A A A A A

ಕ್ರಾನಿಕಲ್ಸ್ ೧ ೨೩:೧-೩೨
೧. ದಾವೀದನು ಹಣ್ಣುಹಣ್ಣು ಮುದುಕನಾದಾಗ ತನ್ನ ಮಗ ಸೊಲೊಮೋನನನ್ನು ಇಸ್ರಯೇಲರ ಅರಸನನ್ನಾಗಿ ಮಾಡಿದನು.
೨. ಆಗ ಇಸ್ರಯೇಲರ ಎಲ್ಲಾ ಅಧಿಪತಿಗಳನ್ನು, ಯಾಜಕರನ್ನು ಹಾಗು ಲೇವಿಯರನ್ನು ತನ್ನ ಬಳಿಯಲ್ಲಿ ಸಭೆ ಸೇರಿಸಿದನು.
೩. ಮೂವತ್ತು ವರ್ಷ ಮೊದಲ್ಗೊಂಡು ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆ ಮೂವತ್ತೆಂಟು ಸಾವಿರವಿತ್ತು.
೪. ಇವರಲ್ಲಿ ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ, ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ,
೫. ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.
೬. ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು.
೭. ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಹಾಗೂ ಶಿಮ್ಮೀ ಎಂಬವರು.
೮. ಲದ್ದಾನನ ಮಕ್ಕಳಾದ ಯೆಹೀಯೇಲ್, ಜೇತಾಮ್, ಯೋವೇಲ್ ಎಂಬ ಮೂರು ಮಂದಿ ಮುಖ್ಯಸ್ಥರಾಗಿದ್ದರು.
೯. ಶಿಮ್ಮೀಯ ಮಕ್ಕಳು ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿ. ಇವರು ಲದ್ದಾನ್ಯರ ಗೋತ್ರ ಪ್ರಧಾನರು.
೧೦. ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
೧೧. ಇವರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನು. ಯೆಯೂಷ್, ಬೆರೀಯರಿಗೆ ಬಹಳ ಮಂದಿ ಮಕ್ಕಳು ಇರಲಿಲ್ಲವಾದ್ದರಿಂದ ಅವರಿಬ್ಬರೂ ಒಂದೇ ಕುಟುಂಬ ಹಾಗೂ ವರ್ಗವಾಗಿ ಎಣಿಕೆಯಾಗಿದ್ದರು.
೧೨. ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
೧೩. ಅಮ್ರಾಮನ ಮಕ್ಕಳು ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾಪರಿಶುದ್ಧ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟಿದ್ದರು. ಇವರು ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಧೂಪಾರತಿ ಎತ್ತುವವರೂ ಸೇವೆ ಮಾಡುವವರೂ ಸರ್ವೇಶ್ವರನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರಬೇಕಿತ್ತು.
೧೪. ದೈವಪುರುಷನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಲೆಕ್ಕಿತರಾಗಿದ್ದರು.
೧೫. ಮೋಶೆಯ ಮಕ್ಕಳು ಗೇರ್ಷೋಮ್ ಹಾಗೂ ಎಲೀಯೆಜೆರ್ ಎಂಬವರು.
೧೬. ಮುಖ್ಯಸ್ಥನಾದ ಶೆಬೂವೇಲನು ಗೇರ್ಷೋಮನ ಮಗ.
೧೭. ಮುಖ್ಯಸ್ಥನಾದ ರೆಹಬ್ಯ ಎಲೀಯೆಜೆರನ ಮಗ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಂದಿ ಮಕ್ಕಳಿದ್ದರು.
೧೮. ಮುಖ್ಯಸ್ಥ ಶೆಲೋಮೋತನು ಇಚ್ಹಾರನ ಮಗ.
೧೯. ಹೆಬ್ರೋನನ ಮಕ್ಕಳಲ್ಲಿ ಯೇರಿಯ ಮುಖ್ಯಸ್ಥ; ಅಮರ್ಯ ಎರಡನೆಯವನು, ಯಹಜೀಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
೨೦. ಉಜ್ಜೀಯೇಲನ ಮಕ್ಕಳಲ್ಲಿ ಮೀಕನೂ ಮುಖ್ಯಸ್ಥ; ಇಷೀಯನು ಎರಡನೆಯವನು.
೨೧. ಮೆರಾರೀಯ ಮಕ್ಕಳು ಮಹ್ಲೀ ಹಾಗೂ ಮೂಷೀ ಎಂಬವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಹಾಗೂ ಕೀಷ್ ಇವರು.
೨೨. ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.
೨೩. ಮೂಷಿಗೆ ಮೆಹ್ಲೀ, ಏದೆರ್, ಯೆರೇಮೋತ್ ಎಂಬ ಮೂರು ಮಂದಿ ಮಕ್ಕಳಿದ್ದರು.
೨೪. ಲೇವಿಯರ ಪಟ್ಟಿಯಲ್ಲಿ ಬರೆದಿರುವ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಮುಖ್ಯಸ್ಥರು. ಇವರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರು ಸರ್ವೇಶ್ವರನ ಆಲಯದಲ್ಲಿ ಸೇವೆಮಾಡಲು ಅರ್ಹರಾಗಿದ್ದರು.
೨೫. ಇಸ್ರಯೇಲ್ ದೇವರಾದ ಸರ್ವೇಶ್ವರ, ತಮ್ಮ ಪ್ರಜೆಗೆ ನೆಮ್ಮದಿಯನ್ನು ಅನುಗ್ರಹಿಸಿ, ಸದಾ ಜೆರುಸಲೇಮಿನಲ್ಲಿ ವಾಸಿಸುವವರಾದ ಕಾರಣ,
೨೬. ಲೇವಿಯರು ಇನ್ನು ಮುಂದೆ ಅವರ ಗುಡಾರವನ್ನೂ ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲವೆಂದುಕೊಂಡು, ದಾವೀದನು ಈ ಪ್ರಕಾರ ವಿಧಿಸಿದನು:
೨೭. ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರೆಲ್ಲರೂ ಲೆಕ್ಕಿಸಲ್ಪಟ್ಟರು.
೨೮. ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಸರ್ವೇಶ್ವರನ ಆಲಯದ ಪರಿಚರ್ಯೆಯನ್ನು ನಡೆಸಬೇಕಾಗಿತ್ತು. ಅವರ ಕೆಲಸ ಕಾರ್ಯ ಇವು: ಅಂಗಳವನ್ನೂ ಅಲ್ಲಿಯ ಕೋಣೆಗಳನ್ನು ನೋಡಿಕೊಳ್ಳುವುದು, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದು, ದೇವಾಲಯದಲ್ಲಿ ಸೇವೆಮಾಡುವುದು;
೨೯. ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯ ಇವುಗಳನ್ನು ಒದಗಿಸುವುದು; ಸೇರು, ಅಳತೆಗೋಲು ಇವುಗಳನ್ನು ಪರೀಕ್ಷಿಸುವುದು;
೩೦. ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ನಿಯಮಿತ ಸಂಖ್ಯೆಗೆ ಸರಿಯಾಗಿ ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ, ಸರ್ವೇಶ್ವರನ ಮುಂದೆ ತಪ್ಪದೆ ನಡೆಯುವ ದಹನಬಲಿ ಸಮರ್ಪಣೆಯ ಹೊತ್ತಿನಲ್ಲಿ, ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದು.
೩೧. ***
೩೨. ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು, ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವುದೇ ಸರ್ವೇಶ್ವರನ ಆಲಯದಲ್ಲಿ ಅವರು ಮಾಡಬೇಕಾಗಿದ್ದ ಪರಿಚರ್ಯೆ.

ಕ್ರಾನಿಕಲ್ಸ್ ೧ ೨೪:೧-೩೧
೧. ಆರೋನನ ಸಂತಾನದವರನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ವರು ಮಕ್ಕಳಿದ್ದರು.
೨. ನಾದಾಬ್, ಅಬೀಹೂ ಎಂಬವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತುಹೋದುದರಿಂದ ಎಲ್ಲಾಜಾರ್ ಈತಾಮಾರರು ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.
೩. ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರದಿಯ ಮೇಲೆ ಸೇವೆ ಸಲ್ಲಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದ್ದರು.
೪. ಎಲ್ಲಾಜಾರನ ಸಂತಾನದಲ್ಲಿ ಕುಟುಂಬ ಮುಖ್ಯಸ್ಥರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡುಬಂದುದರಿಂದ, ಎಲ್ಲಾಜಾರ್ಯರ ಕುಟುಂಬಗಳನ್ನು ಮುಖ್ಯಸ್ಥರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,
೫. ಈ ವರ್ಗಗಳ ವಿಷಯವಾಗಿ ಚೀಟುಹಾಕಿ ಕೆಲಸವನ್ನು ವಹಿಸುತ್ತಿದ್ದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಯಲಯದ ಅಧಿಪತಿಗಳೂ ದೈವಿಕ ಕಾರ್ಯಗಳ ಅಧ್ಯಕ್ಷರೂ ಇದ್ದುದರಿಂದ ಉಭಯ ಸಂತಾನಗಳವರು ಸಮಾನ ಸ್ಥಾನದವರಾಗಿದ್ದರು.
೬. ನೆತನೇಲನ ಮಗ ಶೆಮಾಯನೆಂಬ ಲೇವಿಯ ಲೇಖಕನು, ಅರಸನ ಮುಂದೆ, ಅಧಿಪತಿಗಳ ಮುಂದೆ ಹಾಗೂ ಯಾಜಕನಾದ ಚಾದೋಕ್, ಎಬ್ಯಾತಾರನ ಮಗ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬಗಳ ಮುಖ್ಯಸ್ಥರ ಮುಂದೆ, ಆ ವರ್ಗಗಳ ಪಟ್ಟಿಯನ್ನು ಬರೆಯುತ್ತಿದ್ದನು. ಎಲ್ಲಾಜಾರ್ಯರ ಒಂದು ವರ್ಗದವರ ಸರದಿ ಆದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವೆಸಲ್ಲಿಸಬೇಕೆಂದು ನೇಮಿಸಿ, ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡುತ್ತಿದ್ದರು.
೭. ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು;
೮. ಎರಡನೆಯದು ಯೆದಾಯನಿಗೆ; ಮೂರನೆಯದು ಹಾರೀಮನಿಗೆ;
೯. ನಾಲ್ಕನೆಯದು ಸೆಯೋರೀಮನಿಗೆ; ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯ್ಯಾಮೀನನಿಗೆ;
೧೦. ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
೧೧. ಒಂಬತ್ತನೆಯದು ಯೆಷೂವನಿಗೆ;
೧೨. ಹತ್ತನೆಯದು ಶೆಕನ್ಯನಿಗೆ; ಹನ್ನೊಂದನೆಯದು ಎಲ್ಯಾಷೀಬನಿಗೆ;
೧೩. ಹನ್ನೆರಡನೆಯದು ಯಾಕೀಮನಿಗೆ; ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಎಫೆಬಾಬನಿಗೆ;
೧೪. ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
೧೫. ಹದಿನೇಳನೆಯದು ಹೇಜಿರನಿಗೆ;
೧೬. ಹದಿನೆಂಟನೆಯದು ಹಪ್ಪಿಚ್ಚೇಚನಿಗೆ; ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
೧೭. ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
೧೮. ಇಪ್ಪತ್ತಮೂರನೆಯದು ದೆಲಾಯನಿಗೆ; ಇಪ್ಪತ್ತನಾಲ್ಕನೆಯದು ಮಾಜ್ಯನಿಗೆ.
೧೯. ಆರೋನ್ಯರು ಈ ವರ್ಗಕ್ರಮದಲ್ಲಿ ಸರ್ವೇಶ್ವರನ ಆಲಯಕ್ಕೆ ಬಂದು, ಲೇವಿಯರ ಮೂಲ ಪುರುಷನಾದ ಆರೋನನ ಮುಖಾಂತರ ಇಸ್ರಯೇಲ್ ದೇವರಾದ ಸರ್ವೇಶ್ವರ ನಿಯಮಿಸಿದ ಸೇವೆಯನ್ನು ನಡೆಸಬೇಕಾಗಿತ್ತು.
೨೦. ಉಳಿದ ಲೇವಿಯರ ಪಟ್ಟಿ: ಅಮ್ರಾಮನ ಸಂತಾನದವನಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು,
೨೧. ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನು,
೨೨. ಹಾಗೂ ಇಚ್ಚಾರನ ಸಂತಾನದವನಾದ ಶೆಲೋಮೋತನ ಕುಟುಂಬದವರಲ್ಲಿ ಯಹತನು ಮುಖ್ಯಸ್ಥರು.
೨೩. ಹೆಬ್ರೋನನ ಸಂತಾನದವರಲ್ಲಿ, ಯೆರೀಯನು ಮುಖ್ಯಸ್ಥನು, ಅಮರ್ಯನು ಎರಡನೆಯವನು, ಯೆಹಜೀಯೇಲನು ಮೂರನೆಯವನು, ಯೆಕಮ್ಮಾಮನು ನಾಲ್ಕನೆಯವನು.
೨೪. ಉಜ್ಜಿಯೇಲನ ಮಗ ಮೀಕನ ಸಂತಾನದವರಲ್ಲಿ ಶಾಮೀರನು
೨೫. ಹಾಗೂ ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಮುಖ್ಯಸ್ಥರು.
೨೬. ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬವರು ಹಾಗೂ ಅವನ ಮತ್ತೊಬ್ಬ ಮಗ ಯಾಜ್ಯನ ವಂಶದವರು.
೨೭. ಮೆರಾರೀಯ ಸಂತಾನದವರಲ್ಲಿ ಯಾಜ್ಯನಿಂದ ಹುಟ್ಟಿದವರು ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಇವರು.
೨೮. ಮಹ್ಲೀಯಿಂದ ಹುಟ್ಟಿದವರು: ಮಕ್ಕಳಿಲ್ಲದೆ ಸತ್ತ ಎಲ್ಲಾಜಾರನು ಹಾಗು ಕೀಷನು.
೨೯. ಕೀಷನಿಂದ ಯೆರಹ್ಮೇಲನು ಹುಟ್ಟಿದನು.
೩೦. ಮೂಷೀಯ ಮಕ್ಕಳು: ಮಹ್ಲೀ, ಏದೆರ್, ಯೆರೀಮೋತ್ ಎಂಬವರು.
೩೧. ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ ಕಿರಿಯರೂ, ತಮ್ಮ ಕುಲಬಂಧುಗಳಾದ ಆರೋನ್ಯರಂತೆ, ಅರಸನಾದ ದಾವೀದ್, ಚಾದೋಕ್, ಅಹೀಮೆಲೆಕ್ ಇವರ ಮುಂದೆ ಹಾಗೂ ಯಾಜಕರ ಮತ್ತು ಲೇವಿಯರ ಕುಟುಂಬ ಮುಖ್ಯಸ್ಥರ ಮುಂದೆ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.

ಕ್ರಾನಿಕಲ್ಸ್ ೧ ೨೫:೧-೩೦
೧. ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:
೨. ಆಸಾಫ್ಯರಲ್ಲಿ ಜಕ್ಕೂರ್, ಜೋಸೆಫ್, ನೆತನ್ಯ, ಅಶರೇಲ ಎಂಬವರು. ಇವರು ಆಸ್ಥಾನದ ಗಾಯಕ ಆಸಾಫನ ಸಹಾಯಕರು.
೩. ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಇವರು ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ, ಸರ್ವೇಶ್ವರನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿ ಸಹಾಯಕರು.
೪. ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್,
೫. ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು.
೬. ದೇವರಾದ ಸರ್ವೇಶ್ವರನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
೭. ಇವರೂ ಸರ್ವೇಶ್ವರನ ಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯನಪ್ರವೀಣರು ಇದ್ದರು.
೮. ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು:
೯. ಮೊದಲನೆಯವನು ಆಸಾಫ್ಯನಾದ ಜೋಸೆಫನು; ಎರಡನೆಯವನು ಗೆದಲ್ಯ
೧೦. ಮೂರನೆಯವನು ಜಕ್ಕೂರ್
೧೧. ನಾಲ್ಕನೆಯವನು ಇಚ್ರೀ
೧೨. ಐದನೆಯವನು ನೆತನ್ಯ
೧೩. ಆರನೆಯವನು ಬುಕ್ಕೀಯ
೧೪. ಏಳನೆಯವನು ಯೆಸರೇಲ
೧೫. ಎಂಟನೆಯವನು ಯೆಶಾಯ
೧೬. ಒಂಬತ್ತನೆಯವನು ಮತ್ತನ್ಯ
೧೭. ಹತ್ತನೆಯವನು ಶಿಮ್ಮೀ
೧೮. ಹನ್ನೊಂದನೆಯವನು ಅಜರೇಲ್
೧೯. ಹನ್ನೆರಡನೆಯವನು ಹಷಬ್ಯ
೨೦. ಹದಿಮೂರನೆಯವನು ಶೂಬಾಯೇಲ್
೨೧. ಹದಿನಾಲ್ಕನೆಯವನು ಮತ್ತಿತ್ಯ
೨೨. ಹದಿನೈದನೆಯವನು ಯೆರೆಮೋತ್
೨೩. ಹದಿನಾರನೆಯವನು ಹನನ್ಯ
೨೪. ಹದಿನೇಳನೆಯವನು ಯೊಷ್ಬೆಕಾಷ
೨೫. ಹದಿನೆಂಟನೆಯವನು ಹನಾನೀ
೨೬. ಹತ್ತೊಂಬತ್ತನೆಯವನು ಮಲ್ಲೋತಿ
೨೭. ಇಪ್ಪತ್ತನೆಯವನು ಎಲೀಯಾತ
೨೮. ಇಪ್ಪತ್ತೊಂದನೆಯವನು ಹೋತೀರ್
೨೯. ಇಪ್ಪತ್ತೆರಡನೆಯವನು ಗಿದ್ದಲ್ತಿ
೩೦. ಇಪ್ಪತ್ತಮೂರನೆಯವನು ಮಹಜೀಯೋತ್

ಕೀರ್ತನೆಗಳು ೭೮:೪೦-೫೫
೪೦. ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ I ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ II
೪೧. ಪದೇಪದೇ ಪರೀಕ್ಷಿಸಿದರು ದೇವರನು I ಕೆಣಕಿದರು ಇಸ್ರಯೇಲರ ಸದಮಲನನು II
೪೨. ಮರೆತೇಬಿಟ್ಟರು ಆತನ ಭುಜಬಲವನು I ವೈರಿಗಳಿಂದ ಬಿಡುಗಡೆಯಾದಾ ಸಮಯವನು II
೪೩. ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು I ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು II
೪೪. ಅಲ್ಲಿ ಆತ ರಕ್ತವಾಗಿಸಿದನು ನದಿನೀರನು I ಕುಡಿಯಲಾಗದಂತೆ ಮಾಡಿದನಾ ತೊರೆನೀರನು II
೪೫. ಕಳುಹಿಸಿದನು ವಿನಾಶಕರ ಹುಳುಗಳನು I ಹಾಳುಮಾಡುವ ವಿಷಮಂಡೂಕಗಳನು II
೪೬. ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ I ಕಷ್ಟದ ಫಲಗಳನು ಮಿಡತೆಗಳಿಗೆ II
೪೭. ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ I ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ II
೪೮. ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ I ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ II
೪೯. ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II
೫೦. ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ I ತುತ್ತಾಗಿಸಿದನು ದೇಹಗಳನು ಜಾಡ್ಯಕೆ I ಅಡ್ಡಿತರಲಿಲ್ಲ ಆತನು ಅವರ ಮರಣಕೆ II
೫೧. ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು I ಹಾಮನ ಮನೆತನದ ಮೊತ್ತಮೊದಲ ಸಂತಾನವನು II
೫೨. ತನ್ನ ಜನರನ್ನೋ ಹೊರತಂದನು ಕುರಿಮಂದೆಯಂತೆ I ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ II
೫೩. ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II
೫೪. ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II
೫೫. ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II

ಜ್ಞಾನೋಕ್ತಿಗಳು ೨೦:೩-೩
೩. ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು.

ಪ್ರೇಷಿತರ ೯:೨೨-೪೩
೨೨. ಸೌಲನಾದರೋ ಮತ್ತಷ್ಟು ಸಾಮರ್ಥ್ಯದಿಂದ ಪ್ರಭು ಯೇಸುವೇ ಲೋಕೋದ್ಧಾರಕನೆಂದು ರುಜುವಾತುಪಡಿಸಿ ದಮಸ್ಕಸಿನ ಯೆಹೂದ್ಯರ ಬಾಯಿಮುಚ್ಚಿಸಿದನು.
೨೩. ಕೆಲವು ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಒಳಸಂಚು ಮಾಡಿದರು.
೨೪. ಅದು ಸೌಲನಿಗೆ ತಿಳಿದುಬಂದಿತು. ಅವರು ಅವನನ್ನು ಕೊಲ್ಲಲು ಹಗಲಿರುಳು ಪಟ್ಟಣದ ದ್ವಾರಗಳನ್ನು ಕಾಯುತ್ತಿದ್ದರು.
೨೫. ಒಂದು ರಾತ್ರಿ ಸೌಲನ ಶಿಷ್ಯರು ಅವನನ್ನು ಕರೆದುಕೊಂಡು ಹೋಗಿ ಗೂಡೆಯೊಂದರಲ್ಲಿ ಕೂರಿಸಿ ಗೋಡೆಯ ಮೇಲಿಂದ ಕೆಳಕ್ಕೆ ಇಳಿಸಿದರು.
೨೬. ಸೌಲನು ಜೆರುಸಲೇಮಿಗೆ ಬಂದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆಂದು ನಂಬದೆ ಅವನಿಗೆ ಭಯಪಟ್ಟರು.
೨೭. ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊಂಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದ್ದನ್ನೂ ಅವರು ಅವನೊಂದಿಗೆ ಮಾತನಾಡಿದ್ದನ್ನೂ ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿಂದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು.
೨೮. ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು.
೨೯. ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸಂಭಾಷಿಸುತ್ತಾ ಅವರ ವಿರುದ್ಧ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವಣಿಸಿದರು.
೩೦. ಇದನ್ನು ಅರಿತುಕೊಂಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತಂದು ಅಲ್ಲಿಂದ ತಾರ್ಸಕ್ಕೆ ಕಳುಹಿಸಿಬಿಟ್ಟರು.
೩೧. ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು.
೩೨. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು.
೩೩. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು.
೩೪. ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು. ಆ ಕ್ಷಣವೇ ಅವನು ಎದ್ದನು.
೩೫. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು.
೩೬. ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’ ) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು.
೩೭. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು.
೩೮. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು.
೩೯. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು.
೪೦. ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು.
೪೧. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು.
೪೨. ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.
೪೩. ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ಕಳೆದನು.