ಸಂಖ್ಯಾಕಾಂಡ ೧:೧-೫೪ |
೧. ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟು ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳ ಮೊದಲನೆಯ ದಿನ ಸರ್ವೇಶ್ವರ ಸ್ವಾಮಿ ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದಿಂದ ಮೋಶೆಗೆ ಹೀಗೆಂದು ಆಜ್ಞಾಪಿಸಿದರು: |
೨. “ನೀನು ಮತ್ತು ಆರೋನ ಇಸ್ರಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು. |
೩. ಇಸ್ರಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು, ಅಂದರೆ ಇಪ್ಪತ್ತು ವರ್ಷ ಮೇಲ್ಪಟ್ಟ ವಯಸ್ಸುಳ್ಳ ಎಲ್ಲರನ್ನು ಸೈನ್ಯ ಸೈನ್ಯವಾಗಿ ಪಟ್ಟಿಮಾಡಬೇಕು. |
೪. ಈ ಕೆಲಸಕ್ಕಾಗಿ ಒಂದೊಂದು ಕುಲದಿಂದ ಆಯಾ ಕುಲದ ಮುಖ್ಯಸ್ಥನನ್ನು ಸಹಾಯಕನನ್ನಾಗಿ ತೆಗೆದುಕೊಳ್ಳಿ; |
೫. ನಿಮಗೆ ಸಹಾಯಕರಾಗಿರಬೇಕಾದವರ ಹೆಸರುಗಳು ಇವು: ರೂಬೇನ್ ಕುಲದಿಂದ ಶೆದೇಯೂರನ ಮಗ ಎಲೀಚೂರ್. |
೬. ಸಿಮೆಯೋನ್ ಕುಲದಿಂದ ಚೂರಿಷದ್ದೈಯನ ಮಗ ಶೆಲುಮೀಯೇಲ್ |
೭. ಯೆಹೂದ ಕುಲದಿಂದ ಅಮ್ಮೀನಾದಾಬನ ಮಗ ನಹಶೋನ್ |
೮. ಇಸ್ಸಾಕಾರ್ ಕುಲದಿಂದ ಚೂವಾರನ ಮಗ ನೆತನೇಲ್ |
೯. ಜೆಬುಲೊನ್ ಕುಲದಿಂದ ಹೇಲೋನನ ಮಗ ಎಲೀಯಾಬ್ |
೧೦. ಜೀಸೆಫನ ವಂಶದವರಲ್ಲಿ - ಎಫ್ರಾಯಿಮ್ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮಾ ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್ |
೧೧. ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗ ಅಬೀದಾನ್ |
೧೨. ದಾನ್ ಕುಲದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್ |
೧೩. ಆಶೇರ್ ಕುಲದಿಂದ ಒಕ್ರಾನನ ಮಗ ಪಗೀಯೇಲ್ |
೧೪. ಗಾದ್ ಕುಲದಿಂದ ರೆಗೂವೇಲನ ಮಗ ಎಲ್ಯಾಸಾಫ್ |
೧೫. ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ. |
೧೬. ಇವರು ಸಮಾಜದಲ್ಲಿ ಹೆಸರು ಪಡೆದವರು. ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನ ಪುರುಷರು, ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳು. |
೧೭. ಹೀಗೆ ಹೆಸರಿನಿಂದ ಸೂಚಿತರಾದ ವ್ಯಕ್ತಿಗಳನ್ನು ಮೋಶೆ ಮತ್ತು ಆರೋನರು ಕರೆದರು. |
೧೮. ಎರಡನೆಯ ತಿಂಗಳಿನ ಮೊದಲನೆ ದಿನ ಜನಸಮೂಹವನ್ನು ಕೂಡಿಸಿದರು. ಇಪ್ಪತ್ತು ವರ್ಷ ಮೇಲ್ಪಟ್ಟ ವಯಸ್ಸಿನವರೆಲ್ಲರೂ ಒಬ್ಬೊಬ್ಬರಾಗಿ ಗೋತ್ರ, ಕುಟುಂಬಗಳ ಪ್ರಕಾರ ತಮ್ಮ ತಮ್ಮ ವಂಶಾವಳಿಯನ್ನು ತಿಳಿಸಿ ಹೆಸರುಗಳನ್ನು ನೊಂದಾಯಿಸಿಕೊಂಡರು. |
೧೯. ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು. |
೨೦. ಇಸ್ರಯೇಲನ ಚೊಚ್ಚಲ ಮಗ ರೂಬೇನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೪೬,೫೦೦: |
೨೧. *** |
೨೨. ಸಿಮೆಯೋನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೫೯,೩೦೦: |
೨೩. *** |
೨೪. ಗಾದ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೪೫,೬೫೦: |
೨೫. *** |
೨೬. ಯೆಹೂದ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೭೪,೬೦೦: |
೨೭. *** |
೨೮. ಇಸ್ಸಾಕಾರ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೫೪,೪೦೦: |
೨೯. *** |
೩೦. ಜೆಬುಲೂನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೫೭,೪೦೦: |
೩೧. *** |
೩೨. ಜೋಸೆಫನಿಂದ ಹುಟ್ಟಿದವರೊಳಗೆ: ಎಫ್ರಾಯೀಮ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೪೦,೫೦೦: |
೩೩. *** |
೩೪. ಮನಸ್ಸೆ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೩೨,೨೦೦: |
೩೫. *** |
೩೬. ಬೆನ್ಯಾಮೀನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೩೫,೪೦೦: |
೩೭. *** |
೩೮. ದಾನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೬೨,೭೦೦: |
೩೯. *** |
೪೦. ಆಶೇರ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೪೧,೫೦೦: |
೪೧. *** |
೪೨. ನಫ್ತಾಲಿ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ ೫೩,೪೦೦: |
೪೩. *** |
೪೪. ಮೋಶೆ, ಆರೋನ್ ಮತ್ತು ಕುಲಪ್ರತಿನಿಧಿಗಳಾದ ಆ ಹನ್ನೆರಡು ಪ್ರಧಾನರು ಎಣಿಸಿದ ಇಸ್ರಯೇಲರ ಸಂಖ್ಯೆ ಇಷ್ಟು. |
೪೫. ಹೀಗೆ ಇಸ್ರಯೇಲರಲ್ಲಿ ಎಣಿಕೆಯಾದ, ಅಂದರೆ ೩೦ ವರ್ಷ ಮೇಲ್ಪಟ್ಟ ವಯಸ್ಸಿನವರಾಗಿದ್ದು ಸೈನಿಕ ಸೇವೆ ಕೈಗೊಳ್ಳಲು ಶಕ್ತರಾಗಿದ್ದವರ ಒಟ್ಟು ಸಂಖ್ಯೆ ೬,೦೩,೫೫೦: |
೪೬. *** |
೪೭. ಆದರೆ ಲೇವಿಕುಲದ ಕುಟುಂಬಗಳು ಮೇಲ್ಕಂಡ ಲೆಕ್ಕದಲ್ಲಿ ಸೇರಿರಲಿಲ್ಲ. |
೪೮. ಏಕೆಂದರೆ ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದ್ದರು: |
೪೯. “ನೀನು ಇಸ್ರಯೇಲರನ್ನು ಎಣಿಸುವಾಗ ಲೇವಿಯನ್ನು ಎಣಿಸಬಾರದು. |
೫೦. ಆಜ್ಞಾಶಾಸನಗಳಿರುವ ಗುಡಾರವನ್ನು ಹಾಗು ಅವರ ಸಾಮಾನು ಸರಂಜಾಮುಗಳನ್ನು ನೋಡಿಕೊಳ್ಳುವುದಕ್ಕೆ ಅವರನ್ನು ನೇಮಿಸಬೇಕು. ಅವರು ಆ ಗುಡಾರವನ್ನು ಅದರ ಉಪಕರಣಗಳನ್ನು ಹೊರುವವರಾಗಿರಬೇಕು. ಅದರ ಸೇವೆ ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. |
೫೧. ಹೊರಡುವಾಗ ಆ ಗುಡಾರವನ್ನು ಲೇವಿಯರೇ ಬಿಚ್ಚಬೇಕು; ಇಳಿದುಕೊಳ್ಳುವಾಗ ಲೇವಿಯರೇ ಅದನ್ನು ಹಾಕಬೇಕು. ಇತರರು ಹತ್ತಿರಕ್ಕೆ ಬಂದರೆ ಅವರಿಗೆ ಮರಣಶಿಕ್ಷೆಯಾಗಬೇಕು. |
೫೨. ಇಸ್ರಯೇಲರೆಲ್ಲರ ಆಯಾ ಸೇನೆಗಳು ತಮ್ಮ ಡೇರೆಗಳನ್ನು ತಮ್ಮ ತಮ್ಮ ದಂಡಿನ ಧ್ವಜದ ಹತ್ತಿರ ಹಾಕಿಕೊಳ್ಳಬೇಕು. |
೫೩. ಲೇವಿಯರು ಮಾತ್ರ ತಮ್ಮ ಡೇರೆಗಳನ್ನು ದೇವದರ್ಶನದ ಗುಡಾರದ ಸುತ್ತಲೂ ಹಾಕಿಕೊಳ್ಳಬೇಕು. ಹೀಗೆ ಮಾಡಿದರೆ ನನ್ನ ಕೋಪ ಇಸ್ರಯೇಲರ ಮೇಲೆ ಎರಗಲು ಆಸ್ಪದವಿರದು. ಲೇವಿಯರು ದೇವದರ್ಶನದ ಗುಡಾರವನ್ನು ಕಾಯುವವರಾಗಿರಬೇಕು.” |
೫೪. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ನಡೆದುಕೊಂಡರು. |
ಸಂಖ್ಯಾಕಾಂಡ ೨:೧-೩೪ |
೧. ಸರ್ವೇಶ್ವರ ಸ್ವಾಮಿ ಮೋಶೆ - ಆರೋನರಿಗೆ ಕೊಟ್ಟ ಆಜ್ಞೆ ಇದು: |
೨. ಇಸ್ರಯೇಲರೆಲ್ಲರೂ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನೂ ತನ್ನ ತನ್ನ ಗೋತ್ರ ಧ್ವಜದ ಹತ್ತಿರ ತನ್ನ ತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು. |
೩. “ಸೂರ್ಯೋದಯವಾಗುವ ದಿಕ್ಕಿನಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಅಮ್ಮಿನಾದಾಬನ ಮಗ ನಹಶೋನ. |
೪. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೭೪,೬೦೦: |
೫. ಅವರ ಸಮೀಪದಲ್ಲೇ ಇಸ್ಸಾಕಾರ್ ಕುಲದವರೂ ಜೆಬುಲೂನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಚೂವಾರನ ಮಗ ನೆತನೇಲ್; |
೬. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೫೪,೪೦೦: |
೭. ಜೆಬುಲೂನ್ಯರಿಗೆ ನಾಯಕ ಹೇಲೋನನ ಮಗ ಎಲೀಯಾಬ್, |
೮. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೫೭,೪೦೦: |
೯. ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - ೧,೮೬,೪೦೦: ಇವರು ಮುಂಭಾಗದಲ್ಲಿ ಹೊರಡಬೇಕು. |
೧೦. “ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಈ ರೂಬೇನ್ ಕುಲದವರಿಗೆ ನಾಯಕ ಶೆದೇಯೂರನ ಮಗ ಎಲೀಚೂರ; |
೧೧. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೪೬,೫೦೦: |
೧೨. ಅವರ ಸಮೀಪದಲ್ಲೇ ಸಿಮೆಯೋನ್ ಕುಲದವರೂ ಗಾದ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಸಿಮೆಯೋನ್ ಕುಲದವರಿಗೆ ನಾಯಕ ಚೂರೀಷದ್ದೈಯನ ಮಗ ಶೆಲೂಮೀಯೇಲ; |
೧೩. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೫೯,೩೦೦: |
೧೪. ಗಾದ್ ಕುಲದವರಿಗೆ ನಾಯಕ ರೆಗೂವೇಲನ ಮಗ ಎಲ್ಯಾಸಾಫ; |
೧೫. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೪೫,೬೫೦: |
೧೬. ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ್ದವರೆಲ್ಲರ ಸಂಖ್ಯೆ - ೧,೫೧,೪೫೦: ಇವರು ಎರಡನೆಯ ದಂಡಾಗಿ ಹೊರಡಬೇಕು. |
೧೭. “ಅನಂತರ ಸೈನ್ಯಗಳ ನಟ್ಟನಡುವೆ ದೇವದರ್ಶನದ ಗುಡಾರ ಮತ್ತು ಲೇವಿಯರ ಪಾಳೆಯದವರು ಹೊರಡಬೇಕು. ಅವರು ಹೇಗೆ ಇಳಿದುಕೊಂಡಿದ್ದರೋ ಹಾಗೆಯೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು. |
೧೮. ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಹೂದನ ಮಗ ಎಲೀಷಾಮಾ; |
೧೯. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೪೦,೫೦೦: |
೨೦. ಅವರ ಸಮೀಪದಲ್ಲೇ ಮನಸ್ಸೆ ಕುಲದವರು ಬೆನ್ಯಾಮೀನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಮನಸ್ಸೆ ಕುಲದವರಿಗೆ ನಾಯಕ ಪೆದಾಚೂರನ ಮಗ ಗಮ್ಲೀಯೆಲ್; |
೨೧. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -೩೨,೨೦೦: |
೨೨. ಬೆನ್ಯಾಮೀನ್ ಕುಲದವರಿಗೆ ನಾಯಕ ಗಿದ್ಯೋನಿಯ ಮಗ ಅಬೀದಾನ್. |
೨೩. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -೩೫,೪೦೦: |
೨೪. ಹೀಗೆ ಎಫ್ರಾಯೀಮರ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - ೧,೦೮,೧೦೦: ಇವರು ಮೂರನೆಯ ದಂಡಾಗಿ ಹೊರಡಬೇಕು. |
೨೫. ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಷದ್ದೈಯನ ಮಗ ಅಹೀಗೆಜೆರ್; |
೨೬. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೬೨,೭೦೦: |
೨೭. ಅವರ ಸಮೀಪದಲ್ಲೇ ಆಶೇರ್ ಕುಲದವರು ಮತ್ತು ನಫ್ತಾಲಿ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆಶೇರ್ ಕುಲದವರಿಗೆ ನಾಯಕ ಒಕ್ರಾನನ ಮಗ ಪಗೀಯೇಲ್; |
೨೮. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೪೧,೫೦೦: |
೨೯. ನಫ್ತಾಲಿ ಕುಲದವರಿಗೆ ನಾಯಕ ಏನಾನನ ಮಗ ಅಹೀರ; |
೩೦. ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - ೫೩,೪೦೦: |
೩೧. ಹೀಗೆ ದಾನ್ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - ೧,೫೭,೬೦೦: ಇವರು ಕಡೆಯ ದಂಡಾಗಿ ಹೊರಡಬೇಕು. |
೩೨. ಇವರೇ ಇಸ್ರಯೇಲರಲ್ಲಿ ಗೋತ್ರಗೋತ್ರಗಳ ಪ್ರಕಾರ ಎಣಿಕೆಯಾದವರು. ಆ ದಂಡುಗಳಲ್ಲಿ ಸೈನಿಕರಾಗಿ ಎಣಿಕೆಯಾದ ಸೈನಿಕರ ಸಂಖ್ಯೆ - ೬,೦೩,೫೦೦: |
೩೩. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇತರ ಇಸ್ರಯೇಲರ ಸಂಗಡ ಎಣಿಕೆಯಾಗಲಿಲ್ಲ. |
೩೪. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಹಾಗೆಯೆ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಅಂತೆಯೇ ಗೋತ್ರ ಕುಟುಂಬಗಳ ಪ್ರಕಾರ ಹೊರಡುತ್ತಿದ್ದರು. |
ಕೀರ್ತನೆಗಳು ೨೯:೭-೧೧ |
೭. ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II |
೮. *** |
೯. ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು I ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II |
೧೦. ಜಲಪ್ರಳಯದೊಳು ಪ್ರಭು ಆಸೀನನಾಗಿಹನು I ಯುಗಯುಗಾಂತರಕು ಅರಸನಾಗಿ ಆಳುವನು II |
೧೧. ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು I ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು II |
ಜ್ಞಾನೋಕ್ತಿಗಳು ೧೦:೨೬-೨೯ |
೨೬. ಹಲ್ಲಿಗೆ ಹುಳಿ ಹೇಗೋ, ಕಣ್ಣಿಗೆ ಹೊಗೆ ಹೇಗೋ; ಯಜಮಾನನಿಗೆ ಮೈಗಳ್ಳನು ಹಾಗೆ. |
೨೭. ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ಬಾಳುವರು ದೀರ್ಘಕಾಲ; ದುರುಳ ಜನರ ಜೀವಮಾನವೋ ಅಲ್ಪಕಾಲ. |
೨೮. ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ. |
೨೯. ಸನ್ಮಾರ್ಗಿಗೆ ಸರ್ವೇಶ್ವರನೆ ಆಶ್ರಯ; ಕೆಡುಕನಿಗೆ ಆತನೆ ಪ್ರಳಯ. |
ಮಾರ್ಕನು ೭:೧೪-೩೭ |
೧೪. ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, |
೧೫. “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. |
೧೬. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು. |
೧೭. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. |
೧೮. ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? |
೧೯. ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.) |
೨೦. ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. |
೨೧. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, |
೨೨. ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ. |
೨೩. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು. |
೨೪. ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ. |
೨೫. ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು |
೨೬. ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು. |
೨೭. ಆದರೆ ಯೇಸು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. |
೨೮. ಅದಕ್ಕೆ ಆಕೆ, “ಅದು ನಿಜ ಸ್ವಾಮೀ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು. |
೨೯. ಆಕೆಯ ಮಾತುಗಳನ್ನು ಕೇಳಿ ಯೇಸು, “ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟು ತೊಲಗಿದೆ,” ಎಂದರು. |
೩೦. ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟುಹೋಗಿತ್ತು. |
೩೧. ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು. |
೩೨. ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. |
೩೩. ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. |
೩೪. ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು. |
೩೫. ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು. |
೩೬. ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರಮಾಡಿದರು. |
೩೭. ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು. |