A A A A A

ಸಮುವೇಲನು ೨ ೨೩:೧-೩೮
೧. ದಾವೀದನ ಕಡೇ ಮಾತುಗಳಿವು: ಜೆಸ್ಸೆಯನ ಮಗ ದಾವೀದನ ನುಡಿಗಳಿವು: ಉನ್ನತಸ್ಥಾನವನ್ನು ಅಲಂಕರಿಸಿದವನು, ಯಕೋಬ ದೇವರಿಂದ ಅಭಿಷಿಕ್ತನಾದವನು, ಇಸ್ರಯೇಲರ ವರಕವಿ ಆಡಿದ ವಚನಗಳಿವು:
೨. ನನ್ನೊಳು ಉಸಿರಾಡಿತು ಸರ್ವೇಶ್ವರನಾತ್ಮ ನನ್ನ ಬಾಯೊಳಿತ್ತು ಆತನ ವಾಕ್ಯ.
೩. ಇಸ್ರಯೇಲರ ದೇವನು, ಅವರಾಶಕ್ತನು, ಹೀಗೆಂದು ನನಗೆ ನುಡಿದನು
೪. ದೇವರಲ್ಲಿ ಭಯಭಕ್ತಿಯುಳ್ಳ ರಾಜನು ನೀತಿಯಿಂದ ಪ್ರಜೆಗಳನಾಳುವಾತನು ಉದಯಕಾಲದ ಸೂರ್ಯನಿಗೆ ಸಮಾನನು ಏರುವನಾತ ಮೇಘರಹಿತ ಪ್ರಾತಃಕಾಲದೊಳು ತೇಜೋಮಯನಾಗಿ ಮೊಳೆಯಿಸುವನು ಪಚ್ಚೆಪಸಿರನು ಮಳೆ ತೋಯ್ದ ನೆಲದೊಳು ಹುಲುಸಾಗಿ.
೫. ಹೌದು, ಸರ್ವೇಶ್ವರನ ಸನ್ನಿಧಿಯಲಿ ನನ್ನ ಮನೆತನ ಸುಸ್ಥಿರ ಆತನೊಂದಿಗೆ ನಾ ಮಾಡಿಲ್ಲವೆ ಚಿರವಾದ ಒಪ್ಪಂದ? ಅದೆಲ್ಲದರಲು ಸುವ್ಯವಸ್ಥಿತ, ಅದೆಂದಿಗೂ ನಿರ್ಭೀತ. ಆತನೇ ನನ್ನುದ್ಧಾರಕ್ಕೆ ಮೂಲಾಧಾರ ನನ್ನ ಆಶೆ ಆಕಾಂಕ್ಷೆಗಳ ಪೂರೈಸುವಾತ.
೬. ದುರುಳರಾದರೊ ದೂರವೆಸೆದ ಕಾಡುಮುಳ್ಳುಗಳು ಮುಟ್ಟಲಾಗದು ಅವುಗಳನು ಬರಿಗೈಯಿಂದ,
೭. ಬಳಸಬೇಕು ಕಬ್ಬಿಣದಾಯುಧವನು, ಮೊನೆ ಭರ್ಜಿಯನು, ಇಲ್ಲವೆ ಸುಡಬೇಕು ಇದ್ದಲ್ಲೇ ಬೆಂಕಿಯಿಂದ.
೮. ದಾವೀದನ ರಣವೀರರ ಪಟ್ಟಿ: ತಹ್ಕೆಮೋನ್ಯನಾದ ಯೋಷೆಬಷ್ಬೆತನು ಸರದಾರರಲ್ಲಿ ಮುಖ್ಯಸ್ಥನು. ಎಚ್ನೀಯನಾದ ಅದೀನೋ ಎನ್ನಿಸಿಕೊಳ್ಳುವ ಇವನು ಒಮ್ಮೆಗೆ ಎಂಟುನೂರು ಮಂದಿಯನ್ನು ಕೊಂದನು.
೯. ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗ ಎಲ್ಲಾಜಾರನು. ಫಿಲಿಷ್ಟಿಯರು ಅಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ಪ್ರತಿಭಟಿಸಲು ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನೂ ಒಬ್ಬನಾಗಿದ್ದನು.
೧೦. ಇಸ್ರಯೇಲರು ಹೋದನಂತರ ಇವನು ಅಲ್ಲೇ ನಿಂತು, ಕತ್ತಿ ಹಿಡಿದು ಕೈಸೋತು ಮರಗಟ್ಟಿಹೋಗುವ ತನಕ, ಫಿಲಿಷ್ಟಿಯರನ್ನು ಕೊಲ್ಲುತ್ತಲೇ ಇದ್ದನು. ಆ ದಿನ ಸರ್ವೇಶ್ವರ ಮಹಾಜಯವನ್ನುಂಟುಮಾಡಲು ಇಸ್ರಯೇಲರು ಸುಲಿದುಕೊಳ್ಳುವುದಕ್ಕಾಗಿಯೇ, ಹಿಂದಿರುಗಿದ್ದರು.
೧೧. ಮೂರನೆಯವನು ಹರಾರ್ಯನಾದ ಆಗೇಯನ ಮಗ ಶಮ್ಮ ಎಂಬವನು ಫಿಲಿಷ್ಟಿಯರು ದೊಡ್ಡ ಗುಂಪಾಗಿ ಒಂದು ಅಲಸಂದೆಯ ಹೊಲಕ್ಕೆ ಬಂದರು.
೧೨. ಇಸ್ರಯೇಲರು ಅವರ ಎದುರಿನಿಂದ ಓಡಿಹೋದಾಗ ಇವನು ಆ ಹೊಲದ ಮಧ್ಯದಲ್ಲೇ ನಿಂತುಕೊಂಡು ಫಿಲಿಷ್ಟಿಯರನ್ನು ಕೊಂದು ಹೊಲವನ್ನು ಕಾಪಾಡಿದನು. ಹೀಗೆ ಸರ್ವೇಶ್ವರ ಮಹಾಜಯವನ್ನುಂಟುಮಾಡಿದರು.
೧೩. ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ಮೂರು ಮಂದಿ, ದಾವೀದನು ಅದುಲ್ಲಾಮ್ ಗವಿಯಲ್ಲಿದ್ದಾಗ, ಸುಗ್ಗೀಕಾಲದಲ್ಲಿ ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿಬಂದು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಾಗ
೧೪. ದಾವೀದನು ಆ ಅದುಲ್ಲಾಮ್ ದುರ್ಗದಲ್ಲಿದ್ದನು. ಫಿಲಿಷ್ಟಿಯರು ಬೆತ್ಲೆಹೇಮಿನಲ್ಲಿ ಕಾವಲುದಂಡನ್ನಿಟ್ಟಿದ್ದರು.
೧೫. ಅದೇ ಸಮಯದಲ್ಲಿ ದಾವೀದನು ಲವಲವಿಕೆಯಿಂದ, “ಬೆತ್ಲೆಹೇಮ್ ಊರಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು,” ಎಂದನು
೧೬. ಕೂಡಲೆ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿಹೋಗಿ ಬೆತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ಅವನು ಅದನ್ನು ಕುಡಿಯಲು ಒಪ್ಪಲಿಲ್ಲ.
೧೭. “ಸರ್ವೇಶ್ವರಾ, ಈ ನೀರನ್ನು ಕುಡಿಯುವುದು ನನಗೆ ದೂರವಾಗಿರಲಿ.ಇದು ಜೀವದಾಶೆ ತೊರೆದವರ ರಕ್ತ; ಇದನ್ನು ಕುಡಿಯುವುದೇ ಇಲ್ಲ,” ಎಂದು ಹೇಳಿ ಅದನ್ನು ಸರ್ವೇಶ್ವರನಿಗೆ ಸಮರ್ಪಣೆಯಾಗಿ ಹೊರಗೆ ಹೊಯ್ದುಬಿಟ್ಟನು. ಆ ಮೂರುಮಂದಿ ಪರಾಕ್ರಮಿಗಳ ಕೃತ್ಯಗಳಿವು.
೧೮. ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯು ಈ ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಭರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಮಂದಿಯನ್ನು ಕೊಂದುದರಿಂದ ಈ ಮೂವರಲ್ಲಿ ಕೀರ್ತಿಗೊಂಡನು.
೧೯. ಇವರಲ್ಲಿ ಘನತೆ ಗೌರವ ಪಡೆದ ನಾಯಕ ಇವನೇ. ಆದರೂ ಇವನು ಮೊದಲಿನ ಮೂರು ಮಂದಿಗೆ ಸಮಾನನಾಗಿರಲಿಲ್ಲ.
೨೦. ಯೆಹೋಯಾದಾವನ ಮಗನೂ ಕಬ್ಜಯೇಲಿನ ಪರಾಕ್ರಮಶಾಲಿಯೂ ಆದ ಬೆನಾಯನು ಇನ್ನೊಬ್ಬನು. ಇವನು ಅನೇಕ ಶೂರಕೃತ್ಯಗಳನ್ನು ನಡೆಸಿದ್ದನು. ಉದಾಹರಣೆಗೆ: ಒಮ್ಮೆ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಬ್ಬ ಹಿಮಕಾಲದಲ್ಲಿ ಸಿಂಹವೊಂದು ಗುಂಡಿಯಲ್ಲಿ ಬಿದ್ದಿತ್ತು. ಇವನು ಆ ಗುಂಡಿಗೆ ಇಳಿದುಹೋಗಿ ಅದನ್ನು ಕೊಂದನು.
೨೧. ಮತ್ತೊಮ್ಮೆ ಬಲಿಷ್ಠನಾದ ಒಬ್ಬ ಈಜಿಪ್ಟಿನವನನ್ನು ಕೊಂದನು. ಆ ಈಜಿಪ್ಟಿನವನ ಕೈಯಲ್ಲಿ ಒಂದು ಭರ್ಜಿಯಿತ್ತು. ಇವನು ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಭರ್ಜಿಯನ್ನು ಕಿತ್ತುಕೊಂಡು ಅದರಿಂದ ಅವನನ್ನೇ ಕೊಂದನು.
೨೨. ಈ ಪರಾಕ್ರಮ ಕೃತ್ಯದಿಂದ ಯೆಹೋಯಾದಾವನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುಗೊಂಡನು.
೨೩. ಮೂವತ್ತು ಮಂದಿಯಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದ್ದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ನೇಮಿಸಿದ್ದನು.
೨೪. ಆ ಮೂವತ್ತು ಮಂದಿ ರಣವೀರರ ಪಟ್ಟಿ ಇದು: ಯೋವಾಬನ ತಮ್ಮನಾದ ಅಸಾಹೇಲನು, ಬೆತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನನು.
೨೫. ಹರೋದಿನವರಾದ ಶಮ್ಮ ಎಲೀಕರು, ಪೆಲೆಟಿನವನಾದ ಹೆಲೆಚ್, ತೆಕೋವದ ಇಕ್ಕೇಷನ ಮಗನಾದ ಈರಾ, ಅಣತೋತಿನವನಾದ ಅಬೀಯೆಜೆರ್,
೨೬. ***
೨೭. ಹುಷಾ ಊರಿನವನಾದ ಮೆಬುನ್ನೈ,
೨೮. ಅಹೋಹಿನವನಾದ ಚಲ್ಮೋನ್, ನೆಟೋಫದವನಾದ ಮಹರೈ,
೨೯. ನೆಟೋಪದವನಾದ ಬಾಣನ ಮಗ ಹೇಲೆಬ್, ಬೆನ್ಯಾಮೀನ್ ನಾಡಿನ ಗಿಬೆಯ ಊರಿನ ರೀಬೈ ಎಂಬವನ ಮಗ ಇತ್ತೈ, ಪಿರಾತೋನ್ಯನಾದ ಬೆನಾಯ,
೩೦. ನಹಲೇಗಾಷಿನವನಾದ ಹಿದ್ದೈ,
೩೧. ಅರಾಬಾ ತಗ್ಗಿನವನಾದ ಅಬೀಅಲ್ಬೋನ್,
೩೨. ಬಹುರಿಮ್ಯನಾದ ಅಜ್ಮಾವೇತ್, ಶಾಲ್ಬೋನ್ಯನಾದ ಎಲೆಯಖ್ಬಾ ಯಾಷೇನನ ಮಕ್ಕಳು, ಯೋನಾತಾನನು,
೩೩. ಹರಾರ್ಯನಾದ ಶಮ್ಮ, ಹರಾರ್ಯನಾದ ಶಾರಾರನ ಮಗ ಅಹೀಯಾಮ್,
೩೪. ಮಾಕಾ ಊರಿನ ಅಹಸ್ಬೈ ಎಂಬುವನ ಮಗ ಎಲೀಫೆಲೆಟ್, ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್,
೩೫. ಕರ್ಮೆಲ್ಯನಾದ ಹೆಚ್ರೋ, ಅರ್ಬೀಯನಾದ ಪಾರೈ,
೩೬. ಚೋಬ ಊರಿನ ನಾತಾನ್ ಎಂಬವನ ಮಗ ಇಗಾಲ್, ಗಾದ್ಯನಾದ ಬಾನೀ,
೩೭. ಅಮ್ಮೋನಿಯನಾದ ಚೆಲೆಕ್, ಬೇರೋತ್ಯನೂ ಚೆರೂಯಳ ಮಗ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ,
೩೮. ಇತ್ರೀಯರಾದ ಈರಾ ಗಾರೇಬರು, ಹಿತ್ತಿಯನಾದ ಊರೀಯ,

ಸಮುವೇಲನು ೨ ೨೪:೧-೨೫
೧. ಸರ್ವೇಶ್ವರಸ್ವಾಮಿ ಮತ್ತೆ ಇಸ್ರಯೇಲರ ಮೇಲೆ ಕೋಪಗೊಂಡರು. ಇಸ್ರಯೇಲ್ ಹಾಗು ಯೆಹೂದ್ಯಕುಲಗಳವರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದರು.
೨. ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಪತಿಯಾದ ಯೋವಾಬನಿಗೆ, “ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷೆಬದವರೆಗೆ ಸಂಚರಿಸಿ ಇಸ್ರಯೇಲ್ ಕುಲಗಳ ಎಲ್ಲ ಜನರನ್ನು ಲೆಕ್ಕಮಾಡಿಕೊಂಡು ಬಾ,” ಎಂದು ಆಜ್ಞಾಪಿಸಿದನು.
೩. ಆಗ ಯೋವಾಬನು, “ನನ್ನ ಒಡೆಯರಾದ ತಮ್ಮ ಆಯುಷ್ಕಾಲದಲ್ಲೇ ದೇವರಾದ ಸರ್ವೇಶ್ವರ ತಮ್ಮ ಪ್ರಜೆಯನ್ನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚಿಸಲಿ. ನನ್ನ ಒಡೆಯರಾದ ಅರಸರು ಈ ಕಾರ್ಯಕ್ಕೆ ಮನಸ್ಸುಮಾಡಿದ್ದೇಕೆ?” ಎಂದನು.
೪. ಆದರೆ ಅರಸನು ಯೋವಾಬನಿಗೂ ಇತರ ಸೇನಾಪತಿಗಳಿಗೂ ಕಿವಿಗೊಡದೆ, ತನ್ನ ಮಾತನ್ನೇ ಸಾಧಿಸಿದ್ದರಿಂದ, ಅವರು ಇಸ್ರಯೇಲರನ್ನು ಲೆಕ್ಕಿಸುವುದಕ್ಕಾಗಿ ಅರಸನ ಸನ್ನಿಧಿಯಿಂದ ಹೊರಟುಹೋದರು.
೫. ಅವರು ಜೋರ್ಡನ್ ನದಿಯನ್ನು ದಾಟಿ ಗಾದ್ ತಗ್ಗಿನಲ್ಲಿರುವ ಪಟ್ಟಣದ ಬಲಪಾರ್ಶ್ವದಲ್ಲಿರುವ ಅರೋಯೇರಿನಿಂದ ತೊಡಗಿ,
೬. ಯಗ್ಜೇರಿಗೂ ಅಲ್ಲಿಂದ ಗಿಲ್ಯಾದ್ ಪ್ರಾಂತ್ಯ, ತಖ್ತೀಮ್ ಹೊಜೀಪ್ರದೇಶ ಇವುಗಳ ಮೇಲೆ ಯಾನಿನ ದಾನ್ ಎಂಬಲ್ಲಿಗೂ ಬಂದರು.
೭. ಅಲ್ಲಿಂದ ತಿರುಗಿಕೊಂಡು ಚೀದೋನ್, ತೂರ್ ಕೋಟೆ, ಹಿವ್ವಿಯರ ಮತ್ತು ಕಾನಾನ್ಯರ ಪಟ್ಟಣಗಳು ಇವುಗಳ ಮೇಲೆ ಯೆಹೂದ ಪ್ರಾಂತ್ಯದ ದಕ್ಷಿಣ ದಿಕ್ಕಿನಲ್ಲಿರುವ ಬೇರ್ಷೆಬಕ್ಕೆ ಬಂದರು.
೮. ಹೀಗೆ ಒಂಬತ್ತು ತಿಂಗಳು ಇಪ್ಪತ್ತು ದಿವಸಗಳಲ್ಲಿ ನಾಡನ್ನೆಲ್ಲಾ ಸಂಚರಿಸಿ ಜೆರುಸಲೇಮಿಗೆ ಹಿಂದಿರುಗಿ ಬಂದರು.
೯. ಯೋವಾಬನು ಅರಸನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳಲ್ಲಿ ಇಸ್ರಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ ಹಾಗು ಯೆಹೂದ್ಯರಲ್ಲಿ ಐದು ಲಕ್ಷ ಇದ್ದರು.
೧೦. ಜನರ ಎಣಿಕೆ ಮಾಡಿಸಿದ ನಂತರ ದಾವೀದನನ್ನು ಮನಸ್ಸಾಕ್ಷಿ ಕಾಡತೊಡಗಿತು. ಆದುದರಿಂದ ಅವನು, “ಸರ್ವೇಶ್ವರಾ, ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ಪ್ರಾರ್ಥಿಸಿದನು.
೧೧. ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಸರ್ವೇಶ್ವರ ದರ್ಶನವಿತ್ತು,
೧೨. “ನೀನು ದಾವೀದನ ಹತ್ತಿರ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಅದನ್ನು ಆರಿಸಿಕೋ,’ ಎಂದು ಸರ್ವೇಶ್ವರ ನುಡಿಯುತ್ತಾರೆ ಎಂದು ಹೇಳು,” ಎಂದು ಆಜ್ಞಾಪಿಸಿದರು.
೧೩. ಆಗ ಗಾದನು ದಾವೀದನ ಬಳಿಗೆ ಬಂದು, “ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ, ಇಲ್ಲವೇ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿಬಿಡಬೇಕೋ, ಇಲ್ಲವೆ ನಿನ್ನ ನಾಡಿನಲ್ಲಿ ಮೂರು ದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದನು.
೧೪. ಅದಕ್ಕೆ ದಾವೀದನು, “ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು.
೧೫. ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನವರೆಗೂ ಇತ್ತು. ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿದ್ದ ಇಸ್ರಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
೧೬. ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, “ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ,” ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
೧೭. ದಾವೀದನು ಜನಸಂಹಾರಕ ದೂತನನ್ನು ಕಂಡಾಗ ಸರ್ವೇಶ್ವರನಿಗೆ, “ಮೂರ್ಖತನದಿಂದ ಪಾಪಮಾಡಿದವನು ನಾನು; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿಮ್ಮ ಕೈ ನನ್ನನ್ನೂ ನನ್ನ ಮನೆಯವರನ್ನೂ ಶಿಕ್ಷಿಸಲಿ,” ಎಂದು ಬೇಡಿಕೊಂಡನು.
೧೮. ಅದೇ ದಿನದಲ್ಲಿ ಗಾದನು ದಾವೀದನ ಬಳಿಗೆ ಬಂದು, “ನೀವು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸಿ,” ಎಂದು ಹೇಳಿದನು.
೧೯. ದಾವೀದನು ಗಾದನ ಮುಖಾಂತರ ತನಗಾದ ಸರ್ವೇಶ್ವರನ ಅಪ್ಪಣೆಯಂತೆ ಹೊರಟನು.
೨೦. ದಾವೀದನೂ ಅವನ ಸೇವಕರೂ ತನ್ನ ಬಳಿಗೆ ಬರುವುದನ್ನು ಅರೌನನು ಕಂಡು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು.
೨೧. “ನನ್ನ ಒಡೆಯರಾದ ಅರಸರು ತಮ್ಮ ಸೇವಕನ ಬಳಿಗೆ ಬರುವುದಕ್ಕೇನು ಕಾರಣ?” ಎಂದು ಕೇಳಿದನು. ದಾವೀದನು, “ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ನಿನ್ನ ಕಣವನ್ನು ಕೊಂಡುಕೊಂಡು ಅದರಲ್ಲಿ ಸರ್ವೇಶ್ವರನಿಗಾಗಿ ಒಂದು ಪೀಠವನ್ನು ಕಟ್ಟುವುದಕ್ಕೆ ಬಂದಿದ್ದೇನೆ,” ಎಂದು ಉತ್ತರಕೊಟ್ಟನು.
೨೨. ಆಗ ಅರೌನನು ದಾವೀದನಿಗೆ, “ನನ್ನ ಒಡೆಯರಾದ ಅರಸರು ತಮಗೆ ಇಷ್ಟವಾದುದನ್ನು ತೆಗೆದುಕೊಂಡು ಅರ್ಪಿಸೋಣವಾಗಲಿ; ಇಲ್ಲಿ ಬಲಿದಾನಕ್ಕೆ ಹೋರಿಗಳೂ, ಸೌದೆಗೆ ಹಂತೀಕುಂಟೆ ಮೊದಲಾದ ಎತ್ತಿನ ಸಾಮಾನುಗಳೂ ಇರುತ್ತವೆ.
೨೩. ಇವುಗಳಲ್ಲಿ ಅರಸರ ಸೇವಕನಾದ ನಾನು ಅರಸರಿಗೆ ಅರ್ಪಿಸುತ್ತೇನೆ. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಪ್ರಸನ್ನರಾಗಲಿ!” ಎಂದು ಹೇಳಿದನು.
೨೪. ಅರಸರು ಅರೌನನಿಗೆ, “ಹಾಗಲ್ಲ, ನಾನು ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ದೇವರಾದ ಸರ್ವೇಶ್ವರನಿಗೆ ಸುಮ್ಮನೆ ಸಿಕ್ಕಿದ್ದನ್ನು ಬಲಿದಾನವಾಗಿ ಅರ್ಪಿಸಲೊಲ್ಲೆನು,” ಎಂದು ಹೇಳಿ ಆ ಕಣವನ್ನೂ ಹೋರಿಗಳನ್ನೂ ಐವತ್ತು ಬೆಳ್ಳಿ ನಾಣ್ಯಕ್ಕೆ ಕೊಂಡುಕೊಂಡನು.
೨೫. ಅಲ್ಲಿ ಸರ್ವೇಶ್ವರನಿಗೆ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಅವರಿಗೆ ದಹನಬಲಿಗಳನ್ನು ಹಾಗು ಶಾಂತಿಸಮಾಧಾನದ ಬಲಿಗಳನ್ನು ಅರ್ಪಿಸಿದನು. ಹೀಗೆ ನಾಡಿನ ಮೇಲಿದ್ದ ಸರ್ವೇಶ್ವರನ ಕೋಪ ಶಮನವಾಯಿತು. ಇಸ್ರಯೇಲರಲ್ಲಿದ್ದ ಆ ಸಂಹಾರಕವ್ಯಾಧಿ ನಿಂತುಹೋಯಿತು.

ಕೀರ್ತನೆಗಳು ೬೮:೭-೧೦
೭. ದೇವಾ, ಪ್ರಜೆಗೆ ಮುಂದಾಳಾಗಿ ನೀ ಹೊರಟಾಗ I ಅರಣ್ಯ ಮಾರ್ಗವಾಗಿ ನೀ ಪ್ರಯಾಣಮಾಡಿದಾಗ II
೮. ನಡುಗಿತು ಪೊಡವಿ, ಕಂಪಿಸಿತು ಸೀನಾಯಿ, ದೇವ ಪ್ರತ್ಯಕ್ಷನಾದನೆಂದು I ಮಳೆಗರೆಯಿತು ಮೋಡಗಿರಿ, ಇಸ್ರಯೇಲ್ ದೇವ ಪ್ರತ್ಯಕ್ಷನಾದನೆಂದು II
೯. ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ I ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ II
೧೦. ವಸತಿಯಾಯಿತದು ನಿನ್ನ ಜನಮಂದೆಗೆ I ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II

ಜ್ಞಾನೋಕ್ತಿಗಳು ೧೭:೫-೬
೫. ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ಪರರ ಕಷ್ಟದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ.
೬. ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ.

ಯೊವಾನ್ನನು ೯:೧-೨೩
೧. ಯೇಸು ಸ್ವಾಮಿ ನಡೆದುಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡರು.
೨. ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು.
೩. ಅದಕ್ಕೆ ಉತ್ತರವಾಗಿ ಯೇಸು, “ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯ ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ.
೪. ಹಗಲಿರುವಾಗಲೇ ನನ್ನನ್ನು ಕಳುಹಿಸಿದಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸ ಮಾಡಲಾಗದು.
೫. ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,” ಎಂದು ನುಡಿದರು.
೬. ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ, “ನೀನು ಶಿಲೋವಾಮಿನ ಕೊಳಕ್ಕೆ ಹೋಗಿ ತೊಳೆದುಕೋ,” ಎಂದು ಹೇಳಿದರು.
೭. (’ಶಿಲೋವಾಮ್’ ಎಂದರೆ ಕಳುಹಿಸಲಾದವನು ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಬಂದಿತ್ತು.
೮. ಅವನ ನೆರೆಯವರು ಮತ್ತು ಹಿಂದೆ ಅವನು ಭಿಕ್ಷೆಬೇಡುತ್ತಿದ್ದಾಗ ಅವನನ್ನು ನೋಡಿದ್ದವರು, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೆ?” ಎಂದು ವಿಚಾರಿಸಿದರು.
೯. “ಹೌದು ಅವನೇ,” ಎಂದರು ಕೆಲವರು. “ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,” ಎಂದರು ಇತರರು. ಆ ಕುರುಡನು “ನಾನೇ ಅವನು” ಎಂದು ತಿಳಿಸಿದನು.
೧೦. ಆಗ ಅವರು, “ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?” ಎಂದು ಕೇಳಿದರು.
೧೧. ಅದಕ್ಕೆ ಅವನು, “ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು, ‘ಶಿಲೋವಾಮಿಗೆ ಹೋಗಿ ತೊಳೆದುಕೊ,’ ಎಂದು ಹೇಳಿದರು; ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂತು,” ಎಂದು ಹೇಳಿದನು.
೧೨. ಅದಕ್ಕೆ ಅವರು, “ಆತ ಎಲ್ಲಿದ್ದಾನೆ?” ಎಂದು ವಿಚಾರಿಸಿದರು. ಅವನು, ಉತ್ತರವಾಗಿ “ನಾನರಿಯೆ,” ಎಂದನು.
೧೩. ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು.
೧೪. ಏಕೆಂದರೆ ಯೇಸು ಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು.
೧೫. ಕಣ್ಣು ಬಂದುದು ಹೇಗೆಂದು ಫರಿಸಾಯರು ಅವನನ್ನು ಮತ್ತೆ ಕೇಳಿದರು. “ಯೇಸು ನನ್ನ ಕಣ್ಣುಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ದೃಷ್ಟಿ ಬಂತು,” ಎಂದನು ಅವನು.
೧೬. ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕಕಾರ್ಯಗಳನ್ನು ಮಾಡಲು ಸಾಧ್ಯವೆ?” ಎಂದರು. ಹೀಗೆ ಅವರಲ್ಲೇ ಭಿನ್ನಬೇಧವುಂಟಾಯಿತು.
೧೭. ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣುಕೊಟ್ಟನೆಂದು ಹೇಳುತ್ತೀಯಲ್ಲಾ. ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು.
೧೮. ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ.
೧೯. ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೋ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?” ಎಂದು ಕೇಳಿದರು.
೨೦. ಅದಕ್ಕೆ ಅವನ ತಂದೆತಾಯಿಗಳು, “ಇವನಿಗೆ ದೃಷ್ಟಿ ಬಂದದ್ದು ಹೇಗೆ ಎಂದು ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣು ಕೊಟ್ಟವರು ಯಾರೆಂದೂ ನಮಗೆ ತಿಳಿಯದು.
೨೧. ಇವನನ್ನೇ ಕೇಳಿ, ಹೇಗೂ ಪ್ರಾಯದವನಾಗಿದ್ದಾನಲ್ಲವೆ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,” ಎಂದು ಉತ್ತರಿಸಿದರು.
೨೨. ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂಥವರಿಗೆ ಪ್ರಾರ್ಥನಾಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತುಮಾಡಿದ್ದರು.
೨೩. ಆದುದರಿಂದಲೇ, “ಅವನು‍ ಪ್ರಾಯದವನು, ಅವನನ್ನೇ ಕೇಳಿ,” ಎಂದು ಅವನ ತಂದೆತಾಯಿಗಳು ಹೇಳಿದ್ದು.