A A A A A
ಬೈಬಲ್ ಒಂದು ವರ್ಷದಲ್ಲಿ
ಮಾರ್ಚ್ ೭

ಸಂಖ್ಯಾಕಾಂಡ ೧೧:೧-೩೫
೧. ಇಸ್ರಯೇಲರು ತಮಗೆ ದುರವಸ್ಥೆ ಪ್ರಾಪ್ತವಾಯಿತೆಂದು ಸರ್ವೇಶ್ವರ ಸ್ವಾಮಿಗೆ ವಿರುದ್ಧ ಗುಣಗುಟ್ಟಿದರು. ಅದಕ್ಕೆ ಕೋಪಗೊಂಡ ಸರ್ವೇಶ್ವರ ಅವರ ಮಧ್ಯೆ ಬೆಂಕಿ ಬೀಳುವಂತೆ ಮಾಡಿದರು. ಇದರ ಪರಿಣಾಮವಾಗಿ ಪಾಳೆಯದ ಕಡೇಭಾಗದಲ್ಲಿದ್ದವರು ಸುಟ್ಟುಹೋದರು.
೨. ಆಗ ಜನರು ಮೋಶೆಯ ಬಳಿಗೆ ಬಂದು ಮೊರೆಯಿಟ್ಟರು. ಮೋಶೆ ಅವರ ಪರವಾಗಿ ಸರ್ವೇಶ್ವರನನ್ನು ಪ್ರಾರ್ಥಿಸಿದ್ದೇ ಆ ಬೇಂಕಿ ಆರಿಹೋಯಿತು.
೩. ಆದ್ದರಿಂದ ಹಾಗು ಸರ್ವೇಶ್ವರನೇ ಆ ಬೆಂಕಿಯನ್ನು ಬರಮಾಡಿದ್ದ ಕಾರಣ ಆ ಸ್ಥಳಕ್ಕೆ “ತಬೇರ” ಎಂದು ಹೆಸರಾಯಿತು.
೪. ಇಸ್ರಯೇಲರೊಡನೆ ಪ್ರಯಾಣ ಮಾಡುತ್ತಿದ್ದ ಅನ್ಯಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ, ಕಣ್ಣೀರಿಡುತ್ತಾ: “ಅಯ್ಯೋ, ನಮಗೆ ಮಾಂಸ ಕೊಡುವವರಾರು?
೫. ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ.
೬. ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು? ಈ ‘ಮನ್ನ’ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ” ಎಂದು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದರು.
೭. ಆ ‘ಮನ್ನ’ ಕೊತ್ತುಂಬರಿ ಬೀಜದಂತಿತ್ತು; ಗುಗ್ಗುಲದಂತೆ ಕಾಣಿಸುತ್ತಿತ್ತು.
೮. ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು.
೯. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ ‘ಮನ್ನ’ವೂ ಬೀಳುತ್ತಿತ್ತು.
೧೦. ಎಲ್ಲ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠೂರವಾಗಿ ಮಾತನಾಡಿಕೊಳ್ಳುತ್ತಿದ್ದದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ.
೧೧. ಆತ ಸರ್ವೇಶ್ವರನಿಗೆ, “ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ?
೧೨. ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ‘ಮೊಲೆ ಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಮಾಣಮಾಡಿದ ನಾಡಿಗೆ ಒಯ್ಯಿ’ ಎಂದು ಹೇಳುತ್ತೀರಲ್ಲವೆ? ನಾನು ಇವರಿಗೆ ಹೆತ್ತ ತಾಯಿಯೋ?
೧೩. ಇವರು ನಿಷ್ಠೂರವಾಗಿ ಮಾತಾಡುತ್ತಾ ನನ್ನ ಬಳಿಗೆ ಬಂದು, ‘ತಿನ್ನಲಿಕ್ಕೆ ನಮಗೆ ಮಾಂಸವನ್ನು ಕೊಡು’ ಎಂದು ಕೇಳುತ್ತಿದ್ದಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು.
೧೪. ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ.
೧೫. ನೀವು ಹೀಗೆ ಮಾಡುವುದಕ್ಕಿಂತಲೂ ನನ್ನನ್ನು ಈ ಕೂಡಲೆ ಕೊಂದುಹಾಕಿದರೆ ಉಪಕಾರವಾದೀತು; ನನಗಾಗುತ್ತಿರುವ ಸಂಕಟವನ್ನು ಸಹಿಸಲಾರೆ,” ಎಂದನು.
೧೬. ಆಗ ಸರ್ವೇಶ್ವರ ಮೋಶೆಗೆ ಹೇಳಿದುದು: “ಇಸ್ರಯೇಲರಲ್ಲಿ ಹಿರಿಯರೆಂದೂ ಅಧಿಪತಿಗಳೆಂದೂ ನನಗೆ ತಿಳಿದಿರುವ ಎಪ್ಪತ್ತು ಮಂದಿಯನ್ನು ಕೂಟವಾಗಿ ಕರೆಸಿ ದೇವದರ್ಶನದ ಗುಡಾರದ ಬಳಿಗೆ ಕರೆದುಕೊಂಡು ಬಾ. ಅವರು ಅಲ್ಲೇ ನಿನ್ನೊಡನೆ ನಿಂತಿರಲಿ.
೧೭. ನಾನು ಅಲ್ಲಿಗೆ ಇಳಿದುಬಂದು ನಿನ್ನೊಡನೆ ಮಾತಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಅವರಿಗೂ ಹಂಚಿಕೊಡುವೆನು. ಆಗ ನೀನೊಬ್ಬನೇ ಈ ಜನರ ಜವಾಬ್ದಾರಿಯನ್ನು ವಹಿಸಬೇಕಾಗುವುದಿಲ್ಲ; ನಿನ್ನ ಸಂಗಡ ಇವರೂ ವಹಿಸಿಕೊಳ್ಳುವರು.
೧೮. “ಇದಲ್ಲದೆ ಇಸ್ರಯೇಲರಿಗೆ ಹೀಗೆಂದು ಹೇಳು: ‘ನಾಳೆ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳಿ; ನಾಳೆ ನಿಮಗೆ ಮಾಂಸಾಹಾರ ದೊರಕುವುದು. ನೀವು ಸರ್ವೇಶ್ವರನಿಗೆ ಕೇಳಿಸುವಂತೆ - ನಮಗೆ ಮಾಂಸ ಕೊಡುವವರೇ ಇಲ್ಲ; ಈಜಿಪ್ಟ್ ದೇಶದಲ್ಲಿ ಎಷ್ಟೋ ಸುಖವಾಗಿದ್ದೆವು - ಎಂದು ನಿಷ್ಠೂರವಾಗಿ ಮಾತಾಡುತ್ತೀರಿ. ಆದ್ದರಿಂದ ಸರ್ವೇಶ್ವರನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವರು.
೧೯. ನಿಮ್ಮ ಮಧ್ಯೆಯೇ ಇರುವ ಸರ್ವೇಶ್ವರನನ್ನು ಧಿಕ್ಕರಿಸಿ, ಅಯ್ಯೋ, ನಾವು ಈಜಿಪ್ಟನ್ನು ಬಿಟ್ಟುಬಂದು ಮೋಸವಾಯಿತು’ ಎಂದು ಅವರ ಮುಂದೆ ನಿಷ್ಠೂರವಾಗಿ ಮಾತಾಡಿದಿರಿ. ಆದ್ದರಿಂದ ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಇಪ್ಪತ್ತು ದಿನವಲ್ಲ, ಒಂದು ತಿಂಗಳು, ಪೂರ್ತಿ ತಿನ್ನುವಿರಿ.
೨೦. ಅದು ಓಕರಿಕೆಯಾಗಿ, ನಿಮ್ಮ ಮೂಗಿನಲ್ಲಿ ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ತಿನ್ನುವಿರಿ.”
೨೧. ಮೋಶೆ ಸರ್ವೇಶ್ವರನಿಗೆ, ” ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಆದರೂ ನೀವು, ‘ಇವರು ಇಡೀ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ’ ಎಂದು ಹೇಳಿದ್ದೀರಿ.
೨೨. ಅವರಿಗೆ ಬೇಕಾದಷ್ಟು ಸಿಗುವಂತೆ ಆಡುಕುರಿಗಳನ್ನು ದನಗಳನ್ನೂ ಕೊಯ್ಯಬೇಕೆನ್ನುತ್ತೀರೋ? ಇಲ್ಲವೆ ಸಮುದ್ರದಲ್ಲಿರುವ ಮೀನುಗಳನ್ನೆಲ್ಲಾ ಹಿಡಿದುಕೊಳ್ಳಬೇಕೆನ್ನುತ್ತೀರೋ? ಎಂದು ಹೇಳಿದನು.
೨೩. ಸರ್ವೇಶ್ವರ ಅವನಿಗೆ, “ಸರ್ವೇಶ್ವರನ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನೇ ನೋಡುವೆ” ಎಂದರು.
೨೪. ಮೋಶೆ ಹೊರಟುಹೋಗಿ ಸರ್ವೇಶ್ವರನ ಮಾತುಗಳನ್ನು ಜನರಿಗೆ ತಿಳಿಸಿದನು. ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು.
೨೫. ಆಗ ಸರ್ವೇಶ್ವರ ಮೇಘದಲ್ಲಿ ಇಳಿದುಬಂದು ಅವನೊಡನೆ ಮಾತಾಡಿ ಅವನಿಗೆ ಅನುಗ್ರಹಿಸಲಾಗಿದ್ದ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಹಂಚಿದರು. ಆ ಶಕ್ತಿ ಅವರ ಮೇಲೆ ಇಳಿದುಬಂದಾಗ ಅವರು ಪರವಶರಾಗಿ ಪ್ರವಾದಿಸಿದರು. ಅಂಥ ಅನುಭವ ಅವರಿಗೆ ಮತ್ತೆ ಬರಲಿಲ್ಲ.
೨೬. ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಪಾಳೆಯದೊಳಗೆ ಉಳಿದುಕೊಂಡಿದ್ದರು. ಅವರ ಹೆಸರು ಲಿಖಿತವಾಗಿದ್ದರೂ ಅವರು ದೇವದರ್ಶನದ ಗುಡಾರಕ್ಕೆ ಹೊರಟುಬಂದಿರಲಿಲ್ಲ. ಆ ಆತ್ಮಶಕ್ತಿ ಅವರ ಮೇಲೂ ಇಳಿದು ಬಂದುದರಿಂದ ಅವರು ಕೂಡ ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸಿದರು.
೨೭. ಆಗ ಒಬ್ಬ ಯುವಕ ಮೋಶೆಯ ಬಳಿಗೆ ಓಡಿಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸುತ್ತಿದ್ದಾರೆ,” ಎಂದು ತಿಳಿಸಿದನು.
೨೮. ಚಿಕ್ಕಂದಿನಿಂದ ಮೋಶೆಗೆ ಶಿಷ್ಯನಾಗಿದ್ದ ಹಾಗೂ ನೂನನ ಮಗನಾಗಿದ್ದ ಯೆಹೋಶುವನು ಮೋಶೆಗೆ, “ಗುರುವೇ, ಅವರಿಗೆ ಅದು ಬೇಡವೆನ್ನಬೇಕು ಎಂದು ವಿನಂತಿಸಿದನು.
೨೯. ಅದಕ್ಕೆ ಮೋಶೆ, “ನನ್ನ ಗೌರವ ಕಾಪಾಡಲು ನಿನಗೇಕೆ ಅಸೂಯೆ? ಸರ್ವೇಶ್ವರನ ಅನುಗ್ರಹದಿಂದ ಅವರ ಜನರೆಲ್ಲರೂ ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು” ಎಂದನು.
೩೦. ತರುವಾಯ ಮೋಶೆ ಮತ್ತು ಇಸ್ರಯೇಲರ ಹಿರಿಯರು ಪಾಳೆಯಕ್ಕೆ ಹಿಂದಿರುಗಿದರು.
೩೧. ಸರ್ವೇಶ್ವರನಿಂದ ಕಳಿಸಲಾದ ಗಾಳಿಯೊಂದು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಬಂದಿತು. ಆ ಹಕ್ಕಿಗಳು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂಮಿಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬಂದವು.
೩೨. ಇಸ್ರಯೇಲರು ಆ ದಿನ ಹಗಲಿರುಳೂ ಮರುದಿನ ಹಗಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಕಡಿಮೆ ಕೂಡಿಸಿಕೊಂಡವರು ಕೂಡ ಸಾವಿರ ಕಿಲೋಗ್ರಾಂನಷ್ಟು ಕೂಡಿಸಿಕೊಂಡರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು.
೩೩. ಅವರು ಆ ಮಾಂಸವನ್ನು ಕಚ್ಚಿ ಅಗಿದು ತಿಂದು ಮುಗಿಸುವುದರೊಳಗೆ ಸರ್ವೇಶ್ವರನ ಕೋಪ ಅವರ ವಿರುದ್ಧ ಉದ್ರೇಕಗೊಂಡಿತು. ಬಹಳಷ್ಟು ಜನ ಘೋರವ್ಯಾಧಿಗೆ ತುತ್ತಾಗಿ ಸತ್ತರು.
೩೪. ಆ ಸ್ಥಳಕ್ಕೆ “ಕಿಬ್ರೋತ್ ಹತಾವಾ” ಎಂದು ಹೆಸರಾಯಿತು. ಏಕೆಂದರೆ ಅತ್ಯಾಸೆಪಟ್ಟವರು ಅಲ್ಲಿ ಸಮಾಧಿಯಾದರು.
೩೫. ಇಸ್ರಯೇಲರು ಕಿಬ್ರೋತ್ ಹತಾವಾದಿಂದ ಹೊರಟು ಹಚೇರೋತಿಗೆ ಬಂದು ಅಲ್ಲಿ ತಂಗಿದರು.

ಸಂಖ್ಯಾಕಾಂಡ ೧೨:೧-೧೬
೧. ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು.
೨. “ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?’ ಎಂದು ಹೇಳತೊಡಗಿದರು.
೩. ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧುಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು.
೪. ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, “ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು,” ಎಂದು ಆಜ್ಞಾಪಿಸಿದರು.
೫. ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು.
೬. ಅವರು ಸಮೀಪಿಸಿದಾಗ, “ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ.
೭. ನನ್ನ ದಾಸನಾದ ಮೋಶೆ ಅಂಥವನಲ್ಲ ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ.
೮. ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ, ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ ಸರ್ವೇಶ್ವರನ ಸ್ವರೂಪವನ್ನೆ ಕಂಡವನಾತ! ಇಂತಿರಲು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? ಎಂದು ಹೇಳಿ ಕೋಪದಿಂದ ಹೊರಟುಹೋದರು.
೯. ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡನು.
೧೦. ***
೧೧. ಆಗ ಆರೋನನು ಮೋಶೆಗೆ, “ಅಯ್ಯಾ, ನಾವು ಮೂರ್ಖರಾಗಿ ನಡೆದು ಪಾಪಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ,” ಇದು ನನ್ನ ವಿನಂತಿ.
೧೨. ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ,” ಎಂದು ಕೇಳಿಕೊಂಡನು.
೧೩. ಆಗ ಮೋಶೆ ಸರ್ವೇಶ್ವರನಿಗೆ, “ಹೇ ದೇವಾ, ಆಕೆಯನ್ನು ಗುಣಪಡಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಮೊರೆಯಿಟ್ಟನು.
೧೪. ಅದಕ್ಕೆ ಸರ್ವೇಶ್ವರ, “ಅವಳ ತಂದೆ ಅವಳ ಮುಖದ ಮೇಲೆ ಉಗುಳಿದ್ದರೆ ಏಳು ದಿವಸ ಅವಳು ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೆ? ಅಂತೆಯೇ ಅವಳು ಏಳು ದಿವಸ ಪಾಳೆಯದಿಂದ ಹೊರಗಿರಲಿ. ಅನಂತರ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟರು.
೧೫. ಹೀಗೆ ಮಿರ್ಯಾಮಳು ಏಳು ದಿವಸ ಪಾಳೆಯದ ಹೊರಗೆ ಇರಬೇಕಾಯಿತು. ಅವಳನ್ನು ಮರಳಿ ಸೇರಿಸಿಕೊಳ್ಳುವವರೆಗೆ ಇಸ್ರಯೇಲರು ಪ್ರಯಾಣ ಮಾಡಲಿಲ್ಲ.
೧೬. ಅನಂತರ ಅವರು ಹಚೆರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.

ಕೀರ್ತನೆಗಳು ೩೧:೧೫-೧೮
೧೫. ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ I ಬೆನ್ನಟ್ಟಿಬರುವ ವೈರಿಯಿಂದ ರಕ್ಷಿಸೆನ್ನ II
೧೬. ಬೆಳಗಿಸಲಿ ದಾಸನನು ನಿನ್ನ ಮುಖತೇಜವು I ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು II
೧೭. ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ I ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ II
೧೮. ಸೇದಿಹೋಗಲಿ ಸಜ್ಜನರ ವಿರುದ್ಧ ಸುಳ್ಳಾಡುವ ನಾಲಿಗೆ I ಬಿದ್ದುಹೋಗಲಿ, ಸೊಕ್ಕಿನಿಂದವರನು ಧಿಕ್ಕರಿಸುವ ನಾಲಿಗೆ II

ಜ್ಞಾನೋಕ್ತಿಗಳು ೧೧:೧೨-೧೪
೧೨. ನೆರೆಯವನನ್ನು ತೃಣೀಕರಿಸುವವನು ಬುದ್ಧಿಹೀನ; ವಿವೇಕಿಯು ಅದರ ಬಗ್ಗೆ ತಾಳುವನು ಮೌನ.
೧೩. ಚಾಡಿಕೋರನು ಗುಟ್ಟನ್ನು ರಟ್ಟುಮಾಡುವನು; ನಂಬಿಕಸ್ತನು ಅದನ್ನು ಮುಚ್ಚಿ ಮರೆಮಾಡುವನು.
೧೪. ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು.

ಮಾರ್ಕನು ೧೦:೧೨-೧೪
೧೨. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ,” ಎಂದರು.
೧೩. ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು.
೧೪. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ.