A A A A A

ಸಮುವೇಲನು ೨ ೧೭:೧-೨೯
೧. ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು;
೨. ಅವನು ದಣಿದವನೂ ಧೈರ್ಯಗುಂದಿದವನೂ ಆಗಿರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು; ಅವನ ಜನರೆಲ್ಲರೂ ಓಡಿಹೋಗುವರು.
೩. ಅರಸನೊಬ್ಬನನ್ನೇ ಕೊಂದು ಎಲ್ಲಾ ಜನರನ್ನು ತಿರುಗಿ ನಿಮ್ಮ ಬಳಿಗೆ ಬರಮಾಡುವೆನು. ನಿಮ್ಮ ಅಪೇಕ್ಷೆಯಂತೆ ಎಲ್ಲಾ ಜನರೂ ಹಿಂದಿರುಗಿ ಬಂದ ಮೇಲೆ ನಾಡಿನಲ್ಲಿ ಎಲ್ಲಾ ಸಮಾಧಾನವುಂಟಾಗುವುದು,” ಎಂದು ಹೇಳಿದನು.
೪. ಈ ಸಲಹೆ ಅಬ್ಷಾಲೋಮನಿಗೂ ಇಸ್ರಯೇಲರ ಹಿರಿಯರೆಲ್ಲರಿಗೂ ಸರಿಯಾಗಿ ಕಂಡಿತು.
೫. ಆಮೇಲೆ ಅಬ್ಷಾಲೋಮನು, “‍ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನೂ ಕೇಳೋಣ,” ಎಂದುಕೊಂಡನು.
೬. ಅವನು ತನ್ನ ಬಳಿಗೆ ಬಂದಾಗ, “ಅಹೀತೋಫೆಲನು ಹೀಗೆ ಹೀಗೆ ಹೇಳಿದ್ದಾನೆ; ಇದರಂತೆ ಮಾಡಿದರೆ ಒಳ್ಳೇದಾಗುವುದೇ? ಇಲ್ಲವಾದರೆ ನಿನ್ನ ಅಭಿಪ್ರಾಯ ಏನು?” ಎಂದು ಕೇಳಿದನು.
೭. ಆಗ ಹೂಷೈಯು ಅಬ್ಷಾಲೋಮನಿಗೆ, “ಈ ಸಾರಿ ಅಹೀತೋಫೆಲನು ಹೇಳಿದ ಆಲೋಚನೆ ಒಳ್ಳೆಯದಲ್ಲ;
೮. ತಮ್ಮ ತಂದೆ ಮತ್ತು ಅವನ ಜನರೂ ಶೂರರಾಗಿದ್ದಾರೆಂದೂ, ಈಗಲಾದರೋ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷ ಉಳ್ಳವರಾಗಿದ್ದಾರೆಂದೂ ತಮಗೆ ಗೊತ್ತುಂಟಲ್ಲವೆ? ಇದಲ್ಲದೆ ತಮ್ಮ ತಂದೆ ಯುದ್ಧ ನಿಪುಣನು; ಜನರ ಮಧ್ಯದಲ್ಲಿ ರಾತ್ರಿ ಕಳೆಯುವುದಿಲ್ಲ.
೯. ಅವನು ಈಗ ಒಂದು ಗುಹೆಯಲ್ಲೋ ಬೇರೆ ಯಾವುದಾದರೊಂದು ಸ್ಥಳದಲ್ಲಾಗಲೋ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಮಡಿದರೆ, ಜನರು ಇದನ್ನು ಕೇಳಿ, ಅಬ್ಷಾಲೋಮನ ಪಕ್ಷದವರಿಗೆ ಮಹಾ ಅಪಜಯವಾಯಿತೆಂದು ಸುದ್ದಿಹಬ್ಬಿಸುವರು.
೧೦. ಆಗ ಸಿಂಹಹೃದಯಿಗಳಾದ ಶೂರರ ಎದೆಯೂ ಕರಗಿ ನೀರಾಗುವುದು. ನಿಮ್ಮ ತಂದೆ ರಣವೀರನೆಂದೂ ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಯೇಲರು ಬಲ್ಲರಷ್ಟೆ.
