A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೧೪

ಯೊಹೋಶುವ ೧೭:೧-೧೮
೧. ಜೋಸೆಫನ ಚೊಚ್ಚಲ ಮಗ ಮನಸ್ಸೆಯ ವಂಶದವರಿಗೆ ದೊರಕಿದ ಸೊತ್ತಿನ ವಿವರ ಇದು: ಮನಸ್ಸೆಯ ಹಿರಿಯ ಮಗನೂ ಗಿಲ್ಯಾದನ ತಂದೆಯೂ ಆದ ಮಾಕೀರನು ಯುದ್ಧವೀರನು. ಆದ್ದರಿಂದ ಅವನಿಗೆ ಗಿಲ್ಯಾದ, ಬಾಷಾನ ಎಂಬ ಪ್ರಾಂತ್ಯಗಳು ಸಿಕ್ಕಿದವು.
೨. ಜೋಸೆಫನ ಮಗ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶಮೀದಾ, ಎಂಬವರ ವಂಶದವರಿಗೆ ಜೋರ್ಡನಿನ ಈಚೆಕಡೆ ಪಾಲು ಸಿಕ್ಕಿತು.
೩. ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಆಗಲಿಲ್ಲ. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬವರು ಅವನ ಹೆಣ್ಣುಮಕ್ಕಳು.
೪. ಇವರು ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗ ಯೆಹೋಶುವ ಹಾಗೂ ಕುಲಾಧಿಪತಿಗಳ ಬಳಿಗೆ ಬಂದು, “ನಮ್ಮ ಅಣ್ಣತಮ್ಮಂದಿರೊಡನೆ ನಮಗೂ ಪಾಲುಕೊಡಬೇಕೆಂದು ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದಾರಲ್ಲವೆ?” ಎಂದು ಹೇಳಿದರು. ಯೆಹೋಶುವನು ಸರ್ವೇಶ್ವರನ ಅಪ್ಪಣೆಯಂತೆ ಅವರಿಗೆ ಅವರ ತಂದೆಯ ಅಣ್ಣತಮ್ಮಂದಿರ ಜೊತೆಗೆ ಸೊತ್ತನ್ನು ಪಾಲಾಗಿಕೊಟ್ಟನು.
೫. ಮನಸ್ಸೆ ಕುಲದ ಹೆಣ್ಣುಮಕ್ಕಳಿಗೆ ಗಂಡುಮಕ್ಕಳ ಸಮೇತ ಸೊತ್ತು ದೊರಕಿದ್ದರಿಂದ ಮನಸ್ಸೆಯವರಿಗೆ ಜೋರ್ಡನಿನ ಆಚೆಯಿದ್ದ ಬಾಷಾನ್ ಮತ್ತು ಗಿಲ್ಯಾದ್ ಪ್ರಾಂತ್ಯಗಳ ಜೊತೆಗೆ ಈಚೆಯಲ್ಲೂ ಹತ್ತುಪಾಲು ಸಿಕ್ಕಿದವು.
೬. ಗಿಲ್ಯಾದ್ ನಾಡು ಮನಸ್ಸೆಯ ಉಳಿದ ಗೋತ್ರಗಳಿಗೆ ಸಿಕ್ಕಿತು.
೭. ಮನಸ್ಸೆಯವರ ಸೊತ್ತಿನ ಎಲ್ಲೆ ಆಶೇರ್ ಊರಿನಿಂದ ತೊಡಗಿ ಶೆಕೆಮಿನ ಪೂರ್ವದಲ್ಲಿ ಇರುವ ಮಿಕ್ಮೆತಾತಿನ ಮೇಲೆ ದಕ್ಷಿಣದಲ್ಲಿರುವ ತಪ್ಪೂಹದ ಬುಗ್ಗೆಗೆ ಹೋಗುತ್ತದೆ.
೮. ತಪ್ಪೂಹ ನಗರಕ್ಕೆ ಸೇರುವ ಭೂಮಿ ಮನಸ್ಸೆಯವರದು;ಆದರೆ ಅವರ ಸರಹದ್ದಿನಲ್ಲಿರುವ ತಪ್ಪೂಹ ನಗರ ಎಫ್ರಯಿಮ್ಯರದು.
೯. ಅಲ್ಲಿಂದ ಅವರ ಎಲ್ಲೆ ಇಳಿಯುತ್ತಾ ಕಾನಾ ಹಳ್ಳದ ದಕ್ಷಿಣಕ್ಕೆ ಹೋಗುತ್ತದೆ. ಅಲ್ಲಿ ಮನಸ್ಸೆಯವರಿಗೆ ಇರುವಂತೆ ಎಫ್ರಯಿಮ್ಯರಿಗೂ ಕೆಲವು ಪಟ್ಟಣಗಳಿವೆ. ಮನಸ್ಸೆಯವರ ಮುಂದಿನ ಎಲ್ಲೆಯು ಹಳ್ಳದ ಉತ್ತರ ತೀರವನ್ನು ಅನುಸರಿಸಿ ಹೋಗಿ ಸಮುದ್ರದ ದಡದಲ್ಲಿ ಮುಕ್ತಾಯಗೊಳ್ಳುತ್ತದೆ.
೧೦. ಆ ಹಳ್ಳದ ದಕ್ಷಿಣ ತೀರ ಎಫ್ರಯಿಮ್ಯರದು; ಉತ್ತರ ತೀರ ಮನಸ್ಸೆಯವರದು. ಸಮುದ್ರವೇ ಇವರ ಪಶ್ಚಿಮದ ಎಲ್ಲೆ. ಉತ್ತರಕ್ಕೆ ಆಶೇರ ಕುಲದವರ ಪ್ರಾಂತ್ಯವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ನಾಡೂ ಇರುತ್ತವೆ.
೧೧. ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬವರ ಪ್ರಾಂತ್ಯಗಳಲ್ಲಿ ಬೇತ್ ಷೆಯಾನ್, ಇಬ್ಲೆಯಾಮ್, ದೋರ್ ಎಂಬ ನಗರಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ್, ತಾನಕ್, ಮೆಗಿದ್ದೋ ಎಂಬ ನಗರಗಳೂ ಅವುಗಳಿಗೆ ಸೇರಿದ ಊರುಗಳೂ ಸಿಕ್ಕಿದವು.
೧೨. ಆದರೆ ಮನಸ್ಸೆಯವರು ಆ ನಗರಗಳ ನಿವಾಸಿಗಳನ್ನು ಹೊರದೂಡಲಾಗಲಿಲ್ಲ. ಕಾನಾನ್ಯರಿಗೆ ಅಲ್ಲೇ ವಾಸಿಸಲು ಅನುಕೂಲವಾಯಿತು.
೧೩. ಇಸ್ರಯೇಲರು ಬಲಗೊಂಡ ಮೇಲೂ ಕಾನಾನ್ಯರನ್ನು ಹೊರದೂಡದೆ ಅವರನ್ನು ಜೀತದಾರರನ್ನಾಗಿಸಿಕೊಂಡರು.
೧೪. ಜೋಸೆಫ್ಯರು ಯೆಹೋಶುವನಿಗೆ, “ನೀವು ಚೀಟುಹಾಕಿ, ನಮಗೆ ಒಂದೇ ಒಂದುಭಾಗವನ್ನು ಕೊಟ್ಟಿದ್ದೀರಿ, ಇದು ಸರಿಯೆ? ಸರ್ವೇಶ್ವರ ಸ್ವಾಮಿ ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿ ನಮ್ಮನ್ನು ಮಹಾಜನಾಂಗವಾಗಿಸಿದ್ದಾರಲ್ಲವೆ?” ಎಂದು ಕೇಳಿಕೊಂಡರು.
೧೫. ಅದಕ್ಕೆ ಯೆಹೋಶುವನು, “ಮಹಾಜನಾಂಗವಾದ ನಿಮಗೆ ಎಫ್ರಯಿಮ್ ಮಲೆನಾಡು ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳ ಮಾಡಿಕೊಳ್ಳಿ,” ಎಂದನು.
೧೬. ಅವರು ಮತ್ತೆ ಯೆಹೋಶುವನಿಗೆ, “ನಮ್ಮ ಮಲೆನಾಡು ನಮಗೆ ಸಾಲುವುದಿಲ್ಲ. ಬೇತ್ ಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ಕಣಿವೆಯಲ್ಲೂ ಹಾಗೂ ಇಜ್ರೇಲಿನ ಕಣಿವೆಯಲ್ಲೂ ವಾಸಮಾಡುವ ಕಾನಾನ್ಯರೆಲ್ಲರು ಕಬ್ಬಿಣದ ರಥವುಳ್ಳವರು,” ಎಂದರು.
೧೭. ಯೆಹೋಶುವನು ಜೋಸೆಫ್ಯರಾದ ಎಫ್ರಯಿಮ್ - ಮನಸ್ಸೆಕುಲದ ಆ ಜನರಿಗೆ, “ನೀವು ಮಹಾಜನಾಂಗ ಹಾಗೂ ಶಕ್ತಿಶಾಲಿಗಳೆಂಬುದೇನೋ ನಿಜ. ನೀವು ಒಂದು ಪಾಲಿಗಿಂತ ಹೆಚ್ಚು ತೆಗೆದುಕೊಳ್ಳಬಹುದಾಗಿದೆ.
೧೮. ಆಮೇಲೆ ನಾಡನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದು ಹಾಕಬಹುದು. ಅದಕ್ಕೆ ಸೇರಿರುವ ಬಯಲುಭೂಮಿ ನಿಮ್ಮದೇ. ಕಾನಾನ್ಯರು ಬಲಿಷ್ಠರು ಹಾಗೂ ಕಬ್ಬಿಣದ ರಥಗಳುಳ್ಳವರು. ಆದರೂ ನೀವು ಅವರನ್ನು ಹೊರದೂಡಬಲ್ಲಿರಿ,” ಎಂದು ಉತ್ತರ ಕೊಟ್ಟನು.

ಯೊಹೋಶುವ ೧೮:೧-೨೮
೧. ನಾಡೆಲ್ಲವು ತಮ್ಮ ವಶವಾದ ಮೇಲೆ ಇಸ್ರಯೇಲ್ ಜನಾಂಗವೆಲ್ಲ ಶೀಲೋವಿನಲ್ಲಿ ಕೂಡಿ ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
೨. ಇಸ್ರಯೇಲರಲ್ಲಿ ಇನ್ನೂ ಏಳು ಕುಲಗಳಿಗೆ ಪಾಲು ಸಿಕ್ಕಿರಲಿಲ್ಲ.
೩. ಆದುದರಿಂದ ಯೆಹೋಶುವ ಅವರಿಗೆ, “ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ನಾಡನ್ನು ಸ್ವಾಧೀನ ಮಾಡಿಕೊಳ್ಳಲು ಇನ್ನೆಷ್ಟು ತಡ ಮಾಡುತ್ತಿರುವಿರಿ?
೪. ಪ್ರತಿಯೊಂದು ಕುಲದಿಂದ ಮೂರುಮೂರು ಮಂದಿಯನ್ನು ನೇಮಿಸಿರಿ. ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ನಾಡಿನಲ್ಲೆಲ್ಲಾ ಸಂಚಾರಮಾಡಿ ತಮ್ಮ ತಮ್ಮ ಕುಲಗಳಿಗನುಸಾರ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.
೫. ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮ ತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೆ ಉತ್ತರದಲ್ಲಿ ಜೋಸೆಫನ ಕುಲದವರಿಗೆ ಸೊತ್ತು ಸಿಕ್ಕಿದೆ. ಅದು ಅವರಿಗೇ ಇರಲಿ.
೬. ನೀವು ನಾಡನ್ನು ಏಳು ಪಾಲಾಗಿ ವಿಂಗಡಿಸಿ ನನ್ನ ಬಳಿಗೆ ಬರಬೇಕು. ನಾನು ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನಿಮಗೋಸ್ಕರ ಚೀಟು ಹಾಕುತ್ತೇನೆ.
೭. ಲೇವಿಯರಿಗೆ ನಿಮ್ಮ ಹಾಗೆ ಪಾಲು ಸಿಕ್ಕುವುದಿಲ್ಲ. ಸರ್ವೇಶ್ವರನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸೊತ್ತು. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಜೋರ್ಡನಿನ ಪೂರ್ವದಿಕ್ಕಿನಲ್ಲಿ ಸರ್ವೇಶ್ವರನ ದಾಸ ಮೋಶೆಯಿಂದಲೇ ಸೊತ್ತು ಸಿಕ್ಕಿದೆ,” ಎಂದನು.
೮. ನಾಡಿನ ಅಳತೆಯನ್ನು ಮಾಡತಕ್ಕ ಜನರು ಹೊರಡುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ಹೋಗಿ ನಾಡಿನಲ್ಲೆಲ್ಲಾ ಸಂಚರಿಸಿ ಅಳತೆಮಾಡಿ ನನ್ನ ಬಳಿ ಶೀಲೋವಿಗೆ ತನ್ನಿ. ನಾನು ಸರ್ವೇಶ್ವರನ ಮುಂದೆ ನಿಮಗೋಸ್ಕರ ಚೀಟು ಹಾಕುತ್ತೇನೆ,” ಎಂದು ಹೇಳಿ ಕಳುಹಿಸಿದನು.
೯. ಆ ಜನರು ಹೊರಟು ನಾಡಿನಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಗ್ರಾಮ-ನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನಾಗಿ ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂದಿರುಗಿ ಬಂದರು.
೧೦. ಯೆಹೋಶುವನು ಶೀಲೋವಿನಲ್ಲಿಯೇ ಸರ್ವೇಶ್ವರನ ಮುಂದೆ ಅವರಿಗೋಸ್ಕರ ಚೀಟು ಹಾಕಿ ನಾಡನ್ನು ಅವರವರ ಪಂಗಡಗಳಿಗೆ ಹಂಚಿಕೊಟ್ಟನು.
೧೧. ಚೀಟು ಮೊದಲು ಬೆನ್ಯಾಮೀನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸೊತ್ತು ಯೆಹೂದಾ ಮತ್ತು ಜೋಸೆಫ್ ವಂಶಸ್ಥರ ಪ್ರಾಂತ್ಯಗಳಿಗೆ ಮಧ್ಯೆಯಿದೆ.
೧೨. ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯಿಂದ ತೊಡಗಿ ಜೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿಂದ ಪಶ್ಚಿಮಕ್ಕೆ ಹೋಗಿ, ದಿಣ್ಣೆ ಹತ್ತಿ ಬೆತಾವೆನಿನ ಬಯಲಿನಲ್ಲಿ ಕೊನೆಗೊಳ್ಳುತ್ತದೆ.
೧೩. ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್ ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.
೧೪. ಈ ಎಲ್ಲೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು, ಕಿರ್ಯತ್ ಬಾಳ್ ಎನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ನಗರದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ವಂಶಸ್ಥರ ಪಶ್ಚಿಮದ ಎಲ್ಲೆ.
೧೫. ದಕ್ಷಿಣ ದಿಕ್ಕಿನ ಎಲ್ಲೆ ಪಶ್ಚಿಮದ ಮೂಲೆಯಾಗಿರುವ ಕಿರ್ಯತ್ಯಾರೀಮಿನ ಪ್ರಾಂತ್ಯದಿಂದ ತೊಡಗಿ
೧೬. ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್ ಹಿನ್ನೋಮ್ ಕಣಿವೆಯ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.
೧೭. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು, ಇಳಿಯುತ್ತಾ ಏನ್ ಷೆಮೆಸ್, ಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೊತ್,
೧೮. ರೂಬೇನನ ಮಗನಾದ ಬೋಹನನ ಬಂಡೆ, ಅರಾಬಾದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ಕಣಿವೆ ಪ್ರದೇಶಕ್ಕೆ ಹೋಗುತ್ತದೆ.
೧೯. ಅಲ್ಲಿಂದ ಆ ಎಲ್ಲೆ ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಉತ್ತರ ಮೂಲೆಗೆ ಹೋಗಿ ಜೋರ್ಡನ್ ನದಿಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ. ಇದೇ ದಕ್ಷಿಣದಿಕ್ಕಿನ ಸರಹದ್ದು.
೨೦. ಜೋರ್ಡನ್ ನದಿಯೇ ಅವರ ಪೂರ್ವದಿಕ್ಕಿನ ಸರಹದ್ದು, ಬೆನ್ಯಾಮೀನ್ ಗೋತ್ರಗಳ ಸೊತ್ತಿನ ಸುತ್ತಣ ಎಲ್ಲೆ ಇದೇ.
೨೧. ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ನಗರಗಳು ಯಾವುವೆಂದರೆ: ಜೆರಿಕೊ, ಬೇತ್ ಹೊಗ್ಲಾ, ಏಮೆಕ್ಕೆಚ್ಚೀಚ್, ಬೇತ್ ಅರಾಬಾ,
೨೨. ಚಮಾರಯಿಮ್, ಬೇತೇಲ್, ಅವ್ವೀಮ್, ಪಾರಾ,
೨೩. ಒಫ್ರಾ, ಅಮ್ಮೋನ್ಯ, ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು;
೨೪. ***
೨೫. ಗಿಬ್ಯೋನ್, ರಾಮಾ, ಬೇರೋತ್,
೨೬. ಮಿಚ್ಫೆ, ಕೆಫೀರಾ, ಮೋಚಾ, ರೆಕೆಮ್, ಇರ್ಪೇಲ್, ತರಲಾ, ಚೇಲ,‌
೨೭. ***
೨೮. ಎಲೆಫ್, ಯೆಬೂಸಿಯರು ಇದ್ದಂಥ ಜೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ನಗರಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಆಸ್ತಿಪಾಸ್ತಿ ಇವೇ.

ಕೀರ್ತನೆಗಳು ೪೫:೬-೧೭
೬. ಅಮರವಾದುದು ಹೇ ದೇವಾ, ನಿನ್ನ ಸಿಂಹಾಸನ I ನ್ಯಾಯಸ್ಥಾಪಕವಾದುದು ನಿನ್ನ ರಾಜದಂಡ II
೭. ಪ್ರೀತಿಸಿದೆ ನೀನು ಧರ್ಮವನು ದ್ವೇಷಿಸಿದೆ ಅಧರ್ಮವನು I ಆನಂದ ತೈಲದಿಂದಭಿಷೇಕಿಸಿಹನು ನಿನ್ನ, ದೇವನು I ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು ಆತನು ನಿನ್ನನು II
೮. ಘಮಘಮಿಸುತಿದೆ ನಿನ್ನುಡಿಗೆ ರಸಗಂಧ, ಅಗರು, ಚಂದನಗಳಿಂದ I ಮನರಂಜನೆಗೊಳ್ಳುತಿರುವೆ ದಂತ ಮಂದಿರದುನ್ನತ ವಾದ್ಯಗಳಿಂದ II
೯. ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ I ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ I ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ II
೧೦. ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು I ನಿನ್ನ ಜನರನು, ತೌರು ಮನೆಯನು ಮರೆತುಬಿಡು II
೧೧. ಆಗ ಬಯಸುವನು ರಾಜ ನಿನ್ನ ಲಾವಣ್ಯವನು I ಆತನ ಪಾದಕ್ಕೆರಗು, ಆತನೇ ನಿನಗೊಡೆಯನು II
೧೨. ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು I ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು II
೧೩. ರಾಜಕುವರಿ ವಿರಾಜಿಸುತಿಹಳು ಅಂತಃಪುರದಲಿ I ಮೆರೆಯುತಿಹಳು ಜರತಾರಿ ವಸ್ತ್ರಾಭರಣಗಳಲಿ II
೧೪. ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ I ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ II
೧೫. ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ I ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ II
೧೬. ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು I ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು II
೧೭. ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ I ಹೊಗಳುವರು ಸಕಲ ಜನರು ನಿನ್ನನು ಅನುಗಾಲ II

ಜ್ಞಾನೋಕ್ತಿಗಳು ೧೪:೬-೬
೬. ಕುಚೋದ್ಯನಿಗೆ ಜ್ಞಾನ ಹುಡುಕಿದರೂ ಸಿಕ್ಕದು; ವಿವೇಕಿಗೆ ತಿಳುವಳಿಕೆ ಸುಲಭವಾಗಿ ದಕ್ಕುವುದು.

ಲೂಕನು ೧೨:೧-೩೧
೧. ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, “ಫರಿಸಾಯರ ‘ಹುಳಿಹಿಟ್ಟಿನ’ ಬಗ್ಗೆ. ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ.
೨. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು.
೩. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,” ಎಂದರು.
೪. “ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ; ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.
೫. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿಹೇಳುತ್ತೇನೆ.
೬. “ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.
೭. ಅಷ್ಟುಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
೮. “ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
೯. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ.
೧೦. “ಯಾವನಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು.
೧೧. “ಪ್ರಾರ್ಥನಾಮಂದಿರಗಳಿಗೆ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ.
೧೨. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು,” ಎಂದರು.
೧೩. ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು.
೧೪. ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು.
೧೫. ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು.
೧೬. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆ ಕೊಟ್ಟಿತು.
೧೭. ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ,
೧೮. ‘ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.
೧೯. ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ, ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ\,’ ಎಂದುಕೊಂಡ.
೨೦. ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.
೨೧. “ತನಗೋಸ್ಕರ ಸಂಪತ್ತನ್ನು ಶೇಖರಿಸಿ ಇಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು.
೨೨. ಅನಂತರ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಈ ಕಾರಣದಿಂದ ನೀವು ನಿಮ್ಮ ‘ಪ್ರಾಣಧಾರಣೆಗೆ ಏನು ಉಣ್ಣುವುದು, ದೇಹರಕ್ಷಣೆಗೆ ಏನು ಹೊದೆಯುವುದು’ ಎಂದು ಚಿಂತೆಮಾಡಬೇಡಿ.
೨೩. ಏತಕ್ಕೆಂದರೆ ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದು.
೨೪. ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ. ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ. ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ಪಕ್ಷಿಗಳಿಗಿಂತ ನೀವು ಎಷ್ಟೋ ಮೇಲಾದವರು!
೨೫. ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?
೨೬. ಇಂಥ ಅಲ್ಪಕಾರ್ಯಗಳನ್ನು ಮಾಡಲು ನೀವು ಅಶಕ್ತರಾಗಿ ಇರುವಾಗ, ಮಿಕ್ಕವುಗಳನ್ನು ಕುರಿತು ಚಿಂತಿಸುವುದೇಕೆ?
೨೭. ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ; ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ, ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ.
೨೮. ಎಲೈ ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೆಷ್ಟು ಮಾಡಲಾರರು!
೨೯. ಅಲ್ಲದೆ, ಅನ್ನಪಾನಗಳಿಗೆ ಏನು ಮಾಡೋಣ ಎಂದು ತೊಳಲಾಡಬೇಡಿ, ಪೇಚಾಡಬೇಡಿ.
೩೦. ಇವೆಲ್ಲವುಗಳಿಗಾಗಿ ಲೌಕಿಕ ಜನರು ಅರಸಿ ಅಲೆದಾಡುತ್ತಾರೆ. ಇವು ನಿಮಗೆ ಅಗತ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
೩೧. ನೀವಾದರೋ ದೇವರ ಸಾಮ್ರಾಜ್ಯಕ್ಕಾಗಿ ತವಕಪಡಿರಿ. ಇದರ ಸಮೇತ ಅವು ಕೂಡ ನಿಮಗೆ ಕೊಡಲಾಗುವುವು.