A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೧೨

ಯೊಹೋಶುವ ೧೩:೧-೩೩
೧. ಯೆಹೋಶುವ ಹಣ್ಣುಹಣ್ಣು ಮುದುಕನಾದ. ಆಗ ಸರ್ವೇಶ್ವರ ಆತನಿಗೆ, “ನೀನೀಗ ಮುದುಕ. ಸ್ವಾಧೀನ ಮಾಡಿಕೊಳ್ಳಬೇಕಾದ ನಾಡುಗಳು ಇನ್ನೂ ಬಹಳ ಇವೆ.
೨. ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರ್, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ;
೩. ***
೪. ಗೆಷೂರ್ಯರ ನಾಡು, ದಕ್ಷಿಣದಲ್ಲಿದ್ದ ಅವ್ವೀಯರ ನಾಡು; ಸಿದೋನ್ಯರಿಗೆ ಸೇರಿದ ಮೆಯರಾದಿಂದ ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ನಾಡು;
೫. ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ಹಾದಿಯವರೆಗಿರುವ ಲೆಬನೋನಿನ ಪೂರ್ವಪ್ರದೇಶ;
೬. ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗಿರುವ ಸಿದೋನ್ಯರ ಎಲ್ಲ ಪರ್ವತ ಪ್ರಾಂತ್ಯಗಳು.
೭. “ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಯೇಲರ ಸಮ್ಮುಖದಿಂದ ಹೊರಡಿಸಿಬಿಡುವೆನು. ನೀನಾದರೋ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಯೇಲರಿಗೆ ನಾಡನ್ನು ಹಂಚಿಕೊಡುವಾಗ ಇವುಗಳನ್ನು ಕೂಡ ಸೇರಿಸಿ ನಾಡನ್ನೆಲ್ಲಾ ಒಂಬತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲುಮಾಡಿಕೊಡು,” ಎಂದರು.
೮. ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು:
೯. ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ ಮತ್ತು ಅದೇ ಕಣಿವೆಯಲ್ಲಿದ್ದ ಮತ್ತೊಂದು ನಗರ, ಇವುಗಳಿಂದ ದೀಬೋನಿನವರೆಗೆ ವಿಸ್ತರಿಸಿಕೊಂಡಿದ್ದ ಮೇದಬದ ತಪ್ಪಲ ನಾಡು;
೧೦. ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಎಲ್ಲೆಗೆ ಈಚೆಕಡೆ ಇದ್ದಂಥ ಎಲ್ಲ ನಗರಗಳು;
೧೧. ಗಿಲ್ಯಾದ್ ನಾಡು, ಗೆಷ್ಯೂರ ಮತ್ತು ಮಾಕತೀಯರ ಪ್ರಾಂತ್ಯಗಳು, ಹೆರ್ಮೋನ್ ಬೆಟ್ಟದ ಮೇಲಿನ ಪ್ರದೇಶ
೧೨. ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದು ಸಲ್ಕಾ ನಗರದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು. ಮೋಶೆಯೇ ಅವರನ್ನು ಜಯಿಸಿ ಅವರ ನಾಡುಗಳನ್ನು ಸ್ವಾಧೀನಮಾಡಿಕೊಂಡಿದ್ದನು.
೧೩. ಇಸ್ರಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ನಾಡಿನೊಳಗಿಂದ ಅಟ್ಟಿಬಿಡಲಿಲ್ಲ. ಅವರು ಇಂದಿನವರೆಗೂ ಇಸ್ರಯೇಲರ ಮಧ್ಯದಲ್ಲೇ ಇದ್ದಾರೆ.
೧೪. ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.
೧೫. ಮೋಶೆ ರೂಬೇನ್ಯರ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:
೧೬. ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ, ಅದೇ ಕಣಿವೆಯ ಮಧ್ಯೆಯಿದ್ದ ನಗರ;
೧೭. ಮೇದೆಬದ ಬಯಲುನಾಡಿಗೆ ಸೇರಿದ ಹೆಷ್ಬೋನ್ ನಗರ, ಅಲ್ಲೆ ಎತ್ತರವಾದ ಬಯಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್, ಬೇತ್ಬಾಳ್ಮೆಯೋನ್ ಯಹಚಾ,
೧೮. ಕೆದೇಮೋತ್, ಮೆಫಾಯತ್,
೧೯. ಕಿರ್ಯಾತಯಿಮ್, ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿ ಇರುವ ಗುಡ್ಡದ ಮೇಲಿನ ಚೆರೆತ್ ಶಹರ್, ಬೇತ್ಪೆಗೋರ್ ಎಂಬ ನಗರಗಳು,
೨೦. ಪಿಸ್ಗದ ಬುಡದಲ್ಲಿ ಇರುವ ಪ್ರದೇಶ, ಬೇತ್ ಯೆಷಿಮೋತ್ ನಗರ,
೨೧. ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲ ನಗರಗಳು, ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸ ಸೀಹೋನನ ಸಮಸ್ತ ರಾಜ್ಯ. ಮೋಶೆ ಈ ನಾಡಿನಲ್ಲಿ ವಾಸವಾಗಿದ್ದ ಸೀಹೋನನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿದ್ದ ಅವನ ಸರದಾರರನ್ನೂ ಸದೆಬಡಿದನು.
೨೨. ಇಸ್ರಯೇಲರು ಕತ್ತಿಗೆ ತುತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.
೨೩. ಜೋರ್ಡನ್ ನದಿ ರೂಬೇನ್ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಸಿಕ್ಕಿದ ಗ್ರಾಮನಗರಗಳು ಇವೇ.
೨೪. ಮೋಶೆ ಗಾದ್ ಕುಲದ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:
೨೫. ಹೆಷ್ಬೋನಿನ ಅರಸ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಗಿಲ್ಯಾದಿನ ಎಲ್ಲ ನಗರಗಳು, ರಬ್ಬಾ ಊರಿನ ಪೂರ್ವದಲ್ಲಿ ಇರುವ ಅರೋಯೇರ್ ನಗರದವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ,
೨೬. ಹೆಷ್ಬೋನಿನಿಂದ ರಾಮತ್ ಮಿಚ್ಫೆ, ಬೆಟೋನೀಮ್ ಎಂಬ ಊರುಗಳವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೇಬೀರ್ ಪ್ರಾಂತ್ಯದವರೆಗೆ ಇರುವ ನಾಡು,
೨೭. ಜೋರ್ಡನ್ ಕಣಿವೆಯಲ್ಲಿರುವ ಬೇತ್ ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಫೋನ್ ಎಂಬ ನಗರಗಳು, ಕಿನ್ನೆರೆತ್ ಸರೋವರ, (ದಕ್ಷಿಣ ದಿಕ್ಕಿನ) ಮೂಲೆಯವರೆಗೆ ವಿಸ್ತರಿಸಿಕೊಂಡಿರುವ ಜೋರ್ಡನ್ ಪೂರ್ವಪ್ರದೇಶ.
೨೮. ಈ ಎಲ್ಲ ಗ್ರಾಮನಗರಗಳು ಗಾದ್ ಕುಲದ ಆಸ್ತಿಪಾಸ್ತಿ ಆದವು.
೨೯. ಮಹನಯಿಮಿನ (ಉತ್ತರದಲ್ಲಿದ್ದ) ಹಾಗೂ ಮೊದಲು ಬಾಷಾನಿನ ಅರಸ ಓಗನ ರಾಜ್ಯವಾಗಿದ್ದ ಬಾಷಾನ್ ನಾಡನ್ನು
೩೦. ಮನಸ್ಸೆ ಕುಲದ ಅರ್ಧಕುಲಗಳಿಗೆ ಮೋಶೆ ಕೊಟ್ಟನು, ಯಾಯಿರನ ಗ್ರಾಮಗಳೆನಿಸಿಕೊಳ್ಳುವ ಅರವತ್ತು ಊರುಗಳು ಇದರಲ್ಲೆ ಇವೆ.
೩೧. ಗಿಲ್ಯಾದಿನ ಅರ್ಧಭಾಗ ಓಗನ ರಾಜಧಾನಿಗಳಾಗಿದ್ದ ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ನಗರಗಳು ಮನಸ್ಸೆಯ ಮಗ ಮಾಕೀರನ ಗೋತ್ರದ ಅರ್ಧಜನರಿಗೆ ಸಿಕ್ಕಿದವು.
೩೨. ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು.
೩೩. ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.

ಯೊಹೋಶುವ ೧೪:೧-೧೫
೧. ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು ಹಾಗೂ ಇಸ್ರಯೇಲ್ ಕುಲಾಧಿಪತಿಗಳು
೨. ಸರ್ವೇಶ್ವರಸ್ವಾಮಿ ಮೋಶೆಯ ಮೂಲಕ ಆಜ್ಞಾಪಿಸಿದಂತೆ ಜೋರ್ಡನಿನ ಪಶ್ಚಿಮದ ಕಾನಾನ್ ನಾಡನ್ನು ಚೀಟುಹಾಕಿ ಇಸ್ರಯೇಲರ ಒಂಬತ್ತುವರೆ ಕುಲದವರಿಗೆ ಸ್ವಂತ ಆಸ್ತಿಯಾಗಿ ಹಂಚಿಕೊಟ್ಟರು.
೩. ಉಳಿದ ಎರಡುವರೆ ಕುಲಗಳ ಜನರಿಗೆ ಜೋರ್ಡನಿನ ಆಚೆಯಲ್ಲಿ ಮೋಶೆಯೇ ಸೊತ್ತನ್ನು ಕೊಟ್ಟಿದ್ದನು. ಲೇವಿಯರಿಗೆ ಮಾತ್ರ ಕೊಡಲಿಲ್ಲ.
೪. ಜೋಸೆಫ್ಯರರು ಮನಸ್ಸೆ ಮತ್ತು ಎಫ್ರಯಿಮ್ ಎಂಬ ಎರಡು ಕುಲಗಳಾಗಿ ಎಣಿಸಲ್ಪಟ್ಟಿದ್ದರು. ಲೇವಿಯರಿಗೆ, ತಂಗುವುದಕ್ಕೆ ಕೆಲವು ನಗರಗಳು ಹಾಗು ಅವರ ದನಕುರಿಗಳಿಗೆ ಅಲ್ಲಿನ ಕೆಲವು ಹುಲ್ಲುಗಾವಲುಗಳನ್ನು ಬಿಟ್ಟರೆ ಬೇರೇನೂ ಸಿಕ್ಕಲಿಲ್ಲ.
೫. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ನಾಡನ್ನು ಹಂಚಿಕೊಂಡರು.
೬. ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಯೆಹೋಶುವನಿಗೆ, “ಸರ್ವೇಶ್ವರ ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಭಕ್ತನಾದ ಮೋಶೆಗೆ ಹೇಳಿದ್ದು ನಿಮಗೆ ಚೆನ್ನಾಗಿ ಗೊತ್ತಿದೆ.
೭. ಸರ್ವೇಶ್ವರನ ದಾಸನಾದ ಮೋಶೆ ಈ ನಾಡನ್ನು ಸಂಚರಿಸಿ ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ನನ್ನನ್ನು ಕಳಿಸಿದಾಗ ನನಗೆ ನಾಲ್ವತ್ತು ವರುಷ.
೮. ನನ್ನ ಜೊತೆಯಲ್ಲಿ ಬಂದಿದ್ದ ಸಹೋದರರು ಜನರನ್ನು ಎದೆಗೆಡಿಸಿದರು. ನಾನಾದರೋ ನನ್ನ ದೇವರಾದ ಸರ್ವೇಶ್ವರನನ್ನೇ ಸಂಪೂರ್ಣವಾಗಿ ನಂಬಿ ಶ್ರದ್ಧೆಯಿಂದ ಅನುಸರಿಸಿದೆ.
೯. ಮೋಶೆ ಅಂದು ನನಗೆ, ‘ನೀನು ಪೂರ್ಣ ಮನಸ್ಸಿನಿಂದ ನನ್ನ ದೇವರಾದ ಸರ್ವೇಶ್ವರನನ್ನೇ ಶ್ರದ್ಧೆಯಿಂದ ಅನುಸರಿಸಿದ ಕಾರಣ ನೀನು ಸಂಚರಿಸಿದ ಪ್ರದೇಶ ನಿನಗೂ ನಿನ್ನ ಸಂತಾನದವರಿಗೂ ಶಾಶ್ವತ ಸೊತ್ತಾಗುವುದು,’ ಎಂದು ಪ್ರಮಾಣಮಾಡಿ ಹೇಳಿದನು.
೧೦. ಸರ್ವೇಶ್ವರ ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಯೇಲರು ಅರಣ್ಯದಲ್ಲಿ ಅಲೆಯುತ್ತಿದ್ದ ವರ್ಷಗಳೂ ಸೇರಿ ನಾಲ್ವತ್ತೈದು ವರ್ಷಗಳು ದಾಟಿದವು. ಸರ್ವೇಶ್ವರ ತಾವು ನುಡಿದಂತೆಯೇ ಈ ಕಾಲವೆಲ್ಲ ನನ್ನನ್ನು ಜೀವದಿಂದುಳಿಸಿದ್ದಾರೆ. ಈಗ ನನಗೆ ಎಂಬತ್ತೈದು ವರ್ಷ.
೧೧. ಮೋಶೆ ನನ್ನನ್ನು ಕಳಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟೇ ಬಲವಿದೆ. ಯುದ್ಧಮಾಡುವುದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿದೆ.
೧೨. ಹೀಗಿರಲು ಸರ್ವೇಶ್ವರ ಆ ದಿನದಂದು ಸೂಚಿಸಿದಂತೆ ಈ ಮಲೆನಾಡನ್ನು ನನಗೆ ಕೊಡು. ‘ಇದರಲ್ಲಿ ಎತ್ತರದ ವ್ಯಕ್ತಿಗಳಿದ್ದಾರೆ, ದೊಡ್ಡ ದೊಡ್ಡ ನಗರಗಳಿವೆ, ಕೋಟೆಕೊತ್ತಲಗಳಿವೆ’ ಎಂದು ಆ ಕಾಲದಲ್ಲಿ ನೀನು ಕೇಳಿದ್ದುಂಟು. ಅವರೆಲ್ಲರನ್ನು ಓಡಿಸಿಬಿಡಲು ಸರ್ವೇಶ್ವರ ತಮ್ಮ ಮಾತಿಗನುಸಾರ ನನಗೆ ಸಹಾಯಮಾಡುವರೆಂಬ ನಂಬಿಕೆ ನನಗಿದೆ,” ಎಂದನು.
೧೩. ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ, ಹೆಬ್ರೋನ್ ನಗರವನ್ನು ಅವನಿಗೆ ಸೊತ್ತಾಗಿ ಕೊಟ್ಟನು.
೧೪. ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಯೇಲಿನ ದೇವರಾದ ಸರ್ವೇಶ್ವರನನ್ನು ಸಂಪೂರ್ಣವಾಗಿ ಶ್ರದ್ಧೆಯಿಂದ ಅನುಸರಿಸಿದ್ದರಿಂದ ಹೆಬ್ರೋನ್ ಅವನಿಗೆ ಸೊತ್ತಾಗಿ ಸಿಕ್ಕಿತು.ಅದು ಇಂದಿನವರೆಗೂ ಅವನದೇ ಆಗಿದೆ.
೧೫. ಅದರ ಹಿಂದಿನ ಹೆಸರು, ‘ಕಿರ್ಯತ್ ಅರ್ಬ’ ಎಂದು. ಅರ್ಬ ಎಂಬವನು ಈ ಎತ್ತರದ ವ್ಯಕ್ತಿಗಳಲ್ಲಿ ಪ್ರಮುಖನು. ಯುದ್ಧವು ನಿಂತಿತು. ನಾಡಿನಲ್ಲಿ ಶಾಂತಿಸಮಾಧಾನ ನೆಲೆಸಿತು.

ಕೀರ್ತನೆಗಳು ೪೪:೨೦-೨೬
೨೦. ನಮ್ಮ ದೇವನ ನಾಮವನು ಮರೆತಿದ್ದೆವಾದರೆ I ಅನ್ಯದೇವರಿಗೆ ನಾವು ಕೈ ಮುಗಿದಿದ್ದೆವಾದರೆ, II
೨೧. ದೇವಾ, ನಿನಗದು ಬಯಲಾಗದಿರುತ್ತಿತ್ತೆ? I ನಮ್ಮೆದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೆ? II
೨೨. ಎಣಿಕೆಯಾಗಿಹೆವು ಕೊಯ್ಗುರಿಗಳಂತೆ ನಾವೆಲ್ಲ I ಬಲಿಯಾಗುತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ II
೨೩. ಪ್ರಭೂ, ಎದ್ದೇಳು, ನಿದ್ರಿಸಬೇಡ I ನಮ್ಮನು ಎಂದೆಂದಿಗೂ ತೊರೆಯಬೇಡ II
೨೪. ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು? I ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು? II
೨೫. ಮಣ್ಣುಪಾಲಾಗಿದೆ ನಮ್ಮ ಪ್ರಾಣ I ನೆಲ ಕಚ್ಚಿಕೊಂಡಿದೆ ನಮ್ಮ ದೇಹ II
೨೬. ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು I ನಿನ್ನಚಲ ಪ್ರೇಮದಿಂದ ನಮ್ಮನು ಉದ್ಧರಿಸು II

ಜ್ಞಾನೋಕ್ತಿಗಳು ೧೪:೩-೩
೩. ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವುದು; ಜ್ಞಾನಿಗಳ ವಚನಗಳು ಅವರನ್ನು ಕಾಪಾಡುವುವು.

ಲೂಕನು ೧೧:೧-೨೮
೧. ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆಮಾಡಬೇಕು: ತಂದೆಯೇ,
೨. ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ.
೩. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ.
೪. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”
೫. ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
೬. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು,
೭. ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ?
೮. ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ.
೯. ಆದುದರಿಂದ: ‘ಕೇಳಿರಿ, ನಿಮಗೆ ದೊರಕುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.
೧೦. ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’
೧೧. “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?
೧೨. ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?
೧೩. ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”
೧೪. ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು.
೧೫. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ
೧೬. ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು.
೧೭. ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು.
೧೮. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು?
೧೯. ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
೨೦. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ.
೨೧. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ.
೨೨. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ.
೨೩. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ,” ಎಂದರು.
೨೪. ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ.
೨೫. ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ.
೨೬. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.
೨೭. ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು.
೨೮. ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು.