A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೧೬

ಯೊಹೋಶುವ ೨೧:೧-೪೫
೧. ಲೇವಿ ಕುಲಾಧಿಪತಿಗಳು ಕಾನಾನ್ ನಾಡಿನ ಶೀಲೋವಿನಲ್ಲಿದ್ದ ಯಾಜಕ ಎಲ್ಲಾಜಾರ್, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲಾಧಿಪತಿಗಳ ಬಳಿಗೆ ಬಂದರು.
೨. “ನಮ್ಮ ನಿವಾಸಕ್ಕೆ ನಗರಗಳನ್ನೂ ನಮ್ಮ ಪಶುಪ್ರಾಣಿಗಳಿಗೆ ಗೋಮಾಳಗಳನ್ನೂ ಕೊಡಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದ್ದಾರಲ್ಲವೆ?” ಎಂದು ವಿನಂತಿಸಿದರು.
೩. ಸರ್ವೇಶ್ವರನ ಆಜ್ಞೆಯಂತೆಯೇ ಅವರಿಗೆ ಸೊತ್ತಾಗಿ ಈ ಕೆಳಕಂಡ ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಡಲಾಯಿತು.
೪. ಕೆಹಾತ್ಯರಿಗಾಗಿ ಚೀಟು ಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳಿಂದ ಹದಿಮೂರು ನಗರಗಳು ದೊರಕಿದವು.
೫. ಮಿಕ್ಕ ಕೆಹಾತ್ಯರಿಗೆ ಎಪ್ರಯಿಮ್ ಹಾಗೂ ದಾನ್ ಕುಲಗಳಿಂದ ಮತ್ತು ಮನಸ್ಸೆಯ ಅರ್ಧ ಕುಲಗಳಿಂದ ಹತ್ತು ನಗರಗಳು ಸಿಕ್ಕಿದವು.
೬. ಮತ್ತೆ ಚೀಟು ಹಾಕಿದಾಗ ಗೇರ್ಷೋನ್ಯರಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ ಎಂಬ ಕುಲಗಳಿಂದ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಕುಲದಿಂದ ಹದಿಮೂರು ನಗರಗಳು ದೊರೆತವು.
೭. ಮೆರಾರಿ ಗೋತ್ರದವರಿಗೆ ರೂಬೇನ್, ಗಾದ್ ಹಾಗೂ ಜೆಬುಲೂನ್ ಕುಲಗಳಿಂದ ಹನ್ನೆರಡು ನಗರಗಳು ಸಿಕ್ಕಿದವು.
೮. ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ಇಸ್ರಯೇಲರು ಚೀಟು ಹಾಕಿ ಲೇವಿಯರಿಗೆ ಇಷ್ಟು ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.
೯. ಲೇವಿ ಕುಲದವರು ಹಾಗೂ ಕೆಹಾತನ ಗೋತ್ರದವರು ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದ್ದಿತು.
೧೦. ಆದ್ದರಿಂದ ಇಸ್ರಯೇಲರು ಅವರಿಗೆ ಯೆಹೂದ ಮತ್ತು ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ನಗರಗಳನ್ನು ಕೊಟ್ಟರು:
೧೧. ಇವುಗಳಲ್ಲಿ ಯೆಹೂದ ಮಲೆನಾಡಿನ ಹೆಬ್ರೋನೆಂಬ ಗೋಮಾಳ ಸಹಿತವಾದ ಕಿರ್ಯತರ್ಬವೂ ಸೇರಿರುತ್ತದೆ. (ಕಿರ್ಯತರ್ಬ ಎಂದರೆ ಅನಾಕನ ತಂದೆಯಾದ ಅರ್ಬನನಗರ).
೧೨. ಆದರೆ ಇದಕ್ಕೆ ಸೇರಿದ ಹೊಲಗಳನ್ನು ಮತ್ತು ಗ್ರಾಮಗಳನ್ನು ಯಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
೧೩. ಯಾಜಕ ಆರೋನನ ವಂಶದವರಿಗೆ ಮೇಲೆ ಹೇಳಿದ ಎರಡು ಕುಲಗಳಿಂದ ಹೆಬ್ರೋನ್ ಎಂಬ ಆಶ್ರಯ ನಗರ.
೧೪. ಲಿಬ್ನಾ, ಯತ್ತೀರ್, ಎಷ್ಟೆಮೋಹ
೧೫. ಹೋಲೋನ್, ದೆಬೀರ್, ಅಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಒಂಬತ್ತು ಗೋಮಾಳ ಸಹಿತವಾದ ನಗರಗಳು
೧೬. ***
೧೭. ಹಾಗೂ ಬೆನ್ಯಾಮೀನ್ ಕುಲದಿಂದ
೧೮. ಗಿಬ್ಯೋನ್, ಗೆಬ, ಗೆನತೋತ್, ಅಲ್ಮೋನ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು ದೊರೆತವು.
೧೯. ಯಾಜಕನಾದ ಆರೋನನ ವಂಶದವರ ಪಾಲಿಗೆ ಬಂದಂಥ ಗೋಮಾಳ ಸಹಿತವಾದ ನಗರಗಳು ಹದಿಮೂರು.
೨೦. ಲೇವಿಯರಾದ ಕೆಹಾತ್ಯರ ಉಳಿದ ಕುಟುಂಬಗಳಿಗೆ
೨೧. ಎಫ್ರಯಿಮ್ ಸೊತ್ತಿನಿಂದ ಬೆಟ್ಟದಲ್ಲಿರುವ ಶೆಕೆಮೆಂಬ ಆಶ್ರಯ ನಗರ,
೨೨. ಗೆಜೆರ್, ಕಿದ್ ಚೈಮ್ ಹಾಗೂ ಬೇತ್ ಹೋರೋನ್ ಎಂಬ ಗೋಮಾಳಸಹಿತವಾದ ನಾಲ್ಕು ನಗರಗಳು,
೨೩. ದಾನ್ಯರ ಸೊತ್ತಿನಿಂದ ಎಲ್ಲೆಕೇ, ಗಿಬ್ಬೆತೋನ್,
೨೪. ಅಯ್ಯಾಲೋನ್, ಗತ್ ರಿಮ್ಮೋನ್ ಎಂಬ ಗೋಮಾಳಸಹಿತವಾದ ನಾಲ್ಕು ಪಟ್ಟಣಗಳು,
೨೫. ಮನಸ್ಸೆಕುಲದ ಅರ್ಧಜನರ ಸೊತ್ತಿನಿಂದ ತಾನಾಕ್, ಗತ್ ರಿಮ್ಮೋನ್ ಎಂಬ ಎರಡು ಗೋಮಾಳಸಹಿತವಾದ ನಗರಗಳು ಚೀಟಿನಿಂದ ದೊರಕಿದವು.
೨೬. ಒಟ್ಟಾರೆ ಕೆಹಾತ್ಯರಿಗೆ ಸಿಕ್ಕಿದಂಥ ಗೋಮಾಳ ಸಹಿತವಾದ ನಗರಗಳು ಹತ್ತು.
೨೭. ಗೇರ್ಷೋನ್ಯರ ಕುಟುಂಬ಼ಗಳಿಗೆ ಅರ್ಧ ಮನಸ್ಸೆಯವರ ಸೊತ್ತಿನಿಂದ ದೊರಕಿದವುಗಳು ಇವು: ಕೊಲೆ ಮಾಡಿದವನಿಗೆ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ನಗರಗಳು;
೨೮. ಇಸ್ಸಾಕಾರ್ ಸೊತ್ತಿನಿಂದ ಕಿಷ್ಯೋನ್, ದಾಬೆರತ್
೨೯. ಯರ್ಮೂತ್, ಎಂಗನ್ನೀಮ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;
೩೦. ಆಶೇರ್ ಕುಲದಿಂದ ಮಿಶಾಲ್, ಅಬ್ದೋನ್,
೩೧. ಹೆಲ್ಕಾತ್, ರೆಹೋಬ್‍ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;
೩೨. ನಫ್ತಾಲಿ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯನಗರವಾದ ಗಲಿಲೇಯದ ಕೆದೆಷ್, ಹಮ್ಮೋತ್ ದೋರ್, ಕರ್ತಾನ್ ಎಂಬ ಗೋಮಾಳ ಸಹಿತವಾದ ಮೂರು ನಗರಗಳು.
೩೩. ಹೀಗೆ ಗೇರ್ಷೋನ್ಯರಿಗೆ ಸಿಕ್ಕಿದ ಗೋಮಾಳ ಸಹಿತವಾದ ಒಟ್ಟು ನಗರಗಳು ಹದಿಮೂರು.
೩೪. ಮಿಕ್ಕ ಲೇವಿಯರಾದ ಮೆರಾರೀ ಗೋತ್ರದವರಿಗೆ ಜೆಬುಲೂನ್ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,
೩೫. ದಿಮ್ನಾ ಹಾಗೂ ನಹಲಾಲ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;
೩೬. ರೂಬೇನ್ಯರ ಸೊತ್ತಿನಿಂದ ಬೆಚೆರ್, ಯಹಚಾ,
೩೭. ಕೆದೇಮೋತ್ ಹಾಗೂ ಮೇಫಾಗತ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;
೩೮. ಗಾದ್ಯರ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,
೩೯. ಹೆಷ್ಬೋನ್ ಹಾಗೂ ಯಗ್ಜೇರ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು ಸಿಕ್ಕಿದವು.
೪೦. ಮಿಕ್ಕ ಲೇವಿಯರಾದ ಮೆರಾರೀ ಗೋತ್ರಗಳಿಗೆ ಚೀಟಿನಿಂದ ಹೀಗೆ ದೊರೆತ ನಗರಗಳು ಒಟ್ಟು ಹನ್ನೆರಡು.
೪೧. ಲೇವಿಯರಿಗೆ ಇಸ್ರಯೇಲರ ನಡುವೆ ದೊರಕಿದ ಗೋಮಾಳ ಸಹಿತವಾದ ನಗರಗಳು ಒಟ್ಟು ನಾಲ್ವತ್ತೆಂಟು.
೪೨. ಈ ನಗರಗಳಲ್ಲಿ ಪ್ರತಿ ಒಂದಕ್ಕೂ ಗೋಮಾಳವಿರುತ್ತದೆ. ಎಲ್ಲ ನಗರಗಳಲ್ಲೂ ಹೀಗೆಯೇ ಇದೆ.
೪೩. ಸರ್ವೇಶ್ವರಸ್ವಾಮಿ ಇಸ್ರಯೇಲರ ಪೂರ್ವಜರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ನಾಡನ್ನು ಹೀಗೆ ಅವರಿಗೆ ಕೊಟ್ಟರು. ಇಸ್ರಯೇಲರು ಅದನ್ನು ವಶಪಡಿಸಿಕೊಂಡು ಅದರಲ್ಲಿ ವಾಸಮಾಡಿದರು.
೪೪. ಸರ್ವೇಶ್ವರ ಅವರ ಪೂರ್ವಜರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲೆಡೆಯಲ್ಲೂ ಶಾಂತಿಸಮಾಧಾನವನ್ನು ಅನುಗ್ರಹಿಸಿದರು. ಶತ್ರುಗಳಾರು ಅವರನ್ನು ಪ್ರತಿಭಟಿಸಿ ನಿಲ್ಲಲಿಲ್ಲ. ಎಲ್ಲರೂ ಅವರ ಕೈವಶವಾದರು.
೪೫. ಸರ್ವೇಶ್ವರ ಇಸ್ರಯೇಲರಿಗೆ ಮಾಡಿದ ಅತ್ಯುನ್ನತ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲವೂ ನೆರವೇರಿದವು.

ಯೊಹೋಶುವ ೨೨:೧-೩೪
೧. ಯೆಹೋಶುವನು ರೂಬೇನ್ಯರನ್ನು, ಗಾದ್ಯರನ್ನು ಹಾಗೂ ಮನಸ್ಸೆಕುಲದ ಅರ್ಧಜನರನ್ನು ಕರೆಸಿ ಅವರಿಗೆ,
೨. “ನೀವು ಸರ್ವೇಶ್ವರನ ದಾಸನಾದ ಮೋಶೆಯು ವಿಧಿಸಿದ್ದ ಎಲ್ಲವನ್ನು ಕೈಗೊಂಡಿದ್ದೀರಿ. ನಾನು ಆಜ್ಞಾಪಿಸಿದ್ದನ್ನು ನೆರವೇರಿಸಿದಿರಿ.
೩. ಈ ಕಾಲವೆಲ್ಲ ನೀವು ನಿಮ್ಮ ಸಹೋದರರನ್ನು ಕೈಬಿಡಲಿಲ್ಲ.
೪. ಅವರು ತಮ್ಮ ವಾಗ್ದಾನಕ್ಕನುಸಾರ ನಿಮ್ಮ ಸಹೋದರರಿಗೆ ಈಗ ನೆಮ್ಮದಿಯನ್ನು ದಯಪಾಲಿಸಿದ್ದಾರೆ. ಆದುದರಿಂದ ಸರ್ವೇಶ್ವರನ ದಾಸನಾದ ಮೋಶೆ ಜೋರ್ಡನಿನ ಆಚೆಕಡೆ ನಿಮಗೆ ಕೊಟ್ಟ ಆಸ್ತಿಯನ್ನು ಅನುಭವಿಸುತ್ತಿರುವ ನಿಮ್ಮ ನಿಮ್ಮ ನಿವಾಸಿಗಳ ಬಳಿಗೆ ನೀವು ಹೋಗಬಹುದು.
೫. ಆದರೆ ಸರ್ವೇಶ್ವರನ ದಾಸ ಮೋಶೆಯು ನಿಮಗೆ ಕೊಟ್ಟ ಧರ್ಮಶಾಸ್ತ್ರವನ್ನೂ ವಿಧಿಗಳನ್ನೂ ಜಾಗರೂಕತೆಯಿಂದ ಕೈಗೊಳ್ಳಿರಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾರ್ಗದಲ್ಲಿ ನಡೆಯಿರಿ; ಅವರ ಆಜ್ಞೆಗಳನ್ನು ಕೈಗೊಂಡು ಅವರನ್ನೇ ನೆಚ್ಚಿಕೊಂಡು ಪೂರ್ಣ ಮನಸ್ಸಿನಿಂದಲೂ ಪೂರ್ಣ ಪ್ರಾಣದಿಂದಲೂ ಅವರಿಗೆ ಸೇವೆ ಸಲ್ಲಿಸಿರಿ,” ಎಂದು ಹೇಳಿದನು.
೬. ಇದಲ್ಲದೆ ಅವರನ್ನು ಆಶೀರ್ವದಿಸಿ ಕಳಿಸಿದನು. ಅವರು ತಮ್ಮ ತಮ್ಮ ನಿವಾಸಗಳಿಗೆ ಹೋದರು.
೭. (ಮೋಶೆ ಮನಸ್ಸೆಕುಲದ ಅರ್ಧಜನರಿಗೆ ಬಾಷಾನಿನಲ್ಲಿ ಪಾಲನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಜೋರ್ಡನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟಿದ್ದನು). ಯೆಹೋಶುವ ಅವರನ್ನು ಹೀಗೆ ಆಶೀರ್ವದಿಸಿ ತಮ್ಮ ಸ್ವಂತ ಸ್ಥಳಗಳಿಗೆ ಕಳಿಸುವಾಗ ಅವರಿಗೆ,
೮. “ನೀವು ಬಹಳ ಆಸ್ತಿಯುಳ್ಳವರಾಗಿ ದನಕರು, ಬೆಳ್ಳಿಬಂಗಾರ, ಕಂಚು ಕಬ್ಬಿಣ, ವಸ್ತ್ರ ಮೊದಲಾದ ವಸ್ತುಗಳನ್ನು ತೆಗೆದುಕೊಂಡು ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ. ನೀವು ಶತ್ರುಗಳಿಂದ ಪಡೆದ ಕೊಳ್ಳೆಯಲ್ಲಿ ನಿಮ್ಮ ಸಹೋದರರಿಗೂ ಪಾಲುಕೊಡಿ,” ಎಂದನು.
೯. ಆಗ ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಕುಲದ ಅರ್ಧಜನರು ಕಾನಾನ್ ನಾಡಿನ ಶಿಲೋವಿನಲ್ಲಿದ್ದ ಇಸ್ರಯೇಲರನ್ನು ಬಿಟ್ಟು ಸರ್ವೇಶ್ವರನ ಆಜ್ಞೆಗನುಸಾರ ಮೋಶೆಯಿಂದ ತಮಗೆ ದೊರಕಿದ ಸೊತ್ತಾದ ಗಿಲ್ಯಾದ್ ನಾಡಿಗೆ ಹೋದರು.
೧೦. ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಕುಲದ ಅರ್ಧಜನರು ಕಾನಾನ್ ನಾಡಿನಲ್ಲಿರುವ ಜೋರ್ಡನ್ ತೀರಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ಮಹಾಬಲಿಪೀಠವನ್ನು ಕಟ್ಟಿದರು.
೧೧. ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು ಇಸ್ರಯೇಲ್ ನಾಡಾದ ಕಾನಾನಿನ ಪೂರ್ವಕ್ಕಿರುವ ಜೋರ್ಡನ್ ನದಿಯ ತೀರಪ್ರದೇಶದಲ್ಲಿ ಬಲಿಪೀಠವನ್ನು ಕಟ್ಟಿದ್ದಾರೆಂಬ ಸುದ್ದಿ ಮಿಕ್ಕ ಇಸ್ರಯೇಲರಿಗೆ ಮುಟ್ಟಿತು.
೧೨. ಅವರೆಲ್ಲರು ಶಿಲೋವಿನಲ್ಲಿ ಕೂಡಿಬಂದು ಬಲಿಪೀಠಸ್ಥಾಪಕರ ವಿರುದ್ಧ ಯುದ್ಧಕ್ಕೆ ಹೋರಾಡಲು ಸಿದ್ಧರಾದರು.
೧೩. ಅದಕ್ಕೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಕುಲದ ಅರ್ಧಜನರ ಬಳಿಗೆ ಯಾಜಕ ಎಲ್ಲಾಜಾರನ ಮಗ ಫೀನೆಹಾಸನನ್ನು
೧೪. ಮತ್ತು ಕುಲಕ್ಕೆ ಒಬ್ಬನಂತೆ ಹತ್ತುಮಂದಿ ನಾಯಕರನ್ನೂ ಕಳಿಸಿದರು. ಇವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕುಲಗೋತ್ರ-ಕುಟುಂಬಗಳಲ್ಲಿ ಮುಖ್ಯಸ್ಥನಾಗಿದ್ದನು.
೧೫. ಇವರು ಗಿಲ್ಯಾದಿನಲ್ಲಿದ್ದ ರೂಬೇನ್ಯರ, ಗಾದ್ಯರ ಹಾಗು ಮನಸ್ಸೆಕುಲದ ಅರ್ಧಜನರ ಬಳಿಗೆ ಬಂದು,
೧೬. “ಸರ್ವೇಶ್ವರನ ಸರ್ವಸಭೆ ಹೇಳುವ ಮಾತಿದು: ನೀವು ಇಸ್ರಯೇಲ್ ದೇವರಿಗೆ ವಿರುದ್ಧ ಇಂಥ ದ್ರೋಹ ಮಾಡಿದ್ದೇಕೆ? ನೀವು ನಿಮಗಾಗಿಯೇ ಒಂದು ಬಲಿಪೀಠವನ್ನು ಕಟ್ಟಿಕೊಂಡಿದ್ದೀರಿ. ಇದರಿಂದ ನೀವು ಸರ್ವೇಶ್ವರನಿಗೆ ವಿಮುಖವಾದಂತಾಯಿತು; ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದಂತಾಯಿತು.
೧೭. ನಾವು ಪೆಗೋರದಲ್ಲಿ ಅಪರಾಧಿಗಳಾದದ್ದು ಸಾಕಾಗಲಿಲ್ಲವೆ? ಅದರ ನಿಮಿತ್ತ ಸರ್ವೇಶ್ವರನ ಸಭೆಗೇ ಜಾಡ್ಯ ತಗಲಿತು. ಆದ್ದರಿಂದ ನಾವು ಇಂದಿಗೂ ಶುದ್ಧರಾಗಲಿಲ್ಲ.
೧೮. ಇಂತಿರುವಲ್ಲಿ ನೀವು ಮತ್ತೆ ಸರ್ವೇಶ್ವರನನ್ನು ಬಿಟ್ಟುಬಿಡುತ್ತೀರೋ? ನೀವು ಇಂದು ಸರ್ವೇಶ್ವರನಿಗೆ ವಿರುದ್ಧ ತಿರುಗಿಬಿದ್ದರೆ ನಾಳೆಯೇ ಅವರ ಕೋಪಾಗ್ನಿ ಇಸ್ರಯೇಲ್ ಸರ್ವಸಭೆಯ ಮೇಲೆ ಉರಿಯತೊಡಗುವುದು.
೧೯. ನಿಮ್ಮ ನಾಡು ಅಶುದ್ಧವಾಗಿದೆಯೆಂದು ತೋರಿದರೆ ಸರ್ವೇಶ್ವರನ ಗುಡಾರವಿರುವ ಅವರ ಸ್ವಂತ ನಾಡಿಗೆ ಬಂದು ನಮ್ಮ ಮಧ್ಯೆಯಿರುವ ಸೊತ್ತನ್ನು ತೆಗೆದುಕೊಳ್ಳಿ. ನಮ್ಮ ದೇವರಾದ ಸರ್ವೇಶ್ವರನ ಬಲಿಪೀಠ ಒಂದನ್ನು ಬಿಟ್ಟು ನಿಮಗಾಗಿ ಇನ್ನೊಂದನ್ನು ಕಟ್ಟಿಕೊಂಡು ಸರ್ವೇಶ್ವರನಿಗೂ ನಮಗೂ ವಿರುದ್ಧ ತಿರುಗಿಬೀಳಬೇಡಿ.
೨೦. ಜೆರಹನ ಮಗ ಆಕಾನನು ಸರ್ವೇಶ್ವರನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದ. ಆಗ ಸರ್ವೇಶ್ವರನ ಕೋಪ ಇಸ್ರಯೇಲರ ಸರ್ವಸಭೆಯ ಮೇಲೆ ಎರಗಿತು. ಅವನ ಪಾಪದ ನಿಮಿತ್ತ ಅವನೊಡನೆ ಅನೇಕರು ಸಾಯಬೇಕಾಯಿತಲ್ಲವೆ?” ಎಂದು ಹೇಳಿದರು.
೨೧. ಆಗ ರೂಬೇನ್ಯರು, ಗಾದ್ಯರು ಹಾಗು ಮನಸ್ಸೆಕುಲದ ಅರ್ಧಜನರು, ಇಸ್ರಯೇಲಿನ ಆ ಕುಲಾಧಿಪತಿಗಳಿಗೆ ಹೀಗೆಂದು ಉತ್ತರಿಸಿದರು:
೨೨. “ದೇವಾಧಿದೇವರಾದ ಸರ್ವೇಶ್ವರ ಇದಕ್ಕೆ ಸಾಕ್ಷಿ; ಆ ದೇವಾಧಿದೇವ ಸರ್ವೇಶ್ವರಸ್ವಾಮಿಗೆ ಇದು ಗೊತ್ತಿದೆ. ಇಸ್ರಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದವರು ಆಗಿದ್ದರೆ ಆ ಸ್ವಾಮಿ ನಮ್ಮನ್ನು ಇಂದೇ ಜೀವದಿಂದುಳಿಸದಿರಲಿ.
೨೩. ನಾವು ಸರ್ವೇಶ್ವರನಿಂದ ವಿಮುಖರಾಗಿ ದಹನಬಲಿಯನ್ನಾಗಲಿ, ಸಮಾಧಾನ ಬಲಿಯನ್ನಾಗಲಿ, ಧಾನ್ಯನೈವೇದ್ಯವನ್ನಾಗಲಿ ಸಮರ್ಪಿಸುವುದಕ್ಕಾಗಿ ಈ ಬಲಿಪೀಠವನ್ನು ಕಟ್ಟಿದ್ದರೆ ಸರ್ವೇಶ್ವರನೇ ನಮ್ಮನ್ನು ಶಿಕ್ಷಿಸಲಿ.
೨೪. ನಾವು ಇದನ್ನು ಕಟ್ಟಿದ್ದು ಒಂದು ವಿಶೇಷ ಉದ್ದೇಶಕ್ಕಾಗಿ; ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಯೇಲಿನ ದೇವರಾದ ಸರ್ವೇಶ್ವರನಲ್ಲಿ ನಿಮಗೇನು ಪಾಲಿದೆ?’
೨೫. ರೂಬೇನ್ಯರೇ, ಗಾದ್ಯರೇ, ಸರ್ವೇಶ್ವರ ನಿಮಗೂ ನಮಗೂ ನಡುವೆ ಈ ಜೋರ್ಡನ್ ನದಿಯನ್ನು ಸರಹದ್ದಾಗಿ ಇಟ್ಟಿದ್ದಾರೆ. ಸರ್ವೇಶ್ವರನಲ್ಲಿ ನಿಮಗೆ ಯಾವ ಪಾಲೂ ಇಲ್ಲ, ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೇವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು.
೨೬. ಈ ಕಾರಣದಿಂದಲೇ, ‘ಬನ್ನಿ, ಒಂದು ಬಲಿಪೀಠವನ್ನು ಕಟ್ಟೋಣ, ಅದು ದಹನಬಲಿ ಅಥವಾ ಬೇರೆ ಬಲಿಗಳನ್ನು ಸಮರ್ಪಿಸುವುದಕ್ಕಲ್ಲ,
೨೭. ಆದರೆ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿ, ಸಮರ್ಪಣಬಲಿ, ಶಾಂತಿಸಮಾಧಾನದ ಬಲಿ ಮುಂತಾದುವುಗಳನ್ನು ಅರ್ಪಿಸಿ ಆರಾಧಿಸುವುದಕ್ಕೆ ನಿಮಗೆ ಹಕ್ಕು ಉಂಟೆಂಬುದಕ್ಕೆ ಇದು ಗುರುತಾಗಿರಲಿ. ನಮಗೂ ನಿಮಗೂ ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಇದು ಸಾಕ್ಷಿಯಾಗಿರಲಿ.’ ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಸರ್ವೇಶ್ವರನಲ್ಲಿ ನಿಮಗೆ ಪಾಲಿಲ್ಲ’ ಎಂದು ಹೇಳುವುದಕ್ಕೆ ಆಸ್ಪದವಿರದು.
೨೮. ಒಂದು ವೇಳೆ ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದ್ದೇ ಆದರೆ ನಾವು ಅವರಿಗೆ ‘ಸರ್ವೇಶ್ವರನ ಬಲಿಪೀಠವನ್ನು ಹೋಲುವ ಈ ವೇದಿಕೆಯನ್ನು ನೋಡಿ: ನಮ್ಮ ಪೂರ್ವಜರು ಇದನ್ನು ದಹನಬಲಿ, ಸಮರ್ಪಣ ಬಲಿಗಳನ್ನು ಅರ್ಪಿಸುವುದಕ್ಕಾಗಿ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯೆ ಸಾಕ್ಷಿಯಾಗಿದೆಯಷ್ಟೆ,’ ಎಂದು ಹೇಳುವೆವು.
೨೯. ನಮ್ಮ ದೇವರಾದ ಸರ್ವೇಶ್ವರನ ಗುಡಾರದ ಮುಂದಿರುವ ಬಲಿಪೀಠದ ಹೊರತು ದಹನಬಲಿ, ಧಾನ್ಯನೈವೇದ್ಯ, ಸಮಾಧಾನಬಲಿ ಮೊದಲಾದವುಗಳನ್ನು ಸಮರ್ಪಿಸಲು ಬೇರೊಂದು ಬಲಿಪೀಠವನ್ನು ಕಟ್ಟಿ ಸರ್ವೇಶ್ವರನಿಗೆ ವಿಮುಖರಾಗಿ ದ್ರೋಹಿಗಳಾಗುವುದು ನಮಗೆ ದೂರ ಆಗಿರಲಿ,” ಎಂದರು.
೩೦. ಯಾಜಕ ಫೀನೆಹಾಸನು ಮತ್ತು ಅವನ ಜೊತೆಯಲ್ಲಿ ಬಂದಿದ್ದ ಕುಲಾಧಿಪತಿಗಳು, ಇಸ್ರಯೇಲಿನ ಮುಖ್ಯಸ್ಥರು ರೂಬೇನ್, ಗಾದ್ ಹಾಗೂ ಮನಸ್ಸೆಕುಲಗಳವರ ಈ ಮಾತುಗಳನ್ನು ಕೇಳಿ ಸಂತೋಷಪಟ್ಟರು.
೩೧. ಯಾಜಕ ಎಲ್ಲಾಜಾರನ ಮಗ ಫೀನೆಹಾಸನು ರೂಬೇನ್, ಗಾದ್, ಮನಸ್ಸೆ ಕುಲಗಳವರಿಗೆ, “ಸರ್ವೇಶ್ವರ ನಿಮ್ಮ ಮಧ್ಯೆ ಇರುತ್ತಾರೆಂದು ಈಗ ಅರಿವಾಯಿತು. ನೀವು ಸರ್ವೇಶ್ವರಸ್ವಾಮಿಗೆ ವಿರುದ್ಧ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಇಸ್ರಯೇಲರನ್ನು ಆತನ ಶಿಕ್ಷಾಹಸ್ತದಿಂದ ತಪ್ಪಿಸಿದಿರಿ,” ಎಂದನು.
೩೨. ಯಾಜಕ ಎಲ್ಲಾಜಾರನ ಮಗ ಫೀನೆಹಾಸನು ಮತ್ತು ಮುಖ್ಯಸ್ಥರು ಗಿಲ್ಯಾದ್ ನಾಡಿನಲ್ಲಿದ್ದ ರೂಬೇನ್ಯರನ್ನು ಹಾಗೂ ಗಾದ್ಯರನ್ನು ಬೀಳ್ಕೊಟ್ಟು ಕಾನಾನ್ ನಾಡಿನಲ್ಲಿದ್ದ ಇಸ್ರಯೇಲರ ಬಳಿಗೆ ಬಂದು ಅವರಿಗೆ ಈ ಸಮಾಚಾರವನ್ನು ತಿಳಿಸಿದರು.
೩೩. ಅವರು ಕೂಡ ಬಹಳ ಸಂತೋಷಪಟ್ಟು ದೇವರಿಗೆ ಧನ್ಯವಾದ ಸಲ್ಲಿಸಿದರು. ರೂಬೇನ್ ಹಾಗೂ ಗಾದ್ ಕುಲಗಳೊಡನೆ ಯುದ್ಧಮಾಡಿ ಅವರ ನಾಡನ್ನು ಹಾಳುಮಾಡಬೇಕೆಂಬ ಆಲೋಚನೆಯನ್ನು ತೊರೆದುಬಿಟ್ಟರು.
೩೪. ರೂಬೇನ್ಯರು ಹಾಗೂ ಗಾದ್ಯರು ‘ಸರ್ವೇಶ್ವರನೇ ದೇವರು’ ಎಂಬುದಕ್ಕೆ ಈ ಬಲಿಪೀಠವೇ ಸಾಕ್ಷಿ ಎಂದು ಹೇಳಿ ಅದಕ್ಕೆ ‘ಏದ್’ ಎಂದು ಹೆಸರಿಟ್ಟರು.

ಕೀರ್ತನೆಗಳು ೪೬:೭-೧೧
೭. ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದುರ್ಗವು II
೮. ಪ್ರಭುವಿನ ಕಾರ್ಯಗಳ ನೋಡಬನ್ನಿ I ಇಳೆಯೊಳಗೆಸಗಿದ ಪವಾಡಗಳನು ನೋಡಿ II
೯. ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು I ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು I ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು II
೧೦. ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು I ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’ II
೧೧. ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದೇವರು II

ಜ್ಞಾನೋಕ್ತಿಗಳು ೧೪:೧೨-೧೩
೧೨. ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೊಯ್ಯುವ ಹಾದಿಯಾಗಬಹುದು.
೧೩. ನಗೆಯಲ್ಲೂ ಅಳು ಉಂಟು; ನಲಿವು ನೋವಾಗಿ ಕೊನೆಗೊಳ್ಳುವುದುಂಟು.

ಲೂಕನು ೧೩:೧-೨೨
೧. ಅದೇ ಸಮಯಕ್ಕೆ ಅಲ್ಲಿದ್ದವರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು.
೨. ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ?
೩. ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ.
೪. ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸಿತ್ತೀರೋ?
೫. ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು.
೬. ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ.
೭. ತೋಟಗಾರನನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದುಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?’ ಎಂದು ಹೇಳಿದ.
೮. ಅದಕ್ಕೆ ತೋಟಗಾರನು, ‘ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿ ತೆಗೆದು ಗೊಬ್ಬರ ಹಾಕುತ್ತೇನೆ.
೯. ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,’ ಎಂದನು.”
೧೦. ಒಂದು ಸಬ್ಬತ್‍ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು.
೧೧. ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ.
೧೨. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, “ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ,
೧೩. ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.
೧೪. ಯೇಸು ಸಬ್ಬತ್‍ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, “ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್‍ದಿನದಲ್ಲಿ ಮಾತ್ರ ಕೂಡದು,” ಎಂದನು.
೧೫. ಪ್ರಭು, ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್‍ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ?
೧೬. ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್‍ದಿನ ಬಿಡಿಸಬಾರದಿತ್ತೆ?” ಎಂದರು.
೧೭. ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.
೧೮. ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ?
೧೯. ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು.
೨೦. ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?
೨೧. ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
೨೨. ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು.