ಆದಿಕಾಂಡ ೪೧:೧-೫೭ |
೧. ಎರಡು ವರ್ಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು. |
೨. ಆಗ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಆ ನದಿಯೊಳಗಿಂದ ಬಂದು ಜೊಂಡು ಹುಲ್ಲಿನಲ್ಲಿ ಮೇಯುತ್ತಿದ್ದವು. |
೩. ಅವುಗಳ ಹಿಂದೆಯೇ ಒಣಕಲಾದ ಏಳು ಬಡ ಹಸುಗಳು ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಹಸುಗಳ ಹತ್ತಿರ ನದಿಯ ತೀರದಲ್ಲೇ ನಿಂತವು. |
೪. ಒಣಕಲಾದ ಈ ಬಡ ಹಸುಗಳು ಅಚ್ಚುಕಟ್ಟಾದ ಆ ಕೊಬ್ಬಿದ ಹಸುಗಳನ್ನು ತಿಂದುಬಿಟ್ಟವು. ಅಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು. |
೫. ಫರೋಹನಿಗೆ ಮತ್ತೆ ನಿದ್ರೆ ಹತ್ತಿದಾಗ ಅವನಿಗೆ ಇನ್ನೊಂದು ಕನಸುಬಿತ್ತು. ಅದರಲ್ಲಿ ಕಾಳುತುಂಬಿದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು. |
೬. ಅವುಗಳ ಹಿಂದೆಯೇ ಮೂಡಣಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು. |
೭. ಬತ್ತಿಹೋಗಿದ್ದ ಈ ತೆನೆಗಳು, ಕಾಳುತುಂಬಿದ್ದ ಆ ಏಳು ಬಲಿತ ತೆನೆಗಳನ್ನು ನುಂಗಿಬಿಟ್ಟವು. ಅಷ್ಟರೊಳಗೆ ಫರೋಹನು ಎಚ್ಚೆತ್ತು, ತಾನು ಕಂಡದ್ದು ಕನಸೆಂದು ತಿಳಿದುಕೊಂಡ. |
೮. ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡು ಇತ್ತು. ಈಜಿಪ್ಟ್ ದೇಶದ ಎಲ್ಲ ಜೋಯಿಸರನ್ನೂ ವಿದ್ವಾಂಸರನ್ನೂ ಬರಮಾಡಿದ. ಅವರಿಗೆ ತನ್ನ ಕನಸನ್ನು ವಿವರಿಸಿದ. ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ. |
೯. ಆಗ ಪಾನಸೇವಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಒಡೆಯಾ, ಈ ದಿನತಾನೆ ನನ್ನ ನೆನಪಿಗೆ ಬರುತ್ತಿದೆ. |
೧೦. ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು, ನನ್ನನ್ನೂ ಆ ಮುಖ್ಯ ಅಡಿಗೆಭಟ್ಟನನ್ನೂ ದಳಪತಿಯ ವಠಾರದಲ್ಲಿ ಇರುವ ಸೆರೆಯಲ್ಲಿ ಇಟ್ಟಿದ್ದಿರಿ. ಅಲ್ಲಿದ್ದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು |
೧೧. ಒಬ್ಬೊಬ್ಬನ ಕನಸಿಗೂ ಬೇರೆಬೇರೆ ಅರ್ಥವಿತ್ತು. |
೧೨. ಹಿಬ್ರಿಯನಾದ ಒಬ್ಬ ಯುವಕ ನಮ್ಮ ಸಂಗಡ ಅಲ್ಲಿದ್ದ. ಅವನು ದಳಪತಿಯವರ ಸೇವಕ. ನಾವು ನಮ್ಮ ಕನಸನ್ನು ಅವನಿಗೆ ತಿಳಿಸಿದೆವು. ಅವನು ಆ ಕನಸುಗಳಿಗೆ ಸರಿಯಾದ ಅರ್ಥವನ್ನು ಹೇಳಿದ. |
೧೩. ಅದು ಮಾತ್ರವಲ್ಲ, ಅವನು ಹೇಳಿದ ಪ್ರಕಾರವೇ ಆಯಿತು. ನನಗೆ ನೌಕರಿ ಮತ್ತೆ ದೊರಕಿತು. ಆ ಮುಖ್ಯ ಅಡಿಗೆಭಟ್ಟನನ್ನೋ ನೇಣುಹಾಕಲಾಯಿತು,’ ಎಂದು ಸನ್ನಿಧಿಯಲ್ಲಿ ಅರಿಕೆಮಾಡಿದ. |
೧೪. ಇದನ್ನು ಕೇಳಿದ ಫರೋಹನು ಜೋಸೆಫನನ್ನು ಕರೆತರುವಂತೆ ಆಳುಗಳನ್ನು ಕಳಿಸಿದ. ಅವರು ಬಂದು ಅವನನ್ನು ಸೆರೆಯಿಂದ ತ್ವರೆಯಾಗಿ ಬಿಡುಗಡೆ ಮಾಡಿದರು. ಜೋಸೆಫನು ಕ್ಷೌರಮಾಡಿಕೊಂಡು, ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಯಲ್ಲಿ ಹಾಜರಾದ. |
೧೫. ಫರೋಹನು ಅವನಿಗೆ, “ನಾನು ಒಂದು ಕನಸುಕಂಡೆ, ಅದರ ಅರ್ಥ ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳಬಲ್ಲೆ ಎಂಬ ಸಮಾಚಾರ ಕೇಳಿದ್ದೇನೆ,” ಎಂದ. |
೧೬. ಜೋಸೆಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರಕೊಡಬಲ್ಲರು,” ಎಂದು ಹೇಳಿದ. |
೧೭. ಆಗ ಫರೋಹನು ಜೋಸೆಫನಿಗೆ, “ಕನಸಿನಲ್ಲಿ ನಾನು ನೈಲ್ ನದಿಯ ತೀರದಲ್ಲಿ ನಿಂತಿದ್ದೆ. |
೧೮. ನದಿಯೊಳಗಿಂದ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಬಂದು ಜೊಂಡುಹುಲ್ಲಿನಲ್ಲಿ ಮೇಯುತ್ತಿದ್ದವು. |
೧೯. ಅವುಗಳ ಹಿಂದೆಯೆ ಬಹಳ ಒಣಕಲಾದ ಹಾಗೂ ಸಣಕಲಾದ, ಬೇರೆ ಏಳು ಬಡಹಸುಗಳು ಬಂದವು. ಅಂಥ ಬಡಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಲ್ಲೂ ನೋಡಿದ್ದಿಲ್ಲ. |
೨೦. ಅದಲ್ಲದೆ, ಸಣಕಲಾಗಿದ್ದ ಆ ಬಡಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು. |
೨೧. ತಿಂದರೂ ತಿಂದಂತೆಯೇ ತೋರಲಿಲ್ಲ. ಮೊದಲಿದ್ದಂತೆಯೇ ಬಡಕಲಾಗಿದ್ದವು. ಅಷ್ಟರ ಒಳಗೆ ನನಗೆ ಎಚ್ಚರವಾಯಿತು. |
೨೨. ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಕಾಳುತುಂಬಿದ್ದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿಬಂದವು. |
೨೩. ಅವುಗಳ ಹಿಂದೆಯೆ, ಮೂಡಣ ಗಾಳಿಯಿಂದ ಒಣಗಿ, ಬತ್ತಿ, ಕೆಟ್ಟುಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು. |
೨೪. ಬತ್ತಿಹೋಗಿದ್ದ ತೆನೆಗಳು ಕಾಳು ತುಂಬಿದ್ದ ಆ ಏಳು ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆ; ಅವುಗಳ ಅರ್ಥವನ್ನು ವಿವರಿಸಿ ಹೇಳಲು ಅವರಲ್ಲಿ ಯಾರಿಂದಲೂ ಆಗಲಿಲ್ಲ.” |
೨೫. ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ. |
೨೬. ಆ ಏಳು ಒಳ್ಳೆಯ ಹಸುಗಳೇ ಏಳು ವರ್ಷಗಳು; ಆ ಏಳು ಒಳ್ಳೆಯತೆನೆಗಳೂ ಏಳು ವರ್ಷಗಳು; ಎರಡು ಕನಸುಗಳ ಅರ್ಥ ಒಂದೇ. |
೨೭. ಒಳ್ಳೆಯ ಹಸುಗಳ ಹಿಂದೆ ಬಂದ ಒಣಕಲಾಗಿದ್ದ ಆ ಏಳು ಬಡಹಸುಗಳು ಮತ್ತು ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳು ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ. |
೨೮. ನಾನು ತಮಗೆ ಅರಿಕೆಮಾಡಿದಂತೆ ದೇವರು ಮಾಡಬೇಕೆಂದು ಇರುವುದನ್ನು ತಮಗೆ ತಿಳಿಸಿದ್ದಾರೆ. |
೨೯. ಈಜಿಪ್ಟ್ ದೇಶದಲ್ಲೆಲ್ಲ ಬಹುವಿಶೇಷವಾದ ಏಳು ಸುಭಿಕ್ಷ ವರ್ಷಗಳೂ |
೩೦. ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿಹೋಗುವುದು. |
೩೧. ಮುಂದೆ ಬರಲಿರುವ ಕ್ಷಾಮವು ಅತ್ಯಂತ ಘೋರಾವಾಗಿರುವುದು; ಮೊದಲಿದ್ದ ಸಮೃದ್ಧಿಯ ಗುರುತೇ ಇಲ್ಲದೆ ಹೋಗುವುದು. |
೩೨. ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ. |
೩೩. “ಆದುದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಧಿಕಾರಿಯನ್ನಾಗಿ ನೇಮಿಸಬೇಕು. |
೩೪. ಅದೂ ಅಲ್ಲದೆ, ದೇಶದ ಎಲ್ಲ ಭಾಗಗಳಲ್ಲೂ ಗುಮಾಸ್ತರನ್ನು ನೇಮಿಸಿ ಅವರ ಮೂಲಕ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯಲ್ಲಿ ಐದನೆಯ ಒಂದು ಪಾಲನ್ನು ಕಂದಾಯವಾಗಿ ಎತ್ತಬೇಕು. |
೩೫. ಮುಂದಣ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ಪಟ್ಟಣಗಳಲ್ಲಿ ಜೋಪಾನವಾಗಿಡುವಂತೆ ತಾವು ಆಜ್ಞಾಪಿಸಬೇಕು. |
೩೬. ಹೀಗೆ ಆಹಾರ ಪದಾರ್ಥಗಳನ್ನು ಶೇಖರಿಸುವುದರಿಂದ ಈಜಿಪ್ಟ್ ದೇಶದಲ್ಲಿ ದುರ್ಭಿಕ್ಷವುಂಟಾಗುವ ಏಳು ವರ್ಷಗಳಲ್ಲಿ ಜನರು ಕ್ಷಾಮದಿಂದ ಸಾಯುವುದಿಲ್ಲ,” ಎಂದು ಹೇಳಿದನು. |
೩೭. ಜೋಸೆಫನು ಸೂಚಿಸಿದ ಯೋಜನೆ ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೆಯದೆಂದು ತೋರಿತು. |
೩೮. ಫರೋಹನು ತನ್ನ ಪರಿವಾರದವರಿಗೆ, “ಈತ ದೇವರಾತ್ಮ ಪಡೆದವನು, |
೩೯. ಈತನಿಗಿಂತ ಯೋಗ್ಯವಾದ ವ್ಯಕ್ತಿ ನಮಗೆ ಸಿಕ್ಕುವುದು ಸಾಧ್ಯವೆ?” ಎಂದು ಹೇಳಿ ಜೋಸೆಫನಿಗೆ, “ದೇವರೇ ನಿನಗೆ ಇದನ್ನೆಲ್ಲ ತಿಳಿಸಿರುವುದರಿಂದ ನಿನಗೆ ಸಮಾನವಾದ ಬುದ್ಧಿವಿವೇಕಗಳುಳ್ಳ ವ್ಯಕ್ತಿ ಯಾವನೂ ಇಲ್ಲ. |
೪೦. ನೀನೇ ಅರಮನೆಯಲ್ಲಿ ಮುಖ್ಯಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರು ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದು ಹೇಳಿದನು. |
೪೧. ಬಳಿಕ ಫರೋಹನು ಜೋಸೆಫನಿಗೆ, “ಇದೀಗಲೆ ಈಜಿಪ್ಟ್ ದೇಶದ ಮೇಲೆಲ್ಲ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆ,” ಎಂದು ಹೇಳಿ |
೪೨. ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು. |
೪೩. ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟನೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು. |
೪೪. ಅಷ್ಟು ಮಾತ್ರವಲ್ಲ, ಫರೋಹನು ಅವನಿಗೆ, “ಫರೋಹನಾದ ನಾನು ಹೇಳುತ್ತಿದ್ದೇನೆ: ನಿನ್ನ ಅಪ್ಪಣೆಯಿಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾರೂ ಏನನ್ನೂ ಮಾಡಕೂಡದು,” ಎಂದು ಹೇಳಿದನು. |
೪೫. ಬಳಿಕ ಫರೋಹನು ಜೋಸೆಫನಿಗೆ ‘ಸಾಪ್ನತ್ಪನ್ನೇಹ’ ಎಂಬ ಹೊಸ ಹೆಸರಿಟ್ಟನು; ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೋಟೀಫೆರನ ಮಗಳು ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ತರುವಾಯ ಜೋಸೆಫನು ಈಜಿಪ್ಟ್ ದೇಶಸಂಚಾರ ಹೊರಟನು. |
೪೬. ಈಜಿಪ್ಟ್ ದೇಶದ ಅರಸನಾದ ಫರೋಹನ ಆಸ್ಥಾನವನ್ನು ಸೇರಿದಾಗ ಜೋಸೆಫನಿಗೆ ಮೂವತ್ತು ವರ್ಷ ವಯಸ್ಸು. ಜೋಸೆಫನು ಫರೋಹನ ಸನ್ನಿಧಿಯಿಂದ ಹೊರಟು ಈಜಿಪ್ಟ್ ದೇಶದಲ್ಲೆಲ್ಲ ಸಂಚಾರ ಮಾಡಿದನು. |
೪೭. ಆ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳಲ್ಲಿ ಭೂಮಿ ಹೇರಳವಾದ ಬೆಳೆಕೊಟ್ಟಿತು. |
೪೮. ಆ ಏಳು ವರ್ಷದ ಬೆಳೆಯನ್ನು ಜೋಸೆಫನು ಶೇಖರಿಸಿ ಪಟ್ಟಣಗಳಲ್ಲಿ ಇಟ್ಟನು. ಆಯಾ ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲೇ ಶೇಖರಿಸಿದನು. |
೪೯. ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು. |
೫೦. ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್. |
೫೧. ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು. |
೫೨. ಎರಡನೆಯ ಮಗನು ಹುಟ್ಟಿದಾಗ, ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಾಯೀಮ್’ ಎಂದು ನಾಮಕರಣ ಮಾಡಿದನು. |
೫೩. ಈಜಿಪ್ಟ್ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದವು. |
೫೪. ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು. |
೫೫. ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು. |
೫೬. ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು. |
೫೭. ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು. |
ಆದಿಕಾಂಡ ೪೨:೧-೩೮ |
೧. ಈಜಿಪ್ಟಿನಲ್ಲಿ ದವಸಧಾನ್ಯ ದೊರಕುತ್ತದೆ ಎಂಬ ಸಮಾಚಾರ ಯಕೋಬನಿಗೆ ಮುಟ್ಟಿತು. ಅವನು ತನ್ನ ಮಕ್ಕಳಿಗೆ, “ನೀವು ಮುಖಮುಖ ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ. |
೨. ಈಜಿಪ್ಟಿನಲ್ಲಿ ದವಸಧಾನ್ಯ ಉಂಟೆಂದು ನಾನು ಕೇಳಿದ್ದೇನೆ, ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ, ಬೇಕಾದ ದವಸವನ್ನು ಕೊಂಡುಕೊಂಡು ಬನ್ನಿ,” ಎಂದು ಹೇಳಿದನು. |
೩. ಜೋಸೆಫನ ಹತ್ತುಮಂದಿ ಅಣ್ಣಂದಿರು ಧಾನ್ಯವನ್ನು ತರುವುದಕ್ಕಾಗಿ ಈಜಿಪ್ಟ್ ದೇಶಕ್ಕೆ ಹೊರಟರು. |
೪. ಆದರೆ ಜೋಸೆಫನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ಯಕೋಬನು ಅವರ ಸಂಗಡ ಕಳಿಸಲಿಲ್ಲ. ಏಕೆಂದರೆ, ಅವನಿಗೆ ಏನಾದರೂ ಆಪತ್ತು ಒದಗೀತೆಂಬ ಹೆದರಿಕೆ ಅವನದು. |
೫. ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು. |
೬. ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು. |
೭. ಜೋಸೆಫನು ಅವರನ್ನು ನೋಡಿದಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುಬುಡಿಯಿಂದ, “ನೀವು ಎಲ್ಲಿಯವರು?” ಎಂದು ಕೇಳಿದನು. ಅವರು, “ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು,” ಎಂದು ಹೇಳಿದರು. |
೮. ಅಣ್ಣಂದಿರ ಗುರುತು ಜೋಸೆಫನಿಗೆ ತಿಳಿಯಿತಾದರೂ ಅವನ ಗುರುತು ಅವರಿಗೆ ತಿಳಿಯದೆ ಹೋಯಿತು. |
೯. ಅವರ ವಿಷಯವಾಗಿ ತಾನು ಕಂಡಿದ್ದ ಕನಸುಗಳನ್ನು ಜೋಸೆಫನು ನೆನಪಿಗೆ ತಂದುಕೊಂಡನು. ಅವರನ್ನು ನೋಡಿ, “ನೀವು ಗೂಢಚಾರರು; ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚುವುದಕ್ಕಾಗಿ ಬಂದವರು,” ಎಂದನು. |
೧೦. ಅದಕ್ಕೆ ಅವರು, \ಇಲ್ಲ, ಒಡೆಯಾ, ತಮ್ಮ ಸೇವಕರಾದ ನಾವು ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವೆ. |
೧೧. ನಾವೆಲ್ಲರು ಒಬ್ಬ ತಂದೆಯ ಮಕ್ಕಳು; ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ,” ಎಂದರು. |
೧೨. ಜೋಸೆಫನು ಅವರಿಗೆ, “ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವುದಕ್ಕೆ ಬಂದಿದ್ದೀರಿ,” ಎಂದನು. |
೧೩. ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು; ಕಾನಾನ್ ನಾಡಿನವರು, ಒಬ್ಬ ತಂದೆಯ ಮಕ್ಕಳು; ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲೇ ಇದ್ದಾನೆ; ಒಬ್ಬನು ಇಲ್ಲವಾದನು,” ಎಂದರು. |
೧೪. ಜೋಸೆಫನು ಅವರಿಗೆ, “ನಾನು ಈಗಾಗಲೆ ಹೇಳಿದಂತೆ ನೀವು ಗೂಢಚಾರರೇ, |
೧೫. ಇದು ನಿಜವೋ ಸುಳ್ಳೋ ಎಂದು ಗೊತ್ತಾಗಬೇಕಾದರೆ ನೀವು ನಿಮ್ಮ ತಮ್ಮನನ್ನು ಬರಮಾಡಬೇಕು. ಅವನು ಬಂದ ಹೊರತು, ಫರೋಹನ ಜೀವದಾಣೆ, ನೀವು ಇಲ್ಲಿಂದ ಹೊರಟುಹೋಗಕೂಡದು. |
೧೬. ಅವನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳಿಸಿರಿ. ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇರಿಸುತ್ತೇನೆ. ಹೀಗೆ ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ,” ಎಂದು ಹೇಳಿ, |
೧೭. ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು. |
೧೮. ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, “ನಾನು ದೇವರಲ್ಲಿ ಭಯಭಕ್ತಿಯುಳ್ಳವನು; ನಿಮಗೆ ಜೀವದ ಮೇಲೆ ಆಶೆ ಇದ್ದರೆ ನಾನು ಹೇಳಿದಂತೆ ಮಾಡಿ; |
೧೯. ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ. |
೨೦. ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು, ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ, ಆಗ ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು. |
೨೧. ಆಗ ಅವರು ತಮ್ಮತಮ್ಮೊಳಗೆ, “ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿ ಬೇಡಿಕೊಂಡ. ಅವನ ಪ್ರಾಣಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡು ಇದ್ದೇವೆ,” ಎಂದು ಮಾತಾಡಿಕೊಂಡರು. |
೨೨. ಅಂತೆಯೇ ರೂಬೇನನು, “ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ’ ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ,” ಎಂದ. |
೨೩. ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನೆಸಲಿಲ್ಲ. |
೨೪. ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ. |
೨೫. ಇದಾದ ಬಳಿಕ ಜೋಸೆಫನು ತನ್ನ ಆಳುಗಳಿಗೆ, “ಆ ಜನರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ಅದರಲ್ಲಿ ಇಟ್ಟುಬಿಡಿ. ಅವರ ಪ್ರಯಾಣಕ್ಕೆ ಬೇಕಾದ ಅಹಾರವನ್ನು ಕೊಟ್ಟು ಕಳಿಸಿರಿ,” ಎಂದು ಅಪ್ಪಣೆ ಮಾಡಿದ. ಆಳುಗಳು ಅದರಂತೆಯೆ ಮಾಡಿದರು. |
೨೬. ಅಣ್ಣಂದಿರು ತಾವು ಕೊಂಡುಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟರು. |
೨೭. ರಾತ್ರಿಗೆ ಒಂದು ಚಾವಡಿಯಲ್ಲಿ ಇಳಿದುಕೊಂಡರು. ಅವರಲ್ಲಿ ಒಬ್ಬನು ತನ್ನ ಕತ್ತೆಗೆ ಧಾನ್ಯಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದನು. ತಾನು ತಂದಿದ್ದ ಹಣ ಅದರ ಬಾಯಲ್ಲೇ ಇತ್ತು. |
೨೮. “ನಾನು ಕೊಟ್ಟ ಹಣ ನನಗೆ ವಾಪಸ್ಸಾಗಿದೆ; ಇಗೋ, ನನ್ನ ಚೀಲದಲ್ಲಿದೆ,” ಎಂದು ತನ್ನ ಅಣ್ಣತಮ್ಮಂದಿರಿಗೆ ಹೇಳಿದ. ಅವರು ಕಕ್ಕಾಬಿಕ್ಕಿಯಾಗಿ, ಒಬ್ಬರನ್ನೊಬ್ಬರು ಬೆರಗಿನಿಂದ ನೋಡುತ್ತಾ, “ನಮಗೇಕೆ ದೇವರು ಹೀಗೆ ಮಾಡಿದ್ದಾರೆ?” ಎಂದುಕೊಂಡರು. |
೨೯. ಕಾನಾನ್ ನಾಡನ್ನು ಅವರು ತಲುಪಿದರು. ತಮ್ಮ ತಂದೆಯ ಬಳಿಗೆ ಬಂದು ನಡೆದುದೆಲ್ಲವನ್ನು ವರದಿಮಾಡಿದರು. |
೩೦. “ಆ ದೇಶಾಧಿಪತಿ ನಮ್ಮೊಡನೆ ಗಡುಸಾಗಿ ಮಾತಾಡಿದ; ನಮ್ಮನ್ನು ಗೂಢಚಾರರೆಂದು ಕರೆದ. |
೩೧. ನಾವು ಅವನಿಗೆ, ‘ನಾವು ಸತ್ಯವಂತರೇ ಹೊರತು ಗೂಢಚಾರರೇನು ಅಲ್ಲ, |
೩೨. ನಾವು ಒಬ್ಬ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರು; ನಮ್ಮಲ್ಲಿ ಒಬ್ಬನು ಇಲ್ಲವಾದ. ಚಿಕ್ಕವನೋ ಈಗ ಕಾನಾನ್ ನಾಡಿನಲ್ಲಿ ನಮ್ಮ ತಂದೆಯ ಬಳಿಯಲ್ಲಿದ್ದಾನೆ’ ಎಂದು ಹೇಳಿದೆವು. |
೩೩. ಅದಕ್ಕೆ ಆ ದೇಶಾಧಿಪತಿ, “ನೀವು ಸತ್ಯವಂತರೋ ಇಲ್ಲವೋ ಎಂಬುದು ಗೊತ್ತಾಗುವುದಕ್ಕಾಗಿ ನಿಮ್ಮಲ್ಲಿ ಒಬ್ಬನನ್ನು ನನ್ನ ಬಳಿಯಲ್ಲೆ ಬಿಟ್ಟುಹೋಗಿ; ನಿಮ್ಮ ಕುಟುಂಬದವರ ಕ್ಷಾಮನಿವಾರಣೆಗೆ ಬೇಕಾದುದನ್ನು ತೆಗೆದುಕೊಂಡು ಹೋಗಬಹುದು. |
೩೪. ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನೀವು ಗೂಢಚಾರರಲ್ಲ. ಸತ್ಯವಂತರೇ ಎಂದು ತಿಳಿದುಕೊಳ್ಳುತ್ತೇನೆ; ನಿಮ್ಮ ಅಣ್ಣನನ್ನು ಬಿಡುಗಡೆ ಮಾಡುತ್ತೇನೆ ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡೆಸಬಹುದು,” ಎಂದು ಹೇಳಿದ. |
೩೫. ಅವರು ತಮ್ಮ ತಮ್ಮ ಚೀಲವನ್ನು ಬಿಚ್ಚಿನೋಡಿದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಗಂಟು ಸಿಕ್ಕಿತು. ಆ ಗಂಟುಗಳನ್ನು ಕಂಡಾಗ ಅವರೂ ಅವರ ತಂದೆಯೂ ಚಕಿತರಾದರು. |
೩೬. ಆಗ ಅವರ ತಂದೆ ಯಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಜೋಸೆಫನು ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟದುಃಖವೆಲ್ಲ ನನ್ನ ತಲೆಯ ಮೇಲೆ ಬಂದೆರಗಿದೆ!” ಎಂದನು. |
೩೭. ಅದಕ್ಕೆ ರೂಬೇನನು, “ನಾನು ಈ ಹುಡುಗನನ್ನು ನಿಮಗೆ ಪುನಃ ತಂದೊಪ್ಪಿಸುತ್ತೇನೆ; ಇಲ್ಲದೆಹೋದರೆ ನನ್ನಿಬ್ಬರು ಗಂಡುಮಕ್ಕಳನ್ನು ಕೊಂದುಹಾಕಬಹುದು. ಇವನನ್ನು ನನ್ನ ವಶಕ್ಕೆ ಕೊಡಿ, ನಾನು ತಪ್ಪದೆ ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ,” ಎಂದು ಹೇಳಿದ. |
೩೮. ಯಕೋಬನು ಅವರಿಗೆ, “ನನ್ನ ಮಗ ನಿಮ್ಮ ಸಂಗಡ ಹೋಗಬಾರದು. ಇವನ ಒಡಹುಟ್ಟಿದ ಅವನು ಸತ್ತುಹೋದ, ಇವನೊಬ್ಬನೇ ಉಳಿದು ಇದ್ದಾನೆ, ದಾರಿಯಲ್ಲಿ ಇವನಿಗೇನಾದರೂ ಆಪತ್ತು ಸಂಭವಿಸಬಹುದು. ಆಗ, ನರೆಕೂದಲಿನ ಈ ಮುದುಕ ದುಃಖದಿಂದಲೆ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ,” ಎಂದು ಹೇಳಿದ. |
ಕೀರ್ತನೆಗಳು ೧೦:೧೨-೧೮ |
೧೨. ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II |
೧೩. ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? I “ದೇವನೆನ್ನ ವಿಚಾರಿಸನು” ಎನ್ನುವುದೆಂತು? II |
೧೪. ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II |
೧೫. ಧೂರ್ತನ, ದುರುಳನ ಭುಜಬಲವನು ನೀ ಮುರಿದುಬಿಡು I ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು II |
೧೬. ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ I ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ II |
೧೭. ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II |
೧೮. ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ I ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ II |
ಜ್ಞಾನೋಕ್ತಿಗಳು ೪:೭-೯ |
೭. ಜ್ಞಾನ ಪಡೆಯಬೇಕೆಂಬುದೇ ಜ್ಞಾನಬೋಧೆಯ ಮೂಲಾಂಶ; ನಿನ್ನ ಸರ್ವಸಂಪತ್ತಿನಿಂದ ವಿವೇಕವನ್ನು ಗಳಿಸಿಕೊ. |
೮. ಜ್ಞಾನವೆಂಬಾಕೆಯನ್ನು ಶ್ರೇಷ್ಠಳೆಂದು ಭಾವಿಸಿದೆಯಾದರೆ, ಆಕೆ ನಿನ್ನನ್ನು ಸನ್ಮಾನಿಸುವಳು. ನೀನು ಅವಳನ್ನು ಅಪ್ಪಿಕೊಂಡೆಯಾದರೆ, ಆಕೆ ನಿನ್ನನ್ನು ಘನಪಡಿಸುವಳು. |
೯. ಅಂದದ ಪುಷ್ಪಮಾಲೆಯನ್ನು ಹಾಕುವಳು ನಿನ್ನ ಕೊರಳಿಗೆ, ಸುಂದರ ಕಿರೀಟವನ್ನು ಮುಡಿಸುವಳು ನಿನ್ನ ತಲೆಗೆ.” |
ಮತ್ತಾಯನು ೧೪:೧-೨೧ |
೧. ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. |
೨. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು |
೩. ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. |
೪. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು. |
೫. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. |
೬. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. |
೭. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು. |
೮. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು. |
೯. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. |
೧೦. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು; |
೧೧. ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. |
೧೨. ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು. |
೧೩. ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು. |
೧೪. ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. |
೧೫. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು. |
೧೬. ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು. |
೧೭. ಶಿಷ್ಯರು ಪ್ರತ್ಯುತ್ತರವಾಗಿ, “ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,” ಎಂದರು. |
೧೮. ಯೇಸು, “ಅವನ್ನು ಇಲ್ಲಿಗೆ ತನ್ನಿ,” ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು. |
೧೯. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು. |
೨೦. ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. |
೨೧. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು. |