ಬೈಬಲ್ ಒಂದು ವರ್ಷದಲ್ಲಿ


ಸೆಪ್ಟೆಂಬರ್ ೧೬


ಪರಮಗೀತೆ ೧:೧-೧೭
೧. ಸೊಲೊಮೋನನ ಮನೋಹರವಾದ ಗೀತೆ
೨. ನಿನ್ನ ಬಾಯಿಂದ ನನ್ನನ್ನು ಮುದ್ದಾಡು, ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.
೩. ನಿನ್ನ ತೈಲವು ಪರಿಮಳಭರಿತವಾಗಿದೆ; ನಿನ್ನ ಹೆಸರು ಸುಗಂಧದ್ರವ್ಯದಂತಿದೆ. ಆದ್ದರಿಂದ ಯುವತಿಯರು ನಿನ್ನನ್ನು ಪ್ರೀತಿಸುವರು.
೪. ನನ್ನನ್ನು ಕರೆದುಕೊಂಡು ಹೋಗು! ನಾವು ಓಡಿಹೋಗೋಣ! ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ. ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು. ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ. ಯುವತಿಯರು ನಿನ್ನನ್ನು ಹೃದಯಪೂರ್ವಕವಾಗಿ ಪ್ರೀತಿಸುವರು.
೫. ಜೆರುಸಲೇಮಿನ ಸ್ತ್ರೀಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ ಸೊಲೊಮೋನನ ಪರದೆಗಳಂತೆ ಸುಂದರಳಾಗಿರುವೆ.
೬. ಸೂರ್ಯನ ತಾಪಕ್ಕೆ ನಾನೆಷ್ಟು ಕಪ್ಪಾಗಿದ್ದೇನೆಂದು ನೋಡಬೇಡಿರಿ. ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ನನ್ನನ್ನು ನೇಮಿಸಿದರು. ಆದರೆ ನಾನು ನನ್ನ ತೋಟವನ್ನು ಕಾಯಲಿಲ್ಲ.
೭. ನನ್ನ ಪ್ರಾಣಪ್ರಿಯನೇ, ನಿನ್ನ ಕುರಿಗಳನ್ನು ಎಲ್ಲಿ ಮೇಯಿಸುವೆ? ಮಧ್ಯಾಹ್ನದಲ್ಲಿ ಅವುಗಳನ್ನು ಎಲ್ಲಿ ಮಲಗಿಸುವೆ? ಮುಸುಕುಹಾಕಿಕೊಂಡು ನಿನ್ನ ಸ್ನೇಹಿತರ ಮಂದೆಗಳ ಹತ್ತಿರ ಅಲೆದಾಡುವ ಹುಡುಗಿಯಂತೆ ನಾನೇಕಿರಬೇಕು?
೮. ಸ್ತ್ರೀಯರಲ್ಲಿ ಅತ್ಯಂತ ರೂಪವತಿಯೇ, ನಿನ್ನ ಪ್ರಿಯನು ಎಲ್ಲಿದ್ದಾನೆಂಬುದು ನಿನಗೆ ಗೊತ್ತಿಲ್ಲದಿದ್ದರೆ, ಹೋಗು, ಕುರಿಗಳನ್ನು ಹಿಂಬಾಲಿಸು. ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
೯. ನನ್ನ ಪ್ರಿಯೆ, ಫರೋಹನ ರಥಗಳ ಮಧ್ಯದಲ್ಲಿರುವ ಹೆಣ್ಣು ಕುದುರೆಗಿಂತಲೂ ನೀನು ಸುಂದರಳಾಗಿರುವೆ.
೧೦. ನಿನ್ನ ಕೆನ್ನೆಗಳು ಅಲಂಕಾರಗಳಿಂದ ಸುಂದರವಾಗಿವೆ. ನಿನ್ನ ಕಂಠವು ಹಾರಗಳಿಂದ ಅಂದವಾಗಿವೆ.
೧೧. ಬೆಳ್ಳಿಯ ತಿರುಪಿನಿಂದ ಕೂಡಿದ ಚಿನ್ನದ ಆಭರಣಗಳನ್ನು ನಾವು ನಿನಗೋಸ್ಕರ ಮಾಡಿಸುವೆವು.
೧೨. ಓಲಗದ ಮೇಲೆ ಮಲಗಿರುವ ರಾಜನಿಗೆ ನನ್ನ ಸುಗಂಧದ್ರವ್ಯದ ಪರಿಮಳವು ಹರಡುವುದು.
೧೩. ನನ್ನ ಪ್ರಿಯನು ರಾತ್ರಿಯೆಲ್ಲಾ ನನ್ನ ಸ್ತನಗಳ ನಡುವೆ ಇರುವ ಗೋಲರಸದ ಚೀಲದಂತಿದ್ದಾನೆ.
೧೪. ನನ್ನ ಪ್ರಿಯನು ನನಗೆ ಏನ್ಗೆದಿಯ ತೋಟಗಳ ಗೋರಂಟೆಯ ಹೂಗೊಂಚಲು.
೧೫. ನನ್ನ ಪ್ರಿಯೆ, ನೀನು ರೂಪವತಿ! ನೀನು ಸುಂದರಿ! ನಿನ್ನ ಕಣ್ಣುಗಳು ಪಾರಿವಾಳಗಳಂತೆ ಕೋಮಲ.
೧೬. ನನ್ನ ಪ್ರಿಯನೇ, ನೀನು ಬಹು ಸುಂದರ! ಹೌದು, ನೀನು ಎಷ್ಟೋ ಮನೋಹರ! ನಮ್ಮ ಹಾಸಿಗೆ ಎಷ್ಟೋ ಉಲ್ಲಾಸಕರ!
೧೭. ನಮ್ಮ ಮನೆಯ ತೊಲೆಗಳು ದೇವದಾರು ಮರದ ತೊಲೆಗಳು. ನಮ್ಮ ಮನೆಯ ಜಂತೆಗಳು ತುರಾಯಿ ಮರದ ಜಂತೆಗಳು.

ಪರಮಗೀತೆ ೨:೧-೧೭
೧. ನಾನು ಶಾರೋನಿನಲ್ಲಿರುವ ಗುಲಾಬಿ; ತಗ್ಗುಗಳಲ್ಲಿರುವ ತಾವರೆ.
೨. ನನ್ನ ಪ್ರಿಯೆ, ಮುಳ್ಳುಗಳ ನಡುವೆ ಇರುವ ತಾವರೆ ಹೂವಿನಂತೆ ನೀನು ಯುವತಿಯರಲ್ಲೆಲ್ಲಾ ಶ್ರೇಷ್ಠಳು.
೩. ನನ್ನ ಪ್ರಿಯನೇ, ಕಾಡುಮರಗಳ ನಡುವೆ ಇರುವ ಒಂದು ಸೇಬಿನ ಮರದಂತೆ ನೀನು ಯುವಕರಲ್ಲೆಲ್ಲಾ ಶ್ರೇಷ್ಠನು. ನಾನು ಅವನ ನೆರಳಲ್ಲಿ ಕುಳಿತುಕೊಂಡು ಸಂತೋಷಿಸಿದೆ; ಅವನ ಫಲವು ನನ್ನ ನಾಲಿಗೆಗೆ ಸಿಹಿಯಾಗಿತ್ತು.
೪. ನನ್ನ ಪ್ರಿಯಕರನು ನನ್ನನ್ನು ದ್ರಾಕ್ಷಾರಸದ ಮನೆಗೆ ಕರೆದುಕೊಂಡು ಬಂದನು; ನನ್ನ ಕುರಿತು ಆತನಿಗಿದ್ದ ಉದ್ದೇಶ ಪ್ರೀತಿಯೇ.
೫. ದ್ರಾಕ್ಷಿಯಿಂದ ನನ್ನನ್ನು ಉಪಚರಿಸಿರಿ; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ; ನಾನು ಅನುರಾಗದಿಂದ ಅಸ್ವಸ್ಥಳಾಗಿರುವೆ.
೬. ನನ್ನ ಪ್ರಿಯನ ಎಡಗೈ ತಲೆದಿಂಬಾಗಿ ಅವನ ಬಲಗೈ ನನ್ನನ್ನು ತಬ್ಬಿಕೊಳ್ಳುವುದು!
೭. ಜೆರುಸಲೇಮಿನ ಸ್ತ್ರೀಯರೇ, ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ ನನಗೆ ಪ್ರಮಾಣ ಮಾಡಿರಿ.
೮. ಅಗೋ, ನನ್ನ ಪ್ರಿಯನ ಸ್ವರ! ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
೯. ನನ್ನ ಪ್ರಿಯನು ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇದ್ದಾನೆ. ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ; ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ; ಕಿಟಕಿಗಳಿಂದ ನೋಡುತ್ತಿದ್ದಾನೆ.
೧೦. ನನ್ನ ಪ್ರಿಯನು ನನಗೆ ಹೀಗೆಂದನು: “ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!
೧೧. ಇಗೋ, ಚಳಿಗಾಲ ಕಳೆಯಿತು; ಮಳೆಗಾಲ ಮುಗಿದುಹೋಯಿತು.
೧೨. ಭೂಮಿಯ ಮೇಲೆ ಹೂವುಗಳು ಕಾಣುತ್ತವೆ; ಪಕ್ಷಿಗಳು ಹಾಡುವ ಸಮಯವು ಬಂದಿದೆ. ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
೧೩. ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ; ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ. ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು, ನಾವು ದೂರ ಹೋಗೋಣ!”
೧೪. ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ, ನಿನ್ನ ರೂಪವನ್ನು ತೋರಿಸು; ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರ ಎಷ್ಟೋ ಮಧುರ! ನಿನ್ನ ರೂಪ ಎಷ್ಟೋ ಅಂದ!
೧೫. ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ! ನಮ್ಮ ದ್ರಾಕ್ಷಿತೋಟಗಳು ಈಗ ಹೂಬಿಡುತ್ತಿವೆ.
೧೬. ನನ್ನ ಪ್ರಿಯನು ನನ್ನವನೇ! ನಾನು ಅವನವಳೇ! ಹಗಲು ತನ್ನ ಕೊನೆ ಉಸಿರೆಳೆಯುವತನಕ, ನೆರಳು ಓಡಿಹೋಗುವ ತನಕ
೧೭. ನನ್ನ ಪ್ರಿಯನು ನೆಲದಾವರೆಗಳ ಮಧ್ಯದಲ್ಲಿ ಮೇಯಿಸುವನು. ನನ್ನ ಪ್ರಿಯನೇ, ಹೊರಡು, ಬೆತೇರ್ ಬೆಟ್ಟಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು!

ಕೀರ್ತನೆಗಳು ೧೦೪:೧-೯
೧. ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು! ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು! ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
೨. ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
೩. ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ. ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
೪. ಗಾಳಿಯನ್ನು ನಿನ್ನ ದೂತರನ್ನಾಗಿಯೂ ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.
೫. ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ ಅದೆಂದಿಗೂ ನಾಶವಾಗದು.
೬. ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ. ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
೭. ನೀನು ಆಜ್ಞಾಪಿಸಲು ನೀರು ಹಿಂತಿರುಗಿತು. ನೀನು ಬರ್ಜಿಸಲು ನೀರು ಓಡಿಹೋಯಿತು.
೮. ಜಲರಾಶಿಗಳು ಬೆಟ್ಟಗಳಿಂದ ಇಳಿದು ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
೯. ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.

ಜ್ಞಾನೋಕ್ತಿಗಳು ೨೪:೧೫-೧೬
೧೫. ಒಳ್ಳೆಯವನಿಂದ ಕದ್ದುಕೊಳ್ಳುವ ಅಥವಾ ಅವನ ಮನೆಯನ್ನೇ ತೆಗೆದುಕೊಳ್ಳುವ ಕಳ್ಳನಂತೆ ಇರಬೇಡ.
೧೬. ಒಳ್ಳೆಯವನು ಏಳುಸಲ ಬಿದ್ದರೂ ಅವನು ಮತ್ತೆ ಎದ್ದುನಿಲ್ಲುವನು. ಆದರೆ ಕೆಡುಕರು ಒಂದೇ ಆಪತ್ತಿನಿಂದ ಶಾಶ್ವತವಾಗಿ ಸೋತುಹೋಗುವರು.

ಕೊರಿಂಥಿಯರಿಗೆ ೧ ೧೧:೧೭-೩೪
೧೭. ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ.
೧೮. ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.
೧೯. (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)
೨೦. ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ.
೨೧. ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ.
೨೨. ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.
೨೩. ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು,
೨೪. ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, "ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು.
೨೫. ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, "ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು.
೨೬. ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.
೨೭. ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ.
೨೮. ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು.
೨೯. ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ.
೩೦. ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು.
೩೧. ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ.
೩೨. ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.
೩೩. ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.
೩೪. ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.