A A A A A

ವಿಮೋಚನಾಕಾಂಡ ೫:೧-೨೩
೧. ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಬಂದರು. “ಇಸ್ರಯೇಲರ ದೇವರಾದ ಸರ್ವೇಶ್ವರನ ಮಾತುಗಳಿವು: ‘ನನ್ನ ಜನರು ಮರುಭೂಮಿಯಲ್ಲಿ ನನ್ನ ಗೌರವಾರ್ಥ ಒಂದು ಹಬ್ಬವನ್ನು ಆಚರಿಸಬೇಕಾಗಿದೆ. ಅದಕ್ಕೆ ಅವರಿಗೆ ಅಪ್ಪಣೆಕೊಡಬೇಕು’,\ ಎಂದರು.
೨. ಅದಕ್ಕೆ ಫರೋಹನು, “ 'ಸರ್ವೇಶ್ವರ' ಎಂಬುವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಯೇಲರನ್ನು ಹೋಗಬಿಡಬೇಕೊ? ಆ ಸರ್ವೇಶ್ವರನು ಯಾರೋ ನನಗೆ ಗೊತ್ತಿಲ್ಲ. ಇಸ್ರಯೇಲರನ್ನು ನಾನು ಹೋಗಬಿಡುವುದಿಲ್ಲ,” ಎಂದು ಬಿಟ್ಟನು.
೩. ಮೋಶೆ ಮತ್ತು ಆರೋನರು, “ಹಿಬ್ರಿಯರ ದೇವರು ನಮಗೆ ದರ್ಶನವಿತ್ತರು. ಅಪ್ಪಣೆ ಆದರೆ ನಾವು ಮರುಭೂಮಿಯಲ್ಲಿ ಮೂರು ದಿವಸದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸಿ ಬರುತ್ತೇವೆ. ಹಾಗೆ ಮಾಡದೆಹೋದರೆ ಅವರು ನಮ್ಮನ್ನು ವ್ಯಾಧಿಯಿಂದಲೋ ಕತ್ತಿಯಿಂದಲೋ ಸಂಹಾರ ಮಾಡುವರು,” ಎಂದರು.
೪. ಅವರಿಗೆ ಆ ಈಜಿಪ್ಟರ ಅರಸನು, “ಎಲೈ ಮೋಶೆ - ಆರೋನರೇ, ನೀವು ಮಾಡುತ್ತಾ ಇರುವುದೇನು? ಈ ಜನರು ತಮ್ಮ ಕೆಲಸವನ್ನು ಬಿಡುವಂತೆ ಮಾಡುತ್ತಿದ್ದೀರಿ. ನಡೆಯಿರಿ ಗುಲಾಮಗಿರಿಗೆ” ಎಂದುಬಿಟ್ಟನು.
೫. ಇದೂ ಅಲ್ಲದೆ ಆ ಫರೋಹನು, “ನೋಡಿ, ನಾಡಿನಲ್ಲಿ ಈ ಜನರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ! ಇವರು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇ ಕಾರಣ ಆಗುತ್ತಿದ್ದೀರಿ,” ಎಂದನು.
೬. ಅದೇ ದಿನ, ಕೆಲಸಮಾಡಿಸುವವರನ್ನೂ ಮೇಸ್ತ್ರಿಗಳನ್ನೂ ಕರೆಯಿಸಿ,
೭. \ಇನ್ನು ಮೇಲೆ ನೀವು ಈ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಕೂಡದು; ಅವರೇ ಹೋಗಿ ಹುಲ್ಲನ್ನು ಹುಡುಕಿಕೊಳ್ಳಲಿ.
೮. ಆದರೆ ಇಟ್ಟಿಗೆಗಳ ಲೆಕ್ಕವನ್ನು ಎಂದಿನಂತೆ ಒಪ್ಪಿಸಲಿ.ಅದನ್ನು ಕಡಿಮೆ ಮಾಡಕೂಡದು. ಇವರು ಮೈಗಳ್ಳರು. ಆದ್ದರಿಂದಲೇ, ‘ನಾವು ಹೋಗಿ ನಮ್ಮ ದೇವರಿಗೆ ಬಲಿಯರ್ಪಿಸಿ ಬರುವುದಕ್ಕೆ ಅಪ್ಪಣೆಯಾಗಬೇಕು,’ ಎಂದು ಬೊಬ್ಬೆಹಾಕುತ್ತಾ ಇದ್ದಾರೆ.
೯. ನೀವು ಅವರಿಂದ ಇನ್ನೂ ಕಷ್ಟಕರವಾದ ಕೆಲಸ ಮಾಡಿಸಬೇಕು. ಕೆಲಸ ಹೆಚ್ಚಾದರೆ ಸುಳ್ಳುಪೊಳ್ಳು ಮಾತುಗಳಿಗೆ ಕಿವಿಗೊಡಲು ಆಸ್ಪದಯಿರುವುದಿಲ್ಲ,” ಎಂದು ಆಜ್ಞಾಪಿಸಿದನು.
೧೦. ಆದುದರಿಂದ ಕೆಲಸದ ಮೇಲ್ವಿಚಾರಕರೂ ಮೇಸ್ತ್ರಿಗಳೂ ಆ ಜನರಿಗೆ, “ನಿಮಗೆ ಹುಲ್ಲು ಕೊಡಕೂಡದೆಂದು ಫರೋಹನ ಅಪ್ಪಣೆಯಾಗಿದೆ.
೧೧. ನೀವೇ ಹೋಗಿ ಎಲ್ಲಿಂದಾದರು ತಂದುಕೊಳ್ಳಿ. ಆದರೂ ನೀವು ಮಾಡಬೇಕಾದ ಕೆಲಸ ಮಾತ್ರ ಕಿಂಚಿತ್ತೂ ಕಡಿಮೆಯಾಗಕೂಡದು,” ಎಂದು ವಿಧಿಸಿದರು.
೧೨. ಆ ಜನರು ಈಜಿಪ್ಟ್ ದೇಶದಲ್ಲೆಲ್ಲಾ ಸುತ್ತಿ, ಹುಲ್ಲು ಸಿಕ್ಕದೆ ಕೂಳೆಕಿತ್ತು ಕೂಡಿಸಿದರು.
೧೩. ಮೇಲ್ವಿಚಾರಕರು, “ನಿಮಗೆ ಹುಲ್ಲಿದ್ದ ಕಾಲದಲ್ಲಿ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಆಯಾ ದಿನದಲ್ಲಿ ಮುಗಿಸಬೇಕು\ ಎಂದು ಹೇಳಿ ಅವಸರಪಡಿಸುತ್ತಿದ್ದರು.
೧೪. “ನೀವು ಇಟ್ಟಿಗೆಗಳ ಲೆಕ್ಕವನ್ನು ಹಿಂದೆ ಒಪ್ಪಿಸುತ್ತಿದ್ದಂತೆ ನಿನ್ನೆ ಮತ್ತು ಇಂದು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ್ದ ಇಸ್ರಯೇಲ್ ಮೇಸ್ತ್ರಿಗಳನ್ನು ಹೊಡೆಸುತ್ತಿದ್ದರು.
೧೫. ಈ ಇಸ್ರಯೇಲ್ ಮೇಸ್ತ್ರಿಗಳು ಫರೋಹನ ಬಳಿಗೆ ಬಂದು, “ಒಡೆಯಾ, ತಮ್ಮ ದಾಸರಾದ ನಮಗೆ ಹೀಗೆ ಮಾಡುವುದು ಸರಿಯೇ?
೧೬. ಅಧಿಕಾರಿಗಳು ಹುಲ್ಲು ಒದಗಿಸದೆ ಇಟ್ಟಿಗೆಗಳನ್ನು ಮಾಡಬೇಕೆನ್ನುತ್ತಾರೆ. ಇದರಿಂದ ದಾಸರಾದ ನಾವು ಏಟು ತಿನ್ನಬೇಕಾಯಿತು. ತಪ್ಪು ತಮ್ಮ ಜನರದೇ,” ಎಂದು ದೂರಿತ್ತರು.
೧೭. ಅದಕ್ಕೆ ಅವನು, “ನೀವು ಒಳ್ಳೆಯ ಮೈಗಳ್ಳರು! ನಾವು ಹೋಗಿ ಸರ್ವೇಶ್ವರನಿಗೆ ಬಲಿಯರ್ಪಿಸಿಬರಬೇಕು, ಎನ್ನುವುದಕ್ಕೆ ಇದೇ ಕಾರಣ.
೧೮. ನಡೆಯಿರಿ ಕೆಲಸಕ್ಕೆ; ನಿಮಗೆ ಹುಲ್ಲು ಕೊಡುವುದಿಲ್ಲ; ಆದರೂ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಲೇಬೇಕು,” ಎಂದನು.
೧೯. ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಕಟ್ಟಪ್ಪಣೆ ಆದುದರಿಂದ ಇಸ್ರಯೇಲ್ ಮೇಸ್ತ್ರಿಗಳು ತಾವು ಎಂಥ ಬಿಕ್ಕಟ್ಟಿಗೆ ಸಿಕ್ಕಿಕೊಂಡೆವೆಂದು ಗ್ರಹಿಸಿಕೊಂಡರು.
೨೦. ಫರೋಹನ ಬಳಿಯಿಂದ ಹಿಂದಿರುಗಿದಾಗ ಅವರನ್ನು ಎದುರುಗೊಳ್ಳಲು ಮೋಶೆ ಮತ್ತು ಆರೋನರು ಕಾದಿದ್ದರು.
೨೧. ಅವರಿಗೆ ಆ ಮೇಸ್ತ್ರಿಗಳು, “ನೀವು ಮಾಡಿದ ದುಷ್ಕೃತ್ಯವನ್ನು ವಿಚಾರಿಸಿ ಸರ್ವೇಶ್ವರ ನಿಮಗೆ ತಕ್ಕ ಶಿಕ್ಷೆಯನ್ನು ವಿಧಿಸಲಿ. ಏಕೆಂದರೆ ಫರೋಹನಿಗೂ ಅವನ ಸೇವಕರಿಗೂ ನಾವು ಅಸಹ್ಯರಾಗುವಂತೆ ಮಾಡಿಬಿಟ್ಟಿರಿ. ನಮ್ಮನ್ನು ಕೊಲ್ಲಲು ಅವರ ಕೈಗೆ ಕತ್ತಿಯನ್ನೇ ಕೊಟ್ಟಂತಾಗಿದೆ,” ಎಂದು ನಿಂದಿಸಿದರು.
೨೨. ಆಗ ಮೋಶೆ ಸರ್ವೇಶ್ವರನ ಸನ್ನಿಧಿಗೆ ಮತ್ತೆ ಬಂದು, “ಸ್ವಾಮೀ, ಈ ಜನರಿಗೆ ಹೀಗೇಕೆ ಮಾಡಿದಿರಿ? ನನ್ನನ್ನೇಕೆ ಇಲ್ಲಿಗೆ ಕಳಿಸಿದಿರಿ?
೨೩. ನಾನು ಫರೋಹನ ಬಳಿಗೆ ಹೋಗಿ ನಿಮ್ಮ ಹೆಸರಿನಲ್ಲಿ ಮಾತಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀವಾದರೋ ಅವರನ್ನು ಬಿಡುಗಡೆ ಮಾಡಲು ಏನನ್ನೂ ಮಾಡಿಲ್ಲ,” ಎಂದು ಮೊರೆಯಿಟ್ಟನು.

ವಿಮೋಚನಾಕಾಂಡ ೬:೧-೩೦
೧. ಅದಕ್ಕೆ ಸರ್ವೇಶ್ವರ ಸ್ವಾಮಿ ಮೋಶೆಗೆ, “ನಾನು ಫರೋಹನಿಗೆ ಮಾಡಲು ಹೋಗುವುದನ್ನು ನೀನು ಇಷ್ಟರಲ್ಲೇ ನೋಡುವೆ. ಅವನು ನನ್ನ ಭುಜಬಲವನ್ನು ಕಂಡು ಅವರನ್ನು ಹೋಗಲು ಬಿಡುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ನಾಡಿನಿಂದ ಹೊರಡಿಸುವನು,” ಎಂದರು.
೨. ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದರು:
೩. “ನಾನು ಸರ್ವೇಶ್ವರ, ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.
೪. ಅಲ್ಲದೆ ಅವರು ಪ್ರವಾಸಿಗಳಾಗಿ ತಂಗಿದ್ದ ಕಾನಾನ್ ನಾಡನ್ನು ಅವರಿಗೆ ಸ್ವಂತ ನಾಡಾಗಿ ಕೊಡುವೆನೆಂದು ದೃಢವಾಗ್ದಾನ ಮಾಡಿದವನು ನಾನೇ.
೫. ಈಜಿಪ್ಟಿನವರು ಗುಲಾಮರನ್ನಾಗಿಸಿಕೊಂಡಿರುವ ಇಸ್ರಯೇಲರ ಗೋಳು ನನಗೆ ಕೇಳಿಸಿದೆ. ನಾನು ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡಿದ್ದೇನೆ.
೬. ಆದುದರಿಂದ ನೀನು ಇಸ್ರಯೇಲರಿಗೆ ನನ್ನ ಪರವಾಗಿ ಹೀಗೆಂದು ಹೇಳು: ‘ನಾನೇ ಸರ್ವೇಶ್ವರ. ಈಜಿಪ್ಟಿನವರು ನಿಮ್ಮ ಮೇಲೆ ಹೊರಿಸಿರುವ ದುಡಿಮೆಯನ್ನು ನೀಗಿಸುವೆನು, ದಾಸತ್ವವನ್ನು ತೊಲಗಿಸುವೆನು. ಅವರಿಗೆ ಕಠಿಣಶಿಕ್ಷೆಗಳನ್ನು ವಿಧಿಸುವೆನು, ನಿಮ್ಮನ್ನು ಸಂರಕ್ಷಿಸುವೆನು.
೭. ನಾನು ನಿಮ್ಮನ್ನು ನನ್ನ ಪ್ರಜೆಯಾಗಿ ಮಾಡುವೆನು; ನಾನು ನಿಮ್ಮ ದೇವರಾಗಿರುವೆನು. ಈಜಿಪ್ಟಿನವರು ಹೊರಿಸುವ ದುಡಿಮೆಯನ್ನು ನಾನು ನಿಮ್ಮಿಂದ ಬಿಡಿಸಿದಾಗ ಸರ್ವೇಶ್ವರ ಎಂಬ ನಾನೇ ನಿಮ್ಮ ದೇವರೆಂದು ನಿಮಗೆ ತಿಳಿದುಬರುವುದು.
೮. ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣ ಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು.
೯. ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಆದರೂ ಅವನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಅವರ ಮನಸ್ಸು ಅಷ್ಟು ಕುಗ್ಗಿಹೋಗಿತ್ತು, ಅವರ ದಾಸತ್ವ ಅಷ್ಟು ಕ್ರೂರವಾಗಿತ್ತು.
೧೦. ಆಗ ಸರ್ವೇಶ್ವರ ಮೋಶೆಯ ಸಂಗಡ ಮಾತನಾಡಿ,
೧೧. “ನೀನು ಈಜಿಪ್ಟಿನವರ ಅರಸ ಫರೋಹನ ಬಳಿಗೆ ಹೋಗು. ಅವನಿಗೆ, ‘ಇಸ್ರಯೇಲರು ನಿನ್ನ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕು’ ಎಂದು ಹೇಳು,” ಎಂದರು.
೧೨. ಅದಕ್ಕೆ ಮೋಶೆ ಸರ್ವೇಶ್ವರನ ಸನ್ನಿಧಿಯಲ್ಲಿ, “ಆಲಿಸಬೇಕು, ಇಸ್ರಯೇಲರೇ ನನ್ನ ಮಾತನ್ನು ಕೇಳಲಿಲ್ಲ; ಇನ್ನು ಫರೋಹನು ಕಿವಿಗೊಟ್ಟಾನೆ? ನನಗಾದರೂ ಚುರುಕಾದ ನಾಲಿಗೆಯಿಲ್ಲ,” ಎಂದನು.
೧೩. ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಯೇಲರ ಬಳಿಗೂ ಅರಸ ಫರೋಹನ ಬಳಿಗೂ ಕಳಿಸಿದರು.
೧೪. ಅವರ ಗೋತ್ರಗಳ ಮೂಲಪುರುಷರು ಇವರು: ಇಸ್ರಯೇಲನ ಜ್ಯೇಷ್ಠ ಪುತ್ರನಾದ ರೂಬೇನನಿಗೆ ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ ಎಂಬವರು ಮಕ್ಕಳು. ಇವರೇ ರೂಬೇನನಿಂದ ಉಂಟಾದ ಗೋತ್ರಗಳಿಗೆ ಮೂಲ ಪುರುಷರು.
೧೫. ಸಿಮೆಯೋನನಿಗೆ ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಿಂದ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದ ಉಂಟಾದ ಗೋತ್ರಗಳಿಗೆ ಮೂಲಪುರುಷರು.
೧೬. ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು.
೧೭. ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ ಎಂಬವರು.
೧೮. ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. ಕೆಹಾತನು ನೂರ ಮೂವತ್ತ ಮೂರು ವರ್ಷ ಬದುಕಿದ್ದನು.
೧೯. ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ.
೨೦. ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದ್ದನು.
೨೧. ಇಚ್ಹಾರನ ಮಕ್ಕಳು - ಕೋರಹ, ನೆಫೆಗೆ ಮತ್ತು ಜಿಕ್ರೀ.
೨೨. ಉಜ್ಜೀಯೇಲನ ಮಕ್ಕಳು - ಮೀಷಾಯೇಲ್, ಎಲ್ಚಾಫಾನ್ ಸಿತ್ರೀ.
೨೩. ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆದ ಎಲೀಶೇಬಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರು ಹುಟ್ಟಿದರು.
೨೪. ಕೋರಹನ ಮಕ್ಕಳು - ಅಸ್ಸೀರ್, ಎಲ್ಕಾನಾ ಮತ್ತು ಅಬಿಯಾಸಾಫ್. ಇವರೇ ಕೋರಹೀಯರ ಗೋತ್ರಸ್ಥಾಪಕರು.
೨೫. ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಫಿನೇಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು.
೨೬. “ತಮ್ಮ ತಮ್ಮ ಗೋತ್ರದ ಪ್ರಕಾರ ಇಸ್ರಯೇಲ್ ಜನರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬರುವುದಕ್ಕೆ ಸರ್ವೇಶ್ವರನಿಂದ ಆಜ್ಞೆಹೊಂದಿದ ಆರೋನ್ ಮತ್ತು ಮೋಶೆ ಇವರೇ.
೨೭. ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಈಜಿಪ್ಟಿನ ಅರಸ ಫರೋಹನ ಸಂಗಡ ಮಾತಾಡಿದಂಥ ಮೋಶೆ ಮತ್ತು ಆರೋನರು ಇವರೇ.
೨೮. ಸರ್ವೇಶ್ವರ ಸ್ವಾಮಿ ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿ,
೨೯. “ನಾನು ಸರ್ವೇಶ್ವರ; ನಾನು ನಿನಗೆ ಹೇಳುವುದನ್ನೆಲ್ಲ ನೀನು ಈಜಿಪ್ಟಿನ ಅರಸ ಫರೋಹನ ಸನ್ನಿಧಿಯಲ್ಲಿ ಹೇಳಬೇಕು,” ಎಂದರು.
೩೦. ಅದಕ್ಕೆ ಮೋಶೆ, “ಸ್ವಾಮೀ, ನಾನು ಮಾತಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.

ಕೀರ್ತನೆಗಳು ೧೬:೭-೧೧
೭. ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
೮. ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II
೯. ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II
೧೦. ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II
೧೧. ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II

ಜ್ಞಾನೋಕ್ತಿಗಳು ೫:೭-೧೪
೭. ಇಂತಿರಲು ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಬಿಟ್ಟು ಅಗಲದಿರು.
೮. ಅವಳಿಂದ ದೂರವಿರಲಿ ನಿನ್ನ ಮಾರ್ಗ, ಸುಳಿಯದಿರು ಅವಳ ಮನೆಬಾಗಿಲ ಹತ್ತಿರ.
೯. ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳ ವಶವಾದೀತು, ಜೋಕೆ!
೧೦. ನಿನ್ನ ಸಿರಿಸಂಪತ್ತು ಪರರ ಮನೆ ತುಂಬೀತು, ನಿನ್ನ ದುಡಿಮೆಯ ಫಲ ಅನ್ಯನ ಮನೆ ಸೇರೀತು!
೧೧. ಕಟ್ಟಕಡೆಗೆ ನಿನ್ನ ದೇಹವೆಲ್ಲ ಕರಗಿಹೋದೀತು; ಅಂಗಲಾಚಿ ನೀ ಕೊರಗಬೇಕಾದೀತು ಇಂತೆಂದು:
೧೨. “ಅಕಟಕಟಾ ಶಿಸ್ತನ್ನೇ ನಾನು ದ್ವೇಷಿಸಿದೆನಲ್ಲಾ! ನನಗೆ ಕೊಡಲಾದ ತಿದ್ದುಪಾಟನ್ನು ತಾತ್ಸಾರಮಾಡಿದೆನಲ್ಲಾ!
೧೩. ಗುರುಗಳ ಮಾತನ್ನು ಗಮನಿಸದೆ ಹೋದೆನಲ್ಲಾ! ಬೋಧಕರಿಗೆ ಕಿವಿಗೊಡದೆ ಹೋದೆನಲ್ಲಾ!
೧೪. ದೇವಜನರ ಸಭೆಕೂಟಗಳಲ್ಲಿ ಎಲ್ಲಾ ತರದ ನಿಂದೆ ಆಪಾದನೆಗಳಿಗೆ ಗುರಿಯಾದೆನಲ್ಲಾ!”

ಮತ್ತಾಯನು ೧೮:೨೧-೩೫
೨೧. ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾಮೀ, ನನಗೆ ವಿರುದ್ಧ ದ್ರೋಹಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು.
೨೨. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,” ಎಂದು ಯೇಸು ಉತ್ತರವಿತ್ತರು.
೨೩. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ.
೨೪. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು.
೨೫. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ.
೨೬. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ.
೨೭. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ.
೨೮. “ಆದರೆ ಅದೇ ಸೇವಕ ಹೊರಗೆಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ.
೨೯. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ.
೩೦. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ.
೩೧. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು.
೩೨. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ.
೩೩. ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ.
೩೪. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.
೩೫. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.