A A A A A
ಬೈಬಲ್ ಒಂದು ವರ್ಷದಲ್ಲಿ
ಮಾರ್ಚ್ ೩

ಸಂಖ್ಯಾಕಾಂಡ ೩:೧-೫೧
೧. ಸೀನಾಯಿ ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಮೋಶೆಯ ಸಂಗಡ ಮಾತಾಡಿದ ಕಾಲದಲ್ಲಿದ್ದ ಮೋಶೆ - ಆರೋನರ ವಂಶಸ್ಥರ ವಿವರ:
೨. ಆರೋನನಿಗಿದ್ದ ಮಕ್ಕಳ ಹೆಸರುಗಳು: ಜೇಷ್ಠಪುತ್ರ ನಾದಾಬ್, ಅಬೀಹು, ಎಲ್ಲಾಜಾರ್ ಮತ್ತು ಈತಾಮಾರ್.
೩. ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಅಭಿಷೇಕದಿಂದ ಪ್ರತಿಷ್ಠಿತರಾದವರು ಇವರೇ.
೪. ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಸರ್ವೇಶ್ವರ ಆಜ್ಞಾಪಿಸದ ಅಪವಿತ್ರ ಅಗ್ನಿಯಿಂದ ಧೂಪವನ್ನು ಸಮರ್ಪಿಸಿದರು. ಈ ಕಾರಣ ಸರ್ವೇಶ್ವರನ ಸನ್ನಿಧಿಯಲ್ಲಿ ಸತ್ತುಹೋದರು. ಅವರಿಗೆ ಮಕ್ಕಳಿರಲಿಲ್ಲ. ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಮಿಕ್ಕವರು ತಮ್ಮ ತಂದೆಯ ಕೈಕೆಳಗೆ ಯಾಜಕರಾಗಿ ಸೇವೆ ಸಲ್ಲಿಸಿದರು.
೫. ಸರ್ವೇಶ್ವರ ಮೋಶೆಗೆ ಇತ್ತ ಆಜ್ಞೆ ಇದು:
೬. “ನೀನು ಲೇವಿಕುಲದವರನ್ನು ಕರೆದುತಂದು ಅವರು ದೇವತಾ ಕಾರ್ಯಗಳಲ್ಲಿ ಯಾಜಕ ಆರೋನನಿಗೆ ಸಹಾಯಕರಾಗಿರುವಂತೆ ನಿಯುಕ್ತಗೊಳಿಸು.
೭. ಅವರು ದೇವದರ್ಶನದ ಗುಡಾರದ ಬಳಿಯಲ್ಲಿರಬೇಕು; ಆರೋನನಿಗೂ ಇಡೀ ಸಮಾಜಕ್ಕೂ ನೆರವಾಗಿ ದೇವಸ್ಥಾನದ ಪರಿಚರ್ಯವನ್ನು ನಡೆಸಬೇಕು.
೮. ದೇವದರ್ಶನದ ಗುಡಾರಕ್ಕೆ ಸೇರಿದ ಉಪಕರಣಗಳನ್ನು ನೋಡಿಕೊಳ್ಳಬೇಕು. ಇಸ್ರಯೇಲರ ಪರವಾಗಿ ದೇವಸ್ಥಾನದ ಸೇವಾಕಾರ್ಯಗಳನ್ನು ನಡೆಸಬೇಕು.
೯. ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸು. ಇಸ್ರಯೇಲರಲ್ಲಿ ಆರೋನನಿಗೆ ಸಂಪೂರ್ಣ ಶರಣರು ಇವರೇ.
೧೦. ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಆರೋನನನ್ನು ಹಾಗೂ ಅವನ ಮಕ್ಕಳನ್ನು ನೇಮಿಸು. ಬೇರೆ ಯಾರಾದರು ಆ ವೃತ್ತಿಗೆ ಕೈ ಹಾಕಿದರೆ ಅಂಥವನಿಗೆ ಮರಣ ಶಿಕ್ಷೆಯಾಗಬೇಕು.
೧೧. ಸರ್ವೇಶ್ವರ ಮೋಶೆಗೆ ಹೀಗೆಂದರು:
೧೨. “ನಾನು ಇಸ್ರಯೇಲರಲ್ಲಿ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನೇ ಆರಿಸಿಕೊಂಡಿದ್ದೇನೆಂದು ತಿಳಿ. ಆದುದರಿಂದ ಲೇವಿಯರು ನನಗೆ ಸೇರಿದವರು, ನನ್ನ ಸೊತ್ತು.
೧೩. ವಾಸ್ತವವಾಗಿ ಇಸ್ರಯೇಲರ ಜೇಷ್ಠರೆಲ್ಲರು ನನ್ನ ಸೊತ್ತು, ಈಜಿಪ್ಟ್ ದೇಶದಲ್ಲಿ ಜೇಷ್ಠವಾದುದೆಲ್ಲವನ್ನು ನಾನು ಸಂಹಾರಮಾಡಿದಾಗ ಇಸ್ರಯೇಲರಲ್ಲಿಯ ಜೇಷ್ಠ ಮನುಷ್ಯರನ್ನೂ ಪಶುಪ್ರಾಣಿಗಳನ್ನೂ ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆ. ಆದರೆ ಈಗ ಅಂಥವರಿಗೆ ಬದಲಾಗಿ ಲೇವಿಯರನ್ನು ಆರಿಸಿಕೊಂಡಿದ್ದೇನೆ, ಅವರು ಸರ್ವೇಶ್ವರನಾದ ನನ್ನವರು.”
೧೪. ಸರ್ವೇಶ್ವರ ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ
೧೫. “ನೀನು ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನೆಲ್ಲಾ ಗೋತ್ರ ಕುಟುಂಬಗಳ ಪ್ರಕಾರ ಎಣಿಸಬೇಕು,” ಎಂದು ಆಜ್ಞಾಪಿಸಿದರು.
೧೬. ಸ್ವಾಮಿಯ ಅಪ್ಪಣೆಯ ಮೇರೆಗೆ ಮೋಶೆ ಅವರನ್ನು ಎಣಿಸಿದನು.
೧೭. ಲೇವಿಯ ಮಕ್ಕಳ ಹೆಸರುಗಳು ಇವು: ಗೇರ್ಷೋನ್, ಕೆಹಾತ್, ಮೆರಾರೀ.
೧೮. ಇವರು ಗೋತ್ರಸ್ಥಾಪಕರು. ಗೋತ್ರಸ್ಥಾಪಕ ಗೇರ್ಷೋನನ ಮಕ್ಕಳು - ಲಿಬ್ನಿ, ಶಿಮ್ಮೀ ಎಂಬುವರು.
೧೯. ಗೋತ್ರಸ್ಥಾಪಕ ಕೆಹಾತನ ಮಕ್ಕಳು - ಅಮ್ರಾಮ್, ಇಚ್ಛಾರ್, ಹೆಬ್ರೋನ್, ಉಜ್ಜೀಯೇಲ್ ಎಂಬುವರು.
೨೦. ಮೆರಾರಿಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.
೨೧. ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರು ಶಿಮ್ಮೀ ಗೋತ್ರದವರೂ ಇದ್ದರು.
೨೨. ಅವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ ೭,೫೦೦:
೨೩. ಗೇರ್ಷೋನ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ಹಿಂದುಗಡೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೨೪. ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥ ಲಾಯೇಲನ ಮಗ ಎಲ್ಯಾಸಾಫ್.
೨೫. ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಗುಡಾರ, ಅದರ ಮೇಲಿದ್ದ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ
೨೬. ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂಥ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
೨೭. ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರು, ಹೆಬ್ರೋನ್ ಗೋತ್ರದವರು ಹಾಗೂ ಉಜ್ಜೀಯೇಲ್ ಗೋತ್ರದವರು ಇದ್ದರು.
೨೮. ಅವರಲ್ಲಿ ದೇವಸ್ಥಾನ ನೋಡಿಕೊಳ್ಳತಕ್ಕವರು ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ ೮,೬೦೦:
೨೯. ಕೆಹಾತ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ದಕ್ಷಿಣ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೩೦. ಈ ಕೆಹಾತ್ಯರ ಗೋತ್ರಗಳ ಮುಖ್ಯಸ್ಥನು ಉಜ್ಜೀಯೇಲನ ಮಗ ಎಲೀಚಾಫಾನ್.
೩೧. ಅವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ತೆರೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
೩೨. ಇದಲ್ಲದೆ ಮಹಾಯಾಜಕ ಆರೋನನ ಮಗ ಎಲ್ಲಾಜಾರನು ಲೇವಿಯರ ಮುಖ್ಯಸ್ಥರಿಗೆ ಅಧ್ಯಕ್ಷನಾಗಿದ್ದ; ದೇವಸ್ಥಾನವನ್ನು ಕಾಯುವವರಿಗೆ ಮೇಲ್ವಿಚಾರಕನಾಗಿದ್ದ.
೩೩. ಮೆರಾರೀ ವಂಶದವರಲ್ಲಿ ಮಹ್ಲೀ ಗೋತ್ರದವರು ಮತ್ತು ಮೂಷಿ ಗೋತ್ರದವರು ಇದ್ದರು.
೩೪. ಇವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - ೬,೨೦೦:
೩೫. ಮೆರಾರೀಯರ ಗೋತ್ರಗಳ ಮುಖ್ಯಸ್ಥನು ಅಬೀಹೈಲನ ಮಗ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೩೬. ಮೇರಾರೀ ವಂಶದವರ ವಶಕ್ಕೆ ಒಪ್ಪಿಸಲಾಗಿದ್ದವುಗಳು ಇವು - ಗುಡಾರದ ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು,
೩೭. ಇವುಗಳ ಉಪಕರಣಗಳು, ಅಂಗಳದ ಸುತ್ತಲಿದ್ದ ಕಂಬಗಳು, ಅವುಗಳ ಗದ್ದಿಗೆ ಕಲ್ಲುಗಳು, ಗೂಟಗಳು ಮತ್ತು ಹಗ್ಗಗಳು. ಇಂಥ ಎಲ್ಲಾ ವಿಧವಾದ ಸೇವೆಯನ್ನು ಇವರೇ ಮಾಡಬೇಕಾಗಿತ್ತು.
೩೮. ದೇವದರ್ಶನದ ಗುಡಾರದ ಪೂರ್ವದಿಕ್ಕಿನಲ್ಲಿ, ಅಂದರೆ ಸೂರ್ಯೋದಯವಾಗುವ ಕಡೆಯಲ್ಲಿ ಮೋಶೆ ಮತ್ತು ಆರೋನನು ಹಾಗೂ ಆರೋನನ ಮಕ್ಕಳು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು. ಅವರು ಇಸ್ರಯೇಲರ ಪರವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕಾಗಿತ್ತು. ಬೇರೆ ಯಾರಾದರೂ ಆ ಕೆಲಸಕ್ಕೆ ಕೈ ಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕಾಗಿತ್ತು.
೩೯. ಮೋಶೆ ಮತ್ತು ಆರೋನರು ಸರ್ವೇಶ್ವರನ ಅಪ್ಪಣೆಯ ಮೇರೆಗೆ ಕುಟುಂಬಗಳ ಪ್ರಕಾರ ಎಣಿಸಿದ ಲೇವಿಯರ ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - ೨೨,೦೦೦:
೪೦. ಸರ್ವೇಶ್ವರ ಮೋಶೆಗೆ, “ನೀನು ಇಸ್ರಯೇಲರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಜೇಷ್ಠಪುತ್ರರನ್ನು ಹೆಸರು ಹಿಡಿದು ಎಣಿಕೆಮಾಡು.
೪೧. ಆದರೆ ಸರ್ವೇಶ್ವರನೆಂಬ ನನ್ನ ಸೊತ್ತಾಗುವುದಕ್ಕೆ ನೀನು ಇಸ್ರಯೇಲರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೋ,” ಎಂದು ಆಜ್ಞಾಪಿಸಿದರು.
೪೨. ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಇಸ್ರಯೇಲರಲ್ಲಿದ್ದ ಜೇಷ್ಠರಾದವರೆಲ್ಲರನ್ನು ಎಣಿಕೆಮಾಡಿದನು.
೪೩. ಹೆಸರು ಹಿಡಿದು ಎಣಿಕೆಯಾದವರ, ಅಂದರೆ ಒಂದು ತಿಂಗಳ ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - ೨೨,೨೭೩:
೪೪. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದೇನೆಂದರೆ -
೪೫. “ನೀನು ಇಸ್ರಯೇಲರ ಜೇಷ್ಠರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೋ. ಲೇವಿಯರೇ ನನ್ನ ಸೊತ್ತು. ನಾನು ಸರ್ವೇಶ್ವರ!
೪೬. ಲೇವಿಯರ ಸಂಖ್ಯೆಗಿಂತ ೨೭೩ ಮಂದಿ ಜೇಷ್ಠರು ಇಸ್ರಯೇಲರಲ್ಲಿ ಹೆಚ್ಚಾಗಿದ್ದಾರೆ. ಆದುದರಿಂದ ಅವರನ್ನು ವಿಮೋಚಿಸುವುದಕ್ಕಾಗಿ ತಲೆ ಒಂದಕ್ಕೆ ಐದು ಬೆಳ್ಳಿ ನಾಣ್ಯಗಳಂತೆ ಈಡು ತೆಗೆದುಕೊ.
೪೭. ದೇವರ ಸೇವೆಗೆ ನಿಗದಿಯಾದ ನಾಣ್ಯಗಳ ಮೇರೆಗೆ ತೆಗೆದುಕೊಳ್ಳಬೇಕು.
೪೮. ಆ ಹೆಚ್ಚಾಗಿರುವವರ ವಿಮೋಚನೆಗಾಗಿ ಅವರು ಕೊಡುವ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಡು,” ಎಂದರು.
೪೯. ಅದರಂತೆಯೇ ಮೋಶೆ ಲೇವಿಯರಿಗಿಂತ ಹೆಚ್ಚಾದ ಜೇಷ್ಠರನ್ನು ವಿಮೋಚಿಸುವುದಕ್ಕಾಗಿ ಹಣವನ್ನು ತೆಗೆದುಕೊಂಡನು.
೫೦. ದೇವರ ಸೇವೆಗೆ ನಿಗದಿಯಾದ ನಾಣ್ಯದ ಮೇರೆಗೆ ೧೩೬೫ ನಾಣ್ಯಗಳನ್ನು ತೆಗೆದುಕೊಂಡನು.
೫೧. ಸರ್ವೇಶ್ವರನ ಆಜ್ಞೆಯಂತೆ ವಿಮೋಚನೆಯ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಟ್ಟನು.

ಸಂಖ್ಯಾಕಾಂಡ ೪:೧-೪೯
೧. ಸರ್ವೇಶ್ವರ ಸ್ವಾಮಿ, ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
೨. “ನೀವು ಲೇವಿಯರಲ್ಲಿಯ ಕೆಹಾತ್ಯರನ್ನು ಎಣಿಕೆಮಾಡಬೇಕು, ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.
೩. ***
೪. “ಕೆಹಾತ್ಯರು ಕೈಗೊಳ್ಳಬೇಕಾದ ಕರ್ತವ್ಯಗಳು ಇವು: ದೇವದರ್ಶನದ ಗುಡಾರದಲ್ಲಿ ಪರಮ ಪವಿತ್ರವಾದ ವಸ್ತುಗಳನ್ನು ಅವರು ನೋಡಿಕೊಳ್ಳಬೇಕು.
೫. ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು.
೬. ಅದರ ಮೇಲೆ ಹಸನಾದ ತೊಗಲನ್ನು ಮತ್ತು ನೀಲಿ ಬಟ್ಟೆಯನ್ನು ಹೊದಿಸಬೇಕು. (ಮಂಜೂಷದ ಬಳೆಗಳಿಗೆ) ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
೭. “ಸನ್ನಿಧಿ ಕಾಣಿಕೆಯ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಿ ಅದರ ಮೇಲೆ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು ಹಾಗೂ ದಾನ್ಯದ್ರವ್ಯಾರ್ಪಣೆಯ ಬಟ್ಟಲುಗಳನ್ನು ಅವರು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಗಳನ್ನು ಅದರ ಮೇಲೆ ಇಡಬೇಕು.
೮. ಅವೆಲ್ಲವುಗಳ ಮೇಲೆ ರಕ್ತವರ್ಣದ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
೯. “ದೀಪಸ್ತಂಭವನ್ನು, ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನು ಹಾಗೂ ಎಣ್ಣೆಯ ಪಾತ್ರೆಗಳನ್ನು ನೀಲಿಬಟ್ಟೆಯಿಂದ ಮುಚ್ಚಿಡಬೇಕು.
೧೦. ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡ ದಂಡಕ್ಕೆ ಕಟ್ಟಬೇಕು.
೧೧. “ತರುವಾಯ ಅವರು ಬಂಗಾರದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಹಾಕಬೇಕು.
೧೨. ದೇವಸ್ಥಾನದ ಸೇವೋಪಕರಣಗಳನ್ನೆಲ್ಲಾ ನೀಲಿ ಬಟ್ಟೆಯಲ್ಲಿಟ್ಟು, ಹಸನಾದ ತೊಗಲನ್ನು ಹೊದಿಸಿ ಅಡ್ಡ ದಂಡಕ್ಕೆ ಕಟ್ಟಬೇಕು.
೧೩. ಬಲಿಪೀಠದ ಬೂದಿಯನ್ನು ತೆಗೆದುಬಿಟ್ಟು ಆ ಪೀಠದ ಮೇಲೆ ಊದಾ ವರ್ಣದ ಬಟ್ಟೆಯನ್ನು ಹಾಸಿ
೧೪. ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಠಿಕೆಗಳು, ಮುಳ್ಳುಗಳು, ಸಲಿಕೆಗಳು ಹಾಗೂ ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು.
೧೫. ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ.
೧೬. ಮಹಾಯಾಜಕ ಆರೋನನ ಮಗ ಎಲ್ಲಾಜಾರನು ದೀಪದ ಎಣ್ಣೆಯನ್ನು, ಪರಿಮಳ ಧೂಪವನ್ನು, ಅನುದಿನ ನೈವೇದ್ಯ ಮಾಡುವ ಧಾನ್ಯದ್ರವ್ಯಗಳನ್ನು ಹಾಗೂ ಅಭಿಷೇಕ ತೈಲವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು. ದೇವದರ್ಶನದ ಗುಡಾರದ ಎಲ್ಲ ಭಾಗಗಳು, ಅದರಲ್ಲಿರುವ ಸಮಸ್ತ ವಸ್ತುಗಳು ಪಾತ್ರೆಪರಿಕರಗಳು ಹಾಗೂ ಅವುಗಳಲ್ಲಿರುವುದೆಲ್ಲವೂ ಅವನ ಮೇಲ್ವಿಚಾರಣೆಯಲ್ಲಿರಬೇಕು.
೧೭. ಸರ್ವೇಶ್ವರ ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
೧೮. “ಕೆಹಾತ್ಯರ ಗೋತ್ರಕುಟುಂಬಗಳವರು ಲೇವಿಯರೊಳಗೆ ಉಳಿಯದೆ ನಾಶವಾಗುವುದಕ್ಕೆ ಆಸ್ಪದಕೊಡಬೇಡಿ.
೧೯. ಪರಮ ಪವಿತ್ರವಾದ ವಸ್ತುಗಳ ಹತ್ತಿರಕ್ಕೆ ಬರುವಾಗ ಅವರು ಸಾಯದಂತೆ ಎಚ್ಚರಿಕೆ ವಹಿಸಿರಿ. ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಅವರವರ ಕೆಲಸಗಳನ್ನು ಹೊರಬೇಕಾದ ಹೊರೆಗಳನ್ನು ಗೊತ್ತುಮಾಡಬೇಕು.
೨೦. ಕೆಹಾತ್ಯರೇ ಒಳಗೆ ಬಂದು, ಒಂದು ಕ್ಷಣ ಮಾತ್ರವೂ ಆ ಪವಿತ್ರ ವಸ್ತುಗಳನ್ನು ನೋಡದಿರಲಿ; ನೋಡಿ ಸಾಯದಿರಲಿ.
೨೧. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆ ಇದು:
೨೨. “ನೀನು ಗೇರ್ಷೋನ್ಯರನ್ನು ಲೆಕ್ಕಿಸಬೇಕು. ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬದ ಪ್ರಕಾರ ಎಣಿಸಬೇಕು.
೨೩. ***
೨೪. “ಪರಿಚರ್ಯ ಮಾಡುವುದರಲ್ಲೂ ಹೊರೆಗಳನ್ನು ಹೊರುವುದರಲ್ಲೂ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇವು:
೨೫. ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು - ಅಂದರೆ; ಗುಡಾರ ಅದರ ಹೊದಿಕೆ ಅದರ ಮೇಲಿನ ಹಸನಾದ ತೊಗಲಿನ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಿನ ಪರದೆ,
೨೬. ಗುಡಾರದ ಮತ್ತು ಬಲಿಪೀಠದ ಸುತ್ತಣ ಅಂಗಳದ ತೆರೆಗಳು, ಅದರ ಬಾಗಿಲಿನ ಪರದೆ, ಹಗ್ಗಗಳು ಮತ್ತು ಅವುಗಳ ಎಲ್ಲ ಉಪಕರಣಗಳು, ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅವರೇ ಮಾಡಬೇಕು.
೨೭. ಗೇರ್ಷೋನ್ಯರು ಹೊರೆ ಹೊರುವುದರಲ್ಲೂ ಬೇರೆ ಪರಿಚರ್ಯ ಮಾಡುವುದರಲ್ಲೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.
೨೮. ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇದೇ. ಮಹಾಯಾಜಕ ಆರೋನನ ಮಗ ಈತಾಮಾರನು ಅವರ ಮೇಲ್ವಿಚಾರಣೆಯನ್ನು ಮಾಡಬೇಕು
೨೯. “ಮೆರಾರೀಯರಲ್ಲೂ ಯಾರಾರು ಮೂವತ್ತರಿಂದ ಐವತ್ತು ವರ್ಷ ವಯಸ್ಸಿನವರಿದ್ದಾರೋ ಹಾಗೂ
೩೦. ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡು.
೩೧. ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕರ್ತವ್ಯಗಳು ಯಾವುವೆಂದರೆ -
೩೨. ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೆ ಕಲ್ಲುಗಳನ್ನು, ಗೂಟಗಳನ್ನು, ಹಗ್ಗಗಳನ್ನು ಮತ್ತು ಅವುಗಳ ಎಲ್ಲ ಉಪಕರಣಗಳನ್ನು ಹೊರಬೇಕು. ಅವರವರ ಹೊರೆಗಳನ್ನೆಲ್ಲ ನೀವೇ ಹೆಸರಿಸಿ ಗೊತ್ತುಮಾಡಬೇಕು.
೩೩. ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗ ಈತಮಾರನ ಕೈಕೆಳಗೆ ಇದನ್ನೆಲ್ಲಾ ಮಾಡಬೇಕು.”
೩೪. ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದಾರೋ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಸಿದರು.
೩೫. ***
೩೬. ಅವರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ ೨೭೫೦:
೩೭. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಯಂತೆ ಕೆಹಾತ್ಯರನ್ನು ಮೋಶೆ - ಆರೋನರು ಎಣಿಕೆಮಾಡಿದಾಗ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಜನ.
೩೮. ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾಗಿದ್ದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
೩೯. ***
೪೦. ಗೋತ್ರಕುಟುಂಬದ ಪ್ರಕಾರ ಎಣಿಕೆಯಾದವರ ಸಂಖ್ಯೆ - ೨೬೩೦:
೪೧. ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಹಾಗು ಆರೋನರಿಂದ ಎಣಿಕೆಯಾಗಿ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಮಂದಿ.
೪೨. ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
೪೩. ***
೪೪. ಗೋತ್ರಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ -೩೨೦೦:
೪೫. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಮೆರಾರೀಯರನ್ನು ಮೋಶೆ - ಆರೋನರು ಎಣಿಕೆ ಮಾಡಿದಾಗ ಅವರ ಸಂಖ್ಯೆ ಇಷ್ಟೇ ಇತ್ತು.
೪೬. ಮೋಶೆ ಹಾಗು ಆರೋನರು ಮತ್ತು ಇಸ್ರಯೇಲರ ಮುಖ್ಯಸ್ಥರು ಲೇವಿಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾಗಿದ್ದವರನ್ನು ಮತ್ತು ದೇವದರ್ಶನದ ಗುಡಾರದ ಸೇವೆಯನ್ನು ಕೈಗೊಳ್ಳಲು
೪೭. ***
೪೮. ಹಾಗೂ ಅದರ ಹೊರೆಗಳನ್ನು ಹೊರಲು ಶಕ್ತರಾಗಿದ್ದವರನ್ನು ಎಣಿಕೆಮಾಡಿದಾಗ ದೊರೆತ ಸಂಖ್ಯೆ - ೮೫೮೦:
೪೯. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಯೊಬ್ಬನಿಗೆ ಅವನವನ ಕೆಲಸ ಹಾಗೂ ಹೊಣೆಯನ್ನು ಗೊತ್ತುಮಾಡಲಾಯಿತು. ಹೀಗೆ ಸರ್ವೇಶ್ವರನ ಆಜ್ಞೆಯ ಮೇರೆಗೆ ಜನಗಣತಿ ನಡೆಯಿತು.

ಕೀರ್ತನೆಗಳು ೩೦:೧-೭
೧. ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ I ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ II
೨. ‘ಹೇ ಪ್ರಭು, ಎನ್ನ ದೇವಾ ‘ ಎಂದೆ I ನಾ ಮೊರೆಯಿಡೆ, ನೀ ಗುಣಪಡಿಸಿದೆ II
೩. ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ I ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ II
೪. ಭಕ್ತರೇ, ಸಂಕೀರ್ತಿಸಿರಿ ಪ್ರಭುವನು I ಮಾಡಿರಿ ಆತನ ನಾಮಸ್ಮರಣೆಯನು II
೫. ಆತನ ಕೋಪ ಕ್ಷಣಮಾತ್ರ I ಆತನ ಕೃಪೆ ಜೀವನ ಪರಿಯಂತ II ಇರುಳು ಬರಲು ಇರಬಹುದು ಅಳಲು I ನಲಿವು ಉಲಿವುದು ಹಗಲು ಹರಿಯಲು II
೬. ನಾನಾದರೋ ಉಲ್ಲಾಸದಿಂದಿರುವಾಗಲೂ I ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ II
೭. ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕ್ಕೆ ಅಡಿಬಂಡೆ I ನಿನ್ನ ಮುಖ ಮರೆಯಾದುದೆ ನಾ ಕಳವಳಗೊಂಡೆ II

ಜ್ಞಾನೋಕ್ತಿಗಳು ೧೦:೩೦-೩೨
೩೦. ಸಜ್ಜನರು ಎಂದಿಗೂ ಕದಲರು; ದುರ್ಜನರು ನಾಡಿನಲ್ಲಿ ನಿಲ್ಲರು.
೩೧. ಸಜ್ಜನರ ಬಾಯಲ್ಲಿ ಜ್ಞಾನ ಮೊಳೆಯುವುದು; ನೀಚನ ನಾಲಿಗೆಯೂ ಕತ್ತರಿಸಿ ಹೋಗುವುದು.
೩೨. ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.

ಮಾರ್ಕನು ೮:೧-೨೧
೧. ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ.
೨. ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ.
೩. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು.
೪. ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು.
೫. ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು.
೬. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು.
೭. ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿ ಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು.
೮. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು.
೯. ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ.
೧೦. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
೧೧. ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು.
೧೨. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು.
೧೩. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.
೧೪. ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು.
೧೫. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು.
೧೬. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು.
೧೭. ಆ ಚರ್ಚೆಯನ್ನು ಯೇಸು ಗಮನಿಸಿ, “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ?
೧೮. ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?
೧೯. ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು.
೨೦. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು.
೨೧. ಆಗ ಯೇಸು, “ಇಷ್ಟಾದರೂ, ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು.