A A A A A

ಕ್ರಾನಿಕಲ್ಸ್ ೧ ೧೯:೧-೧೯
೧. ಇದಾದನಂತರ ಅಮ್ಮೋನಿಯರ ಅರಸ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗ ಅರಸನಾದನು.
೨. ದಾವೀದನು, “ನಾಹಾಷನು ನನಗೆ ಸ್ನೇಹ ತೋರಿಸಿದ್ದರಿಂದ ನಾನೂ ಅವನ ಮಗ ಹಾನೂನನಿಗೆ ಸ್ನೇಹ ತೋರಿಸುವೆನು,” ಎಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕಾಗಿ ತನ್ನ ದೂತರನ್ನು ಕಳುಹಿಸಿದನು. ಅವರು ಹಾನೂನನನ್ನು ಸಂತೈಸುವುದಕ್ಕಾಗಿ ಅಮ್ಮೋನಿಯರ ದೇಶಕ್ಕೆ ಬಂದರು.
೩. ಅಲ್ಲಿನ ನಾಯಕರು ಹಾನೂನನಿಗೆ, “ದಾವೀದನು ನಿಮ್ಮ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದಾನೆ. ಇದರಿಂದ ಅವನು ನಿಮ್ಮ ತಂದೆಯನ್ನು ಸನ್ಮಾನಿಸುತ್ತಾನೆ ಎಂದು ತಿಳಿಯುತ್ತೀರೋ? ಇಲ್ಲ, ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಬಂದಿದ್ದಾರೆ,” ಎಂದು ದೂರಿತ್ತರು.
೪. ಆದುದರಿಂದ ಹಾನೂನನು ದಾವೀದನ ಸೈನಿಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.
೫. ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದರು. ಬಹಳವಾಗಿ ಅಪಮಾನಹೊಂದಿದ ಅವರಿಗೆ ಆಗ ದಾವೀದನು ಆಳುಗಳ ಮುಖಾಂತರ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಜೆರಿಕೋವಿನಲ್ಲಿದ್ದು ಅನಂತರ ಬನ್ನಿ,” ಎಂದು ಹೇಳಿಸಿದನು.
೬. ತಾವು ದಾವೀದನಿಗೆ ವೈರಿಗಳಾದೆವು ಎಂದು ಹಾನೂನನಿಗೂ ಅಮ್ಮೋನಿಯರಿಗೂ ತಿಳಿಯಿತು. ಆದುದರಿಂದ ಅವರು ಎರಡು ನದಿಗಳ ಮಧ್ಯದಲ್ಲಿರುವ ಸಿರಿಯಾ ಸೀಮೆಯಿಂದಲೂ ಸಿರಿಯಾದ ಮಾಕದಿಂದಲೂ ಚೊಬಾ ರಾಜ್ಯದಿಂದಲೂ ರಥಗಳನ್ನೂ ರಾಹುತರನ್ನೂ ತರಿಸುವುದಕ್ಕಾಗಿ ಮೂವತ್ತನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕಳುಹಿಸಿದರು.
೭. ಆಗ ಮೂವತ್ತೆರಡು ಸಾವಿರ ಮಂದಿ ರಥಬಲದವರೂ ಮಾಕದ ಅರಸನೂ ಅವನ ದಂಡಾಳುಗಳೂ ಅವರ ಸಹಾಯಕ್ಕಾಗಿ ಮೆದಬ ಊರಿನ ಮುಂದೆ ಪಾಳೆಯ ಮಾಡಿಕೊಂಡರು.
೮. ಈ ಸುದ್ದಿ ದಾವೀದನಿಗೆ ಮುಟ್ಟಿತು. ಅವನು ಯೋವಾಬನನ್ನೂ ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.
೯. ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರುಬಾಗಿಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ಇಳಿದುಕೊಂಡಿದ್ದರು.
೧೦. ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಯೇಲರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು ಅವರನ್ನು ಸಿರಿಯಾದವರಿಗೆ ಇದಿರಾಗಿ ನಿಲ್ಲಿಸಿದನು.
೧೧. ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು,
೧೨. “ಸಿರಿಯಾದವರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ.
೧೩. ಧೈರ್ಯದಿಂದಿರು, ನಮ್ಮ ಜನರಿಗಾಗಿ ಹಾಗು ನಮ್ಮ ದೇವರ ಪಟ್ಟಣಗಳಿಗಾಗಿ ನಮ್ಮ ಪೌರುಷವನ್ನು ತೋರಿಸೋಣ; ಸರ್ವೇಶ್ವರ ತಮಗೆ ಸರಿಕಾಣುವಂಥದನ್ನು ಮಾಡಲಿ,” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.
೧೪. ಯೋವಾಬನೂ ಅವನ ಜನರೂ ಸಿರಿಯಾದವರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಸಿರಿಯಾದವರು ಓಡಿಹೋದರು.
೧೫. ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮ ಅಬೀಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಜೆರುಸಲೇಮಿಗೆ ಹೋದನು.
೧೬. ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾಯಿತು. ಎಂದೇ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಸಿರಿಯಾದವರನ್ನು ಕರೇ ಕಳುಹಿಸಿದರು. ಹದರೆಜೆರನ ಸೇನಾಪತಿಯಾದ ಶೋಫಕನು ಅವರ ನಾಯಕನಾದನು.
೧೭. ಈ ಸುದ್ದಿ ದಾವೀದನಿಗೆ ಮುಟ್ಟಿದಾಗ ಅವನು ಇಸ್ರಯೇಲರೆಲ್ಲರನ್ನೂ ಕೂಡಿಸಿಕೊಂಡು ಜೋರ್ಡನ್ ನದಿಯನ್ನು ದಾಟಿ, ಸಿರಿಯಾದವರ ಸಮೀಪಕ್ಕೆ ಬಂದು, ಅವರೊಡನೆ ಕಾಳಗ ನಡೆಸಲು ವ್ಯೂಹಕಟ್ಟಿದನು.
೧೮. ಸಿರಿಯಾದವರು ಯುದ್ಧಕ್ಕೆ ನಿಂತಾಗ ಇಸ್ರಯೇಲರ ಮುಂದೆ ಸೋತು ಓಡಿಹೋದರು;ದಾವೀದನು ಸಿರಿಯಾದವರ ಏಳುಸಾವಿರ ರಥಗಳನ್ನು ಹಾಳುಮಾಡಿದನು. ನಲವತ್ತು ಸಾವಿರ ಮಂದಿ ಕಾಲಾಳುಗಳನ್ನು ಸದೆಬಡಿದನು. ಸೇನಾಪತಿಯಾದ ಶೋಫಕನನ್ನೂ ಕೊಂದುಬಿಟ್ಟನು.
೧೯. ಹದರೆಜೆರನಿಗೆ ದಾಸರಾಗಿ ಇದ್ದವರು ಇಸ್ರಯೇಲರ ಮುಂದೆ ತಮ್ಮ ಕೈಸಾಗದೆಂದು ತಿಳಿದು, ದಾವೀದನೊಡನೆ ಸಂಧಾನ ಮಾಡಿಕೊಂಡು ಅವನಿಗೆ ಅಧೀನರಾದರು.ಅಂದಿನಿಂದ ಸಿರಿಯಾದವರು ಅಮ್ಮೋನಿಯರಿಗೆ ಸಹಾಯಮಾಡಲು ಸಮ್ಮತಿಸಲಿಲ್ಲ.

ಕ್ರಾನಿಕಲ್ಸ್ ೧ ೨೦:೧-೮
೧. ಮರುವರ್ಷ, ಅರಸರು ಯುದ್ಧಕ್ಕೆ ಹೊರಡುವ ಕಾಲದಲ್ಲಿ ಯೋವಾಬನು ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅವನೊಡನೆ ಬಲವಾದ ಸೈನ್ಯವಿತ್ತು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದನ್ನು ಹಾಳುಮಾಡಿಬಿಟ್ಟನು.
೨. ದಾವೀದನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಸುಮಾರು ಮೂವತ್ತೈದು ಕಿಲೋಗ್ರಾಂ ತೂಕದ್ದು. ಅದರಲ್ಲಿ ಇದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ಅವನು ದೊಡ್ಡ ಕೊಳ್ಳೆಯನ್ನೇ ಕೊಂಡು ಹೊಯ್ದನು.
೩. ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೆ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರೆಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.
೪. ಬಳಿಕ ಫಿಲಿಷ್ಟಿಯರ ವಿರುದ್ಧ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದನು. ಫಿಲಿಷ್ಟಿಯರು ಇದರಿಂದ ಕುಗ್ಗಿಹೋದರು.
೫. ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮ ಲಹ್ಮೀಯನನ್ನು ಕೊಂದನು. ಈ ಲಹ್ಮೀಯನ ಬರ್ಜಿಯ ಹಿಡಿಕೆ ನೇಕಾರರ ಕುಂಟೆಯಷ್ಟು ದೊಡ್ಡದಾಗಿತ್ತು.
೬. ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷ ಇದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳು ಇದ್ದವು. ಅವನೂ ರೆಫಾಯನು.
೭. ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
೮. ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕನಿಂದಲೂ ಹತರಾದರು.

ಕೀರ್ತನೆಗಳು ೭೮:೨೬-೩೩
೨೬. ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು I ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು II
೨೭. ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು I ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು II
೨೮. ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ I ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ II
೨೯. ಸಿಕ್ಕಿತು ಅವರಿಗೆ ತಾವು ಬಯಸಿದ್ದು I ತೃಪ್ತರಾದರು ಹೊಟ್ಟೆತುಂಬ ತಿಂದು II
೩೦. ಆದರೆ ಆ ಜನಕೆ ಆಶೆ ಕೈಗೂಡುವುದಕೆ ಮುನ್ನ I ಬಾಯಿಗೆ ಬಂದ ತುತ್ತು ಹೊಟ್ಟೆಗಿಳಿಯುವುದಕ್ಕೆ ಮುನ್ನ II
೩೧. ದೈವಕೋಪವೆದ್ದಿತು ಅವರಿಗೆ ವಿರುದ್ಧ I ಮಾಡಿತವರಲಿ ಕೊಬ್ಬಿದವರ ವಧ I ನೆಲಕುರುಳಿತು ಇಸ್ರಯೇಲ ಸಿರಿಜನ II
೩೨. ಇಷ್ಟಾದರೂ ಪಾಪಮಾಡುತ ಬಂದವರು ಪದೇ ಪದೇ I ದೇವರ ಅದ್ಭುತಕಾರ್ಯಗಳನು ತೊರೆದರು ನಂಬದೆ II
೩೩. ಆರಿಸಿದನು ಊದಿ ಅವರ ಬಾಳ ಹಣತೆಯನು I ಬರಮಾಡಿದನು ಅವರಿಗೆ ಭೀಕರ ಮರಣವನು II

ಜ್ಞಾನೋಕ್ತಿಗಳು ೧೯:೨೭-೨೯
೨೭. ಮಗನೇ, ಉಪದೇಶ ಕೇಳುವುದನ್ನು ನಿಲ್ಲಿಸಬೇಡ; ನಿಲ್ಲಿಸಿದೆಯಾದರೆ ಬುದ್ಧಿಮಾತಿನಿಂದ ವಂಚಿತನಾಗುವೆ.
೨೮. ನೀಚಸಾಕ್ಷಿ ನ್ಯಾಯತೀರ್ಪನ್ನು ಮರ್ಯಾದಿಸನು; ದುಷ್ಟಸಾಕ್ಷಿ ದ್ರೋಹವನ್ನೂ ನುಂಗಿಬಿಡುವನು.
೨೯. ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.

ಪ್ರೇಷಿತರ ೮:೨೬-೪೦
೨೬. ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದನು.
೨೭. ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ಆ ದೇಶದ ರಾಣಿ ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ. ದೇವಾರಾಧನೆಗೆಂದು ಜೆರುಸಲೇಮಿಗೆ ಹೋಗಿ ಹಿಂದಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು.
೨೮. ***
೨೯. ಪವಿತ್ರಾತ್ಮರು ಫಿಲಿಪ್ಪನಿಗೆ, “ನೀನು ಮುಂದೆ ಹೋಗಿ ಆ ರಥದ ಜೊತೆಯಲ್ಲೇ ನಡೆ,” ಎಂದು ತಿಳಿಸಿದರು.
೩೦. ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. “ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?” ಎಂದು ಪ್ರಶ್ನಿಸಿದನು.
೩೧. ಆ ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ ವಿವರಿಸಿದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು.
೩೨. ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ.
೩೩. ಆತನನ್ನು ಅವಮಾನಪಡಿಸಲಾಯಿತು ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು ಆತನ ಸಂತತಿಯ ಮಾತೇ ಎತ್ತದಂತಾಯಿತು. ಇದಕಾರಣ ಆತನ ಭೌತಿಕಜೀವವನ್ನೇ ಮೊಟಕುಗೊಳಿಸಲಾಯಿತು.”
೩೪. ಆ ಅಧಿಕಾರಿ ಫಿಲಿಪ್ಪನಿಗೆ, “ಇಲ್ಲಿ ಪ್ರವಾದಿ ಯಾರನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾನೆ ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯಾ?’ ಎಂದು ಕೇಳಿದನು.
೩೫. ಆಗ ಫಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೇ ಆಧಾರವಾಗಿ ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ ಬೋಧಿಸಿದನು.
೩೬. ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ ನೀರಿದ್ದ ಒಂದು ಸ್ಥಳಕ್ಕೆ ಬಂದರು. ಅದನ್ನು ಕಂಡ ಆ ಅಧಿಕಾರಿ, “ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರೂ ಅಭ್ಯಂತರವಿದೆಯೇ?” ಎಂದನು.
೩೭. (ಫಿಲಿಪ್ಪನು, “ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು).
೩೮. ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು.
೩೯. ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಆ ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು.
೪೦. ಫಿಲಿಪ್ಪನಾದರೋ ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.