A A A A A

ಸಮುವೇಲನು ೨ ೧೩:೧-೩೯
೧. ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಚೆಲುವೆಯಾದ ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.
೨. ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ಆಕೆ ಕನ್ಯೆ ಆಗಿದ್ದುದರಿಂದ ಆಕೆಗೆ ಏನು ಮಾಡುವುದೂ ಅಸಾಧ್ಯವೆಂದು ಅಮ್ನೋನನಿಗೆ ಕಂಡಿತು.
೩. ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗ ಹಾಗು ಬಹು ಯುಕ್ತಿವಂತ.
೪. ಅವನು ಒಂದು ದಿನ ಅಮ್ನೋನನನ್ನು, “ರಾಜಪುತ್ರರೇ, ನೀವು ದಿನೇದಿನೇ ಕ್ಷೀಣವಾಗುತ್ತಾ ಬರುವುದೇಕೆ? ನನಗೆ ತಿಳಿಸಬಾರದೇ?,” ಎಂದು ಕೇಳಿದನು. ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹವುಂಟಾಗಿದೆ,” ಎಂದು ಉತ್ತರಕೊಟ್ಟನು.
೫. ಆಗ ಯೋನಾದಾಬನು, “ನೀನು ಅಸ್ವಸ್ಥನಾದವನಂತೆ ನಟಿಸಿ ಹಾಸಿಗೆಯ ಮೇಲೆ ಮಲಗಿಕೋ; ನಿನ್ನ ತಂದೆ ನಿನ್ನನ್ನು ನೋಡುವುದಕ್ಕೆ ಬಂದಾಗ, ‘ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸಿ. ಆಕೆ ನನ್ನೆದುರಿನಲ್ಲೇ ಸಿದ್ಧಮಾಡಿಕೊಡುವುದಾದರೆ ಊಟಮಾಡುತ್ತೇನೆ’ ಎಂದು ಹೇಳು,” ಎಂದನು.
೬. ಅಮ್ನೋನನು ಅಸ್ವಸ್ಥನಾದವನೋ ಎಂಬಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನ್ನ ಬಳಿಗೆ ಕಳುಹಿಸಿ; ಆಕೆ ನನ್ನ ಕಣ್ಮುಂದೆಯೇ ಒಂದೆರಡು ಭಕ್ಷ್ಯಗಳನ್ನು ಮಾಡಿಕೊಡುವುದಾದರೆ ಊಟಮಾಡುತ್ತೇನೆ,” ಎಂದು ಬೇಡಿಕೊಂಡನು.
೭. ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣ ಅಮ್ನೋನನ ಮನೆಗೆ ಹೋಗಿ ಅವನಿಗಾಗಿ ಆಹಾರವನ್ನು ಸಿದ್ಧಮಾಡು,” ಎಂದು ಹೇಳಿಸಿದನು.
೮. ಕೂಡಲೆ ಆಕೆ ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು; ಅವನು ಮಲಗಿದ್ದನು. ಆಕೆ ಹೋಗಿ ಹಿಟ್ಟು ತೆಗೆದುಕೊಂಡು ನಾದಿ ಅವನ ಕಣ್ಮುಂದೆಯೇ ಭಕ್ಷ್ಯಗಳನ್ನು ಮಾಡಿ ಸುಟ್ಟಳು.
೯. ಅನಂತರ ಆಕೆ ಅವುಗಳನ್ನು ಬಾಣಲಿಯಿಂದ ತೆಗೆದು ಅವನ ಮುಂದಿಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.
೧೦. ಎಲ್ಲರೂ ಹೋದಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ, ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ!” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.
೧೧. ಕೂಡಲೇ ಅವನು ಆಕೆಯನ್ನು ಹಿಡಿದು, “ನನ್ನ ತಂಗೀ, ಬಂದು ನನ್ನ ಸಂಗಡ ಮಲಗಿಕೋ,” ಎಂದನು.
೧೨. ಆಕೆ, “ಅಣ್ಣಾ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಯೇಲರಲ್ಲಿ ಇಂಥದು ನಡೆಯಬಾರದು.
೧೩. ಇಂಥ ಹುಚ್ಚುತನ ಬೇಡ, ಈ ಅವಮಾನವನ್ನು ಮರೆಮಾಡುವುದು ಹೇಗೆ? ನಿನಗಂತೂ ಇಸ್ರಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು,” ಎಂದಳು.
೧೪. ಆದರೆ ಅವನು ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.
೧೫. ಇದಾದ ಮೇಲೆ ಅವನಿಗೆ ಆಕೆಯಲ್ಲಿ ತುಂಬಾ ದ್ವೇಷ ಹುಟ್ಟಿತು. ಅವನ ಮುಂಚಿನ ಪ್ರೀತಿಗಿಂತ ದ್ವೇಷವೇ ಹೆಚ್ಚಾಯಿತು.
೧೬. ಅಮ್ನೋನನು ಆಕೆಗೆ, “ಎದ್ದುಹೋಗು,” ಎಂದು ಹೇಳಿದಾಗ ಆಕೆ, “ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ,” ಎಂದಳು.
೧೭. ಆದರೆ ಅವನು ಆಕೆಯ ಮಾತನ್ನು ಕೇಳದೆ ಯಾವಾಗಲೂ ತನ್ನ ಹತ್ತಿರವೇ ಇರುವಂಥ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದಮುಚ್ಚು,” ಎಂದು ಆಜ್ಞಾಪಿಸಿದನು.
೧೮. (ಆಕೆ ನಾನಾ ವರ್ಣಗಳುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಅದೇ ತರದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು.) ಸೇವಕನು ಆಕೆಯನ್ನು ಹೊರಗೆ ಕಳುಹಿಸಿ ಕದಮುಚ್ಚಿದನು.
೧೯. ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು, ನಿಲುವಂಗಿಯನ್ನು ಹರಿದುಕೊಂಡು, ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.
೨೦. ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣ ಅಮ್ನೋನನು ನಿನ್ನ ಮಾನಭಂಗ ಮಾಡಿದನೇ? ನನ್ನ ತಂಗೀ, ತಕ್ಷಣಕ್ಕೆ ಸುಮ್ಮನಿರು; ಅವನು ನಿನ್ನ ಅಣ್ಣನಲ್ಲವೇ? ಈ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ,” ಎಂದು ಹೇಳಿದನು. ತಾಮಾರಳು ಒಂಟಿಗಳಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಿಸಿದಳು.
೨೧. ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.
೨೨. ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.
೨೩. ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಯಿಮನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವ ವ್ಯವಸ್ಥೆಮಾಡಿದನು. ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಆಮಂತ್ರಿಸಿದನು.
೨೪. ಅವನು ಅರಸನ ಬಳಿಗೂ ಹೋಗಿ, “ಅರಸರೇ, ತಮ್ಮ ಸೇವಕನಾದ ನಾನು ಕುರಿಗಳ ಉಣ್ಣೆಕತ್ತರಿಸುವವರನ್ನು ಕರೆಸಿದ್ದೇನೆ. ಅರಸನು ತಮ್ಮ ಸೇವಕರ ಸಮೇತ ಅಲ್ಲಿಗೆ ಚಿತ್ತೈಸೋಣವಾಗಲಿ,” ಎಂದು ಬೇಡಿಕೊಂಡನು.
೨೫. ಅರಸನು, “ಮಗನೇ, ಬೇಡ; ನಾವೆಲ್ಲರೂ ಬಂದರೆ ನಿನಗೆ ಕಷ್ಟವಾಗುವುದು,” ಎನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಒಪ್ಪಲಿಲ್ಲ; ಅವನನ್ನು ಆಶೀರ್ವದಿಸಿದನು, ಅಷ್ಟೇ.
೨೬. ಆಗ ಅಬ್ಷಾಲೋಮನು, “ನೀವು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ನನ್ನೊಡನೆ ಕಳುಹಿಸಿ,” ಎಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.
೨೭. ಆದರೂ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನೂ ಕಳುಹಿಸಿದನು.
೨೮. ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದಕೂಡಲೆ ಅವನನ್ನು ಹೊಡೆದು ಕೊಂದುಹಾಕಿ; ಹೆದರಬೇಡಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೆ? ಧೈರ್ಯದಿಂದಿರಿ, ಶೂರರಾಗಿರಿ,” ಎಂದು ಹೇಳಿದ್ದನು.
೨೯. ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
೩೦. ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ರಾಜಪುತ್ರರೆಲ್ಲರನ್ನೂ ಕೊಂದುಹಾಕಿದನು. ಒಬ್ಬನನ್ನೂ ಉಳಿಸಲಿಲ್ಲ,” ಎಂಬ ಸುದ್ದಿ ಮುಟ್ಟಿತು.
೩೧. ಆಗ ಅರಸನು ದುಃಖತಾಳಲಾರದೆ ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲಕ್ಕೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವನ ಹತ್ತಿರ ನಿಂತರು.
೩೨. ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜಪುತ್ರರೆಲ್ಲರನ್ನೂ ಕೊಂದುಹಾಕಿದ್ದಾರೆಂದು ನನ್ನ ಒಡೆಯರು ನೆನೆಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದಾಗಿನಿಂದಲೇ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದ ತೋರುತ್ತಿತ್ತು.
೩೩. ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸರು ಲಕ್ಷ್ಯಕೊಡದಿರಲಿ; ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ,” ಎಂದು ಹೇಳಿ ಸಂತೈಸಿದನು.
೩೪. (ಅಬ್ಷಾಲೋಮನು ತಲೆ ತಪ್ಪಿಸಿಕೊಂಡನು.) ಅಷ್ಟರಲ್ಲಿ ದಾರಿ ನೋಡುತ್ತಿದ್ದ ಕಾವಲುಗಾರನು ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದುಬರುವುದನ್ನು ಕಂಡನು.
೩೫. ಯೋನಾದಾಬನು ಅರಸನಿಗೆ, “ಇಗೋ, ರಾಜಕುಮಾರರು ಬರುತ್ತಿದ್ದಾರೆ; ನಿಮ್ಮ ಸೇವಕನ ಮಾತಿನಂತೆಯೇ ಆಯಿತಲ್ಲವೇ,” ಎಂದು ಹೇಳಿ ಮುಗಿಸುವಷ್ಟರಲ್ಲೇ
೩೬. ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
೩೭. ದಾವೀದನು ತನ್ನ ಮಗನಿಗೋಸ್ಕರ ನಿತ್ಯವೂ ದುಃಖಪಡುತ್ತಿದ್ದನು. ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರ್ಷ ಇದ್ದನು.
೩೮. ***
೩೯. ಅರಸ ದಾವೀದನು, ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ತನ್ನ ಮಗ ಅಬ್ಷಾಲೋಮನನ್ನು ನೋಡಲು ಹಾತೊರೆಯತೊಡಗಿದನು.

ಸಮುವೇಲನು ೨ ೧೪:೧-೩೩
೧. ಅರಸನು ಅಬ್ಷಾಲೋಮನಿಗಾಗಿ ಹಂಬಲಿಸುತ್ತಿರುವುದು ಚೆರೂಯಳ ಮಗನಾದ ಯೋವಾಬನಿಗೆ ತಿಳಿಯಿತು.
೨. ಅವನು ತೆಕೋವದಿಂದ ಒಬ್ಬ ಬುದ್ಧಿವಂತೆಯಾದ ಸ್ತ್ರೀಯನ್ನು ಕರೆಕಳುಹಿಸಿ ಆಕೆಗೆ, “ನೀನು ಪ್ರಿಯರನ್ನು ಕಳೆದುಕೊಂಡು ಬಹುದಿವಸಗಳಿಂದ ಶೋಕಪಡುತ್ತಿರುವ ಸ್ತ್ರೀಯೋ ಎಂಬಂತೆ ನಟಿಸಿ ಶೋಕವಸ್ತ್ರಗಳನ್ನು ಧರಿಸಿಕೋ;
೩. ಎಣ್ಣೆ ಹಚ್ಚಿಕೊಳ್ಳದೆ ಅರಸನ ಬಳಿಗೆ ಹೋಗು; ಅಲ್ಲಿ ಈ ಮಾತುಗಳನ್ನು ಅವನಿಗೆ ಹೇಳು,” ಎಂದು ಆಜ್ಞಾಪಿಸಿ ಹೇಳಬೇಕಾದ ಮಾತುಗಳನ್ನು ಆಕೆಗೆ ಕಲಿಸಿಕೊಟ್ಟನು.
೪. ತೆಕೋವದ ಆ ಸ್ತ್ರೀ ಅರಸನ ಹತ್ತಿರಕ್ಕೆ ಹೋಗಿ ಅವನ ಮುಂದೆ ನೆಲಕ್ಕೆಬಿದ್ದು, “ಅರಸರೇ, ರಕ್ಷಿಸಿರಿ,” ಎಂದು ಕೂಗಿದಳು.
೫. ಅರಸನು, “ನಿನಗೇನಾಯಿತು?” ಎಂದು ಆಕೆಯನ್ನು ಕೇಳಿದನು. ಆಕೆ, “ನಾನು ವಿಧವೆ; ಗಂಡನು ಸತ್ತುಹೋಗಿದ್ದಾನೆ.
೬. ನಿನ್ನ ದಾಸಿಯಾದ ನನಗೆ ಇಬ್ಬರು ಮಕ್ಕಳಿದ್ದರು. ಒಂದು ದಿವಸ ಇವರು ಇಬ್ಬರೂ ಹೊಲದಲ್ಲಿ ಜಗಳವಾಡಿದರು. ಅಲ್ಲಿ ಬಿಡಿಸುವವರಾರೂ ಇರಲಿಲ್ಲ. ಆದುದರಿಂದ ಒಬ್ಬನು ಇನ್ನೊಬ್ಬನನ್ನು ಹೊಡೆದು ಕೊಂದನು.
೭. ಈಗ ನೋಡಿ, ಬಳಗದವರೆಲ್ಲರು ನಿನ್ನ ದಾಸಿಯಾದ ನನಗೆ ವಿರೋಧವಾಗಿದ್ದಾರೆ; ‘ತಮ್ಮನನ್ನು ಕೊಂದವನೆಲ್ಲಿ? ಅವನನ್ನು ನಮಗೆ ಒಪ್ಪಿಸು; ತಮ್ಮನ ಪ್ರಾಣಕ್ಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ,’ ಎನ್ನುತ್ತಾರೆ. ಹೀಗೆ ಅವರು ನನಗುಳಿದಿರುವ ಒಂದು ಕೆಂಡವನ್ನೂ ಆರಿಸಿಬಿಟ್ಟು ನನ್ನ ಗಂಡನ ಹೆಸರನ್ನೂ ಸಂತಾನವನ್ನೂ ಭೂಲೋಕದ ಮೇಲಿನಿಂದ ಅಳಿಸಬೇಕೆಂದು ಇದ್ದಾರೆ,” ಎಂದು ಉತ್ತರಕೊಟ್ಟಳು.
೮. ಆಗ ಅರಸನು, “ಮನೆಗೆ ಹೋಗು, ನಿನ್ನ ವಿಷಯದಲ್ಲಿ ಆಜ್ಞಾಪಿಸುತ್ತೇನೆ,” ಎಂದು ಹೇಳಿದನು.
೯. ಅದಕ್ಕೆ ಆ ತೆಕೋವದ ಸ್ತ್ರೀ, “ಅರಸರೇ, ಒಡೆಯರೇ, ಅಪರಾಧ ನನ್ನ ಮೇಲೆಯೂ ನನ್ನ ಕುಟುಂಬದ ಮೇಲೆಯೂ ಇರಲಿ; ಅರಸರಿಗೂ ಅವರ ಸಿಂಹಾಸನಕ್ಕೂ ದೋಷಹತ್ತದಿರಲಿ,” ಎಂದಳು.
೧೦. ಅರಸ ಆಕೆಗೆ, “ಹಾಗೆ ಅಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ; ಅವರು ನಿನ್ನನ್ನು ಮುಟ್ಟದಂತೆ ಮಾಡುತ್ತೇನೆ,” ಎಂದನು.
೧೧. ಆಗ ಆ ಸ್ತ್ರೀ, “ಸಮೀಪ ಬಂಧುವು ನನ್ನ ಎರಡನೆಯ ಮಗನನ್ನು ಕೊಂದು ನನ್ನ‍ನ್ನು ಪೂರ್ಣವಾಗಿ ಹಾಳುಮಾಡದಂತೆ ಅರಸರು ತಾವಾಗಿ ನೋಡಿಕೊಳ್ಳುವರೆಂಬುದಾಗಿ ನನ್ನ ದೇವರಾದ ಸರ್ವೇಶ್ವರನ ಮೇಲೆ ಆಣೆಯಿಟ್ಟು ಪ್ರಮಾಣ ಮಾಡಬೇಕು,” ಎಂದು ಬೇಡಿಕೊಂಡಳು. ಅದಕ್ಕೆ ದಾವೀದನು, “ಸರ್ವೇಶ್ವರನಾಣೆ, ನಿನ್ನ ಮಗನ ತಲೆಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳ್ಗೊಡುವುದಿಲ್ಲ,” ಎಂದು ಹೇಳಿದನು.
೧೨. ಆಗ ಆ ಸ್ತ್ರೀ, “ನನ್ನ ಒಡೆಯರಿಗೆ ಇನ್ನೊಂದು ಮಾತನ್ನು ಹೇಳಿಕೊಳ್ಳುವುದಕ್ಕೆ ಅಪ್ಪಣೆಯಾಗಲಿ,” ಎಂದಳು. ಅರಸನು, “ಹೇಳು,” ಎಂದನು.
೧೩. ಆಕೆ, “ಅರಸರು ಈ ತೀರ್ಪು ಕೊಟ್ಟದ್ದರಿಂದ ತಮ್ಮನ್ನೇ ಅಪರಾಧಿಯೆಂದು ನಿರ್ಣಯಿಸಿದ ಹಾಗಾಯಿತು. ತಾವು ಹೊರದೂಡಲಾದವನನ್ನು ಸೇರಿಸಿಕೊಳ್ಳಲೊಲ್ಲದೆ ಇರುವುದರಿಂದ ದೇವಪ್ರಜೆಗೆ ವಿರೋಧ ಆಗಿ ಅದೇ ಆಲೋಚನೆ ಮಾಡಿದ ಹಾಗಾಯಿತು. ಅರಸರು ಹೀಗೇಕೆ ಮಾಡಬೇಕು? ನಾವು ಸಾಯುವವರು:
೧೪. ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನಂತೆ ಇದ್ದೇವೆ ನಾವು. ಮನುಷ್ಯರ ಪ್ರಾಣತೆಗೆಯುವುದಕ್ಕೆ ದೇವರಿಗೆ ಇಷ್ಟ ಇಲ್ಲ; ಹೊರದೂಡಲಾದವನು ತಿರುಗಿ ಬಳಿಗೆ ಬರುವ ಹಾಗೆ ಅವರು ಸದುಪಾಯಗಳನ್ನು ಕಲ್ಪಿಸುವವರಾಗಿರುತ್ತಾರೆ.
೧೫. ಅದಿರಲಿ, ತಮ್ಮ ಸೇವಕಿ ಆದ ನನ್ನನ್ನು ಜನರು ಹೆದರಿಸಿದ್ದರಿಂದ ನಾನು ಈ ಸಂಗತಿಯನ್ನು ಅರಸರಿಗೆ ತಿಳಿಸಿದರೆ ಅವರು ತಮ್ಮ ಸೇವಕಿಯ ಬಿನ್ನಹವನ್ನು ಆಲಿಸಾರು ಎಂದುಕೊಂಡು ನನ್ನ ಒಡೆಯರಾದ ಅರಸರಿಗೆ ಇದನ್ನು ತಿಳಿಸುವುದಕ್ಕೆ ಬಂದೆ.
೧೬. ಅರಸರು ತಮ್ಮ ಸೇವಕಿಯಾದ ನನ್ನ ಬಿನ್ನಹವನ್ನು ಆಲಿಸಿ, ನನ್ನನ್ನೂ ನನ್ನ ಮಗನನ್ನೂ ದೇವರ ಸ್ವಾಸ್ತ್ಯದಿಂದ ತೆಗೆದು ಹಾಕಬೇಕೆಂದಿರುವವರ ಕೈಗೆ ಸಿಕ್ಕದಂತೆ, ತಪ್ಪಿಸಿ ರಕ್ಷಿಸುವಿರೆಂದು ನಂಬಿಕೊಂಡಿದ್ದೇನೆ.
೧೭. ನನ್ನ ಒಡೆಯರಾದ ಅರಸರ ಮಾತು ಸಮಾಧಾನಕ್ಕೆ ಕಾರಣವಾಗುವುದೆಂದು ನೆನಸಿ ನಿಮ್ಮ ದಾಸಿಯಾದ ನಾನು ಬಂದೆ. ನ್ಯಾಯ ಅನ್ಯಾಯಗಳನ್ನು ಕಂಡು ಹಿಡಿಯುವುದರಲ್ಲಿ ನನ್ನ ಒಡೆಯರಾದ ಅರಸರು ದೇವದೂತನಂತೆ ಇರುತ್ತೀರಿ; ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇರಲಿ!” ಎಂದಳು.
೧೮. ಆಗ ಅರಸನು ಆ ಸ್ತ್ರೀಗೆ, “ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ; ನೀನು ಅದನ್ನು ಮರೆಮಾಡದೆ ತಿಳಿಸಬೇಕು,” ಎಂದು ಹೇಳಿದನು. ಆಕೆ, “ಅರಸರ ಅಪ್ಪಣೆಯಾಗಲಿ,” ಎಂದು ಉತ್ತರಕೊಟ್ಟಳು.
೧೯. ಅರಸನು, “ಈ ಕಾರ್ಯದಲ್ಲಿ ಯೋವಾಬನ ಕೈಯಿರುತ್ತದೆ ಅಲ್ಲವೇ?’ ಎಂದು ಕೇಳಿದನು. ಅದಕ್ಕೆ ಆ ಸ್ತ್ರೀ, “ಅರಸರ ಜೀವದಾಣೆ, ಅರಸರು ಒಂದು ಮಾತು ಹೇಳಿದರೆ ನಾವು ತಪ್ಪಿಸಿಕೊಂಡು ಎಡಕ್ಕಾಗಲಿ ಬಲಕ್ಕಾಗಲಿ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ; ನಿಮ್ಮ ದಾಸಿಯಾದ ನನ್ನನ್ನು ಪ್ರೇರಿಸಿ ಈ ಎಲ್ಲಾ ಮಾತುಗಳನ್ನು ನನಗೆ ಕಲಿಸಿಕೊಟ್ಟವರು ನಿಮ್ಮ ಸೇವಕನಾದ ಯೋವಾಬನೇ ಹೌದು.
೨೦. ಅಬ್ಷಾಲೋಮನ ವಿಷಯವನ್ನು ರೂಪಾಂತರ ಪಡಿಸುವುದಕ್ಕಾಗಿ ನಿಮ್ಮ ಸೇವಕನಾದ ಯೋವಾಬನೇ ಇದನ್ನು ಮಾಡಿದನು. ನನ್ನ ಒಡೆಯರು ದೇವದೂತನಂಥ ಜ್ಞಾನಿ; ಅವರು ಭೂಲೋಕದಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುತ್ತಾರೆ!” ಎಂದು ಉತ್ತರಕೊಟ್ಟಳು.
೨೧. ಅನಂತರ ಅರಸನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ; ಹೋಗಿ ಆ ಯುವಕ ಅಬ್ಷಾಲೋಮನನ್ನು ಕರೆದುಕೊಂಡು ಬಾ,” ಎಂದನು.
೨೨. ಆಗ ಯೋವಾಬನು ನೆಲಕ್ಕೆ ಬಿದ್ದು ನಮಸ್ಕರಿಸಿ ಅರಸನನ್ನು ಹರಸಿ, “ಅರಸರೇ, ನನ್ನ ಒಡೆಯರೇ, ನೀವು ನಿಮ್ಮ ಸೇವಕನಾದ ನನ್ನ ಬಿನ್ನಹವನ್ನು ಆಲಿಸಿದ್ದರಿಂದ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆದೊರಕಿತೆಂದು ಈಗ ಗೊತ್ತಾಯಿಸು,” ಎಂದು ಹೇಳಿದನು.
೨೩. ಬಳಿಕ ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಜೆರೂಸ‍ಲೇಮಿಗೆ ಕರೆದುಕೊಂಡು ಬಂದನು.
೨೪. ಆದರೆ ಅರಸನು, “ಅಬ್ಷಾಲೋಮನು ತನ್ನ ಮನೆಗೆ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು,” ಎಂದು ಆಜ್ಞಾಪಿಸಿದನು. ಆದ್ದರಿಂದ ಅವನು ತನ್ನ ಮನೆಗೆ ಹೋದನು. ಅರಸನ ಮುಖವನ್ನು ನೋಡಲಿಲ್ಲ.
೨೫. ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಯೇಲರಲ್ಲೇ ಇರಲಿಲ್ಲ. ಅವನಲ್ಲಿ ಅಂಗಾಲಿನಿಂದ ನಡುನೆತ್ತಿಯವರೆಗೆ ಒಂದು ದೋಷವಾದರೂ ಇರಲಿಲ್ಲ.
೨೬. ಅವನ ತಲೆಗೂದಲು ಬಹುಭಾರವಾಗುತ್ತಿದ್ದುದರಿಂದ ಪ್ರತಿವರ್ಷದ ಅಂತ್ಯದಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಆಗ ಅವನ ತಲೆಗೂದಲು ಸರಕಾರೀ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗುತ್ತಿತ್ತು.
೨೭. ಅವನಿಗೆ ಮೂರುಮಂದಿ ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಮಗಳ ಹೆಸರು ತಾಮಾರ್; ಈಕೆ ಬಹು ಸುಂದರಿಯಾಗಿದ್ದಳು.
೨೮. ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ಎರಡು ವರ್ಷ ಜೆರುಸಲೇಮಿನಲ್ಲಿ ವಾಸವಾಗಿದ್ದನು.
೨೯. ಅನಂತರ ಒಂದು ದಿನ ಅವನು, ಅರಸನ ಬಳಿಗೆ ಕಳುಹಿಸುವುದಕ್ಕಾಗಿ ಯೋವಾಬನನ್ನು ಬರಮಾಡಲೆತ್ನಿಸಿದನು. ಆದರೆ ಯೋವಾಬನು ಬರಲಿಲ್ಲ. ಎರಡನೆಯ ಸಾರಿ ಕರೇಕಳುಹಿಸಿದರೂ ಅವನು ಬರಲಿಲ್ಲ.
೩೦. ಆದುದರಿಂದ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿ, ಸಮೀಪದಲ್ಲೇ ಯೋವಾಬನ ಜವೆಗೋದಿಹೊಲವುಂಟಲ್ಲವೇ, ಹೋಗಿ ಅದಕ್ಕೆ ಬೆಂಕಿ ಹಚ್ಚಿರಿ,” ಎಂದು ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು.
೩೧. ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ, “ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿಹಚ್ಚಿದ್ದೇಕೆ?” ಎಂದು ಅವನನ್ನು ಕೇಳಲು
೩೨. ಅಬ್ಷಾಲೋಮನು, “ನಾನು ಗೆಷೂರಿನಿಂದ ಇಲ್ಲಿಗೆ ಬಂದದ್ದೇಕೆ? ಅಲ್ಲೇ ಇದ್ದಿದ್ದರೆ ಒಳ್ಳೇದಾಗುತ್ತಿತ್ತಲ್ಲವೇ?’ ಎಂದು ನಿನ್ನ ಮುಖಾಂತರ ಅರಸನಿಗೆ ತಿಳಿಸುವುದಕ್ಕಾಗಿ ನಿನ್ನನ್ನು ಕರೇಕಳುಹಿಸಿದೆ; ನಾನು ಹೇಗೂ ಅರಸನ ಮುಖವನ್ನು ನೋಡಬೇಕು; ನಾನು ಅಪರಾಧಿ ಆಗಿದ್ದರೆ ಅವರು ನನ್ನನ್ನು ಕೊಲ್ಲಿಸಲಿ,” ಎಂದನು.
೩೩. ಯೋವಾಬನು ಹೋಗಿ ಇದನ್ನು ಅರಸನಿಗೆ ತಿಳಿಸಿದಾಗ ಅರಸನು ಅಬ್ಷಾಲೋಮನನ್ನು ಕರೆಯಿಸಿದನು. ಅವನು ಅರಸನ ಬಳಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿದನು. ಅರಸನು ಅವನಿಗೆ ಮುದ್ದಿಟ್ಟನು.

ಕೀರ್ತನೆಗಳು ೬೬:೧-೭
೧. ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
೨. ಹಾಡಲಿ ಆತನ ಶ್ರೀನಾಮ ಮಹಿಮೆಗೆ II
೩. “ನಿನ್ನ ಕಾರ್ಯಗಳೆನಿತೋ ಚೇತೋಹಾರಿ I ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II
೪. ಜಗವೆಲ್ಲ ಪೂಜಿಪುದು ನಿನ್ನನು I ಪೊಗಳಿ ಮಾಳ್ಪುದು ಗುಣಗಾನವನು I ಕೀರ್ತಿಸುವುದು ನಿನ್ನ ನಾಮವನು” II
೫. ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ II
೬. ಒಣನೆಲವಾಗಿ ಮಾರ್ಪಡಿಸಿದ ಕಡಲನು I ಕಾಲು ನಡೆಯಲೇ ದಾಟಿಸಿದ ನದಿಯನು I ಇದ ನಿಮಿತ್ತ ಪಡೆಯೋಣ ಆನಂದವನು II
೭. ಆತನಾಳ್ವಿಕೆ ಶಕ್ತಿಯುತ, ನಿರಂತರ I ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I ಜಂಬ ಕೊಚ್ಚದಿರಲಿ ದಂಗೆಕೋರ II

ಜ್ಞಾನೋಕ್ತಿಗಳು ೧೬:೨೫-೨೬
೨೫. ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೆ ಒಯ್ಯುವ ಹಾದಿಯಾಗಬಹುದು.
೨೬. ದುಡಿಯುವವನು ಹೊಟ್ಟೆಪಾಡಿಗಾಗಿ ದುಡಿಯುತ್ತಾನೆ; ಹೊಟ್ಟೆಕಾಟವೆ ಸಾಕು ಅವನನ್ನು ದುಡಿಸಲಿಕ್ಕೆ.

ಯೊವಾನ್ನನು ೬:೫೨-೭೧
೫೨. ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು ಕೇಳತೊಡಗಿದರು.
೫೩. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ.
೫೪. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ.
೫೫. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ.
೫೬. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ.
೫೭. ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ.
೫೮. ಸ್ವರ್ಗದಿಂದ ಇಳಿದುಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ. ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು ಹೇಳಿದರು.
೫೯. ಕಫೆರ್ನವುಮಿನ ಪ್ರಾರ್ಥನಾಮಂದಿರದಲ್ಲಿ ಯೇಸು ಬೋಧನೆಮಾಡುತ್ತಿದ್ದಾಗ ಆಡಿದ ಮಾತುಗಳಿವು.
೬೦. ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು.
೬೧. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, “ಇಷ್ಟುಮಾತ್ರಕ್ಕೆ ನೀವು ಕಂಗೆಡಬೇಕೆ?
೬೨. ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ?
೬೩. ಸಜ್ಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ.
೬೪. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.)
೬೫. “ ‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು.
೬೬. ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ.
೬೭. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು ಇದ್ದೀರಾ?’ ಎಂದು ಕೇಳಿದರು.
೬೮. ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
೬೯. ತಾವೇ ದೇವರಿಂದ ಬಂದ ಪರಮಪೂಜ್ಯರು. ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,” ಎಂದು ಹೇಳಿದನು.
೭೦. ಆಗ ಯೇಸು, “ನಿಮ್ಮಲ್ಲಿ ಹನ್ನೆರಡುಮಂದಿಯನ್ನು ನಾನು ಆಯ್ದುಕೊಂಡೆನಲ್ಲವೆ? ಆದರೂ ನಿಮ್ಮಲ್ಲಿ ಒಬ್ಬನು ಪಿಶಾಚಿಯಾಗಿ ಇದ್ದಾನೆ,” ಎಂದರು.
೭೧. ಅವರು ಹೀಗೆ ಹೇಳಿದ್ದು ಸಿಮೋನನ ಮಗ ಇಸ್ಕರಿಯೋತಿನ ಯೂದನನ್ನು ಕುರಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದುಕೊಡಲಿದ್ದ ಗುರುದ್ರೋಹಿ.