A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೨೩

ನ್ಯಾಯಸ್ಥಾಪಕರು ೧೧:೧-೪೦
೧. ಗಿಲ್ಯಾದ್ಯನಾದ ಯೆಪ್ತಾಹನು ಒಬ್ಬ ಮಹಾಪರಾಕ್ರಮಿ. ಈತ ಗಿಲ್ಯಾದನಿಗೆ ಒಬ್ಬ ಉಪಪತ್ನಿಯಲ್ಲಿ ಹುಟ್ಟಿದವನು.
೨. ಗಿಲ್ಯಾದನಿಗೆ ಹೆಂಡತಿಯಲ್ಲೂ ಮಕ್ಕಳು ಹುಟ್ಟಿದರು. ಇವರು ದೊಡ್ಡವರಾದ ಮೇಲೆ ಯೆಪ್ತಾಹನಿಗೆ, “ನೀನು ಪರಸ್ತ್ರೀಯಿಂದ ಹುಟ್ಟಿದವನು; ಆದುದರಿಂದ ನಿನಗೆ ನಮ್ಮ ತಂದೆಯ ಮನೆಯಲ್ಲಿ ಬಾಧ್ಯತೆ ಸಿಕ್ಕಲಾರದು,” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
೩. ಅವನು ತನ್ನ ಸಹೋದರನನ್ನು ಬಿಟ್ಟು ಟೋಬ್ ದೇಶಕ್ಕೆ ಹೋದನು. ಅಲ್ಲಿನ ಪುಂಡಪೋಕರಿಗಳು ಕೂಡಿ ಅವನನ್ನು ಹಿಂಬಾಲಿಸಿದರು.
೪. ಇಸ್ರಯೇಲರಿಗೆ ವಿರೋಧವಾಗಿ ಬಂದ ಅಮ್ಮೋನಿಯರು ಸ್ವಲ್ಪ ದಿನಗಳಾದ ಮೇಲೆ ಯುದ್ಧವನ್ನು ಪ್ರಾರಂಭಿಸಿದರು.
೫. ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರುವುದಕ್ಕಾಗಿ ಅಲ್ಲಿಗೆ ಹೋದರು.
೬. ಅವನಿಗೆ, “ನಾವು ಅಮ್ಮೋನಿಯರೊಡನೆ ಯುದ್ಧಮಾಡುವ ಹಾಗೆ ನೀನು ಬಂದು ನಮ್ಮ ನಾಯಕನಾಗು,” ಎಂದು ಬೇಡಿಕೊಂಡರು.
೭. ಅವನು ಅವರಿಗೆ, “ನನ್ನನ್ನು ಹಗೆಮಾಡಿ ನನ್ನ ತಂದೆಯ ಮನೆಯಿಂದ ಅಟ್ಟಿಬಿಟ್ಟವರು ನೀವೇ ಅಲ್ಲವೇ? ನಿಮಗೆ ಕಷ್ಟಬಂದಾಗ ನನ್ನ ಬಳಿಗೆ ಏಕೆ ಬಂದಿರಿ?” ಎಂದನು.
೮. ಅವರು, “ಆದುದರಿಂದಲೇ ಈಗ ಪುನಃ ನಿನ್ನ ಬಳಿಗೆ ಬಂದಿದ್ದೇವೆ; ನಮ್ಮ ಸಂಗಡ ಬಂದು ಅಮ್ಮೋನಿಯರೊಡನೆ ಯುದ್ಧಮಾಡುವಿಯಾದರೆ ಗಿಲ್ಯಾದಿನವರಿಗೆಲ್ಲಾ ನೀನೆ ಶಿರಸ್ಸಾಗಿರುವೆ,” ಎಂದು ಹೇಳಿದರು.
೯. ಆಗ ಯೆಪ್ತಾಹನು ಅವರಿಗೆ, “ನೀವು ನನ್ನನ್ನು ಅಮ್ಮೋನಿಯರೊಡನೆ ಯುದ್ಧಮಾಡುವುದಕ್ಕಾಗಿ ಕರೆದುಕೊಂಡು ಹೋಗುವುದಾದರೆ ಸರ್ವೇಶ್ವರ ಅವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟರೆ ನಿಜವಾಗಿ ನೀವು ನನ್ನನ್ನು ಅಧಿಪತಿಯನ್ನಾಗಿ ಮಾಡುವಿರೋ?” ಎಂದು ಕೇಳಿದನು.
೧೦. ಅವರು ಅವನಿಗೆ, “ಹಾಗೆಯೇ ಮಾಡುತ್ತೇವೆ; ಉಭಯತ್ರರ ಮಾತುಗಳಿಗೆ ಸರ್ವೇಶ್ವರನೇ ಸಾಕ್ಷಿ,” ಎಂದು ಉತ್ತರಕೊಟ್ಟರು.
೧೧. ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಯೆಪ್ತಾಹನು ತನ್ನ ವಿಷಯಗಳನ್ನೆಲ್ಲಾ ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಅರಿಕೆ ಮಾಡಿದನು.
೧೨. ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧ ಮಾಡುವುದಕ್ಕೇನು ಕಾರಣ?” ಎಂದು ಕೇಳಿದನು.
೧೩. ಆ ಅರಸನು ದೂತರಿಗೆ, “ಇಸ್ರಯೇಲರು ಈಜಿಪ್ಟಿನಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್, ಜೋರ್ಡನ್ ನದಿಗಳವರೆಗೂ ಇದ್ದು ನನ್ನ ದೇಶವನ್ನು ಕಸಿದುಕೊಂಡರಲ್ಲವೆ? ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು,” ಎಂದು ಹೇಳಿ ಕಳುಹಿಸಿದನು.
೧೪. ಯೆಪ್ತಾಹನು ಇನ್ನೊಂದು ಸಾರಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ಅವನಿಗೆ,
೧೫. “ಯೆಪ್ತಾಹನಾದ ನನ್ನ ಮಾತನ್ನು ಕೇಳು; ಇಸ್ರಯೇಲರು ಮೋವಾಬ್ಯರ ಮತ್ತು ಅಮ್ಮೋನಿಯರ ದೇಶವನ್ನು ತೆಗೆದುಕೊಳ್ಳಲೇ ಇಲ್ಲ.
೧೬. ಅವರು ಈಜಿಪ್ಟರ ನಾಡನ್ನು ಬಿಟ್ಟ ನಂತರ ಮರುಭೂಮಿಯಲ್ಲಿ ಸಂಚರಿಸಿ ಕೆಂಪುಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು.
೧೭. ಅವರು ಅಲ್ಲಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, ‘ನಿನ್ನ ದೇಶವನ್ನು ದಾಟಿ ಹೋಗುವುದಕ್ಕೆ ಅಪ್ಪಣೆಯಾಗಬೇಕು,’ ಎಂದು ಬೇಡಿಕೊಳ್ಳಲು ಅವನು ಒಪ್ಪಿಕೊಳ್ಳಲಿಲ್ಲ. ತರುವಾಯ ಮೋವಾಬ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಲು ಅವನು ಒಪ್ಪಿಕೊಳ್ಳಲಿಲ್ಲ; ಆದುದರಿಂದ ಅವರು ಕಾದೇಶಿನಲ್ಲಿಯೇ ನಿಂತರು.
೧೮. ಅನಂತರ ಅವರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು ಅದರ ಮೇರೆಯಾಗಿರುವ ಅರ್ನೋನ್ ನದಿಯ ಆಚೆಯಲ್ಲಿ ಇಳಿದುಕೊಂಡರು; ಮೋವಾಬ್ಯರ ಮೇರೆಯೊಳಗೆ ಕಾಲು ಇಡಲಿಲ್ಲ.
೧೯. ಬಳಿಕ ಹೆಷ್ಬೋನನ್ನು ರಾಜಧಾನಿ ಮಾಡಿಕೊಂಡಿದ್ದ ಅಮೋರಿಯರ ಅರಸನಾದ ಸೀಹೋನನ ಬಳಿಗೆ ಅವರು ದೂತರನ್ನು ಕಳುಹಿಸಿ, “ನಿನ್ನ ದೇಶವನ್ನು ದಾಟಿ ನಮ್ಮ ಸ್ಥಳಕ್ಕೆ ಹೋಗುವುದಕ್ಕೆ ಅಪ್ಪಣೆಕೊಡು,” ಎಂದು ಅವನನ್ನು ಬೇಡಿಕೊಂಡರು.
೨೦. ಆದರೆ ಸೀಹೋನನು ಅವರನ್ನು ನಂಬದೆ ತನ್ನ ಸೀಮೆಯನ್ನು ದಾಟಿಹೋಗುವುದಕ್ಕೆ ಅಪ್ಪಣೆಕೊಡದೆ ತನ್ನ ಜನರನ್ನು ಕೂಡಿಸಿಕೊಂಡು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು.
೨೧. ಇಸ್ರಯೇಲರ ದೇವರಾದ ಸರ್ವೇಶ್ವರ ಸೀಹೋನನನ್ನೂ ಅವನ ಜನರೆಲ್ಲರನ್ನೂ ಇಸ್ರಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು.
೨೨. ಹೀಗೆ ಇಸ್ರಯೇಲರು ಅರ್ನೋನಿನಿಂದ ಯಬ್ಬೋಕಿನವರೆಗೂ ಇದ್ದ ಅಮೋರಿಯರ ಪ್ರಾಂತ್ಯವನ್ನೆಲ್ಲಾ ವಶಮಾಡಿಕೊಂಡರು.
೨೩. “ಇಸ್ರಯೇಲರ ದೇವರಾದ ಸರ್ವೇಶ್ವರ ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಯೇಲರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವುದು ಹೇಗೆ?
೨೪. ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವತಂತ್ರಿಸಿಕೊಳ್ಳುವುದಿಲ್ಲವೇ? ಹಾಗೆಯೇ ನಮ್ಮ ದೇವರಾದ ಸರ್ವೇಶ್ವರ ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವತಂತ್ರಿಸಿಕೊಳ್ಳುವುದು ನ್ಯಾಯವಾಗಿದೆ.
೨೫. ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೇ? ಅವನು ಇಸ್ರಯೇಲರೊಡನೆ ಎಂದಾದರೂ ವಿವಾದಮಾಡಿದನೇ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೇ?
೨೬. ಇಸ್ರಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲೂ ಅವುಗಳ ಗ್ರಾಮಗಳಲ್ಲೂ ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲೂ ವಾಸಿಸುತ್ತಿದ್ದಾರಲ್ಲವೆ? ಇಷ್ಟು ದಿವಸಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ?
೨೭. ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯಮಾಡಿದ ಹಾಗಾಯಿತು. ನ್ಯಾಯಸ್ಥಾಪಕರಾದ ಸರ್ವೇಶ್ವರಸ್ವಾಮಿಯೇ ಈ ಹೊತ್ತು ಇಸ್ರಯೇಲರಿಗೂ ಅಮ್ಮೋನಿಯರಿಗೂ ಮಧ್ಯೆ ನ್ಯಾಯ ತೀರಿಸಲಿ,” ಎಂದು ಹೇಳಿಸಿದನು.
೨೮. ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.
೨೯. ಆಗ ಸರ್ವೇಶ್ವರನ ಆತ್ಮ ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ನಾಡು, ಇವುಗಳಲ್ಲಿ ಸಂಚರಿಸಿ ಮತ್ತೆ ಗಿಲ್ಯಾದಿನ ಮಿಚ್ಫೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು.
೩೦. ಇದಲ್ಲದೆ ಅವನು ಸರ್ವೇಶ್ವರಸ್ವಾಮಿಗೆ, “ತಾವು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ
೩೧. ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ಮೀಸಲು ಎಂದೂ ಅದನ್ನು ತಮಗೆ ದಹನಬಲಿದಾನ ಮಾಡುವೆನು” ಎಂದೂ ಹರಕೆಮಾಡಿದನು.
೩೨. ಯೆಪ್ತಾಹನು ನದಿಯನ್ನು ದಾಟಿ ಅಮ್ಮೋನಿಯರಿಗೆ ವಿರುದ್ಧ ಯುದ್ಧಕ್ಕೆ ಹೋಗಲು ಅವರನ್ನು ಸರ್ವೇಶ್ವರ ಅವನ ಕೈಗೆ ಒಪ್ಪಿಸಿದರು.
೩೩. ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಅಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿದನು. ಹೀಗೆ ದೊಡ್ಡ ಜಯವಾಗಿ, ಅಮ್ಮೋನಿಯರು ಇಸ್ರಯೇಲರಿಗೆ ಶರಣಾದರು.
೩೪. ಯೆಪ್ತಾಹನು ಮಿಚ್ಫೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿ ಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆ ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡುಹೆಣ್ಣು ಮಕ್ಕಳೇ ಇರಲಿಲ್ಲ.
೩೫. ಆಕೆಯನ್ನು ಕಾಣುತ್ತಲೆ ಅವನು ದುಃಖತಾಳಲು ಆಗದೆ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ ನನ್ನ ಮಗಳೇ, ನೀನು ನನ್ನನ್ನು ಎಂಥಾ ಯಾತನೆಗೆ ಈಡುಮಾಡಿದೆ; ನನಗೆ ಮಹಾಸಂಕಟವನ್ನುಂಟುಮಾಡಿದೆ! ನಾನು ಬಾಯಾರೆ ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾಗದು,” ಎಂದು ಕೂಗಿಕೊಂಡನು.
೩೬. ಆಕೆ ಅವನಿಗೆ, “ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿ ತೀರಿಸಿದ್ದಾರೆ. ಆದ್ದರಿಂದ ನಿನ್ನ ಬಾಯಿಂದ ಬಂದದ್ದನ್ನೇ ನೆರವೇರಿಸು,” ಎಂದಳು.
೩೭. ಆಕೆ ಪುನಃ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು, ನಾನು ನನ್ನ ಗೆಳತಿಯರೊಡನೆ ಗುಡ್ಡಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು,” ಎಂದಳು. ಅವನು, “ಎರಡು ತಿಂಗಳ ತನಕ ಹೋಗಿ ಬಾ,” ಎಂದು ಹೇಳಿ ಕಳುಹಿಸಿದನು.
೩೮. ಆಕೆ ಸಖಿಯರ ಸಹಿತ ಗುಡ್ಡ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗಾಗಿ ಗೋಳಾಡಿದಳು.
೩೯. ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು.
೪೦. ಇಸ್ರಯೇಲರ ಹೆಣ್ಣು ಮಕ್ಕಳು ಪ್ರತಿ ವರ್ಷ ನಾಲ್ಕುದಿವಸ ಗಿಲ್ಯಾದನಾದ ಯೆಪ್ತಾಹನ ಮಗಳ ಸ್ಮರಣೆಮಾಡುತ್ತಾರೆ. ಅವರಲ್ಲಿ ಇದೊಂದು ಪದ್ಧತಿ.

ನ್ಯಾಯಸ್ಥಾಪಕರು ೧೨:೧-೧೫
೧. ಎಫ್ರಯಿಮ್ಯರು ಒಟ್ಟುಗೂಡಿ ಜೋರ್ಡನನ್ನು ದಾಟಿ ಉತ್ತರದಿಕ್ಕಿಗೆ ಯೆಪ್ತಾಹನಿದ್ದಲ್ಲಿಗೆ ಹೋದರು. ಅವನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಏಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ,” ಎಂದರು.
೨. ಅದಕ್ಕೆ ಅವನು, “ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆ; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ.
೩. ನೀವು ಸಹಾಯ ಮಾಡುವುದಿಲ್ಲ ಎಂದು ತಿಳಿದು ಪ್ರಾಣವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆ; ಸರ್ವೇಶ್ವರ ಅವರನ್ನು ನನ್ನ ಕೈಗೆ ಒಪ್ಪಿಸಿದರು. ಹೀಗಿರಲು, ನೀವು ಈಗ ಬಂದು ನನ್ನೊಡನೆ ಕಲಹಮಾಡುವುದೇಕೆ?” ಎಂದು ಉತ್ತರಕೊಟ್ಟನು.
೪. ಬಳಿಕ ಗಿಲ್ಯಾದಿನವರೆಲ್ಲರನ್ನು ಕೂಡಿಸಿ, ಎಫ್ರಯಿಮರಿಗೆ ವಿರುದ್ಧ ಯುದ್ಧಕ್ಕೆ ನಿಂತನು. “ಗಿಲ್ಯಾದ್ಯರಾದ ನೀವು ನಮ್ಮ ಮತ್ತು ಮನಸ್ಸೆ ಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿಬಂದಿರಿ” ಎಂದು ಎಫ್ರಯಿಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಕೋಪಗೊಂಡು ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು.
೫. ಇದಲ್ಲದೆ, ಅವರು ತಪ್ಪಿಸಿಕೊಂಡು ಹೋಗದಂತೆ ಎಫ್ರಯಿಮಿಗೆ ಹೋಗುವ ಜೋರ್ಡನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಯಿಮ್ಯರಲ್ಲಿ ಒಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿರಿ ಎಂದು ಅವರನ್ನು ಕೇಳಿದಾಗ ಅವರು, “ನೀನು ಎಫ್ರಯಿಮನೋ?’ ಎಂದು ಕೇಳುತ್ತಿದ್ದರು.
೬. ಅವನು, “ಇಲ್ಲ” ಎಂದರೆ ಅವನಿಗೆ, “ನೀನು ‘ಷಿಬ್ಬೋಲೆತ್’ ಅನ್ನು” ಎಂದು ಹೇಳುತ್ತಿದ್ದರು. ಹಾಗೆ ಉಚ್ಚಸರಿಸಲಿಕ್ಕೆ ಬಾರದೆ ಅವನು “ಸಿಬ್ಬೋಲೆತ್” ಅನ್ನುತ್ತಿದ್ದನು. ಕೂಡಲೇ ಅವರು ಅವನನ್ನು ಹಿಡಿದು ಜೋರ್ಡನಿನ ಹಾಯಗಡಗಳ ಬಳಿಯಲ್ಲೇ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಯಿಮರಲ್ಲಿ ನಾಲ್ವತ್ತೆರಡು ಸಾವಿರ ಜನರು ನಾಶವಾದರು.
೭. ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಯೇಲರನ್ನು ಆರು ವರ್ಷ ಪಾಲಿಸಿದನಂತರ ಸತ್ತನು. ಅವನ ಶವವನ್ನು ಗಿಲ್ಯಾದಿನ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು.
೮. ಯೆಪ್ತಾಹನ ತರುವಾಯ ಬೆತ್ಲೆಹೇಮಿನವನಾದ ಇಬ್ಚಾನನು ಇಸ್ರಯೇಲರ ನ್ಯಾಯಸ್ಥಾಪಕನಾದ.
೯. ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು. ತನ್ನ ಹೆಣ್ಣುಮಕ್ಕಳನ್ನು ಬೇರೆಯವರಿಗೆ ಕೊಟ್ಟು ಗಂಡುಮಕ್ಕಳಿಗಾಗಿ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು.
೧೦. ಇವನು ಇಸ್ರಯೇಲರನ್ನು ಏಳು ವರ್ಷ ಪಾಲಿಸಿದ ನಂತರ ಮೃತನಾದನು. ಅವನ ಶವವನ್ನು ಬೆತ್ಲೆಹೇಮಿನಲ್ಲಿ ಸಮಾಧಿಮಾಡಿದರು.
೧೧. ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಯೇಲರ ಪಾಲಕನಾಗಿ ಹತ್ತು ವರ್ಷಗಳವರೆಗೆ ಅವರನ್ನು ಪಾಲಿಸಿದ ನಂತರ ಮರಣ ಹೊಂದಿದನು.
೧೨. ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು.
೧೩. ಇವನ ತರುವಾಯ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಯೇಲರ ಪಾಲಕನಾದನು.
೧೪. ಇವನಿಗೆ ನಾಲ್ವತ್ತು ಮಂದಿ ಮಕ್ಕಳೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿ ಮಾಡುವುದಕ್ಕಾಗಿ ಎಪ್ಪತ್ತು ಹೇಸರಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಯೇಲರನ್ನು ಎಂಟು ವರ್ಷ ಪಾಲಿಸಿದ ನಂತರ ಮರಣಹೊಂದಿದನು.
೧೫. ಅವನ ಶವವನ್ನು ಎಫ್ರಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು.

ಕೀರ್ತನೆಗಳು ೫೦:೭-೧೭
೭. “ಎಲೈ ಪ್ರಜೆ ಇಸ್ರಯೆಲ್, ನಾನು ನಿನ್ನ ದೇವರು I ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು II
೮. ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ I ನನ್ನ ಮುಂದಿವೆ ಸತತ ನಿನ್ನ ದಹನಬಲಿಗಳೆಲ್ಲ II
೯. ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ I ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ II
೧೦. ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ I ಗುಡ್ಡದಲ್ಲಿರುವ ಸಹಸ್ರಾರು ಪಶುಗಳು ನನ್ನವೆ II
೧೧. ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II
೧೨. ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ I ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ II
೧೩. ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ? I ಹೋತಗಳ ರಕ್ತವನು ನಾ ಕುಡಿಯುವುದುಂಟೇ? II
೧೪. ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ I ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ II
೧೫. ಕಷ್ಟದಲಿ ಮೊರೆಯಿಡೆ, ನೆರವಾಗುವೆ I ಆಗ ನೀ ನನ್ನನು ಕೊಂಡಾಡುವೆ II
೧೬. ದುರ್ಜನರಿಗೆ ದೇವ ಹೇಳುವನು ಇಂತೆಂದು I “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II
೧೭. ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II

ಜ್ಞಾನೋಕ್ತಿಗಳು ೧೪:೨೮-೨೮
೨೮. ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.

ಲೂಕನು ೧೭:೧-೧೯
೧. ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಪಾಪಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ!
೨. ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು.
೩. ನೀವಾದರೋ ಎಚ್ಚರಿಕೆಯಿಂದಿರಿ! “ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು.
೪. ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪುಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ‘ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು,’ ಎಂದರು.
೫. “ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದು ಪ್ರೇಷಿತರು ಕೇಳಿಕೊಂಡರು.
೬. ಆಗ ಯೇಸುಸ್ವಾಮಿ, “ಸಾಸಿವೆಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ,’ ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.
೭. “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ.
೮. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ?
೯. ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ.
೧೦. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.
೧೧. ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು.
೧೨. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಠರೋಗದಿಂದ ನರಳುತ್ತಿದ್ದ ಹತ್ತುಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು,
೧೩. ‘ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,’ ಎಂದು ಕೂಗಿ ಕೇಳಿಕೊಂಡರು.
೧೪. ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು.
೧೫. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು.
೧೬. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು!
೧೭. ಆಗ ಯೇಸು, “ಹತ್ತುಮಂದಿ ಗುಣಹೊಂದಿದರಲ್ಲವೆ? ಮಿಕ್ಕ ಒಂಬತ್ತು ಮಂದಿ ಎಲ್ಲಿ?
೧೮. ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನು ಹೊರತು ಬೇರಾರೂ ಬರಲಿಲ್ಲವೇ?” ಎಂದರು.
೧೯. ಅನಂತರ ಆ ಸಮಾರಿಯದವನಿಗೆ, “ಎದ್ದುಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು.