A A A A A

ಸಮುವೇಲನು ೨ ೫:೧-೨೫
೧. ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು;
೨. ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು.
೩. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.
೪. ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು.
೫. ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತಮೂರು ವರ್ಷ.
೬. ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು.
೭. ಆದರೂ ಅವನು, ಈಗ ‘ದಾವೀದನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
೮. ಆ ದಿವಸ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು ಜಲದ್ವಾರದಲ್ಲೆ ಹತ್ತಿ ಹೋಗಿ ನನ್ನನ್ನು ದ್ವೇಷಿಸುವ ಕುರುಡರನ್ನೂ ಕುಂಟರನ್ನೂ ಕಂದಕದಲ್ಲಿ ನಾಶಮಾಡಿಬಿಡಲಿ,” ಎಂದು ಹೇಳಿದನು. ಆದುದರಿಂದಲೇ “ಕುರುಡರೂ ಕುಂಟರೂ ದೇವಾಲಯದೊಳಗೆ ಹೋಗಲಾಗದು,” ಎಂಬ ಹೇಳಿಕೆಯುಂಟು.
೯. ದಾವೀದನು ಆ ಕೋಟೆಗೆ ‘ದಾವೀದನಗರ’ ಎಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಿದ್ದನು. ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಿನ ಪೌಳಿಗೋಡೆಯನ್ನು ಕಟ್ಟಿಸಿದನು.
೧೦. ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ಧಿಹೊಂದುತ್ತಾ ಬಂದನು.
೧೧. ಟೈರಿನ ರಾಜನಾದ ಹೀರಾಮನು ದಾವೀದನಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಹಾಗು ಶಿಲ್ಪಿಗಳನ್ನು ಕಳುಹಿಸಿದನು. ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು.
೧೨. ಹೀಗೆ ದಾವೀದನು, “ಸರ್ವೇಶ್ವರಸ್ವಾಮಿ ನನ್ನನ್ನು ಇಸ್ರಯೇಲ್ ಅರಸನನ್ನಾಗಿ ಸ್ಥಿರಪಡಿಸಿದ್ದಾರೆ, ತಮ್ಮ ಪ್ರಜೆಗಳಾದ ಇಸ್ರಯೇಲರ ನಿಮಿತ್ತ ನನ್ನ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ,” ಎಂದು ತಿಳಿದುಕೊಂಡನು.
೧೩. ಹೆಬ್ರೋನಿನಿಂದ ಜೆರುಸಲೇಮಿಗೆ ಬಂದ ಮೇಲೆ ದಾವೀದನು ಹೆಚ್ಚುಮಂದಿ ಸ್ತ್ರೀಯರನ್ನು ಪತ್ನಿಯರನ್ನಾಗಿ ಹಾಗು ಉಪಪತ್ನಿಯರನ್ನಾಗಿ ಮಾಡಿಕೊಂಡನು. ಅವನಿಗೆ ಇನ್ನೂ ಕೆಲವು ಮಂದಿ ಗಂಡುಹೆಣ್ಣು ಮಕ್ಕಳು ಹುಟ್ಟಿದರು.
೧೪. ಅಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಇವು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,
೧೫. ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,
೧೬. ಎಲೀಷಾಮ, ಎಲ್ಯಾದ ಹಾಗು ಎಲೀಫೆಲೆಟ್.
೧೭. ಇಸ್ರಯೇಲರು ದಾವೀದನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ಸಮಾಚಾರ ಫಿಲಿಷ್ಟಿಯರಿಗೆ ಮುಟ್ಟಿತು. ಆಗ ಅವರು ಅವನನ್ನು ಬಂಧಿಸಲು ಬಂದರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.
೧೮. ಫಿಲಿಷ್ಟಿಯರು ನಾಡಿನೊಳಗೆ ನುಗ್ಗಿ ರೆಫಾಯಿಮ್ ತಗ್ಗಿಗೆ ಬಂದು ಪಾಳೆಯ ಮಾಡಿಕೊಂಡರು.
೧೯. ದಾವೀದನು ಸರ್ವೇಶ್ವರನನ್ನು, “ನಾನು ಫಿಲಿಷ್ಟಿಯರ ಮೇಲೆ ದಾಳಿ ಮಾಡಬಹುದೇ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿರಾ?’ ಎಂದು ಕೇಳಿದನು. ಸರ್ವೇಶ್ವರ, “ಹೋಗು, ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸುವೆನು,” ಎಂದು ಉತ್ತರಕೊಟ್ಟರು.
೨೦. ಆದುದರಿಂದ ಅವನು ಹೋಗಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ಸರ್ವೇಶ್ವರ ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ ಆ ಯುದ್ಧಸ್ಥಳಕ್ಕೆ, ‘ಬಾಳ್ ಪೆರಾಚೀಮ್’ ಎಂದು ಹೆಸರಿಟ್ಟನು.
೨೧. ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.
೨೨. ಫಿಲಿಷ್ಟಿಯರು ಇನ್ನೊಮ್ಮೆ ಹೊರಟುಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.
೨೩. ದಾವೀದನು ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸಿದಾಗ ಅವರು, “ನೀನು ನೆಟ್ಟಗೆ ಹೋಗಿ ಅವರ ಮೇಲೆ ದಾಳಿ ಮಾಡಬೇಡ; ಅವರ ಹಿಂದಳವನ್ನು ಸುತ್ತಿಕೊಂಡು ಹೋಗಿ ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.
೨೪. ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಸರ್ವೇಶ್ವರ, ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕಾಗಿ ನಿನ್ನ ಮುಂದಾಗಿ ಹೊರಟರೆಂದು ತಿಳಿದುಕೊಂಡು ಅವರ ಮೇಲೆ ದಾಳಿಮಾಡು,” ಎಂದರು.
೨೫. ದಾವೀದನು ಸರ್ವೇಶ್ವರನ ಆಜ್ಞಾನುಸಾರ ಮಾಡಿ ಫಿಲಿಷ್ಟಿಯರನ್ನು ಗೆಬದಿಂದ ಗೆಜರಿನವರೆಗೂ ಹೊಡೆದು ಓಡಿಸಿದನು.

ಸಮುವೇಲನು ೨ ೬:೧-೨೩
೧. ಪುನಃ ದಾವೀದನು ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ದೇವರ ಮಂಜೂಷವನ್ನು ತರುವುದಕ್ಕಾಗಿ ಅವರೆಲ್ಲರ ಸಹಿತ ಜುದೇಯ ನಾಡಿನ ಬಾಳಾ ಎಂಬಲ್ಲಿಗೆ ಹೋದನು.
೨. ಆ ಮಂಜೂಷವು ದೇವನಾಮದಿಂದ, ಅಂದರೆ ‘ಕೆರೂಬಿಯರ ನಡುವೆ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರ’ ಎಂಬ ನಾಮದಿಂದ ಸುಪ್ರಸಿದ್ಧವಾಗಿತ್ತು.
೩. ದೇವರ ಆ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗು ಅಹೀಯೋವನು ಆ ಬಂಡಿಯನ್ನು ನಡೆಸಿದರು.
೪. ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲಾದ ಆ ದೇವರ ಮಂಜೂಷದ ಮುಂದೆ ಅಹೀಯೋವನು ನಡೆಯುತ್ತಿದ್ದನು.
೫. ದಾವೀದನೂ ಎಲ್ಲ ಇಸ್ರಯೇಲರೂ ಕಿನ್ನರಿ, ಸ್ವರಮಂಡಲ, ತಮಟೆ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು, ಪೂರ್ಣಾವೇಶದಿಂದ ಗೀತೆಗಳನ್ನು ಹಾಡುತ್ತಾ, ಸರ್ವೇಶ್ವರನ ಮುಂದೆ ನರ್ತನ ಮಾಡುತ್ತಾ ಹೋದರು.
೬. ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ತಡವರಿಸಿದವು. ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
೭. ಆಗ ಸರ್ವೇಶ್ವರ ಉಜ್ಜನ ಮೇಲೆ ಕೋಪಗೊಂಡರು. ಅಂಥ ಅಗೌರವಕ್ಕಾಗಿ ಅವನನ್ನು ದಂಡಿಸಿದರು. ಅವನು ಅಲ್ಲೇ ದೇವರ ಮಂಜೂಷದ ಬಳಿ ಸತ್ತುಬಿದ್ದನು.
೮. ಸರ್ವೇಶ್ವರ ಉಜ್ಜನನ್ನು ಶಿಕ್ಷಿಸಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ ‘ಪೆರೆಚುಜ್ಜಾ’ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.
೯. ಆ ದಿನ ದಾವೀದನು ಸರ್ವೇಶ್ವರನಿಗೆ ಭಯಪಟ್ಟನು; ಆ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆಲೋಚಿಸಿದನು.
೧೦. ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
೧೧. ಸರ್ವೇಶ್ವರನ ಮಂಜೂಷ ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಅವಧಿಯಲ್ಲಿ ಸರ್ವೇಶ್ವರ ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದರು.
೧೨. ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದನಗರಕ್ಕೆ ತಂದನು.
೧೩. ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು.
೧೪. ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು.
೧೫. ಹೀಗೆ ದಾವೀದನು ಹಾಗು ಎಲ್ಲ ಇಸ್ರಯೇಲರೂ ಜಯಕಾರ ಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದರು.
೧೬. ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿ ನೋಡಿ ದಾವೀದನು ಸರ್ವೇಶ್ವರನ ಮುಂದೆ ನಲಿದಾಡುತ್ತಾ ಕುಣಿಯುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲೇ ಅವನನ್ನು ತಿರಸ್ಕರಿಸಿದಳು.
೧೭. ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದನು.
೧೮. ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
೧೯. ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
೨೦. ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದಳು. “ಈ ದಿನ ಇಸ್ರಯೇಲರ ಅರಸರು ಎಂಥ ಅಗೌರವದಿಂದ ನಡೆದುಕೊಂಡರು! ಹುಚ್ಚರಲ್ಲಿ ಒಬ್ಬರಂತೆ ತಮ್ಮ ಜನಸಾಮಾನ್ಯರಾದ ದಾಸಿಯರ ಮುಂದೆ ಬೆತ್ತಲೆಯಾಗಿದ್ದರಲ್ಲಾ!” ಎಂದಳು.
೨೧. ಆಗ ದಾವೀದನು ಆಕೆಗೆ, “ನಾನು ಮಾಡಿದ್ದು ಸರ್ವೇಶ್ವರನ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಯೇಲರ ಅರಸನನ್ನಾಗಿ ಮಾಡಿದ ಆ ಸರ್ವೇಶ್ವರನ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
೨೨. ಇದಕ್ಕಿಂತಲೂ ಹೆಚ್ಚಾದ ತಿರಸ್ಕಾರ ಹೊಂದುವುದಕ್ಕೂ ನನ್ನನ್ನೇ ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ನಾನು ಸಿದ್ಧನು. ನೀನು ಹೇಳಿದ ದಾಸಿಯರಾದರೋ ನನ್ನನ್ನು ಹೇಗೂ ಸನ್ಮಾನಿಸುವರು!” ಎಂದನು.
೨೩. ಸೌಲನ ಮಗಳಾದ ಆ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ.

ಕೀರ್ತನೆಗಳು ೬೩:೧-೧೧
೧. ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ I ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ I ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ II
೨. ನಿನ್ನ ಮಂದಿರದಲಿ ನನಗಾದ ದರ್ಶನದಲಿ I ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ II
೩. ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ I ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ II
೪. ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ I ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ II
೫. ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ I ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ II
೬. ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ I ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ II
೭. ನನಗೆ ನೀನು ನಿರಂತರದ ಸಹಾಯಕ I ನಿನ್ನ ರೆಕ್ಕೆಗಳಡಿ ನಾ ಸುಖಿ ಗಾಯಕ II
೮. ನನ್ನಾತ್ಮ ನಿನಗಾತುಕೊಂಡಿದೆ I ನಿನ್ನ ಬಲಗೈ ನನಗಿಂಬಾಗಿದೆ II
೯. ಕೇಡು ಬಗೆಯುವವರು ನನ್ನ ಪ್ರಾಣಕೆ I ಇಳಿದು ಹೋಗುವರು ಅಧೋಲೋಕಕೆ II
೧೦. ಕತ್ತಿಗವರು ತುತ್ತಾಗುವರು I ನರಿತೋಳಗಳ ಪಾಲಾಗುವರು II
೧೧. ಹರ್ಷಿಸುವನು ರಾಜಾಧಿರಾಜನು ದೇವನಲಿ I ಸಂತೋಷಿಸುವರು ಆಣೆಯಿಟ್ಟವರು ಆತನಲಿ I ಸದ್ದಿಲ್ಲದಂತಾಗ್ವುದು ಸುಳ್ಳಾಡಿದ ಬಾಯಿ ಅಲ್ಲಿ II

ಜ್ಞಾನೋಕ್ತಿಗಳು ೧೬:೧೬-೧೭
೧೬. ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು.
೧೭. ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.

ಯೊವಾನ್ನನು ೫:೧-೨೩
೧. ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸು ಸ್ವಾಮಿ ಜೆರುಸಲೇಮಿಗೆ ತೆರಳಿದರು.
೨. ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ.
೩. ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು.
೪. ***
೫. ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು.
೬. ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣಹೊಂದಲು ಮನಸ್ಸಿದೆಯೇ?’ ಎಂದು ಕೇಳಿದರು.
೭. “ಸ್ವಾಮೀ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದುಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ.
೮. ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,” ಎಂದರು.
೯. ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.
೧೦. ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ, ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು.
೧೧. ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು.
೧೨. ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು.
೧೩. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿಬಿಟ್ಟಿದ್ದರು.
೧೪. ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು.
೧೫. ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು.
೧೬. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು.
೧೭. ಅದಕ್ಕೆ ಉತ್ತರವಾಗಿ ಯೇಸು, “ನನ್ನ ಪಿತ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯನಿರತನಾಗಿದ್ದೇನೆ,” ಎಂದು ನುಡಿದರು.
೧೮. ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು.
೧೯. ಯೇಸು ಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು.
೨೦. ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ.
೨೧. ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನೂ ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ.
೨೨. ಅಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ.
೨೩. ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ.