A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೨೦

ನ್ಯಾಯಸ್ಥಾಪಕರು ೫:೧-೩೧
೧. ಆ ದಿನ ದೆಬೋರಳು ಮತ್ತು ಅಬೀನೋವಮನ ಮಗ ಬಾರಾಕನು ಈ ಗೀತೆಯನ್ನು ಹಾಡಿದರು:
೨. ಪಣತೊಟ್ಟಿದ್ದರು ಇಸ್ರಯೇಲಿನ ವೀರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;
೩. ಅರಸರೇ, ಕೇಳಿ! ಪ್ರಭುಗಳೇ, ಕಿವಿಗೊಡಿ; ನಾ ಕಟ್ಟುವೆನು ಕವಿತೆಯನು ಸರ್ವೇಶ್ವರನಿಗೆ ನಾ ಭಜಿಸಿ ಹಾಡುವೆನು ಇಸ್ರಯೇಲರಾ ದೇವನಿಗೆ;
೪. ಎದೋಮ್ಯರ ಪ್ರಾಂತ್ಯದಿಂದ, ಸೇಯೀರ ಗುಡ್ಡದಿಂದ ಹೇ ಸರ್ವೇಶ್ವರಾ, ನೀ ಹೊರಟು ಬರುವಾಗ ಕಂಪಿಸಿತು ಭೂಮಿ, ಹನಿಗರೆಯಿತು ಆಗಸ ಮಳೆಸುರಿಸಿತು ಮೇಘಮಂಡಲ.
೫. ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿ ಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.
೬. ಅನಾತನ ಮಗ ಶಮ್ಗರನ ಕಾಲದಲ್ಲಿ, ಯಾಯೇಲನ ದಿನಗಳಲಿ ನಿಂತುಹೋಯಿತು ಸಂಚಾರ ರಾಜಮಾರ್ಗಗಳಲಿ, ನಡೆದರು ಪಯಣಿಗರು ಸೀಳುದಾರಿಗಳಲಿ.
೭. ದೆಬೋರಾ, ಇಸ್ರಯೇಲರ ತಾಯಿಯಂತೆ ನೀ ಬರುವ ಮುನ್ನ ಪಾಳುಬಿದ್ದಿದ್ದವು ಇಸ್ರಯೇಲ ಗ್ರಾಮಗಳೆಲ್ಲ.
೮. ಆರಿಸಿಕೊಂಡಿದ್ದರು ಜನರು ಅನ್ಯ ದೇವತೆಗಳನು ಊರಬಾಗಿಲವರೆಗೆ ಬಂದಿತು ಕದನಕಾಳಗಗಳು ಇರಲಿಲ್ಲ ಗುರಾಣಿ, ಭರ್ಜಿಗಳಾವು ಓರ್ವರಲ್ಲೂ ಇಸ್ರಯೇಲರಾ ನಾಲ್ವತ್ತು ಸಾವಿರ ಸೈನಿಕರಲ್ಲೂ.
೯. ಇಸ್ರಯೇಲಿನಾ ನಾಯಕರೊಡನೆ ಸೇರಿ ಸ್ವೇಚ್ಛೆಯಿಂದ ಸೈನ್ಯಸೇರಿದಾ ಜನರೊಡಗೂಡಿ ನಾ ನಲಿದು ಹಾಡುವೆನು, ಮಾಡಿರಿ ನೀವು ಸರ್ವೇಶ್ವರನ ಗುಣಗಾನವನು;
೧೦. ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾಡಿರಿ ಗಾನ, ಮಾಡಿರಿ ಗುಣಗಾನ, ಓ ಪಯಣಿಗರೇ.
೧೧. ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.
೧೨. ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ, ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು.
೧೩. ಚದರಿಹೋದವರು ಕೂಡಿಬಂದರು ನಾಯಕರ ಬಳಿಗೆ ಸರ್ವೇಶ್ವರನ ಶೂರಜನರು ವೀರರಂತೆ ನೆರೆದುಬಂದರು ನನ್ನ ಸಹಾಯಕ್ಕೆ.
೧೪. ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.
೧೫. ಇಸ್ಸಾಕಾರ್ ಕುಲಪ್ರಭುಗಳು ಬಂದರು ದೆಬೋರಳ ಜೊತೆಯಲ್ಲಿ, ಆಗಮಿಸಿದನು ಬಾರಾಕನು ಇಸ್ಸಾಕಾರ್ಯರ ಸಂಗಡದಲಿ, ಇವನ ಹೆಜ್ಜೆಹಿಡಿದು ಬಂದರು ಅವರೆಲ್ಲರು ತವಕದಲಿ.
೧೬. ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.
೧೭. ಗಿಲ್ಯಾದರು ಉಳಿದರು ಜೋರ್ಡನಿನ ಆಚೆಯಲ್ಲೇ ದಾನ್ ಕುಲದವರು ಉಳಿಯರೇಕೆ, ಹಡಗುಗಳಲ್ಲೇ? ಅಶೇರ್ ಕುಲದವರೋ ಅಂಟುಕೊಂಡರು ತಮ್ಮ ರೇವುಗಳಿಗೇ ನೆಮ್ಮದಿಯಾಗಿ ಕೂತುಬಿಟ್ಟರು ಸಮುದ್ರತೀರದಲ್ಲೆ.
೧೮. ಅಂಥವರಲ್ಲ ಈ ಜೆಬುಲೂನ್ಯರು, ನಫ್ತಾಲ್ಯರು ಪ್ರಾಣವನ್ನೇ ಮುಡಿಪಾಗಿಟ್ಟರು ರಣಭೂಮಿಯೊಳು.
೧೯. ಎದ್ದುಬಂದು ಯುದ್ಧ ಮಾಡಿದರು ಅರಸುಗಳು ಕೂಡಿಬಂದು ಕಾದಾಡಿದರು ಕಾನಾನ್ಯ ರಾಜರುಗಳು ಮೆಗಿದ್ದೋ ನದಿಗಳ ಬಳಿ ತಾನಾಕದೊಳು ಆದರೆ ಗಿಟ್ಟಲಿಲ್ಲ ಅವರಿಗೆ ಬೆಳ್ಳಿದ್ರವ್ಯಗಳೇನು!
೨೦. ಕದನವಾಡಿದವು ತಾರೆಗಳು ಆಗಸದಿಂದಲೆ ಯುದ್ಧಮಾಡಿದವು ಸೀಸೆರನ ವಿರುದ್ಧ ತಮ್ಮಾ ಪಥದಿಂದಲೆ.
೨೧. ಶತ್ರುಗಳನು ಕೊಚ್ಚಿಕೊಂಡು ಹೋಯಿತು ಪೂರ್ವಪ್ರಸಿದ್ಧವಾದ ಆ ಕೀಷೋನ್ ಹೊಳೆಯು. ನನ್ನ ಮನವೇ, ನೀ ಧೈರ್ಯದಿಂದ ಮುಂದೆ ಸಾಗು.
೨೨. ನೆಲ ಕಂಪಿಸಿತು ಕುದುರೆಗಳ ಭರದೌಡಿನಿಂದ ಸುತ್ತಿಗೆಯಂತಹ ಆ ಕಾಲುಗಳ ಪೆಟ್ಟಿನಿಂದ
೨೩. ‘ಶಾಪಹಾಕಿರಿ ಮೇರೋಜ್ ಊರಿಗೆ, ಅದರ ನಿವಾಸಿಗಳಿಗೆ ಬರಲಿಲ್ಲ ಅವರು ಯುದ್ಧವೀರರ ಜೊತೆಗೆ ಸರ್ವೇಶ್ವರನ ಸಹಾಯಕ್ಕೆ. ಶಪಿಸಿರಿ ಅವರನ್ನು’ ಎಂದು ಕರೆಗೊಟ್ಟನು ಸರ್ವೇಶ್ವರನ ದೂತನೆ.
೨೪. ಗುಡಾರಗಳಲಿ ವಾಸಿಸುವ ಸ್ತ್ರೀಯರಲ್ಲಿ ಯಾಯೇಲಳೆ ಭಾಗ್ಯವತಿ, ಹೌದು, ಅವಳೇ ಭಾಗ್ಯವತಿ, ಕೇನ್ಯನಾದ ಹೆಬೆರನ ಆ ಹೆಂಡತಿ.
೨೫. ನೀರು ಕೇಳಲು ಹಾಲು ಕೊಟ್ಟಳು ಉತ್ತಮ ಪಾತ್ರೆಯಲ್ಲಿ ಮೊಸರು ಕೊಟ್ಟಳು.
೨೬. ಗೂಟ ತೆಗೆದುಕೊಂಡಳು ಕೈಚಾಚಿ ಹಿಡಿದಳು ಬಲಗೈಯಲಿ ದೊಡ್ಡಕೊಡತಿ ಜಡಿದಳು ಸೀಸೆರನ ತಲೆಯನು ಬಡಿದಳಾ ಕೊಡತಿಯಿಂದ ಕಣತಲೆಗೇ ತಿವಿದು.
೨೭. ಬೊಗ್ಗಿಬಿದ್ದನು, ಉರುಳಿಬಿದ್ದನು, ಮುದುರಿಬಿದ್ದನವನು ಅವಳ ಕಾಲುಗಳ ಬಳಿ ಅಲ್ಲೆ ಸತ್ತುಬಿದ್ದನು.
೨೮. ಸೀಸೆರನ ತಾಯಿ ಇಣುಕಿ ನೋಡಿದಳು ಕಿಟಕಿಯಿಂದ ಕೂಗಿದಳು ಆ ಕಿಟಕಿಯ ಜಾಲರಿಗಳಿಂದ; ‘ಇಷ್ಟು ಹೊತ್ತಾಗಬೇಕೆ ರಥ ಬರುವುದಕ್ಕೆ? ಕುದುರೆಗಳ ಕಾಲುಗಳಿಗೆ ಇಷ್ಟು ಸಾವಕಾಶವೇಕೆ?’
೨೯. ಸಭ್ಯಸ್ತ್ರೀಯರೊಳು ಬುದ್ಧಿವಂತೆಯರು ಕೊಟ್ಟ ಉತ್ತರವನು ತನ್ನೊಳಗೇ ಮೆಲಕು ಹಾಕಿದ್ದಳು ಇಂತೆಂದುಕೊಂಡು:
೩೦. ‘ನಿಶ್ಚಯವಾಗಿ ಸಿಕ್ಕಿರಬೇಕು ಅವರಿಗೆ ಕೊಳ್ಳೆ ಹಂಚಿಕೊಳ್ಳುತ್ತಿರಬೇಕು ಅದನು ತಮ್ಮತಮ್ಮಲ್ಲೆ ಪ್ರತಿಯೊಬ್ಬ ಸೈನಿಕನಿಗೆ ಒಬ್ಬೊಬ್ಬ ದಾಸಿಯರು ಸೀಸೆರನಿಗೊ, ಬಣ್ಣಬಣ್ಣವಾದ ಬಟ್ಟೆಬರೆಗಳು ವಿಚಿತ್ರ ಕಸೂತಿಹಾಕಿದ ಒಂದೆರಡು ವಸ್ತ್ರಗಳು, ಕಂಠಮಾಲೆಗಳು’.
೩೧. ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!

ನ್ಯಾಯಸ್ಥಾಪಕರು ೬:೧-೪೦
೧. ಇಸ್ರಯೇಲರು ಮತ್ತೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ದ್ರೋಹಿಗಳಾದರು. ಆದ್ದರಿಂದ ಸರ್ವೇಶ್ವರ ಅವರನ್ನು ಏಳುವರ್ಷಕಾಲ ಮಿದ್ಯಾನ್ಯರ ಕೈಗೊಪ್ಪಿಸಿದರು.
೨. ಮಿದ್ಯಾನ್ಯರ ಶಕ್ತಿ ಹೆಚ್ಚಿತು. ಇಸ್ರಯೇಲರು ಅವರಿಗೆ ಹೆದರಿ ಬೆಟ್ಟಗುಡ್ಡಗಳಲ್ಲಿ ಕಂದರಗಳನ್ನೂ ಗುಹೆಗಳನ್ನೂ ಮಾಡಿ ಅವುಗಳಲ್ಲಿ ವಾಸಮಾಡಿದರು.
೩. ಇವರು ಮಾಡುತ್ತಿದ್ದ ಬಿತ್ತನೆಯನ್ನು ಮಿದ್ಯಾನ್ಯರು, ಅಮಾಲೇಕ್ಯರು, ಹಾಗು ಪೂರ್ವದೇಶದವರು ಇವರಿಗೆ ವಿರುದ್ಧ ದಂಡೆತ್ತಿ ಬಂದು ಹಾಳು ಮಾಡುತ್ತಿದ್ದರು.
೪. ಗಾಜಾ ಪ್ರಾಂತ್ಯದವರೆಗೆ ಭೂಮಿಯ ಫಲವನ್ನೆಲ್ಲ ನಾಶ ಮಾಡುತ್ತಿದ್ದರು. ಈ ಕಾರಣ ಇಸ್ರಯೇಲರಿಗೆ ದವಸಧಾನ್ಯವಾಗಲಿ, ಕುರಿದನಕತ್ತೆಗಳಾಗಲಿ ಉಳಿಯುತ್ತಿರಲಿಲ್ಲ.
೫. ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಮೇತ ಮಿಡತೆಗಳಂತೆ ಗುಂಪು ಗುಂಪಾಗಿ ಬರುತ್ತಿದ್ದರು. ಅವರ ಒಂಟೆಗಳೂ ಅಸಂಖ್ಯವಾಗಿದ್ದವು. ಆ ಗುಂಪುಗಳಿಂದ ನಾಡೆಲ್ಲ ನಾಶವಾಗುತ್ತಿತ್ತು.
೬. ಆ ಮಿದ್ಯಾನ್ಯರ ನಿಮಿತ್ತ ಇಸ್ರಯೇಲರು ಬಹಳವಾಗಿ ಕುಗ್ಗಿಹೋಗಿ ಸರ್ವೇಶ್ವರನಿಗೆ ಮೊರೆಯಿಟ್ಟರು.
೭. ಹೀಗೆ ಮಿದ್ಯಾನ್ಯರ ಕಾಟವನ್ನು ತಾಳಲಾಗದೆ ಇಸ್ರಯೇಲರು ಮೊರೆಯಿಟ್ಟಾಗ ಸರ್ವೇಶ್ವರ ಅವರಿಗೊಬ್ಬ ಪ್ರವಾದಿಯನ್ನು ಕಳುಹಿಸಿದರು.
೮. ಅವನು ಬಂದು ಇಸ್ರಯೇಲರಿಗೆ ಹೀಗೆಂದನು: “ನಿಮ್ಮ ದೇವರಾದ ಸರ್ವೇಶ್ವರ ಹೇಳುವ ಈ ಮಾತುಗಳನ್ನು ಗಮನಿಸಿರಿ: ‘ನೀವು ದಾಸತ್ವದಲ್ಲಿದ್ದಾಗ ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ನಾನು.
೯. ಈಜಿಪ್ಟಿನವರಿಂದ ನಿಮ್ಮನ್ನು ಬಿಡಿಸಿದೆನಲ್ಲದೆ ಬೇರೆ ಎಲ್ಲಾ ಶೋಷಕರಿಂದ ನಿಮ್ಮನ್ನು ಪಾರುಮಾಡಿ, ನಿಮ್ಮ ಕಣ್ಮುಂದೆಯೇ ಅವರನ್ನು ಅಟ್ಟಿಬಿಟ್ಟು, ಅವರ ನಾಡನ್ನು ನಿಮಗೆ ಕೊಟ್ಟೆ.
೧೦. ಸರ್ವೇಶ್ವರನೆಂಬ ನಾನೇ ನಿಮ್ಮ ದೇವರಾಗಿದ್ದೇನೆಂದೂ ನೀವು ಅಮೋರಿಯರ ಮಧ್ಯೆ ವಾಸಿಸುವಾಗ ಅವರ ದೇವತೆಗಳನ್ನು ಪೂಜಿಸಬಾರದೆಂದೂ ಹೇಳಿದೆ. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ’.”
೧೧. ಆಮೇಲೆ ಸರ್ವೇಶ್ವರನ ದೂತನು ಬಂದು ಒಫ್ರದಲ್ಲಿದ್ದ ಓಕ್ ಮರದ ಅಡಿಯಲ್ಲಿ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು.
೧೨. ಸರ್ವೇಶ್ವರನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಸರ್ವೇಶ್ವರ ನಿನ್ನೊಡನೆ ಇದ್ದಾರೆ” ಎಂದನು.
೧೩. ಆಗ ಗಿದ್ಯೋನನು ಅವನಿಗೆ, “ಸ್ವಾಮೀ, ಸರ್ವೇಶ್ವರ ನನ್ನೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಭುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾರಲ್ಲಾ,” ಎನ್ನಲು,
೧೪. ಸರ್ವೇಶ್ವರ ಅವನನ್ನು ದಿಟ್ಟಿಸಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಯೇಲರನ್ನು ಮಿದ್ಯಾನ್ಯರಿಂದ ಬಿಡಿಸು,” ಎಂದು ಹೇಳಿದರು.
೧೫. ಆಗ ಗಿದ್ಯೋನನು, “ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆ ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು,” ಎಂದನು.
೧೬. ಸರ್ವೇಶ್ವರ ಅವನಿಗೆ, “ನಾನು ನಿನ್ನೊಂದಿಗೆ ಇರುವುದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸದೆಬಡಿಯುವೆ,” ಎಂದರು.
೧೭. ಗಿದ್ಯೋನನು: “ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು.
೧೮. ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು,” ಎಂದು ಬಿನ್ನವಿಸಲು ಅವರು, “ನೀನು ತಿರುಗಿ ಬರುವವರೆಗೆ ನಾನು ಇಲ್ಲೇ ಇರುವೆನು,” ಎಂದರು.
೧೯. ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಹತ್ತು ಕಿಲೋಗ್ರಾಂ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು ಎಲ್ಲವನ್ನೂ ಓಕ್ ಮರದ ಕೆಳಗೆ ಅವರ ಮುಂದೆ ತಂದಿಟ್ಟನು.
೨೦. ಆಗ ದೇವದೂತನು ಅವನಿಗೆ, “ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ” ಎನ್ನಲು ಅವನು ಹಾಗೆಯೇ ಮಾಡಿದನು.
೨೧. ಅನಂತರ ಸರ್ವೇಶ್ವರನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು. ಸರ್ವೇಶ್ವರನ ದೂತನು ಅದೃಶ್ಯನಾದನು.
೨೨. ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು.
೨೩. ಆದರೆ ಸರ್ವೇಶ್ವರನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ,” ಎಂದನು.
೨೪. ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ ‘ಯೆಹೋವ ಷಾಲೋಮ್’ ಎಂದು ಹೆಸರಿಟ್ಟನು; ಅದು ಈವರೆಗೂ ಅಬೀಯೆಜೆರ್ ಗೋತ್ರದವರ ಒಫ್ರದಲ್ಲಿರುತ್ತದೆ.
೨೫. ಅದೇ ದಿನ ರಾತ್ರಿ ಸರ್ವೇಶ್ವರ ಅವನಿಗೆ, “ನೀನು ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನೂ ಏಳು ವರ್ಷದ ಇನ್ನೊಂದು ಹೋರಿಯನ್ನೂ ತೆಗೆದುಕೊಂಡು ಹೋಗಿ ನಿನ್ನ ತಂದೆ ಕಟ್ಟಿರುವ ಬಾಳನ ಬಲಿಪೀಠವನ್ನು ಕೆಡವಿ ಅದರ ಬಳಿಯಲ್ಲಿರುವ ಅಶೇರವೆಂಬ ವಿಗ್ರಹಸ್ತಂಭವನ್ನು ಕಡಿದುಹಾಕು.
೨೬. ಈ ಗುಡ್ಡದ ಶಿಖರದಲ್ಲಿ ಸರ್ವೇಶ್ವರನಿಗಾಗಿ ನೇಮಕವಾದ ರೀತಿಯಿಂದ ಒಂದು ಬಲಿಪೀಠವನ್ನು ಕಟ್ಟಿಸು. ನೀನು ಕಡಿದುಹಾಕಿದ ಅಶೇರ ವಿಗ್ರಹಸ್ತಂಭದಿಂದ ಬೆಂಕಿಮಾಡಿ ಆ ಎರಡನೆ ಹೋರಿಯನ್ನು ದಹನ ಬಲಿಯಾಗಿ ಸಮರ್ಪಿಸು,” ಎಂದು ಹೇಳಿದರು.
೨೭. ಅಂತೆಯೇ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ, ಸರ್ವೇಶ್ವರನು ಹೇಳಿದ ಹಾಗೆ ಮಾಡಿದನು. ಆದರೆ ಅವನು ತನ್ನ ಮನೆಯವರಿಗೂ ಊರಿನವರಿಗೂ ಹೆದರಿಕೊಂಡದ್ದರಿಂದ ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.
೨೮. ಊರಿನ ಜನರು ಬೆಳಿಗ್ಗೆ ಎದ್ದು ಬಾಳನ ಬಲಿಪೀಠ ಕೆಡವಲಾಗಿರುವುದನ್ನೂ ಅದರ ಸಮೀಪದಲ್ಲಿದ್ದ ವಿಗ್ರಹಸ್ತಂಭ ಕಡಿಯಲಾಗಿರುವುದನ್ನೂ ಹೊಸದಾಗಿ ಕಟ್ಟಿದ ಬಲಿಪೀಠದ ಮೆಲೆ ಎರಡನೆಯ ಹೋರಿ ಬಲಿಯಾದದ್ದನ್ನೂ ಕಂಡು,
೨೯. “ಹೀಗೆ ಮಾಡಿದವರಾರು?” ಎಂದು ಒಬ್ಬರನ್ನೊಬ್ಬರು ವಿಚಾರಿಸಿದರು. ಯೋವಾಷನ ಮಗನಾದ ಗಿದ್ಯೋನನೇ ಎಂದು ಗೊತ್ತಾಯಿತು.
೩೦. ಆ ಜನರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ; ಅವನು ಸಾಯಬೇಕು; ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ ಅದರ ಬಳಿಯಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನು ಕಡಿದುಹಾಕಿದ್ದಾನೆ,” ಎಂದರು.
೩೧. ಯೋವಾಷನು ತನಗೆ ವಿರುದ್ಧವಾಗಿ ನಿಂತವರೆಲ್ಲರಿಗೆ, “ಬಾಳನ ಪರ ನೀವು ವ್ಯಾಜ್ಯಮಾಡಬೇಕೆ? ನೀವು ಅವನನ್ನು ರಕ್ಷಿಸಬೇಕೇ? ಅವನಿಗಾಗಿ ವ್ಯಾಜ್ಯಮಾಡುವವರು ಬೆಳಗಾಗುವಷ್ಟರಲ್ಲಿ ಕೊಲ್ಲಲ್ಪಡಲಿ. ಅವನು ದೇವನಾಗಿದ್ದರೆ ತನ್ನ ಬಲಿಪೀಠವನ್ನು ಕೆಡವಿಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ,” ಎಂದನು.
೩೨. ಆ ದಿವಸದಲ್ಲಿ ಅವನು, “ಬಾಳನು ತನ್ನ ಬಲಿಪೀಠವನ್ನು ಕೆಡವಿದವನೊಡನೆ ತಾನೇ ವ್ಯಾಜ್ಯ ಮಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ‘ಯೆರುಬ್ಬಾಳ’ ಎಂದು ಹೆಸರಾಯಿತು.
೩೩. ಇಷ್ಟರಲ್ಲಿ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣದೇಶದವರೂ ಕೂಡಿ ಹೊಳೆದಾಟಿ ಬಂದು ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು.
೩೪. ಆಗ ಗಿದ್ಯೋನನು ಸರ್ವೇಶ್ವರಾತ್ಮಭರಿತನಾಗಿ ಕೊಂಬನ್ನು ಊದಲು ಅಬೀಯೆಜೆರನ ಗೋತ್ರದವರು ಬಂದು ಅವನನ್ನು ಹಿಂಬಾಲಿಸಿದರು.
೩೫. ಅವನು ಉಳಿದ ಮನಸ್ಸೆಯವರ ಬಳಿಗೆ ದೂತರನ್ನು ಕಳುಹಿಸಿದ್ದನು. ಅವರೂ ಕೂಡಿಬಂದರು. ಅಶೇರ್, ಜೆಬುಲೂನ್, ನಫ್ತಾಲಿ ಕುಲಗಳವರ ಬಳಿಗೆ ದೂತರನ್ನು ಕಳುಹಿಸಲು ಅವರೂ ಬಂದು ದಂಡೆಯಾತ್ರೆಗಾಗಿ ಸೇರಿಕೊಂಡರು.
೩೬. ಗಿದ್ಯೋನನು ದೇವರಿಗೆ, “ನೀವು ಹೇಳಿದಂತೆ ಇಸ್ರಯೇಲರನ್ನು ನನ್ನ ಮುಖಾಂತರ ರಕ್ಷಿಸುವಿರೋ ಇಲ್ಲವೋ ಎಂಬುದನ್ನು ತಿಳಿಯಪಡಿಸಿರಿ.
೩೭. ಇಗೋ, ಕಣದಲ್ಲಿ ಕುರಿಯ ತುಪ್ಪಟವನ್ನು ಇಡುತ್ತೇನೆ; ಅದರಲ್ಲಿ ಮಾತ್ರ ಮಂಜು ಬಿದ್ದು ನೆಲವೆಲ್ಲಾ ಒಣಗಿದ್ದರೆ ನೀವು ಹೇಳಿದಂತೆಯೇ ಇಸ್ರಯೇಲರನ್ನು ನನ್ನ ಮುಖಾಂತರ ರಕ್ಷಿಸುವಿರೆಂದು ತಿಳಿಯುವೆನು,” ಎಂದು ವಿಜ್ಞಾಪಿಸಿದನು.
೩೮. ಹಾಗೆಯೇ ಆಯಿತು; ಅವನು ಮರುದಿವಸ ಮುಂಜಾನೆ ಎದ್ದು ತುಪ್ಪಟವನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು.
೩೯. ಅವನು ಪುನಃ ದೇವರಿಗೆ, “ಸ್ವಾಮೀ, ಸಿಟ್ಟಾಗಬೇಡಿ; ಇನ್ನೊಂದು ಸಾರಿ ಮಾತಾಡುತ್ತೇನೆ. ಇನ್ನು ಒಂದೇ ಸಾರಿ ಈ ತುಪ್ಪಟದಿಂದ ನಿಮ್ಮನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ತುಪ್ಪಟ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿಬಿದ್ದಿರಲಿ,” ಎಂದನು.
೪೦. ಆ ರಾತ್ರಿ ದೇವರು ಹಾಗೆಯೇ ಮಾಡಿದರು; ತುಪ್ಪಟ ಮಾತ್ರ ಒಣಗಿತ್ತು; ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.

ಕೀರ್ತನೆಗಳು ೪೯:೧-೯
೧. ಸರ್ವಜನಾಂಗಗಳೆ, ಗಮನಿಸಿರಿ I ಭೂನಿವಾಸಿಗಳೆ, ನನಗೆ ಕಿವಿಗೊಡಿ II
೨. ಜನಸಾಮಾನ್ಯರೆ, ಜನಾಧಿಪತಿಗಳೆ, ದರಿದ್ರರೆ, ಧನವಂತರೆ I ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರೈ II
೩. ನನ್ನ ಬಾಯಿ ಬೋಧಿಸುವುದು ಸುಜ್ಞಾನವನು I ನನ್ನ ಮನ ಧ್ಯಾನಿಸುವುದು ವಿವೇಚನೆಯನು II
೪. ನಾ ಕಿವಿಗೊಟ್ಟು ಆಲಿಸುವೆನು ಧರ್ಮದ ಗಾದೆಯನು I ವೀಣೆ ನುಡಿಸುತ ವಿವರಿಸುವೆನು ಅದರ ಗೂಡಾರ್ಥವನು II
೫. ಆಪತ್ಕಾಲದಲಿ ನಾನೇಕೆ ಭಯಪಡಬೇಕು? I ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು? II
೬. ಅವರ ಭರವಸೆ ಸಿರಿಸಂಪತ್ತಿನಲಿ I ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II
೭. ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II
೮. ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II
೯. ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II

ಜ್ಞಾನೋಕ್ತಿಗಳು ೧೪:೨೦-೨೧
೨೦. ಬಡವನನ್ನು ನೆರೆಯವರೂ ತುಚ್ಛವಾಗಿ ಕಾಣುವರು; ಹಣವಂತನಿಗಾದರೊ ಬಹುಜನ ಮಿತ್ರರು.
೨೧. ಹಸಿದವನನ್ನು ತಿರಸ್ಕರಿಸುವವನು ಪಾಪಿಷ್ಠನು; ದಲಿತರಿಗೆ ದಯೆ ತೋರಿಸುವವನು ಭಾಗ್ಯವಂತನು.

ಲೂಕನು ೧೫:೧-೧೦
೧. ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು.
೨. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು.
೩. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:
೪. “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ?
೫. ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ;
೬. ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ?
೭. “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಬತ್ತೊಂಬತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
೮. “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ?
೯. ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ?
೧೦. “ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.