A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೧೧

ಯೊಹೋಶುವ ೧೧:೧-೨೩
೧. ಹಾಚೋರಿನ ಅರಸ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮದೋನಿನ ಅರಸನಿಗೂ ಶಿಮ್ರೋನಿನ ಅರಸನಿಗೂ ಹಾಗು ಅಕ್ಷಾಫಿನ ಅರಸನಿಗೂ ಕರೆಕಳಿಸಿದನು.
೨. ಉತ್ತರದಿಕ್ಕಿನ ಪರ್ವತಪ್ರದೇಶ, ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ಕಣಿವೆಪ್ರದೇಶ, ಇಳಿಜಾರು ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಮಲೆನಾಡಿನ ಪ್ರದೇಶ, ಇವುಗಳ ಅರಸರಿಗೂ
೩. ಪೂರ್ವ ಪಶ್ಚಿಮಗಳಲ್ಲಿರುವ ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಮಲೆನಾಡಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ನೋನಿನ ಬುಡದಲ್ಲಿ ಮಿಚ್ಪಾನಾಡಿನಲ್ಲಿದ್ದ ಹಿವ್ವಿಯರು ಇವರಿಗೂ ಹೇಳಿಕಳಿಸಿದನು.
೪. ಅವರು ಒಡನೆ ಬಹುರಥಾಶ್ವಗಳಿಂದ ಕೂಡಿದ್ದ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.
೫. ಇಸ್ರಯೇಲರೊಡನೆ ಯುದ್ಧಮಾಡಲು ಅರಸರೆಲ್ಲರು ಒಟ್ಟುಗೂಡಿ ಮೇರೋಮ್ ಜಲಾಶಯದ ಬಳಿ ಇಳಿದುಕೊಂಡರು.
೬. ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೀನು ಅವರಿಗೆ ಹೆದರಬೇಡ; ನಾಳೆ ಇದೇ ವೇಳೆಗೆ ಅವರನ್ನು ಇಸ್ರಯೇಲರಿಗೆ ಒಪ್ಪಿಸುವೆನು. ಇಸ್ರಯೇಲರು ಅವರನ್ನು ಹತಿಸಿಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕಡಿದು ರಥಗಳನ್ನು ಸುಟ್ಟುಬಿಡಬೇಕು,” ಎಂದರು.
೭. ಯೆಹೋಶುವನು ತನ್ನ ಎಲ್ಲ ಯೋಧರೊಡನೆ ಹೊರಟು ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಬಿದ್ದನು.
೮. ಸರ್ವೇಶ್ವರ ಅವರನ್ನು ಇಸ್ರಯೇಲರ ಕೈವಶ ಮಾಡಿದರು. ಇವರು ಅವರನ್ನು ದೊಡ್ಡ ಚೀದೋನ್ ಹಾಗು ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಮತ್ತು ಪೂರ್ವ ದಿಕ್ಕಿನಲ್ಲಿರುವ ಮಿಚ್ಫೆಯ ಬಯಲಿನವರೆಗೂ ಹಿಂದಟ್ಟಿ, ಒಬ್ಬನೂ ಉಳಿಯದಂತೆ ಸದೆಬಡಿದರು.
೯. ಯೆಹೋಶುವನು ಸರ್ವೇಶ್ವರನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕಡಿದು ರಥಗಳನ್ನು ಸುಟ್ಟುಬಿಟ್ಟನು.
೧೦. ಕೂಡಲೆ ಯೆಹೋಶುವನು ಹಿಂದಿರುಗಿ ಹಾಚೋರನ್ನೂ ಅದರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಏಕೆಂದರೆ ಹಾಚೋರ್ ಪೂರ್ವಕಾಲದಲ್ಲಿ ಆ ರಾಜ್ಯಗಳಲ್ಲೆಲ್ಲಾ ಶ್ರೇಷ್ಠವಾದುದು.
೧೧. ಇಸ್ರಯೇಲರು ಅದರಲ್ಲಿದ್ದ ಜನರನ್ನೆಲ್ಲಾ ಕತ್ತಿಗೆ ಈಡಾಗಿಸಿ ಹಾಚೋರ್ ನಗರವನ್ನು, ಪ್ರಾಣಿಯೊಂದೂ ಉಳಿಯದಂತೆ ಸುಟ್ಟುಬಿಟ್ಟರು.
೧೨. ಯೆಹೋಶುವನು ಆ ಬೇರೆ ಅರಸರನ್ನು, ಅವರ ಎಲ್ಲ ನಗರಗಳನ್ನು ಹಿಡಿದು ಸರ್ವೇಶ್ವರನ ದಾಸ ಮೋಶೆಯ ಆಜ್ಞೆಯಂತೆ ಅವರನ್ನು ಕತ್ತಿಯಿಂದ ನಾಶಮಾಡಿದನು.
೧೩. ಯೆಹೋಶುವನು ಸುಟ್ಟ ಹಾಚೋರ್ ಒಂದನ್ನು ಬಿಟ್ಟರೆ ಇಸ್ರಯೇಲರು ಮಲೆನಾಡಿನ ಬೇರೆ ಯಾವ ನಗರವನ್ನೂ ಸುಡಲಿಲ್ಲ.
೧೪. ಅವುಗಳಲ್ಲಿದ್ದ ಪಶುಪ್ರಾಣಿಗಳನ್ನೂ ಸಾಮಾನು ಸರಂಜಾಮುಗಳನ್ನೂ ಇಸ್ರಯೇಲರು ಕೊಳ್ಳೆಹೊಡೆದರು. ಜನರನ್ನಾದರೋ ಒಬ್ಬರನ್ನೂ ಬಿಡದೆ ಕತ್ತಿಯಿಂದ ನಿರ್ಮೂಲಮಾಡಿದರು.
೧೫. ಸರ್ವೇಶ್ವರನ ದಾಸ ಮೋಶೆ, ದೇವರು ತನಗೆ ಹೇಳಿದ್ದನ್ನೆಲ್ಲಾ ಯೆಹೋಶುವನಿಗೆ ಹೇಳಿದ್ದನು. ಅದರಂತೆಯೇ ಯೆಹೋಶುವ ಮಾಡಿದನು. ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ್ದರಲ್ಲಿ ಯೆಹೋಶುವ ಒಂದನ್ನೂ ಮೀರಲಿಲ್ಲ.
೧೬. ಹೀಗೆ ಮಲೆನಾಡಿನ ಪ್ರದೇಶ, ದಕ್ಷಿಣ ಪ್ರಾಂತ್ಯ, ಗೋಷೆನ್ ನಾಡು, ಇಳಿಜಾರಿನ ಪ್ರದೇಶ, ಕಣಿವೆ ಪ್ರದೇಶ, ಇಸ್ರಯೇಲ್ ನಾಡಿನ ಪರ್ವತ ಪ್ರಾಂತ್ಯ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವೆಲ್ಲವೂ ಯೆಹೋಶುವನಿಗೆ ಸ್ವಾಧೀನವಾದವು.
೧೭. ಅವನು ಸೇಯೀರಿನ ಹಾದಿಯಲ್ಲಿದ್ದ ಹಾಲಾಕ್ ಬೆಟ್ಟದಿಂದ ಹೆರ್ಮೋನಿನ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ನಗರದವರೆಗೂ ಇರುವ ಪ್ರದೇಶವನ್ನೆಲ್ಲಾ ತೆಗೆದುಕೊಂಡು ಅದರ ಅರಸರನ್ನೆಲ್ಲಾ ಹಿಡಿದು ಸಂಹರಿಸಿಬಿಟ್ಟನು.
೧೮. ಯೆಹೋಶುವ ಈ ಎಲ್ಲಾ ಅರಸರೊಡನೆ ಬಹುದಿನಗಳ ತನಕ ಯುದ್ಧಮಾಡಿದನು.
೧೯. ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತು ಯಾವ ನಗರದವರೂ ಇಸ್ರಯೇಲರೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಯುದ್ಧದಿಂದಲೇ ವಶಮಾಡಿಕೊಳ್ಳಬೇಕಾಯಿತು.
೨೦. ಏಕೆಂದರೆ ಸರ್ವೇಶ್ವರ ಅವರ ಹೃದಯಗಳನ್ನು ಕಠಿಣಪಡಿಸಿ ಯುದ್ಧಕ್ಕೆ ಬರಮಾಡಿದ್ದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಇಸ್ರಯೇಲರು ಅವರೆಲ್ಲರನ್ನು ಕರುಣೆ ಇಲ್ಲದೆ ಸಂಹರಿಸಿದರು.
೨೧. ಅದೇ ಕಾಲದಲ್ಲಿ ಯೆಹೋಶುವನು ಹೆಬ್ರೋನ್, ದೆಬೀರ್ ಹಾಗೂ ಅನಾಬ್ ಎಂಬ ಊರುಗಳಲ್ಲೂ, ಜುದೇಯ ಮತ್ತು ಇಸ್ರಯೇಲ್ ಪ್ರಾಂತ್ಯಗಳ ಬೆಟ್ಟಗುಡ್ಡಗಳಲ್ಲೂ ಇದ್ದ ‘ಅನಾಕಿಮ್’ ಜನರನ್ನು ನಾಶಮಾಡಿ ಅವರ ನಗರಗಳನ್ನು ಹಾಳುಮಾಡಿದನು.
೨೨. ಇಸ್ರಯೇಲರ ಪ್ರಾಂತ್ಯದಲ್ಲಿ ಜನರಾರೂ ಉಳಿಯಲಿಲ್ಲ. ಗಾಜಾ, ಗತೂರು, ಅಷ್ಡೋದ್ ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದರು.
೨೩. ಸರ್ವೇಶ್ವರ ಮೋಶೆಯ ಮುಖಾಂತರ ವಾಗ್ದಾನ ಮಾಡಿದ್ದ ಪ್ರದೇಶವನ್ನೆಲ್ಲಾ ಯೆಹೋಶುವ ಹಿಡಿದುಕೊಂಡನು, ಇಸ್ರಯೇಲ್ ಕುಲಭಾಗಗಳಿಗನುಸಾರ ಅದನ್ನು ಹಂಚಿಕೊಟ್ಟನು. ಯುದ್ಧ ನಿಂತಿತು. ದೇಶದಲ್ಲೆಲ್ಲಾ ಶಾಂತಿಸಮಾಧಾನ ನೆಲೆಸಿತು.

ಯೊಹೋಶುವ ೧೨:೧-೨೪
೧. ಇಸ್ರಯೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನು ಮತ್ತು ಕಣಿವೆ ಪ್ರದೇಶದ ಪೂರ್ವಭಾಗವನ್ನು ಸ್ವಾಧೀನಮಾಡಿಕೊಂಡರು. ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.
೨. ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಇವನ ರಾಜ್ಯ, ಅರ್ನೋನ್ ಕಣಿವೆಯ ಅಂಚಿನಲ್ಲಿ ಇರುವ ಅರೋಯೇರ್ ನಗರವನ್ನು ಮತ್ತು ಆ ಕಣಿವೆಯಲ್ಲೇ ಇರುವ ನಗರವನ್ನು ಮೊದಲುಗೊಂಡು ಅಮ್ಮೋನಿಯರ ಮೇರೆಯಾಗಿರುವ ಯಬ್ಬೋಕ್ ನದಿಯ ತನಕವಿರುವ ಗಿಲ್ಯಾದಿನ ಅರ್ಧಪ್ರಾಂತ್ಯ,
೩. ಹಾಗೂ ಜೋರ್ಡನ್ ನದಿಯ ಪೂರ್ವದಲ್ಲಿ ಕಿನ್ನೆರೋತ್ ಸಮುದ್ರದಿಂದ ಲವಣ ಸಮುದ್ರ (ಮೃತ್ಯುಕಡಲು) ಎಣಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷಿಮೋತಿನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ಕಣಿವೆ ಪ್ರದೇಶ ಇವುಗಳಿಂದ ಕೂಡಿತ್ತು.
೪. ಅಷ್ಟರೋತ್ ಹಾಗೂ ಎದ್ರೈ ಎಂಬ ಊರುಗಳಲ್ಲಿ ವಾಸವಾಗಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ವಧಿತರಾದವರಲ್ಲಿ ಎರಡನೆಯವನು.
೫. ಇವನ ರಾಜ್ಯ, ಹೆರ್ಮೋನ್ ಮಲೆನಾಡು, ಸಲ್ಕಾನಗರ, ಗೆಷೂರ್ಯರ ಮತ್ತು ಮಾಕತೀಯರ ಮೇರೆಯವರೆಗಿದ್ದ ಬಾಷಾನ್ ನಾಡು, ಹೆಷ್ಬೋನಿನ ಅರಸನದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧಪ್ರಾಂತ್ಯ ಇವುಗಳಿಂದ ಕೂಡಿತ್ತು.
೬. ಸರ್ವೇಶ್ವರನ ದಾಸ ಮೋಶೆ ಇಸ್ರಯೇಲರ ಸಹಿತವಾಗಿ ಈ ಇಬ್ಬರನ್ನು ಸೋಲಿಸಿ ಅವರ ರಾಜ್ಯಗಳನ್ನು ರೂಬೇನ್ಯರಿಗೂ ಗಾದ್ಯರಿಗೂ ಮತ್ತು ಮನಸ್ಸೆಕುಲದ ಅರ್ಧಜನರಿಗೂ ಶಾಶ್ವತ ಸೊತ್ತಾಗಿ ಕೊಟ್ಟನು.
೭. ಯೆಹೋಶುವನು ಇಸ್ರಯೇಲರ ಸಮೇತ, ಜೋರ್ಡನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶ,
೮. ಇಳಿಜಾರಿನ ಪ್ರದೇಶ, ಕಣಿವೆ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣಪ್ರಾಂತ್ಯ ಇವುಗಳನ್ನೂ ಇವುಗಳನ್ನು ಆಳುತ್ತಿದ್ದ ಹಿತ್ತೀಯ, ಅಮೋರಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ ಅವರ ನಾಡುಗಳನ್ನು ಇಸ್ರಯೇಲ್ ಕುಲಭಾಗಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
೯. ಜೆರಿಕೋವಿನ ಅರಸ - ೧ ಬೇತೇಲಿನ ಹತ್ತಿರವಿರುವ ಆಯಿ ಎಂಬ ಊರಿನ ಅರಸ - ೧
೧೦. ಜೆರೂಸಲೇಮಿನ ಅರಸ - ೧ ಹೆಬ್ರೋನಿನ ಅರಸ - ೧ ಯರ್ಮೂತಿನ ಅರಸ - ೧
೧೧. ಲಾಕೀಷಿನ ಅರಸ - ೧ ಎಗ್ಲೋನಿನ ಅರಸ - ೧
೧೨. ಗೆಜೆರಿನ ಅರಸ - ೧
೧೩. ದೆಬೀರಿನ ಅರಸ - ೧
೧೪. ಗೆದೆರಿನ ಅರಸ - ೧ ಹೊರ್ಮದ ಅರಸ - ೧ ಅರಾದಿನ ಅರಸ - ೧
೧೫. ಲಿಬ್ನದ ಅರಸ - ೧ ಅದುಲ್ಲಾಮದ ಅರಸ - ೧
೧೬. ಮಕ್ಕೇದದ ಅರಸ - ೧ ಬೇತೇಲಿನ ಅರಸ - ೧
೧೭. ತಪ್ಪೂಹದ ಅರಸ - ೧ ಹೇಫೆರಿನ ಅರಸ - ೧
೧೮. ಅಷ್ಟಾರೋನಿನ ಅರಸ - ೧ ಅಫೇಕದ ಅರಸ - ೧
೧೯. ಮಾದೋನಿನ ಅರಸ - ೧ ಹಾಚೋರಿನ ಅರಸ - ೧ ಶಿಮ್ರೋನ್ಮೆರೋನಿನ ಅರಸ - ೧
೨೦. ಅಕ್ಷಾಫಿನ ಅರಸ - ೧ ತಾನಕದ ಅರಸ - ೧
೨೧. ಮೆಗಿದ್ದೋವಿನ ಅರಸ - ೧ ಕೆದೆಷಿನ ಅರಸ - ೧
೨೨. ಕರ್ಮೆಲ್ ಬೆಟ್ಟದ ಮೇಲಿರುವ ಯೊಕ್ನೆಯಾಮದ ಅರಸ - ೧
೨೩. ದೋರ್ ಬೆಟ್ಟದ ಮೇಲಿರುವ ದೋರಿನ ಅರಸ - ೧ ಗಿಲ್ಗಾಲಿನವರ ಅರಸ - ೧ ತಿರ್ಚದ ಅರಸ - ೧
೨೪. ಒಟ್ಟು ಅರಸರು ೩೧ ಮಂದಿ.

ಕೀರ್ತನೆಗಳು ೪೪:೪-೧೯
೪. ಯಕೋಬಿಗೆ ವಿಜಯ ಗಿಟ್ಟಿಸಿದಾತ I ನೀನಲ್ಲವೆ ದೇವಾ, ನನ್ನ ಅರಸ? II
೫. ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ I ಎದುರಾಳಿಯನು ತುಳಿವೆವು ನಿನ್ನ ಆವೇಶದಿಂದ II
೬. ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ I ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ II
೭. ಹಿಂಸಕರಿಂದ ಸಂರಕ್ಷಿಸುವಾತ ನೀನೆ I ಹಗೆಗಳಿಗೆ ಆಶಾಭಂಗ ತರುವಾತ ನೀನೆ II
೮. ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ I ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ II
೯. ಆದರೀಗ ನಮ್ಮನು ಕಡೆಗಣಿಸಿರುವೆ, ಕೈ ಬಿಟ್ಟಿರುವೆ I ನಮ್ಮ ಸೇನೆಗಳ ಸಂಗಡ ದೇವ, ಹೊರಟು ಬರದಿರುವೆ II
೧೦. ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ I ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ II
೧೧. ನಮ್ಮನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ ಕುರಿಗಳಂತೆ I ಚದರಿಸಿಬಿಟ್ಟಿರುವೆ ನಮ್ಮನು ಅನ್ಯ ಜನಾಂಗಗಳ ಮಧ್ಯೆ II
೧೨. ಬಿಡುಕಾಸಿಗಿಂತ ಕಡೆಗಾಣಿಸಿರುವೆ ನಿನ್ನ ಪ್ರಜೆಯನು I ಲಾಭವಿಲ್ಲದವರಂತೆ ವಿಕ್ರಯಿಸಿರುವೆ ಅದನು II
೧೩. ಪರರು ನಮ್ಮನು ಜರೆಯುವಂತೆ ಮಾಡಿರುವೆ I ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ II
೧೪. ಅನ್ಯಜನ ನಮ್ಮನಣಕಿಸಿ ತಲೆಯಾಡಿಸುವಂತೆ ಮಾಡಿರುವೆ I ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು ಬಿಟ್ಟಿರುವೆ II
೧೫. ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ I ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ II
೧೬. ದೂಷಕರ ನಿಂದೆಗೆ ಆಸ್ಪದನಾದೆ I ದ್ರೋಹಿಗಳ ವಕ್ರನೋಟಕೆ ಗುರಿಯಾದೆ II
೧೭. ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು ಮೀರಲಿಲ್ಲ I ಆದರೂ ಒದಗಿವೆಯಲ್ಲ ನಮಗೀ ಅನಾಹುತಗಳೆಲ್ಲ II
೧೮. ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ I ನಾವು ಅಗಲಲಿಲ್ಲ ನೀನು ತೋರಿದ ಮಾರ್ಗದಿಂದ II
೧೯. ಆದರೂ ನಮ್ಮನ್ನು ತಂದು ನಾಯಿನರಿಗಳ ಪಾಲಾಗಿಸಿರುವೆ I ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ ಮಾಡಿರುವೆ II

ಜ್ಞಾನೋಕ್ತಿಗಳು ೧೪:೧-೨
೧. ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.
೨. ಸನ್ಮಾರ್ಗಿಯು ಸರ್ವೇಶ್ವರನಿಗೆ ಭಯಪಡುತ್ತಾನೆ; ದುರ್ಮಾರ್ಗಿಯು ಆತನನ್ನು ಅಸಡ್ಡೆಮಾಡುತ್ತಾನೆ.

ಲೂಕನು ೧೦:೨೫-೪೨
೨೫. ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು.
೨೬. ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?” ಎಂದು ಮರುಪ್ರಶ್ನೆ ಹಾಕಿದರು.
೨೭. ಅವನು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಆತ್ಮದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು’ ಎಂದಿದೆ,” ಎಂದು ಉತ್ತರಕೊಟ್ಟನು.
೨೮. ಯೇಸು, “ಸರಿಯಾಗಿ ಉತ್ತರಕೊಟ್ಟೆ, ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು,” ಎಂದರು.
೨೯. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು.
೩೦. ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು: “ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ ಅಲ್ಲೇ ಬಿಟ್ಟುಹೋದರು.
೩೧. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದುಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ.
೩೨. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ.
೩೩. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟು,
೩೪. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ.
೩೫. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ‘ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚ ಆದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ,’ ಎಂದ.
೩೬. “ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು.
೩೭. ಅದಕ್ಕೆ ಅವನು, “ದಯೆತೋರಿದವನೇ ನೆರೆಯವನು,” ಎಂದನು. ಆಗ ಯೇಸು, “ಹೋಗು, ನೀನೂ ಹಾಗೆಯೇ ಮಾಡು,” ಎಂದು ಹೇಳಿದರು.
೩೮. ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು.
೩೯. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು.
೪೦. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು.
೪೧. ಯೇಸು ಆಕೆಗೆ ಪ್ರತ್ಯುತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ.
೪೨. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.