೧೧. ಹೀಗಿರುವುದರಿಂದ, ನನ್ನ ಆಲೋಚನೆಯನ್ನು ಕೇಳಿ: “ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿರುವ ಇಸ್ರಯೇಲರಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ ನೀವೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
೧೨. ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ ನೆಲದ ಮೇಲೆ ಇಬ್ಬನಿ ಹೇಗೋ ಹಾಗೆಯೇ ಅವರ ಮೇಲೆ ಎರಗೋಣ. ಆಗ ಅವನೂ ಅವನ ಜನರೂ ನಮ್ಮ ಕೈಗೆ ಸಿಕ್ಕುವರು; ಒಬ್ಬನೂ ತಪ್ಪಿಸಿಕೊಳ್ಳಲಾರನು.
೧೩. ಅವನು ಒಂದು ಪಟ್ಟಣವನ್ನು ಹೊಕ್ಕಿರುವುದು ಆದರೆ ಇಸ್ರಯೇಲರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ; ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.
೧೪. ಇದನ್ನು ಕೇಳಿ ಅಬ್ಷಾಲೋಮನೂ ಎಲ್ಲ ಇಸ್ರಯೇಲರೂ, “ಅರ್ಕಿಯನಾದ ಹೂಷೈಯ ಆಲೋಚನೆಯು ಅಹೀತೋಫೆಲನ ಆಲೋಚನೆಗಿಂತ ಒಳ್ಳೆಯದಾಗಿದೆ,” ಎಂದರು. ಹೀಗೆ ಸರ್ವೇಶ್ವರ ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು, ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದರು.
೧೫. ತರುವಾಯ ಹೂಷೈಯು, ಯಾಜಕರಾದ ಚಾದೋಕ ಹಾಗು ಎಬ್ಯಾತಾರರಿಗೆ, “ಅಹೀತೋಫೆಲನು ಅಬ್ಷಾಲೋಮನಿಗೂ ಇಸ್ರಯೇಲರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು; ನಾನು ಹೀಗೆ ಹೇಳಿದೆ.
೧೬. ಆದುದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಿಬಿಡಿ; ಇಲ್ಲವಾದರೆ ನೀವೂ ನಿಮ್ಮ ಜನರೂ ನಾಶವಾಗುವಿರಿ’ ಎಂದು ಹೇಳಿ ಕಳುಹಿಸಿರಿ,” ಎಂದನು.
೧೭. ಯೋನಾತಾನ್ ಹಾಗು ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿ ಎಲ್ಲಾ ವರ್ತಮಾನಗಳನ್ನು ಇವರಿಗೂ ಇವರ ಅರಸ ದಾವೀದನಿಗೂ ಮುಟ್ಟಿಸುವಂತೆ ಗೊತ್ತುಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಗೆ ಬರಲಿಲ್ಲ.
೧೮. ಆದರೂ ಒಬ್ಬ ಯುವಕನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಬಹುರೀಮಿಗೆ ಓಡಿಹೋಗಿ ಅಲ್ಲಿ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದರು.
೧೯. ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ ಗೋದಿಯ ನುಚ್ಚನ್ನು ಹರವಿದಳು. ಆದುದರಿಂದ ಅವರಿರುವ ಸಂಗತಿ ಯಾರಿಗೂ ಗೊತ್ತಾಗಲಿಲ್ಲ.
೨೦. ಅಬ್ಷಾಲೋಮನ ಸೇವಕರು ಆ ಸ್ತ್ರೀಯ ಮನೆಗೆ ಹೋಗಿ, “ಅಹೀಮಾಚ್ ಮತ್ತು ಯೋನಾತಾನರೆಲ್ಲಿ?” ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆ, ” ಅವರು ಹಳ್ಳದಾಟಿ ಹೋಗಿಬಿಟ್ಟರು,” ಎಂದು ಉತ್ತರಕೊಟ್ಟಳು. ಸೇವಕರು ಅವರನ್ನು ಹುಡುಕುವುದಕ್ಕೆ ಹೋಗಿ ಕಾಣದೆ ಜೆರುಸಲೇಮಿಗೆ ಹಿಂದಿರುಗಿದರು.
೨೧. ಅವರು ಹೋದಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, “ಅಹೀತೋಫೆಲನು ನಿಮಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ; ಆದುದರಿಂದ ಬೇಗನೆ ಎದ್ದು ನದಿದಾಟಿ ಹೋಗಿ,” ಎಂದು ಹೇಳಿದರು.
೨೨. ಆಗ ದಾವೀದನೂ ಅವನ ಜೊತೆಯಲ್ಲಿದ್ದವರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. ಉದಯವಾದಾಗ ದಾಟಬೇಕಾದವನೊಬ್ಬನೂ ಇರಲಿಲ್ಲ.
೨೩. ಅಹೀತೋಫೆಲನು ತನ್ನ ಆಲೋಚನೆ ನಡೆಯಲಿಲ್ಲವೆಂದು ತಿಳಿದು, ಕತ್ತೆಗೆ ತಡಿಹಾಕಿಸಿ ಕುಳಿತುಕೊಂಡು ತನ್ನ ಊರಿಗೆ ಹೋಗಿದ್ದನು. ಮನೆಯ ವ್ಯವಸ್ಥೆಮಾಡಿ ಅನಂತರ ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.
೨೪. ದಾವೀದನು ಮಹನಯಿಮಿಗೆ ಹೋದನು. ಇಸ್ರಯೇಲರನ್ನೆಲ್ಲಾ ಕೂಡಿಸಿಕೊಂಡು ಅಬ್ಷಾಲೋಮನು ಜೋರ್ಡನ್ ನದಿ ದಾಟಿದನು.
೨೫. ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯನ್ನಾಗಿ ನೇಮಿಸಿದನು. ಇಸ್ರಯೇಲನಾದ ಇತ್ರನು ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗಲ್ ಎಂಬುವಳನ್ನು ಕೂಡಿದ್ದರಿಂದ ಹುಟ್ಟಿದವನು ಈ ಅಮಾಸನು.
೨೬. ಇಸ್ರಯೇಲರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು.
೨೭. ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬವರು
೨೮. ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳನ್ನು ಕೊಟ್ಟರು; ಊಟಕ್ಕಾಗಿ ಗೋದಿ, ಜವೆಗೋದಿ ಹಿಟ್ಟು, ಹುರಿಗಾಳು,
೨೯. ಅವರೆ, ಅಲಸಂದೆ, ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿಗಿಣ್ಣು, ಹಸುವಿನ ಗಿಣ್ಣು, ಇವುಗಳನ್ನೂ ತಂದುಕೊಟ್ಟರು. ‘ಜನರು ಮರಳುಗಾಡಿನ ಪ್ರಯಾಣದಿಂದ ಹಸಿದಿದ್ದಾರೆ, ದಣಿದಿದ್ದಾರೆ ಹಾಗು ಬಾಯಾರಿದ್ದಾರೆ’ ಎಂಬ ಭಾವನೆಯಿಂದ ಇವುಗಳನ್ನು ತಂದುಕೊಟ್ಟರು.

ಸಮುವೇಲನು ೨ ೧೮:೧-೩೩
೧. ತರುವಾಯ ಅರಸನಾದ ದಾವೀದನು ತನ್ನ ಹತ್ತಿರ ಇದ್ದ ಸೈನಿಕರನ್ನು ಎಣಿಸಿ ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ನೇಮಿಸಿದನು.
೨. ಅವನು ಸೈನ್ಯವನ್ನು ಮೂರು ಪಂಗಡಗಳಾಗಿ ವಿಭಾಗಿಸಿ ಒಂದು ಪಂಗಡವನ್ನು ಯೋವಾಬನಿಗೂ, ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ, ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ, “ನಾನೂ ನಿಮ್ಮ ಸಂಗಡ ಬರುತ್ತೇನೆ,” ಎಂದು ಹೇಳಿದನು.
೩. ಆಗ ಸೈನಿಕರು, “ನೀವು ಬರಬಾರದು; ನಾವು ಸೋತು ಓಡಿಹೋದರೆ ಶತ್ರುಗಳು ಲಕ್ಷಿಸುವುದಿಲ್ಲ; ನಮ್ಮಲ್ಲಿ ಅರ್ಧಜನ ಸತ್ತರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರ ಬೆಲೆ ನಿಮ್ಮೊಬ್ಬರಿಗೇ ಉಂಟು. ತಾವು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯ ಮಾಡಬಹುದು,” ಎಂದರು.
೪. ಅರಸನು, “ನಿಮಗೆ ಸರಿಕಂಡ ಹಾಗೆ ಮಾಡುತ್ತೇನೆ,” ಎಂದು ಹೇಳಿ ಊರಬಾಗಿಲಿನ ಒಂದು ಕಡೆಯಲ್ಲಿ ನಿಂತನು. ಸೈನಿಕರು ನೂರು ನೂರು ಮಂದಿಯಾಗಿ, ಸಾವಿರ ಸಾವಿರ ಮಂದಿಯಾಗಿ ಹೊರಟರು.
೫. ಅರಸನು ಯೋವಾಬ್, ಅಬೀಷೈ ಹಾಗು ಇತ್ತೈ ಎಂಬವರಿಗೆ, “ನನ್ನ ಸಲುವಾಗಿ ಯುವಕ ಅಬ್ಷಾಲೋಮನಿಗೆ ಹಾನಿಮಾಡಬೇಡಿ,” ಎಂದು ಆಜ್ಞಾಪಿಸಿದನು. ದಾವೀದನು ಸೇನಾಪತಿಗಳಿಗೆ ಕೊಟ್ಟ ಈ ಅಪ್ಪಣೆ ಸೈನ್ಯದವರಿಗೆಲ್ಲಾ ಕೇಳಿಸಿತು.
೬. ಅನಂತರ ಸೈನಿಕರು ಇಸ್ರಯೇಲರಿಗೆ ವಿರೋಧವಾಗಿ ಹೊರಟು ಬಯಲಿಗೆ ಬಂದರು. ಎಫ್ರಯಿಮ್ ಕಾಡಿನಲ್ಲಿ ಯುದ್ಧನಡೆಯಿತು.
೭. ಇಸ್ರಯೇಲರು ದಾವೀದನ ಸೈನಿಕರಿಂದ ಪೂರ್ಣವಾಗಿ ಪರಾಭವಗೊಂಡರು. ಆ ದಿನ ಇಪ್ಪತ್ತು ಸಾವಿರ ಜನರು ಹತರಾದರು.
೮. ಯುದ್ಧವು ಸುತ್ತಣ ಪ್ರದೇಶಗಳಿಗೆ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಸತ್ತವರಿಗಿಂತ, ಮರುಳುಗಾಡಿನಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿತ್ತು.
೯. ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರಗತ್ತೆ ಒಂದು ದೊಡ್ಡ ಓಕ್ ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯೆ ನೇತಾಡಬೇಕಾಯಿತು.
೧೦. ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, “ನೋಡಿ, ಆ ಓಕ್ ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ,” ಎಂದು ಹೇಳಿದನು.
೧೧. ಯೋವಾಬನು, “ನೀನು ಕಂಡಕೂಡಲೆ ಏಕೆ ಅವನನ್ನು ಕಡಿದು ನೆಲಕ್ಕುರುಳಿಸಲಿಲ್ಲ? ಹಾಗೆ ಮಾಡಿದ್ದರೆ, ನಾನೇ ನಿನಗೆ ಹತ್ತು ಬೆಳ್ಳಿನಾಣ್ಯಗಳನ್ನೂ ಒಂದು ನಡುಕಟ್ಟನ್ನೂ ಕೊಡುತ್ತಿದ್ದೆ,” ಎಂದನು.
೧೨. ಅದಕ್ಕೆ ಆ ವ್ಯಕ್ತಿ, “ನೀವು ನನ್ನ ಕೈಯಲ್ಲಿ ಸಾವಿರ ಬೆಳ್ಳಿ ನಾಣ್ಯಗಳನ್ನು ಇಟ್ಟರೂ ಅರಸರ ಮಗನಿಗೆ ವಿರೋಧವಾಗಿ ಕೈಯೆತ್ತೆನು. ಅರಸರು ನಮ್ಮೆಲ್ಲರಿಗೆ ಕೇಳಿಸುವಂತೆ ನಿಮಗೆ, ಅಬೀಷೈಗೆ ಹಾಗು ಇತ್ತೈಗೆ, ‘ಜಾಗರೂಕತೆಯಿಂದಿರಿ! ಆ ಯುವಕ ಅಬ್ಷಾಲೋಮನನ್ನು ಯಾರೂ ಮುಟ್ಟಬಾರದು’ ಎಂದು ಆಜ್ಞಾಪಿಸಿದರಲ್ಲವೇ?
೧೩. ನಾನು ಅವನ ಪ್ರಾಣಕ್ಕೆ ಅಪಾಯವನ್ನು ಉಂಟುಮಾಡಿದರೆ ಅದು ಅರಸರಿಗೆ ಮರೆಯಾಗುವುದಿಲ್ಲ; ನೀವೂ ನನ್ನನ್ನು ಕೈಬಿಟ್ಟು ದೂರನಿಲ್ಲುವಿರಿ,” ಎಂದು ಉತ್ತರಕೊಟ್ಟನು.
೧೪. ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು.
೧೫. ಅವನು ಇನ್ನೂ ಜೀವದಿಂದ ಮರದಲ್ಲಿ ನೇತಾಡುತ್ತಿರುವಾಗಲೇ ಯೋವಾಬನ ಆಯುಧಗಳನ್ನು ಹೊರುವ ಹತ್ತುಮಂದಿ ಯುವಕರು ಬಂದು ಅವನನ್ನು ಕೊಂದುಹಾಕಿದರು.
೧೬. ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವುದಕ್ಕಾಗಿ ಕಹಳೆಯನ್ನು ಊದಿಸಿದನು. ಸೈನ್ಯದವರೆಲ್ಲಾ ಇಸ್ರಯೇಲರನ್ನು ಬೆನ್ನಟ್ಟುವುದನ್ನು ಬಿಟ್ಟು ಹಿಂದಿರುಗಿದರು.
೧೭. ಅವರು ಅಬ್ಷಾಲೋಮನ ಶವವನ್ನು ಆ ಕಾಡಿನಲ್ಲಿದ್ದ ಒಂದು ದೊಡ್ಡ ಗುಂಡಿಯೊಳಗೆ ಹಾಕಿ ಅದರ ಮೇಲೆ ದೊಡ್ಡ ಕಲ್ಲುರಾಶಿಯನ್ನು ಮಾಡಿ ಮುಚ್ಚಿದರು. ಇಸ್ರಯೇಲರಾದರೋ ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
೧೮. ಅಬ್ಷಾಲೋಮನು ಇನ್ನೂ ಜೀವದಿಂದಿದ್ದಾಗ, ತನ್ನ ಹೆಸರನ್ನುಳಿಸುವ ಮಗ ಇಲ್ಲದ್ದರಿಂದ ಒಂದು ಕಲ್ಲಿನ ಕಂಬವನ್ನು ತರಿಸಿ, ಅದನ್ನು ಅರಸನ ಕಣಿವೆಯಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಅದಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದನ್ನು ಇಂದಿನವರೆಗೂ ‘ಅಬ್ಷಾಲೋಮನ ಸ್ಮಾರಕಸ್ತಂಭ’ ಎಂದು ಕರೆಯಲಾಗುತ್ತದೆ.
೧೯. ಚಾದೋಕನ ಮಗ ಅಹೀಮಾಚನು ಯೋವಾಬನಿಗೆ, “ಅಪ್ಪಣೆಯಾಗಲಿ, ನಾನು ಅರಸರ ಬಳಿಗೆ ಓಡಿಹೋಗಿ ಸರ್ವೇಶ್ವರಸ್ವಾಮಿ ವೈರಿಗಳಿಗೆ ಮುಯ್ಯಿತೀರಿಸಿದ್ದಾರೆಂಬ ಶುಭವರ್ತಮಾನವನ್ನು ತಿಳಿಸುತ್ತೇನೆ,” ಎಂದನು.
೨೦. ಯೋವಾಬನು, “ಆ ಹೊತ್ತಿನ ಸುದ್ದಿಯನ್ನು ತೆಗೆದುಕೊಂಡು ಹೋಗತಕ್ಕವನು ನೀನಲ್ಲ; ಇನ್ನೊಂದು ಸಾರಿ ನಿನ್ನನ್ನು ಕಳುಹಿಸುತ್ತೇನೆ. ಈ ಹೊತ್ತು ಅರಸರ ಮಗನು ಸತ್ತಿರುವುದರಿಂದ ವರ್ತಮಾನವು ಶುಭವಾದುದ್ದಲ್ಲ,” ಎಂದು ಹೇಳಿ
೨೧. ತನ್ನ ಬಳಿಯಲ್ಲಿದ್ದ ಒಬ್ಬ ಕೂಷ್ಯನನ್ನು ಕರೆದು ಅವನಿಗೆ, “ನೀನು ಹೋಗಿ ಕಂಡದ್ದನ್ನು ಅರಸರಿಗೆ ತಿಳಿಸು,” ಎಂದು ಆಜ್ಞಾಪಿಸಿದನು. ಅವನು ಯೋವಾಬನಿಗೆ ನಮಸ್ಕರಿಸಿ ಹೊರಟನು.
೨೨. ಚಾದೋಕನ ಮಗ ಅಹೀಮಾಚನು ಪುನಃ ಯೋವಾಬನಿಗೆ, “ಆಗುವುದಾಗಲಿ, ದಯವಿಟ್ಟು ಆ ಕೂಷ್ಯನ ಹಿಂದೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡಿ,” ಎಂದು ಬೇಡಿಕೊಂಡನು. ಅದಕ್ಕೆ ಯೋವಾಬನು, “ಮಗೂ, ಏಕೆ ಹೋಗಬೇಕೆನ್ನುತ್ತಿ? ಅದಕ್ಕಾಗಿ ನಿನಗೆ ಬಹುಮಾನವೇನೂ ಸಿಕ್ಕುವುದಿಲ್ಲ,” ಎಂದನು.
೨೩. ಆದರೆ ಅಹೀಮಾಚನು ಮತ್ತೊಮ್ಮೆ, “ಚಿಂತೆಯಿಲ್ಲ, ನನ್ನನ್ನೂ ಕಳುಹಿಸಿ,” ಎಂದು ಒತ್ತಾಯಪಡಿಸಿದ್ದರಿಂದ ಯೋವಾಬನು, “ಹೋಗು,” ಎಂದು ಹೇಳಿದನು. ಆಗ ಅಹೀಮಾಚನು ಜೋರ್ಡನ್ ತಗ್ಗಿನಲ್ಲಿರುವ ದಾರಿಯನ್ನು ಹಿಡಿದು ಆ ಕೂಷ್ಯನಿಗಿಂತ ಮುಂದಾಗಿ ಓಡಿದನು‍.
೨೪. ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು.
೨೫. ಅವನು ಕೂಡಲೆ ದಾವೀದನಿಗೆ ತಿಳಿಸಿದನು. ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು,” ಎಂದನು. ಆ ವ್ಯಕ್ತಿ ಬರಬರುತ್ತಾ ಸಮೀಪವಾದನು.
೨೬. ಅಷ್ಟರಲ್ಲಿ ಕಾವಲುಗಾರನು ಓಡುತ್ತಾ ಬರುವ ಇನ್ನೊಬ್ಬನನ್ನು ಕಂಡು ದ್ವಾರಪಾಲಕನ ಮುಖಾಂತರ, “ಇಗೋ, ಇನ್ನೊಬ್ಬನು ಒಂಟಿಗನಾಗಿ ಬರುತ್ತಿದ್ಪಾನೆ,” ಎಂದು ಅರಸನಿಗೆ ತಿಳಿಸಿದನು. ಅರಸನು, “ಹಾಗಾದರೆ ಅವನೂ ಸಮಾಚಾರ ತರುವವನು,” ಎಂದು ಹೇಳಿದನು.
೨೭. ಕಾವಲುಗಾರನು, “ಮುಂದಾಗಿ ಬರುತ್ತಿರುವವನ ಓಟ ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಕಾಣುತ್ತದೆ,” ಎಂದನು. ಅದಕ್ಕೆ ಅರಸನು, “ಅವನು ಒಳ್ಳೆಯವನು; ಶುಭವರ್ತಮಾನ ತರುವವನು,” ಎಂದನು.
೨೮. ಅಹೀಮಾಚನು ಹತ್ತಿರ ಬಂದು ಅರಸನಿಗೆ, “ಶುಭವಾಗಲಿ!” ಎಂದು ಹೇಳಿ ಸಾಷ್ಟಾಂಗ ನಮಸ್ಕಾರ ಮಾಡಿದನು. “ಅರಸನಿಗೆ ವಿರುದ್ಧ ಬಂಡೆದ್ದವರನ್ನು ಅಧೀನಪಡಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದನು.
೨೯. ಆಗ ಅರಸನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೋ?” ಎಂದು ಕೇಳಿದನು. ಅದಕ್ಕೆ ಅಹೀಮಾಚನು, “ಯೋವಾಬನು ಒಡೆಯರ ಸೇವಕನಾದ ನನ್ನನ್ನು ಕಳುಹಿಸುವಾಗ ನಾನು ಒಂದು ದೊಡ್ಡ ದೊಂಬಿಯನ್ನು ಕಂಡೆ.ಆದರೆ ಸಂಗತಿಯೇನೆಂಬುದು ನನಗೆ ಗೊತ್ತಾಗಲಿಲ್ಲ,” ಎಂದು ಉತ್ತರಕೊಟ್ಟನು.
೩೦. ಆಗ ಅರಸನು, “ನೀನು ಇತ್ತ ನಿಲ್ಲು,” ಎಂದು ಆಜ್ಞಾಪಿಸಿದನು.; ಅವನು ಅಂತೆಯೇ ನಿಂತನು.
೩೧. ಅಷ್ಟರಲ್ಲಿ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು.
೩೨. ಅರಸನು ಅವನನ್ನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ?’ ಎಂದು ಕೇಳಿದನು. ಅವನು, “ನನ್ನ ಒಡೆಯರಾದ ಅರಸರ ಶತ್ರುಗಳಿಗೂ, ಅವರಿಗೆ ಕೇಡು ಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ!” ಎಂದು ಉತ್ತರಕೊಟ್ಟನು.
೩೩. ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು! ಅಬ್ಷಾಲೋಮನೇ, ನನ್ನ ಮಗನೇ ಮಗನೇ,” ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು.

ಕೀರ್ತನೆಗಳು ೬೬:೧೬-೨೦
೧೬. ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ II
೧೭. ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು I ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು II
೧೮. ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ I ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ II
೧೯. ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ I ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ II
೨೦. ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II

ಜ್ಞಾನೋಕ್ತಿಗಳು ೧೬:೩೧-೩೨
೩೧. ನರೆಗೂದಲು ಸುಂದರ ಕಿರೀಟ, ಸನ್ನಡತೆಗೆ ಸಿಗುವ ಪ್ರತಿಫಲ.
೩೨. ದೀರ್ಘಶಾಂತನು ಪರಾಕ್ರಮಶಾಲಿಗಿಂತ ಶ್ರೇಷ್ಠ; ತನ್ನನ್ನು ತಾನೆ ಗೆದ್ದವನು ಪಟ್ಟಣ ಗೆದ್ದವನಿಗಿಂತ ಬಲಿಷ್ಠ.

ಯೊವಾನ್ನನು ೭:೨೮-೫೩
೨೮. ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು ಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ: ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ.
೨೯. ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,”
೩೦. ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.
೩೧. ಅಲ್ಲಿ ನೆರೆದಿದ್ದ ಹಲವರಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. “ಲೋಕೋದ್ಧಾರಕ ಬಂದಾಗ ಈತನು ಮಾಡಿದ್ದಕ್ಕೂ ಮಿಗಿಲಾದ ಸೂಚಕಕಾರ್ಯಗಳನ್ನು ಮಾಡಿಯಾನೆ?” ಎಂದುಕೊಂಡರು.
೩೨. ಯೇಸು ಸ್ವಾಮಿಯನ್ನು ಕುರಿತು ಜನರು ಹೀಗೆ ಆಡುತ್ತಿದ್ದ ಗುಸುಗುಸು ಮಾತು ಫರಿಸಾಯರ ಕಿವಿಗೆ ಮುಟ್ಟಿತು. ಅವರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸಲು ಕಾಲಾಳುಗಳನ್ನು ಕಳುಹಿಸಿದರು.
೩೩. ಆಗ ಯೇಸು, “ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಅನಂತರ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟುಹೋಗುತ್ತೇನೆ.
೩೪. ಆಗ ನೀವು ನನ್ನನ್ನು ಹುಡುಕುವಿರಿ. ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನು ಇರುವಲ್ಲಿಗೆ ನೀವು ಬರುವಂತೆಯೂ ಇಲ್ಲ,” ಎಂದು ಹೇಳಿದರು.
೩೫. ಯೆಹೂದ್ಯ ಅಧಿಕಾರಿಗಳು, “ನಮಗೆ ಕಾಣಸಿಗದ ಹಾಗೆ ಇವನು ಎಲ್ಲಿ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿಹೋಗಿರುವ ಯೆಹೂದ್ಯರಲ್ಲಿಗೆ ಹೋಗಿ ಅವರಿಗೆ ಬೋಧಿಸುವನೋ?
೩೬. ‘ನನ್ನನ್ನು ಅರಸುವಿರಿ, ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನಿರುವಲ್ಲಿಗೆ ನೀವು ಬರುವಂತಿಲ್ಲ’ ಎಂದು ಇವನು ಹೇಳುವುದರ ಅರ್ಥ ಏನಿರಬಹುದು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
೩೭. ಹಬ್ಬದ ಕೊನೆಯ ದಿನ ಮಹಾದಿನ ಆಗಿತ್ತು. ಅಂದು ಯೇಸು ಸ್ವಾಮಿ ಅಲ್ಲಿ ನಿಂತುಕೊಂಡು, “ಬಾಯಾರಿದವನು ನನ್ನ ಬಳಿಗೆ ಬಂದು ಕುಡಿಯಲಿ.
೩೮. ಪವಿತ್ರಗ್ರಂಥದಲ್ಲಿ ಹೇಳಿರುವಂತೆ, ‘ನನ್ನಲ್ಲಿ ವಿಶ್ವಾಸವಿಡುವವನ ಹೃದಯದಿಂದ ಜೀವಜಲ ಹೊನಲುಹೊನಲಾಗಿ ಹರಿಯುವುದು,’ “ ಎಂದು ಕೂಗಿ ಹೇಳಿದರು.
೩೯. ತಮ್ಮಲ್ಲಿ ವಿಶ್ವಾಸವಿಡುವವರು ಪಡೆಯಲಿದ್ದ ಪವಿತ್ರಾತ್ಮರನ್ನು ಕುರಿತೇ ಯೇಸು ಹೀಗೆ ಹೇಳಿದ್ದು. ಪವಿತ್ರ ಆತ್ಮ ಇನ್ನೂ ಬಂದಿರಲಿಲ್ಲ. ಏಕೆಂದರೆ, ಯೇಸು ಇನ್ನೂ ಮೇಲೇರಿ ಮಹಿಮೆಯನ್ನು ಪಡೆದಿರಲಿಲ್ಲ.
೪೦. ಇದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು.
೪೧. ಇನ್ನೂ ಕೆಲವರು, “ಈತನೇ ಲೋಕೋದ್ಧಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ?
೪೨. ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು.
೪೩. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
೪೪. ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು, ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ.
೪೫. ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು.
೪೬. ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು.
೪೭. ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ?
೪೮. ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ?
೪೯. ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು.
೫೦. ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ.
೫೧. ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು.
೫೨. ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರಕೊಟ್ಟರು.
೫೩. ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.