A A A A A
ಬೈಬಲ್ ಒಂದು ವರ್ಷದಲ್ಲಿ
ಏಪ್ರಿಲ್ ೧೫

ಯೊಹೋಶುವ ೧೯:೧-೫೧
೧. ಎರಡನೇ ಸಾರಿಯ ಚೀಟು ಸಿಮೆಯೋನ್ ಕುಲದವರಿಗೆ ಬಿದ್ದಿತು. ಈ ಸಿಮೆಯೋನ್ ಕುಲದ ಗೋತ್ರಗಳ ಸೊತ್ತು ಯೂದಕುಲದವರ ಸೊತ್ತಿನ ಮಧ್ಯದಲ್ಲಿತ್ತು.
೨. ಅದರ ಊರುಗಳು ಇವು: ಬೇರ್ಷೆಬ,
೩. ಶೆಬ, ಮೋಲಾದಾ, ಹಚರ್ ಷೂವಾಲ್, ಬಾಲಾ,
೪. ಎಚೆಮ್, ಎಲ್ತೋಲದ್, ಬೆತೂಲ್,
೫. ಹೊರ್ಮಾ, ಚಿಕ್ಲಗ್, ಬೇತ್ ಮಾರ್ಕಾಬೋತ್,
೬. ಹಚರ್ ಸೂಸಾ, ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ನಗರಗಳು ಮತ್ತು ಅವುಗಳ ಗ್ರಾಮಗಳು.
೭. ಆಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ನಗರಗಳು ಮತ್ತವುಗಳ ಗ್ರಾಮಗಳು;
೮. ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್ ಬೇರ್ ಎಂಬ ಊರಿನವರೆಗೆ ಇತರ ಗ್ರಾಮಗಳು ಇವೆ. ಬಾಲತ್ ಬೇರ್ ಎಂಬುದು ದಕ್ಷಿಣದ ರಾಮ ಎನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಆಸ್ತಿ ಇದೇ.
೯. ಈ ಆಸ್ತಿ ಯೂದವಂಶದ ಆಸ್ತಿಯಲ್ಲಿ ಒಂದು ಭಾಗ. ಯೂದವಂಶದವರಿಗೆ ದೊರಕಿದ ಪ್ರದೇಶ ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೆ ಅದರಲ್ಲೆ ಪಾಲು ಸಿಕ್ಕಿತು.
೧೦. ಮೂರನೇ ಸಾರಿಯ ಚೀಟು ಜೆಬುಲೂನ್ಯರಿಗೆ ಬಿದ್ದಿತು. ಈ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ.
೧೧. ಸಾರೀದಿನಿಂದ ತೊಡಗಿ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.
೧೨. ಅದೇ ಸಾರೀದಿನಿಂದ ಅದು ಪೂರ್ವದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಎಲ್ಲೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
೧೩. ಅಲ್ಲಿಂದ ಮತ್ತೂ ಪೂರ್ವಕ್ಕೆ ಮುಂದುವರೆದು ಗತ್ ಹೇಫರ್, ಎತ್ ಕಾಚೀನ್ ಇವುಗಳ ಮೇಲೆ ನೇಯದ ಮಗ್ಗಲಲ್ಲಿರುವ ರಿಮ್ಮೇನಿಗೆ ಹೋಗುತ್ತದೆ.
೧೪. ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
೧೫. ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ನಗರಗಳೂ ಅವುಗಳಿಗೆ ಸೇರಿದ ಗ್ರಾಮಗಳು -
೧೬. ಜೆಬುಲೂನ್ ಕುಲದ ಗೋತ್ರಗಳಿಗೆ ಸೊತ್ತಾಗಿ ದೊರಕಿದವು.
೧೭. ನಾಲ್ಕನೇ ಸಾರಿಯ ಚೀಟು ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅದರ ಗೋತ್ರಗಳಿಗೆ ಸಿಕ್ಕಿದ ನಾಡಿನಲ್ಲಿರುವ ನಗರಗಳು ಯಾವುವು ಎಂದರೆ -
೧೮. ಇಜ್ರೇಲ್, ಕೆಸುಲ್ಲೋತ್,
೧೯. ಶೂನೇಮ್, ಹಫಾರಯಿಮ್, ಶೀಯೋನ್,
೨೦. ಅನಾಹರತ್, ರಬ್ಬೀತ್, ಕಿಷ್ಯೋನ್, ಎಬೆಜ್,
೨೧. ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್,
೨೨. ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳೂ ಅದರ ಮೇರೆಯೊಳಗಿದ್ದವು. ಈ ಮೇರೆಯು ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ.
೨೩. ಒಟ್ಟಾರೆ ಹದಿನಾರು ನಗರಗಳೂ ಅವುಗಳ ಗ್ರಾಮಗಳೂ ಇಸ್ಸಾಕಾರ್ ಕುಲದ ಗೋತ್ರಗಳಿಗೆ ದೊರಕಿದವು.
೨೪. ಐದನೇ ಸಾರಿಯ ಚೀಟು ಅಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಇವು:
೨೫. ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
೨೬. ಅಲಮ್ಮೆಲೆಕ್, ಅಮಾದ್, ಮಿಷಾಲ್. ಇವರ ನಾಡಿನ ಎಲ್ಲೆ ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ
೨೭. ಅಲ್ಲಿಂದ ಪೂರ್ವಕ್ಕೆ ತಿರುಗಿ ಬೇತ್ ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಎಲ್ಲೆಗೂ ಇಫ್ತಹೇಲ್ ಕಣಿವೆಯ ಉತ್ತರದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತ್ ಏಮೆಕ್, ನೆಗೀಯೆಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು
೨೮. ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಸಿದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
೨೯. ಅಲ್ಲಿಂದ ಅದು ತಿರುಗಿಕೊಂಡು ರಾಮಾ, ಟೈರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರತೀರದಲ್ಲಿ ಕೊನೆಗೊಳ್ಳುತ್ತದೆ.
೩೦. ಉಮ್ಮಾ, ಅಫೇಕ್, ರೆಹೂಬ್ ಇವೇ ಮೊದಲಾದ ಇಪ್ಪತ್ತೆರಡು ನಗರಗಳೂ ಅವುಗಳ ಗ್ರಾಮಗಳೂ
೩೧. ಅಶೇರ್ ಕುಲದ ಗೋತ್ರಗಳ ಸೊತ್ತಾಗಿವೆ.
೩೨. ಆರನೇ ಸಾರಿಯ ಚೀಟು ನಫ್ತಾಲಿ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ ಹೀಗಿದೆ:
೩೩. ಚಾನನ್ನೀಮಿನಲ್ಲಿರುವ ಹೇಲೆಫಿನ ಅಲ್ಲೋನ್ ಮರದಿಂದ ತೊಡಗಿ ಅದಾಮೀನೆಕೆಬ್, ಯೆಬ್ನೆಯೇಲ್ ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ.
೩೪. ಮತ್ತೆ ಅದೇ ಸ್ಥಳದಿಂದ ತೊಡಗಿ ಅಜ್ನೋತ್ ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ. ದಕ್ಷಿಣದಲ್ಲಿ ಜೆಬುಲೂನ್ಯರ ಎಲ್ಲೆಗೂ ಪಶ್ಚಿಮದಲ್ಲಿ ಆಶೇರ್ಯರ ಮತ್ತು ಯೂದವಂಶದವರ ಎಲ್ಲೆಗೂ ಪೂರ್ವದಲ್ಲಿ ಜೋರ್ಡನ್ ನದಿಗೂ ಹೊಂದಿಕೊಂಡಿರುತ್ತದೆ.
೩೫. ಚಿದ್ದೀಮ್, ಚೇರ್, ಹಮ್ಮತ್,
೩೬. ರಕ್ಕತ್, ಕಿನ್ನೆರೆತ್, ಅದಾಮಾ, ರಾಮಾ, ಹಾಚೋರ್,
೩೭. ಕೆದೆಷ್, ಎದ್ರೈ, ಏನ್ ಹಾಚೋರ್, ಇರೋನ್, ಮಿಗ್ದಲೇಲ್, ಹೊರೇಮ್, ಬೇತನಾತ್, ಬೇತ್ ಷೆಮೆಷ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲಗಳುಳ್ಳ ನಗರಗಳೂ ಅವುಗಳ ಗ್ರಾಮಗಳೂ
೩೮. ***
೩೯. ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಾಗಿವೆ.
೪೦. ಏಳನೇ ಸಾರಿಯ ಚೀಟು ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸೊತ್ತಾಗಿ ದೊರಕಿದ ಊರುಗಳು ಇವು:
೪೧. ಚೊರ್ಗಾ, ಎಷ್ಟಾವೋಲ್,
೪೨. ಈರ್ಷೆಮೆಷ್, ಶಾಲಬ್ಬೀನ್, ಅಯ್ಯಾಲೋನ್,
೪೩. ಇತ್ಲಾ, ಏಲೋನ್, ತಿಮ್ಮಾ, ಎಕ್ರೋನ್, ಎಲ್ತೆಕೇ,
೪೪. ***
೪೫. ಗಿಬ್ಬೆತೋನ್, ಬಾಲತ್, ಯೆಹುದ್, ಬೆನೇಬೆರಕ್,
೪೬. ಗತ್ ರಿಮ್ಮೋನ್, ಮೇಯರ್ಕೋನ್, ರಕ್ಕೋನ್, ಮತ್ತು ಜೊಪ್ಪಕ್ಕೆ ಎದುರಿಗಿರುವ ಪ್ರದೇಶವೂ ಇವರಿಗೆ ದೊರಕಿತು.
೪೭. ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿದರು. ಆ ಜನರನ್ನು ಕತ್ತಿಯಿಂದ ಸಂಹರಿಸಿ ಅವರ ನಗರವನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು. ಅಲ್ಲದೆ, ಅದಕ್ಕೆ ತಮ್ಮ ಮೂಲ ಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು.
೪೮. ದಾನ್ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು ಹಾಗೂ ಅದರಲ್ಲಿದ್ದ ನಗರ ಹಾಗೂ ಗ್ರಾಮಗಳು ಇವೇ.
೪೯. ಇಸ್ರಯೇಲರು ನಾಡನ್ನು ಎಲ್ಲೆಎಲ್ಲೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗ ಯೆಹೋಶುವನಿಗೂ ತಮ್ಮದರಲ್ಲಿ ಪಾಲು ಕೊಟ್ಟರು.
೫೦. ಆತ ತನಗೋಸ್ಕರ ಎಫ್ರಯಿಮರ ಮಲೆನಾಡಿನಲ್ಲಿರುವ ‘ತಿಮ್ನತ್ ಸೆರಹ’ ಎಂಬ ನಗರವನ್ನು ಕೇಳಿಕೊಂಡನು. ಸರ್ವೇಶ್ವರನ ಆಜ್ಞೆಯಂತೆ ಅವರು ಅದನ್ನು ಅವನಿಗೆ ಕೊಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿ ಅದರಲ್ಲೇ ವಾಸಮಾಡಿದನು.
೫೧. ಹೀಗೆ ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲ ಮುಖ್ಯಸ್ಥರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ದ್ವಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲೇ ಚೀಟುಹಾಕಿ ಪ್ರಾಂತ್ಯಗಳನ್ನು ಹಂಚಿಕೊಟ್ಟರು; ನಾಡಿನ ವಿಭಜನಾಕಾರ್ಯ ಮುಗಿಯಿತು.

ಯೊಹೋಶುವ ೨೦:೧-೯
೧. ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೀನು ಇಸ್ರಯೇಲರಿಗೆ
೨. ‘ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿರುವಂತೆ ನೀವು ಆಶ್ರಯ ನಗರಗಳನ್ನು ಗೊತ್ತುಮಾಡಿಕೊಳ್ಳಿ;
೩. ನಿಮ್ಮಲ್ಲಿ ಯಾರಾದರು ಅರಿಯದೆ ಅಕಸ್ಮಾತ್ತಾಗಿ ನರಹತ್ಯೆ ಮಾಡಿದ್ದೇ ಆದರೆ ಅಂಥವನು ಅಲ್ಲಿಗೆ ಓಡಿಹೋಗಲಿ. ಹತನಾದವನ ಹತ್ತಿರದ ಬಂಧು ಮುಯ್ಯಿತೀರಿಸದಂತೆ ಆ ನಗರಗಳು ನಿಮಗೆ ಆಶ್ರಯ ಸ್ಥಾನವಾಗಿರಲಿ.
೪. ಅಂಥ ನಗರಕ್ಕೆ ಓಡಿಹೋದವನು ಮೊದಲು ಊರಬಾಗಿಲಲ್ಲೇ ನಿಂತುಕೊಂಡು ಅಲ್ಲಿನ ಹಿರಿಯರಿಗೆ ತನ್ನ ಸಂಗತಿಯನ್ನು ತಿಳಿಯಪಡಿಸಲಿ. ಅವರು ಅವನನ್ನು ಊರೊಳಗೆ ಸೇರಿಸಿಕೊಳ್ಳಲಿ; ವಾಸಕ್ಕೆ ಸ್ಥಳಕೊಡಲಿ.
೫. ಹತನಾದವನ ಹತ್ತಿರದ ಬಂಧು, ಕೊಂದವನನ್ನು ಹಿಂದಟ್ಟಿಕೊಂಡು ಅಲ್ಲಿಗೆ ಬಂದರೆ, ಅವರು ಅವನನ್ನು ಅವನ ಕೈಗೆ ಒಪ್ಪಿಸಬಾರದು. ಏಕೆಂದರೆ ಅವನು ನೆರೆಯವನನ್ನು ಕೊಂದದ್ದು ಅಕಸ್ಮಾತ್ತಾಗಿ, ಹಳೆಯ ದ್ವೇಷದಿಂದೇನೂ ಅಲ್ಲ.
೬. ಅಂಥವನನ್ನು ಒಂದು ಸಭೆಸೇರಿಸಿ ವಿಚಾರಿಸಬೇಕು. ಅವನು ಆಗಿನ ಪ್ರಧಾನ ಯಾಜಕನ ಜೀವಮಾನವೆಲ್ಲಾ ಅದೇ ನಗರದಲ್ಲಿರಬೇಕು. ಆಮೇಲೆ ತಾನು ಬಿಟ್ಟುಬಂದ ಊರಿಗೆ, ಮನೆಗೆ ಹಿಂದಿರುಗಬಹುದು’ ಎಂದು ತಿಳಿಸು,” ಎಂದರು.
೭. ಅಂತೆಯೇ ಇಸ್ರಯೆಲರು ನಫ್ತಾಲಿ ಕುಲದವರ ಮಲೆನಾಡಿನ ಪ್ರದೇಶವಾದ ಗಲಿಲೇಯ ಪ್ರಾಂತ್ಯದಲ್ಲಿನ ಕೆದೆಷ್, ಎಫ್ರಯಿಮ್ ಮಲೆನಾಡಿನ ಪ್ರದೇಶದಲ್ಲಿನ ಶೆಕೆಮ್ ಹಾಗೂ ಯೂದವಂಶದ ಮಲೆನಾಡಿನ ಹೆಬ್ರೋನ್ ಎನಿಸಿಕೊಳ್ಳುವ ಕಿರ್ಯತರ್ಬ ಎಂಬ ನಗರಗಳನ್ನು ನೇಮಿಸಿದರು.
೮. ಇವುಗಳನ್ನು ಮಾತ್ರವಲ್ಲ ಜೆರಿಕೋವಿನ ಪೂರ್ವದಲ್ಲಿರುವ ಜೋರ್ಡನಿನ ಆಚೆಯಲ್ಲಿ ರೂಬೇನ್ಯರ ಬೆಟ್ಟದ ಮೇಲಿನ ಮರುಭೂಮಿಯಲ್ಲಿರುವ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದ ರಾಮೋತ್, ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್ ಎಂಬ ನಗರಗಳನ್ನು ನೇಮಿಸಿದರು.
೯. ಇಸ್ರಯೇಲರೆಲ್ಲರಿಗೂ ಹಾಗೂ ಅವರ ನಡುವೆ ವಾಸಮಾಡುತ್ತಿದ್ದ ಹೊರನಾಡಿನವರಿಗೂ ಇವು ಆಶ್ರಯ ನಗರಗಳಾಗಿ ನೇಮಕ ಆಗಿದ್ದವು. ಅಕಸ್ಮಾತ್ತಾಗಿ ಬೇರೊಬ್ಬನನ್ನು ಕೊಂದವನು ಓಡಿಹೋಗಿ ಹತನಾದವನ ಹತ್ತಿರ ಬಂಧುವಿನಿಂದ ತಲೆ ತಪ್ಪಿಸಿಕೊಳ್ಳಬಹುದಿತ್ತು. ನ್ಯಾಯ ಸಭೆಯ ಮುಂದೆ ನಿಲ್ಲುವ ತನಕ ಅಲ್ಲೇ ಇರಬಹುದಿತ್ತು.

ಕೀರ್ತನೆಗಳು ೪೬:೧-೬
೧. ದೇವರೆಮಗೆ ಆಶ್ರಯ ದುರ್ಗ I ಸಂಕಟದಲಿ ಸಿದ್ಧ ಸಹಾಯಕ II
೨. ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ I ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ II
೩. ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು? I ಅದರೊಡನೆ ಪರ್ವತಗಳು ಅಲುಗಾಡಿದರೇನು? II ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವನು ನಮಗಾಶ್ರಯ ದುರ್ಗವು II
೪. ನದಿಯೊಂದು ಆನಂದಗೊಳಿಸುವುದು ದೇವನಗರವನು I ಪುನೀತಗೊಳಿಸುವುದು ಪರಾತ್ಪರನ ನಿವಾಸವನು II
೫. ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II
೬. ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು I ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು II

ಜ್ಞಾನೋಕ್ತಿಗಳು ೧೪:೭-೧೧
೭. ಮೂರ್ಖನಿಂದ ದೂರವಿರು; ಜ್ಞಾನವಚನ ಅವನಲ್ಲಿ ಕಾಣಸಿಗದು.
೮. ವಿವೇಕಿಯ ಜ್ಞಾನ ಸನ್ಮಾರ್ಗದಲ್ಲಿ ನಡೆಸುತ್ತದೆ; ಮೂಢರ ಮೂರ್ಖತನ ಮೋಸಗೊಳಿಸುತ್ತದೆ.
೯. ಪಾಪಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.
೧೦. ಆಯಾಯ ಹೃದಯಕ್ಕೆ ಗೊತ್ತು ಅದರ ಗೋಳು; ಅದರ ಸಂತೋಷದಲ್ಲೂ ಪಾಲುಗೊಳ್ಳಲಾಗದು ಬೇರೆಯವರು.
೧೧. ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.

ಲೂಕನು ೧೨:೩೨-೫೯
೩೨. “ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ.
೩೩. ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವಂತಿಲ್ಲ; ನುಸಿಹಿಡಿದು ನಾಶವಾಗುವಂತಿಲ್ಲ.
೩೪. ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ.
೩೫. “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ.
೩೬. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದುರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ.
೩೭. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
೩೮. “ಯಜಮಾನನು ಬರುವಾಗ ನಡುರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.
೩೯. ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ.
೪೦. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು.
೪೧. ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ” ಎಂದು ಕೇಳಿದನು.
೪೨. ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ.
೪೩. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.
೪೪. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
೪೫. “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ,’ ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ
೪೬. ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು.
೪೭. “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ.
೪೮. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.
೪೯. “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.
೫೦. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ.
೫೧. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.
೫೨. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು.
೫೩. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.
೫೪. ಇದೂ ಅಲ್ಲದೆ ಯೇಸುಸ್ವಾಮಿ ಜನಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ‘ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ; ಹಾಗೆಯೇ ಆಗುತ್ತದೆ.
೫೫. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ.
೫೬. ಆಷಾಢಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ. ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?
೫೭. “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು?
೫೮. ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯ ಅಧಿಕಾರಿಯ ಕೈಗೊಪ್ಪಿಸಬಹುದು. ಸೆರೆ ಅಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು.
೫೯. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.