದರು.
೧೨. ಜೋಸೆಫನು ಅವರಿಗೆ, “ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವುದಕ್ಕೆ ಬಂದಿದ್ದೀರಿ,” ಎಂದನು.
೧೩. ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು; ಕಾನಾನ್ ನಾಡಿನವರು, ಒಬ್ಬ ತಂದೆಯ ಮಕ್ಕಳು; ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲೇ ಇದ್ದಾನೆ; ಒಬ್ಬನು ಇಲ್ಲವಾದನು,” ಎಂದರು.
೧೪. ಜೋಸೆಫನು ಅವರಿಗೆ, “ನಾನು ಈಗಾಗಲೆ ಹೇಳಿದಂತೆ ನೀವು ಗೂಢಚಾರರೇ,
೧೫. ಇದು ನಿಜವೋ ಸುಳ್ಳೋ ಎಂದು ಗೊತ್ತಾಗಬೇಕಾದರೆ ನೀವು ನಿಮ್ಮ ತಮ್ಮನನ್ನು ಬರಮಾಡಬೇಕು. ಅವನು ಬಂದ ಹೊರತು, ಫರೋಹನ ಜೀವದಾಣೆ, ನೀವು ಇಲ್ಲಿಂದ ಹೊರಟುಹೋಗಕೂಡದು.
೧೬. ಅವನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳಿಸಿರಿ. ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇರಿಸುತ್ತೇನೆ. ಹೀಗೆ ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ,” ಎಂದು ಹೇಳಿ,
೧೭. ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು.
೧೮. ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, “ನಾನು ದೇವರಲ್ಲಿ ಭಯಭಕ್ತಿಯುಳ್ಳವನು; ನಿಮಗೆ ಜೀವದ ಮೇಲೆ ಆಶೆ ಇದ್ದರೆ ನಾನು ಹೇಳಿದಂತೆ ಮಾಡಿ;
೧೯. ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ.
೨೦. ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು, ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ, ಆಗ ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು.
೨೧. ಆಗ ಅವರು ತಮ್ಮತಮ್ಮೊಳಗೆ, “ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿ ಬೇಡಿಕೊಂಡ. ಅವನ ಪ್ರಾಣಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡು ಇದ್ದೇವೆ,” ಎಂದು ಮಾತಾಡಿಕೊಂಡರು.
೨೨. ಅಂತೆಯೇ ರೂಬೇನನು, “ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ’ ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ,” ಎಂದ.
೨೩. ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನೆಸಲಿಲ್ಲ.
೨೪. ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ.
೨೫. ಇದಾದ ಬಳಿಕ ಜೋಸೆಫನು ತನ್ನ ಆಳುಗಳಿಗೆ, “ಆ ಜನರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ಅದರಲ್ಲಿ ಇಟ್ಟುಬಿಡಿ. ಅವರ ಪ್ರಯಾಣಕ್ಕೆ ಬೇಕಾದ ಅಹಾರವನ್ನು ಕೊಟ್ಟು ಕಳಿಸಿರಿ,” ಎಂದು ಅಪ್ಪಣೆ ಮಾಡಿದ. ಆಳುಗಳು ಅದರಂತೆಯೆ ಮಾಡಿದರು.
೨೬. ಅಣ್ಣಂದಿರು ತಾವು ಕೊಂಡುಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟರು.
೨೭. ರಾತ್ರಿಗೆ ಒಂದು ಚಾವಡಿಯಲ್ಲಿ ಇಳಿದುಕೊಂಡರು. ಅವರಲ್ಲಿ ಒಬ್ಬನು ತನ್ನ ಕತ್ತೆಗೆ ಧಾನ್ಯಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದನು. ತಾನು ತಂದಿದ್ದ ಹಣ ಅದರ ಬಾಯಲ್ಲೇ ಇತ್ತು.
೨೮. “ನಾನು ಕೊಟ್ಟ ಹಣ ನನಗೆ ವಾಪಸ್ಸಾಗಿದೆ; ಇಗೋ, ನನ್ನ ಚೀಲದಲ್ಲಿದೆ,” ಎಂದು ತನ್ನ ಅಣ್ಣತಮ್ಮಂದಿರಿಗೆ ಹೇಳಿದ. ಅವರು ಕಕ್ಕಾಬಿಕ್ಕಿಯಾಗಿ, ಒಬ್ಬರನ್ನೊಬ್ಬರು ಬೆರಗಿನಿಂದ ನೋಡುತ್ತಾ, “ನಮಗೇಕೆ ದೇವರು ಹೀಗೆ ಮಾಡಿದ್ದಾರೆ?” ಎಂದುಕೊಂಡರು.
೨೯. ಕಾನಾನ್ ನಾಡನ್ನು ಅವರು ತಲುಪಿದರು. ತಮ್ಮ ತಂದೆಯ ಬಳಿಗೆ ಬಂದು ನಡೆದುದೆಲ್ಲವನ್ನು ವರದಿಮಾಡಿದರು.
೩೦. “ಆ ದೇಶಾಧಿಪತಿ ನಮ್ಮೊಡನೆ ಗಡುಸಾಗಿ ಮಾತಾಡಿದ; ನಮ್ಮನ್ನು ಗೂಢಚಾರರೆಂದು ಕರೆದ.
೩೧. ನಾವು ಅವನಿಗೆ, ‘ನಾವು ಸತ್ಯವಂತರೇ ಹೊರತು ಗೂಢಚಾರರೇನು ಅಲ್ಲ,
೩೨. ನಾವು ಒಬ್ಬ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರು; ನಮ್ಮಲ್ಲಿ ಒಬ್ಬನು ಇಲ್ಲವಾದ. ಚಿಕ್ಕವನೋ ಈಗ ಕಾನಾನ್ ನಾಡಿನಲ್ಲಿ ನಮ್ಮ ತಂದೆಯ ಬಳಿಯಲ್ಲಿದ್ದಾನೆ’ ಎಂದು ಹೇಳಿದೆವು.
೩೩. ಅದಕ್ಕೆ ಆ ದೇಶಾಧಿಪತಿ, “ನೀವು ಸತ್ಯವಂತರೋ ಇಲ್ಲವೋ ಎಂಬುದು ಗೊತ್ತಾಗುವುದಕ್ಕಾಗಿ ನಿಮ್ಮಲ್ಲಿ ಒಬ್ಬನನ್ನು ನನ್ನ ಬಳಿಯಲ್ಲೆ ಬಿಟ್ಟುಹೋಗಿ; ನಿಮ್ಮ ಕುಟುಂಬದವರ ಕ್ಷಾಮನಿವಾರಣೆಗೆ ಬೇಕಾದುದನ್ನು ತೆಗೆದುಕೊಂಡು ಹೋಗಬಹುದು.
೩೪. ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನೀವು ಗೂಢಚಾರರಲ್ಲ. ಸತ್ಯವಂತರೇ ಎಂದು ತಿಳಿದುಕೊಳ್ಳುತ್ತೇನೆ; ನಿಮ್ಮ ಅಣ್ಣನನ್ನು ಬಿಡುಗಡೆ ಮಾಡುತ್ತೇನೆ ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡೆಸಬಹುದು,” ಎಂದು ಹೇಳಿದ.
೩೫. ಅವರು ತಮ್ಮ ತಮ್ಮ ಚೀಲವನ್ನು ಬಿಚ್ಚಿನೋಡಿದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಗಂಟು ಸಿಕ್ಕಿತು. ಆ ಗಂಟುಗಳನ್ನು ಕಂಡಾಗ ಅವರೂ ಅವರ ತಂದೆಯೂ ಚಕಿತರಾದರು.
೩೬. ಆಗ ಅವರ ತಂದೆ ಯಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಜೋಸೆಫನು ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟದುಃಖವೆಲ್ಲ ನನ್ನ ತಲೆಯ ಮೇಲೆ ಬಂದೆರಗಿದೆ!” ಎಂದನು.
೩೭. ಅದಕ್ಕೆ ರೂಬೇನನು, “ನಾನು ಈ ಹುಡುಗನನ್ನು ನಿಮಗೆ ಪುನಃ ತಂದೊಪ್ಪಿಸುತ್ತೇನೆ; ಇಲ್ಲದೆಹೋದರೆ ನನ್ನಿಬ್ಬರು ಗಂಡುಮಕ್ಕಳನ್ನು ಕೊಂದುಹಾಕಬಹುದು. ಇವನನ್ನು ನನ್ನ ವಶಕ್ಕೆ ಕೊಡಿ, ನಾನು ತಪ್ಪದೆ ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ,” ಎಂದು ಹೇಳಿದ.
೩೮. ಯಕೋಬನು ಅವರಿಗೆ, “ನನ್ನ ಮಗ ನಿಮ್ಮ ಸಂಗಡ ಹೋಗಬಾರದು. ಇವನ ಒಡಹುಟ್ಟಿದ ಅವನು ಸತ್ತುಹೋದ, ಇವನೊಬ್ಬನೇ ಉಳಿದು ಇದ್ದಾನೆ, ದಾರಿಯಲ್ಲಿ ಇವನಿಗೇನಾದರೂ ಆಪತ್ತು ಸಂಭವಿಸಬಹುದು. ಆಗ, ನರೆಕೂದಲಿನ ಈ ಮುದುಕ ದುಃಖದಿಂದಲೆ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ,” ಎಂದು ಹೇಳಿದ.

ಕೀರ್ತನೆಗಳು ೧೦:೧೨-೧೮
೧೨. ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II
೧೩. ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? I “ದೇವನೆನ್ನ ವಿಚಾರಿಸನು” ಎನ್ನುವುದೆಂತು? II
೧೪. ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II
೧೫. ಧೂರ್ತನ, ದುರುಳನ ಭುಜಬಲವನು ನೀ ಮುರಿದುಬಿಡು I ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು II
೧೬. ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ I ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ II
೧೭. ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II
೧೮. ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ I ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ II

ಜ್ಞಾನೋಕ್ತಿಗಳು ೪:೭-೯
೭. ಜ್ಞಾನ ಪಡೆಯಬೇಕೆಂಬುದೇ ಜ್ಞಾನಬೋಧೆಯ ಮೂಲಾಂಶ; ನಿನ್ನ ಸರ್ವಸಂಪತ್ತಿನಿಂದ ವಿವೇಕವನ್ನು ಗಳಿಸಿಕೊ.
೮. ಜ್ಞಾನವೆಂಬಾಕೆಯನ್ನು ಶ್ರೇಷ್ಠಳೆಂದು ಭಾವಿಸಿದೆಯಾದರೆ, ಆಕೆ ನಿನ್ನನ್ನು ಸನ್ಮಾನಿಸುವಳು. ನೀನು ಅವಳನ್ನು ಅಪ್ಪಿಕೊಂಡೆಯಾದರೆ, ಆಕೆ ನಿನ್ನನ್ನು ಘನಪಡಿಸುವಳು.
೯. ಅಂದದ ಪುಷ್ಪಮಾಲೆಯನ್ನು ಹಾಕುವಳು ನಿನ್ನ ಕೊರಳಿಗೆ, ಸುಂದರ ಕಿರೀಟವನ್ನು ಮುಡಿಸುವಳು ನಿನ್ನ ತಲೆಗೆ.”

ಮತ್ತಾಯನು ೧೪:೧-೨೧
೧. ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು.
೨. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು
೩. ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು.
೪. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು.
೫. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು.
೬. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು.
೭. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು.
೮. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು.
೯. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು.
೧೦. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;
೧೧. ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.
೧೨. ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.
೧೩. ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.
೧೪. ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು.
೧೫. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು.
೧೬. ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.
೧೭. ಶಿಷ್ಯರು ಪ್ರತ್ಯುತ್ತರವಾಗಿ, “ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,” ಎಂದರು.
೧೮. ಯೇಸು, “ಅವನ್ನು ಇಲ್ಲಿಗೆ ತನ್ನಿ,” ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.
೧೯. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.
೨೦. ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು.
೨೧. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.